ಸುದ್ದಿ ಪ್ಲಸ್ | ತನಗೆ ತೊಂದರೆ ಮಾಡಿಕೊಳ್ಳದೆ ರಷ್ಯಾಗೆ ತೊಂದರೆ ಕೊಡಲು ಅಮೆರಿಕಗೆ ಅಸಾಧ್ಯ

Prabhat Patnaik

ರಷ್ಯಾ ಬೃಹತ್ ಆರ್ಥಿಕತೆ. ಹಾಗಾಗಿ, ಅದಕ್ಕೆ ಘಾಸಿ ಮಾಡಲು ಮುಂದಾದರೆ ಅಮೆರಿಕಕ್ಕೂ ಘಾಸಿ ಆಗುವುದು ನಿಶ್ಚಿತ. ಹಿಂದುಳಿದ ದೇಶಗಳು ರಷ್ಯಾವನ್ನು ಹೆಚ್ಚು ಅವಲಂಬಿಸಿರುವುದರಿಂದ ಅಮೆರಿಕ ಹೇಳಿದ್ದನ್ನು ಕೇಳುತ್ತ ಕೂರುವುದಿಲ್ಲ. ಬದಲಿಗೆ, ತಮ್ಮದೇ ವ್ಯವಸ್ಥೆ ಮಾಡಿಕೊಳ್ಳುತ್ತವೆ. ಮುಂದೊಮ್ಮೆ ಈ ದೇಶಗಳು, ಅಮೆರಿಕದ ನಿರ್ಬಂಧಗಳನ್ನು ವಿರೋಧಿಸಲೂಬಹುದು

ನಮ್ಮ ನಡುವಿನ ಪ್ರತಿಭಾವಂತ ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್ ಅವರಿಗೆ ಮಾಲ್ಕಮ್ ಆದಿಶೇಷಯ್ಯ ಪ್ರಶಸ್ತಿ ಬಂದಿದೆ. ಮೂಲಭೂತವಾಗಿ ಮಾರ್ಕ್ಸ್‌ವಾದಿ ನಿಲುವಿನ ಪಟ್ನಾಯಕ್ ಅವರ ಚಿಂತನೆ ಅರ್ಥಶಾಸ್ತ್ರ ವಲಯವನ್ನು ಸಾಕಷ್ಟು ಪ್ರಭಾವಿಸಿದೆ. ಅವರ ಹಲವು ಗ್ರಂಥಗಳು, ವಿಶೇಷವಾಗಿ ಸಾಮ್ರಾಜ್ಯಶಾಹಿಯನ್ನು ಕುರಿತ ಪುಸ್ತಕಗಳು ಸಾಕಷ್ಟು ಚರ್ಚೆ ಹುಟ್ಟುಹಾಕಿವೆ. ಅಧ್ಯಯನದ ಹರಿವನ್ನು ವಿಸ್ತರಿಸಿವೆ.

ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) 'ಸೆಂಟರ್ ಫಾರ್ ಎಕನಾಮಿಕ್ ಸ್ಟಡೀಸ್ ಅಂಡ್ ಪ್ಲಾನಿಂಗ್' ವಿಭಾಗದಲ್ಲಿ ಹಲವು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದ ಇವರು, ನಿರಂತರವಾಗಿ ಅಧ್ಯಯನ, ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಅವರ ಚಿಂತನೆಗಳು ನಮ್ಮಂತಹ ಹಲವರನ್ನು ಪ್ರಭಾವಿಸಿರುವುದರಲ್ಲಿ ಅನುಮಾನವಿಲ್ಲ. ನೀವು ಅವರ ನಿಲುವನ್ನು ಒಪ್ಪದೆ ಇರಬಹುದು. ಆದರೆ, ಅವರ ವಿಶ್ಲೇಷಣೆಯನ್ನು ಕಡೆಗಣಿಸುವುದಕ್ಕೆ ಸಾಧ್ಯವೇ ಇಲ್ಲ. ಅಮೆರಿಕವು ರಷ್ಯಾ ಮೇಲೆ ವಿಧಿಸುತ್ತಿರುವ ದಿಗ್ಬಂಧನಗಳಿಂದ ಅಮೆರಿಕಗೂ ತೊಂದರೆಯಾಗಲಿದೆ; ಅಮೆರಿಕ ಮತ್ತು ಡಾಲರಿನ ಅಧಿಪತ್ಯ ಶಿಥಿಲಗೊಳ್ಳುವ ಸಾಧ್ಯತೆ ಹೆಚ್ಚು ಎಂದು ಪ್ರತಿಪಾದಿಸುತ್ತಿರುವ ಅರ್ಥಶಾಸ್ತ್ರಜ್ಞರಲ್ಲಿ ಅವರು ಪ್ರಮುಖರು. ಅದಕ್ಕೆ ಸಂಬಂಧಿಸಿದಂತೆ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ ಕೆಲವು ವಿಚಾರಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಹಂಚಿಕೊಳ್ಳುತ್ತಿದ್ದೇನೆ - ಅವರದೇ ಮಾತುಗಳಲ್ಲಿ.

* * * * *

ಅಮೆರಿಕ ಇತ್ತೀಚಿಗೆ ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೇರಿದೆ. ಹಲವು ಯುರೋಪಿಯನ್ ದೇಶಗಳು ಇದನ್ನು ಒಪ್ಪಿಕೊಂಡಿವೆ. ಉಳಿದ ದೇಶಗಳೂ ಇದನ್ನು ಅನುಸರಿಸುವಂತೆ ಅಮೆರಿಕ ಒತ್ತಾಯಿಸುತ್ತಿದೆ. ಈ ಆರ್ಥಿಕ ನಿರ್ಬಂಧಗಳು ಇತ್ತೀಚಿನ ದಿನಗಳಲ್ಲಿ ಸಾಮ್ರಾಜ್ಯಶಾಹಿಗಳಿಗೆ ಒಂದು ಅಸ್ತ್ರವಾಗಿದೆ. ಅಮೆರಿಕವು ತನ್ನ ಅಧಿಪತ್ಯವನ್ನು ಒಪ್ಪಿದ ದೇಶಗಳ ಮೇಲೆ ಇಂತಹ ಆರ್ಥಿಕ ನಿರ್ಬಂಧಗಳನ್ನು ಹೇರುವುದು ಮಾಮೂಲಿ. ಕೆಲವು ವರ್ಷಗಳ ಹಿಂದೆ ಇರಾನ್ ಮತ್ತು ವೆನಿಜುವೆಲಾ ದೇಶಗಳ ಮೇಲೆ ನಿರ್ಬಂಧವನ್ನು ಹೇರಿದ್ದನ್ನು ಕಂಡಿದ್ದೇವೆ. ಆದರೆ, ಈ ರೀತಿಯ ನಿರ್ಬಂಧಗಳನ್ನು ಹೇರುವುದು ಕೆಲವು ವರ್ಷಗಳ ಹಿಂದೆ ಸಾಧ್ಯವಿರಲಿಲ್ಲ. ನಿರ್ಬಂಧಗಳು ಫಲಕಾರಿಯಾಗಬೇಕಾದರೆ ಅದು ಜಾರಿಯಾಗುವುದಕ್ಕೆ ಅನುಕೂಲವಾದ ಒಂದು ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆ ಇರಬೇಕು. ಅಂತಹ ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆ ಕೆಲವು ದಶಕಗಳ ಹಿಂದೆ ಇರಲಿಲ್ಲ. 

Image
Jo Biden
ಅಮೆರಿಕ ಅಧ್ಯಕ್ಷ ಜೋ ಬಿಡೆನ್

ಎರಡನೆಯ ಜಾಗತಿಕ ಯುದ್ಧದ ನಂತರ ಹಲವು ತೃತೀಯ ಜಗತ್ತಿನ ರಾಷ್ಟ್ರಗಳು ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯಗೊಂಡವು. ಅಂತಾರಾಷ್ಟ್ರೀಯ ಆರ್ಥಿಕತೆಯ ಹಿಡಿತದಿಂದ ಕಳಚಿಕೊಂಡು ತಮ್ಮದೇ ಆದ ಸ್ವತಂತ್ರ ಆರ್ಥಿಕತೆಯನ್ನು ಕಟ್ಟಿಕೊಳ್ಳುವ ಪ್ರಯತ್ನ ಪ್ರಾರಂಭಿಸಿದವು. ಈ ಹಿಂದೆ ಅವೆಲ್ಲ ಪ್ರಾಥಮಿಕ ವಸ್ತುಗಳ ಉತ್ಪಾದಕರಾಗಿ ವಸಾಹತುಶಾಹಿ ರಾಷ್ಟ್ರಗಳಿಗೆ ಅವನ್ನು ಅಗ್ಗದ ಬೆಲೆಯಲ್ಲಿ ಸರಬರಾಜು ಮಾಡಿಕೊಂಡು, ಅಲ್ಲಿಂದ ತಮಗೆ ಬೇಕಾದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದವು. ಸ್ವತಂತ್ರ ದೇಶಗಳಾದ ಮೇಲೆ ಅವುಗಳು ಈ ಸಾಮ್ರಾಜ್ಯಶಾಹಿಗಳಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ, ಆಮದು ಮಾಡಿಕೊಳ್ಳುತ್ತಿದ್ದ ಪದಾರ್ಥಗಳನ್ನು ದೇಶದಲ್ಲೇ  ಉತ್ಪಾದಿಸಲು ಕೈಗಾರಿಕೆಗಳನ್ನು ಪ್ರಾರಂಭಿಸಿದವು. ಅಂತಾರಾಷ್ಟ್ರೀಯ ಜಾಗತಿಕ ಮಾರುಕಟ್ಟೆಯ ಭಾಗವಾಗದೆ ಪ್ರತ್ಯೇಕ ರಾಷ್ಟ್ರಗಳಾಗಿ ಉಳಿದುಕೊಂಡಿದ್ದ ಸಮಾಜವಾದಿ ದೇಶಗಳು ಈ ತೃತೀಯ ರಾಷ್ಟ್ರಗಳಿಗೆ ನೆರವಾಗಲು ಸದಾ ತಯಾರಿದ್ದವು. ಹಾಗಾಗಿ, ಸಾಮ್ರಾಜ್ಯಶಾಹಿ ದೇಶಗಳಿಗೆ ಜಗತ್ತಿನಾದ್ಯಂತ ಅಧಿಪತ್ಯ ನಡೆಸಲು ಸಾಧ್ಯವಿರಲಿಲ್ಲ. ಈಗಿನ ರೀತಿಯ ನಿರ್ಬಂಧಗಳನ್ನು ಹೇರುವುದು ಕೂಡ ಆಗ ಸಾಧ್ಯವಿರಲಿಲ್ಲ.

ನವ ಉದಾರವಾದಿ ಆರ್ಥಿಕ ವ್ಯವಸ್ಥೆ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಆಳ್ವಿಕೆಯಲ್ಲಿ ಜಾರಿಗೆ ಬಂದ ಮೇಲೆ, ಸರಕು, ಸೇವೆ, ಬಂಡವಾಳ ಹಾಗೂ ಹಣಕಾಸಿನ ಚಲನೆ ದೇಶಗಳ ನಡುವೆ ಸಾಧ್ಯವಾಯಿತು. ದೇಶಗಳು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚೆಚ್ಚು ಆಮದು ಮಾಡಿಕೊಳ್ಳುತ್ತಿವೆ. ಆಮದು ಅವಲಂಬನೆ ಹೆಚ್ಚಾಗಿದೆ. ತೃತೀಯ ಜಗತ್ತಿನ ರಾಷ್ಟ್ರಗಳು ನೇರ ವಿದೇಶಿ ಹೂಡಿಕೆಯನ್ನು ಅತಿಯಾಗಿ ಅವಲಂಬಿಸಿವೆ. ವಿದೇಶಿ ವ್ಯಾಪಾರ ಹೆಚ್ಚಾದಂತೆ ಪಾವತಿ ಶಿಲ್ಕಿನ ಪಾವತಿಗೆ ವಿದೇಶಿ ಹಣ ಹೆಚ್ಚೆಚ್ಚು ಅವಶ್ಯವಾಗತೊಡಗಿತು. ಇಡೀ ಜಾಗತಿಕ ಆರ್ಥಿಕತೆಯನ್ನು ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆ ನಿರ್ವಹಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಿರ್ಬಂಧ ಪರಿಣಾಮಕಾರಿಯಾಗಬಲ್ಲದು.

ವಾಸ್ತವ ಅಂದರೆ, ನವ ಉದಾರೀಕರಣ ನೀತಿಯೇ ಒಂದರ್ಥದಲ್ಲಿ ಸಾಮ್ರಾಜ್ಯಶಾಹಿ ಆಳ್ವಿಕೆಯ ಒಂದು ಅಸ್ತ್ರ. ಯಾಕೆಂದರೆ, ಕಚ್ಚಾ ಪದಾರ್ಥಗಳ, ಕೃಷಿ ಉತ್ಪನ್ನಗಳ ಬೆಲೆಗಳು ಏರಲು ಪ್ರಾರಂಭವಾದೊಡನೆ ತೃತೀಯ ಜಗತ್ತಿನ ರಾಷ್ಟ್ರಗಳ ಮೇಲೆ ಒತ್ತಡ ಪ್ರಾರಂಭವಾಗುತ್ತದೆ. ಕಠಿಣ ಆರ್ಥಿಕ ನೀತಿಯನ್ನು ಅನುಸರಿಸಬೇಕೆನ್ನುವ, ವಿತ್ತೀಯ ಕೊರತೆಯನ್ನು ಕಡಿಮೆ ಮಾಡಬೇಕೆನ್ನುವ  ಒತ್ತಡ ಬರುತ್ತದೆ. ಸಾಮಾನ್ಯವಾಗಿ ಈ ಪದಾರ್ಥಗಳನ್ನು ಉತ್ಪಾದಿಸುವ ದೇಶಗಳು ತೃತೀಯ ಜಗತ್ತಿನ ದೇಶಗಳಾಗಿರುತ್ತವೆ. ಸ್ವಾಭಾವಿಕವಾಗಿಯೇ ಇಂತಹ ಕ್ರಮಗಳಿಂದ ಅಲ್ಲಿಯ ಶ್ರಮಿಕ ವರ್ಗದ ವರಮಾನ ಕಡಿಮೆಯಾಗುತ್ತದೆ. ಆ ಸರಕುಗಳ ಬೇಡಿಕೆಯೂ ಕಡಿಮೆಯಾಗುತ್ತದೆ. ಆ ಮೂಲಕ ಅವುಗಳ ಬೆಲೆ ಕಡಿಮೆಯಾಗುತ್ತದೆ. ಮೂಲ ಸರಕುಗಳ ಬೆಲೆ ಕಡಿಮೆ ಇರುವಂತೆ ನೋಡಿಕೊಳ್ಳುವುದು ನವ ಉದಾರೀಕರಣ ನೀತಿಯ ಹಿಂದಿನ ಉದ್ದೇಶವಾಗಿರುತ್ತದೆ. ಇದು ತೀರಾ ಮಾಮೂಲಿಯಾಗಿ ಕಾಣುವ ನವ ಉದಾರೀಕರಣ ಕ್ರಮ. ಹಣದುಬ್ಬರವನ್ನು ಕಡಿಮೆ ಇರುವಂತೆ ನೋಡಿಕೊಳ್ಳುವುದರ ಮೂಲಕ ಅಂತಾರಾಷ್ಟ್ರೀಯ ಹಣಕಾಸಿನ ಹಿತಾಸಕ್ತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ.

ಇದನ್ನು ಓದಿದ್ದೀರಾ?: ಸುದ್ದಿ ಪ್ಲಸ್ | ಕೇವಲ ರಫ್ತು ಹೆಚ್ಚಾದರೆ ಸಾಕೇ?

ಈಗ ನಾವು ಕಾಣುತ್ತಿರುವ ದಿಗ್ಬಂಧನ ಇದನ್ನೂ ಮೀರಿದ ಕ್ರಮ ಅನ್ನಬಹುದು. ನಿಜ ಹೇಳಬೇಕೆಂದರೆ, ಇದು ನವ ಉದಾರವಾದಿ ವ್ಯವಸ್ಥೆಗೆ ವ್ಯತಿರಿಕ್ತವಾಗಿದೆ. ತೃತೀಯ ಜಗತ್ತುಗಳ ಮೇಲೆ ನವ ಉದಾರವಾದಿ ನೀತಿಯನ್ನು ಹೇರುವಾಗ, “ಇವನ್ನು ನಿಮ್ಮ ಒಳಿತಿಗಾಗಿ ಹೇರುತ್ತಿದ್ದೇವೆ. ಇದರಿಂದ ನಿಮ್ಮ ದೇಶದ ಆರ್ಥಿಕ ಬೆಳವಣಿಗೆ ಹೆಚ್ಚುತ್ತದೆ, ಬಡತನ ಕಡಿಮೆಯಾಗುತ್ತದೆ. ಹಾಗಾಗಿ ಇವನ್ನು ಅನುಷ್ಠಾನಕ್ಕೆ ತನ್ನಿ,” ಎಂದು ಹೇಳುತ್ತಿರುತ್ತಾರೆ. ಆದರೆ, ದಿಗ್ಬಂಧನ ಹಾಗಲ್ಲ. ಅದು ನವ ಉದಾರವಾದಿ ನೀತಿಗೆ ವ್ಯತಿರಿಕ್ತ ಮಾತ್ರವಲ್ಲ, ಈ ಆಳ್ವಿಕೆ ಹೇಳುವ ಕಾನೂನನ್ನೇ ಇದು ಉಲ್ಲಂಘಿಸುತ್ತದೆ. ಇರಾನ್ ಉದಾಹರಣೆಯನ್ನು ತೆಗೆದುಕೊಳ್ಳಿ. ಇಂದಿನ ಸಂದರ್ಭದ ಬಗ್ಗೆ ನಾನು ಮಾತನಾಡುತ್ತಿಲ್ಲ, ಹಿಂದೆ ಅಮೆರಿಕ ಮತ್ತು ಪಾಶ್ಚಾತ್ಯ ದೇಶಗಳು ಇರಾನಿನ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂದ್ದವು. ಅದು, ಎಲ್ಲ ಅಂತರರಾಷ್ಟ್ರೀಯ ಕಾನೂನುಗಳ ಸಂಪೂರ್ಣ ಉಲ್ಲಂಘನೆ. ಯಾಕೆಂದರೆ, ಅವರು ತಮ್ಮ ಹಣವನ್ನು ಅಮೆರಿಕದ ಬ್ಯಾಂಕುಗಳಲ್ಲಿ ಠೇವಣಿಯಾಗಿ ಇಟ್ಟಿದ್ದರು. ಹಾಗೆ ಅವರು ಠೇವಣಿ ಇಟ್ಟ ಹಣವನ್ನು ಆ ದೇಶದ ಸರ್ಕಾರದ ಅಣತಿಯ ಮೇರೆಗೆ ಅಮೆರಿಕದ ಬ್ಯಾಂಕುಗಳು ಮುಟ್ಟುಗೋಲು ಹಾಕಿಕೊಂಡವು. ತಮ್ಮ ಹಣವನ್ನು ಹಿಂತೆಗೆದುಕೊಳ್ಳುವುದಕ್ಕೆ ಠೇವಣಿದಾರರಿಗೆ ಅವಕಾಶವೇ ಇರಲಿಲ್ಲ. ಯಾವ ಕಾನೂನೂ ಇದನ್ನು ಸರಿ ಅನ್ನುವುದಿಲ್ಲ. ಈಗ ಆಗುತ್ತಿರುವುದೂ ಅದೇ.

ಆದರೆ, ಈ ರೀತಿಯ ದಿಗ್ಬಂಧನದಿಂದ ಅಂತಿಮವಾಗಿ ಸಾಮ್ರಾಜ್ಯಶಾಹಿ ಆಧಿಪತ್ಯಕ್ಕೆ ತೊಂದರೆ ಆಗಿಬಿಡಬಹುದು. ಸಾಮ್ರಾಜ್ಯಶಾಹಿ ವ್ಯವಸ್ಥೆಯೇ ನಾಶವಾಗಿಬಿಡುತ್ತದೆ ಅಂತ ಅಲ್ಲ. ಈಗಿರುವ ವ್ಯವಸ್ಥೆಗಿಂತ ಭಿನ್ನವಾದ ಮತ್ತೊಂದು ವ್ಯವಸ್ಥೆ ಸೃಷ್ಟಿಯಾಗುವುದಕ್ಕೆ ಇದು ಪ್ರೇರೇಪಿಸುತ್ತದೆ. ಹಾಗಾದಾಗ, ನವ ವಸಾಹತುಶಾಹಿ ವ್ಯವಸ್ಥೆಯನ್ನು ಶಿಥಿಲಗೊಳ್ಳುತ್ತದೆ. ಹಾಗೆಯೇ, ಡಾಲರಿನ ಆಧಿಪತ್ಯಕ್ಕೂ ತೊಂದರೆ ಆಗಬಹುದು. ಮೊದಲು ಸೋವಿಯತ್ ಒಕ್ಕೂಟ ಅಸ್ತಿತ್ವದಲ್ಲಿದ್ದಾಗ ವ್ಯವಹಾರ ರುಪಾಯಿ ಅಥವಾ ರೂಬಲ್ ಮೂಲಕ ನಡೆಯುತ್ತಿತ್ತು. ಅಂದರೆ, ಆಗಿನ ದ್ವಿಪಕ್ಷೀಯ ಒಪ್ಪಂದದಲ್ಲಿ ಇಂಡಿಯಾ ಮತ್ತು ಸೋವಿಯತ್ ಯೂನಿಯನ್ ನಡುವಿನ ಎಲ್ಲ ವ್ಯವಹಾರಗಳು ರುಪಾಯಿ ಅಥವಾ ರೂಬಲ್‌ನಲ್ಲಿ ನಡೆಯುತ್ತಿತ್ತು. ಡಾಲರ್ ಬಳಕೆ ಆಗುತ್ತಿರಲಿಲ್ಲ. ವ್ಯಾಪಾರದ ಪಾವತಿ ಶಿಲ್ಕನ್ನು ಕೂಡ ಡಾಲರಿನಲ್ಲಿ ಲೆಕ್ಕ ಮಾಡುತ್ತಿರಲಿಲ್ಲ. ಆಯಾ ದೇಶಗಳ ನಾಣ್ಯಗಳಲ್ಲಿ ಶಿಲ್ಕನ್ನು ನಂತರದ ದಿನಗಳಲ್ಲಿ ಇತ್ಯರ್ಥ ಮಾಡಿಕೊಳ್ಳುತ್ತಿದ್ದರು. ಅಂದರೆ, ಲೆಕ್ಕ ಹಾಕುವುದಕ್ಕಾಗಲೀ ಅಥವಾ ವಿನಿಮಯದ ಮಾಧ್ಯಮವಾಗಿಯಾಗಲೀ ಡಾಲರ್ ಅನ್ನು ಬಳಸುತ್ತಿರಲಿಲ್ಲ. ಅದು ಸರಿ ಕೂಡ. ಒಂದು ದೇಶ ಇನ್ನೊಂದು ದೇಶದಿಂದ ತನಗೆ ಬೇಕಾದ ವಸ್ತುವನ್ನು ಕೊಳ್ಳುವುದಕ್ಕೆ ಮೂರನೇ ದೇಶದ ನಾಣ್ಯವನ್ನು ಸಂಗ್ರಹಿಸಿಕೊಟ್ಟಕೊಳ್ಳಬೇಕು ಅನ್ನುವ ಅಂತಾರಾಷ್ಟ್ರೀಯ ವ್ಯವಸ್ಥೆಯೇ ಅಸಂಗತ. ಹಾಗಾಗಿ ಈ ವ್ಯವಸ್ಥೆಯನ್ನು ಮೀರಿಕೊಂಡು ರುಪಾಯಿಯಲ್ಲಿ ವ್ಯವಹಾರ ನಡೆಸೋಣ ಅನ್ನುವುದು ನ್ಯಾಯಯುತವಾದ ವ್ಯವಸ್ಥೆಯೇ. ಈಗ ಭಾರತಕ್ಕೆ ರಷ್ಯಾದಿಂದ ಪೆಟ್ರೋಲ್ ಅಥವಾ ರಸಾಯನಿಕ ಗೊಬ್ಬರವನ್ನು ಆಮದು ಮಾಡಿಕೊಳ್ಳುವುದು ಹೆಚ್ಚು ಅಗ್ಗ. ಹಾಗಾಗಿ, ರುಪಾಯಿಯ ಮೂಲಕ ಹಣವನ್ನು ಪಾವತಿಸುವ ಕ್ರಮ ಹೆಚ್ಚು ಅನುಕೂಲ. ಪರಿಸ್ಥಿತಿ ಹೀಗಿರುವಾಗ, ಅಮೆರಿಕ ಹೆಚ್ಚೆಚ್ಚು ದಿಗ್ಬಂಧನ ಹೇರುತ್ತ ಹೋದರೆ, ಅಂತಾರಾಷ್ಟ್ರೀಯ ಆಳ್ವಿಕೆ ಶಿಥಿಲಗೊಳ್ಳುವ ಸಾಧ್ಯತೆ ಹೆಚ್ಚು. ಐರೋಪ್ಯ ದೇಶಗಳಲ್ಲೂ ಅಮೆರಿಕವನ್ನು ಹಿಂಬಾಲಿಸುವ ನೀತಿಗೆ ಸಾಕಷ್ಟು ವಿರೋಧ ಬರುತ್ತಿದೆ.

Image
Protest
ರಷ್ಯಾದಿಂದ ತೈಲ ಆಮದು ನಿಲ್ಲಿಸಬೇಕೆಂದು ಆಗ್ರಹಿಸಿ, ಅಮೆರಿಕದ ಬೋಸ್ಟನ್‌ನಲ್ಲಿ ನಡೆದ ಪ್ರತಿಭಟನೆಯ ದೃಶ್ಯ

ವಿಪರ್ಯಾಸವೆಂದರೆ, ದಿಗ್ಬಂಧನಗಳನ್ನು ಹಾಕಿದ ಮೇಲೆ ಐರೋಪ್ಯ ದೇಶಗಳಿಗೆ ಅಮದಾಗುತ್ತಿದ್ದ ಪೆಟ್ರೋಲ್ ಪ್ರಮಾಣ ಹೆಚ್ಚಿದೆ. ಪೆಟ್ರೋಲ್ ಉತ್ಪನ್ನಗಳ ಕೊರತೆ ಬೀಳಬಹುದು ಅನ್ನುವ ಅನುಮಾನದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಹೆಚ್ಚಿದೆ. ಇದರಿಂದ ರಷ್ಯಾದ ಇಂಧನ ಅಗ್ಗವಾಗಿದೆ. ಯುರೋಪ್ ದೇಶಗಳು ಇದರ ಅನುಕೂಲ ಪಡೆದುಕೊಳ್ಳಲು ಹೆಚ್ಚೆಚ್ಚು ಅಮದು ಮಾಡಿಕೊಳ್ಳುತ್ತಿವೆ. ಹಾಗಾಗಿ, ಅವು ಆಮದನ್ನು ಬಹಿಷ್ಕರಿಸುವ ಸಾಧ್ಯತೆಯಂತೂ ಇಲ್ಲ.

ವಾಸ್ತವ ಅಂದರೆ, ತನಗೆ ತೊಂದರೆ ಮಾಡಿಕೊಳ್ಳದೆ ರಷ್ಯಾಕ್ಕೆ ತೊಂದರೆ ಮಾಡುವುದಕ್ಕೆ ಅಮೆರಿಕಗೆ ಸಾಧ್ಯವಿಲ್ಲ. ಈಗಾಗಲೇ ಅದು ಎಲ್ಲರಿಗೂ ಕಾಣುತ್ತಿದೆ. ಅಮೆರಿಕ ತಾನು ಆರ್ಥಿಕ ನಿರ್ಬಂಧಗಳನ್ನು ಹಾಕಿದ್ದ ವೆನಿಜುವೆಲಾ ಜೊತೆ ಪೆಟ್ರೋಲನ್ನು ಆಮದು ಮಾಡಿಕೊಳ್ಳುವುದಕ್ಕೆ ಮಾತುಕತೆ ನಡೆಸುತ್ತಿದೆ. ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ವಿಪರೀತ ಏರಿದೆ. ಕ್ಯಾಲಿಫೋರ್ನಿಯಾದಲ್ಲಿ ಸಾಮಾನ್ಯವಾಗಿ ಒಂದೂವರೆ ಡಾಲರ್‌ಗೆ ಸಿಗುತ್ತಿದ್ದುದು ಸುಮಾರು ಏಳು ಡಾಲರ್ ಆಗಿದೆ. ಈಗ ಅಲ್ಲಿ ಹಣದುಬ್ಬರದ ದರ ಶೇಕಡ 7.5 ಆಗಿದೆ. ಇದು ತುಂಬಾ ಹೆಚ್ಚು. ರಷ್ಯಾ ಬೃಹತ್ ಆರ್ಥಿಕತೆ ಆಗಿರುವುದರಿಂದ, ರಷ್ಯಾವನ್ನು ಘಾಸಿಗೊಳಿಸಿದರೆ ಅಮೆರಿಕವೂ ಘಾಸಿಗೆ ಒಳಗಾಗಲೇಬೇಕು. ಹಿಂದುಳಿದ ದೇಶಗಳು ರಷ್ಯಾವನ್ನು ಬಹುವಾಗಿ ಅವಲಂಬಿಸಿರುವುದರಿಂದ ಅವು ಸುಮ್ಮನೆ ಅಮೆರಿಕ ಹೇಳಿದ್ದನ್ನು ಕೇಳುತ್ತ ಕೂರುವುದಿಲ್ಲ. ಬದಲಿಗೆ, ತಮ್ಮದೇ ಆದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತವೆ. ಯುದ್ಧ ಮುಗಿದ ಮೇಲೂ ಅಮೆರಿಕ ಆರ್ಥಿಕ ದಿಗ್ಬಂಧನವನ್ನು ಮುಂದುವರಿಸಿದರೆ, ತೃತೀಯ ಜಗತ್ತಿನ ರಾಷ್ಟ್ರಗಳು ಬಹುಶಃ ಅದನ್ನು ವಿರೋಧಿಸುತ್ತವೆ.

ಮುಖ್ಯಚಿತ್ರದಲ್ಲಿ - ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್
ನಿಮಗೆ ಏನು ಅನ್ನಿಸ್ತು?
0 ವೋಟ್