ತೀಸ್ತಾರ ಕಿರುಚಾಟದಲ್ಲಿ ನೊಂದವರ ಪರ ಸಾಕ್ಷಿಯಿದೆ : ಗುಲಾಬಿ ಬಿಳಿಮಲೆ

Teesta

ಹಿಂಸೆಗೆ ತುತ್ತಾದವರ ಪರವಾಗಿ ದೊಡ್ಡಗಂಟಲಲ್ಲಿ ಚೀರಾಡುತ್ತಾರೆ ಎನ್ನುವುದು ತೀಸ್ತಾರ ಬಗೆಗಿನ ತಕರಾರು. ಆದರೆ ಏನು ಮಾಡುವುದು? ಸಮಾಜದ ಸಭ್ಯರು ಗುಜರಾತ್‌ ಹಿಂಸೆಯ ಬಗ್ಗೆ ದಿವ್ಯ ಮೌನ ತಾಳಿರುವಾಗ, ಈ ಬಗೆಯ ಚೀರಾಟವೇ ತಕ್ಕ ಉತ್ತರವಾಗಿದೆ. ಅದು ನೊಂದವರನ್ನು ವಹಿಸಿಕೊಂಡು ಅವರು ನುಡಿಯುತ್ತಿರುವ ಸಾಕ್ಷಿ ಎಂಬುದೂ ನೆನಪಿರಲಿ 

ಸುಮಾರು 20 ವರ್ಷಗಳ ಹಿಂದೆ ಮಾನವ ಹಕ್ಕುಗಳ ಕುರಿತ ಒಂದು ಚಿಕ್ಕ ಸಭೆಯ ಮಾತುಕತೆಯಲ್ಲಿ  ‘ಮಾನವ ಹಕ್ಕುಗಳ ಕಾಯಕರ್ತರಿಗೆ ರಕ್ಷಣೆ ಏನಿದೆ? ನಮಗೇನಾದರೂ ಆದರೆ ಏನು ಮಾಡುವುದು?’ ಎಂದು ಅಗ ಮಂಗಳೂರಿನ ಮಾನವ ಹಕ್ಕುಗಳ ಹೋರಾಟಗಾರ್ತಿ, ಈಗ ಪುಣೆಯ ಸಿಂಬಿಯಾಸಿಸ್‌ ಲಾ ಕಾಲೇಜಿನ ಡೀನ್‌ ಆಗಿರುವ ಗೆಳತಿ ಶಶಿಕಲಾ ಗುರುಪುರ ಪ್ರಶ್ನೆಯೊಂದನ್ನು ಎತ್ತಿದ್ದರು. ʼಹೋರಾಟಗಾರರು ಯಾರಿಗೆ ಬೇಕು ಹೇಳಿ? ಅವರನ್ನು ಯಾರೂ ಮುಟ್ಟಲಾರರು. ಇಲ್ಲದ ಚಿಂತೆ ನಿಮಗ್ಯಾಕೆ?ʼ ಎಂದು ನಾವೆಲ್ಲ ನಕ್ಕು ಸುಮ್ಮಗಾಗಿದ್ದೆವು. ಅಂದು  ಸಾರಾಸಗಟಾಗಿ ಎತ್ತಿ ಬೀಸಾಡಿದ್ದ  ವಿಷಯವೊಂದು ಇಂದು ಮಾನವ ಹಕ್ಕುಗಳ ಖ್ಯಾತ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡರ ಬಂಧನದ ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನೇ ಅಲ್ಲಾಡಿಸುವಂತೆ ಜೀವತಳೆದಿರುವುದು ವಿಪರ್ಯಾಸವಾಗಿದೆ.

2002ರ ಗುಜರಾತ್‌ ನರಮೇಧದ ವಿಷಯ ಪ್ರಸ್ತಾಪವಾದಾಗಲೆಲ್ಲ ಉಲ್ಲೇಖವಾಗುವ ಮತ್ತು ನೆನಪಾಗುವ ಅನೇಕ ಬಹುಮುಖ್ಯ ಹೆಸರುಗಳಲ್ಲಿ ತೀಸ್ತಾ ಸೆಟಲ್ವಾಡರದ್ದೂ ಒಂದು. ಆ ಗಲಭೆಯ ಸಂಬಂಧ ಉಲ್ಲೇಖವಾಗುವ ಬಹುತೇಕ ಹೆಸರುಗಳು ಗಲಭೆಯಲ್ಲಿ ಪಾಲ್ಗೊಂಡ ಅಥವಾ ಅದಕ್ಕೆ ಪ್ರಚೋದನೆ ನೀಡಿದ, ಅಪರಾಧಿಗಳಿಗೆ ರಕ್ಷಣೆ ನೀಡಿದ ನಕಾರಾತ್ಮಕ ಕಾರಣಗಳಿಗಾದರೆ, ತೀಸ್ತಾ ಹೆಸರು ಉಲ್ಲೇಖವಾಗುವುದು ಸಕಾರಾತ್ಮಕ ಕಾರಣಗಳಿಗಾಗಿ. ಗುಜರಾತ್‌ ಗಲಭೆಯಲ್ಲಿ ಸಂತ್ರಸ್ತರಾದ ಧ್ವನಿರಹಿತರಿಗೆ ನ್ಯಾಯ ಒದಗಿಸಲು ಬಲಾಢ್ಯರಲ್ಲಿ ಬಲಾಢ್ಯರನ್ನು ಎದುರುಹಾಕಿಕೊಂಡು ನ್ಯಾಯಾಲಯದ ಬಾಗಿಲು ತಟ್ಟಿ ಬಾಬು ಬಜರಂಗಿ, ಮಾಯಾ ಕೊಡ್ನಾನಿಯಂತಹ ಅತ್ಯಂತ ಪ್ರಭಾವಿಗಳೂ ಸೇರಿದಂತೆ 117ಕ್ಕೂ ಅಧಿಕ ಮಂದಿ ಸೆರೆಮನೆ ಸೇರುವಂತೆ ಮಾಡಿರುವುದಕ್ಕಾಗಿ. ಸರ್ವ ರೀತಿಯ ಸಂಪನ್ಮೂಲಗಳನ್ನು ಹೊಂದಿರುವ ಬಲಾಢ್ಯ ಪ್ರಭುತ್ವವೊಂದರ ವಿರುದ್ಧ ಪ್ರಜ್ಞಾವಂತ ಕೆಲವೇ ಮಂದಿಯ ಬೆಂಬಲ ಹೊರತುಪಡಿಸಿದರೆ, ಏನೇನೂ ಶಕ್ತಿಯಿಲ್ಲದ ಸಣ್ಣ ಸಂಘಟನೆಯೊಂದು ಕಾನೂನು ಹೋರಾಟ ಮಾಡುವುದು ಎಷ್ಟು ಕಷ್ಟ ಎನ್ನುವುದನ್ನು ಊಹಿಸಿಕೊಂಡರೂ ಸಾಕು, ತೀಸ್ತಾ ಮಾಡಿದ ಸಾಧನೆಯ ಮಹತ್ವ ನಮಗೆ ಅರಿವಾಗುತ್ತದೆ.

ಪತ್ರಕರ್ತೆಯಾಗಿ…  
ಮುಂಬಯಿಯಲ್ಲಿ ಹುಟ್ಟಿ ಬೆಳೆದ ತೀಸ್ತಾಗೆ ಚಿಕ್ಕಂದಿನಿಂದಲೂ ಓದುವ ಹುಚ್ಚು. ಹೊಸತೇನನ್ನಾದರೂ ಸಾಧಿಸಬೇಕೆಂಬ ಹುಮ್ಮಸ್ಸು. ಸಮಾಜದಲ್ಲಿ ಬದಲಾವಣೆ ತರಬೇಕೆನ್ನುವ ತುಡಿತದಿಂದಾಗಿಯೇ ಆಕೆ ಮೊದಲು ಕಾಲಿಟ್ಟದ್ದು ಪತ್ರಿಕೋದ್ಯಮಕ್ಕೆ. ʼದ ಡೈಲಿ(ಇಂಡಿಯಾ),ʼ 'ಇಂಡಿಯನ್‌ ಎಕ್ಸ್ ಪ್ರೆಸ್ʼ ದೈನಿಕಗಳಲ್ಲಿ ದುಡಿದ ಅವರಿಗೆ ಸಮಾಜದ ವಿವಿಧ ಮಗ್ಗುಲುಗಳ ಪರಿಚಯವಾದದ್ದು ಇಲ್ಲೇ. ಸಮಾಜದ ನೈಜ ಸಮಸ್ಯೆಗಳನ್ನು ಬಿಂಬಿಸಲು, ಅವುಗಳಿಗೆ ಪರಿಹಾರ ಹುಡುಕಲು ಮುಖ್ಯವಾಹಿನಿ ಪತ್ರಿಕೋದ್ಯಮದಲ್ಲಿ ಮಾಡುತ್ತಿರುವುದು ಸಾಲದೇನೋ ಎಂಬ ಭಾವ ಆಗಾಗ ಅವರನ್ನು ಕಾಡುತ್ತಿತ್ತು. ಹಾಗೆ ಕಾಡುತ್ತಿದ್ದ ಈ ಭಾವನೆ ಗಟ್ಟಿಯಾದದ್ದು ʼಬಿಸಿನೆಸ್‌ ಇಂಡಿಯಾʼ ನಿಯತಕಾಲಿಕದಲ್ಲಿ ಕೆಲಸ ಮಾಡುತ್ತಿದ್ದಾಗ. ಅಪರಾಧವೆಂಬುದು ಜಾತಿಯಿಂದ ಜಾತಿಗೆ ಬದಲಾಗದು. ಅದು ಜಾತಿ ಆಧಾರಿತವಲ್ಲ. ಅಪರಾಧವೆಂದರೆ ಅಪರಾಧ ಮಾತ್ರ. ಅದಕ್ಕೆ ಜಾತಿ, ಲಿಂಗತ್ವಗಳ ಸಂಬಂಧವಿಲ್ಲ ಎಂಬುದು ಅವರ ಗಟ್ಟಿ ನಂಬುಗೆ.

Image
Teestha

1992ರಲ್ಲಿ ಮುಂಬೈ ಸೇರಿದಂತೆ ದೇಶದಾದ್ಯಂತ ನಡೆದ ಕೋಮುಗಲಭೆ ಅವರನ್ನು ಸಂಪೂರ್ಣ ಅಲುಗಾಡಿಸಿಬಿಟ್ಟಿತು. ಬದಲಾವಣೆಗೆ ಬರಹವಷ್ಟೇ ಸಾಲದೇನೋ ಎನ್ನಿಸಿದ ತಕ್ಷಣ ತೀಸ್ತಾ ಮುಖ್ಯವಾಹಿನಿ ಪತ್ರಿಕೋದ್ಯಮದಿಂದ ಹೊರಬಂದರು. ಸಾಮಾಜಿಕ ಕಾರ್ಯಕರ್ತೆಯಾಗಿ ಪರಿವರ್ತನೆಯಾದರು. ಸಮಾಜದ ಪರಿವರ್ತನೆಗಾಗಿ ಬದ್ಧತೆಯಿಂದ ಮತ್ತು ಸಮರ್ಪಣಾಭಾವದಿಂದ ದುಡಿಯತೊಡಗಿದರು. ಸಹೋದ್ಯೋಗಿ ಜಾವೆದ್ ಆನಂದ್‌ ಜತೆ ಸೇರಿ ಕೋಮುವಾದದ ವಿಷಯಗಳ ವಿಶ್ಲೇಷಣೆ, ಅಧ್ಯಯನಶೀಲ ಬರಹಗಳು ಮತ್ತು ಅಭಿವೃದ್ಧಿಪರ ವಿಷಯಗಳ ವಕಾಲತ್ತು ನಡೆಸುವ ಸಲುವಾಗಿ ʼಕಮ್ಯುನಲಿಸಂ ಕಂಬ್ಯಾಟ್‌ʼ ಪತ್ರಿಕೆಯನ್ನು  ಆರಂಭಿಸಿದರು.

ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿ…
ತೀಸ್ತಾ ಅವರ ಸಮಾಜಸೇವೆ, ಹೋರಾಟಗಳಲ್ಲಿ ಸಮಾನ ಆಸಕ್ತಿಯನ್ನು ಹಂಚಿಕೊಂಡು ಸಹೋದ್ಯೋಗಿಯಾಗಿದ್ದ ಜಾವೇದ್ ಆನಂದ್‌ ಮುಂದೆ ಅವರ ಬಾಳ ಸಂಗಾತಿಯೂ ಆದರು. ಈ ಸಂಗಮದಿಂದ ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಇವರ ಹೋರಾಟ ಇನ್ನಷ್ಟೂ ಚುರುಕುಗೊಂಡಿತು. ಅದಕ್ಕಾಗಿ ʼಸಬರಂಗ್‌ ಟ್ರಸ್ಟ್‌, ಮತ್ತು ʼಸಿಟಿಜನ್ಸ್‌ ಫಾರ್‌ ಜಸ್ಟೀಸ್‌ ಆಂಡ್‌ ಪೀಸ್‌ʼ(ಸಿಜೆಪಿ) ಸಂಸ್ಥೆಗಳನ್ನು ಹುಟ್ಟು ಹಾಕಿದರು, ಕಟ್ಟಿ ಬೆಳೆಸಿದರು.
ಕೋಮವಾದದ ವಿರುದ್ಧದ ಈ ಹೋರಾಟದಲ್ಲಿ ಘಟಾನುಘಟಿಗಳನ್ನು ಎದುರು ಹಾಕಿಕೊಳ್ಳುವಾಗ ಎದುರಾಗ ಬಹುದಾದ ಅಪಾಯಗಳ ಸಂಪೂರ್ಣ ಅರಿವಿದ್ದರೂ ಅವರು ತಮ್ಮ ನಿಲುವಿನಿಂದ ಎಂದೂ ಹಿಂದೆ ಸರಿಯಲಿಲ್ಲ. 2002ರ ಗುಜರಾತ್ ಗಲಭೆಯ ಸಮಯ ಗುಲ್ಬರ್ಗ್‌ ಕೋ ಆಪರೇಟಿವ್‌ ಹೌಸಿಂಗ್‌ ಸೊಸೈಟಿ ಸ್ಥಳದಲ್ಲಿ ನಡೆದ ಭೀಕರ ನರಮೇಧದಲ್ಲಿ ನೊಂದವರ ಕುಟುಂಬಗಳಿಗೆ ಕಾನೂನು ನೆರವು ನೀಡುವ ನಿಟ್ಟಿನಲ್ಲಿ ಹಗಲು ರಾತ್ರಿಯೆನ್ನದೆ ದುಡಿಯತೊಡಗಿದರು.

ನರಮೇಧ ನಡೆದು ನೂರಾರು ಅಮಾಯಕ ಜೀವಗಳು ಬೆಂಕಿಗೆ ಆಹುತಿಯಾದ ಗುಲ್ಬರ್ಗ್‌ ಸೊಸೈಟಿಯ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲು ಸಬರಂಗ್‌ ಮತ್ತು ಸಿಜೆಪಿ ನಿರ್ಧರಿಸಿದ್ದವು. ಈ ಸಂಬಂಧ ದೇಣಿಗೆ ಹಣ ಸಂಗ್ರಹಕ್ಕಾಗಿ ವಿವಿಧ ಮಾರ್ಗೋಪಾಯಗಳನ್ನು ಕೈಗೊಂಡಿದ್ದವು. ಇದರ ಅಂಗವಾಗಿಯೇ ಮುಂಬಯಿಯಲ್ಲಿ ʼಆರ್ಟ್‌ ಫಾರ್‌ ಹ್ಯುಮಾನಿಟಿʼ ಹೆಸರಿನಲ್ಲಿ  ಪ್ರದರ್ಶನ ಏರ್ಪಡಿಸಲಾಗಿತ್ತು. ಸುಮಾರು 80 ಪ್ರಖ್ಯಾತ ಕಲಾವಿದರು ತಮ್ಮ ಕಲಾಕೃತಿಗಳನ್ನು ದೇಣಿಗೆ ನೀಡಿದರು. ಎಲ್ಲಾ ಕಲಾಕೃತಿಗಳು ಮಾರಾಟವಾಗಿ ಕೋಟಿ ರುಪಾಯಿಗಳಿಗೂ ಹೆಚ್ಚು ದೇಣಿಗೆ ಸಂಗ್ರಹವಾಯಿತು.

ತೀಸ್ತಾರ ಮಾನವೀಯ ಕೆಲಸವನ್ನು ಗುರುತಿಸಿ ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು. ʼಪದ್ಮಶ್ರೀʼ ಯಿಂದ ಹಿಡಿದು ‘ನ್ಯೂಮರ್‌ ಬರ್ಗ್‌ ಹುಮನ್‌ರೈಟ್‌ ಅವಾರ್ಡ್‌’,  ʼಪ್ರಾಕ್ಸ್‌ಕ್ರಿಸ್ಟಿ ಪೀಸ್‌ ಅವಾರ್ಡ್ʼ ಸೇರಿದಂತೆ ನೂರಾರು ಪ್ರಶಸ್ತಿಗಳ ಗರಿ ಅವರ ಮುಡಿಯೇರಿದವು.

ಗುಜರಾತ್‌ ಸರ್ಕಾರದ ಕುತಂತ್ರ
ಗುಲ್ಬರ್ಗ್‌ ಸೊಸೈಟಿ ನರಮೇಧ ಪ್ರಕರಣದಲ್ಲಿ ತೀಸ್ತಾ ಅಂದಿನ ಗುಜರಾತ್‌ ಮುಖ್ಯಮಂತ್ರಿ ಮತ್ತು ಇಂದಿನ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೇ ಹೋರಾಟ ನಡೆಸುವುದರ ಪರಿಣಾಮವನ್ನು ತಾನು ಎದುರಿಸಬೇಕಾಗುತ್ತದೆ ಎಂಬುದು ಅವರಿಗೆ ಅರಿವಿತ್ತು. ನನ್ನನ್ನು ಉಳಿಯಗೊಡುವುದಿಲ್ಲ, ಮೋದಿ ಪ್ರಧಾನಿಯಾದರೆ ವಕೀಲೆಯಾಗಿ, ಮಾನವಹಕ್ಕುಗಳ ಹೋರಾಟಗಾರ್ತಿಯಾಗಿ ನನ್ನ ಕತೆ ಮುಗಿದಂತೆಯೇ ಎಂದು ಮಾಧ್ಯಮಗಳು, ಆತ್ಮೀಯರಲ್ಲಿ ಹಲವು ಬಾರಿ ಅವರು ಆತಂಕ ತೋಡಿಕೊಂಡಿದ್ದರು. ಇದಕ್ಕೆ ಪೂರಕವೆಂಬಂತೆ ಮೋದಿ ಪ್ರಧಾನಿಯಾಗುತ್ತಲೇ ತೀಸ್ತಾರನ್ನು ಹೇಗಾದರೂ ಮಾಡಿ ಜೈಲಿಗೆ ಕಳುಹಿಸುವ ತಂತ್ರಗಳು ಚಾಲನೆ ಪಡೆದವು. ಇದರ ಭಾಗವಾಗಿಯೇ ಕೋಮುಗಲಭೆಯ ಸ್ಮರಣಿಕೆಗಳ ವಸ್ತು ಸಂಗ್ರಾಹಲಯ ಸ್ಥಾಪಿಸುವ ಉದ್ದೇಶದಿಂದ ಸಂಗ್ರಹಿಸಿದ್ದ ಹಣವನ್ನು ತೀಸ್ತಾ ವಿಮಾನ ಹಾರಾಟ, ವಿದೇಶ ಪ್ರವಾಸ ಮತ್ತು ಐಶಾರಾಮಿ ವಸ್ತುಗಳ ಖರೀದಿಗೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಆಕೆಯ ಮೇಲೆ ಮೊಕದ್ದಮೆ ಹೂಡಲಾಯಿತು. ಈ ಬಗ್ಗೆ ತೀಸ್ತಾ ಕೊಟ್ಟ ವಿವರಣೆಗಳನ್ನು, ಸಾಕ್ಷ್ಯಾಧಾರಗಳನ್ನು ಪರಿಗಣಿಸದ ಗುಜರಾತ್‌ ಹೈಕೋರ್ಟ್‌ ಆಕೆಗೆ ನಿರೀಕ್ಷಣಾ ಜಾಮೀನನ್ನು ನಿರಾಕರಿಸಿತು. ಹೀಗೆ ನಿರಾಕರಿಸಿದ ಕೆಲವೇ ನಿಮಿಷಗಳಲ್ಲಿ ಆಕೆಯನ್ನು ಬಂಧಿಸಲು ಗುಜರಾತ್‌ ಪೊಲೀಸರು ಆಕೆಯ ಮುಂಬಯಿ ನಿವಾಸಕ್ಕೆ ದಾಳಿ ನೀಡಿದರೆಂದರೆ ಗುಜರಾತ್‌ ಸರಕಾರ ಆಕೆಯನ್ನು ಬಲಿಪಶು ಮಾಡಲು ಎಷ್ಟೊಂದು ಆತುರ ಹೊಂದಿತ್ತು ಎಂಬುದು ಸ್ಪಷ್ಟವಾಗುತ್ತದೆ. ಆದರೆ ತೀಸ್ತಾ ಸಿಗಲಿಲ್ಲ. ಮತ್ತು ಆಕೆ ಆ ಆದೇಶದ ವಿರುದ್ಧ ಸುಪ್ರಿಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು. ಅವರನ್ನು ಬಂಧಿಸದಂತೆ ಸುಪ್ರಿಂ ಕೋರ್ಟ್‌ ಆದೇಶ ನೀಡಿತು. ಹೀಗೆ, ತೀಸ್ತಾರನ್ನು ವಶಕ್ಕೆ ಪಡೆದು ಅವರನ್ನು ಅವಮಾನಿಸುವ, ಚಿತ್ರಹಿಂಸೆಗೀಡು ಮಾಡುವ ಗುಜರಾತ್‌ ಸರಕಾರದ ಕುತಂತ್ರ ವಿಫಲವಾಯಿತು.

ಪ್ರಖ್ಯಾತ ಬುದ್ಧಿಜೀವಿಗಳ ಬೆಂಬಲ
ತೀಸ್ತಾ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ದೇಶ ವಿದೇಶದ ಅನೇಕ ಪ್ರಖ್ಯಾತ ಬುದ್ಧಿಜೀವಿಗಳು ಆಕೆಯ ಬೆನ್ನಿಗೆ ನಿಂತರು. ಅಮೆರಿಕದ ಪ್ರಸಿದ್ಧ ಚಿಂತಕ ನೋಮ್‌ ಚೋಮ್ಸ್, ಇತಿಹಾಸ ತಜ್ಞರಾದ ರೊಮಿಲಾ ಥಾಪರ್‌, ಇರ್ಫಾನ್‌ ಹಬೀಬ್‌ ಮೊದಲಾದವರು ಇದರಲ್ಲಿ  ಸೇರಿದ್ದು, ʼಇದು ಸ್ಪಷ್ಟವಾಗಿ ದ್ವೇಷ ಸಾಧನೆಯ ಒಂದು ಹುನ್ನಾರ, ಝಾಕಿಯಾ ಜಾಫ್ರಿ ಅವರು ನರೇಂದ್ರ ಮೋದಿ ಅವರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂತೆಗೆದುಕೊಳ್ಳಲು ಒತ್ತಡ ಹೇರುವ ಪ್ರಯತ್ನದ ಭಾಗವಾಗಿಯೇ ಈ ತಂತ್ರ ಬಳಸಲಾಗುತ್ತಿದೆʼ ಎಂದು ಅವರೆಲ್ಲ ಆರೋಪಿಸಿದ್ದರು.

Image
ತೀಸ್ತಾ ಬಂಧನ ವಿರೋಧಿಸಿ ಮಹಿಳೆಯರಿಂದ ಪ್ರತಿಭಟನೆ
ತೀಸ್ತಾ ಬಂಧನ ವಿರೋಧಿಸಿ ಮಹಿಳೆಯರಿಂದ ಪ್ರತಿಭಟನೆ

ತೀಸ್ತಾರ ಕೆಲಸಗಳ ಬಗ್ಗೆ ಸಹಾನುಭೂತಿಯುಳ್ಳವರೂ ಈಕೆ ಅತಿಯಾಗಿ ಮಾತಾಡುತ್ತಾಳೆ ಎಂದು ಗೊಣಗಿದಾಗ ಖ್ಯಾತ ಚಿಂತಕ ಶಿವ ವಿಶ್ವನಾಥನ್‌ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ಒಂದು ಸೊಗಸಾದ ಲೇಖನವನ್ನೇ ಬರೆದರು. ಅದರ ಕೆಲ ಸಾಲುಗಳು ಹೀಗಿವೆ “ಹಿಂಸೆಗೆ ತುತ್ತಾದವರ ಪರವಾಗಿ ದೊಡ್ಡಗಂಟಲಲ್ಲಿ ಚೀರಾಡುತ್ತಾರೆ ಎನ್ನುವುದು ತೀಸ್ತಾರ ಬಗೆಗಿನ ತಕರಾರು. ಆದರೆ ಏನು ಮಾಡುವುದು? ನಮ್ಮ ಸಮಾಜದ ಸಭ್ಯರು ಗುಜರಾತ್‌ ಹಿಂಸೆಯ ಬಗ್ಗೆ ದಿವ್ಯ ಮೌನ ತಾಳಿರುವಾಗ, ಈ ಬಗೆಯ ಚೀರಾಟವೇ ತಕ್ಕ ಉತ್ತರವಾಗಿದೆ. ತೀಸ್ತಾ ಮಾಡುವ ಗದ್ದಲ ನಮಗೆ ತೀರಾ ಅಪ್ರಿಯವಾದುದು. ಆದರೆ, ಅದು ನೊಂದವರನ್ನು ವಹಿಸಿಕೊಂಡು ಅವರು ನುಡಿಯುತ್ತಿರುವ ಸಾಕ್ಷಿ ಎಂಬುದೂ ನೆನಪಿರಲಿ…

ನೊಂದವರ ನೋವು ನಮ್ಮನ್ನು ತಟ್ಟುತ್ತಿಲ್ಲವೇ? ಎಂದು ಚುಚ್ಚುವ ಅಧಿಕೃತ ಸಂತಾಪ ಸೂಚಕಿಯ ಹಾಗೆ ತೀಸ್ತಾ ಆಡುತ್ತಾರೆ. ಪದೇ ಪದೇ ಅದನ್ನೇ ಎತ್ತಿ ಆಡಿ ರಂಪ ರಗಳೆ ಮಾಡುತ್ತಾರೆ. ಇದರಿಂದ ನಮಗೆ ತುಂಬಾ ಕಿರಿ ಕಿರಿಯಾಗುತ್ತದೆ. ಇದೆಲ್ಲ ಸರಿ. ಹಾಗಂತ ಮುಚ್ಚಿಟ್ಟ ಸತ್ಯಗಳನ್ನು ಜಗಜ್ಜಾಹೀರು ಪಡಿಸುವವರ ಮಾತುಗಳು ಸಂಗೀತದಷ್ಟು ಸುಶ್ರಾವ್ಯವಾಗಿರುವುದಿಲ್ಲ ಎಂಬ ಅರಿವು ನಮಗೆ ಬೇಡವೇ!...ತಮ್ಮ ಕಣ್ಣೆದುರೇ ನಡೆಯುತ್ತಿರುವ ಹಿಂಸೆಯನ್ನು ದೇಶಾವರಿ ಎಂದು ಉಪೇಕ್ಷಿಸುವ ಜನರಿಂದ ತುಂಬಿರುವ ನಮ್ಮ ಸಮಾಜವು ತೀಸ್ತಾರಂಥವರ ಅತಿರೇಕದ ವರ್ತನೆಗೆ ಸದಾ ಋಣಿಯಾಗಿರಬೇಕು”.

ಸುಪ್ರೀಂ ಕೋರ್ಟ್‌ ಆಗ ಮತ್ತು ಈಗ
ತೀಸ್ತಾರನ್ನು ವಶಕ್ಕೆ ಪಡೆದು ಅವರನ್ನು ಅವಮಾನಿಸುವ ಹಿಂಸಿಸುವ ಗುಜರಾತ್‌ ಸರ್ಕಾರದ ಕುತಂತ್ರವನ್ನು ವಿಫಲಗೊಳಿಸಿದ ಸುಪ್ರಿಂಕೋರ್ಟ್‌ ಆದೇಶದಲ್ಲಿ ಆಗ ಹೀಗೆ ಹೇಳಲಾಗಿತ್ತು- ʼವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ಮುಂದೆ ಆಗಸದಲ್ಲಿರುವ ಎಲ್ಲ ನಕ್ಷತ್ರಗಳು, ಚೀನಾದಲ್ಲಿರುವ ಎಲ್ಲ ಚಹಾ, ಸಾಗರದಲ್ಲಿರುವ ಎಲ್ಲ ಮುತ್ತುಗಳು ಕೂಡಾ ಯಾವ ಲೆಕ್ಕಕ್ಕಿಲ್ಲʼ. ಈ ಮಾತುಗಳು ನ್ಯಾಯಾಂಗದ ಮೇಲೆ ವಿಶ್ವಾಸ ಮತ್ತು ಅಭಿಮಾನ ಹೆಚ್ಚುವಂತೆ ಮಾಡಿದ್ದವು ಮತ್ತು ತೀಸ್ತಾ ಬಂಧನ ಭೀತಿಯಿಂದ ತಪ್ಪಿಸಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದವು. ಆದರೂ ಆಕೆಯ ಮೇಲೆ ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳು ತನಿಖೆಯ ಹೆಸರಿನಲ್ಲಿ ಕಿರುಕುಳ ನೀಡುವುದನ್ನು ಮುಂದುವರಿಸಿಯೇ ಇದ್ದವು. ಇದರಿಂದ ಅವರ ಸಾಮಾಜಿಕ ಹೋರಾಟಗಳಿಗೆ ಸಾಕಷ್ಟು ಅಡಚಣೆಯಾಗಿದ್ದರೂ, ಆ ಎಲ್ಲ ಕಿರುಕುಳ ಸಹಿಸಿಕೊಂಡೂ ಅವರು ತಮ್ಮ ಜನಪರ ಕೆಲಸವನ್ನು ತಮ್ಮದೇ ಮಿತಿಯಲ್ಲಿ ಮುಂದುವರಿಸಿಯೇ ಇದ್ದರು. ಆದರೆ ಇತ್ತೀಚೆಗೆ ಏನಾಯಿತು?

Image
ಝಾಕಿಯಾ ಜಾಫ್ರಿ ಜೊತೆ ತೀಸ್ತಾ
ಝಾಕಿಯಾ ಜಾಫ್ರಿ ಜೊತೆ ತೀಸ್ತಾ

ಗುಲ್ಬರ್ಗ್ ಸೊಸೈಟಿ ನರಮೇಧದಲ್ಲಿ ಅಸು ನೀಗಿದ ಮಾಜಿ ಕಾಂಗ್ರೆಸ್ ಸಂಸದ ಎಹಸಾನ್ ಜಾಫ್ರಿಯವರು ಗಲಭೆಕೋರರಿಂದ ಸುತ್ತುವರಿದಿದ್ದಾಗ ಅಂದಿನ ಗುಜರಾತ್ ಮುಖ್ಯಮಂತ್ರಿಗೆ ಫೋನ್ ಮಾಡಿ ತಮಗೆ ಮತ್ತು ತಮ್ಮ ಜತೆ ಇರುವವರಿಗೆ ರಕ್ಷಣೆ ನೀಡುವಂತೆ ಕೋರಿದ್ದರು. ಆದರೆ ಮುಖ್ಯಮಂತ್ರಿ ಏನೂ ಸಹಾಯ ಮಾಡಲಿಲ್ಲ. ಪರಿಣಾಮವಾಗಿ ಇತರ ಸುಮಾರು 69 ಮಂದಿಯೊಂದಿಗೆ ಅವರೂ ಸುಟ್ಟು ಹೋಗಿದ್ದರು. ಇದು ಆರೋಪ. ಇದರ ನೆಲೆಯಲ್ಲಿ ಎಹಸಾನ್ ಜಾಫ್ರಿಯವರ ಪತ್ನಿ ಝಾಕಿಯಾ ಜಾಫ್ರಿ ಅವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಇವರ ನ್ಯಾಯಾಂಗ ಹೋರಾಟದ ಹಿಂದೆ ಬೆನ್ನೆಲುಬಾಗಿ ನಿಂತವರು ತೀಸ್ತಾ ಸೆಟಲ್ವಾಡ್. ನ್ಯಾಯಾಲಯ ನೇಮಿಸಿದ್ದ ಎಸ್ ಐ ಟಿಯು ಈ ವಿಷಯದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯವರಿಗೆ ಕ್ಲೀನ್ ಚಿಟ್ ನೀಡಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ಸುಮಾರು ಒಂದೂವರೆ ದಶಕಕ್ಕೂ ಅಧಿಕ ಕಾಲ ಅದರ ವಿಚಾರಣೆ ನಡೆದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿತು. ಅದರಲ್ಲಿ ಜಾಕಿಯಾ ಜಾಫ್ರಿ ಸಲ್ಲಿಸಿದ ಮೇಲ್ಮನವಿಯನ್ನು ತಳ್ಳಿ ಹಾಕಲಾಗಿತ್ತು.. ಆದರೆ, ಇಲ್ಲಿ ಯಾರೂ ಊಹಿಸಿರದ, ನ್ಯಾಯಾಲಯಗಳ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದ, ನ್ಯಾಯಾಲಯದ ವಿಶ್ವಾಸಾರ್ಹತೆಗೆ ಭಂಗ ತರುವ ಮತ್ತು ದೇಶದಲ್ಲಿ ಕೆಲಸ ಮಾಡುತ್ತಿರುವ ಮಾನವಹಕ್ಕುಗಳ ಪರ ಹೋರಾಟಗಾರರ ಧೈರ್ಯ ಕುಂದಿಸುವ ಕೆಲಸವೊಂದನ್ನು ಅದು ಮಾಡಿತು.

ಮೋದಿಯವರಿಗೆ ಕ್ಲೀನ್ ಚಿಟ್ ಕೊಟ್ಟ ಸುಪ್ರೀಂ ಕೋರ್ಟಿನ ನ್ಯಾ. ಕನ್ವಿಲ್ಕರ್ ಅವರ ಈ ನ್ಯಾಯಪೀಠ ದೂರು  ಕೊಟ್ಟವರ ಬಗ್ಗೆ ಮತ್ತು ದೂರು ಕೊಡಲು ಸಹಕರಿಸಿದವರ ಬಗ್ಗೆ “ಗುಜರಾತಿನ ಕೆಲವು ಕಿಡಿಗೇಡಿ ಅಧಿಕಾರಿಗಳು ಇತರರ ಜೊತೆಗೂಡಿ ತಮಗೆ ಸುಳ್ಳು ಎಂದು ತಿಳಿದಿರುವ ವಿಷಯಗಳನ್ನು ಬಯಲು ಮಾಡಿ ಕೋಲಾಹಲ ಸೃಷ್ಟಿಸಬಯಸಿದ್ದರು ಎಂದು ನಮಗೆ ತೋರುತ್ತದೆ... ನ್ಯಾಯಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡ ಇವರೆಲ್ಲರನ್ನೂ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು" ಎಂದು ಹೇಳಿತು. ಹೀಗೆ ಹೇಳುವುದನ್ನೇ ಕಾಯುತ್ತಿದ್ದವೋ ಏನೋ ಅವರನ್ನು ವಿರೋಧಿಸುತ್ತಿದ್ದ ಸರಕಾರಿ ವ್ಯವಸ್ಥೆಗಳು. ಮರುಗಳಿಗೆಯಲ್ಲಿಯೇ ಗುಜರಾತ್‌ನ ಎಟಿಎಸ್ ತೀಸ್ತಾ ಸೆಟಲ್ವಾಡ್‌ರ ಮುಂಬೈ ನಿವಾಸದ ಮುಂದೆ ಹಾಜರಾಗಿತ್ತು. ಅವರನ್ನು ಬಂಧಿಸಿ ಅಹ್ಮದಾಬಾದ್ ಗೆ ಒಯ್ಯಲಾಯಿತು. ಅವರ ಜತೆಯಲ್ಲಿ ಅಂದಿನ ಗುಜರಾತ್ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ ಮಾಜಿ ಪೊಲೀಸ್ ಅಧಿಕಾರಿ ಶ್ರೀಕುಮಾರ್ ಅವರನ್ನೂ ಬಂಧಿಸಿ ಜೈಲಿನಲ್ಲಿಡಲಾಗಿದೆ.

ಇದನ್ನು ಓದಿದ್ದೀರಾ? ತೀಸ್ತಾ ಎಂಬ ಹೋರಾಟದ ನದಿಯ ನಿರ್ಭೀತ ನಡೆಗೊಂದು ಸಲಾಂ: ರೇಣುಕಾ ನಿಡಗುಂದಿ

ತೀಸ್ತಾ ಅವರಂತಹ ಅಪರೂಪದ ಮಾನವಹಕ್ಕು ಹೋರಾಟಗಾರರ ಬಂಧನದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ. ದೇಶದಾದ್ಯಂತ ಪ್ರತಿಭಟನೆ ನಡೆದಿದೆ. ಅನೇಕ ಮಾಜಿ ನ್ಯಾಯಮೂರ್ತಿಗಳು ಹೇಳುವ ಪ್ರಕಾರ, ನ್ಯಾಯ ಕೇಳಲು ಬಂದವರನ್ನೇ ಬಂಧಿಸುವಂತೆ ಪರೋಕ್ಷವಾಗಿ ಸೂಚನೆ ನೀಡುವ ಮೂಲಕ ಇಲ್ಲಿ ಸುಪ್ರೀಂ ಕೋರ್ಟು ಬಹಳ ದೊಡ್ಡದೊಂದು ತಪ್ಪು ಮಾಡಿದೆ. ಸುಪ್ರೀಂಕೋರ್ಟ್‌ನ ಸೂಚನೆಯನ್ನೇ ಗುಜರಾತ್ ಪೊಲೀಸರು ಅನುಸರಿಸಿರುವುದರಿಂದ, ಕೆಳಗಿನ ಯಾವ ಕೋರ್ಟುಗಳೂ ಅವರಿಗೆ ಜಾಮೀನು ನೀಡಲಾರವು. ಪರಿಣಾಮವಾಗಿ ತೀಸ್ತಾ, ಶ್ರೀಕುಮಾರ್ ಬಹುದೀರ್ಘ ಕಾಲ ಜೈಲಿನಲ್ಲಿ ಕೊಳೆಯಬೇಕಾಗಬಹುದು. ಹಾಗಾಗಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳು ಇದರ ಬಗ್ಗೆ ತಕ್ಷಣ ಗಮನ ಹರಿಸಿ ಆಗಿರುವ ತಪ್ಪನ್ನು ಸರಿಪಡಿಸಬೇಕು ಎಂದು ಅವರೆಲ್ಲ ಕೋರಿದ್ದಾರೆ.

ತೀಸ್ತಾರಿಗೆ ನ್ಯಾಯ ದೊರಕಿಸುವ ಸಾಮರ್ಥ್ಯ ಇರುವುದು ಈಗ ಸುಪ್ರೀಂ ಕೋರ್ಟ್‌ಗೆ ಮಾತ್ರ. ಆ ಕೆಲಸವನ್ನು ಅದು ಮಾಡುತ್ತದೆಯೇ? ಆ ಮೂಲಕ ತನ್ನ ವಿಶ್ವಾಸಾರ್ಹತೆಯನ್ನು ಮರಳಿ ಗಳಿಸಿಕೊಳ್ಳುತ್ತದೆಯೇ? ಮಾನವ ಹಕ್ಕುಗಳ ಪರ ಹೋರಾಡುತ್ತಿರುವ ಸಹಸ್ರಾರು ಮಂದಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗುತ್ತದೆಯೇ? ಎಂಬುದನ್ನು ಕಾಲವೇ ನಿರ್ಧರಿಸಬೇಕಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್