ಯುಗಾದಿ ವಿಶೇಷ | ಅರೆ ಮಲೆನಾಡಿನ ಹೊಸ ಬ್ಯಾಸೆ ಹಬ್ಬ

Farmer

ಹೊಲಕ್ಕೆ ಹೋದೊಡನೆ ಭೂಮಿತಾಯಿಯ ಪೂಜೆ. ನಂತರ ಎತ್ತುಗಳಿಗೆ ಪೂಜೆ. ನೇಗಿಲು ಕಟ್ಟಿ ಒಂದೆರಡು ಸುತ್ತು ನೆಲ ಉಳಲಾಗುತ್ತದೆ. ವರ್ಷದ ಮೊದಲ ದಿನ ಆರಂಭವಾಗುವುದು ಹೀಗೆ. ವರ್ಷ ಪೂರ್ತಿ ಈ ಎತ್ತುಗಳು, ಈ ಭೂಮಿ ತಾಯಿ ಇದೇ ಸಹಕಾರ ‌ನೀಡಲಿ, ಹರಸಲಿ ಎಂಬ ಪ್ರಾರ್ಥನೆ. ಆಮೇಲೆ, ಎಲ್ಲರೂ ಒಟ್ಟಿಗೆ ಕೂತು, ಮಸೊಪ್ಪು, ಮುದ್ದೆ, ಅನ್ನದ ಊಟ

ನಮ್ಮದು ಬಯಲುಸೀಮೆಯ ನಾಡು. ತೀರಾ ಬಯಲುಸೀಮೆ ಎಂದರೂ ತಪ್ಪಾದೀತು. ಅರೆ ಮಲೆನಾಡು ಎಂದುಕೊಳ್ಳಿ. ಶಿವಮೊಗ್ಗೆಯ ಪಕ್ಕೆಯ ಪಕ್ಕದ ಊರುಗಳವು.

ಇಲ್ಲಿ ಯುಗಾದಿ ಎಂದರೆ ಹೊಸ ಬ್ಯಾಸೆ ಅಂತಲೇ ಅರ್ಥ. ಇಂದಿಗೂ ಅಲ್ಲಿಯ ಮಕ್ಕಳನ್ನು ಕರೆದು ಕೇಳಿ ನೋಡಿ. "ಯುಗಾದಿ ಗೊತ್ತಾ?" ಅಂದ್ರೆ, "ಹೊಸ ಬ್ಯಾಸೆ ಹಬ್ಬಾನಾ?" ಅಂತ ಕೇಳ್ತಾರೆ. ನಿಮಗೆ ಗೊತ್ತಿರಬಹುದು ಬೇಸಾಯಕ್ಕೆ, ಕೃಷಿ ಕಾರ್ಯಕ್ಕೆ ಕನ್ನಡದಲ್ಲಿ 'ಆರಂಭ' ಅನ್ನುವ ಪದವನ್ನು ಕೂಡ ತತ್ಸಮಕ್ಕೆ ಅವರು ಬಳಸುತ್ತಾರೆ. ಇಂದಿಗೂ ಹಿರಿಕರು ಬೇಸಾಯ ಅನ್ನುವ ಬದಲು ಆರಂಭ ಅಂತಲೇ ಕರೀತಾರೆ.

ಆರಂಭ ಎನ್ನುವುದು ಎಂತಹ ಅದ್ಬುತ ಪದ. ಎಲ್ಲವೂ ಅಲ್ಲಿಂದಲೇ ಶುರುವಾಗಬೇಕು. 'ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ' ಅನ್ನುವ ಮಾತು ಕೂಡ ಅದನ್ನು ಅನುಮೋದಿಸುತ್ತದೆ. ರೈತ, ಕೃಷಿ, ಬೆಳೆ ಇವಿಷ್ಟನ್ನು ಬಿಟ್ಟು ಯಾವ ನಾಡ ಕೂಡ ಬದುಕಲಾರದು. ಬದುಕಿದ ಉದಾಹರಣೆಗಳು ಕೂಡ ಇಲ್ಲ.

ಯುಗಾದಿ ಚಂದ್ರಮಾನ ಎಣಿಕೆಯ ಮೊದಲ ಹಬ್ಬ. ಮೊದಲ ಹಬ್ಬ ಅನ್ನುವುದಕ್ಕಿಂತ ಚಂದ್ರಮಾನ‌ ಅಳತೆಯ ಮೊದಲ ದಿನ. ನಮ್ಮ‌ ಪಾಲಿಗೆ ಅದೇ ಹೊಸ ದಿನ. ಚೈತ್ರ ಮೊದಲನೇ ತಿಂಗಳು. ಅಂಗನವಾಡಿಯಲ್ಲಿ ಕೈ ಕಟ್ಟಿ ಮಾಸಗಳನ್ನು ಹಾಡುವಾಗ ಚೈತ್ರವನ್ನು ಮೊದಲಿಗೆ ತಂದು ನಿಲ್ಲಿಸಿ ಹಾಡಿದ್ದು ನೆನಪಿರಬಹುದು.

ಇಂತಹ ಮೊದಲ ಬದುಕಿನ ಆರಂಭ ಕೃಷಿಯೊಂದಿಗೇ ಆರಂಭ ಆಗಬೇಕೆಂಬುದು ಇಲ್ಲಿನ ರೈತರು ಪಾಲಿಸಿಕೊಂಡು ಬಂದ ಪದ್ಧತಿ. ಆ ಪ್ರಕಾರ, ವರ್ಷದ ಮೊದಲ ಬೇಸಾಯದ ವಿದ್ಯುಕ್ತ ಕ್ರಿಯೆಗಳು ಅಂದು ಶುಭಾರಂಭ ಪಡೆಯುತ್ತವೆ. ನಮಗೆ ಬಾಲ್ಯದಲ್ಲಿ ರೋಮಾಂಚನ ಉಂಟುಮಾಡುತ್ತಿದ್ದ ಆಚರಣೆ ಇದು.

ಯುಗಾದಿಯ ದಿನ ಮುಂಜಾನೆ ನಾಲ್ಕಕ್ಕೆಲ್ಲ ರೈತರು ಎದ್ದುಬಿಡುತ್ತಾರೆ. ಎತ್ತುಗಳಿಗೆ ನೀಟಾದ ಸ್ನಾನ. ಅವುಗಳ ಸಿಂಗಾರ ನೋಡಿದ ಕಣ್ಣುಗಳು ಹಬ್ಬಕ್ಕೆ ಜಾರುತ್ತವೆ. ಎತ್ತುಗಳು ಅಂದು ಆ ಮಟ್ಟಿಗೆ ಚಂದ ಕಾಣಿಸುತ್ತವೆ. ಮನೆಯಲ್ಲಿ ಮಸೊಪ್ಪು, ಮುದ್ದೆಯೇ ಆಗಬೇಕು. ಅದೇ ಈ ಹೊತ್ತಿನ ವಿಶೇಷ ಅಡುಗೆ. ಮನೆಯ ಹೆಣ್ಣುಮಕ್ಕಳು ಹೊಲದಲ್ಲಿ‌ ಮಾಡಬೇಕಾದ ಪೂಜೆಗೆ ಎಲ್ಲವನ್ನೂ ಜೋಡಿಸಿಕೊಂಡು ಬುಟ್ಟಿಯಲ್ಲಿ ತುಂಬಿಕೊಳ್ಳುತ್ತಾರೆ. ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲ ಗಂಡು‌ಮಕ್ಕಳು ಪಂಚೆಯುಟ್ಟು ತಲೆಗೊಂದು ಟವಲ್ ಬಳಸಿ ಪೇಟ ಸುತ್ತಿಕೊಳ್ಳುತ್ತಾರೆ.

ಮಗ ಎತ್ತುಗಳಿಗೆ ನೊಗ ಹಾಕಿ ಹಿಡಿದುಕೊಂಡರೆ, ಹೆಣ್ಮಗಳು ಬುತ್ತಿಗಂಟು ಹೊತ್ತು, ಮನೆಯ ಯಜಮಾನ ನೇಗಿಲು ಹೊತ್ತುಕೊಂಡು ಹೊರಟು ನಿಲ್ಲುತ್ತಾರೆ. ಊರಿನ ಅಷ್ಟೂ ಮನೆಯ ಕೃಷಿಕ ಕುಟುಂಬಗಳು ಒಟ್ಟಿಗೆ ಹೊರಡುತ್ತವೆ. ಹಳ್ಳಿಯ ಕೇರಿಗಳು ಎತ್ತುಗಳ ಗಂಟೆಯ ನಿನಾದದಿಂದ ಮೈದುಂಬಿಕೊಳ್ಳುತ್ತವೆ. ನೇಗಿಲು ಹೊತ್ತ ರೈತರು, ಬುತ್ತಿ ಹೊತ್ತ ಮಹಿಳೆಯರು, ಎತ್ತುಗಳನ್ನು‌ ಹಿಡಿದು ಸಾಗುವ ಗಂಡುಮಕ್ಕಳು... ಹೀಗೆ ಗುಂಪುಗಳು ಹೊರಟು, ಅವರವರ ಹೊಲಕ್ಕೆ ತಲುಪುತ್ತವೆ.

ಹೊಲದಲ್ಲಿ ಭೂಮಿತಾಯಿಯ ಪೂಜೆ. ಎತ್ತುಗಳಿಗೆ ಪೂಜೆ. ನೇಗಿಲು ಕಟ್ಟಿ ಒಂದೆರಡು ಸುತ್ತು ನೆಲವನ್ನು ಉಳುತ್ತಾರೆ. ವರ್ಷದ ಮೊದಲ ದಿನ ಹೀಗೆ ಭಕ್ತಿ ಭಾವದಿಂದ ಆರಂಭವಾಗುತ್ತದೆ. ವರ್ಷ ಪೂರ್ತಿ ಈ ಎತ್ತುಗಳು, ಈ ಭೂಮಿ ತಾಯಿ  ಇದೇ ಸಹಕಾರ ‌ನೀಡಲಿ, ಹರಸಲಿ ಎಂದು ಬೇಡಿಕೊಳ್ಳುತ್ತಾರೆ.  ಮನೆಮಂದಿಯೆಲ್ಲ ಒಟ್ಟಿಗೆ ಕೂತು, ಮಸೊಪ್ಪು, ಮುದ್ದೆ, ಅನ್ನದ ಊಟ ಮುಗಿಸುತ್ತಾರೆ.

ನೇಗಿಲುಗಳನ್ನು ರೈತನೇ ಹೆಗಲ ಮೇಲೆ ಹೊತ್ತುಕೊಂಡು ಎತ್ತುಗಳೊಂದಿಗೆ ಮನೆಗೆ ಹಿಂದಿರುಗುತ್ತಾನೆ. ಅದು ಅವರ ಪಾಲಿನ‌ ಯುಗಾದಿ. ಇದಿಷ್ಟೂ ಒಂಚೂರೂ ಲೋಪವಿಲ್ಲದೆ ನಡೆದರೆ ಆ ವರ್ಷಪೂರ್ತಿ ಅದೇ ಮಟ್ಟಿನ ಒಳಿತು ತಮಗಾಗುತ್ತದೆ ಎಂದು ನಂಬುತ್ತಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್