ಕಳೆದ ವಾರ ಕರ್ನಾಟಕದಲ್ಲಿ ಸರ್ಕಾರ ಇರಲಿಲ್ಲ: ಸ್ವತಃ ಮುಖ್ಯಮಂತ್ರಿ ಅದರ ಕತ್ತು ಹಿಸುಕಿದ್ದರು

Basavaraja Bommai

ಕಳೆದ ವಾರ ಈ ರಾಜ್ಯದಲ್ಲಿ ನಡೆದದ್ದನ್ನು ನೋಡಿದರೆ, 'ಸರ್ಕಾರ' ಎಂಬುದೊಂದು ಇಲ್ಲಿ ಸತ್ತು ಹೋಗಿತ್ತು ಎಂದು ಕಟುವಾಗಿಯೇ ಹೇಳಬೇಕಾಗುತ್ತದೆ. ಇದನ್ನು ಮಾತಿನ ಪರಿಣಾಮಕ್ಕೋ, ತೀಕ್ಷ್ಣವಾದುದನ್ನು ಹೇಳಬೇಕು ಎನ್ನುವ ಕಾರಣಕ್ಕೋ ಹೇಳುತ್ತಿರುವುದಲ್ಲ. ‘ಸರ್ಕಾರ’ ಎಂದರೇನೆಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಈ ಮಾತು ಸ್ಪಷ್ಟವಾಗುತ್ತದೆ.

ಚಾರಿತ್ರಿಕವಾಗಿ ನೋಡಿದರೆ 'ಸರ್ಕಾರ' ಎಂಬುದೊಂದು ಪ್ರಪಂಚದಲ್ಲಿ ಅಸ್ತಿತ್ವಕ್ಕೆ ಬಂದಿದ್ದು ‘ಕಾನೂನಿನ ಆಡಳಿತ’ ಎಂಬುದನ್ನು ಜಾರಿಗೆ ತರಲು. ಇಂಗ್ಲಿಷಿನಲ್ಲಿ ಇದನ್ನು ರೂಲ್ ಆಫ್ ಲಾ ಎನ್ನುತ್ತಾರೆ. ಬಲವಿದ್ದವರು ಸ್ವೇಚ್ಛೆಯಿಂದ, ಹುಚ್ಚರಂತೆ ತಮ್ಮ ಮನಸ್ಸಿಗೆ ಬಂದಿದ್ದನ್ನು ಮಾಡುತ್ತಾ ಹೋದರೆ ಸಮಾಜ ಉಳಿಯುವುದಿಲ್ಲ. ಹಾಗಾಗಿ ಅದನ್ನು ಸಮರ್ಪಕವಾಗಿ ನಿರ್ವಹಿಸಲು ಕಾನೂನು, ನಿಯಮಗಳ ಅಗತ್ಯವಿರುತ್ತದೆ. ಅಂತಹ ಕಾನೂನು ನಿಯಮಗಳಲ್ಲಿ ಏನನ್ನು ಹೇಳಿರಲಾಗುತ್ತದೋ ಅದನ್ನು ಜಾರಿ ಮಾಡುವುದನ್ನೇ ಕಾನೂನಿನ ಆಡಳಿತ ಎನ್ನಲಾಗುತ್ತದೆ.

ಆದರೆ, ರಾಜಪ್ರಭುತ್ವದಲ್ಲಿ ,ಪಾಳೇಗಾರರ ಆಳ್ವಿಕೆಯಲ್ಲಿ, ಮತಾಂಧರ ಮತೋನ್ಮತ್ತೆಯಡಿಯಲ್ಲಿ, ಸರ್ವಾಧಿಕಾರಿಗಳ ನಿರಂಕುಶತ್ವದಲ್ಲಿ ಇವು ಪೂರ್ಣ ಜಾರಿಗೆ ಬರುವುದಿಲ್ಲ; ಏಕೆಂದರೆ ಕಾನೂನಿಗಿಂತಲೂ ಮಿಗಿಲಾದ ಶಕ್ತಿಗಳು ಇರುತ್ತವೆ. ಇನ್ನೊಂದರ್ಥದಲ್ಲಿ ಅದೇ ಅಲ್ಲಿನ ರೂಲ್ ಆಫ್ ಲಾ ಸಹಾ ಆಗಿರುತ್ತದೆ. ಆದರೆ, ಅಲ್ಲಿಯೂ ಒಂದು (ಬಲವಂತದಿಂದ) ಒಪ್ಪಿತವಾದ ಲಾ ಇರುತ್ತದೆ. ಆಧುನಿಕ ಪ್ರಜಾಪ್ರಭುತ್ವದಲ್ಲಿ ಈ ರೂಲ್ ಆಫ್ ಲಾ ಆ ದೇಶದ ನಾಗರಿಕರೆಲ್ಲರಿಗೂ ಒಂದೇ ಆಗಿರುತ್ತದೆ. ಅಂತಹ ದೇಶಗಳನ್ನು ಮಾತ್ರ ಪ್ರಜಾಪ್ರಭುತ್ವ ಎನ್ನಲಾಗುತ್ತದೆ. ಇಲ್ಲಿಯೂ ಆಸ್ತಿ, ಅಧಿಕಾರ, ಜಾತಿ ಇತ್ಯಾದಿಗಳ ಕಾರಣದಿಂದ ಅಸಮಾನತೆ ಇರುತ್ತದೆಂಬ ಕಾರಣಕ್ಕೇ ಪ್ರಜಾಪ್ರಭುತ್ವವು, ನಿಜವಾದ ಪ್ರಜಾಪ್ರಭುತ್ವವಾಗಬೇಕೆನ್ನುವ ಪ್ರಯತ್ನ ನಿರಂತರ ಜಾರಿಯಲ್ಲಿರುತ್ತದೆ. ಒಂದು ವೇಳೆ ಈ ರೀತಿ ಇರದಿದ್ದರೆ ಬೀದಿಯಲ್ಲಿ ಯಾರು ಯಾರ ಮೇಲೆ ಬೇಕಾದರೂ ತಮ್ಮ ಬಲ (ಅಧಿಕಾರ, ಆಸ್ತಿ, ಜಾತಿ, ಧರ್ಮ, ಸಂಖ್ಯಾಬಲ, ತೋಳ್ಬಲ ಯಾವುದಾದರೂ ಸರಿ)ದ ಆಧಾರದ ಮೇಲೆ ಇನ್ನೊಬ್ಬರ ಮೇಲೆ ದಬ್ಬಾಳಿಕೆ ಮಾಡಬಹುದು ಎಂದಾಗಿಬಿಡುತ್ತದೆ. ನಿಧಾನಕ್ಕೆ ಒಂದು ನಾಗರಿಕ ಸಮಾಜವೇ ಅಸ್ತಿತ್ವದಲ್ಲಿಲ್ಲದ ಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಹಾಗಾಗಿಯೇ ರೂಲ್ ಆಫ್ ಲಾ ಎಂಬುದು ಮುಖ್ಯ.

ಇರಲಿ, ಕರ್ನಾಟಕದಲ್ಲಿ ಆದದ್ದೇನು ಎಂಬುದನ್ನು ನೋಡೋಣ. ಕರಾವಳಿಯ ಊರೊಂದರಲ್ಲಿ ಜುಲೈ 21ರಂದು ಒಂದು ಧರ್ಮಕ್ಕೆ ಸೇರಿದ ವ್ಯಕ್ತಿಯೊಬ್ಬರ ಕೊಲೆಯಾಯಿತು. ಕೊಲೆ ಆರೋಪದಲ್ಲಿ ಬಂಧಿತರಾದವರೆಲ್ಲರೂ ಇನ್ನೊಂದು ಧರ್ಮಕ್ಕೆ ಸೇರಿದವರಾಗಿದ್ದರು. ಸ್ವಲ್ಪ ಉದ್ವಿಗ್ನತೆ ಸ್ಥಳದಲ್ಲಿ ಉಂಟಾಯಿತಾದರೂ ನಂತರ ಅಧಿಕಾರಿಗಳ ಭರವಸೆಯೊಂದಿಗೆ ಅದು ಶಮನವಾಯಿತು.

ಜುಲೈ 26ರಂದು ಮೊದಲ ಕೊಲೆಯ ಆರೋಪಿಗಳಿಗೆ ಸೇರಿದ ಧರ್ಮದ ವ್ಯಕ್ತಿಯೊಬ್ಬರ ಕೊಲೆಯಾಯಿತು. ಆತ ಸದರಿ ಧರ್ಮದ ಪರವಾಗಿದ್ದೇವೆಂದು ಬಹಿರಂಗವಾಗಿ ಘೋಷಿಸಿಕೊಳ್ಳುವ ಮತ್ತು ಇನ್ನೊಂದು ಧರ್ಮದ ವಿರುದ್ಧವಾಗಿ ಬಹಿರಂಗವಾಗಿ ಮಾತಾಡುವ ರಾಜಕೀಯ ಪಕ್ಷದ ಕಾರ್ಯಕರ್ತನೂ ಆಗಿದ್ದರು. ಹಾಗೂ ಅದೇ ಪಕ್ಷ ಇಂದು ರಾಜ್ಯದಲ್ಲಿ ಅಧಿಕಾರದಲ್ಲಿದೆ.  ಆ ಕೊಲೆಯಲ್ಲಿ ಇದುವರೆಗೆ ಬಂಧಿತವಾಗಿರುವ ಇಬ್ಬರು ಮೊದಲ ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿಯ ಧರ್ಮಕ್ಕೆ ಸೇರಿದವರಾಗಿದ್ದಾರೆ.

ಇದಾದ ನಂತರ ನಡೆದದ್ದನ್ನು ಪ್ರಜಾಪ್ರಭುತ್ವ ದೇಶವೊಂದರಲ್ಲಿ ಒಪ್ಪುವುದು ಸಾಧ್ಯವೇ ಎಂಬುದನ್ನು ಓದುಗರು ಪರಾಂಬರಿಸಬೇಕು. ಪೊಲೀಸರು ಮೊದಲ ಪ್ರಕರಣದಂತೆಯೇ ಕೂಡಲೇ ಕೇಸು ದಾಖಲಿಸಿಕೊಂಡರು; ತನಿಖೆ ಆರಂಭಿಸಿದರು; ಬಂಧನಗಳೂ ಶುರುವಾದವು. ಆದರೆ ಆ ರಾಜಕೀಯ ಪಕ್ಷದ ಕಾರ್ಯಕರ್ತರ ಒತ್ತಾಯ ಬೇರೆಯದ್ದಾಗಿತ್ತು. ಅವರು ಆರೋಪಿಸುತ್ತಿರುವ ಸಂಘಟನೆ ಮತ್ತು ಇನ್ನೊಂದು ರಾಜಕೀಯ ಪಕ್ಷವನ್ನು ಕೂಡಲೇ ನಿಷೇಧಿಸಬೇಕೆಂದು ಅವರು ಆಗ್ರಹಿಸಿದರು. ಅವರದ್ದೇ ಪಕ್ಷ ಅಧಿಕಾರದಲ್ಲಿದ್ದರೂ, ಪೊಲೀಸ್ ಕ್ರಮಗಳು ಆಗುತ್ತಿದ್ದರೂ ಅದರಿಂದ ಅವರಿಗೆ ಸಮಾಧಾನವಾಗಲಿಲ್ಲ.

ಮೊದಲ ಪ್ರಕರಣದಲ್ಲಿ ಆದ ಬೆಳವಣಿಗೆಗಳನ್ನು ವ್ಯಕ್ತಿಗತ ಗಲಾಟೆ ಎಂತಲೂ, ಎರಡನೇ ಪ್ರಕರಣವು ಮಾತ್ರ ಸಂಘಟಿತ ಅಪರಾಧ ಎಂತಲೂ ತನಿಖೆಗಿಂತ ಮುಂಚೆಯೇ ಗುಂಪು ನ್ಯಾಯದ ರೀತಿಯಲ್ಲಿ ತೀರ್ಪು ಕೊಡಲಾಯಿತು. ಈ ಬೆಳವಣಿಗೆಯಿಂದ ತಮ್ಮ ಸರ್ಕಾರದ ವಾರ್ಷಿಕೋತ್ಸವವನ್ನು, ಸ್ವತಃ ಮುಖ್ಯಮಂತ್ರಿ ಮಧ್ಯರಾತ್ರಿ ಪತ್ರಿಕಾಗೋಷ್ಠಿ ಕರೆದು ರದ್ದು ಮಾಡಿಬಿಟ್ಟರು. ಈ ಕೊಲೆ ತನ್ನ ಮನಸ್ಸಿಗೆ ಬಹಳ ಘಾಸಿ ಉಂಟು ಮಾಡಿದೆ ಎಂದರು. ಅದಕ್ಕೆ ನಾಲ್ಕು ದಿನಗಳ ಹಿಂದೆ ನಡೆದಿದ್ದ ಇನ್ನೊಂದು ಕೊಲೆಯ ಕುರಿತು ಅವರು ಅಂತಹ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. 

ಈ ಸುದ್ದಿ ಓದಿದ್ದೀರಾ?| ಮಾನ್ಯ ಮುಖ್ಯಮಂತ್ರಿಗಳೇ, ನೀವು ಕರ್ನಾಟಕದಲ್ಲಿ ಜಾರಿಗೆ ತರಬೇಕೆಂದಿರುವ ಯುಪಿ ಮಾಡೆಲ್‌ ಇದೇನಾ?

ಇದೇ ಮುಖ್ಯಮಂತ್ರಿ ಕಳೆದ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ‘ಅನೈತಿಕ ಪೊಲೀಸ್‌ಗಿರಿ’ಯ ವಿಚಾರದಲ್ಲಿ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುವ ಮಾತನ್ನಾಡಿದ್ದರು. ನಮ್ಮ ಸರ್ಕಾರವು ಇಂತಹ ಪ್ರಕರಣಗಳನ್ನು ಸಹಿಸುವ ಮಾತೇ ಇಲ್ಲ ಎಂಬುದು ಅವರ ಸ್ಪಷ್ಟ ನುಡಿಯಾಗಿತ್ತು. ಆ ಪ್ರಕರಣದಲ್ಲಿ ಆರೋಪಿಗಳು ಅವರ ಪಕ್ಷ ವಿರೋಧಿಸುವ ಧರ್ಮಕ್ಕೆ ಸೇರಿದವರಾಗಿದ್ದರು. ಅದಾದ ಕೆಲವೇ ದಿನಗಳಲ್ಲಿ ಇನ್ನೊಂದು ‘ಅನೈತಿಕ ಪೊಲೀಸ್‌ಗಿರಿ’ ಮಂಗಳೂರಿನಲ್ಲಿ ನಡೆಯಿತು. ಈ ಪ್ರಕರಣದ ಆರೋಪಿಗಳು ಅವರ ಪಕ್ಷದ ಬಳಗಕ್ಕೆ ಸೇರಿದವರಾಗಿದ್ದರು. ಎಷ್ಟರಮಟ್ಟಿಗೆಂದರೆ ಆ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾದಾಗ ಅವರ ಪಕ್ಷದ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಆರೋಪಿಗಳ ಜೊತೆಗಿದ್ದು (ಅ)ನೈತಿಕ ಬೆಂಬಲ ಕೊಟ್ಟಿದ್ದರು. ಈ ಕುರಿತು ಮುಖ್ಯಮಂತ್ರಿಯವರನ್ನು ಮಂಗಳೂರಿನಲ್ಲಿ ಪತ್ರಕರ್ತರು ಪ್ರಶ್ನಿಸಿದಾಗ ‘ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ’ ಎಂದು ಹೇಳಿದ್ದರು.

ಈಗ ಇದೇ ರೀತಿಯ 'ಕ್ರಿಯೆಗೆ ಪ್ರತಿಕ್ರಿಯೆ' ಕರಾವಳಿಯಲ್ಲಿ ನಡೆಯುತ್ತಿರಬಹುದೇ ಎಂಬ ಅನುಮಾನ ಕಾಡುತ್ತಿದೆ. ಸುಳ್ಯದಲ್ಲಿ ನಡೆದ ಮೊದಲ ಕೊಲೆಗೆ ಎರಡನೇ ಕೊಲೆ, ಎರಡನೇ ಕೊಲೆಗೆ ಪ್ರತಿಯಾಗಿ ಮೂರನೇ ಕೊಲೆ. ಇಂಥದ್ದನ್ನು ನಾಗರಿಕ ಸಮಾಜವೊಂದು ಯಾವುದಾದರೂ ರೀತಿಯಲ್ಲಿ ಸಮರ್ಥಿಸಲು ಸಾಧ್ಯವೇ? ಒಂದು ವೇಳೆ ಸಮಾಜದೊಳಗಿನ ದಾರಿ ತಪ್ಪಿದ ಅಥವಾ ದುಷ್ಟ ಶಕ್ತಿಗಳು ಅದನ್ನು ಮಾಡಿದಾಗ ಸರ್ಕಾರ, ಸಚಿವರು, ಮುಖ್ಯಮಂತ್ರಿ ಏನು ಹೇಳಬೇಕು? ಎಲ್ಲಾ ಪ್ರಕರಣಗಳನ್ನೂ ಒಂದೇ ರೀತಿ ನೋಡುವ ಸ್ಪಷ್ಟ ವಾಗ್ದಾನ ಮಾಡಬೇಕು. ಅವರ ಎಲ್ಲಾ ಮಾತು, ನಡವಳಿಕೆಗಳಲ್ಲಿ ಅದು ಎದ್ದು ಕಾಣಬೇಕು.

ಆದರೆ, ಸಚಿವರೊಬ್ಬರು ತಮ್ಮ ಸರ್ಕಾರವು ಎನ್ ಕೌಂಟರ್ ಮಾಡುತ್ತದೆಂದು ಹೇಳುತ್ತಾರೆ. ಆ ಸಚಿವರು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದವರು. ಅವರಿಗೆ ಎನ್ಕೌಂಟರ್  ಪದದ ಅರ್ಥ ‘ಮುಖಾಮುಖಿ’ ಅಷ್ಟೇ ಎಂದೂ ಗೊತ್ತಿದ್ದಂತಿಲ್ಲ. ಎನ್ಕೌಂಟರ್ ಮಾಡುತ್ತೇವೆಂದು ಹೇಳುವುದರ ಅರ್ಥ ವಾಸ್ತವದಲ್ಲಿ ಯಾವುದೇ ಆರೋಪವೂ ರುಜುವಾತಾಗದಿದ್ದರೂ ಪೊಲೀಸರು ಅಕ್ರಮವಾಗಿ, ಕಾನೂನಿಗೆ ವಿರುದ್ಧವಾಗಿ, ಮಾನವೀಯತೆಗೆ ವಿರುದ್ಧವಾಗಿ ಇನ್ನೊಬ್ಬರನ್ನು ಕೊಂದು ಹಾಕುವುದು ಎಂಬುದೇ ಆಗಿದೆ. ಈ ಮಾತನ್ನು ಸಚಿವರೊಬ್ಬರು ಹೇಳುತ್ತಾರೆಂದರೆ ಅವರು ಆಗಿಂದಾಗಲೇ ವಜಾಗೊಳ್ಳಬೇಕು.

ಆದರೆ ಇದಕ್ಕೆ ಇಂಬುಕೊಡುವ ನಡವಳಿಕೆಯನ್ನು ಸ್ವತಃ ಮುಖ್ಯಮಂತ್ರಿಯೇ ಆಡಿದ ಮೇಲೆ ಇನ್ನೇನು ಎಂದು ಅವರು ಭಾವಿಸಿರಬಹುದು. ಹಾಗಾಗಿಯೇ ವಿಧಾನಪರಿಷತ್ತೆಂಬ ಮೇಲ್ಮನೆಗೆ ಎಂಟು ಬಾರಿ ಆಯ್ಕೆಯಾದ ಬಸವರಾಜ ಹೊರಟ್ಟಿಯಂತಹ ತೀರಾ ಇತ್ತೀಚೆಗೆ ಬಿಜೆಪಿಗೆ ಬಂದವರೂ, ‘ಹೈದರಾಬಾದ್ನಲ್ಲಿ ಮಾಡಿದ ಹಾಗೆ ಎನ್ಕೌಂಟರ್ ಮಾಡಿಬಿಡಬೇಕು’ ಎಂಬ ಹೇಳಿಕೆ ನೀಡುತ್ತಾರೆ. ಅಂದರೆ ರೂಲ್ ಆಫ್ ಲಾ ಸತ್ತು ಹೋಗಿದ್ದನ್ನು ಸರ್ಕಾರಕ್ಕೆ ಸಂಬಂಧಿಸಿದವರೇ ಅಧಿಕೃತವಾಗಿ ಘೋಷಿಸಿದಂತೆ ಆಗಿದೆ.

ಆ ರೀತಿ ರೂಲ್ ಆಫ್ ಲಾ ಸತ್ತು ಹೋಗಿರುವ ಇನ್ನೊಂದು ರಾಜ್ಯವಾದ ಉತ್ತರ ಪ್ರದೇಶದ ಉದಾಹರಣೆಯನ್ನು ಉಲ್ಲೇಖಿಸುವ ಮುಖ್ಯಮಂತ್ರಿ ಅಗತ್ಯ ಬಿದ್ದರೆ ಉತ್ತರ ಪ್ರದೇಶದ ಮಾದರಿ ಅಳವಡಿಸುತ್ತೇವೆ ಎನ್ನುತ್ತಾರೆ. ಸಚಿವ ಅಶ್ವತ್ಥನಾರಾಯಣ್, ಕರ್ನಾಟಕವು ಉತ್ತರ ಪ್ರದೇಶಕ್ಕಿಂತ ಐದು ಹೆಜ್ಜೆ ಮುಂದಕ್ಕೆ ಹೋಗಲಿದೆ ಎಂದು ಘೋಷಿಸುತ್ತಾರೆ. ಪ್ರಮೋದ್ ಮುತಾಲಿಕ್ ಎಂಬ, ಹಲವು ಜಿಲ್ಲೆಗಳಿಗೆ ಪ್ರವೇಶಿಸಬಾರದು ಎಂಬ ನಿರ್ಬಂಧ ಹೊಂದಿರುವ ವ್ಯಕ್ತಿಯು ‘ವಿಶೇಷ ನ್ಯಾಯಾಲಯಗಳಿಂದ ವಿಚಾರಣೆ ನಡೆಸಿ ಒಂದು ತಿಂಗಳಲ್ಲಿ ಗಲ್ಲು ಶಿಕ್ಷೆ ನೀಡಬೇಕು’ ಎಂದು ಬಹಿರಂಗ ಒತ್ತಾಯವನ್ನು ಮುಂದಿಡುತ್ತಾರೆ. ಬೇಗ ವಿಚಾರಣೆ, ಬೇಗ ಶಿಕ್ಷೆ, ವಿಚಾರಣೆಯೇ ಇಲ್ಲದೆ ಶಿಕ್ಷೆ, ಕ್ರಿಯೆಗೆ ಪ್ರತಿಕ್ರಿಯೆ ಮತ್ತು ಅದರ ಸಮರ್ಥನೆಗೆ ಇಳಿಯುವ ಮುಖ್ಯಮಂತ್ರಿ ಇವೆಲ್ಲವೂ ಸರ್ಕಾರವೊಂದು ಇಲ್ಲದಕ್ಕೆ ಇರುವ ಪುರಾವೆಗಳು.

ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಒಂದಾದ ಮೇಲೆ ಒಂದರಂತೆ ನಡೆಯುತ್ತಾ ಹೋದರೆ ಅದರ ಹೊಣೆಯನ್ನು ಹೊರಬೇಕಾದವರು ಸ್ವತಃ ಮುಖ್ಯಮಂತ್ರಿಗಳು. ಅವರ ಕರೆಯ ಮೇರೆಗೇ ಇಂಥದ್ದನ್ನು ಮಾಡಿದೆವೆಂದು ಕೊಲೆಯಂತಹ ಕೃತ್ಯವನ್ನೆಸಗಿದವರು ಹೇಳಿದರೆ ಪೊಲೀಸರೇನು ಮಾಡಬೇಕು?

ಈ ಮೂರೂ ಕೊಲೆಗಳು ಪ್ರತ್ಯೇಕ ಘಟನೆಗಳಿರಬಹುದು; ಯಾವುದಕ್ಕೆ ಯಾವ ಬಣ್ಣ ಇದೆಯೆಂಬುದನ್ನು ನಿಷ್ಪಕ್ಷಪಾತ ಪೊಲೀಸ್ ತನಿಖೆ ಹಾಗೂ ನ್ಯಾಯಾಲಯದ ವಿಚಾರಣೆಯು ಹೊರಗೆ ತರಬೇಕು. ಅದಕ್ಕೆ ತಕ್ಕುನಾದ ಶಿಕ್ಷೆಯು ತಪ್ಪಿತಸ್ಥರಿಗೆ ಆಗಬೇಕು. ಅದರಾಚೆಗೆ ಕರಾವಳಿಯಲ್ಲೂ, ಕರ್ನಾಟಕದಲ್ಲೂ ಶಾಂತಿಯ ವಾತಾವರಣ ಮುಂದುವರೆಯಬೇಕು. ಮತೀಯ ಶಕ್ತಿಗಳ ಎಲ್ಲಾ ಪ್ರಯತ್ನದ ಹೊರತಾಗಿಯೂ ಸೌಹಾರ್ದ ಬದುಕೇ ಈ ನಾಡಿನ ಪ್ರಧಾನ ಲಕ್ಷಣವಾಗಿದೆ. ಕೊಲೆಗೀಡಾದ ವ್ಯಕ್ತಿಯ ಅಂಗಡಿಯಲ್ಲೇ ಈಗ ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾದ ವ್ಯಕ್ತಿಯ ತಂದೆ ಮೂರು ತಿಂಗಳ ಹಿಂದೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಅಂದರೆ ಅದೇ ಕರಾವಳಿಯಲ್ಲಿ, ಧರ್ಮದ್ವೇಷವನ್ನು ಸಿದ್ಧಾಂತವಾಗಿಸಿಕೊಂಡಿರುವ ಪಕ್ಷವೊಂದರ ನಾಯಕನ ಅಂಗಡಿಯಲ್ಲಿ, ಆ ಇನ್ನೊಂದು ಧರ್ಮಕ್ಕೆ ಸೇರಿದ ವ್ಯಕ್ತಿ ಉದ್ಯೋಗ ಮಾಡುತ್ತಿದ್ದರು. ಆತ ಮಾರಣಾಂತಿಕ ಗಾಯಕ್ಕೊಳಗಾಗಿ ಸಾವು ಬದುಕಿನ ಮಧ್ಯೆ ಇದ್ದಾಗ ಆಸ್ಪತ್ರೆಗೆ ಒಯ್ದ ಆಂಬ್ಯುಲೆನ್ಸ್ ಸಹಾ 'ಆ ಇನ್ನೊಂದು' ಧರ್ಮಕ್ಕೆ ಸೇರಿದವರ ಸಂಘಟನೆಯದ್ದು. ಇವುಗಳನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟ. ಕರ್ನಾಟಕವಿನ್ನೂ ಅಷ್ಟು ಸತ್ತಿಲ್ಲ; ಸರ್ಕಾರ ಮಾತ್ರ ಒಂದು ವಾರ ಕಾಲ ಸತ್ತಿತ್ತು. ಮಂಗಳೂರಿನ ಪೊಲೀಸರು, ಅಲ್ಲಿನ ಜನರು ಸೇರಿದಂತೆ ಎಲ್ಲರೂ ಅದಕ್ಕೆ ಮತ್ತೆ ಉಸಿರು ನೀಡಲು ಯತ್ನಿಸುತ್ತಿದ್ದಾರೆ.
ರೂಲ್ ಆಫ್ ಲಾ ಇಲ್ಲದ ಯಾವುದೇ ಸಮಾಜದಲ್ಲಿ ಯಾರೂ ಸುರಕ್ಷಿತರಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಂತಹದೊಂದು ಪರಿಸ್ಥಿತಿಗೆ ಇನ್ನೊಮ್ಮೆ  ಕಾರಣರಾಗಬಾರದು.

ನಿಮಗೆ ಏನು ಅನ್ನಿಸ್ತು?
8 ವೋಟ್