'ಪ್ರಗತಿಶೀಲ ರಾಜ್ಯಧರ್ಮ'ದ ಅನಾವರಣ ಪ್ರಧಾನಿಯ ಪರಮ ಕರ್ತವ್ಯವಾಗಬೇಕು

ಪ್ರಧಾನಿ ನರೇಂದ್ರ ಮೋದಿ

ಮಹಾಪುರುಷರ ಪ್ರತಿಮೆ ಅನಾವರಣಕ್ಕೆ ಯಾರೂ ಅಡ್ಡ ಬರುವುದಿಲ್ಲ. ಆದರೆ ಓಟಿನ ರಾಜಕಾರಣವನ್ನು ಆಧರಿಸಿದ ಪ್ರತಿಮೆ ಅನಾವರಣ ನಿರೀಕ್ಷಿತ ಫಲ ನೀಡುವುದಿಲ್ಲ. ಬಡತನ ಮುಕ್ತ, ನಿರುದ್ಯೋಗ ಮುಕ್ತ, ಹಸಿವು, ಅನಾರೋಗ್ಯ, ಶೋಷಣಾ ಮುಕ್ತ ಭಾರತ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೊಡುಗೆ ನಗಣ್ಯ ಎಂದೇ ಹೇಳಬಹುದು

ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ನಿರ್ಮಿಸಿರುವ 108 ಅಡಿ ಎತ್ತರದ 64 ಕೋಟಿ ರೂ. ಮೌಲ್ಯದ ನಾಡಪ್ರಭು ಕೆಂಪೇಗೌಡರ 'ಪ್ರಗತಿಯ ಪ್ರತಿಮೆ'ಯ ಅನಾವರಣ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುಸಜ್ಜಿತ 2ನೇ ಟರ್ಮಿನಲ್ ಲೋಕಾರ್ಪಣೆ, ಮೈಸೂರು - ಬೆಂಗಳೂರು – ಚೆನ್ನೈ ನಡುವಿನ ವಂದೇಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ಮತ್ತು ಭಾರತ್ ಗೌರವ್ ದರ್ಶನ ರೈಲಿನ ಉದ್ಘಾಟನೆ ಸೇರಿದಂತೆ ಕೆಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಾಡಿನ ಜನರ ಗಮನಸೆಳೆದರು. ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಬಹಳ ಹಿಂದೆಯೇ ಮುನ್ನುಡಿ ಬರೆದ ಅಪೂರ್ವ ಆಡಳಿತಗಾರ ಮತ್ತು ಅಭಿವೃದ್ಧಿ ಶಿಲ್ಪಿ ಎಂಬುದು ಹೆಮ್ಮೆಯ ಸಂಗತಿ.

Eedina App

ಮೋದಿಯವರು ಪ್ರಗತಿ ಪ್ರತಿಮೆಯನ್ನು ಅನಾವರಣಗೊಳಿಸುವುದರ ಹಿಂದೆ ಇರುವ ರಾಜಕೀಯ ಲೆಕ್ಕಾಚಾರಗಳನ್ನು ನಾಡಿನ ಜನತೆ ಅರಿಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಒಕ್ಕಲಿಗರ ಮತದ ಮೇಲೆ ಕಣ್ಣಿಟ್ಟು ಈ ಕಾರ್ಯಕ್ರಮ ಆಯೋಜಿಸಿದ್ದಲ್ಲಿ ಮೋದಿಯವರಿಗೆ ಹೆಚ್ಚಿನ ಭ್ರಮನಿರಸನ ಉಂಟಾಗುವುದರಲ್ಲಿ ಆಶ್ಚರ್ಯವಿಲ್ಲ. ಬಹುತೇಕ ಒಕ್ಕಲಿಗರು ಜಾತ್ಯತೀತ ಜನತಾದಳ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಬೆಂಬಲ ನೀಡುವುದು ಖಚಿತ. ಉತ್ತರ ಪ್ರದೇಶದಂತೆ ಕರ್ನಾಟಕದ ರಾಜಕಾರಣವನ್ನು ಧರ್ಮ ಕಾರಣವನ್ನಾಗಿ ಪರಿವರ್ತಿಸುವುದಕ್ಕೆ ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಮೊದಲಾದ ದಾರ್ಶನಿಕರ ತತ್ವಗಳು ಮತ್ತು ಬೆಂಬಲಿಗರು ಅವಕಾಶ ನೀಡುವುದಿಲ್ಲ.

ಬೆಂಗಳೂರು ವಿಮಾಣ ನಿಲ್ದಾಣದಲ್ಲಿ ಅನಾವರಣಗೊಂಡ ಕೆಂಪೇಗೌಡರ ಪ್ರತಿಮೆ
ಬೆಂಗಳೂರು ವಿಮಾಣ ನಿಲ್ದಾಣದಲ್ಲಿ ಅನಾವರಣಗೊಂಡ ಕೆಂಪೇಗೌಡರ ಪ್ರತಿಮೆ

ಶ್ರೀಮಂತರ ಸಹವಾಸದಿಂದ ಪ್ರಬುದ್ಧ ಭಾರತ ಅಸಾಧ್ಯ: ಮಹಾಪುರುಷರ ಪ್ರತಿಮೆ ಅನಾವರಣಕ್ಕೆ ಯಾರೂ ಅಡ್ಡಬರುವುದಿಲ್ಲ. ಆದರೆ ಓಟಿನ ರಾಜಕಾರಣವನ್ನು ಆಧರಿಸಿದ ಪ್ರತಿಮೆ ಅನಾವರಣ ನಿರೀಕ್ಷಿತ ಫಲ ನೀಡುವುದಿಲ್ಲ. ಬಡತನ ಮುಕ್ತ ಭಾರತ, ನಿರುದ್ಯೋಗ ಮುಕ್ತ ಭಾರತ, ಹಸಿವು ಮುಕ್ತ ಭಾರತ, ಅನಾರೋಗ್ಯ ಮುಕ್ತ ಭಾರತ, ಹಿಂದುತ್ವ ಮುಕ್ತ ಭಾರತ, ಶೋಷಣಾ ಮುಕ್ತ ಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿಜಿಯವರ ಕೊಡುಗೆ ನಗಣ್ಯವೆಂದೇ ಹೇಳಬಹುದು. ಮೋದಿ ಸರ್ಕಾರದ ಬಹಳಷ್ಟು ಅಭಿವೃದ್ಧಿ ಯೋಜನೆಗಳು ಬಡವರ ಕಣ್ಣೀರು ಒರೆಸುವಲ್ಲಿ ವಿಫಲವಾಗಿವೆ. ಸುಳ್ಳು ಭರವಸೆಗಳ ಮೂಲಕ ದೇಶ ಬಾಂಧವರನ್ನು ದಾರಿತಪ್ಪಿಸುವುದನ್ನು ಮೋದಿಜಿ ನಿರಂತರವಾಗಿ ಮುಂದುವರೆಸಲು ಸಾಧ್ಯವಿಲ್ಲ. ಶ್ರೀಮಂತರ ಅಭಿವೃದ್ಧಿ ಮತ್ತು ಶ್ರೀಮಂತರ ಸಹವಾಸದಿಂದ ಮೋದಿಜಿ ಪ್ರಬುದ್ಧ ಭಾರತ ನಿರ್ಮಿಸುವುದು ಮತ್ತು ವಿಶ್ವಗುರುವಾಗುವುದು ಸಾಧ್ಯವಿಲ್ಲ.

AV Eye Hospital ad

ಇಂದು ಭಾರತದ ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು ಮೊದಲಾದ ಅಂಚಿಗೆ ನೂಕಲ್ಪಟ್ಟ ಜನವರ್ಗಗಳನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಮತ್ತು ಅಭಿವೃದ್ಧಿ ಪಥದಲ್ಲಿ ಸಾಂವಿಧಾನಿಕ ಆಶಯಗಳಿಗೆ ಅನುಗುಣವಾಗಿ ಮುನ್ನಡೆಸುವ ಉದಾತ್ತ ಗುಣ ಮತ್ತು ಸಾಮರ್ಥ್ಯಗಳನ್ನು ನರೇಂದ್ರಮೋದಿಯವರು ಬೆಳೆಸಿಕೊಳ್ಳಬೇಕು. ಸ್ಮಾರ್ಟ್ ಸಿಟಿಗಿಂತ ʼಸ್ಮಾರ್ಟ್ ಪ್ರಜೆʼಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತ್ಯವಶ್ಯಕ.

ಇದನ್ನು ಓದಿದ್ದೀರಾ? EWS | ಬಡತನದ ಕಾಯಿಲೆಗೆ ಮೀಸಲಾತಿ ಸರಿಯಾದ ಔಷಧವೇ?

ಕೃಷಿ ಮತ್ತು ಗ್ರಾಮೀಣ ಕ್ಷೇತ್ರಗಳ ಅಭಿವೃದ್ಧಿಯಿಂದಲೇ ಭಾರತೀಯರ ಬದುಕು ಹಸನಾಗುತ್ತದೆಂಬ ಸತ್ಯದರ್ಶನ ನಮ್ಮನ್ನು ಆಳುವವರಿಗೆ ಶೀಘ್ರದಲ್ಲೇ ಆಗಬೇಕು. ಬಹುಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ, ಕನಿಷ್ಠ ಅಗತ್ಯಗಳ ಪೂರೈಕೆ ಮತ್ತು ದುರ್ಬಲ ವರ್ಗಗಳ ಒಳಗೊಳ್ಳುವ ಅಭಿವೃದ್ಧಿಯಿಂದ ಮಾತ್ರ ರಾಮರಾಜ್ಯ ನಿರ್ಮಿಸಬಹುದೇ ಹೊರತು ರಾಮಮಂದಿರ ನಿರ್ಮಾಣದಿಂದಲ್ಲ ಎಂಬ ಸತ್ಯವನ್ನು ಮನಗಾಣಬೇಕು.

ಹಿಂದುತ್ವದಿಂದ ಭಾರತದ ಉದ್ದಾರ ಸಾಧ್ಯವಿಲ್ಲ. ಬಹುತ್ವ, ಧರ್ಮ ನಿರಪೇಕ್ಷತೆ, ಸಾಮಾಜಿಕ ಪ್ರಜಾಸತ್ತೆ, ಆರ್ಥಿಕ ಸಮಾನತೆ, ಸುಸ್ಥಿರ ಅಭಿವೃದ್ಧಿ ಮೊದಲಾದವುಗಳಿಂದ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯವಾಗುತ್ತದೆ. ಪ್ರಗತಿಶೀಲ ರಾಜ್ಯಧರ್ಮ ಅನಾವರಣ ಪ್ರಧಾನಿಯ ಪರಮ ಕರ್ತವ್ಯ ಎಂಬುದನ್ನು ಪ್ರಜ್ಞಾವಂತ ಪ್ರಜೆಗಳು ಅವರಿಗೆ ಮನವರಿಕೆ ಮಾಡಿಕೊಡಬೇಕು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app