ಧರ್ಮ ಜಾತಿಗಳ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವವರೇ ಪಂಪನ ಹೆಸರನ್ನು ಅಳಿಸಿ ಹಾಕುವ ಯತ್ನ ಮಾಡುತ್ತಿದ್ದಾರೆ

Pampa edited

ಯಾರು ಯಜ್ಞಗಳ ನೆಪದಲ್ಲಿ ಹೊಟ್ಟೆ ಹೊರೆಯುತ್ತಿದ್ದಾರೋ, ದೇವರು, ಧರ್ಮ ಜಾತಿಗಳ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೋ ಮತ್ತು ಅದರಿಂದ ಅಧಿಕಾರದ ಸ್ಥಾನಕ್ಕೆ ಬಂದು ಕೂಳಿತಿದ್ದಾರೋ ಅವರಿಗೆ ಪಂಪನ ಬಗೆಗೆ ಆತಂಕ ಉಂಟಾಗಿದೆ. ಅದಕ್ಕಾಗಿಯೇ ಪಂಪನನ್ನು ಮತ್ತು ಅವನ ಹೆಸರನ್ನು ಅಳಿಸಿ ಹಾಕುವ ಕೆಲಸವನ್ನು ಅವರು ಮಾಡುತ್ತಿದ್ದಾರೆ

ಕನ್ನಡದ ಮಹತ್ವದ ಕವಿ ಪಂಪ. ಒಂದು ಸಾವಿರ ವರ್ಷಗಳ ಹಿಂದೆಯೇ ಅವರು ತನ್ನ ಮಹಾಕಾವ್ಯಗಳಲ್ಲಿ ನಮ್ಮ ಸಂವಿಧಾನದ ಆಶಯಗಳಿಗೆ ತಕ್ಕ ಹಾಗೆ ಒಂದು ಜಾತ್ಯತೀತ ಪ್ರಜ್ಞೆಯನ್ನು ಮೂಡಿಸುವ ಅದ್ಭುತ ಕೆಲಸವನ್ನು ಮಾಡಿದ್ದಾನೆ. ಒಂದು ಸಾವಿರ ವರ್ಷಗಳಿಂದ ಪಂಪನನ್ನು ಕನ್ನಡಿಗರಿಗೆ ಧಕ್ಕದಂತೆ ಮುಚ್ಚಿಡಲಾಗಿತ್ತು. ಈ ದೇಶಕ್ಕೆ ಇಂಗ್ಲಿಷರು ಬರುವವರೆಗೆ, ಬಿ ಎಲ್‌ ರೈಸ್‌ ಅಂತಹ ಇಂಗ್ಲೀಷ್ ವಿದ್ವಾಂಸರು ಬರುವವರೆಗೆ ಪಂಪನ ಕೃತಿಗಳನನ್ನು ಮುಚ್ಚಿಡಲಾಗಿತ್ತು. ರೈಸ್ ಅವರು 1898ರಲ್ಲಿ ಪಂಪನ ಎರಡು ಮಹಾಕಾವ್ಯಗಳನ್ನು ಹುಡುಕಿ ಎಡಿಟ್ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಾರೆ.

Eedina App

ಈ ಕಾಲದಲ್ಲಿಯೂ ವಿದ್ವಾಂಸರು, ವಿಮರ್ಶಕರು ಮತ್ತು ಸಾಹಿತಿಗಳಿಗೆ ಮಾತ್ರ ಪಂಪ ಗೊತ್ತಿರಬಹುದು. ಉಳಿದವರಿಗೆ ಪಂಪನ ಹೆಸರು ಮಾತ್ರ ಪರಿಚಯವಾಗಿದೆ, ಅವನ ಕಾವ್ಯಗಳ ಪರಿಚಯವಾಗಲಿ, ಅವನ ಆಶಯವಾಗಲಿ ತಿಳಿದಿಲ್ಲ. ಅವನು ಜಾತ್ಯತೀತ ಪ್ರಜ್ಞೆಯನ್ನು ಮೂಡಿಸುವಂತಹ ಮಹತ್ವದ ಮಾತುಗಳನ್ನು ತನ್ನ ಕೃತಿಗಳಲ್ಲಿ ಹೇಳುತ್ತಾನೆ. ʼಮನುಷ್ಯ ಜಾತಿ ತಾನೊಂದೇ ವಲಂʼ ಎನ್ನುವ ಒಂದು ಮಾತಿದೆ. ಅದು ಎಷ್ಟು ಉದಾತ್ತವಾದದ್ದು ಎಂದು ನಾವು ಯೋಚನೆ ಮಾಡಬೇಕಾಗಿದೆ. ಮನುಷ್ಯ ಜಾತಿ ತಾನೊಂದೇ ವಲಂ ಅಂದರೆ, ಮನುಷ್ಯ ಜಾತಿ ಒಂದೇ ಅಲ್ಲವೇ ಎನ್ನುವ ಪ್ರಶ್ನೆಯನ್ನು ಪಂಪ ಕೇಳುತ್ತಾನೆ. ಅಲ್ಲದೆ ಅನೇಕ ಕಡೆಗಳಲ್ಲಿ ಮತ್ತೆ ಮತ್ತೆ ಜಾತಿಯನ್ನು ಕುರಿತಾದ ಮಾತುಗಳನ್ನು ಅವನು ಹೇಳುತ್ತಾನೆ.

ಪಂಪನ ಒಂದು ಪದ್ಯ ಹೀಗಿದೆ
ಕುಲಮನೆ ಮುನ್ನಮುಗ್ಗಡಿಪೆರೇಂ ಗಳ
ನಿಮ್ಮ ಕುಲಗಳಾಂತು ಮಾ ಮರ್ಮಲವನೆಟ್ಟಿ ತಿಂಬುವೆ
/ ಕುಲಂ ಕುಲಮಲ್ತು ಚಲಂ ಕುಲಂ ಗುಣಂ ಕುಲಮಭಿಮಾನಮೊಂದೆ ಕುಲಮಣ್ಮುಕುಲಂ
ಬಗೆವಾಗಳೀ ಗಳೀ ಕಲಹದೊಳಣ್ಣ /
ನಿಮ್ಮ ಕುಲವಾಕುಲಮಂ ನಿಮಗುಂಟುಮಾಡುಗುಂ

AV Eye Hospital ad

ಅಂದರೆ, ಮಾತಿಗೆ ಮೊದಲು ಕುಲ, ಜಾತಿ ಎಂದು ಮಾತಾಡುತ್ತೀರಲ್ಲ, ನಿಮ್ಮ ಜಾತಿಗಳೇ ದೊಡ್ಡದು ಎಂದು ಹೇಳಿಕೊಳ್ಳುತ್ತೀರಲ್ಲಾ ಅದು ತಪ್ಪು. ಜಾತಿಯೇ ದೊಡ್ಡದು ಎಂದು ಭಾವಿಸಬಾರದು. ಯಾವುದೋ ಒಂದು ಶ್ರೇಷ್ಠ ಜಾತಿಯಲ್ಲಿ ಹುಟ್ಟಿದ್ದೀವಿ ಎನ್ನುವ ಕಾರಣಕ್ಕಾಗಿ, ಜಾತಿಗರ್ವಾಂಧತೆಯನ್ನು ಬೆಳೆಸಿಕೊಳ್ಳಬಾರದು. ಸಾಹಸವೇ ಒಂದು ಜಾತಿ, ಧೈರ್ಯ ನಿಜವಾದ ಜಾತಿ, ಅಭಿಮಾನವೇ ನಿಜವಾದ ಕುಲ ಆಗಬೇಕು. ನೀವು ಜಗಳ ಕಾಯುತ್ತಿರುವ ಈ ಜಾತಿಯು ಮುಂದೆ ನಿಮಗೆ ವ್ಯಾಕುಲವನ್ನುಂಟು ಮಾಡುತ್ತದೆ ಎನ್ನುವ ಮಾತನ್ನು ಒಂದು ಎಚ್ಚರಿಕೆಯನ್ನು ಪಂಪ ಈ ಕವಿತೆಯ ಮೂಲಕ ಕಟ್ಟಿ ಕೊಡೋದಿಕ್ಕೆ ಪ್ರಯತ್ನ ಮಾಡಿದ್ದಾನೆ. ಇದು ಬಹಳ ಮುಖ್ಯವಾದದ್ದು. ಅವನಲ್ಲಿ ವೈಚಾರಿಕವಾಗಿಯೂ ಅನೇಕ ಸಂಗತಿಗಳು ಬರುತ್ತವೆ.

ಪಂಪನ ತಾತ ಮಾಧವ ಸೋಮಯಾಜಿ ಎಂದು. ಈ ಯಜ್ಞ ಯಾಗಗಳನ್ನು ಮಾಡುವುದರಿಂದ ಎಂತಹಾ ಕೇಡು ಬರುತ್ತದೆಂದು ನಾವು ಪಂಪನ ಈ ಕವಿತೆಯ ಸಾಲುಗಳನ್ನಿಟ್ಟುಕೊಂಡು ಯೋಚನೆ ಮಾಡಬಹುದಾಗಿದೆ. ಸೋಮಯಾಜಿ ಎಂದರೆ ಬ್ರಾಹ್ಮಣರಲ್ಲೇ ಶ್ರೇಷ್ಠರಾದವರು. ಯಜ್ಞಯಾಗಗಳನ್ನು ಮಾಡಿಸುವ ದೀಕ್ಷಿತರು. ದೀಕ್ಷಿತನಾಗಿದ್ದ ಪಂಪನ ತಾತ ಮಾಧವ ಸೋಮಯಾಜಿ. ಯಜ್ಞ ಮಾಡಿಸುವುದರಿಂದ ಅವನಿಗೆ ಬೇಕಾದಷ್ಟು ಸಂಪತ್ತು ದೊರೆಯುತ್ತಿತ್ತು. ಜನ ಅವನ ಕಾಲಿಗೆ ಬಿದ್ದು ಗೌರವ ತೋರಿಸುತ್ತಿದ್ದರು. ಅದೆಲ್ಲವನ್ನು ಬಿಟ್ಟು ಬ್ರಾಹ್ಮಣ ಧರ್ಮದಿಂದ ಜೈನ ಧರ್ಮಕ್ಕೆ ಮತಾಂತರ ಗೊಳ್ಳುತ್ತಾರಲ್ಲ, ಇದು ಯಾಕೆ ಎನ್ನುವ ಕುತೂಹಲ ಮತ್ತು ಪ್ರಶ್ನೆ ಪಂಪನಲ್ಲಿ ಮೂಡುತ್ತದೆ.

ಆಗ ಪಂಪನಿಗೆ ಒಂದು ಸತ್ಯ ಹೊಳೆಯುತ್ತದೆ. ಯಜ್ಞ ಮಾಡಿಸುತ್ತಿದ್ದ ತಾತ ಆ ಹೋಮದ ಹೊಗೆಯಿಂದ ʼಹೋಮ ಧೂಮದಿಂ ಕರಂಕುಮಾದುದುʼ ಎನ್ನುತ್ತಾನೆ. ಅಂದರೆ, ಹೋಮದ ಹೊಗೆಯಿಂದ ಪಂಪನ ತಾತ ಕರಂಕುವಾದ ಅಂದರೆ ಕಪ್ಪಿಟ್ಟು ಹೋದ. ಕನ್ನಡದಲ್ಲಿ ಕರಂಕು ಶಬ್ಧಕ್ಕೆ ಕಳಂಕ ಎಂಬ ಅರ್ಥವೂ ಇದೆ. ನಮ್ಮ ಜನ ಇಂದಿಗೂ ಪುರೋಹಿತರ ಮಾತು ಕೇಳಿ ಯಜ್ಞಗಳನ್ನು ಮಾಡಿಸುತ್ತಿದ್ದಾರಲ್ಲವೇ. ಅದರಿಂದ ಜನರಿಗೂ ಕಳಂಕ ಸುತ್ತಿಕೊಳ್ಳುತ್ತದೆ. ಪಂಪನ ಈ ಎಚ್ಚರಿಕೆಯ ಮಾತನ್ನ ನಾವು ಮರೆತುಬಿಟ್ಟಿದ್ದೇವೆ.

ಮಾಧವ ಸೋಮಯಾಜಿ ಕಳಂಕವನ್ನು ಕಳೆದುಕೊಳ್ಳುವುದಕ್ಕಾಗಿ ಬ್ರಾಹ್ಮಣ ಧರ್ಮವನ್ನು ಬಿಟ್ಟು ಜೈನ ಧರ್ಮಕ್ಕೆ ಮತಾಂತರಗೊಳ್ಳುತ್ತಾನೆ. ಪಂಪನ ಇಂತಹ ವೈಚಾರಿಕತೆಯನ್ನು ನಮ್ಮ ಜನ ಇಲ್ಲಿಯವರೆಗೆ ತಮ್ಮ ಬದುಕಿನಲ್ಲಿ ಅಳವಡಿಕೊಂಡಿಲ್ಲ. ಪುರೋಹಿತರ ಮಾತಿಗೆ ಮರುಳಾಗಿ, ಭಯಬಿದ್ದು, ತಮ್ಮಲ್ಲಿರುವ ಸಂಪತ್ತನ್ನೆಲ್ಲಾ  ಹಾಕಿ ಮನೆಯಲ್ಲಿ ಯಜ್ಞ ಯಾಗಗಳನ್ನ ಮಾಡಿಸುತ್ತಿದ್ದಾರೆ. ಕಳಂಕ ಬರುತ್ತೆ ಎಂಬುದಕ್ಕೆ ಈ ಪಂಪನ ಮಾತಿಗೆ ಏನು ಸಾಕ್ಷಿ ಎಂದು ಯಾರಾದರೂ ಪ್ರಶ್ನೆ ಕೇಳಿದರೆ. ನಾನು ನಮ್ಮ ಕಾಲದಲ್ಲೇ ನಡೆದ ಎರಡು ಉದಾಹರಣೆಗಳನ್ನ, ಯಜ್ಞ ಮಾಡಿಸುವುದರಿಂದ ಎಂತಹ ಅಪಾಯಕ್ಕೆ ಸಿಲುಕುತ್ತಾರೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ.

ಯಡಿಯೂರಪ್ಪನವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ವಿಧಾನಸೌಧದಲ್ಲಿ ಯಜ್ಞವನ್ನು ಮಾಡಿಸಿದ್ದರು. ನಂತರ ಅವರು ಲಂಚ ತೆಗೆದುಕೊಂಡರು ಎಂದು ಅವರ ಮೇಲೆ ಒಂದು ಕಳಂಕ ಬಂದಿತು. ಯಜ್ಞದ ಕಾರಣ ಕಳಂಕ ಬರುತ್ತೆ ಎಂದು ಪಂಪ ಹೇಳಿದ ಹಾಗೆ ಕಳಂಕ ಬಂತು. ಆ ಕಳಂಕ ಎಷ್ಟು ಸುತ್ತಿಕೊಂಡಿತೆಂದರೆ, ಅವರು ಅದರ ದುಷ್ಪರಿಣಾಮದಿಂದಾಗಿ, ಜೈಲಿಗೆ ಕೂಡ ಹೋಗಬೇಕಾಯಿತು. ಯಾರೋ ಪುರೋಹಿತರ ಮಾತು ಕೇಳಿಕೊಂಡು ಒಬ್ಬ ಮುಖ್ಯಮಂತ್ರಿ ಸ್ಥಾನದಲ್ಲಿರುವಂತಹ ವ್ಯಕ್ತಿ ಈ ಅಪಾಯಕಾರಿಯಾದ ಯಜ್ಞ ಯಾಗಗಳನ್ನು ಕೈಗೊಂಡು ತನ್ನನ್ನು ತಾನು ತೊಂದರೆಗೆ ಸಿಕ್ಕಿಹಾಕಿಸಿಕೊಂಡಿದ್ದು ನಿಜವಾಗಿಯೂ ವಿಷಾದನೀಯ. ಅದೇ ರೀತಿ ನಮ್ಮ ಕನ್ನಡದ ಹೆಮ್ಮೆಯ ಪುತ್ರ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರು ಯಾವಾಗಲೂ ಯಜ್ಞ ಮಾಡಿಸುತ್ತಿರುತ್ತಾರೆ. ಆನಂದರಾವ್ ಸರ್ಕಲ್‌ನಲ್ಲಿರುವ ಜನತಾದಳ ಕಚೇರಿಯಲ್ಲಿ ಯಜ್ಞ ಯಾಗ ಮಾಡಿಸುತ್ತಿದ್ದರು. ನಂತರ ಅವರು ಆ ಕಚೇರಿಯನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದದ್ದು ಕಾಕತಾಳೀಯ ಎನ್ನಬಹುದೇ?

ಪಂಪನ ಬಗ್ಗೆ ಯಾರಿಗೆ ಆತಂಕವಿದೆ ಅಂದ್ರೆ... 

ಪಂಪನನ್ನು ಯಾರಾದರೂ ವಿರೋಧಿಸುತ್ತಿದ್ದಾರೆಂದರೆ, ಯಾರು ಯಜ್ಞ ಯಾಗಗಳ ನೆಪದಲ್ಲಿ ಹೊಟ್ಟೆ ಹೊರೆಯುತ್ತಿದ್ದಾರೋ, ದೇವರು, ಧರ್ಮ ಜಾತಿಮತಗಳ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೋ ಮತ್ತು ಅದರಿಂದ ಅಧಿಕಾರದ ಸ್ಥಾನಕ್ಕೆ ಬಂದು ಕುಳಿತಿದ್ದಾರೋ ಅವರಿಗೆ ಪಂಪನ ಬಗೆಗೆ ಆತಂಕ ಉಂಟಾಗಿದೆ. ಅದಕ್ಕೆ ಪಂಪನನ್ನು ಮತ್ತು ಅವನ ಹೆಸರನ್ನು ಅಳಿಸಿ ಹಾಕುವ ಕೆಲಸವನ್ನ ಅವರು ಮಾಡುತ್ತಿದ್ದಾರೆ. ಇದು ತಪ್ಪಾಗುತ್ತದೆ. ಕನ್ನಡದವರಿಗೆ ಪಂಪ ಎಂದರೆ ಪಂಚಪ್ರಾಣ. ಕನ್ನಡಕ್ಕೆ ಒಂದು ದೊಡ್ಡ ಶಕ್ತಿಯನ್ನುನ ತಂದುಕೊಟ್ಟ ಮಹಾಕವಿ. ಮಹಾಕಾವ್ಯವನ್ನು ರಚಿಸಿದ ಅವನ ವಿರುದ್ಧ ಯಾರಾದರೂ ಅಡ್ಡ ಮಾತುಗಳನ್ನು ಆಡುವುದಾಗಲಿ, ಅವನ ಹೆಸರನ್ನು ಅಳಿಸುವ ಕೆಲಸವನ್ನಾಗಲಿ ಮಾಡಿದರೆ ಅದು ಕನ್ನಡಕ್ಕೆ ಬಗೆಯುವ ದ್ರೋಹವಾಗುತ್ತದೆ. ಏಕೆಂದರೆ, ಕನ್ನಡ ಬೇರೆಯಲ್ಲ, ಪಂಪ ಬೇರೆಯಲ್ಲ.

ನೀವು ಪಂಪ ಮಹಾಕವಿ ರಸ್ತೆ ಎಂದರೂ ಅದೇ ಅಥವಾ ಸಾಹಿತ್ಯಪರಿಷತ್ತಿನ ರಸ್ತೆ ಎಂದರೂ ಅದೇ. ಕನ್ನಡ ಸಾಹಿತ್ಯ ಶುರುವಾಗಿರುವುದೇ ಪಂಪ ಮಹಾಕವಿಯಿಂದ. ಹಾಗಾಗಿ ಈ ರೀತಿಯಾಗಿ ತಪ್ಪು ಹೆಜ್ಜೆಗಳನ್ನ ಯಾರೂ ಇಡಬಾರದು. ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿರಬಹುದು, ಮುಖ್ಯಮಂತ್ರಿಯಿರಬಹುದು, ಅಧಿಕಾರಿಗಳಿರಬಹುದು, ಶಾಸಕರಿರಬಹುದು ಅಥವಾ ಮತ್ತೊಬ್ಬರಿರಬಹುದು. ಅಂತಹ ನಿರ್ಣಯವನ್ನು ಕೈಗೊಂಡರೆ, ಇಡೀ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ. ಇಂತಹ ತಪ್ಪು ನಿರ್ಧಾರದಿಂದ ಹಿಂದೆ ಸರಿಯಬೇಕು. ಪಂಪ ಮಹಾಕವಿ ರಸ್ತೆ ಹಾಗೆಯೇ ಮುಂದುವರಿಯಬೇಕು ಎಂದು ನಾನು ಆರು ಕೋಟಿ ಕನ್ನಡಿಗರ ಪರವಾಗಿ ಆಗ್ರಹ ಮಾಡುತ್ತಿದ್ದೇನೆ.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app