ನುಡಿನಮನ | ಗಂಗಾಧರಮೂರ್ತಿಯೊಂದಿಗಿನ ಮರೆಯಲಾಗದ ಗೆಳೆತನ

ಸಹೋದ್ಯೋಗಿಯಾಗಿ, ಗೆಳೆಯನಾಗಿ, ಮಾರ್ಗದರ್ಶಕನಾಗಿ ಜೊತೆಯಾಗಿದ್ದ ಪ್ರೊ. ಬಿ ಗಂಗಾಧರಮೂರ್ತಿ ಅವರ ಅಗಲಿಕೆ ಸತತವಾಗಿ ಕಾಡುವಂಥದ್ದು ಎನ್ನುತ್ತಾರೆ 44 ವರ್ಷಗಳ ಕಾಲದ ಅವರ ಒಡನಾಡಿ ಪ್ರೊ.ನಗರಗೆರೆ ರಮೇಶ್‌. ಅವರು ತಮ್ಮ ಚಿಂತನೆಯನ್ನು ಒರೆಗೆ ಹಚ್ಚಿದ, ಸಾಮಾಜಿಕ ಚಳವಳಿಯಲ್ಲಿ ಕೊನೆವರೆಗೂ ಭಾಗಿಯಾಗುತ್ತಿದ್ದ ಗಂಗಾಧರಮೂರ್ತಿ ಅವರೊಂದಿಗಿನ ʻಮರೆಯಲಾಗದ ಸ್ನೇಹʼವನ್ನು ಮೆಲುಕು ಹಾಕಿದ್ದಾರೆ.

ಬುದ್ಧಿಜೀವಿಗಳಲ್ಲಿ ಹಲವು ಬಗೆ. ಕೆಲವರು ಜನರಿಂದ ದೂರ ಉಳಿದು, ಅಧ್ಯಯನದಲ್ಲಿ ಮುಳುಗಿ ಸಾಮಾಜಿಕ ಬದಲಾವಣೆಗೆ ಅಗತ್ಯವಾದ ಚಿಂತನಶೀಲ ಭೂಮಿಕೆಯನ್ನು ಸಿದ್ಧಪಡಿಸುತ್ತಾರೆ. ಮತ್ತೆ ಕೆಲವರು ತಮ್ಮ ಚಿಂತನೆಗಳನ್ನು ಉಳಿಸಿಕೊಂಡು, ಹರಿತಗೊಳಿಸಿಕೊಳ್ಳುತ್ತಲೇ ಜನರ ನಡುವೆಯೇ ಇದ್ದು, ಅವರ ಚಳವಳಿಗಳಲ್ಲಿ ತಾವೂ ಭಾಗಿಗಳಾಗುತ್ತಾ ಅಗತ್ಯವಾದ ಬೌದ್ಧಿಕ ಮಾರ್ಗದರ್ಶನವನ್ನು ಒದಗಿಸುತ್ತಾರೆ. ಸಮಾಜದ ಬದಲಾವಣೆಯ ಪ್ರಕ್ರಿಯೆಯಲ್ಲಿ ಎಲ್ಲ ತರಹದ ಪಾಲ್ಗೊಳ್ಳುವಿಕೆಯೂ ಮುಖ್ಯವೇ. ಅದನ್ನು ವಿಶ್ಲೇಷಿಸುವಾಗ ನಮ್ಮ ಲೋಕದೃಷ್ಟಿಯ ಅನುಸಾರವಾಗಿ ನಮ್ಮ ಆಯ್ಕೆ ನಡೆಯುತ್ತದೆ.

ಇತ್ತೀಚೆಗೆ ನಮ್ಮನ್ನಗಲಿದ ನನ್ನ ಅತ್ಯಂತ ಆತ್ಮೀಯ ಗೆಳೆಯ ಗಂಗಾಧರಮೂರ್ತಿ ಎರಡನೇ ಬಗೆಯ ಬುದ್ಧಿಜೀವಿ. ಜನಜೀವನದ ಆಗುಹೋಗುಗಳ ಜೊತೆ ಜೈವಿಕ ಸಂಬಂಧವನ್ನು ಬೆಳೆಸಿಕೊಂಡ ಸಾಮಾಜಿಕ ಕಾರ್ಯಕರ್ತ, ಹೋರಾಟಗಳಿಗೆ ಮಾರ್ಗದರ್ಶಕ. ಇಂತಹ ʻಆರ್ಗ್ಯಾನಿಕ್ ಇಂಟಲೆಕ್ಚ್ಯುವಲ್‌'ಗಳ ಅಗತ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚಿಗೆ ಇದೆ. ಆದರೆ, ಗಂಗಾಧರಮೂರ್ತಿ ಇಲ್ಲವಾಗಿರುವುದು ಒಂದು ಬಗೆಯ ನಿರ್ವಾತವನ್ನು ಸೃಷ್ಟಿಸಿದೆ. ನನಗೆ ವೈಯಕ್ತಿಕವಾಗಿ ಆ ನಿರ್ವಾತ ಸತತವಾಗಿ ಕಾಡುವಂಥದ್ದು.

Eedina App

ನಾವಿಬ್ಬರು ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಸಹೋದ್ಯೋಗಿಗಳಾಗಿದ್ದವರು. 1971ರಲ್ಲಿ ಅಲ್ಲಿ ಕೆಲಸಕ್ಕೆ ಸೇರಿದ್ದ ನನಗೆ, 1978ರಲ್ಲಿ ಗಂಗಾಧರಮೂರ್ತಿಯವರು ಜತೆಯಾದರು. ಅಂದಿನಿಂದ ಅವರ ನನ್ನ ಗೆಳೆತನ ಅಬಾಧಿತವಾಗಿತ್ತು. ಆಂಧ್ರದಲ್ಲಿ ನನ್ನ ಓದನ್ನು ಮುಗಿಸಿ, ನನ್ನ ತವರೂರಾದ ಗೌರಿಬಿದನೂರಿಗೆ ಕೆಲಸಕ್ಕಾಗಿ ಹಿಂದಿರುಗಿದ್ದ ನನಗೆ, ಹಾಸನ, ಮೈಸೂರಿನಲ್ಲಿ ವ್ಯಾಸಂಗ ಮಾಡಿದ್ದ ಮೂರ್ತಿಯವರು ಸಹೋದ್ಯೋಗಿಯಾಗಿ ಬಂದದ್ದು, ಮುಂದೆ ನಾವಿಬ್ಬರೂ ಜೊತೆಗೂಡಿ ಕೈಗೊಂಡ ಹಲವು ಚಟುವಟಿಕೆಗಳಿಗೆ ನಾಂದಿಯಾಯಿತು.

ನಮ್ಮ ಜತೆಗೆ, ಕಳೆದ ಒಂದು ವರ್ಷದಲ್ಲಿ ನಾವು ಕಳೆದುಕೊಂಡ ರಂಗಾರೆಡ್ಡಿ ಕೋಡಿರಾಂಪುರ ಮತ್ತು ವೇಣುಗೋಪಾಲ್ ಹಾಗೂ ಇತರ ಕೆಲವರು ಅಧ್ಯಾಪಕ ಮಿತ್ರರು ಕೈಜೋಡಿಸಿದ್ದರಿಂದ ಕಾಲೇಜಿನ ಒಳಗೆ-ಹೊರಗೆ ಅರ್ಥಪೂರ್ಣವಾಗಿ ಕೆಲಸ ಮಾಡುವುದು ಸಾಧ್ಯವಾಯಿತು. ನಮ್ಮ ಜತೆ ಸೇರುವ ಮೊದಲೇ, ಮೂರ್ತಿಯವರು ಮೈಸೂರಿನಲ್ಲಿ ಕಾರ್ಮಿಕ ಚಳವಳಿಯಲ್ಲಿ ಭಾಗಿಯಾಗಿದ್ದರು. ಅಲ್ಲದೇ, ತಮ್ಮ ಅಧ್ಯಯನ ಮತ್ತು ಬರವಣಿಗೆಗಳ ಮೂಲಕ ಕರ್ನಾಟಕದ ಬೌದ್ಧಿಕ ವಲಯದಲ್ಲಿ ಹೆಸರು ಮಾಡಿದ್ದ ಅವರ ಅನುಭವ ಮತ್ತು ಅರಿವು ನಮ್ಮ ಎಲ್ಲ ಕಾರ್ಯಕ್ರಮಗಳ ಹಿಂದೆ ಕೆಲಸ ಮಾಡಿತು.

AV Eye Hospital ad

ಇದನ್ನು ಓದಿದ್ದೀರಾ: ಬಿಜಿಎಮ್ ನುಡಿನಮನ: ಬೌದ್ಧಿಕ ಪ್ರಾಮಾಣಿಕತೆಯ, ವೈಚಾರಿಕ ಸ್ಪಷ್ಟತೆಯ ಒರೆಗಲ್ಲು ನಮ್ಮ ಮೇಷ್ಟ್ರು

ಶಾಲೆ ಅಥವಾ ಕಾಲೇಜಿನಲ್ಲಿ ಅಧ್ಯಾಪಕರಾದರೆ ಅಂಥಹವರು ತರಗತಿಗಳಲ್ಲಿ ಪ್ರಾಮಾಣಿಕವಾಗಿ ಪಾಠ ಮಾಡಿ, ಪಠ್ಯದಲ್ಲಿರುವುದನ್ನು ವಿದ್ಯಾರ್ಥಿಗಳಿಗೆ ದಾಟಿಸಿ ಅವರನ್ನು ಪರೀಕ್ಷೆಗೆ ಮತ್ತು ಮುಂದೆ ಒಳ್ಳೆಯ ಉದ್ಯೋಗ ಸಂಪಾದನೆಗೆ ಅಣಿಗೊಳಿಸುವುದು ಮುಖ್ಯ ಕರ್ತವ್ಯ ಎನ್ನುವುದು ಸಾಮಾನ್ಯ ನಂಬಿಕೆ. ಅಂಥವರನ್ನು ʻಉತ್ತಮ ಶಿಕ್ಷಕʼ ಅನ್ನಬಹುದು ʻಆದರ್ಶ ಶಿಕ್ಷಕʼ ಎಂದು ಸನ್ಮಾನಿಸಬಹುದು. ಆದರೆ, ತಮ್ಮ ಕೆಲಸಗಳನ್ನು ತರಗತಿಗಳಲ್ಲಿ ಉತ್ತಮ ರೀತಿಯಲ್ಲಿಯೇ ನಿರ್ವಹಿಸುತ್ತಾ ಆ ಸರತಿಯನ್ನು ಮೀರಿ ಸಮಾಜದಲ್ಲಿಯೂ ತಮ್ಮ ಕ್ಷೇತ್ರವನ್ನು ಹುಡುಕಿಕೊಳ್ಳುವವರು ಅಪರೂಪ. ಅವರು ಹೊಸ ರೀತಿಯಲ್ಲಿ ಯೋಚನೆ ಮಾಡುವರಾಗಿದ್ದು, ಯುವಜನರನ್ನು ಹೊಸ ಚಿಂತನೆಗಳಿಗೆ ಹಚ್ಚುವ ಪ್ರಯತ್ನ ಮಾಡುವಂತವರಾದರೆ ಸಮಾಜ ಅವರನ್ನು ಅನುಮಾನದಿಂದಲೇ ನೋಡುತ್ತದೆ. ಗೌರಿಬಿದನೂರಿನಲ್ಲಿ ನಮಗಾದ ಅನುಭವವು ಅದೇ. ಆದರೆ, ಮೂರ್ತಿಯವರ ವೈಚಾರಿಕ ದೃಢತೆ ನಮಗೂ ಗಟ್ಟಿತನ ಎಂದರೇನು ಎನ್ನುವುದನ್ನು ತಿಳಿಸಿಕೊಟ್ಟಿದ್ದರಿಂದ ಅಂತಹ ಸನ್ನಿವೇಶಗಳು ನಮ್ಮನ್ನು ಭಾದಿಸಲಿಲ್ಲ.

ವೈಚಾರಿಕವಾಗಿ ಸಮಾನ ಮನಸ್ಕರಾದ ನಾವು ಜೊತೆಗೂಡಿದ ನಂತರ ಕಳೆದ ಶತಮಾನದ ಎಂಬತ್ತರ ದಶಕದ ಆರಂಭದಲ್ಲಿ ಆಗಿನ ದಿನಗಳಲ್ಲಿ ಕರ್ನಾಟಕದಲ್ಲಿ ಶಕ್ತಿಶಾಲಿಯಾಗಿ ಬೆಳೆದಿದ್ದ ದಲಿತ ಚಳುವಳಿ ಗೌರಿಬಿದನೂರಿಗೂ ಕಾಲಿಟ್ಟಿತು. ಎಚ್.ಎಂ.ರಾಮಚಂದ್ರ ಮತ್ತು ಕೆ.ಎಂ.ಕೋಮಣ್ಣ ಎನ್ನುವ ಕೋಲಾರದ ಉತ್ಸಾಹಿ ತರುಣರು ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರಾಗಿ ಗೌರಿಬಿದನೂರಿಗೆ ಬಂದರು. ಆರಂಭದ ದಿನಗಳಲ್ಲಿಯೇ ಅದಕ್ಕೆ ಅಗತ್ಯವಾದ ವೈಚಾರಿಕ ಭೂಮಿಕೆಯನ್ನು ಒದಗಿಸಿದ್ದವರಲ್ಲಿ ಒಬ್ಬರಾದ ಮೂರ್ತಿಯವರ ಮಾರ್ಗದರ್ಶನ ಆ ಊರಿನಲ್ಲಿನ ಚಟುವಟಿಕೆಗಳಿಗೂ ದೊರೆಯಿತು.

ಅದರ ಜೊತೆಗೆ ಸರಿಸುಮಾರು ಅದೇ ಕಾಲಘಟ್ಟದಲ್ಲಿ 'ಸಮುದಾಯ ರಂಗ ಸಂಘಟನೆ'ಯೂ ಸಹ ಗೌರಿಬಿದನೂರನ್ನು ಪ್ರವೇಶಿಸಿತು. ಇಲ್ಲಿಯೂ ಸಹ ನಮ್ಮ ಕಾರ್ಯಕ್ರಮಗಳ ಹಿಂದಿನ ಸಲಹೆ ಸೂಚನೆಗಳು ನಾಯಕತ್ವ ಸಿಕ್ಕಿದ್ದು ಮೂರ್ತಿಯವರಿಂದಲೇ. ಸಮುದಾಯದ ವತಿಯಿಂದ ಬೀದಿ ನಾಟಕಗಳು, ದಲಿತ ಸಂಘರ್ಷ ಸಮಿತಿಯ ಬೀದಿ ಹೋರಾಟಗಳು ನಮ್ಮನ್ನು ಕಾಲೇಜಿನ ಹೊರಗೆ ಸಹ ಕಾರ್ಯಪ್ರವೃತ್ತರನ್ನಾಗಿಸುತ್ತಿದ್ದವು. ಕರ್ನಾಟಕ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ನಾಗಸಂದ್ರ ಭೂ ಹೋರಾಟ ನಡೆದಿದ್ದು ಅದೇ ಅವಧಿಯಲ್ಲಿಯೇ ಈ. ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ನಾವು ಪಡೆಯುತ್ತಿದ್ದುದು ಮೂರ್ತಿಯವರ ಅನುಭವದ ಲಾಭವನ್ನೇ.

1991ರಲ್ಲಿ ಆಂಧ್ರದ ಚುಂಡೂರಿನಲ್ಲಿ ನಡೆದ ದಲಿತರ ಮಾರಣ ಹೋಮ, ಈ ದೇಶದ ಯಾವ ಹೃದಯವಂತ ಮನುಷ್ಯರೂ ಮರೆಯಲಾಗದ ಘಟನೆ. ಆದರೆ, ಹೃದಯವಂತಿಕೆಯ ಅಭಾವದಿಂದಲೇ ಕಂಬಾಲಪಲ್ಲಿ, ಖೈರ್ಲಾಂಜಿ, ಉನ್ನಾವೊದಂತಹ ದುರ್ಘಟನೆಗಳು ಮುಂದುವರೆಯುತ್ತಲೇ ಇವೆ ಅನ್ನುವುದು ಈ ದೇಶದ ದುರಂತ. ಒಂದು ತಂಡವಾಗಿ ನಾವೆಲ್ಲರೂ ಚುಂಡೂರಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅಲ್ಲಿಗೆ ನೀಡಿದ ಭೇಟಿಯಂತು ಮರೆಯಲಾಗದ ಅನುಭವ. ನಮ್ಮೊಂದಿಗೆ ಆ ಸಂದರ್ಭದಲ್ಲಿದ್ದ ಗೆಳೆಯರು, ಅಂದು ಮೂರ್ತಿಯವರ ಉಪಸ್ಥಿತಿಯನ್ನು ಎಂದಿಗೂ ತಮ್ಮ ನೆನಪುಗಳ ಭಾಗವಾಗಿಸಿಕೊಳ್ಳುತ್ತಾರೆ.

ಇಷ್ಟೆಲ್ಲ ಸಮಾಜಮುಖಿ ಚಟುವಟಿಕೆಗಳ ನಡುವೆ ಕಾಲೇಜಿನಲ್ಲಿ ನಮ್ಮ ಶೈಕ್ಷಣಿಕ ಕಾರ್ಯಗಳಿಗೆ ಯಾವುದೇ ಅಡ್ಡಿ ಬರದಂತೆ ನೋಡಿಕೊಳ್ಳುವಲ್ಲಿ ಗಂಗಾಧರ ಮೂರ್ತಿಯವರ ಕೊಡುಗೆ ಅನನ್ಯ. ಕಾಲೇಜಿನ ವಿಭಾಗವೊಂದರಲ್ಲಿ ಕೆಲಸ ಮಾಡುವವರ ನಡುವೆ ಒಂದು ರೀತಿಯ ಮನಸ್ತಾಪ, ಭಿನ್ನಾಭಿಪ್ರಾಯ ಮೂಡುವುದು ನಡೆಯುತ್ತದೆ. ಆದರೆ, ಅಪರೂಪ ಎನ್ನುವಂತೆ ನಮ್ಮಲ್ಲಿ ಯಾರೊಬ್ಬರ ನಡುವೆಯೂ ಅಂತಹ ಭಿನ್ನಾಭಿಪ್ರಾಯ ಮೂಡಿದ್ದೆ ಇಲ್ಲ. ನಾನು ಅವರ ಸಹ ಅಧ್ಯಾಪಕನಾಗಿದ್ದಾಗ ಅಥವಾ ಜಯನಗರ ಕಾಲೇಜಿನಿಂದ ಮತ್ತೆ ಗೌರಿಬಿದನೂರಿನ ಕಾಲೇಜಿಗೆ ಪ್ರಿನ್ಸಿಪಾಲನಾಗಿ ಹೋದಾಗಲೂ ನಾವು ಆತ್ಮೀಯ ಗೆಳೆಯರಾಗಿಯೇ ಇದ್ದೆವು. ನಮ್ಮ ಅಧ್ಯಾಪನದ ಜೊತೆಗೆ, ಹಲವು ಇಂಗ್ಲೀಷ್ ಸಾಹಿತ್ಯ ಕೃತಿಗಳ ಮರು ಓದಿನಲ್ಲಿಯೂ ತೊಡಗಿಕೊಂಡದ್ದು ಲಾಭದಾಯಕ ಅನುಭವ.

ಅವರು ನಿವೃತ್ತರಾದ ಮೂರು ವರ್ಷಗಳ ನಂತರ ನಾನು ನಿವೃತ್ತನಾದೆ. ಆದರೆ, ಗೌರಿಬಿದನೂರಿನಲ್ಲಿ ಅವರು, ಬೆಂಗಳೂರಿನಲ್ಲಿ ನಾನು ನಮ್ಮ ಸಾಮಾಜಿಕ ಕಾರ್ಯಗಳನ್ನು ಮುಂದುವರೆಸಿಕೊಂಡೇ ಇದ್ದೆವು. ಇಬ್ಬರ ಕೆಲಸಗಳ ವಿವರಗಳ ವಿನಿಮಯವೂ ನಡೆದಿತ್ತು. ಆ ಅವಧಿಯಲ್ಲಿ ಅವರ ಪ್ರಮುಖ ಕೊಡುಗೆಗಳಾದ ವಿದುರಾಶ್ವತ್ಧದ ʻಸ್ವಾತಂತ್ರ್ಯಸೌಧʼ ಮತ್ತು ಅಂಬೇಡ್ಕರ್ ನೆನಪಿನ ʻಸಮಾನತಾ ಸೌಧʼ ಭವನಗಳು ಅವರ ಕಾರ್ಯಕ್ಷಮತೆಯ ಚಿಹ್ನೆಗಳಾಗಿ ನಿಂತಿವೆ. ಅಲ್ಲದೆ ಅವರ ಸ್ವತಂತ್ರ ಕೃತಿಗಳು, ಅನುವಾದಗಳು ಕನ್ನಡ ಬೌದ್ಧಿಕ ಜಗತ್ತಿಗೆ ಅತ್ಯಂತ ಲಾಭಯುಕ್ತ ಸೃಷ್ಟಿಗಳಾಗಿ ಉಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ.

ಒಂದು ವರ್ಷದಿಂದೀಚೆಗೆ ಅವರ ಆರೋಗ್ಯ ಕ್ಷೀಣಿಸುತ್ತಿದ್ದು, ಅವರು ದೈಹಿಕವಾಗಿ ಅಶಕ್ತರಾದರೂ ಬೌದ್ಧಿಕ, ವೈಚಾರಿಕ ಪ್ರಖರತೆಯನ್ನು ಮಾತ್ರ ಕಳೆದುಕೊಳ್ಳಲಿಲ್ಲ. ನಮ್ಮ ಮುಂದಿನ ಯೋಜನೆಗಳ ಬಗ್ಗೆ ಹಲವಾರು ಬಾರಿ ಮುಖತಃ ಅಥವಾ ದೂರವಾಣಿಯ ಮೂಲಕ ಚರ್ಚಿಸುತ್ತಿದ್ದೆವು. ನಮ್ಮ ಕುಟುಂಬಕ್ಕೆ ಸಹ ತುಂಬ ಹತ್ತಿರವಾಗಿದ್ದ ಅವರು ಕುಟುಂಬದ ಜತೆಗಿನ ನಮ್ಮ ನಂಟು ಅಷ್ಟೇ ಗಟ್ಟಿಯಾದದ್ದು.

ಅವರ ಆದರ್ಶಗಳನ್ನು, ಚಿಂತನೆಗಳನ್ನು ಮುಂದುವರೆಸಿಕೊಂಡು ಹೋಗುವುದೇ ಇಂದಿನ ಪೀಳಿಗೆ ಅವರಿಗೆ ಸಲ್ಲಿಸುವ ಗೌರವಪೂರ್ವಕ ನಮನ. ನಮ್ಮ ನಾಲ್ವರಲ್ಲಿ ಇನ್ನುಳಿದ ನಾನೊಬ್ಬ ಅವರ ಜೊತೆಗಿನ ಗೆಳೆತನದ ನೆನಪುಗಳನ್ನು ಅಮೂಲ್ಯ ನಿಧಿಯಂತೆ ಕಾಪಾಡಿಕೊಂಡು, ನನಗೆ ಸಾಧ್ಯವಾದ ಕೆಲಸವನ್ನು ಮಾಡುತ್ತಾ ಹೋಗುವುದೊಂದೇ ಮುಂದಿನ ದಿನಗಳಲ್ಲಿ ನಾನು ಮಾಡುವ ಕೆಲಸ.

ಆತ್ಮೀಯ ಗೆಳೆಯನಿಗೆ ಭಾರವಾದ ಹೃದಯದ ಬೀಳ್ಕೊಡುಗೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app