ಭಾರತ ಐಕ್ಯತಾ ಯಾತ್ರೆಯು ಕೇವಲ ರಾಜಕೀಯ 'ಪ್ರಹಸನ'ವಲ್ಲ ಎನ್ನಲು ಕಾರಣವಿದೆ : ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್‌

ಯಾತ್ರೆಗೆ ಹೊರಡುವ ಮುನ್ನ ದಿನ ನನ್ನ ಕೆಲವು ಕುಟುಂಬ ಸ್ನೇಹಿತರನ್ನು ಭೇಟಿ ಮಾಡಿದ್ದೆ. ಅವರು ಸ್ವಲ್ಪ ಹೆಚ್ಚೇ ಆತಂಕಿತರಾಗಿ ಕಂಡುಬಂದಿದ್ದರು. "ನೀವು ಕಾಂಗ್ರೆಸ್ ಪಕ್ಷ ಸೇರುತ್ತಿಲ್ಲ ಎಂದು ನಮಗೆ ಗೊತ್ತಿದೆ. ಆದರೆ ಈ ಪಕ್ಷದೊಂದಿಗೆ ಯಾವುದೇ ಒಡನಾಟ ಇರಿಸಿಕೊಳ್ಳುವುದು ರಾಜಕೀಯವಾಗಿ ಸಾವಿನೊಂದಿಗೆ ಸೆಣಸಿದಂತೆ ಅಲ್ಲವೇ?" ಎಂದು ಅವರು ಕೇಳಿದರು

ಭಾರತ ಐಕ್ಯತಾ ಯಾತ್ರೆಯಿಂದ ಪ್ರಚೋದಿಸಲ್ಪಟ್ಟ ಹೊಸ ಅಂತರ್ ಪ್ರವಾಹ (undercurrent) ವೊಂದನ್ನು , ಒಂದು ಛಾಯಾಚಿತ್ರವು ಸಾರ್ವಜನಿಕರು ಗಮನಕ್ಕೆ ತಂದಿತು. ರಾಹುಲ್ ಗಾಂಧಿ ಸುರಿಮಳೆಯನ್ನೆದುರಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ, ಸಾವಿರಾರು ಜನರು ಮಳೆಯಿಂದ ರಕ್ಷಿಸಿಕೊಳ್ಳಲು ಪ್ಲಾಸ್ಟಿಕ್ ಕುರ್ಚಿಗಳನ್ನು ಬಳಸಿ ಅವರ ಮಾತನ್ನು ತದೇಕಚಿತ್ತದಿಂದ ಆಲಿಸುತ್ತಿರುವ ಈ ಚಿತ್ರವು, ಯಾತ್ರೆಯ ಸಂದೇಶವನ್ನು ಸೆರೆಹಿಡಿಯಲು ಸಾವಿರಾರು ಸುದ್ದಿ ವಾಹಿನಿಗಳಿಗಿಂತ ಹೆಚ್ಚು ಕೆಲಸ ಮಾಡಿದೆ. ಈ ಯಾತ್ರೆಯು ಇನ್ನೂ ಸಾರ್ವಜನಿಕವಾಗಿ ಹರಡದೇ ಇರಬಹುದು, ಆದರೆ ಚಿತ್ರವು ಸಾಂಕ್ರಾಮಿಕದಂತೆ ಹರಡಿ ಎಲ್ಲರನ್ನು ತಲುಪಿದೆ.

Eedina App

ಇದು ಈ ಅಭಿಯಾನದ ಕುರಿತು ಸಾರ್ವಜನಿಕ ಪ್ರತಿಕ್ರಿಯೆಯಲ್ಲಿ ಆಗಿರುವ ಸೂಕ್ಷ್ಮ ಬದಲಾವಣೆಯನ್ನು ಸೂಚಿಸುತ್ತದೆ. ಭಾರತ ಐಕ್ಯತಾ ಯಾತ್ರೆಯ ಆರಂಭವು ಸಣ್ಣ ಮಟ್ಟದ್ದಾಗಿತ್ತು. ನಾವು ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಯಾತ್ರೆ ಪ್ರಾರಂಭಿಸಿದಾಗ, ಶುರುವಿನ ದಿನಗಳಲ್ಲಿ ಅಜ್ಞಾನ, ಸಿನಿಕತನ ಮತ್ತು ಆತಂಕಗಳನ್ನು ಎದುರಿಸಿದೆವು. ಇದು ನಿಜಕ್ಕೂ ಪಾದಯಾತ್ರೆಯೇ ಎಂದು ಪರಿಶೀಲಿಸಲು ಹಿರಿಯ ಪತ್ರಕರ್ತರೊಬ್ಬರು ಕರೆ ಮಾಡಿದ್ದು ನೆನಪಿದೆ. ಈ ಯಾತ್ರೆ ಯಾವುದರ ಬಗ್ಗೆ ಎಂದು ಯಾರಿಗೂ ಸರಿಯಾಗಿ ಗೊತ್ತಿರಲಿಲ್ಲ. ‘ಈ ಕಾಂಗ್ರೆಸ್ ನಾಯಕರು ನಿಜವಾಗಿ ನಡೆಯುತ್ತಾರಾ? ರಾಹುಲ್ ಗಾಂಧಿಯವರು ಸಾಂದರ್ಭಿಕವಾಗಿ ಮಾತ್ರ ಯಾತ್ರೆಯಲ್ಲಿ ನಡೆಯುತ್ತಾರಾ? ಅಥವಾ ನಿಜವಾಗಿಯೂ ಪ್ರತೀ ದಿನ  ನಡೆಯುತ್ತಾರಾ?’  ‘ಕಾಂಗ್ರೆಸ್ ನ ಈ ಯಾತ್ರೆ ಹೆಚ್ಚೆಂದರೆ ಒಂದು ರೋಡ್ ಶೋ ಆಗಬಹದು ಅಥವಾ ಒಂದು ಕೆಟ್ಟ ತಮಾಷೆಯಾಗಬಹುದು ಅಲ್ಲವಾ?"

Rahul Gandhi

ಯಾತ್ರೆಗೆ ಹೊರಡುವ ಮುನ್ನ ದಿನ ನನ್ನ ಕೆಲವು ನಿಕಟ ಕುಟುಂಬ ಸ್ನೇಹಿತರನ್ನು ನಾನು ಭೇಟಿ ಮಾಡಿದ್ದು ನೆನಪಿದೆ. ಅವರು ಸ್ವಲ್ಪ ಹೆಚ್ಚೇ ಆತಂಕಿತರಾಗಿ ಕಂಡುಬಂದಿದ್ದರು. “ಯೋಗೇಂದ್ರ ಜೀ, ನೀವು ನಿಮ್ಮ ಖ್ಯಾತಿಯನ್ನು ಅಪಾಯಕ್ಕೊಡ್ಡುತ್ತಿದ್ದೀರಿ. ನೀವು ಕಾಂಗ್ರೆಸ್ ಪಕ್ಷ ಸೇರುತ್ತಿಲ್ಲ ಎಂದು ನಮಗೆ ಗೊತ್ತಿದೆ. ಆದರೆ ಈ ಪಕ್ಷದೊಂದಿಗೆ ಯಾವುದೇ ಒಡನಾಟ ಇರಿಸಿಕೊಳ್ಳುವುದು ರಾಜಕೀಯವಾಗಿ ಸಾವಿನೊಂದಿಗೆ ಸೆಣಸಿದಂತೆ ಅಲ್ಲವೇ?" ಎಂದು ಅವರು ಕೇಳಿದರು.

AV Eye Hospital ad

ಯಾವುದೋ ಸಕಾರಾತ್ಮಕ ಬೆಳವಣಿಗೆಯೇ ಒಂದು ಆರಂಭ

ಭಾರತ ಐಕ್ಯತಾ ಯಾತ್ರೆಯ ಮೊದಲ ತಿಂಗಳಲ್ಲಿ ಏನೋ ಬದಲಾವಣೆಯಾಗಿದೆ. ಇದು ರಾಷ್ಟ್ರೀಯ ಮನಸ್ಥಿತಿಯಲ್ಲಿ ಬದಲಾವಣೆ ಎಂದರೆ ಆತುರದ ಹೇಳಿಕೆಯಾಗಬಹುದು. ಆದರೆ ಯಾತ್ರೆಯು "ಯಾವುದೋ ಸಕಾರಾತ್ಮಕ ಬದಲಾವಣೆ"ಯನ್ನು (ಯಾತ್ರೆಯ ಪರಿಣಾಮದ ಕುರಿತು ನಾನು ಪದೇ ಪದೇ ಕೇಳಿದ ಪ್ರತಿಸ್ಪಂದನಾತ್ಮಕ ಮಾತು ಇದೇ ಆಗಿದೆ) ಪ್ರಚೋದಿಸಿದೆ ಎಂಬುದರಲ್ಲಿ ಸಂದೇಹವಿಲ್ಲ. ಭಾರತ ಐಕ್ಯತಾ ಯಾತ್ರೆಯು ಕೇವಲ ವಾಡಿಕೆಯ ರಾಜಕೀಯ ಪ್ರಹಸನವಲ್ಲ, ಹಾಗೆ ಪ್ರಹಸನವಾಗಿ ಉಳಿಯಲಾರದು ಎನ್ನುವುದಕ್ಕೆ ನಾನು ಕೊಡಬಯಸುವ ಆರು ಕಾರಣಗಳು ಇಲ್ಲಿವೆ.

ಒಂದು: ಇದು ಕೇವಲ ಪ್ರತಿಕ್ರಿಯಾತ್ಮಕ ಯಾತ್ರೆ/ಹೋರಾಟವಲ್ಲ, ಇದೊಂದು ಧನಾತ್ಮಕ ಮತ್ತು ಸ್ವಯ ಮುಂತೊಡಗಿನ (Pro active) ಚಳವಳಿ. ಬಹಳ ಸಮಯದ ನಂತರ ರಾಷ್ಟ್ರದ ವಿರೋಧ ಪಕ್ಷಗಳ ಒಕ್ಕೂಟವೊಂದು ತನ್ನ ಸ್ವಂತ ಯೋಜನೆಯಿಂದ, ರಸ್ತೆಗಿಳಿದು ಜನರಿಗೆ ಬಹಳ ಹತ್ತಿರದಿಂದ ಕ್ರಿಯೆಯೊಂದನ್ನು ಪ್ರಾರಂಭಿಸಿ, ಕಾರ್ಯಸೂಚಿಯೊಂದನ್ನು (ಅಜೆಂಡಾ) ಹೊಂದಿಸಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನಕ್ಕೆ ಭಾರತೀಯ ಜನತಾ ಪಕ್ಷವು ಪ್ರತಿಕ್ರಿಯಿಸಲಬೇಕಾದ ಒತ್ತಡಕ್ಕೆ ಒಳಗಾಗಿದೆ. ಯಾತ್ರೆಯ ಮೊದಲ ತಿಂಗಳೊಳಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ ನಿತ್ಯದ ವರಸೆಗಳನ್ನು ಬಿಟ್ಟು ಮುಸ್ಲಿಂ ಸಮುದಾಯದ ನಾಯಕರೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳಲು ಹೊರಟಿತು ಮತ್ತು ಈ ಯಾತ್ರೆಯ ಸಮಯದಲ್ಲಿ ಚರ್ಚಿಸಲಾದ ನಿರುದ್ಯೋಗ, ಬಡತನ ಮತ್ತು ಅಸಮಾನತೆಯ ಸಮಸ್ಯೆಗಳ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿದೆ.

ಭಾರತ್‌ ಜೋಡೋ ಯಾತ್ರೆಗೆ ಸಾಹಿತಿಗಳು ಸಂಘಟನೆಗಳು ಬೆಂಬಲ ನೀಡಿವೆ

ಫುಟ್‌ಬಾಲ್‌ನಲ್ಲಿರುವಂತೆ, ರಾಜಕೀಯದಲ್ಲಿಯೂ ಚೆಂಡು ಯಾರ ಅಂಗಳದಲ್ಲಿದೆ ಎಂಬುದು ಮುಖ್ಯವಾಗುತ್ತದೆ. ರಾಜಸ್ಥಾನದಲ್ಲಿನ ಕಾಂಗ್ರೆಸ್ಸಿನ ತೊಂದರೆಗಳು ಸಹ ಒಂದೆರಡು ದಿನಗಳಿಗಿಂತ ಜಾಸ್ತಿ ಸಮಯ, ಐಕ್ಯತಾ ಯಾತ್ರೆಯನ್ನು ಗೊಂದಲಮಯವಾಗಿಸಲು ಅಥವಾ ಯಾತ್ರೆಯ ಸಕಾರಾತ್ಮಕತೆಯನ್ನು ದುರ್ಬಲಗೊಳಿಸಲು ಸಾಧ್ಯವಾಗಲಿಲ್ಲ.

ಎರಡು: ಇದು ಇನ್ನಿತರ ಯಾತ್ರೆಗಳಂತಲ್ಲ; ಇದು ಪಾದಯಾತ್ರೆ. ಕಾಲ್ನಡಿಗೆಯ ಯಾತ್ರೆಯು ಆಳವಾದ ಸಾಂಸ್ಕೃತಿಕ ಅನುರಣನ ಸಾಧಿಸಬಲ್ಲ ರಾಜಕೀಯ ಕ್ರಮವಾಗಿದೆ. ಒಂದು ಪಾದಯಾತ್ರೆಯು ಸಂಕಟವನ್ನು, ಶ್ರಮವನ್ನು ಒಳಗೊಂಡಿರುತ್ತದೆ ಮತ್ತು ವಿಶ್ವಾಸವನ್ನು ಪ್ರಬಲಗೊಳಿಸುವ ವ್ಯಾಕರಣ ಅದರಲ್ಲಿ ಅಂತರ್ಗತವಾಗಿರುತ್ತದೆ.

ಅದು ಕನ್ವರ್ ಯಾತ್ರೆಯಾಗಿರಲಿ, ಅಮರನಾಥ, ನರ್ಮದಾ ಯಾತ್ರೆಯಾಗಲಿ ಅಥವಾ ಭಾರತವು ಸಾಕ್ಷಿಯಾಗಿರುವ ನೂರಾರು ಸಾಮಾಜಿಕ ಮತ್ತು ರಾಜಕೀಯ ಯಾತ್ರೆಗಳಲ್ಲಿ ಯಾವುದೇ ಒಂದು ಯಾತ್ರೆ ಆಗಿರಲಿ, ಪಾದಯಾತ್ರೆಯು ಯಾತ್ರಿ ಮತ್ತು ಸಾಕ್ಷಿ(ಪ್ರೇಕ್ಷಕ)ಯ ನಡುವಿನ ಅಂತರವನ್ನು ಬೆಸೆಯುವ ಸೇತುವೆಯಾಗುತ್ತದೆ. ಅಲ್ಲಲ್ಲಿ ಬಂದು ಬೆರೆಯುವ ಸಾರ್ವಜನಿಕರು ಪ್ರತಿನಿಧಿಗಳಾಗಿ ಭಾಗಿಯಾಗುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಒಂದು ಪಾದಯಾತ್ರೆಯು ಸಂವಹನದ ಅವ್ಯಕ್ತ ರೂಪವಾಗಿದೆ; ಇದು ಕೆಲಸ ಮಾಡುವ ಮೂಲಕ ಮಾತನಾಡುತ್ತದೆ.

ಮೂರು : ಇದು ಕೇವಲ ಪ್ರತಿರೋಧವಲ್ಲ. ಇದು ಭೂಮಿಯ ಮೇಲೆ ಪಾದ ಸವೆಸುವ, ದೈಹಿಕ ಶಕ್ತಿಯ ಪ್ರದರ್ಶನ. ಬಿಜೆಪಿ-ಆರ್‌ಎಸ್‌ಎಸ್ ತಮಗೆ ಸಾರ್ವಜನಿಕ ಅನುಮೋದನೆಯಿದೆ ಎಂದು ಅವರೇ ಪ್ರತಿಪಾದಿಸುತ್ತಿರುವ ಸಂಗತಿಯಿಂದಲೂ ಅವರಿಗೆ ಬಹುದೊಡ್ಡ ಸಂಖ್ಯೆಯ ಜನರ ಮಾನ್ಯತೆಯಿದೆ ಎಂದು ಕಾಣಿಸಲು ಕಾರಣವಾಗಿದೆ. ಆದ್ದರಿಂದ, ಪ್ರತಿರೋಧದ ಯಾವುದೇ ಕ್ರಿಯೆಯು ನೆಲದಲ್ಲಿ ಶಕ್ತಿಯ ಪ್ರದರ್ಶನವೂ ಆಗಿರಬೇಕಾಗುತ್ತದೆ.

ಯಾವುದೋ  ಸಕಾರಾತ್ಮಕ  ಬೆಳವಣಿಗೆಯೇ ಒಂದು ಆರಂಭ

ಅವರನ್ನು ಟೀಕಿಸುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಏಕಾಂಗಿಯಾಗಿ ಕಾಣುವಂತೆ ಮಾಡಲ್ಪಟ್ಟಿರುವುದರಿಂದ, ಈಗ ಅಭಿವ್ಯಕ್ತಿಗೆ ಜನಸಮೂಹದ ಒಗ್ಗಟ್ಟು /ಸಹಮತ ಬೇಕು. ಹಾಗಾಗಿಯೇ ಸಾವಿರಾರು ಜನರು ಬೀದಿಯಲ್ಲಿ ಒಟ್ಟಾಗಿ ನಡೆಸುವ ಮೆರವಣಿಗೆ ಪ್ರಬಲವಾದ ಪ್ರತಿವಾದವಾಗಿದೆ. ಅವರು ಸಂಸತ್ತನ್ನು ಮೌನವಾಗಿಸುತ್ತಿರುವಾಗ, ನೀವು ರಸ್ತೆಯಲ್ಲಿ ಶಬ್ದ ಮಾಡಬೇಕಾಗಿದೆ.

ನಾಲ್ಕು : ಇದು ಕೇವಲ ಕೃತಕವಾಗಿ ಸೇರಿಸಲ್ಪಟ್ಟ ಜನಸಮೂಹವಲ್ಲ. ಈ ಯಾತ್ರೆಯು ನೈಜ ಸಾರ್ವಜನಿಕ ಪ್ರತಿಸ್ಪಂದನೆಯನ್ನು ಉದ್ದಕ್ಕೂ ಕಂಡಿದೆ. ಕಾಂಗ್ರೆಸ್ ಪಕ್ಷದ ನಾಯಕತ್ವವು ಗಮನಾರ್ಹ ಪ್ರಮಾಣದಲ್ಲಿ ದೊಡ್ಡ ಸಂಖ್ಯೆಯ ಯಾತ್ರಿಗಳನ್ನು ಅಣಿನೆರಿಸಿದ್ದು, ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ ಪಕ್ಷದ ಮುಖಂಡರು ಅವರನ್ನು ಕರೆತಂದಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅಷ್ಟು ಮಾತ್ರವೇ ನಿಜವಲ್ಲ. ಭಾರತ್ ಜೋಡೋ ಯಾತ್ರೆಯಲ್ಲಿ ಮೂರು ರಾಜ್ಯಗಳಲ್ಲಿನ ನನ್ನ ನಡಿಗೆಯಲ್ಲಿ, ನಾನು ಎಲ್ಲಾ ಬಗೆಯ ನಗುವಿನ ಕಾಮನಬಿಲ್ಲಿಗೆ ಮತ್ತು ಏರಿಳಿತದ ಧ್ವನಿಗಳಿಗೆ ಸಾಕ್ಷಿಯಾಗಿದ್ದೇನೆ. ಪ್ರತಿ ಮುಗುಳ್ನಗುವಿನ ಹಿಂದಿನ ಭಾವವನ್ನು ಬೇಧಿಸಲು ಕಷ್ಟವಾದರೂ, ಈ ಯಾತ್ರೆಯು ಭರವಸೆಯನ್ನು ಸೃಷ್ಟಿಸಿದೆ ಎಂಬುದು ನನಗೆ ಸ್ಪಷ್ಟವಾಗಿದೆ. ಭೌತಿಕವಾಗಿ  ಸಂಪರ್ಕಿಸಿದವರು ಅಥವಾ ಬೆಂಬಲಿಸಿ ಸೇರಿದವರನ್ನು ಮೀರಿ ಯಾತ್ರೆಯ ಮೆಚ್ಚುಗೆ ಮತ್ತು ಬೆಂಬಲದ ವಲಯ ವ್ಯಾಪಕಗೊಂಡಿದೆ. ಅದಕ್ಕಾಗಿಯೇ ಬಿಜೆಪಿಯ ಐಟಿ ಸೆಲ್, ಯಾತ್ರೆಗೆ ಕಳಂಕ ತರಲು ಮಾಡಿದ  ಹಲವು ಪ್ರಯತ್ನಗಳು ಮಕಾಡೆ ಮಲಗಿವೆ.

ಐದು: ಈ ಯಾತ್ರೆಯು ಕೇವಲ ಜಾತ್ಯತೀತತೆಯ ಬಗ್ಗೆ ಅಲ್ಲದೇ, ಇಂದು ಅಗತ್ಯವಿರುವ ಏಕತೆಯ ಬಹುರೂಪಗಳ ಬಗ್ಗೆ ತನ್ನ ಸಂದೇಶವನ್ನು ಹರಡಲು ಮತ್ತು ಆರ್ಥಿಕತೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು ಮುನ್ನೆಲೆಗೆ ತರುವಲ್ಲಿ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿದೆ.

Bharath jodo

ರಾಹುಲ್ ಗಾಂಧಿಯವರ ದೈನಂದಿನ ಭಾಷಣವು ವಿಶಿಷ್ಟವಾಗಿ ಜಾತಿ, ಭಾಷೆ ಮತ್ತು ಧರ್ಮದ ಬಹು ವಿಭಜನೆಗಳನ್ನು ಮೀರಿದ ಏಕತೆಯ ಅಗತ್ಯದ ಬಗ್ಗೆ ಇರುತ್ತದೆ. ನರೇಂದ್ರ ಮೋದಿ ಸರ್ಕಾರದ ಬಗೆಗಿನ ಅವರ ಟೀಕೆಯು, ಮೋದಿಯವರ ಮುಸ್ಲಿಮರ ವಿರುದ್ಧ ದ್ವೇಷದ ರಾಜಕಾರಣದ ಬಗ್ಗೆಯಷ್ಟೇ ಎಂದಿಗೂ ಸೀಮಿತವಾಗಿಲ್ಲ. ಅವರು ಸತತವಾಗಿ ಮತ್ತು ಆಕ್ರಮಣಕಾರಿಯಾಗಿ, ನಿರುದ್ಯೋಗ, ಹಣದುಬ್ಬರ, ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ಸಾಮಾನ್ಯ ದುರಾಡಳಿತದಂಥ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದ್ದಾರೆ. ಅವರು ಬಂಡವಾಳಶಾಹಿಯ ದುಷ್ಟಕೂಟ (crony capitalism) ವನ್ನು ಎದುರಿಸುವ ಪ್ರಯತ್ನಗಳಲ್ಲಿ ತೊಡಗಿರುವ ಮುಖ್ಯವಾಹಿನಿಯ ಕೆಲವೇ ರಾಜಕೀಯ ನಾಯಕರಲ್ಲಿ ಒಬ್ಬರು. ಅಪಪ್ರಚಾರ ಹರಡಲು ತನ್ನ ಬಲೆಗೆ ಬೀಳಿಸಿಕೊಳ್ಳಲು ಕಾದು ನಿಂತಿರುವ ಶಕ್ತಿಗಳ ತೆಕ್ಕೆಗೆ ಬೀಳದೆ ತನ್ನದೇ ಆದ ಸಂದೇಶವನ್ನು ಹರಡುತ್ತಿದೆ.  

ಆರು: ಅಂತಿಮವಾಗಿ, ಇದು ಕೇವಲ ಕಾಂಗ್ರೆಸ್ (ಯಾತ್ರೆ) ಅಲ್ಲ. ಭಾರತ್ ಜೋಡೋ ಯಾತ್ರೆಯು ಈ ಹಿಂದೆ ಕಾಂಗ್ರೆಸ್ ಜೊತೆ ಕಡಿಮೆ ವ್ಯವಹಾರ ಹೊಂದಿದ್ದ ಹಲವಾರು ಜನಚಳವಳಿಗಳು ಮತ್ತು ಸಂಘಟನೆಗಳು, ಬುದ್ಧಿಜೀವಿಗಳು, ಪ್ರಮುಖ ನಾಗರಿಕರು ಹಾಗೂ ಸಾರ್ವಜನಿಕರಿಂದ ಬೆಂಬಲ ಪಡೆದುಕೊಂಡಿದೆ (ಈ ಲೇಖನದ ಲೇಖಕರು ಕೂಡ ಈ ಯಾತ್ರೆಯಲ್ಲಿ ಸಕ್ರಿಯರಾಗಿದ್ದಾರೆ). ಸಾಮಾನ್ಯವಾಗಿ ರಾಜಕೀಯ ನಿಲುವುಗಳನ್ನು ತೆಗೆದುಕೊಳ್ಳದ ಜನರು ಅಥವಾ ಕಾಂಗ್ರೆಸ್ ಪಕ್ಷದ ಬೆಂಬಲಿಗರಲ್ಲದವರು ಈ ಬಾರಿ ಬಹಿರಂಗವಾಗಿ ಯಾತ್ರೆಯ ಸಮರ್ಥನೆಗೆ ಹೊರಬಂದಿದ್ದಾರೆ. ಇದನ್ನು ಕಾಂಗ್ರೆಸ್ ಜೊತೆಗಿನ ಬಾಂಧವ್ಯ ಅಥವಾ ಅದರ ನಾಯಕತ್ವಕ್ಕೆ ನಿಷ್ಠೆ ಎಂದು ತಪ್ಪಾಗಿ ಭಾವಿಸಬಾರದು. ಈ ಬೆಂಬಲವು 'ಭಾರತ್ ಜೋಡೋ'ದ ಚೈತನ್ಯದ ಪರವಾಗಿದೆ ಮತ್ತು ಈ ಯಾತ್ರೆಯ ನೈತಿಕ ಸಂಕಲ್ಪವನ್ನು ದೃಢೀಕರಿಸುತ್ತದೆ.

ನಾನು ನನ್ನ ವ್ಯಕ್ತಿತ್ವಕ್ಕೆ ಹಾನಿಯಾಗುತ್ತಿರುವ ಬಗ್ಗೆ ಎಚ್ಚರಿಸಿದ್ದ ಅದೇ ಸ್ನೇಹಿತರನ್ನು ಮತ್ತೆ ಕಳೆದ ಮಂಗಳವಾರ ಭೇಟಿಯಾದೆ, ಅವರು ಈ ಬಾರಿ ನಿರಾಳರಾಗಿದ್ದರು. "ಕುಚ್ ತೋ ಹೋ ರಹಾ ಹೈ" (ಏನೋ ಆಗುತ್ತಿದೆ) ಅವರ ನಗು ಅವರ ಮಾತಿಗಿಂತ ಜೋರಾಗಿ ಮಾತನಾಡುತ್ತಿತ್ತು. "ಹೌದು" ನಾನು ಒಪ್ಪಿಕೊಂಡೆ, "ನಾವು ಈ ಅಂತರ್‌ ಪ್ರವಾಹವನ್ನು (undercurrent) ಅಲೆ ಎಂದು ತಪ್ಪಾಗಿ ಗ್ರಹಿಸದೆ ಕಾದು ನೋಡಬೇಕಿದೆ, ಪಿಕ್ಚರ್ ಅಭಿ  ಬಾಕಿ ಹೈ".

ಅನುವಾದ | ರಂಜಿತಾ ಜಿ ಹೆಚ್‌
ನಿಮಗೆ ಏನು ಅನ್ನಿಸ್ತು?
1 ವೋಟ್
eedina app