
ಸುಲಭ, ಅಡ್ಡದಾರಿಗಳನ್ನು ಬಿಟ್ಟು ನೇರವಾಗಿ ಸವಾಲಿನ ಆಯ್ಕೆಯತ್ತ ಹೊರಳಿದ್ದಾರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್. ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ನಡೆಯುತ್ತದೋ ಇಲ್ಲವೋ, ಅವರು ಮತ್ತೆ ಪ್ರಧಾನಿ ಆಗುತ್ತಾರೋ ಇಲ್ಲವೋ ಗೊತ್ತಿಲ್ಲ. ಸವಾಲನ್ನು ಬೆನ್ನತ್ತುವುದರಲ್ಲಿ ಈಗಲೂ ಕ್ರೀಡಾಪಟುವಿನ ಛಲ ಉಳಿಸಿಕೊಂಡಿದ್ದಾರೆ ಎಂಬುದಂತೂ ನಿಚ್ಚಳ
"ನಾನು ಕೊನೆಯ ಬಾಲ್ವರೆಗೂ ಆಡುತ್ತೇನೆ..."
- ಪ್ರಧಾನಿ ಪಟ್ಟದಿಂದ ಇಳಿಯಲಿದ್ದಾರೆ ಎಂದು ವಿಪಕ್ಷಗಳು ಸೃಷ್ಟಿಸಿದ್ದ ವದಂತಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೊಟ್ಟಿದ್ದ ಮಾತಿನೇಟು ಇದು. ಸೇನೆ ಸರ್ಕಾರವನ್ನು ಬೀಳಿಸುತ್ತದೆ ಎಂದಿದ್ದ ಸುದ್ದಿ, ಕೊನೆಗೆ ಮಿತ್ರಪಕ್ಷವೇ ಸರ್ಕಾರ ಬೀಳಿಸಲಿದೆ ಎಂಬಲ್ಲಿಗೆ ಬಂತು. ನಂತರ ಎಲ್ಲರೂ 'ಅವಿಶ್ವಾಸ ನಿರ್ಣಯ' ಜಪಿಸಿದರು. ಅದಕ್ಕೆ ತಕ್ಕಂತೆ ಮಾಧ್ಯಮಗಳು 'ಇಮ್ರಾನ್ ಹಿಟ್ ವಿಕೆಟ್' ಎಂದು ಬರೆಯಲು ಕಾದು ಕುಂತವು. ಆದರೆ, ಸಂಸತ್ತನ್ನು ವಿಸರ್ಜಿಸಿ ಚುನಾವಣೆಗೆ ಕರೆ ಕೊಡುವ ಮೂಲಕ ಇಮ್ರಾನ್, ಭರ್ಜರಿ ಸಿಕ್ಸರ್ ಹೊಡೆದಿದ್ದಾರೆ.
'ನಯಾ ಪಾಕಿಸ್ತಾನ'ದ ಕನಸು ಕಟ್ಟಿ ಪಾಕ್ ಪ್ರಧಾನಿ ಪಟ್ಟಕ್ಕೇರಿದ ಇಮ್ರಾನ್ ಅವರ ಆರಂಭಿಕ ದಿನಗಳು ಆರಾಮಾಗಿಯೇ ಇದ್ದವು. ನಂತರ ಶುರುವಾಗಿದ್ದು ಸಂಕಷ್ಟಗಳ ಸರಣಿ. ಸೇನೆಯ ಕಿತಾಪತಿ ಶುರುವಾಯಿತು. ಮೊದಲಿಗೆ ಬೆಂಬಲಿಸಿದ್ದ ಪಕ್ಷಗಳು ಹಿಂದೆ ಸರಿದವು. ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಬೇಕಾದ ಸನ್ನಿವೇಶ ಎದುರಾಯಿತು. ಏನೆಲ್ಲ ಆದರೂ, ರಾಜಿನಾಮೆ ಕೊಡದೆ, ಕೊನೆಯ ಬಾಲ್ವರೆಗೂ ಆಡುತ್ತೇನೆ ಎಂದದ್ದು ಇಮ್ರಾನ್ ಅವರ ತಯಾರಿಯನ್ನು ಸೂಚಿಸುತ್ತದೆ. ಕ್ರಿಕೆಟ್ ಮೈದಾನಕ್ಕೆ ಕಾಲಿಡುವ ಮುನ್ನವೂ ಹೀಗೆಯೇ ಸಂಪೂರ್ಣ ತಯಾರಿ ಮಾಡಿಕೊಂಡೇ ಬರುತ್ತಿದ್ದದ್ದು ಇಮ್ರಾನ್ ಹೆಗ್ಗಳಿಕೆ.
ಇಮ್ರಾನ್ ಕ್ರಿಕೆಟ್ ಅಂಕಣದಿಂದ ಪಾಕಿಸ್ತಾನದ ರಾಜಕೀಯ ಅಂಕಣಕ್ಕೆ ಇಳಿದದ್ದೇ ದೊಡ್ಡ ಅಚ್ಚರಿ. ಮಿಲಿಟರಿ ಹಿಡಿತ, ತಾಲಿಬಾನಿಗಳ ಅಟ್ಟಹಾಸಗಳ ನಡುವೆ ದೇಶವನ್ನು ಹೊಸದಾಗಿ ಕಟ್ಟಬೇಕೆನ್ನುವ ಆಸೆಯಿಂದ ಅಧಿಕಾರ ಹಿಡಿದವರು ಅವರು. ಆದರೆ ಆದದ್ದೇ ಬೇರೆ. ಏನಾದರೂ ಮಾಡಿ, ಇಮ್ರಾನ್ರನ್ನು ಪ್ರಧಾನಿ ಹುದ್ದೆಯಿಂದ ಕಿತ್ತೊಗೆಯಬೇಕೆಂದು ಕಾಯುತ್ತಿದ್ದ ಪ್ರತಿಪಕ್ಷಗಳ ಜೊತೆಗೆ ಮಿತ್ರಪಕ್ಷಗಳೂ ಸೇರಿದವು. ಇದೇ ಹೊತ್ತಿಗೆ, ಹಣದುಬ್ಬರ, ಮಿತಿ ಮೀರಿದ ಸಾಲ, ಆರ್ಥಿಕ ಬಿಕ್ಕಟ್ಟು, ಬಡತನದಿಂದ ಪಾಕಿಸ್ತಾನಿಯರು ಕಂಗೆಟ್ಟಿದ್ದರು. ಪ್ರತಿಪಕ್ಷಗಳು ಇದನ್ನೇ ಪ್ರಮುಖ ದಾಳವಾಗಿ ಬಳಸಿಕೊಂಡು ಇಮ್ರಾನ್ರನ್ನು ಅಧಿಕಾರದಿಂದ ಕೆಳಗಿಳಿಸಲು ಶತಾಯಗತಾಯ ಪ್ರಯತ್ನ ಮಾಡಿದವು.

ಸ್ಫುರದ್ರೂಪಿಯೂ, ಇಂಗ್ಲೆಂಡಿನಲ್ಲಿ ವ್ಯಾಸಂಗ ಮಾಡಿದವರೂ ಆದ ಇಮ್ರಾನ್ ವರ್ಚಸ್ಸು ದೊಡ್ಡ ಮಟ್ಟದ್ದು. ಲಾಹೋರಿನಲ್ಲಿ 1952ರ ನವೆಂಬರ್ 25ರಂದು ಜನಿಸಿದ ಅವರು, 16ನೇ ವಯಸ್ಸಿನಲ್ಲಿ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟರು. ಎಪ್ಪತ್ತರ ದಶಕದಲ್ಲಿ ಪಾಕಿಸ್ತಾನದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ, ದಶಕ ಕಳೆಯುವುದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಶ್ವ ಶ್ರೇಷ್ಠ ಆಲ್ರೌಂಡರ್ ಆಗಿ ಮಿಂಚಲಾರಂಭಿಸಿದ್ದರು. ಅಷ್ಟೇ ಅಲ್ಲ, 1992ರಲ್ಲಿ ಪಾಕಿಸ್ತಾನಕ್ಕೆ ಕ್ರಿಕೆಟ್ ವಿಶ್ವಕಪ್ ತಂದುಕೊಟ್ಟ ಶ್ರೇಯ ಕೂಡ ಇವರದ್ದೇ.
1986ರಲ್ಲಿ ಇಂಗ್ಲೆಂಡಿನಲ್ಲಿ ಇಮ್ರಾನ್ರನ್ನು ಭೇಟಿಯಾದ ಸಂದರ್ಭ ನಡೆದ ಮಾತುಕತೆಯ ತುಣುಕನ್ನು ಸುನಿಲ್ ಗವಾಸ್ಕರ್ ಹಂಚಿಕೊಂಡಿದ್ದರು. ಇಂಗ್ಲೆಂಡ್ ಪ್ರವಾಸ ಮುಗಿಸಿದ ತಕ್ಷಣ ನಿವೃತ್ತರಾಗಬೇಕೆಂಬ ಯೋಚನೆ ಹಂಚಿಕೊಂಡಿದ್ದರಂತೆ ಗವಾಸ್ಕರ್. ಅದಕ್ಕೆ ಇಮ್ರಾನ್, "ನಾವು (ಪಾಕಿಸ್ತಾನ ತಂಡ) ಭಾರತದಲ್ಲಿ ಭಾರತದ ತಂಡವನ್ನು ಸೋಲಿಸಬೇಕು. ಆದರೆ, ನೀವು ಕ್ಯಾಪ್ಟನ್ ಆಗಿರದೆ ಇದ್ದರೆ ಪಂದ್ಯಕ್ಕೆ ರೋಚಕತೆ ಎಲ್ಲಿಂದ ಸಾಧ್ಯ?" ಎಂದಿದ್ದರಂತೆ. ಇಂತಹ ಮಹತ್ವಾಕಾಂಕ್ಷೆ ಇದ್ದ ಇಮ್ರಾನ್, 1992ರ ಮಾರ್ಚ್ 25ರಂದು ಇಂಗ್ಲೆಂಡ್ ಅನ್ನು ಮಣಿಸಿ ವಿಶ್ವಕಪ್ ಬಾಚಿಕೊಂಡಿದ್ದರು. ಅಸಲಿಗೆ, ಪಾಕಿಸ್ತಾನ ಚಾಂಪಿಯನ್ ಆಗಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ, ಈ ಬಲಗೈ ದಾಂಡಿಗ ಮತ್ತು ವೇಗದ ದಾಳಿಕೋರ ಪಾಕಿಸ್ತಾನ ತಂಡಕ್ಕೆ ವಿಶ್ವಕಪ್ ಜೊತೆಗೆ ವಿಶ್ವಮಾನ್ಯತೆ ತಂದುಕೊಟ್ಟರು.

1971ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಮೂಲಕ ವೃತ್ತಿಜೀವನ ಆರಂಭಿಸಿದ್ದ ಇಮ್ರಾನ್, ನಿವೃತ್ತಿ ಘೋಷಿಸಿದಾಗ 1992. ಆಗಿನಿಂದ ಆಟದಿಂದ ದೂರವಾದರೂ, ಕ್ರಿಕೆಟ್ನಿಂದ ದೂರವಾಗಲಿಲ್ಲ. ಕ್ರಿಕೆಟ್ ಕುರಿತು ಅಂಕಣ ಬರೆದರು. ಕಮೆಂಟೇಟರ್ ಆಗಿ ಕಾರ್ಯನಿರ್ವಹಿಸಿದರು. ಸದಾ ಕ್ರಿಕೆಟ್ ನಂಟನ್ನು ಉಳಿಸಿಕೊಂಡಿದ್ದರು.
ಆದರೆ, ಅವರ ಬದುಕಿನ ಇನ್ನೊಂದು ಅಧ್ಯಾಯ ತೆರೆದುಕೊಳ್ಳುವುದಕ್ಕೆ ಆ ಹೊತ್ತಿಗೆ ಸಿದ್ಧತೆಗಳಾಗಿದ್ದವು. 1996ರಲ್ಲಿ ರಾಜಕೀಯ ಪ್ರವೇಶ ಮಾಡಿದ ಅವರು, 'ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ)' ಎಂಬ ತಮ್ಮದೇ ಸ್ವಂತ ರಾಜಕೀಯ ಪಕ್ಷ ಸ್ಥಾಪಿಸಿದರು. 1997ರ ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. 2002ರ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ಸರ್ಕಾರ ರಚಿಸಲಾಗಲಿಲ್ಲ. 2018ರಲ್ಲಿ ಪಿಟಿಐ 116 ಕ್ಷೇತ್ರಗಳಲ್ಲಿ ಜಯ ಗಳಿಸಿ, ಮಿತ್ರಪಕ್ಷದೊಂದಿಗೆ ಸರ್ಕಾರ ರಚಿಸಿತು. ಇಮ್ರಾನ್ ಖಾನ್ರ ಬಲವಾದ ಭ್ರಷ್ಟಾಚಾರ ವಿರೋಧಿ ನೀತಿಯು ಅವರು ಆಡಳಿತ ಚುಕ್ಕಾಣಿಗೇರಲು ಸಹಕಾರಿಯಾಗಿತ್ತು. "ಪಾಕ್ ಸರ್ಕಾರಗಳು ದೇಶದ ಮಿಲಿಟರಿಯ ಕೈಗೊಂಬೆಗಳಾಗಿದ್ದು, ಇದನ್ನು ಬದಲಾಯಿಸುತ್ತೇನೆ," ಎಂಬ ಇಮ್ರಾನ್ ಮಾತು ಅವರನ್ನು ಅಧಿಕಾರದ ಗದ್ದುಗೆಗೆ ಏರಿಸಿತ್ತು.
ಆದರೆ, 1947ರಿಂದಲೂ ಪಾಕಿಸ್ತಾನದಲ್ಲಿ ರಾಷ್ಟ್ರೀಯ ಭದ್ರತೆಯ ಜೊತೆಗೆ ವಿದೇಶಾಂಗ ನೀತಿಗಳನ್ನು ನಿರ್ಧರಿಸುತ್ತಿರುವುದು ಸೇನಾ ಮುಖ್ಯಸ್ಥರೇ. ಇದುವರೆಗೂ ಪಾಕಿಸ್ತಾನದಲ್ಲಿ 22 ಪ್ರಧಾನಿಗಳು ಆಗಿಹೋದರೂ, ಮಿಲಿಟರಿ ಹಸ್ತಕ್ಷೇಪದಿಂದ ಯಾರೂ ಪೂರ್ಣಾವಧಿ ಆಡಳಿತ ಮಾಡಿಲ್ಲ. ಸೇನಾ ಮುಖ್ಯಸ್ಥರು ನೇರವಾಗಿ ಇಲ್ಲವೇ ಪರೋಕ್ಷವಾಗಿ ಪಾಕಿಸ್ತಾನದ ಸರ್ಕಾರವನ್ನು ನಿಯಂತ್ರಿಸುತ್ತಲೇ ಇರುತ್ತಾರೆ.

ಆಡಳಿತಾವಧಿಯಲ್ಲಿ ಇಮ್ರಾನ್ ಖಾನ್ ತೆಗೆದುಕೊಂಡ ಕೆಲವು ನಿರ್ಧಾರಗಳು ಅವರ ಹಿನ್ನಡೆಗೆ ಕಾರಣವಾದವು. ಪ್ರಮುಖವಾಗಿ, ಆರಂಭದಿಂದಲೂ ಅಫ್ಘಾನಿಸ್ತಾನದ ವಿಚಾರಕ್ಕೆ ಅಮೆರಿಕದ ವಿರುದ್ಧ ಬೆಂಕಿಯುಗುಳುತ್ತಿದ್ದ ಇಮ್ರಾನ್, ಪ್ರಧಾನಿಯಾದ ಮೇಲೂ ಅದನ್ನು ಮುಂದುವರಿಸಿದರು. ಹೀಗಾಗಿಯೇ, ಅಮೆರಿಕ ಇವರನ್ನು 'ಇಮ್ರಾನ್ ಖಾನ್ ಬದಲು ತಾಲಿಬಾನ್ ಖಾನ್ ಎಂದು ಕರೆದು ವ್ಯಂಗ್ಯವಾಡಿತು. ಅಮೆರಿಕ ಪಾಕಿಸ್ತಾನಕ್ಕೆ ಬಿಲಿಯನ್ಗಟ್ಟಲೆ ಆರ್ಥಿಕ ಸಹಾಯ ಮಾಡುತ್ತಿತ್ತು. ಆದರೆ, ಪಾಕಿಸ್ತಾನ ಅದನ್ನು ಸ್ವಹಿತಾಸಕ್ತಿಗೆ ಬಳಸಿಕೊಳ್ಳದೆ ತಾಲಿಬಾನಿಗಳಿಗೆ ನೆರವು ನೀಡುತ್ತಿತ್ತು ಎಂಬ ಕಾರಣಕ್ಕೆ ಈ ವ್ಯಂಗ್ಯ.
ಅಮೆರಿಕದ ದ್ವೇಷ ಕಟ್ಟಿಕೊಂಡು ಚೀನಾವನ್ನು ಹೆಚ್ಚು ಅಪ್ಪಿಕೊಂಡದ್ದು ಇಮ್ರಾನ್ ಆಡಳಿತದ ಬದಲಾವಣೆಗಳಲ್ಲಿ ಒಂದು. ಆದರೆ, ಪ್ರತಿಯೊಂದರಲ್ಲೂ ಹೆಚ್ಚೇ ಲೆಕ್ಕಾಚಾರ ಮಾಡುವ ಚೀನಾ, ಪಾಕ್-ಚೀನಾ ಕಾರಿಡಾರ್ ಜೊತೆಗೆ ಕರಾಚಿ ಬಳಿಯ ಬಂದರನ್ನು ತನ್ನ ವ್ಯಾಪಾರಕ್ಕಾಗಿ ಬಿಟ್ಟಿಯಾಗಿ ಹಿಡಿದಿಟ್ಟುಕೊಂಡಿತು. ಚೀನಾ ಜೊತೆ ಒಡನಾಟ ಇಟ್ಟುಕೊಂಡಿದ್ದರಿಂದ ಅಮೆರಿಕ ಕೂಡ ಆರ್ಥಿಕ ಸಹಾಯ ನಿಲ್ಲಿಸಿತು. ಅಲ್ಲದೆ, ಅತಿ ಹೆಚ್ಚು ಸಾಲ ಪಡೆದು ಮರಳಿಸದೆ ಇದ್ದುದರಿಂದ, ಅಂತಾರಾಷ್ಟ್ರಿಯ ಹಣಕಾಸು ನಿಧಿ, ವಿಶ್ವಬ್ಯಾಂಕ್ನಿಂದಲೂ ನೆರವು ಸಿಗಲಿಲ್ಲ. ಹೀಗಾಗಿ, ಸಹಜವಾಗೇ ಪಾಕಿಸ್ತಾನದಲ್ಲಿ ಹಣದುಬ್ಬರ, ಬಡತನ ಹೆಚ್ಚಿತು.
ಈ ನಡುವೆ, ಭಾರತದೊಂದಿಗೆ ಸೌಹಾರ್ದ ಸಂಬಂಧ ಸಾಧ್ಯವಾಗಿಸಬೇಕು ಎಂಬ ತೀವ್ರ ಪ್ರಯತ್ನದಲ್ಲಿದ್ದರು ಇಮ್ರಾನ್. ಆದರೆ, ಪುಲ್ವಾಮಾ ದಾಳಿಯಿಂದ ಅವರ ಮಹದಾಸೆ ಕೈಗೂಡದೆ ಹೋಗಿತ್ತು. ಆದರೂ ಸಿಧು ಮತ್ತು ಅವರ ಸಮಕಾಲೀನ ಅನೇಕ ಸ್ನೇಹಿತರು ಇಮ್ರಾನ್ ಅವರ ನೈತಿಕ ಸ್ಥೈರ್ಯ ಹೆಚ್ಚುವಂತಹ ಮಾತುಗಳಾಡಿದ್ದರು. ಆದರೆ, ಪಾಕಿಸ್ತಾನ ರಾಜಕೀಯದ ಚಿತ್ರಣವೇ ಬೇರೆ. ಅಲ್ಲಿ ಸೇನೆಯ ನಿರ್ಧಾರಗಳ ಮುಂದೆ ಬೇರೆಲ್ಲ ಲೆಕ್ಕಾಚಾರಗಳು ಸುಳ್ಳಾಗಿಬಿಡುತ್ತವೆ.

ಇನ್ನೊಂದೆಡೆ, ಪಾಕ್ ಸೇನೆಯ ಒತ್ತಡವೂ ಇಮ್ರಾನ್ರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಲೇ ಬಂದಿದೆ. ಪಾಕಿಸ್ತಾನ ಉಗಮವಾದ ಕಾಲದಿಂದಲೂ ಮಿಲಿಟರಿ, ದೇಶದ ಶಕ್ತಿಶಾಲಿ ಸಂಸ್ಥೆಯಾಗಿ ಉಳಿದುಕೊಂಡಿದೆ. ಭ್ರಷ್ಟಾಚಾರ, ಚುನಾಯಿತ ಸರ್ಕಾರದ ಆಡಳಿತ, ಪ್ರಮುಖ ನಿರ್ಧಾರಗಳಲ್ಲಿ ಹಸ್ತಕ್ಷೇಪ, ಕಾಶ್ಮೀರಕ್ಕೆ ಸಂಬಂಧಿಸಿದ ಭಿನ್ನಾಭಿಪ್ರಾಯ, ವಿದೇಶಾಂಗ ನೀತಿಗಳಲ್ಲಿ ಸಹ ಮಿಲಿಟರಿ ಮೂಗು ತೂರಿಸುತ್ತದೆ. ಇದೆಲ್ಲ ಕಾರಣಗಳಿಂದಾಗಿ, ಪಾಕಿಸ್ತಾನದ 22 ಮಂದಿ ಪ್ರಧಾನಿಗಳಲ್ಲಿ ಯಾರೂ ಅಧಿಕಾರಾವಧಿ ಪೂರ್ಣಗೊಳಿಸಿಲ್ಲ. ಕೆಲವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟರೆ, ಕೆಲವರನ್ನು ಪದಚ್ಯುತಿ ಮಾಡಲಾಗಿದೆ. ಆಡಳಿತ ಶುರುಮಾಡುವ ಮುನ್ನವೇ ಪ್ರಧಾನಿಯ ಹತ್ಯೆ ಸಹ ಮಾಡಲಾಗಿದೆ. ಈ 22 ಪ್ರಧಾನಿಗಳ ಪಟ್ಟಿಗೆ ಇಮ್ರಾನ್ ಕೂಡ ಸೇರ್ಪಡೆಯಾಗಿದ್ದಾರೆ.
ಈಗಲೂ ಇಮ್ರಾನ್ರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡುತ್ತಿರುವುದು ಮಿಲಿಟರಿಯೇ ಎಂಬುದು ಎಲ್ಲರ ಊಹೆ ಮತ್ತು ಗಟ್ಟಿ ನಂಬಿಕೆ. ಇದ್ದ ಆಯ್ಕೆಗಳ ಪೈಕಿ, ಸುಲಭವಾದುದನ್ನು ಬಿಟ್ಟು, ಸವಾಲಿನ ಆಯ್ಕೆಯತ್ತ ಹೊರಳಿದ್ದಾರೆ ಇಮ್ರಾನ್. ಅವರು ಅಂದುಕೊಂಡಂತೆ ಎಲ್ಲವೂ ನಡೆದರೆ, ಮುಂದಿನ ಮೂರು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಪಿಟಿಐ ಬಹುಮತ ಪಡೆಯುತ್ತದೋ ಇಲ್ಲವೋ, ಇಮ್ರಾನ್ ಮತ್ತೆ ಪ್ರಧಾನಿ ಆಗುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸವಾಲನ್ನು ಬೆನ್ನತ್ತುವುದರಲ್ಲಿ ಮಾತ್ರ ಈಗಲೂ ಕ್ರಿಕೆಟಿಗನ ಛಲ ಮತ್ತು ಚಾಣಾಕ್ಷತನ ಉಳಿಸಿಕೊಂಡಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.