ದೂರದ ಕನ್ನಯ್ಯನಿಗೆ ಮರುಗಿದವರು, ಧರ್ಮಸ್ಥಳದ ದಿನೇಶನ ಸಾವಿಗೇಕೆ ನ್ಯಾಯ ಕೇಳುತ್ತಿಲ್ಲ?

VHP protest

ಎಲ್ಲರ ಜೀವಗಳೂ ಅಮೂಲ್ಯವೇ. ಆದರೆ ತಮ್ಮದೇ ರಾಜ್ಯದಲ್ಲಿ, ತಮ್ಮದೇ ಸಂಘಟನೆಯ ಕಾರ್ಯಕರ್ತರಿಂದ ಕೊಲೆಯಾದಾಗ ಮೌನಕ್ಕೆ ಜಾರುವ ಬಿಜೆಪಿ ಪರಿವಾರ, ಎಲ್ಲೋ ಕೊಲೆಯಾದವರ ಬಗ್ಗೆ ವಾರಗಟ್ಟಲೆ ಪ್ರತಿಭಟನೆ ನಡೆಸುತ್ತಾರೆ. ಅದೂ ಕೊಲೆಗಾರರು ಅಲ್ಪಸಂಖ್ಯಾತರು, ಕೊಲೆಯಾದವರು ಹಿಂದುಗಳಾದರೆ ಸಾಕು ದೊಂಬಿ ಎಬ್ಬಿಸುತ್ತಾರೆ

ಈ ದೇಶಕ್ಕೆ ಬ್ರಿಟಿಷರ ಆಗಮನ ಆಗುವ ಮೊದಲೇ ಆರ್ಯರ ದಾಳಿ ಆಗುತ್ತೆ. ಆರ್ಯರು ನಿಧಾನವಾಗಿ ನಮ್ಮಲ್ಲಿರುವ ಒಗ್ಗಟ್ಟನ್ನು ಹಾಳು ಮಾಡಿ ಜಾತಿ ವ್ಯವಸ್ಥೆಯನ್ನು ನಮ್ಮ ಮೇಲೆ ಹೇರಿದರು. ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದರು ಆದರೆ, ಯಾವಾಗ ಈ ದೇಶಕ್ಕೆ ಬ್ರಿಟಿಷರ ಆಗಮನ ಆಗುತ್ತೋ ಅವರಿಂದ ಎಲ್ಲರಿಗೂ ಶಿಕ್ಷಣ ಸಿಗುವಂತಾಯಿತು. ಆದರೆ ಜಾತಿಪದ್ಧತಿಯನ್ನು ನಿರ್ಮೂಲನೆ ಮಾಡಲು ಬ್ರಿಟಿಷರ ಕೈಯಲ್ಲೂ ಆಗಲಿಲ್ಲ ಅನ್ನೋದು ನಿಜ. ಈ ದೇಶವನ್ನು ಅನೇಕ ರಾಜರು ಆಳ್ವಿಕೆ ನಡೆಸಿದರೂ ಎಲ್ಲೂ ಕೂಡ ಹಿಂದು- ಮುಸ್ಲಿಂ ಅಂತ ಹೊಡೆದಾಡುವ ಪರಿಸ್ಥಿತಿ ತಂದಿರಲಿಲ್ಲ. ಈ ದೇಶದ ಜನರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಕಾರ್ಯೋನ್ಮುಖರಾಗಿದ್ದರು. ಆದರೆ ಯಾವಾಗ ಅಧಿಕಾರ ಮತ್ತೆ ಈ ಆರ್ಯ ಮೂಲದ ವೈದಿಕರ ಪಕ್ಷದ ಕೈಸೇರಿತೋ ಈ ದೇಶದ ಮೂಲನಿವಾಸಿಗಳ ಬದುಕು ಮತ್ತೆ ಚಿಂದಿಯಾಗತೊಡಗಿತು.

ವೇಗವಾಗಿ ಮುಂದುವರಿಯುತ್ತಿದ್ದ ಭಾರತವನ್ನು ಅಷ್ಟೇ ವೇಗವಾಗಿ ಅವನತಿಯತ್ತ ಸಾಗುವಂತೆ ಮಾಡಿದ್ದೆ ಈಗಿನ ಮನುವಾದಿ ಸರ್ಕಾರ. ದೇಶ ಸ್ವಾತಂತ್ರ್ಯ ಪಡೆದು ಶಿಕ್ಷಣ ಕೊಡದ, ಎದೆಗೆ ಬಟ್ಟೆ ತೊಡಲು ಬಿಡದ ಮನುಸ್ಮೃತಿಯಿಂದ ಹೊರಬಂದು ವಿಶ್ವದಲ್ಲೇ ಶ್ರೇಷ್ಠವಾದ ಸಂವಿಧಾನವನ್ನು ಹೊಂದಿದೆ. ಆದರೂ ಈ ಮನುವಾದಿಗಳು ಈ ದೇಶದ ಮೇಲೆ ಮತ್ತೆ ತನ್ನ ಮನುಸ್ಮೃತಿಯ ಕ್ರೂರ ನೀತಿಯನ್ನು ಹೇರಲು ಹೊರಟಿದೆ.

ಮನುವಾದಿಗಳ ದ್ವಿಮುಖನೀತಿ

ಮನುವಾದಿಗಳ ಧೋರಣೆಯೆಂದರೆ ತಮ್ಮವರು ಎಷ್ಟೇ ಗಂಭೀರ ಅಪರಾಧ ಮಾಡಿದರೂ ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯುವಕ ದಿನೇಶ್ ಅವರನ್ನು ಬಿಜೆಪಿ ಕಾರ್ಯಕರ್ತನೇ ಕೊಲೆ ಮಾಡಿದಾಗ ಮರುಗದ ಕನ್ನಡನಾಡಿನ ಕೋಮುವಾದಿ ಜನ ರಾಜಸ್ಥಾನದಲ್ಲಿ ಮುಸ್ಲಿಂ ಧರ್ಮಾಂಧರಿಂದ ಕೊಲೆಯಾದ ಕನ್ನಯ್ಯನಿಗಾಗಿ ಮರುಗುತ್ತಿದ್ದಾರೆ. ಎಲ್ಲರ ಜೀವಗಳೂ ಅಮೂಲ್ಯವೇ, ಆದರೆ ತಮ್ಮದೇ ಸಂಘಟನೆಯ ಕಾರ್ಯಕರ್ತರಿಂದ ಕೊಲೆಯಾದಾಗ ಮೌನಕ್ಕೆ ಜಾರುವ ಬಿಜೆಪಿ ಪರಿವಾರ ಎಲ್ಲೋ ಕೊಲೆಯಾದವರ ಬಗ್ಗೆ ವಾರಗಟ್ಟಲೆ ಪ್ರತಿಭಟನೆ ನಡೆಸುತ್ತಾರೆ. ಅದೂ ಕೊಲೆಗಾರರು ಅಲ್ಪಸಂಖ್ಯಾತರು, ಕೊಲೆಯಾದವರು ಹಿಂದುಗಳಾದರೆ ಸಾಕು ದೇಶದೆಲ್ಲೆಡೆ ದೊಂಬಿ ಎಬ್ಬಿಸುತ್ತಾರೆ.

ಶಿವಮೊಗ್ಗದಲ್ಲಿ ರೌಡಿಶೀಟರ್ ಹರ್ಷನ ಕೊಲೆಯಾದಾಗ ಅದನ್ನು ದೇಶಕ್ಕಾಗಿ ಬಲಿದಾನ ಅಂತಾ ನಾಟಕ ಮಾಡಿ ಅವನ ಕುಟುಂಬಕ್ಕೆ ಕೋಟಿ ಕೋಟಿ ಹಣ ಕೊಟ್ಟವರು, ಅದೇ ಬಜರಂಗಿಯಿಂದ ಕೊಲೆಯಾದ ಧರ್ಮಸ್ಥಳದ ದಿನೇಶ್ ಕುಟುಂಬದ ನೆರವಿಗೆ ಬರಲಿಲ್ಲ. ಅದೇ ವಾರದಲ್ಲಿ ವಿರಾಜಪೇಟೆಯ ಯೋಧಯೊಬ್ಬರು ಭಾರತದ ಗಡಿಯಲ್ಲಿ ಹುತಾತ್ಮರಾಗಿದ್ದರು. ಅವರ ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸಬೇಕಾದ ಜಿಲ್ಲೆಯ ಸಂಸದ ಹರ್ಷನ ಮನೆಯಲ್ಲಿ ಚೆಕ್‌ ಹಿಡಿದು ನಿಂತಿದ್ದರು. ಅವರ ದೇಶಭಕ್ತಿ ಅಷ್ಟರಲ್ಲೇ ಜಗಜ್ಜಾಹೀರಾಗಿತ್ತು.

Image
ಧರ್ಮಸ್ಥಳದ ದಲಿತ ಯುವಕ ದಿನೇಶ್‌ರನ್ನು ಬಜರಂಗದಳದ ಕೃಷ್ಣ ಹಲ್ಲೆ ಮಾಡುತ್ತಿರುವ ದೃಶ್ಯ
ಧರ್ಮಸ್ಥಳದ ದಲಿತ ಯುವಕ ದಿನೇಶ್‌ರನ್ನು ಬಜರಂಗದಳದ ಕೃಷ್ಣ ಹಲ್ಲೆ ಮಾಡುತ್ತಿರುವ ದೃಶ್ಯ

ರೌಡಿಗಿರುವ ಬೆಲೆ ದಲಿತನಿಗೆ ಇಲ್ಲದಾಯಿತು

ಒಬ್ಬ ದೇಶ ಕಾಯುವ ಸೈನಿಕ ಸತ್ತರೂ ಆ ಕುಟುಂಬಕ್ಕೆ ನೆರವು ನೀಡದ ಸರ್ಕಾರ, ಒಬ್ಬ ಪಕ್ಷದ ರೌಡಿ ಸತ್ತಾಗ ಅದನ್ನು ಮಾಧ್ಯಮಗಳ ಮೂಲಕ ವ್ಯವಸ್ಥಿತವಾಗಿ ವಿಜೃಂಭಿಸಿ ಹಣದ ಹೊಳೆಯನ್ನೆ ಹರಿಸಿ ಪ್ರಚಾರ ಪಡೆಯುವಂತಾಯಿತು. ಯಾವ ರೌಡಿಯೂ ಅಲ್ಲದ ಬಡಪಾಯಿ ದಲಿತನ ಜೀವ ಇದೇ ಪುಂಡರ ಕೈಯಿಂದ ಹೋದಾಗ ಒಂದು ಬಿಡಿಗಾಸು ಬಿಚ್ಚಲಿಲ್ಲ. ಮಂತ್ರಿ, ಶಾಸಕರು ಆ ಮನೆಗೆ ಭೇಟಿ ಕೊಡಲಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಥಳೀಯ ನಾಯಕರೊಂದಿಗೆ ಭೇಟಿ ಮಾಡಿ ಸಾಂತ್ವನ ಹೇಳಿ ಹಣಕಾಸಿನ ನೆರವು ನೀಡಿದ್ದರು. ಸರ್ಕಾರದಿಂದ ವಿಶೇಷ ಪ್ರಕರಣದಡಿ ನೆರವು ಕೊಡಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದರು. ಆದರೆ ಸರ್ಕಾರ ಯಾವ ನೆರವನ್ನೂ ನೀಡಿಲ್ಲ. ಹುತಾತ್ಮ ಯೋಧನ ಕುಟುಂಬಕ್ಕೂ ಸರ್ಕಾರ ನೆರವು ನೀಡಿಲ್ಲ. ಅಷ್ಟು ಮನುಷ್ಯತ್ವ ಹೀನ ಸರ್ಕಾರ ನಮ್ಮದು.

ಇದೇ ಸಂಘಪರಿವಾರದವರ ಮಾತು ಕೇಳಿ ಚರ್ಚ್ ಮೇಲೆ ದಾಳಿ ಮಾಡಿದವರು, ಮುಸ್ಲಿಮರ ಮೇಲೆ ದಾಳಿ ಮಾಡಿದವರು ಜೈಲಿನಲ್ಲಿ ಕಂಬಿಗಳ ಹಿಂದೆ ಬಂಧಿಯಾಗಿರವಾಗ ಅವರ ಕುಟುಂಬವನ್ನು ಕಣ್ಣೆತ್ತಿಯೂ ನೋಡದವರು ಸಂಘ ಪರಿವಾರದವರು.  ಹರ್ಷನ ಬೂದಿ ಹಿಡಿದ ಕಳ್ಳಸ್ವಾಮಿಯೊಬ್ಬ ಮುಸ್ಲಿಮರಿಂದ ಯಾವುದೇ ವಸ್ತು ಪಡೆಯಬಾರದು ಎಂದು ಜನರಿಂದ ಪ್ರತಿಜ್ಞೆ ಮಾಡಿಸಿದ್ದ. ಆದರೆ ಆತನಿಗೆ ಬೆಳ್ತಂಗಡಿಯ ದಿನೇಶನ ಕೊಲೆಯ ಸುದ್ದಿ ತಲುಪಲೇ ಇಲ್ಲ. ಇಂತಹ ಅನಾಚಾರಿಗಳಿಂದ ಹಿಂದು ಧರ್ಮಕ್ಕೆ ಅವಮಾನ.

ಯಾಕೆ ಈ ದೇಶದ ಮೂಲನಿವಾಸಿಗಳಾದ ದಲಿತರು ಮನುಷ್ಯರಲ್ಲವೇ? ಅವರಿಗೂ ಬದುಕುವ ಅರ್ಹತೆ ಇಲ್ಲವೇ? ಪರೇಶ್ ಮೇಸ್ತ ಎಂಬ ಇದೇ ಸಂಘಪರಿವಾರದ ಯುವಕನ ಕೊಲೆ ಆದಾಗಲೂ ಬಾಯಿಬಿಡದವರು, ಒಬ್ಬ ಪ್ರಭಾವಿ ರಾಜಕೀಯ ವ್ಯಕ್ತಿಯ ಹುದ್ದೆ ಉಳಿಸುವ ಸಲುವಾಗಿ ರೌಡಿಶೀಟರ್ ಕೊಲೆಯನ್ನು ದೇಶಭಕ್ತನ ಕೊಲೆ ಎಂದು ಜನರ ಮುಂದೆ ಬಿಂಬಿಸಿದ್ದು ನಮ್ಮ ನಾಡಿನ ದುರಂತವೇ ಸರಿ. ಇವರ ಪ್ರಕಾರ ಬೇರೆಯವರ ಜೀವಕ್ಕೆ ಬೆಲೆ ಇಲ್ಲ. ನಮ್ಮವರೇ ಚುಚ್ಚಿದರೆ ಹೂವು, ಇನ್ನೊಬ್ಬರು ಚುಚ್ಚಿದರೆ ಮುಳ್ಳು ಅನ್ನುವಂತಿದೆ ಈ ಸಂಘಿಗಳ ಆಟ.

ಅಂದರೆ ಈ ದೇಶದಲ್ಲಿ ನಡೆಯುವ ಕೊಲೆ ನಮ್ಮವರೇ ಮಾಡಿದರೆ ಕ್ಷಮೆ ಇದೆ. ನಮ್ಮದೇ ದೇಶದ ಇನ್ನೊಂದು ಧರ್ಮಿಯರು ಮಾಡಿದರೆ ಮಾತ್ರ ಅದು ಅಕ್ಷಮ್ಯ ಅನ್ನುವ ಪರಿಸ್ಥಿತಿಗೆ ದೇಶ ಬಂದು ನಿಂತಿದೆ. ದೇಶಕ್ಕೆ ಶಿಕ್ಷಣ ಬಹಳ ಮುಖ್ಯ. ಜೊತೆಗೆ ಯಾವ ರೀತಿಯ ಶಿಕ್ಷಣ ಕೊಡಬೇಕು ಅನ್ನೋದು ಮಕ್ಕಳನ್ನು ಹೆತ್ತವರೇ ನಿರ್ಧರಿಸಬೇಕು. ಬರೀ ಕೋಮುವಾದವನ್ನೇ ಉಣಬಡಿಸುವ ಧರ್ಮಾಂಧರಿಂದ ನಮ್ಮ ಮಕ್ಕಳನ್ನು ರಕ್ಷಣೆ ಮಾಡಬೇಕು ಇಲ್ಲದಿದ್ದರೆ ಬಡವರ ಮಕ್ಕಳ ಭವಿಷ್ಯ ಜೈಲಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕಾಣಬೇಕಾಗುತ್ತದೆ.

Image
ಉದಯಪುರ ಕನ್ನಯ್ಯಲಾಲ್‌  ಹಂತಕ ಬಿಜೆಪಿಯ ನಾಯಕರ ಜೊತೆ
ಉದಯಪುರದ ಕನ್ನಯ್ಯಲಾಲ್‌ ಹಂತಕ ಬಿಜೆಪಿಯ ನಾಯಕರ ಜೊತೆ

ಹೌದು, ಒಂದು ಕಾಲದಲ್ಲಿ ಕರಾವಳಿಯನ್ನು ಬಂದರು ನಗರವನ್ನಾಗಿಸಿ ವ್ಯಾಪಾರ ವಹಿವಾಟನ್ನು ನಿರ್ವಹಿಸಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಉಪಯೋಗಿಸಿದರೆ, ಇಂದು ಅದೇ ಕರಾವಳಿಯನ್ನು ಕೋಮುಗಲಭೆಯ ತವರೂರನ್ನಾಗಿಸಲು ಹೊರಟಿದ್ದಾರೆ. ಸದಾ ಮುಸ್ಲಿಂ ಮೇಲೆ ದ್ವೇಷ ಕಾರುವಂತೆ ಪ್ರಜಾಪ್ರಭುತ್ವದ 4ನೆಯ ಅಂಗವನ್ನು ಕ್ರೂರವಾಗಿ ಬಳಸಿಕೊಳ್ಳುತ್ತಿದ್ದಾರೆ.

ಕೋಮುವಾದದ ಅಮಲು ಪದಾರ್ಥವನ್ನು ತಿಂದ ಅನೇಕ ಕರಾವಳಿಯ ಯುವಕರು ತಾವು ಯಾರಿಗೆ ಬೈತಾ ಇದ್ದೇವೆ ಅನ್ನೋದೇ ಗೊತ್ತಿರದೇ, ಈ ದೇಶದ ಪ್ರಥಮ ಪ್ರಧಾನಿಯನ್ನು ಕೂಡ ನಿಂದಿಸುವ ತನಕ ಹೋಗಿಬಿಟ್ಟಿದ್ದಾರೆ.

ನೆಮ್ಮದಿಯ ವಿಚಾರವೆಂದರೆ ದೇಶಭಕ್ತ ಪಕ್ಷದ ಅಸಲಿ ಮುಖ ದೇಶದ ಜನರಿಗೆ ಪರಿಚಯವಾಗುತ್ತಿದೆ. ಉದಯಪುರದ ಕನ್ನಯ್ಯಲಾಲ್‌ನ ಕೊಲೆಗಾರರು ಸ್ಥಳೀಯ ಬಿಜೆಪಿ ಘಟಕದೊಂದಿಗೆ ಸಂಬಂಧ ಇಟ್ಟುಕೊಂಡವರು. ಅದೇ ರೀತಿ ಜಮ್ಮುವಿನಲ್ಲಿ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಲಷ್ಕರ್‌ ಎ ತೊಯ್ಬಾದ ಉಗ್ರ ಕೂಡಾ ಬಿಜೆಪಿಯ ಸದಸ್ಯ, ಜಮ್ಮು ಐಟಿ ಸೆಲ್‌ನ ಮುಖ್ಯಸ್ಥನಾಗಿದ್ದ ಎಂಬ ಸುದ್ದಿ ಬಯಲಾಗುತ್ತಿದ್ದಂತೆ ಸಂಘಿಗಳ ಧ್ವನಿ ಉಡುಗಿ ಹೋಗಿದೆ. ಸತ್ಯ ಯಾವತ್ತಿದ್ದರೂ ಬಯಲಾಗಲೇಬೇಕು, ಆ ಕಾಲ ಸಮೀಪಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್