ʼವಂದೇ ಭಾರತ್ʼ ಕೇವಲ ಪ್ರಚಾರದ ರೈಲಾಗದಿರಲಿ

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಮೋದಿ ಚಾಲನೆ

ಈಗಾಗಲೇ ಚಾಲ್ತಿಯಲ್ಲಿರುವ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ವಂದೇ ಭಾರತ್ ಎರಡಕ್ಕೂ ಭಾರಿ ವ್ಯತ್ಯಾಸವೇನಿಲ್ಲ. ಹೊರಗಿನ ರೂಪವನ್ನು ಆಕರ್ಷಕವಾಗಿ ಮಾಡಿರುವುದು, ಒಳಗಡೆ ಸ್ವಲ್ಪ ರೀಕ್ಲಾಯಿನೆರ್ ಸೀಟುಗಳನ್ನು ಹಾಕಿರುವುದು. ಹೊರಗಿನ ವಿನ್ಯಾಸ ಒಂದೇ ತಿಂಗಳಲ್ಲಿ ಮೂರು ಬಾರಿ ಜಾನುವಾರುಗಳಿಗೆ ಗುದ್ದಿ ಮುರಿದು ಬಿದ್ದಿರುವುದು ಎಲ್ಲರಿಗೂ ತಿಳಿದೇ ಇದೆ

ಚಲನಚಿತ್ರದಲ್ಲಿ ಬರುವ ಒಂದು ಹಾಸ್ಯ ಸನ್ನಿವೇಶದಲ್ಲಿ ಹಾಸ್ಯ ನಟ ಇನ್ನೊಬ್ಬ ಹಾಸ್ಯ ನಟನಿಗೆ ʼನೀನು ಎಲ್ಲಿಯವರೆಗೆ ಓದಿದ್ದೀಯʼ ಎಂದು ಕೇಳುತ್ತಾ̧ನೆ. ಆ ಹಾಸ್ಯ ನಟ ʼನಾನು ಏಳನೇ ತರಗತಿ ಪಾಸುʼ ಎನ್ನುತ್ತಾನೆ. ಆಗ ಮೊದಲನೇ ಹಾಸ್ಯ ನಟ ಹೇಳುತ್ತಾನೆ, ʼನಾನು ಎಸ್. ಎಸ್.ಎಲ್.ಸಿ ಫೇಲ್ʼ. ಆಗ ಎರಡನೆ ಹಾಸ್ಯ ನಟ, ʼಹಾಗಿದ್ದರೆ ನಾನು ಏಳನೇ ತರಗತಿ ಪಾಸ್, ನೀನು ಎಸ್. ಎಸ್.ಎಲ್.ಸಿ  ಫೇಲ್ ಆದ್ದರಿಂದ ನಾನೇ ಗ್ರೇಟ್ʼ ಎಂಬ ತರ್ಕವನ್ನು ಮುಂದಿಡುತ್ತಾನೆ. ಹಾಗಿದೆ ಚೆನ್ನೈ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಚಾರ!.

ಇಂದು ಬೆಳಿಗ್ಗೆ 5:50 ಚೆನ್ನೈ ಎಂಜಿಆರ್ ಸೆಂಟ್ರಲ್‌ನಿಂದ ಬಿಟ್ಟ ರೈಲು ಬೆಂಗಳೂರಿಗೆ 10:25ಕ್ಕೆ ಬಂದು ತಲುಪಿದೆ. 5 ನಿಮಿಷದ ವಿರಾಮದ ನಂತರ ಬೆಂಗಳೂರಿನಿಂದ ಮೈಸೂರಿಗೆ ತೆರಳಲಿದ್ದ ರೈಲಿಗೆ ಚಾಲನೆಯನ್ನು ಸ್ವತಃ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊಡುತ್ತಿದ್ದಾರೆ ಎನ್ನುವುದು ವಿಶೇಷ. ಇನ್ನೊಂದು ವಿಶೇಷವೆಂದರೆ ಅದರ ಹೊರಗಿನ ರೂಪವನ್ನು ಆಕರ್ಷಕವಾಗಿ ಮಾಡಿರುವುದು, ಅತ್ಯಾಧುನಿಕ ಸೌಲಭ್ಯಗಳನ್ನು (ಅಂತರ್ಜಾಲ ಸಂಪರ್ಕ) ಒದಗಿಸಿರುವುದು ಮತ್ತು ಒಳಗಡೆ ಸ್ವಲ್ಪ ರೀಕ್ಲಾಯಿನೆರ್ ಸೀಟುಗಳನ್ನು ಹಾಕಿರುವುದು. ಈ ರೀತಿಯ ರೀಕ್ಲಾಯಿನೆರ್ ಸೀಟು ಈಗಾಗಲೇ ಹಲವು ರೈಲುಗಳಲ್ಲಿ ಚಾಲ್ತಿಯಲ್ಲಿದೆ ಮತ್ತು ಹೊರಗಿನ ಈ ಆಕರ್ಷಕ ವಿನ್ಯಾಸವನ್ನು ಒಂದೇ ತಿಂಗಳಲ್ಲಿ ಮೂರು ಬಾರಿ ಎಮ್ಮೆ ಮತ್ತು ದನಕ್ಕೆ ಗುದ್ದಿ ಮುರಿದು ಬಿದ್ದಿರುವ ಎಲ್ಲರಿಗೂ ತಿಳಿದೇ ಇದೆ.

ಈಗಾಗಲೇ ಚಾಲ್ತಿಯಲ್ಲಿರುವ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ವಂದೇ ಭಾರತ್ ಹೋಲಿಕೆಯನ್ನು ನೋಡಿದರೆ ಎರಡಕ್ಕೂ ಬಾರಿ ವ್ಯತ್ಯಾಸವೇನಿಲ್ಲ. 1994ರಲ್ಲೇ ಶುರುವಾದ ಚೆನ್ನೈ ಮತ್ತು ಮೈಸೂರಿನ ನಡುವಿನ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಅಬ್ಬರ ಪ್ರಚಾರದ ವಂದೇ ಭಾರತ್ ರೈಲಿಗೆ ಹೋಲಿಸಿದರೆ ತರ್ಕ ಎಸ್. ಎಸ್.ಎಲ್.ಸಿ ಫೇಲ್ ಹಾಗೂ ಏಳನೇ ತರಗತಿ ಪಾಸ್ ತರ್ಕಕ್ಕೆ ಕೊಂಡೊಯುತ್ತದೆ. ಶತಾಬ್ದಿ ಚೆನ್ನೈನಿಂದ 6 ಗಂಟೆಗೆ ಹೊರಡುತ್ತದೆ ಮತ್ತು ಕಟ್ಪಾಡಿ ಜಂಕ್ಷನ್ ಮತ್ತು ಬೆಂಗಳೂರು ನಿಲುಗಡೆ ಸೇರಿ 7 ಗಂಟೆ ತೆಗೆದುಕೊಂಡು ಮಧ್ಯಾಹ್ನ ಒಂದು ಗಂಟೆಗೆ ಮೈಸೂರು ಜಂಕ್ಷನ್ ತಲುಪುತ್ತದೆ. ಮತ್ತು ಅದೇ ಟ್ರೈನ್ ಮತ್ತೆ ಮಧ್ಯಾಹ್ನ 2:15ಕ್ಕೆ ಮೈಸೂರು ಬಿಟ್ಟು ಎರಡು ನಿಲುಗಡೆ ಸೇರಿ 7 ಗಂಟೆ 15 ನಿಮಿಷ ತೆಗೆದುಕೊಂಡು ರಾತ್ರಿ 9:30ಕ್ಕೆ ಚೆನ್ನೈ ತಲುಪುತ್ತದೆ. ಶತಾಬ್ದಿಯ ಗರಿಷ್ಠ ವೇಗ ಪ್ರತಿ ಗಂಟೆಗೆ 150 ಅಂತ ಹೇಳಿದರೂ ಚೆನ್ನೈಯಿಂದ ಮೈಸೂರಿಗೆ ಸರಾಸರಿ 71.43 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ ಮತ್ತು ಹೋಗುವಾಗ ಸರಾಸರಿ 67.42 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ.

ಚೆನ್ನೈನಿಂದ ಮೈಸೂರಿಗೆ ಬರುವಾಗ ಪ್ರಯಾಣಿಕರ ದರ ಸಾಮಾನ್ಯ ಆಸನ 1180 ರೂಪಾಯಿದ್ದರೆ, ಸೆಮಿ ಡಿಲಕ್ಸ್‌ ಆಸನ 1825 ರೂಪಾಯಿ, ಡಿಲಕ್ಸ್‌ ಆಸನ 2100 ರೂಪಾಯಿಗಳು. ಮೈಸೂರಿನಿಂದ ಚೆನ್ನೈಗೆ ಹೋಗುವಾಗ ಸಾಮಾನ್ಯ ಆಸನಕ್ಕೆ 1260 ರೂಪಾಯಿದ್ದರೆ, ಸೆಮಿ ಡಿಲಕ್ಸ್‌ ಆಸನಕ್ಕೆ 1930 ರೂಪಾಯಿ, ಡಿಲಕ್ಸ್‌ ಆಸನಕ್ಕೆ 2205 ರೂಪಾಯಿಗಳು.

ವಂದೇ ಭಾರತ್‌ ಎಕ್ಸ್‌ಪ್ರೆಸ್‌

ಅದೇ ಇತ್ತೀಚೆಗೆ ಪರಿಚಯಿಸಲಾಗಿರುವ ವಂದೇ ಭಾರತ್ ರೈಲಿಗೆ ಹೋಲಿಸಿದರೆ ಅದು ಹೇಳಿಕೊಳ್ಳುವ ಗರಿಷ್ಠ ವೇಗ ಪ್ರತಿ ಗಂಟೆಗೆ 160 ಕಿಲೋಮೀಟರ್. ಅದು ಬೆಳಿಗ್ಗೆ 5:50 ಚೆನ್ನೈ ಸೆಂಟ್ರಲ್ ಬಿಟ್ಟರೆ, ಅದರ ಮೂರನೇ ನಿಲುಗಡೆ ಬೆಂಗಳೂರನ್ನು 10:20 ಬಂದು ತಲುಪುತ್ತದೆ. ಮತ್ತು ಮಧ್ಯಾಹ್ನ 12:30 ಕ್ಕೆ ಮೈಸೂರು ಜಂಕ್ಷನ್ ತಲುಪುತ್ತದೆ. ಮತ್ತೆ ಹೊರಡುವಾಗ ಮೈಸೂರು ಜಂಕ್ಷನ್ 1:05ಕ್ಕೆ  ಬಿಟ್ಟರೆ ಮೊದಲ ನಿಲುಗಡೆ ಬೆಂಗಳೂರು, ಕಟ್ಪಾಡಿ ಜುಂಕ್ಷನ್ ತಲುಪಿ ಸಂಜೆ 7:30ಕ್ಕೆ ಚೆನ್ನೈ ಸೆಂಟ್ರಲ್ ತಲುಪುತ್ತದೆ. ಅಂದರೆ ಬರುವಾಗ 6 ಗಂಟೆ 30ನಿಮಿಷ ತೆಗೆದುಕೊಂಡರೆ ಹೋಗುವಾಗ 6 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತದೆ. ಸರಾಸರಿ ವೇಗ ಪ್ರತಿ ಗಂಟೆಗೆ 74 ರಿಂದ 76 ಕಿಲೋಮೀಟರ್.

ಇದನ್ನು ಓದಿದ್ದೀರಾ? ಕನಕದಾಸ | ಬ್ರಾಹ್ಮಣ್ಯದ ಒಳಹೊಕ್ಕು ಬ್ರಾಹ್ಮಣ್ಯವನ್ನು ಕಟುವಾಗಿ ವಿಮರ್ಶಿಸಿದ ಸಂತ

ಟಿಕೇಟಿನ ದರದ ಬಗ್ಗೆ ನೋಡಿದರೆ ಚೆನ್ನೈಯಿಂದ ಮೈಸೂರಿಗೆ ಬರುವಾಗ ಡಿಕೆಟ್‌ ದರ ಸಾಮಾನ್ಯ -1200 ರೂಪಾಯಿದ್ದರೆ, ಸೆಮಿ ಡಿಲಕ್ಸ್‌- 2295 ರೂಪಾಯಿಗಳು. ಮೈಸೂರಿನಿಂದ ಚೆನ್ನೈಗೆ ಹೋಗುವಾಗ ಸಾಮಾನ್ಯ -1365 ರೂಪಾಯಿದ್ದರೆ, ಸೆಮಿ ಡಿಲಕ್ಸ್‌ -2485 ರೂಪಾಯಿಗಳು. ಎರಡು ರೈಲುಗಳ ಪ್ರಯಾಣದ ಸಮಯ 30ರಿಂದ 45 ನಿಮಿಷವಷ್ಟೇ. ಎರಡು ರೈಲುಗಳು ಚಲಿಸುವ ಸಮಯ ಯೋಜನೆಯಲ್ಲೂ ಸ್ವಲ್ಪ ಗಡಿಬಿಡಿಯಾಗಿದೆ. ಚೆನ್ನೈಯಿಂದ ಬಿಡುವಾಗ 10 ನಿಮಿಷಗಳ ಅಂತರದಲ್ಲಿ ಎರಡೂ ರೈಲು ಚಲಿಸುತ್ತದೆ ಮತ್ತು ಹೊರಡುವಾಗ 1 ಗಂಟೆ ಅಂತರದಲ್ಲಿ ಚಲಿಸುತ್ತದೆ. ಇದನ್ನೆಲ್ಲ ಸರಿಪಡಿಸಿಕೊಂಡು ʼಮೇಕ್ ಇನ್ ಇಂಡಿಯಾʼ ವೈಫಲ್ಯ ಮರೆಮಾಚಲು ವಂದೇ ಭಾರತ್ ಬರೀ ಪ್ರಚಾರದ ಗೀಳಾಗದೆ ಸಾಮಾನ್ಯ ಜನರಿಗೆ ಸಹಾಯವಾಗುವ ಸಂಪರ್ಕವಾಗಲಿ.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app