ಎಂಟು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರದ ʼದ್ವೇಷದ ಕೈದಿʼಗಳಾದವರಿವರು

sudha new

2014ರಲ್ಲಿ ಮೋದಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ದ್ವೇಷದ ರಾಜಕಾರಣಕ್ಕೆ ಮುಂದಾಯಿತು. ಮೊದಲು ಅವರ ಕಣ್ಣಿಗೆ ಬಿದ್ದವರೇ ಶೋಷಿತರ ಪರ ದಶಕಗಳಿಂದ ಹೋರಾಟ ನಡೆಸುತ್ತಾ ಬಂದವರು, ಸರ್ಕಾರದ ವಿರುದ್ಧ ಧ್ವನಿ ಎತ್ತಿದವರು, ವಿದ್ಯಾರ್ಥಿಗಳು. ಸಿಎಎ ಹೋರಾಟದಲ್ಲಿದ್ದ ಅನೇಕ ಮುಸ್ಲಿಂ ನಾಯಕರು ಇನ್ನೂ ಜೈಲಿನಲ್ಲಿದ್ದಾರೆ

ಬಿಜೆಪಿಯು ತನ್ನ ರಾಜಕೀಯ ಚದುರಂಗದಾಟದಲ್ಲಿ ವೈಷಮ್ಯ, ದ್ವೇಷ, ಹಗೆತನ, ಕೋಮುವಾದ, ಒಡೆದು ಆಳುವ ನೀತಿ, ಅನ್ಯಾಯ ಮತ್ತು ಅನೀತಿಗಳನ್ನೇ ಸಲೀಸಾಗಿಸಿಕೊಂಡು ಜನರ ಭಾವನೆಯಲ್ಲಿ ಚೆಲ್ಲಾಟವಾಡಿತು. 2014 ರಲ್ಲಿ ನರೇಂದ್ರ ಮೋದಿ ಪ್ರಧಾನಮಂತ್ರಿ ಪಟ್ಟಕ್ಕೇರಿದ ನಂತರ ದೇಶದಲ್ಲಿ ಹಲವು ಕರಾಳ ಕಾನೂನುಗಳನ್ನು ಜಾರಿಗೊಳಿಸಿ ದೇಶವನ್ನು ಗೊಂದಲಗಳ ಗೂಡಾಗಿಸಿದರು. ಕಾಶ್ಮೀರದಲ್ಲಿ 370 ರದ್ದು, ಎನ್‌ಆರ್‌ಸಿ , ಸಿಎಎ, ಟ್ರಿಪಲ್ ತಲಾಖ್ ರದ್ದು, ಮೂರು ಕೃಷಿ ಕಾಯ್ದೆ ಜಾರಿ ಮುಂತಾದ ಹತ್ತು ಹಲವು ಜನವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ ದೇಶವನ್ನು ಒಡೆದರು. ಬಹುತೇಕ ಕರಾಳ ಕಾನೂನುಗಳು ಅಲ್ಪ ಸಂಖ್ಯಾತರನ್ನು ಗುರಿಪಡಿಸಿಯೇ ಜಾರಿಗೊಳಿಸಿದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. 

Eedina App

ಇಂತಹ ದೇಶವಿರೋಧಿ, ಜನ ವಿರೋಧಿ, ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಕರಾಳ ಕಾನೂನುಗಳು ಮತ್ತು ಸರ್ವಾಧಿಕಾರಿ ನಡೆಯ ವಿರುದ್ಧ ಧ್ವನಿಯೆತ್ತಿದ ಹಲವು ಪ್ರಗತಿಪರರು, ವಿದ್ಯಾರ್ಥಿ ಹೋರಾಟಗಾರರು, ಚಿಂತಕರನ್ನು ದಮನಿಸುವ ಸರ್ವವಿದಿತ ಪ್ರಯತ್ನವನ್ನೂ ಮೋದಿ ಸರ್ಕಾರ ಮಾಡಿದೆ. ಕೆಲವರನ್ನು ಇಡಿ - ಐಟಿ ದಾಳಿಗಳ ಮೂಲಕ ಬೆದರಿಸಿ ಬಾಯಿ ಮುಚ್ಚಿಸುವ ತಂತ್ರವನ್ನು ಮತ್ತು ಹಲವರ ವಿರುದ್ಧ ಯುಎಪಿಎ, ಟಾಡಾ (ಭಯೋತ್ಪಾದಕ ತಡೆ ಕಾಯ್ದೆ)ಗಳಂತಹ ಕರಾಳ ಮೊಕದ್ದಮೆಗಳನ್ನು ದಾಖಲಿಸಿ ಸುಳ್ಳು ಕೇಸ್‌ನಲ್ಲಿ ಜೈಲಿಗಟ್ಟುವ ಹುನ್ನಾರದ ತಂತ್ರವನ್ನೂ ಮಾಡಿದೆ.

ಭಾರತವನ್ನು ಪ್ರತಿನಿಧಿಸಬೇಕಾದ ಹಲವು ವಿಚಾರವಾದಿಗಳು, ಪ್ರತಿಭೆಗಳು ಇಂದು ಬಿಜೆಪಿಯ ದ್ವೇಷ ರಾಜಕೀಯದ ಹುನ್ನಾರದ ಪರಿಣಾಮ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ತನ್ನ ಮತ್ತು ಸರ್ಕಾರದ ವಿರುದ್ಧ  ಭಿನ್ನಮತಗಳ ಒಕ್ಕೊರಲಿನ ದನಿಯನ್ನು ಅಡಗಿಸುವ ಸರ್ವ ಪ್ರಯತ್ನಕ್ಕೆ ಮೋದಿ ಸರ್ಕಾರ ಇಳಿದಿದೆ. ಬಿಜೆಪಿಯು ತಮ್ಮ ವಿರುದ್ಧ ಧ್ವನಿಯೆತ್ತಿದವರನ್ನು ದ್ವೇಷದ ರೂಪದಲ್ಲಿ ಗುರಿಪಡಿಸಿ ಹಗೆತನದ ಬೇಟೆಯಾಡುತ್ತಿದೆ. ಹೀಗೆ ಬೇಟೆಯಾಡಲ್ಪಟ್ಟ ರಾಜಕೀಯ ಕೈದಿಗಳ ಪಟ್ಟಿಗೆ ಈಗ ತೀಸ್ತಾ, ಜುಬೇರ್‌, ಶಿವಕುಮಾರ್‌ ಕೂಡಾ ಸೇರಿದ್ದಾರೆ. ಈ ಪಟ್ಟಿ ಇನ್ನೂ ಬೆಳೆಯುವ ಲಕ್ಷಣಗಳು ಗೋಚರಿಸುತ್ತಿದೆ.

AV Eye Hospital ad

ಆನಂದ್ ತೇಲ್ತುಂಬ್ಡೆ : 2018 ಆಗಸ್ಟ್ 29 ರಂದು ಗೋವಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ ಅಧ್ಯಾಪಕ ಸದಸ್ಯರಾಗಿರುವ ಆನಂದ್‌ ತೇಲ್ತುಂಬ್ಡೆ ಅವರ ಮನೆಯ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಜನವರಿ 1, 2018ರಂದು ನಡೆದ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ನಿಕಟ ಸಂಬಂಧವಿದೆಯೆಂದು ಆರೋಪಿಸಿ  ಅವರನ್ನು ಬಂಧಿಸಿ, ಯುಎಪಿಎ ಪ್ರಕರಣ ದಾಖಲಿಸಿ ಜೈಲಿನಲ್ಲಿಟ್ಟಿದ್ದಾರೆ. 
ಪ್ರೊ ಹನಿ ಬಾಬು : ಹನಿ ಬಾಬು ಓರ್ವ ಹೋರಾಟಗಾರರೂ, ದೆಹಲಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕರೂ ಮತ್ತು ಓರ್ವ ವಿದ್ವಾಂಸರೂ ಆಗಿರುತ್ತಾರೆ. ಇವರು ಮಾವೋವಾದಿ ಸಿದ್ಧಾಂತ ಹಾಗೂ ನಕ್ಸಲ್ ಚಟುವಟಿಕೆಗಳಿಗೆ ಹುರಿದುಂಬಿಸುತ್ತಿದ್ದಾರೆ ಮತ್ತು ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧವಿದೆ ಎಂದು ಆರೋಪಿಸಿ 2020 ರಲ್ಲಿ ಬಂಧಿಸಿ ಜೈಲಿಗಟ್ಟಲಾಯಿತು.  
ವರವರರಾವ್: ತೆಲುಗು ಕವಿ ವರವರ ರಾವ್ ಅವರು ಸುಮಾರು 17 ವರ್ಷ ವಯಸ್ಸಿನವರಾಗಿದ್ದಾಗಲೇ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. ಭೀಮಾ-ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ 2018ರಲ್ಲಿ ಇವರನ್ನು ಬಂಧಿಸಿ ಜೈಲಿಗಟ್ಟಲಾಯಿತು. ಇವರು ಅನಾರೋಗ್ಯ ಕಾರಣ ಪೆರೋಲ್ ನಲ್ಲಿದ್ದು, ಆ ಬಳಿಕ ಪೆರೋಲ್ ಮುಗಿಸಿ ಮತ್ತೆ ಇವರನ್ನು ಜೈಲಿಗೆ ಕಳುಹಿಸಲಾಗಿದೆ.
ಫಾದರ್‌ ಸ್ಟಾನ್ ಸ್ವಾಮಿ: ಆದಿವಾಸಿ ಬುಡಕಟ್ಟು ಜನಾಂಗದವರ ಪರ ಸದಾ ಧ್ವನಿಯಾಗುತ್ತಿದ್ದ ಫಾದರ್ ಸ್ಟಾನ್ ಸ್ವಾಮಿಯನ್ನು ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದರು. ಇವರು ಜೈಲಿನಲ್ಲಿ ಹಲವು ಬಗೆಯ ಹಿಂಸೆಯನ್ನು ಅನುಭವಿಸಿದ್ದಾರೆ. ಕಳೆದ ವರ್ಷ ಜೈಲಿನಲ್ಲಿರುವಾಗಲೇ ತನ್ನ 83 ವರ್ಷದಲ್ಲಿ ಸಾವನ್ನಪ್ಪಿದ್ದಾರೆ

ಸುರೇಂದ್ರ ಗಾಂಡ್ಲಿಂಗ್, ಮಹೇಶ್ ರಾವುತ್, ಸುಧೀರ್ ಧಾವ್ಳೆ, ಪ್ರೊಫೆಸರ್ ಶೋಮಾ ಸೇನ್, ರೋಣ ವಿಲ್ಸನ್ , ಅರುಣ್ ಫೆರೇರಾ , ವರ್ನನ್ ಗೊನ್ಸಾಲ್ವೀಸ್‌, ಗೌತಮ್ ನೌಲಾಖರಂತಹ ಅನೇಕ ವಿದ್ವಾಂಸರು, ಪ್ರಗತಿಪರರನ್ನು ಭೀಮಾ ಕೋರೆಗಾಂವ್ ಪ್ರಕರಣ ಮತ್ತು ಬಿಜೆಪಿ ವಿರುದ್ಧ ಧ್ವನಿಯೆತ್ತಿದ ಪರಿಣಾಮ ಸುಳ್ಳು ಪ್ರಕರಣ ದಾಖಲಿಸಿ ಇನ್ನೂ ಬಂಧನದಲ್ಲಿದ್ದಾರೆ. ಕಾರ್ಮಿಕ ನಾಯಕಿ, ಹಿರಿಯ ವಕೀಲೆ ಸುಧಾ ಭಾರದ್ವಾಜ್‌ ಮೂರು ವರ್ಷಗಳ ಜೈಲುವಾಸದ ನಂತರ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ವಿದ್ಯಾರ್ಥಿ ನಾಯಕರಾದ ದೇವಂಗನಾ, ನತಾಶಾ, ಇಕ್ಬಾಲ್
ವಿದ್ಯಾರ್ಥಿ ನಾಯಕರಾದ ದೇವಂಗನಾ, ನತಾಶಾ, ಇಕ್ಬಾಲ್

ಶಾರ್ಜಿಲ್ ಇಮಾಮ್ : ಇವರು ಮೂಲತಃ ಬಿಹಾರ ರಾಜ್ಯದವರು. ಐಐಟಿ ಮುಂಬೈಯಲ್ಲಿ ಎಂಜಿನಿಯರಿಂಗ್ ಮುಗಿಸಿದ ಇವರು ಪಿಹೆಚ್‌ಡಿ ವಿದ್ವಾರ್ಥಿಯಾಗಿದ್ದಾರೆ. ಐತಿಹಾಸಿಕ ಶಾಹಿನ್‌ಭಾಗ್ ಪ್ರತಿಭಟನೆಯನ್ನು ಸಂಘಟಿಸುವ ಮೂಲಕ  ಎನ್‌ಆರ್‌ಸಿ/ ಸಿಎಎ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಸಿಎಎಯ ವಿರುದ್ಶ ಅಲಿಘರ್ ವಿಶ್ವವಿದ್ಯಾಲಯದಲ್ಲಿ ಜನರನ್ನು ಸೇರಿಸಿ ಉದ್ರೇಕಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಇವರನ್ನು ಜೈಲಿಗಟ್ಟಲಾಯಿತು.  
ಸಫೂರಾ ಝರ್ಗರ್ : ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಸಫೂರಾ ಕಾಶ್ಮೀರ ಮೂಲದವರು. ದೆಹಲಿ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿನಿಯೂ ಆಗಿದ್ದಾರೆ. ಎನ್‌ಆರ್‌ಸಿ / ಸಿಎಎ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರಿಂದ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲಾಯಿತು.  
ಖಾಲಿದ್ ಸೈಫಿ : ದೆಹಲಿ ಮೂಲದ ಹೋರಾಟಗಾರರಾದ ಇವರೂ ಕೂಡ ಎನ್‌ಆರ್‌ಸಿ / ಸಿಎಎ ಪ್ರತಿಭಟನೆಯಲ್ಲಿ ಬಹಳ ಛಾಪು ಮೂಡಿಸಿದ್ದರು. ಇವರ ಬಂಧನದ ಬಳಿಕ ಒಂದು ದಿನ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಇವರ ಎರಡು ಕಾಲಿಗೆ ಗಂಭೀರವಾದ ಏಟಾಗಿ ವೀಲ್‌ಚೇರ್ ಮೂಲಕ ಸಾಗಿಸಬೇಕಾದ ಪರಿಸ್ಥಿತಿಯಲ್ಲಿದ್ದರು. ಆ ಮಟ್ಟಿಗೆ ಇವರಿಗೆ ಪೊಲೀಸರು ಕಸ್ಟಡಿಯಲ್ಲೇ ಚಿತ್ರಹಿಂಸೆ ನೀಡಿದ್ದರು.

ಉಮರ್ ಖಾಲಿದ್: ದೆಹಲಿ ಗಲಭೆಗೆ ಪ್ರಚೋದನೆ ಎಂಬ ಸುಳ್ಳು ಪ್ರಕರಣ ಮತ್ತು ಸಿಎಎ / ಎನ್ಆರ್‌ಸಿಯ ವಿರುದ್ಧ ಪ್ರತಿಭಟನೆ ನಡೆಸಿದ್ದನ್ನು ಗುರಿಯಾಗಿಸಿ ಉಮರ್ ಖಾಲಿದ್‌ರನ್ನು ಬಂಧಿಸಿ ಜೈಲಿಗಟ್ಟಲಾಯಿತು. ಹೋರಾಟಗಾರರೂ, ಜೆಎನ್‌ಯುವಿನ ವಿದ್ಯಾರ್ಥಿ ನಾಯಕರೂ ಆಗಿರುವ ಇವರು, ಬಿಜೆಪಿ ಮತ್ತು ಮೋದಿ ಸರ್ಕಾರದ ಜನವಿರೋಧಿ ನಡೆಯ ವಿರುದ್ಧ ಹೋರಾಟದಲ್ಲಿ ಭಾಗವಹಿಸುತ್ತಿದ್ದರು.
ಮೀರನ್ ಹೈದರ್:  ಇವರು ಮೂಲತಃ ಬಿಹಾರಕ್ಕೆ ಸೇರಿದವರು. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ವಾಂಸರೂ ಆಗಿದ್ದರು. ಸಿಎಎಯ ವಿರುದ್ಧ ಜನಸಮೂಹವನ್ನು ಒಗ್ಗೂಡಿಸಿದ ಧ್ವನಿಯಾಗಿದ್ದ ಕಾರಣ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗಟ್ಟಲಾಯಿತು.  
ಆಮಿರ್ ಮಿಂಟೋ: ಇವರು ವಿದ್ವಾಂಸರೂ, ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಯೂ ಆಗಿದ್ದರು. ಎನ್ ಆರ್ ಸಿ ವಿರುದ್ಧ ಹೋರಾಡಿದ ಕಾರಣ ಇವರ ಬಂಧನವಾಗುತ್ತದೆ.  
ಮಹಮ್ಮದ್ ಡ್ಯಾನಿಶ್: ಕಾನೂನು ವಿದ್ಯಾರ್ಥಿ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸದಸ್ಯರೂ ಆಗಿರುವ ಇವರು ಸಿಎಎ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾರಣ ಜೈಲಿಗಟ್ಟಲಾಯಿತು.

ಉಮರ್‌ ಖಾಲಿದ್‌ ಮತ್ತು ಖಾಲಿದ್‌ ಸೈಫಿ
ಉಮರ್‌ ಖಾಲಿದ್‌ ಮತ್ತು ಖಾಲಿದ್‌ ಸೈಫಿ

ರವೂಫ್ ಶರೀಫ್: ವಿದ್ವಾಂಸರೂ, ಸಿಎಫ್ಐ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿರುವ ರವೂಫರನ್ನು ಸಿಎಎ ಮತ್ತು ಬಿಜೆಪಿಯ ಹಲವು ನೀತಿಗಳ ವಿರುದ್ಧ ಹೋರಾಟ ಮಾಡಿದ ಕಾರಣ ಯುಎಪಿಎ ಯಂತಹ ಕರಾಳ ಕಾನೂನಿನ ಕುಣಿಕೆಗೊಳಪಡಿಸಿ ಜೈಲಿಗಟ್ಟಲಾಯಿತು.
ದೇವಂಗನಾ ಕಲಿಟಾ:  ಇವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಎಂಫಿಲ್ ವಿದ್ಯಾರ್ಥಿಯೂ, ಹೋರಾಟಗಾರ್ತಿಯೂ ಆಗಿದ್ದಾರೆ. ಎನ್‌ಆರ್‌ಸಿ ವಿರುದ್ಧ ರಾಜಿರಹಿತ ಹೋರಾಟ ಮಾಡಿದ್ದರ ಪರಿಣಾಮ ಜೈಲಿಗಟ್ಟಲಾಯಿತು. ಮುಫ್ತಿ ಮುಹಮ್ಮದ್ ಶೆಹಝಾದ್, ಶಾರ್ಜಿಲ್ ಉಸ್ಮಾನಿ,‌ ಆಸಿಫ್ ಇಕ್ಬಾಲ್ ತನ್ಹಾ,  ಮಸೂದ್ ಅಹಮದ್, ಆತಿಕುರ್ ರಹ್ಮಾನ್ ರಂತಹ ಅನೇಕನೇಕ ವಿದ್ವಾಂಸರು, ಸಂಶೋಧಕರನ್ನು ಎನ್‌ಆರ್‌ಸಿ/ಸಿಎಎ ವಿರುದ್ಧ ಹೋರಾಟ ಮಾಡಿದ ಕಾರಣ ಬಂಧಿಸಿ ಜೈಲಿನಲ್ಲಿ ಕೊಳೆಯುವಂತೆ ಮಾಡಿದೆ.  
ಸಿದ್ದೀಕ್ ಕಪ್ಪನ್ : ಕೇರಳ ಮೂಲದ ಪ್ರಗತಿಪರ ಪತ್ರಕರ್ತ ಸಿದ್ದೀಕ್ , ಹತರಾಸ್ ಅತ್ಯಾಚಾರ-ಕೊಲೆ ಪ್ರಕರಣದ ಕುರಿತು ವರದಿ ಮಾಡಲು ತೆರಳಿದಾಗ ಪೊಲೀಸರು ಸಂಶಯಾಕುಲಿತರಾಗಿ ಅವರನ್ನು ಬಂಧಿಸಿ ಅಕ್ರಮ ಪ್ರಕರಣ ದಾಖಲಿಸಿದ್ದಾರೆ.  
ತೀಸ್ತಾ ಸೆಟಲ್ವಾಡ್: 60 ವರ್ಷದ ತೀಸ್ತಾ ಸೆಟಲ್ವಾಡ್ ಅವರು ಮುಂಬೈಯ ಗುಜರಾತಿ ಕುಟುಂಬದವರು. ಇವರ ತಾತ ದೇಶದ ಮೊದಲ ಅಟಾರ್ನಿ ಜನರಲ್‌, ತಂದೆಯ ಅತುಲ್ ಸೆಟಲ್ವಾಡ್ ಮುಂಬೈನಲ್ಲಿ ಖ್ಯಾತ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ಪತ್ರಕರ್ತೆಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ಬ್ಯುಸಿನೆಸ್ ಇಂಡಿಯಾ, ಇಂಡಿಯನ್ ಎಕ್ಸ್ಪ್ರೆಸ್, ದಿ ಡೈಲಿ ಮುಂತಾದವುಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.  ಪತ್ರಿಕೋದ್ಯಮವನ್ನು ಬಿಟ್ಟು ಇವರು ಹಾಗೂ ಪತಿ ಜಾವೇದ್ ಆನಂದ್ ಇಬ್ಬರೂ ಸೇರಿ ಕೋಮುಗಲಭೆಗಳು ಮತ್ತು ಮತಾಂಧತೆಗಳ ವಿರುದ್ಧದ ಹೋರಾಟಕ್ಕೆ  ನಿರ್ಧರಿಸಿದರು. 1993ರಲ್ಲಿ ʼಕಮ್ಯೂನಲಿಸಂ ಕಾಂಬ್ಯಾಟ್ʼ ಎಂಬ ಮಾಸಿಕ ಪತ್ರಿಕೆಯನ್ನು ಆರಂಭಿಸಿದರು. 2002ರ ಫೆಬ್ರುವರಿಯಲ್ಲಿ ಗುಜರಾತ್ ಗಲಭೆ ನಡೆದಾಗ ತೀಸ್ತಾ ಸೆಟಲ್ವಾಡ್ ಹಾಗೂ ಹಲವರು ಸೇರಿಕೊಂಡು ಸಂತ್ರಸ್ತರ ಪರವಾಗಿ ‘ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್’ ಎಂಬ ಎನ್‌ಜಿಒ ಸ್ಥಾಪಿಸಿದರು. ಮೋದಿ ಮತ್ತು ಬಿಜೆಪಿಯ ಹಲವರ ವಿರುದ್ಧ ಸದಾ ಧ್ವನಿಯೆತ್ತುತ್ತಿದ್ದರು. ಗುಜರಾತ್ ಗಲಭೆಯ ವಿರುದ್ಧ ಬೀದಿ ಬೀದಿಗಳಲ್ಲಿ ಜಾಗೃತಿ ಹಮ್ಮಿಕೊಂಡಿದ್ದರು. ಮಹಿಳೆಯರು, ದಲಿತರು, ಮುಸ್ಲಿಮರ ಪರವಾಗಿ ನಿಂತು, ಇವರಿಗಾಗುವ ಅನ್ಯಾಯದ ವಿರುದ್ಧ ರಾಜಿರಹಿತವಾದ ಹಲವು ಹೋರಾಟಗಳು ಮಾಡಿದರ ಪರಿಣಾಮ ಇತ್ತೀಚೆಗೆ ಅವರನ್ನು ಬಂಧಿಸಲಾಯಿತು. ಇವರ ಜೊತೆಗೆ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಸುಳ್ಳು ಆಪಾದನೆ ಮಾಡಿ ಮಾಜಿ ಡಿಜಿಪಿ ಶ್ರೀಕುಮಾರ್ ಅವರನ್ನೂ ಬಂಧಿಸಿದ್ದಾರೆ.  ‌

ಆಲ್ಟ್‌ ನ್ಯೂಸ್‌ನ ಝಬೇರ್
ಆಲ್ಟ್‌ ನ್ಯೂಸ್‌ನ ಝುಬೇರ್

ಮಹಮ್ಮದ್ ಝುಬೇರ್ : ಕರ್ನಾಟಕ ಮೂಲದ ಪತ್ರಕರ್ತರೂ, ಸತ್ಯಶೋಧಕ ತಾಣವಾದ ‘ಆಲ್ಟ್’ ಸುದ್ದಿ ಸಂಸ್ಥೆಯ ಸಹ ಸಂಸ್ಥಾಪಕರೂ ಆಗಿದ್ದಾರೆ. ಇವರು ನೂಪುರ್ ಶರ್ಮಾ ಎಂಬ ಬಿಜೆಪಿಯ ಮಾಜಿ ವರಿಷ್ಠೆ ಪ್ರವಾದಿ ಮಹಮ್ಮದರ ಕುರಿತಾಗಿ ನಿಂದನಾತ್ಮಕವಾಗಿ ಹೇಳಿಸಿದ್ದನ್ನು ಟ್ವೀಟ್ ಮಾಡುವ ಮೂಲಕ ಮೊದಲು ಬಟಾಬಯಲು ಮಾಡಿದ್ದರು. ಇದರಿಂದ ವಿಶ್ವದೆಲ್ಲೆಡೆಯಿಂದ ಮುಜುಗರಕ್ಕೊಳಗಾದ ಮೋದಿ ಸರ್ಕಾರ ಹಳೆಯ ಕೇಸಿಗೆ ಸಂಬಂಧಿಸಿ ಝುಬೇರ್‌ರನ್ನು ಬಂಧಿಸಿದೆ. 

ಇದನ್ನು ಓದಿದ್ದೀರಾ? ಈಗ ಭಾರತದಲ್ಲಿ ಪ್ರಜಾಸತ್ತೆಯು ನಳನಳಿಸುತ್ತಿದೆಯೇ?

ಹೀಗೆ ಹತ್ತು ಹಲವು ಬಂಧನಗಳನ್ನು ಬಿಜೆಪಿ ಸರ್ಕಾರ ನಡೆಸುತ್ತಲೇ ಇದೆ. ಮೇಲೆ ತಿಳಿಸಿದ ಹೋರಾಟಗಾರರಲ್ಲಿ ಹೆಚ್ಚಿನವರು ಇನ್ನೂ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಜಾಮೀನಿನಲ್ಲಿ ಬಿಡುಗಡೆಯಾದವರು ಅತೀ ವಿರಳ. ಯುಎಪಿಎ ಯಂತಹ ಕರಾಳ ಕಾನೂನನ್ನು ಇವರ ಮೇಲೆ ಹೇರಲಾಗಿದೆ. ಮುಂದೆ ರಾಜಕೀಯ ಕೈದಿಗಳ ಪಟ್ಟಿ ದುಪ್ಪಟ್ಟಾಗಬಹುದು. ಸಾಮಾಜಿಕ ಹೋರಾಟಗಾರರು ಬಂಧನದ ಭೀತಿಯಲ್ಲಿ ಬದುಕುವಂತಾಗಿರುವುದಂತೂ ದಿಟ.

ನಿಮಗೆ ಏನು ಅನ್ನಿಸ್ತು?
6 ವೋಟ್
eedina app