ವ್ಯಕ್ತಿಗಿರುವಂತೆ ಒಂದು ದೇಶಕ್ಕೂ ಸ್ವಧರ್ಮ ಎಂಬುದಿದೆಯೇ ?| ಯೋಗೇಂದ್ರ ಯಾದವ್‌

mahabharata-yuddha

ಕೆಲವರು ಸ್ವಧರ್ಮ ಎಂಬ ಪದವನ್ನು ಕೇಳಿದರೆ ಇದು ಯಾವುದೋ ರಾಷ್ಟ್ರೀಯ ಧರ್ಮ ಅಂಗೀಕರಿಸುವ ಕುರಿತ ಚರ್ಚೆ ಇರಬಹುದೇ ಎಂದು ಆತಂಕಕ್ಕೊಳಗಾಗುತ್ತಾರೆ. ಕೆಲವು ದೇಶಗಳಲ್ಲಿ ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಗಳು ದೇಶದ ಅಧಿಕೃತ ಧರ್ಮ ಮಾನ್ಯತೆ ಪಡೆದಿವೆ. ಭಾರತದಲ್ಲಿಯೂ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಕೆಲವರು ಮುಂದಿಡುತ್ತಿರುತ್ತಾರೆ

"ಭಾರತದ ಸ್ವಧರ್ಮದ ಮೇಲಿನ, ಧರ್ಮದ್ರೋಹಿಗಳ ಮಾರಣಾಂತಿಕ ದಾಳಿಯನ್ನು ತಡೆಯುವ ಪ್ರಯತ್ನವೇ ಭಾರತ ಐಕ್ಯತಾ  ಯಾತ್ರೆ” ಎಂಬುದು ಯಾತ್ರೆಯ ಸಮಯದಲ್ಲಿ, ಅದರ ಔಚಿತ್ಯದ ಕುರಿತು ಮತ್ತೆ ಮತ್ತೆ ಕೇಳಲ್ಪಟ್ಟ ಪ್ರಶ್ನೆಗಳಿಗೆ ನನ್ನ ಸಂಕ್ಷಿಪ್ತ ಉತ್ತರವಾಗಿದೆ. ಆದರೆ ನಿಸ್ಸಂಶಯವಾಗಿ ಈ ಹೇಳಿಕೆಯಿಂದ ಬಹುಪಾಲು ಜನರ ಕುತೂಹಲ ತೃಪ್ತಿಯಾಗುವುದಿಲ್ಲ. ಉತ್ತರಕ್ಕಿಂತ ಹೆಚ್ಚು ಪ್ರಶ್ನೆಗಳು ಏಳುತ್ತವೆ.

Eedina App

ಭಾರತದ ಸ್ವಧರ್ಮ ಎಂದರೇನು? ಒಬ್ಬ ವ್ಯಕ್ತಿಯ ಅಥವಾ ಜಾತಿಯ ಸ್ವಧರ್ಮದ ಬಗ್ಗೆ ಕೇಳಿದ್ದೇವೆ. ಒಂದು ದೇಶಕ್ಕೂ ಸ್ವಧರ್ಮ ಎಂಬುದಿದೆಯೇ ?  

ಕೆಲವರು ಸ್ವಧರ್ಮ ಎಂಬ ಪದವನ್ನು ಕೇಳಿದರೆ ಇದು ಯಾವುದೋ ರಾಷ್ಟ್ರೀಯ ಧರ್ಮ ಅಂಗೀಕರಿಸುವ ಕುರಿತ ಚರ್ಚೆ  ಇರಬಹುದೇ ಎಂದು ಆತಂಕಕ್ಕೊಳಗಾಗುತ್ತಾರೆ. ಕೆಲವು ದೇಶಗಳಲ್ಲಿ ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಗಳು ದೇಶದ ಅಧಿಕೃತ ಧರ್ಮ ಎಂದು ಮಾನ್ಯತೆ ಪಡೆದಿವೆ. ಇದೇ ಶೈಲಿಯಲ್ಲಿ ಭಾರತದಲ್ಲಿಯೂ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಕೆಲವು ಜನರು ಮುಂದಿಡುತ್ತಿರುತ್ತಾರೆ.

AV Eye Hospital ad

ಭಾರತದ ಸ್ವಧರ್ಮದ ಕುರಿತ ಚರ್ಚೆ ಈ ದಿಕ್ಕಿನೆಡೆಗೇನೂ ಸಾಗುತ್ತಿಲ್ಲವಲ್ಲವೇ ? ಆದರೂ ಭಾರತದ ಸ್ವಧರ್ಮಕ್ಕಾಗಿ ಎಲ್ಲಿ ಹುಡುಕಬೇಕು? ಅದನ್ನು ವಿವರಿಸುವವರು ಯಾರು? ಭಗವದ್ಗೀತೆಯಿಂದಲೇ ಈ ಪ್ರಯತ್ನ  ಪ್ರಾರಂಭಿಸೋಣ. ಧರ್ಮದ ಪರಿಕಲ್ಪನೆಯು ಇಲ್ಲಿಂದಲೇ ಪ್ರಾರಂಭವಾಗುತ್ತದೆ ಎಂದು ಅಲ್ಲ, ಆದರೆ ವೈದಿಕ ನಾಗರಿಕತೆಯ ಧರ್ಮವು, ಬೌದ್ಧ ಧರ್ಮದ ಬಹುಮುಖ್ಯ ಅಗತ್ಯ ಸವಾಲುಗಳನ್ನು ಎದುರಿಸುತ್ತಾ ಅದರೊಂದಿಗೆ ಸಾಮರಸ್ಯವನ್ನು ಸಾಧಿಸಿ, ಭಗವದ್ಗೀತೆಯು ನಮ್ಮ ನಾಗರಿಕತೆಯ ಅಡಿಪಾಯವಾಗಿ ಕೆಲವು ಪ್ರಮುಖ ಮೌಲ್ಯಗಳನ್ನು ಹುಟ್ಟುಹಾಕಿದೆ.

ಗೀತೆಯಲ್ಲಿ ಒಂದು ಪ್ರಸಿದ್ಧ ಶ್ಲೋಕವಿದೆ: 'ಶ್ರೇಯಾಂಸ್ವಧರ್ಮೋ ವಿಗುಣ:ಪರಧರ್ಮತ್ಸ್ವಾನುತಿಷ್ಠಿತತ್. ಸ್ವಧರ್ಮೇ ನಿದಮಂ ಶ್ರೇಯ:ಪರಧರ್ಮೋ ಭಯಾವಹ್ ': (ಭಗವದ್ಗೀತೆ 3.35). ಅಂದರೆ, ತಮಗೆ ನಿಯೋಜಿಸಲಾದ ಕಾರ್ಯಗಳನ್ನು ದೋಷರಹಿತವಾಗಿ ಮಾಡುವುದು, ಇತರರಿಗೆ ನಿಯೋಜಿಸಲಾದ ಕಾರ್ಯಗಳನ್ನು ಅವರು ಸರಿಯಾಗಿ ಮಾಡಲಿ ಎಂದು ಅಪೇಕ್ಷಿಸುವುದಕ್ಕಿಂತ ಉತ್ತಮವಾಗಿದೆ. ವಾಸ್ತವವಾಗಿ, ತಮ್ಮ ಕರ್ತವ್ಯದ ನಿರ್ವಹಣೆಯಲ್ಲಿ ಸಾಯುವುದು, ಇತರರ ಅಪಾಯವನ್ನು ಒಳಗೊಂಡಿರುವ ಭಯಾನಕ ಮಾರ್ಗವನ್ನು ಅನುಸರಿಸುವುದಕ್ಕಿಂತ ಯೋಗ್ಯವಾಗಿದೆ.

ನಿಸ್ಸಂಶಯವಾಗಿ ಇಲ್ಲಿ ಧರ್ಮ ಎಂಬ ಪದದ ಅರ್ಥ ಪದಶಃ ಹಿಂದೂ, ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮವಲ್ಲ, ಅದನ್ನ ಪಂಥ ಆರಾಧನೆ ಎಂದು ಕರೆಯಬಹುದು. ಇಲ್ಲಿ ಅನುಸರಿಸಲು /ಹೊಂದಲು ಯಾವುದು ಯೋಗ್ಯವಾದದ್ದು, ಯಾವುದು ನೈತಿಕವಾದದ್ದೋ ಅದೇ ಧರ್ಮ. ಅದೇ ಸಮಯದಲ್ಲಿ ಧರ್ಮದ ಈ ವ್ಯಾಖ್ಯಾನವು ಬ್ರಾಹ್ಮಣವಾದಿಯೇ ಆಗಿರಬೇಕೆಂದೇನಿಲ್ಲ ಎಂದು ಸ್ಪಷ್ಟಪಡಿಸುವುದೂ ಸಹ ಅಗತ್ಯವಾಗಿದೆ.

ಸಹಜವಾಗಿ, ಭಗವದ್ಗೀತೆಯಲ್ಲಿ, ಸ್ವಧರ್ಮದ ಬಳಕೆಯು ಚಾತುರ್ವರ್ಣವೆಂಬ ಜಾತಿವಾದಿ ರೂಢಿ- ಆಚರಣೆಗಳನ್ನು ಬಲಪಡಿಸುವಂತೆ ಕಾಣಿಸಬಹುದು. ಆದರೆ ಮೊದಲಿನಿಂದಲೂ ಧರ್ಮದ ಪರಿಕಲ್ಪನೆಯ ಬ್ರಾಹ್ಮಣವಾದಿ ಮತ್ತು ಪ್ರಾದೇಶಿಕ ಭಾಷೆಗಳ (ಸಧುಕ್ಕಡಿ- ಉತ್ತರ ಭಾರತದ ವಿವಿಧ ಪ್ರದೇಶಗಳ, ಸ್ಥಳೀಯ ಭಾಷೆಗಳ ಪದಗಳಿಂದ ಸೃಷ್ಟಿಯಾದ ಮಿಶ್ರ ಭಾಷೆ ) ವ್ಯಾಖ್ಯಾನದ ಎರಡು ಧಾರೆಗಳೂ ಜೊತೆಗೆ ಒಟ್ಟಿಗೆ ಹರಿದು ಬಂದಿವೆ.

geetha

ಬ್ರಾಹ್ಮಣವಾದಿ ಧಾರೆಯು ಧರ್ಮವನ್ನು ಜಾತಿ, ಸಮುದಾಯ ಅಥವಾ ಸ್ಥಾನಕ್ಕೆ ಸಂಬಂಧಿಸಿದೆ ಎಂದು ವ್ಯಾಖ್ಯಾನಿಸಿದೆ, ಆದರೆ ಸಧುಕ್ಕಡಿ ಸಂಪ್ರದಾಯವು ಧರ್ಮವನ್ನು ಸಾಮಾನ್ಯ ನೈತಿಕ ಮಾನದಂಡವಾಗಿ ಸ್ಥಾಪಿಸಲಾಗಿದೆ. ಅಶೋಕನ ಶಾಸನದ ಧಮ್ಮವು ಈ ಸಂಪ್ರದಾಯದಿಂದ ಬಂದಿದೆ. ಭಾರತದ ಸ್ವಧರ್ಮದ ವ್ಯಾಖ್ಯಾನವನ್ನು ನಮ್ಮ ನಾಗರಿಕತೆಯ ಈ ಭವ್ಯವಾದ ವಿಶಿಷ್ಟ ಧಾರೆಯೊಂದಿಗೆ ಜೋಡಿಸಿ ವಿವರಿಸಬೇಕು.

ಸ್ವಧರ್ಮವು ಎರಡು ತತ್ವಗಳ ಸಂಗಮವಾಗಿದೆ

ಸ್ವಯಂ ಮತ್ತು ಧರ್ಮ. ಸ್ವಯಂ ಎಂಬುದರಲ್ಲಿ ಸ್ವಾರ್ಥವಿದೆ. ಆದರೆ ಧರ್ಮ ಇಲ್ಲ. ಮತ್ತೊಂದೆಡೆ, ‘ಸರ್ವಧರ್ಮ’ಎಂಬುದರಲ್ಲಿ ಧರ್ಮವಿದೆ. ಆದರೆ ಸ್ವಯಂ (ಸ್ವಾರ್ಥ) ಇಲ್ಲ. ಸ್ವಧರ್ಮದ ಒಂದು ಅಂಶವು, ಅದನ್ನು ಪಾಲಿಸುವವರನ್ನು ಸೂಚಿಸಿದರೆ, ಇನ್ನೊಂದು ಅಂಶವು ಅವನು ನಡೆಯುವ ದಾರಿಯನ್ನು (ದಿಕ್ಕನ್ನು) ಸೂಚಿಸುತ್ತದೆ.

ಸ್ವಧರ್ಮವು ಕೇವಲ ಸ್ವಭಾವವಲ್ಲ, ಸಾಮಾನ್ಯ ಪ್ರವೃತ್ತಿಯಲ್ಲ, ಬಹುಸಂಖ್ಯಾತರ ಆಸ್ಥೆ ಅನುಸರಣೆ  ಅಲ್ಲ. ಸ್ವಭಾವವು ಒಳ್ಳೆಯದಾಗಿರಬಹುದ್ದಾದರೆ, ಅದು ಕೆಟ್ಟದ್ದೂ ಆಗಬಹುದು. ಸಾಮಾನ್ಯ ಪ್ರವೃತ್ತಿಯೂ ಆಗಾಗ್ಗೆ ಕುಸಿತಕ್ಕೆ ಕಾರಣವಾಗುತ್ತದೆ. ಬಹುಸಂಖ್ಯಾತರ ಆಸ್ಥೆ/ಪ್ರವೃತ್ತಿಯೂ ದಬ್ಬಾಳಿಕೆ ಮತ್ತು ಅನ್ಯಾಯಕ್ಕೆ ಕಾರಣವಾಗಬಹುದು. ಇದು ಸಾಧ್ಯ. ಆದರೆ ಸ್ವಧರ್ಮ ಎಂದಿಗೂ ಅನುಚಿತವಾಗಲಾರದು. ಹಾಗೆಯೇ ಅದು ಶಾಶ್ವತ ನೈತಿಕ ಮೌಲ್ಯವೂ ಅಲ್ಲ , ಏಕೆಂದರೆ ಕೆಲವು ಶಾಶ್ವತ ಮೌಲ್ಯಗಳನ್ನು “ಸ್ವಯಂ”(ಸ್ವಾರ್ಥ)ನೊಂದಿಗೆ ತಳುಕು ಹಾಕಲು ಸಾಧ್ಯವಿಲ್ಲ.

ಸ್ವಧರ್ಮದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು, ಪರಧರ್ಮ, ಅಧರ್ಮ ಮತ್ತು ವಿಧರ್ಮದ ಅರ್ಥವನ್ನೂ ಸಹ ತಿಳಿದುಕೊಳ್ಳಬೇಕು. ಅಧರ್ಮವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಧರ್ಮಕ್ಕೆ ಅನುಗುಣವಾಗಿಲ್ಲದಿರುವುದೇ ಅಧರ್ಮ, ಧರ್ಮವು ಸದ್ಗುಣವನ್ನು ಉಂಟುಮಾಡಿದರೆ, ಅಧರ್ಮವು ಧರ್ಮದಿಂದ ದೂರವಾಗುವ ಅಥವಾ ಧರ್ಮದ ಅವನತಿಯಿಂದಾಗಿ ಉದ್ಭವಿಸುವ ದುಷ್ಕೃತ್ಯದ ಮೂಲವಾಗಿದೆ. ಇದು ಆಗಾಗ್ಗೆ ಕಪಟದ ರೂಪವನ್ನು ಪಡೆಯುತ್ತದೆ. ಅಧರ್ಮವು ಧರ್ಮವನ್ನು  ಪ್ರಶ್ನಿಸುವುದಿಲ್ಲ ಎಂಬುದನ್ನು ಗಮನಿಸಬೇಕು. ಧರ್ಮವನ್ನು ಗೌರವಿಸುವುದಾಗಿ ಹೇಳಿಕೊಳ್ಳುತ್ತದೆ. ಆದರೆ ಆಚರಣೆಯಲ್ಲಿ ಧರ್ಮವನ್ನು ನಿರ್ಲಕ್ಷಿಸುತ್ತದೆ.

ಇದು ಎಲ್ಲಾ ಮಾನವ ಸಮಾಜಗಳಲ್ಲಿ ಸಾಮಾನ್ಯ ಪ್ರವೃತ್ತಿಯಾಗಿದೆ. ಬೆಳಗ್ಗೆ ದೇವಸ್ಥಾನಕ್ಕೆ ಹೋಗುವುದು, ನಂತರ ದಿನವಿಡೀ ಪಾಪಕರ್ಮಗಳನ್ನು ಮಾಡುವುದು ಅಥವಾ ಅಹಿಂಸೆಯ ಬಗ್ಗೆ ಭರವಸೆಗಳ ಮಾತನಾಡುವುದು ಮತ್ತು ಹಿಂಸೆಯ ಕಾರ್ಯದಲ್ಲಿ ತೊಡಗುವುದು ಇದಕ್ಕೆ ಉದಾಹರಣೆ. ಇಂತಹ ಅಧರ್ಮವನ್ನು ನಿರ್ಲಕ್ಷಿಸುವುದು ಮತ್ತು ನಿರಾಕರಿಸುವುದು ನಮ್ಮ ಕರ್ತವ್ಯ.

ಪರಧರ್ಮ ಅದಕ್ಕಿಂತ ಸಂಪೂರ್ಣ ಭಿನ್ನ. ಪರಧರ್ಮ ಎಂದರೆ ಬೇರೆಯವರ ಧರ್ಮ. ಇದು ಅನುಸರಿಸಬಹುದಾದದ್ದು , ಆದರೆ ನನ್ನ ಸಮಯ, ಸ್ಥಳ(ಸ್ಥಾನ), ಪರಿಸ್ಥಿತಿಗೆ ಹೊಂದುವುದಲ್ಲ. ಇದು ಕೂಡ ಧರ್ಮರೂಪಿಯೇ, ಆದ್ದರಿಂದ ಆಕರ್ಷಣೀಯವಾಗಿದೆ. ಪ್ರಲೋಭನೆಗೂ ಒಳಪಡಿಸಬಹುದು, ವಿಚಲಿತಗೊಳಿಸಬಲ್ಲದು, ಆದ್ದರಿಂದ ಭಯಾನಕವಾಗಬಹುದು.

ಆಗಾಗ್ಗೆ, ಇನ್ನೊಬ್ಬರ ಸ್ವಧರ್ಮದ ಅನುಕರಣೆ ಅಥವಾ ಗುಲಾಮಗಿರಿಯು ಪರಧರ್ಮದ ಆಕರ್ಷಣೆಯನ್ನು ಉಂಟುಮಾಡುತ್ತದೆ. ಬೇರೊಬ್ಬರು ರಚಿಸಿದ ಮಾರ್ಗದಲ್ಲಿ ನಡೆಯುವ ಭರವಸೆ ಮತ್ತು ಭದ್ರತೆಯ ತಪ್ಪು ಪ್ರಜ್ಞೆ ನಮ್ಮನ್ನು ಪರಮಾರ್ಗದತ್ತ  ಸೆಳೆಯುತ್ತದೆ.

ಆಧುನಿಕತೆಯ ಹೆಸರಿನಲ್ಲಿ ಪಾಶ್ಚಿಮಾತ್ಯ ಭಾಷೆ, ಉಡುಗೆ ತೊಡುಗೆ, ಆಹಾರ ಮತ್ತು ಸುತ್ತಾಟಗಳು ಅಥವಾ ನಮ್ಮ ಬುದ್ಧಿಜೀವಿಗಳ ಯುರೋಪಿನ ಕಲ್ಪನೆಗಳು ಮತ್ತು ವಿಚಾರಗಳ ಕುರಿತ ಅಂಧಾಭಿಮಾನ, ಪರಧರ್ಮದೆಡೆಗಿನ ಆಕರ್ಷಣೆಯ ಉದಾಹರಣೆಗಳು. ಪರಧರ್ಮವನ್ನು ಗೌರವಿಸುತ್ತಲೇ ಅದರಿಂದ ದೂರ ಇರುವುದು ಉತ್ತಮ ಎಂದು ಭಗವದ್ಗೀತೆಯು ನಮ್ಮನ್ನು ಎಚ್ಚರಿಸುತ್ತದೆ.  

ವಿನೋಬಾ ಭಾವೆ
ವಿನೋಬಾ ಭಾವೆ

ಧರ್ಮದ್ರೋಹ(ವಿಧರ್ಮ)ದ ಅಪಾಯವು ಅಧರ್ಮ ಅಥವಾ ಪರಧರ್ಮಕ್ಕಿಂತ ಭಿನ್ನವಾಗಿದೆ. ಇದು ಧರ್ಮವನ್ನು ವಿರೋಧಿಸುತ್ತದೆ. ಧರ್ಮಕ್ಕೆ ಅನುಗುಣವಾಗಿ ನಡೆಯದೇ ಇರುವುದಷ್ಟೇ ಅಲ್ಲ, ಧರ್ಮವನ್ನು ಅಲ್ಲಗಳೆಯುವ ಕೆಲಸವನ್ನು ವಿಧರ್ಮ ಮಾಡುತ್ತದೆ.

ಇದು ಅತ್ಯಂತ ಅಪಾಯಕಾರಿ ವಿಚಲನವಾಗಿದೆ. ಏಕೆಂದರೆ ಅದು ಸ್ವಧರ್ಮವನ್ನು ಧರ್ಮವೆಂದು ಪರಿಗಣಿಸದ ಕಾರಣ, ಅದನ್ನು ಮುರಿಯಲು ನಿರಂತರ ಪ್ರಯತ್ನಗಳನ್ನು ಮಾಡುತ್ತದೆ. ವೈದಿಕ ಧರ್ಮವು ಜೈನ ಮತ್ತು ಬೌದ್ಧ ಧಾರ್ಮಿಕ ಸಂಪ್ರದಾಯಗಳೊಂದಿಗೆ ಸ್ಪರ್ಧಿಸಿದಾಗ, ಅವರ ದೃಷ್ಟಿಯಲ್ಲಿ ಅದು ಧರ್ಮದ್ರೋಹಿಗಳ ಆಕ್ರಮಣವಾಗಿತ್ತು. ಧರ್ಮದ್ರೋಹವನ್ನು ವಿರೋಧಿಸುವುದು  ಅನಿವಾರ್ಯವಾಗಿದೆ.

ಧರ್ಮವನ್ನು ವಿವರಿಸುವಾಗ, ವಿನೋಬಾ ಭಾವೆ, 'ಸ್ವಧರ್ಮದ ಕಡೆಗೆ ಪ್ರೀತಿ, ಪರಧರ್ಮದ ಮೇಲೆ ಗೌರವ ಮತ್ತು ಅಧರ್ಮವನ್ನು ಕಡೆಗಣಿಸುವುದೇ ಒಟ್ಟಾಗಿ ಧರ್ಮವಾಗಿದೆ’ ಎಂದು ಹೇಳಿದರು.

ಅದನ್ನು ತಿದ್ದುಪಡಿ ಮಾಡಿ ಏನು ಹೇಳಬಹುದೆಂದರೆ, ಸ್ವಧರ್ಮದ ಮೇಲೆ ಪ್ರೀತಿ, ಪರಧರ್ಮದ ಮೇಲೆ  ಗೌರವ, ಅಧರ್ಮದ ಬಗ್ಗೆ  ನಿರ್ಲಕ್ಷ್ಯಮತ್ತು ಧರ್ಮದ್ರೋಹದ ಬಗ್ಗೆ ಪ್ರತಿರೋಧವೇ ಧರ್ಮಪಾಲನೆ. ಆದರೆ ಒಂದು ದೇಶಕ್ಕೆ ತನ್ನದೇ ಆದ ಧರ್ಮ ಇರಬಹುದೇ? ಇಂದು ಭಾರತದಲ್ಲಿ ನಡೆಯುತ್ತಿರುವುದು, ನಮ್ಮ ದೇಶದ ಸ್ವಧರ್ಮದ ಮೇಲಿನ ದಾಳಿಯಾಗಿರುವ ಸಾಧ್ಯತೆ ಇದೆ ಎಂದು ನಾವು ಹೇಗೆ ಹೇಳುತ್ತೇವೆ ? ಮುಂದಿನ ಸಂಚಿಕೆಯಲ್ಲಿ ಈ ಪ್ರಶ್ನೆಗೆ ಉತ್ತರಿಸುತ್ತೇನೆ.

ಹಿಂದಿ ಅನುವಾದ | ರಂಜಿತಾ ಜಿ ಹೆಚ್‌
ನಿಮಗೆ ಏನು ಅನ್ನಿಸ್ತು?
3 ವೋಟ್
eedina app