ಮಕ್ಕಳ ದಿನ | ನಮ್ಮನ್ನು ನಾವು ಅರಿಯುವುದು ಎಷ್ಟು ಮುಖ್ಯವೋ, ಮಗುವಿನ ಮನಸ್ಸನ್ನು ತಿಳಿಯುವುದು ಅಷ್ಟೇ ಮುಖ್ಯ

ಮಕ್ಕಳ ದಿನಾಚರಣೆ

ಮಕ್ಕಳ ಮುಂದೆ ಹೇಗಿರಬೇಕು? ಏನು ಮಾತನಾಡಬೇಕು? ಎಂಬ ಮಾತುಗಳನ್ನು ಅರಿದವರು ಹಲ ಬಗೆಯಲ್ಲಿ ಹೇಳಿದರೂ ವೈಯಕ್ತಿಕ ಬದುಕಿನಲ್ಲಿ ಅದು ಸಾಧ್ಯವಾಗದೇ ಹೋಗುತ್ತಿದೆ. ಸೋಗಿನ ಮತ್ತು ಮುಖವಾಡಗಳನ್ನು ಧರಿಸಿ ಅವರ ಮುಂದೆ ವರ್ತಿಸುವುದು ಆಗದ ಮಾತು. ನಮ್ಮನ್ನು ಅರಿಯುವುದು ಎಷ್ಟು ಮುಖ್ಯವೋ ಮಗುವನ್ನು ತಿಳಿಯುವುದು ಅಷ್ಟೇ ಮುಖ್ಯ.

ಯಾಕೋ ಗೊತ್ತಿಲ್ಲ

Eedina App

ನನ್ನ  ಅಪ್ಪ ಅಷ್ಟೆತ್ರ
ನನ್ನ ಅಮ್ಮ ಇಷ್ಟೆತ್ರ
ನಾನು ಮಾತ್ರ ಇಷ್ಟೇ ಎತ್ರ, ಯಾಕೋ ಗೊತ್ತಿಲ್ಲ.

ಮೀಸೆ ಬಂದಿದೆ ಅಪ್ಪನಿಗೆ
ಉದ್ದ ಜಡೆಯಿದೆ ಅಮ್ಮನಿಗೆ
ನನಗೆ ಮಾತ್ರ ಎರಡೂ ಇಲ್ಲ, ಯಾಕೋ ಗೊತ್ತಿಲ್ಲ.

AV Eye Hospital ad

ಕೋಟು ತೊಡುವನು ನನ್ನಪ್ಪ
ಸೀರೆ ಉಡುವಳು ನನ್ನಮ್ಮ
ನನಗೆ ಮಾತ್ರ ಅಂಗೀ ಚಡ್ಡಿ, ಯಾಕೋ ಗೊತ್ತಿಲ್ಲ.

ಆಫೀಸ್ ಕೆಲಸವು ಅಪ್ಪನಿಗೆ
ಅಡುಗೆಯ ಕೆಲಸವು ಅಮ್ಮನಿಗೆ
ನನಗೆ ಮಾತ್ರ ಸಾಲೆಯ ಕೆಲಸ, ಯಾಕೋ ಗೊತ್ತಿಲ್ಲ.

ನಸ್ಯವ ಸೇದುವ ನಮ್ಮಜ್ಜ
ತಂಬುಲ ತಿಂಬಳು ನಮ್ಮಜ್ಜಿ

ಆದರೆ ನನಗವು ಎರಡೂ ಇಲ್ಲ, ಯಾಕೋ ಗೊತ್ತಿಲ್ಲ. (ಕವಿ : ಪಳಕಳ ಸೀತಾರಾಮ ಭಟ್ಟ)

(ಆಕರ: ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಸಂ- ಬೋಳುವಾರು) ಮಕ್ಕಳನ್ನು ಅರ್ಥೈಸುವುದು ಅವರ ಬಗೆಗಿನ ಪದ್ಯಗಳನ್ನು  ಅರಿಯುವುದು ಎರಡು ಕಷ್ಟದ ಕೆಲಸವೆ. ಮಗು ತನ್ನ ಆರಂಭದ ಬದುಕಿನ ದಿನಗಳನ್ನು ಹೇಗೆ ಗ್ರಹಿಸುತ್ತದೆ? ತಾನು ಮತ್ತು ಮನೆ ; ತಾನು ಮತ್ತು ಗೆಳೆಯರ ಗುಂಪು ಹೀಗೆ ಯೋಚಿಸಿದರೂ ತನ್ನ ತನಕ್ಕಾಗಿ ಪರಿತಪಿಸುವ ತೀವ್ರತೆಗಳು ಇದ್ದೆ ಇರಬಲ್ಲವು. ರಾಜಿಯ ಗುಣ ಅವರಲ್ಲಿ ಎರಡು ಬಗೆಯಲ್ಲಿ ಕೆಲಸ ಮಾಡುತ್ತದೆ ಅನಿಸುತ್ತದೆ.

ಒಂದು, ತನ್ನ ಸೋಲು ಯಾರಿಗೂ ಅರಿವಾಗದಿರಲಿ ಎಂದು ಅನ್ಯರು ನಂಬಿಸಿದ್ದರಿಂದ. ಇದನ್ನು ಹಿರಿಯರು ಮಾಡುವ ಕೆಲಸ. ಎರಡು, ಸಮವಯಸ್ಕರಲ್ಲಿಯೇ ನಡೆಯುವ ರಾಜಿತನಗಳು. ಇದು ತಮ್ಮ ಗೆಳೆತನ ವನ್ನು ಮುಂದುವರೆಸುವ ಗುಣ. ಇವೆರಡೂ ಅವರ ನೆನಪುಗಳನ್ನು ಕಾಪಿಡುವ ಹಂತಗಳೇ. ಮಗುವನ್ನು ಬೆಳೆಸುವ, ಆಧರಿಸುವ ಗುಣಗಳು ಹಲವು ಬಾರಿ ವಿಘಟಣೆಯಿಂದಲೇ ಕೂಡಿರುತ್ತವೆ.

ಮಕ್ಕಳ ಮುಂದೆ ಹೇಗಿರಬೇಕು? ಏನು ಮಾತನಾಡಬೇಕು? ಎಂಬ ಮಾತುಗಳನ್ನು ಅರಿದವರು ಹಲ ಬಗೆಯಲ್ಲಿ ಹೇಳಿದರೂ ವೈಯಕ್ತಿಕ ಬದುಕಿನಲ್ಲಿ ಅದು ಸಾಧ್ಯವಾಗದೇ ಹೋಗುತ್ತಿದೆ. ಸೋಗಿನ ಮತ್ತು ಮುಖವಾಡಗಳನ್ನು ಧರಿಸಿ ಅವರ ಮುಂದೆ ವರ್ತಿಸುವುದು ಆಗದ ಮಾತು. ಹಾಗಾಗಿಯೇ ನಮ್ಮನ್ನು ಅರಿಯುವುದು ಎಷ್ಟು ಮುಖ್ಯವೋ ಮಗುವನ್ನು ತಿಳಿಯುವುದು ಅಷ್ಟೇ ಮುಖ್ಯ. ಕಳೆದ ಹಲವು ವರ್ಷಗಳಿಂದ ಮಗು-ಭಾಷೆ-ಮಾಧ್ಯಮ-ಕುಟುಂಬ ಇವುಗಳ ಬೆನ್ನಲ್ಲಿ ಸಾಕು ಬೇಕಾದಷ್ಟು ಚರ್ಚೆಮಾಡಲಾಗುತ್ತಿದೆ. ತಪ್ಪಲ್ಲ ಆದರೆ ಮಗುವಿನ ತನ್ನತನವನ್ನು ನಾವು ಕಸಿದು ಮಾತನಾಡಲಾಗುತ್ತಿದೆ. ಹಳ್ಳಿಯ ಹುಡುಗನೊಬ್ಬನಿಗೆ ಸಿಗಬೇಕಾದ ಸ್ವತಂತ್ರದ ಬದುಕು ಕೂಡ ಇಂದು ಮಾಯವಾಗುತ್ತಿದೆ. ಮಗುವಿನ ಬದುಕನ್ನು  ಕಲಿಕೆಯ ದೃಷ್ಟಿಯಿಂದ ಸದಾ ಭಿನ್ನತೆಯ ಆವರಣದಲ್ಲೇ ಕಾಣಲಾಗುತ್ತಿದೆ. ಹಳ್ಳಿಯ ಹುಡುಗನೆಂದರೆ ಕನ್ನಡ ಮಾಧ್ಯಮ: ನಗರದ ಹುಡುಗನೆಂದರೆ ಇಂಗ್ಲೀಷ್ ಮಾಧ್ಯಮ ಹೀಗೆ ಹತ್ತು ಹಲವು ರೀತಿಯಲ್ಲಿ ಅವನಿಗೆ ಗೊತ್ತಿಲ್ಲದಂತೆ ಸಮಸ್ಯೆ, ಸವಾಲುಗಳನ್ನು ಸೃಷ್ಟಿಮಾಡಲಾಗುತ್ತಿದೆ. ಕನ್ನಡದ ಕಂದನಿಗೆ ಬೇಕಿರುವುದು ನೀಜವಾಗಿಯೂ ಏನು? ಎಂಬ ಪ್ರಶ್ನೆಯೇ ಮುಖ್ಯವಾಗುತ್ತಿಲ್ಲವೇ ತಿಳಿಯುತ್ತಿಲ್ಲ.

ಮಗುವಿಗೆ ಸದ್ಯಕ್ಕೆ ಇರುವ ಸವಾಲು ತನ್ನ ಮೂಲಕವೇ ನನ್ನ ಬದುಕು ಎಂಬುದಲ್ಲ ಬದಲಿಗೆ ಅನ್ಯರ ಮೂಲಕ ನನ್ನಬದುಕೇ ಎಂಬುದು. ಈ ಮೂಲಕ ಸಂಪೂರ್ಣವಾಗಿ ತನಗಿರಬಹುದಾದ ‘ಗುರುತ’ನ್ನು  ಕಳೆದುಕೊಂಡಿದ್ದಾನೆ. ಇಷ್ಟಿದ್ದರೂ ಅವರು ಏನನ್ನು ಓದಬೇಕು? ಯಾವ ಭಾಷೆಯಲ್ಲಿ ಓದಬೇಕು ಎಂಬುದು ಇಂದಿಗೂ ದೊಡ್ಡ ಪ್ರಶ್ನೆಯೇ ಆಗಿದೆ. ಆಧುನಿಕ ಎಂದು ಕರೆಯಬಹುದಾದ ಪರಿಕಲ್ಪನೆಯ ಬೆನ್ನಲ್ಲಿ ಮಗುವಿನ ಮನಸ್ಸನ್ನು ಸಿದ್ಧಗೊಳಿಸಲಾಗುತ್ತಿದೆ.

ಮಕ್ಕಳ ಕವಿ ಪಳಕಳ ಸೀತಾರಾಮ ಭಟ್ಟ ದಂಪತಿ
ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ಟ ದಂಪತಿ

ಸಹಜವಾಗಿಯೇ ವಸಾಹತು ಭಾಷೆಯಾದ ಇಂಗ್ಲೀಷ್ ಭಾಷೆಯನ್ನು ಮುಂದಿಟ್ಟಿಕೊಂಡಿರುವುದು ತಿಳಿದ ಸಂಗತಿ.ಈ ಬಗ್ಗೆ ಹೆಚ್ಚು ಚರ್ಚೆಗಳು ನಡೆದಿವೆ ಇರಲಿ. ಹಳ್ಳಿಯ ಮಗುವನ್ನು ಹಿಂದೆ ಅರಿಯುವುದಕ್ಕೂ ಈಗ ಅರಿಯುವುದಕ್ಕೂ ವ್ಯತ್ಯಾಸಗಳು ಗೋಚರವಾಗುತ್ತಿವೆ. ಅವನೂ ಕೂಡ ತನಗಿರಬಹುದಾದ ಸ್ವೇಚ್ಛೆಯ ಸಾಧ್ಯತೆಗಳನ್ನು ಕಳೆದುಕೊಳ್ಳುವ ಹಾದಿಯಲ್ಲಿದ್ದಾನೆ. ಹೀಗಿದ್ದಾಗ ಮಕ್ಕಳನ್ನು ಮುಕ್ತವಾಗಿ ಸಿದ್ಧಗೊಳಿಸುವುದು ಹೇಗೆ? ಅದು ಭಾಷೆಯ ಮೂಲಕ, ಸಾಹಿತ್ಯ, ಸಿನೆಮಾಗಳ ಆಗಬಹುದೇ ಎಂಬ ಮಾತುಗಳು ಕೇಳಿಬರುತ್ತಿವೆ. ಆಟದ ಅಂಗಳಗಳು ನಿಜವಾಗಿಯೂ ಮುಕ್ತವಾಗಿ ಇವೆಯೇ? ಅಥವಾ ಅವು ಕೂಡ ವಾಣಿಜ್ಯ ಸ್ವರೂಪವನ್ನು ಪಡೆದುಕೊಳ್ಳಲು ಹವಣಿಸುತ್ತಿವೆಯಾ? ಅರಿಯಬೇಕಾಗಿದೆ.

ಮಕ್ಕಳನ್ನು ಅವರ ನಿಜ ಪ್ರತಿಭೆಯನ್ನು ಅರಿಯಲು ಇತ್ತೀಚೆಗೆ ಜನಪ್ರಿಯ ಮಾದರಿಗಳ ಕಡೆ ಧಾವಿಸುತ್ತಿರುವುದು ತಿಳಿದ ಸಂಗತಿ. ಕಿರು ನಾಟಕ, ಹಾಡು, ನೃತ್ಯ ಮುಂತಾದವುಗಳ ಬೆನ್ನಲ್ಲಿ ಅವರನ್ನು ಮುನ್ನೆಲೆಗೆ ತರುವ ಯತ್ನಗಳು ನಡೆಯುತ್ತಿವೆ. ಆದರೆ ಇದು ಕೂಡ ಒಂದು ಬಗೆಯಲ್ಲಿ ಕೇಂದ್ರೀಕೃತಗೊಂಡ ಯೋಜನೆಗಳೇ ಅಲ್ಲವೇ. ಸ್ಪರ್ದೆಯ ಹೆಸರಲ್ಲಿ ಅವರನ್ನು ಕುಗ್ಗಿಸುವ ಸಂದರ್ಭಗಳು ಇರಬಲ್ಲವು. ಈ ಬೆಳವಣಿಗೆಗಳ ಅಂತರರ್ಥವನ್ನು ಪೋಷಕರು ಮೊದಲು ಅರಿಯಬೇಕು. ಏಕೆಂದರೆ ಅವರು ಮಗುವನ್ನು ಬೆಳೆಸುವುದೇ ಜ್ಞಾನದ ಮತ್ತು ಉದ್ಯೋಗದ ಹಿನ್ನಲೆಯಲ್ಲಿ. ಈ ಧೋರಣೆಗಳು ಪೋಷಕರಲ್ಲಿ ಎಲ್ಲಿಯತನಕ ಇರಬಲ್ಲವೋ ಮಗು ತನ್ನದೇ ಹಾದಿಯನ್ನು ಕಂಡುಕೊಳ್ಳುಲು ಸಾಧ್ಯವಾಗಲಾರದು. ಅಂದರೆ ಪೋಷಕರ ತಿಳಿವಳಿಕೆ ಮಗುವಿನ ವ್ಯಕ್ತಿತ್ವದ ಸರಣಿಯಲ್ಲಯೇ ಕೆಲಸ ಮಾಡಿದರೆ ಉತ್ತಮ. ಇದು ಕಷ್ಟದ ಹಾದಿಯೆಂದು ತಿಳಿದ ಸಂಗತಿ. ಈ ಶತಮಾನದ ಕುಟುಂಬ ವ್ಯವಸ್ಥಯ ಛಿದ್ರತೆಗಳನ್ನು ಗಮನಿಸಿದರೂ ಅರಿವಾದೀತು. ಕೂಡೋಟ್ಟಿನ ಬದುಕು ದುಸ್ತರವೆಂಬಂತೆ ಕಾಣುತ್ತಿರುವ ಸಂದರ್ಭದಲ್ಲಿ ಮಗುವಿನ ಮನಸ್ಸು ಅಷ್ಟೇ ಗೊಂದಲಮಯವಾಗಿದೆ.

ಇಂದು ಮಕ್ಕಳ ಸಾಹಿತ್ಯ ಎಂಬುದು ಇದೆಯೇ?: ಈ ಬಗೆಯ ಪ್ರಶ್ನೆಗಳು ಯರಿಗಾದರೂ ಗಾಬರಿ ಹುಟ್ಟಿಸುತ್ತವೆ. ನಿಜವಾಗಲೂ ಇಂದು ಎಂಥ ಮಕ್ಕಳ ಸಾಹಿತ್ಯ ಬೇಕು? ಮಕ್ಕಳ ಪದ್ಯಗಳನ್ನು ಯಾರು ಹೇಗೆ ಓದುತ್ತಾರೆ? ಆ ಪದ್ಯಗಳಾದರೂ ಹೇಗಿರಬೇಕು? ಮುಂತಾದ ಆಲೋಚನಾ ಕ್ರಮಗಳು ನಮ್ಮ ಮುಂದಿವೆ. ಕನ್ನಡಕ್ಕೆ  ಮಕ್ಕಳ ಸಾಹಿತ್ಯ ಚರಿತ್ರೆಯೋಂದು ಇದ್ದರೆ ಅದನ್ನು ನಾವು ಜನಪದದ ಜೋಗುಳ ಗೀತೆಗಳಿಂದಲೇ ಆರಂಭ ಮಾಡಬೇಕಾಗುತ್ತದೆ. ಮಗುವಿಗೆ ತನ್ನ ಮನದಲ್ಲಿ ಅಸ್ಮಿತೆಯಾಗಿ ಉಳಿದಿರುವುದು ತಾಯಿಯೇ. ಈ ನೆಲೆದ ಸುತ್ತಣ ಬದುಕು ಜನಪದ ಆಯಾಮಗಳಿಂದಲೇ ಆವರಿಸಿದೆ. ಈ ಮಾತು ಇಂದಿಗೆ ಅನ್ವಯಿಸಲು ಆಗದು ಇರಲಿ. ಮಗು ಶಾಲೆಯನ್ನು ಸೇರುವುದಕ್ಕೂ ಮುನ್ನವೇ ಹೊರ ಜಗತ್ತಿನಲ್ಲಿ ಒಂದು ಚೌಕಟ್ಟನ್ನು ನಿರ್ಮಿಸಿಕೊಳ್ಳಬಲ್ಲ. ಈಗಿನ ಮಗುವಿಗೆ ಇದು ಸಾಧ್ಯವಾಗುತ್ತಿಲ್ಲ. ಕಾರಣ ಇಂದು ಎದುರಿಸುತ್ತಿರುವ ಶಿಕ್ಷಣದ ಭಿನ್ನತೆಗಳು.

ಮಗುವಿಗಾಗಿಯೇ ನಾವು ಎಂಥ ಕವಿತೆಗಳನ್ನು ಇಡಬೇಕು ಎಂಬುದನ್ನು ಆಗಲೇ ಬಂತು. ಹಳ್ಳಿಯ ವಿದ್ಯಾಥಿಯೊಬ್ಬ ಪ್ರಥಮ ಭಾಷೆಯಲ್ಲಿ ಪಂಜೆ, ರಾಜರತ್ನಂ ಮುಂತಾದವರನ್ನು ಓದುವ ಅವಕಾಶ ಸಿಗಬಹುದು. ಇಂಗ್ಲೀಷ್‌ ಮಾಧ್ಯಮದ  ಕನ್ನಡದ ಕಂದನಿಗೆ ಅವರಿಲ್ಲದೇ ಇರಬಹುದು. ಇದೊಂದು ದೊಡ್ಡ ಸವಾಲು ಆಗಿದೆ. ಆದರೂ ಸಾಧ್ಯತೆಗಳಂತೂ ಇದ್ದೇ ಇವೆ ಆ ಪ್ರಯತ್ನದಲ್ಲಿ ನಮ್ಮ ಕವಿಗಳು ಇದ್ದಾರೆ. ಇಂದು ‘ಕನ್ನಡದ ಮಕ್ಕಳಲ್ಲಾ ಒಂದಾಗಿ ಬನ್ನಿ’ ಎಂಬ ನುಡಿಗಟ್ಟೆ ವ್ಯಂಗ್ಯವಾಗಿ ಕಾಣುತ್ತಿದೆ.

ಆಧುನಿಕ ಕನ್ನಡ ಪರಂಪರೆಯಲ್ಲಿ ಮಕ್ಕಳ ಸಾಹಿತ್ಯ ಭರದಿಂದಲೇ ನಡೆಯಿತು. ವಸಾಹತು ಶಿಕ್ಷಣವು ಬೇರು ಬಿಡುತ್ತಿದ್ದರು ಕನ್ನಡ ತನ್ನ ಅಸ್ಮಿತೆಯನ್ನು ಬಿಟ್ಟುಕೊಡುತ್ತಿರಲಿಲ್ಲ. ಗಂಭೀರ ಸಾಹಿತ್ಯ ಬೆಳೆದು ಬರುತ್ತಿದ್ದರೂ ಮಕ್ಕಳ ಪದ್ಯಗಳು ತನ್ನದೇ ಬಗೆಯಲ್ಲಿ ಬಂದಿವೆ. ಪಂಜೆ, ರಾಜರತ್ನಂ, ಶಿವರಾಮ ಕಾರಂತ, ವೀಸಿ ಮುಂತಾದ ಹಿರಿಯರು ಮಗುವಿನ ಮನಸ್ಸುಗಳನ್ನು ಅರ್ಥಮಾಡಿಕೊಂಡಿದ್ದರು. ಇಂದಿಗೂ ಅವರ ರಚನೆಗಳು ಜನಪ್ರಿಯ ಮಾದರಿಯಲ್ಲಿವೆ. ವಿದ್ವಾಂಸ ತನವನ್ನು ಹಲವು ಬಾರಿ ಇವರು ಪಕ್ಕಕ್ಕೆ ಸರಿಸಿದ್ದರು. ಮಗುವಿನ ಮನಸ್ಸಿಗೆ ಬೇಕಾದ ಭಾಷಿಕ ಲಯಗಾರಿಕೆಯನ್ನು ಇವರ ರಚನೆಗಳು ಕಂಡುಕೊಂಡಿದ್ದವು. ಕನ್ನಡ ನುಡಿಗಟ್ಟುಗಳನ್ನು  ಸ್ವ ಭಾಷಿಕ ವಿನ್ಯಾಸಕ್ಕೆ ಒಗ್ಗಿಸಿಕೊಂಡಿದ್ದರು. ಮೇಲೆ ಉದಾಹರಿಸಿರುವ ಹಿರಿಯರಾದ ಪಳಕಳ ಅವರ ಪದ್ಯವನ್ನು ಗಮನಿಸಿದರೂ ಅರಿವಾದೀತು. ಮಕ್ಕಳ ಪದ್ಯ ಸಾಹಿತ್ಯಕ್ಕೆ ಬೇಕಾದ ವಸ್ತು ಕೂಡ ಅಂದಿಗೆ ವಿಸ್ತಾರತೆಯನ್ನು ಪಡೆದುಕೊಂಡಿತ್ತು. ಇವೆ ಮಾತುಗಳನ್ನು ಈಗ ಮುಂದುವರಿಸಲು ಆಗುವುದಿಲ್ಲ.

ವಿಜ್ಞಾನ, ತಂತ್ರಜ್ಞಾನದ ಅತಿಯಾದ ಬೆಳವಣಿಗೆ: ಮಾರುಕಟ್ಟೆಯ ಪಲ್ಲಟಗಳು: ಅವುಗಳಲ್ಲಿ ಹೊರಬರುತ್ತಿರುವ ಪರಿಕರಗಳು ಮಗುವಿನ ಆಯ್ಕೆಗೆ ಅಡ್ಡಬರುತ್ತಲೇ ಇವೆ. ಕಲಿಕಾ ವಿಧಾನಗಳೇ ಇಂದು ಮಾರುಕಟ್ಟೆಯ ತೀರ್ಮಾನಗಳ ಮೇಲೆ ಅವಲಂಬಿತವಾಗಿರುವಾಗ ಮಕ್ಕಳ ಸಾಹಿತ್ಯದ ಗುರುತುಗಳನ್ನು ಹಿಡಿದು ನಿಲ್ಲಿಸುವುದು ಕಷ್ಟದ ಸಂಗತಿ. ಜನಪ್ರಿಯ ಮಾಧ್ಯಮಗಳಾದ ದೂರದರ್ಶನ, ಸಿನೆಮಾ, ಮುಂತಾದ ಮಾದರಿಗಳಲ್ಲಿ ಮಕ್ಕಳ ಸಾಹಿತ್ಯವನ್ನು ನಿಲ್ಲಿಸಲು ಪ್ರಯತ್ನಗಳು ನಡೆಯುತ್ತಿದ್ದರೂ ಅವು ಕೂಡ ಸೀಮಿತ ವಲಯಕ್ಕೆ ಬರುತ್ತಿವೆ. ಇಂಥ ಸಮಯಗಳಲ್ಲಿ ಕನ್ನಡದ ಮಕ್ಕಳ ಪದ್ಯಗಳು ಕೇವಲ ಪತ್ರಿಕಾ ಮಾಧ್ಯಮಗಳಲ್ಲಿ ಬಂದರೆ ಸಾಕೆ. ಮಕ್ಕಳ ಪದ್ಯಗಳು, ಚಿತ್ರಗಳು ಕೇವಲ ಬಹುಮಾನ, ಪ್ರಶಸ್ತಿಗಳಿಗೆ ಸೀಮಿತಗೊಂಡರೆ ಹೇಗೆ? 

ಮಕ್ಕಳ ದೃಷ್ಟಿಯಿಂದ ಬರೆಯುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಆದರೆ ಪರಂಪರೆಯ ಕೊಂಡಿಗಳನ್ನು ಬೆಸೆಯಲು ಆಗುತ್ತಿಲ್ಲ. ಜನಪದ ಮತ್ತು ನಂತರದ ಕನ್ನಡ ಕವಿಗಳ ಲಯಗಾರಿಕೆಯನ್ನು ಇಂದು ಸರಿಯಾಗಿ ಹಿಡಿಯಲಾಗುತ್ತಿಲ್ಲ. ವಸ್ತುವಿನ ಹಿನ್ನಲೆ ಮತ್ತು ಅದರ ತಾತ್ವಿಕತೆಯನ್ನು ಈ ಕಾಲಮಾನಕ್ಕೆ ಒಗ್ಗಿಸಿಕೊಳ್ಳುವುದು ಸರಿಯಾದರು, ತಲುಪಿಸುವ ಮಾದರಿಗಳೇನು? ಈಬಗೆಯ ಸಮಸ್ಯಯ ಬೇರುಗಳನ್ನು ಹುಡುಕಬೇಕಾಗಿದೆ. ಮಕ್ಕಳ ಪದ್ಯ ಎಂದಿಗೂ ಮಗುವಿನ ಮನಸ್ಸನ್ನು ಸೆಳೆಯುವುದು ಅದರ ಲಯಗಾರಿಕೆಯಿಂದಲೇ ಎಂಬುದು ಹಳೆಯ ಮಾತು, ಸತ್ಯವೂ ಕೂಡ. ಪಳಕಳ ಅವರು ಬರೆಯುವ ವೇಳೆಗೆ ಮಕ್ಕಳ ಪದ್ಯಗಳಲ್ಲಿ ಇಂಗ್ಲೀಷ್ ನುಡಿಗಳು ನುಗ್ಗಿದ್ದವು. ಈಗದು ಅನಿವಾರ್ಯವು ಆಗಿದೆ. ಪದ್ಯದ ಹೆಸರೆ ‘ಯಾಕೋ ಗೊತ್ತಿಲ್ಲ’. ಮಗುವಿನ ಮನಸ್ಸು ಪ್ರಶ್ನೆಯೊಂದಿಗೆ ಪ್ರಾರಂಭಗೊಂಡಿದೆ.ಅವನು ಮನುಷ್ಯನ ಜೈವಿಕ ಬೆಳವಣಿಗೆಯನ್ನು ಗಮನಿಸುವ ಪರಿಯನ್ನು ಪಳಕಳ ಕನ್ನಡ ಭಾಷೆಗಿರುವ ಲಯಗಾರಿಕೆಯನ್ನು ಅಚ್ಚುಕಟ್ಟಾಗಿ ಬಳಸಿದ್ದಾರೆ.

ಮಕ್ಕಳ ದಿನಾಚರಣೆ

ಮಕ್ಕಳ ಆರಂಭದ ಆಲೋಚನಾ ಕ್ರಮಗಳೇ ಮುಗ್ಧತೆಯಿಂದ ಕೂಡಿದ ಪ್ರಶ್ನೆಗಳಿಂದ ಕೂಡಿರುತ್ತವೆ. ಈ ಮೇಲುನೋಟಕ್ಕೆ ಅವು ಹಾಗೆ ಕಾಣಿಸಬಹುದು ಆದರೆ ಅವನು ತನ್ನ ಸುತ್ತಲ ಬದುಕನ್ನು ಕುಟುಂಬ ವಲಯದಿಂದಲೇ ಗಮನಿಸುತ್ತಾನೆ. ಅಪ್ಪ, ಅಮ್ಮರ ವರ್ತನೆಗಳು ಅವನಿಗೆ ನಿಗೂಢ ಅನಿಸಿವೆ. ನಾನೇಕೆ ಅವರಷ್ಟು ಬೆಳೆದಿಲ್ಲ ಎಂಬ ಸಹಜ ಮುಗ್ಧವಾದ ಕೇಳಿಕೆ ಅವನ ಮನಸ್ಸಿನಲ್ಲಿ ಆಗುತ್ತಿರುವ ಬದಲಾವಣೆಯನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಮಗು ನಾನು ಹೀಗೆ ಇರಬೇಕೆ ಎಂದು ಆಲೋಚಿಸುವುದು ಯಾವಾಗ ಎಂಬುದು ಅಷ್ಟು ಬೇಗ ಅರಿವಿಗೆ ಬರುವುದಿಲ್ಲ. ತನ್ನ ಎದುರಿಗೆ ಬಂದವರನ್ನು ತನ್ನದೇ ಬಗೆಯಲ್ಲಿ ನೋಡಲು ಸಾಧ್ಯ. ಅಪ್ಪನಿಗೆ ಮೀಸೆಯೇ ಯಾಕಿರಬೇಕು? ಅಮ್ಮನಿಗೆ ಉದ್ದವಾದ ಜಡೆಯೇ ಯಾಕೆ ಬೇಕು? ಎಂಬ ಅವನ ಆಲೋಚನೆಗಳು ಮುಗ್ಧವಾಗಿ ಕಂಡರೂ, ಮಗುವಿನ ಗಾಢವಾದ ಚಿಂತನಾ ಸರಣಿಯೇ ಆಗಿದೆ. ಇವರೆಡೂ ನನಗೇಕೇ ಇಲ್ಲ ಎಂಬದು ಅವನಿಗೆ ಇನ್ನೇನೋ ಕಾಡಿಸಿದೆ. ಅಂದರೆ ಮನುಷ್ಯನ ನಡಾವಳಿಗಳು ಅಂದರೆ ಕೇವಲ ಮಾತು ಮಾತ್ರ ಅಲ್ಲ. ಬದಲಿಗೆ ತನಗಿಂತ ಎತ್ತರವಾಗಿ ಬೆಳೆದಿರುವ ಅಪ್ಪ ಅಮ್ಮ ಮುಂತಾದವರು ಧರಿಸುವ ಉಡುಪುಗಳು, ಕೆಲಸ ಎಲ್ಲವೂ ಆಗಬಹುದು.

ಇದನ್ನು ಓದಿದ್ದೀರಾ? ಮಕ್ಕಳ ದಿನ | ಸಾಮಾಜಿಕ ತಲ್ಲಣಗಳ ನಡುವೆ ಎಳೆಯ ಬಾಲೆಯರು

ಈ ಪದ್ಯದಲ್ಲಿ ಪಳಕಳ ಅವರು ಬಳಸಿರುವ ಕನ್ನಡದ ಭಾಷೆ ವಯೋಮಾನಕ್ಕೆ ತಕ್ಕಂತೆ ಇದು ಎಂದು ಹೇಳಬಹುದು. ಕಾರಣ ಇಲ್ಲಿನ ಮಗು ಆಫೀಸಿಗೆ ಹೋಗುವ ಅಪ್ಪನ ಮಗ. ವ್ಯವಸಾಯದ ಹಿನ್ನೆಲೆಯ ಮಗು ಆಗಿದ್ದರೆ ಅವನು ಯೋಚಿಸುವ ಬಗೆನೇ ಭಿನ್ನ ಅಲ್ಲವೆ. ಯಾವ ಮಗುವಿಗಾದರೂ ಆರಂಭದಲ್ಲಿ ಶಾಲೆ  ಸೆರೆಮನೆಯೇ. ಕ್ರಮೇಣ ಅವರು ಅದರಲ್ಲಿ ಮಾನಸಿಕ ಗೆಳೆತನವನ್ನು ಸೃಷ್ಟಿಮಾಡಿಕೊಳ್ಳುತ್ತಾರೆ. ಅಪ್ಪನೇ ಏಕೆ ಅಫೀಸಿಗೆ ತೆರಳಬೇಕು? ಅಮ್ಮನೇಗೇಕೆ ಅಡುಗೆ ಕೆಲಸ ಎಂಬ ಮಾತುಗಳ ನಂತರ ಅವನಿಗೆ ಕಾಡುವುದು ನಾನೇಕೆ ಶಾಲೆಗೆ ಹೋಗಬೇಕು ಎಂಬುದು. ಮಕ್ಕಳ ಪದ್ಯ ಮಗುವಿನ ಮನಸ್ಸನ್ನು ಅರಿಯುವದಷ್ಟೇ ಅಲ್ಲ ಬದಲಿಗೆ ಜೀವನಶೈಲಿಯ ವಿವರಗಳನ್ನು ಕಟ್ಟುವಿಕೆ ಮುಖ್ಯ. ಪಳಕಳ ಅವರು ಮಗುವಿನ ಮನಸ್ಸು ಮೂರು ತಲೆಮಾರುಗಳನ್ನು ಗಮನಿಸುವಂತೆ ಮಾಡಿದ್ದಾರೆ. ಅವರ ಜೀವನಶೈಲಿಯನ್ನು ಅಚ್ಚುಕಟ್ಟಾದ ಲಯಗಾರಿಕೆಯಲ್ಲಿ ತಂದಿದ್ದಾರೆ. ಮಕ್ಕಳ ಪದ್ಯಕ್ಕೆ ಬೇಕಾಗಿರುವ ಪದಗಳ ಆಯ್ಕೆ, ಆ ಪದಗಳಿಗೆ ಇರುವ ಹಾಡಿನ ಶಕ್ತಿ ಪಳಕಳ ಅವರ ಪದ್ಯಕ್ಕಿದೆ. ಅವರು ಈ ಪದ್ಯದ ಪ್ರತಿ ನುಡಿಗೂ ಆರಿಸಿಕೊಂಡಿರುವ ‘ಯಾಕೋ ಗೊತ್ತಿಲ್ಲ’ ಎಂಬ ನುಡಿಗಟ್ಟು ಮಗುವಿನ ಮುಗ್ಧತೆಯನ್ನು ಅದರಾಚಿನಗಿನ ಲಹರಿಗಳನ್ನು ಒಟ್ಟಿಗೆ ತೆರೆದಿಡುವುದಕ್ಕೆ ಯತ್ನಿಸಿದೆ.  

ನಿಮಗೆ ಏನು ಅನ್ನಿಸ್ತು?
1 ವೋಟ್
eedina app