ಮನೆಯ ವಾಸ್ತುವಿಗಿಂತ ಮನಸ್ಸಿನ ವಾಸ್ತು ಮುಖ್ಯ

Vastu chitra

ವೈಜ್ಞಾನಿಕ ದೃಷ್ಟಿಕೋನದಲ್ಲಿ ವಾಸ್ತು ಎನ್ನುವುದು ಪ್ರಾಕೃತಿಕವಾಗಿ ಮೂಡಿ ಬಂದಿರುವ ಪದವಾಗಿದ್ದು, ಮನದ ವಾಸ್ತು ಸರಿಯಾದಲ್ಲಿ ಮಾತ್ರ ಭೌತಿಕ ವಾಸ್ತು ಸರಿಯಾಗಲು ಸಾಧ್ಯ. ವಾಸ್ತುವನ್ನು ವಾಸ್ತವಿಕವಾಗಿ ಆಲೋಚಿಸಬೇಕಿದೆ. ಪ್ರಾಕೃತಿಕವಾಗಿರುವುದು ಪ್ರಕೃತಿ, ಸಹಜವಾಗಿರುವುದು ಸಂಸ್ಕೃತಿ, ಇವರೆಡನ್ನು ದಾಟಿದಾಗ ಆಗುವುದೇ ವಿಕೃತಿ

ಮನಸ್ಸಿಗೆ ಯಾವಾಗ ಸುಸ್ತಾಗುವುದೋ ಆಗಲೇ ಜನರು ವಾಸ್ತುವಿಗೆ ಬೆಸ್ತು ಬೀಳುವರು. ಶರೀರಕ್ಕೆ ಸುಸ್ತಾದರೆ ತೊಂದರೆ ಇಲ್ಲ, ಆದರೆ ಮನಸ್ಸಿಗೆ ಸುಸ್ತು ಮಾಡದಿರುವುದು ಒಳ್ಳೆಯದು. ಪ್ರಕೃತಿ ಆದಿಯಲ್ಲಿ ತನಗಿಷ್ಟದ ಪ್ರಕಾರ ಭೂಮಿ, ಜಲ, ಗಾಳಿಗಳನ್ನು ವಾಸ್ತು ಪ್ರಕಾರ ಜೋಡಿಸಿದ್ದಾಗಿದೆ.  ಆ ನಿಸರ್ಗದ ಜೋಡಣೆಯನ್ನು ಅನುಭವಿಸುವ ನಾವು ವಾಸ್ತುವಿಗೆ ಮೊರೆ ಹೋಗುವುದು ಮೂರ್ಖತನದ ಪರಮಾವಧಿ. ವೈಜ್ಞಾನಿಕ ದೃಷ್ಟಿಯಿಂದ ಗಾಳಿ ಮತ್ತು ಬೆಳಕು ಸ್ವಚ್ಛಂದವಾಗಿರುವ ಸ್ಥಳ ವಾಸಿಸಲು ಯೋಗ್ಯವಾಗಿರುವುದು ಪಕ್ಷಿಗಳು ತಮ್ಮ ರಕ್ಷಣೆಗೆ ಸುರಕ್ಷಿತ ಗೂಡು ಕಟ್ಟಿಕೊಂಡು ಮೊಟ್ಟೆ  ಇಟ್ಟು ಪಾಲನೆ ಪೋಷಣೆ ಮಾಡುತ್ತವೆ. ಯಾವುದೇ ವಾಸ್ತುವಿನ ಪ್ರಕಾರ ಅಲ್ಲ.

ವಾಸ್ತು ನಮ್ಮ  ಸಮಾಜಕ್ಕೆ ಅಂಟಿದ ಚಿಕಿತ್ಸೆಯನ್ನೇ ಕಾಣದ ಮಹಾ ಜಾಡ್ಯವಾಗಿದೆ. ಯಾವುದನ್ನು ತಮ್ಮ ಸಂಸ್ಕೃತಿಯ ಮಹಾ ಕೊಡುಗೆ ಹಾಗೂ ಸಮಾಜಕ್ಕೆ ವರವೆಂದು ತಪ್ಪು ಕಲ್ಪನೆಯಿಂದ ಭಾವಿಸಿದ್ದರೋ ಆ ವಾಸ್ತು ಇಡೀ ಭರತಖಂಡಕ್ಕೆ ಕೆಟ್ಟ ಕೊಡುಗೆಯಾಗಿ ಹಾಗೂ ಮಹಾಶಾಪವಾಗಿ ಪರಿಣಮಿಸಿದೆ. ವಾಸ್ತು ರಾಕ್ಷಸನ ಕಬಂಧ ಬಾಹುಗಳು ಇಡೀ ದೇಶವನ್ನೇ ತನ್ನ ಬಿಗಿದೋಳಿನ ಕಪಿಮುಷ್ಟಿಯೊಳಗೆ ಬಂಧಿಸಿಟ್ಟಿದೆ. ವಾಸ್ತುವಿನ ಮತ್ತೇರಿಸಿಕೊಂಡ ಅಂಧನಂಬಿಕೆಯ ಅಮಾಯಕ ಜನರು ಆ ಕೆಟ್ಟಮತ್ತಿನ ಗುಂಗಿನಲ್ಲಿ ಅದೇ ಸತ್ಯವೆಂದು ಭ್ರಮೆಗೊಂಡು ಅಂಧಕಾರದಿಂದ ಎಂದೂ ಹೊರಬರಲಾರದಷ್ಟು ಆಳಕ್ಕೆ ಮುಳುಗಿ ಹೋಗಿರುವುದು ನಮ್ಮ ದೇಶದ ದುರಾದೃಷ್ಟ.

ವೈಚಾರಿಕತೆಯೇ ಮದ್ದು

ವಾಸ್ತು ಎಂಬ ಮಹಾಮಾರಿಗೆ ಮದ್ದಿಲ್ಲವೇ? ಇದೆ. ಸಮಾಜದಲ್ಲಿ ವೈಜ್ಞಾನಿಕ, ವೈಚಾರಿಕ, ಮನೋಭಾವಗಳನ್ನು ಬೆಳೆಸುವುದೊಂದೇ ಮದ್ದು. ಬೇರೆ ದಾರಿ ಕಾಣದು. ಆದರೆ ಈ ಮದ್ದು ಕೂಡಲೇ ಪರಿಣಾಮ ಕಾಣಲು ಸಾಧ್ಯವಿಲ್ಲ. ಸಮಾಜವು ಈ ಮದ್ದನ್ನು ಸಾವಕಾಶವಾಗಿ ಅರಗಿಸಿ ಕೊಳ್ಳಬೇಕಾಗುತ್ತದೆ. ಕಾರಣ ವಾಸ್ತು ಎಂಬ ಜಾಡ್ಯವು ಅಂಟಿಕೊಂಡು ಬಂದಿರುವುದು ಇತ್ತೀಚಿನದ್ದಲ್ಲ. ಅದು ಸಾವಿರಾರು ವರ್ಷಗಳ ಹಿಂದಿನಿಂದ, ತಲೆ ತಲಾಂತರದಿಂದ ಹಬ್ಬಿಕೊಂಡಿದೆ. ಅದು ಇಡಿ ಸಮಾಜವನ್ನೇ ಸಂಪೂರ್ಣವಾಗಿ ಆವರಿಸಿಕೊಂಡು ಬಂದಿರುವ ಅತಿ ಹಳೆಯ ರೋಗವಾದುದರಿಂದ ಯಾವ ಮದ್ದು ಕೂಡಾ ಕೂಡಲೇ ಪರಿಣಾಮವಾಗಲಾರದು.

ವಾಸ್ತುವಿನ ಜಾಡ್ಯವನ್ನು ಬೇರು ಸಹಿತ ಕಿತ್ತುಹಾಕಲು ಕೇವಲ ಮಾಧ್ಯಮ ಒಂದೇ ಸಾಲದು, ಚಿಕ್ಕಮಕ್ಕಳ ಬುದ್ಧಿಯ ಮೇಲೆ ಬೆಳೆಯುವ ಮೊಳಕೆಯಲ್ಲಿಯೇ ಈ ಜಾಡ್ಯ ಅಂಟಿಕೊಳ್ಳದಂತೆ ಅತಿ ಜಾಗೃತಿಯ ಕಾರ್ಯಕ್ರಮಗಳೊಂದಿಗೆ ವೈಜ್ಞಾನಿಕ, ವೈಚಾರಿಕ, ವಾಸ್ತವಿಕ ಸತ್ಯದ ಕ್ರಮಗಳನ್ನು ಕಾರ್ಯಕ್ರಮಗಳನ್ನೂ, ಪಠ್ಯಕ್ರಮಗಳನ್ನು  ಶಾಲಾ ಮಟ್ಟದಲ್ಲಿಯೇ ಅಳವಡಿಸಿ ಬಿಗು ಧೋರಣೆಯಿಂದ ಜಾರಿಗೊಳಿಸಿದರೆ ಮಾತ್ರ ಈ ಅಂಟು ರೋಗದಿಂದ ಈ ರಾಷ್ಟ್ರವು ಮುಕ್ತಿಪಡೆಯಲು ಸಾಧ್ಯ. ಬೆಳೆಯುವ ಮೊಳಕೆಯಲ್ಲಿ ಕಿತ್ತೆಸೆಯುವ ಕೆಲಸವಾಗಬೇಕು.

ಹರಕೊಲ್ಲಲ್ ಪರಕಾಯ್ವನೇ!

ಇದನ್ನು ಮಾಡುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಈ ಕಾರ್ಯವನ್ನು ನೇರವಾಗಿ ಮಾಡಬೇಕಾದ ಸರ್ಕಾರವೇ ವಿಶ್ವವಿದ್ಯಾಲಯದಲ್ಲಿ ಹಾಗೂ ಸಮಾಜದಲ್ಲಿ  ಇನ್ನೂ ಈ ಮಹಾಮಾರಿಗೆ ಹಾಲೆರೆದು ಬೆಳೆಸಲು ಕುಮ್ಮಕ್ಕು ಕೊಟ್ಟರೆ ರಕ್ಷಿಸುವವರು ಯಾರು? "ಹರಕೊಲ್ಲಲ್ ಪರಕಾಯ್ವನೇ" ಎಂಬಂತೆ ಸಂವಿಧಾನಬಾಹಿರವಾದ ಮೂಢ ನಂಬಿಕೆಗಳನ್ನು ಸಮಾಜಘಾತವಾದ ಅನಿಷ್ಟ ಸಂಪ್ರದಾಯಗಳನ್ನು ಕಾನೂನುಬದ್ಧವಾಗಿ ಕಿತ್ತು ಹಾಕಿ ಸಮಾಜವನ್ನು ರಕ್ಷಿಸಬೇಕಾದ ಕೈಗಳೇ ಅನಿಷ್ಟ ಮೂಢನಂಬಿಕೆಗಳಿಗೆ ಪ್ರೋತ್ಸಾಹಿಸಿ ಬೆಳೆಸಲು ಕಾನೂನುಬದ್ಧಗೊಳಿಸಿದರೆ ಕಾಪಾಡುವವರು ಯಾರು? ಇದು ನಮ್ಮ ದೇಶದ ದೌರ್ಭಾಗ್ಯ, ನಮ್ಮ ಸಮಾಜದ ದುರಾದೃಷ್ಟ.

ಯಾವ ಸಮಾಜದಲ್ಲಿರುವ ದುಷ್ಟ ಸಮಾಜ ಘಾತಕ ಪದ್ಧತಿಗಳಾದ 'ಸತಿ ಪದ್ಧತಿ, ಬಾಲ ವಿಧವೆ, ಬಾಲ್ಯವಿವಾಹ ಪದ್ಧತಿ, ಜಾತಿ ಪದ್ಧದತಿ ಮೊದಲಾದ ನಾಚಿಕೆಗೇಡಿನ ಪದ್ದತಿಗಳನ್ನು ಈ ಮಹಾನ್ ರಾಷ್ಟ್ರವು ಕಾನೂನು ಬದ್ದವಾಗಿ ಕಿತ್ತಸೆದು, ಹೊಸ ಶಕ್ತಿಯ, ಹೊಸ ಸೃಷ್ಟಿಯ, ಸುಸಂಸ್ಕೃತ ಸುಧಾರಿತ ರಾಷ್ಟ್ರವನ್ನು ಕಟ್ಟಿದರೋ ಅದೇ ಮಹಾನ್ ರಾಷ್ಟ್ರದಲ್ಲಿ ಆ ಮಹಾನ್ ಕಾರ್ಯದ ಬೆನ್ನ ಹಿಂದೆಯೇ ಪುನ: ಹಿಂದಕ್ಕೆ ಸರಿದು ಮೂಢನಂಬಿಕೆಯ, ಅವಾಸ್ತವಿಕ, ಅನಿಷ್ಟ ಸಂಪ್ರದಾಯಗಳಿಗೆ ಪ್ರೋತ್ಸಾಹಿಸುವುದನ್ನು ಕಾನೂನುಬದ್ಧವಾಗಿ ಮಾರ್ಪಡಿಸುತ್ತಿರುವುದು ಮಹಾ ವಿಪರ್ಯಾಸವಾಗಿದೆ. ಎಲ್ಲಾ ಅನಿಷ್ಟ ಮೂಢನಂಬಿಕೆಗಳು ಶಾಲಾ ಕಾಲೇಜಿನ ಪಠ್ಯಕ್ರಮಗಳಲ್ಲಿ ಸೇರುವ ಕಾಲ ಬರಬಹುದು.

ದೇಶ ಸಾಗುತ್ತಿರುವುದು 21ನೇ ಶತಮಾನಕ್ಕೋ, 11ನೇ ಶತಮಾನದ ಕಡೆಗೋ?

ಈಗ ಕಂಪ್ಯೂಟರ್ ಎಂಜಿನಿಯರು, ಆರ್ಕಿಟೆಕ್ಟ್ ಎಂಜಿನಿಯರು, ಡಾಕ್ಟರು, ವಿಜ್ಞಾನಿಗಳು, ವಿಚಾರವಾದಿಗಳು ಆಗಿ ಮುಂದಿನ ಭವ್ಯ ಭಾರತದ ಕನಸನ್ನು ಕಾಣುವ ನಮ್ಮ ಮುಂದಿನ ಯುವ ಪೀಳಿಗೆಯು ಮುಂದೆ ವಿಜ್ಞಾನಿಗಳ ಸ್ಥಾನದಲ್ಲಿ ಜ್ಯೋತಿಷಿಗಳಾಗಿ, ಆರ್ಕಿಟೆಕ್ಟ್ ಇಂಜಿನಿಯರ್ ಸ್ಥಾನದಲ್ಲಿ ವಾಸ್ತು ಪಂಡಿತರಾಗಿ, ಕಂಪ್ಯೂಟರ್ ಇಂಜಿನಿಯರ್, ಡಾಕ್ಟರ್‌ರ ಸ್ಥಾನಗಳಲ್ಲಿ ಶಕುನ ಶಾಸ್ತ್ರಿಗಳಾಗಿ, ಗಿಳಿ ಪಂಡಿತರು, ಸಾಮುದ್ರಿಕ ವಿದ್ವಾನ್‍ಗಳಾಗಿ ಕೆಲಸವಿಲ್ಲದೆ ರಸ್ತೆ ರಸ್ತೆಗಳಲ್ಲಿ ಇಂತಹ ಮಹಾ ಅನಿಷ್ಟ ವಿಜ್ಞಾನಿಗಳ ಪದವೀಧರ ಅಲೆಮಾರಿಗಳ ಗುಂಪನ್ನು  ಕಾಣಬೇಕಾದ ಕಾಲ ಸನ್ನಿಹಿತವಾಗುತ್ತಿದೆ. ಈ ಹುಚ್ಚಿಗೆ ಕೊನೆಯೆಂದು? ಇಂತಹ ಅನಿಷ್ಟ ಸಂಪ್ರದಾಯಗಳನ್ನು ಬೆಳೆಸುವುದೇ ದೇಶಾಭಿಮಾನವೇ, ಮೂಢನಂಬಿಕೆಗಳನ್ನು ಮೆರೆಸುವುದೇ ಅಂಧಶ್ರದ್ದೆಗೆ ಕೊಂಡೊಯ್ಯುತ್ತದೆ. ಎತ್ತಸಾಗುತ್ತಿದೆ ನಮ್ಮ ದೇಶ! 21ನೇ ಶತಮಾನಕ್ಕೂ 11ನೇ ಶತಮಾನದ ಕಡೆಗೋ?

ಇದನ್ನು ಓದಿದ್ದೀರಾ? ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ

ವೈಜ್ಞಾನಿಕ ದೃಷ್ಟಿಕೋನದಲ್ಲಿ ವಾಸ್ತು ಎನ್ನುವುದು ಪ್ರಾಕೃತಿಕವಾಗಿ ಮೂಡಿ ಬಂದಿರುವ ಪದವಾಗಿದ್ದು ಮನದ ವಾಸ್ತು ಸರಿಯಾದಲ್ಲಿ ಮಾತ್ರ ಭೌತಿಕ ವಾಸ್ತು ಸರಿಯಾಗಲು ಸಾಧ್ಯ. ವಾಸ್ತು ಕಾಲ್ಪನಿಕವಾಗಿದೆ, ವಾಸ್ತುವನ್ನು ವಾಸ್ತವಿಕವಾಗಿ ಆಲೋಚಿಸಬೇಕಿದೆ, ಜಗದ ನೈಜತೆಯನ್ನು ಅರ್ಥಮಾಡಿಕೊಳ್ಳಬೇಕು, ಪ್ರಾಕೃತಿಕವಾಗಿರುವುದು ಪ್ರಕೃತಿ, ಸಹವಾಗಿರುವುದು ಸಂಸ್ಕೃತಿ, ಇವರೆಡನ್ನು ದಾಟಿದಾಗ ಆಗುವುದೇ ವಿಕೃತಿ. ಪ್ರತಿಯೊಬ್ಬರು ಸಹ ವೈಜ್ಞಾನಿಕ ನೆಲೆಯಲ್ಲಿ ಆಲೋಚಿಸಿದಲ್ಲಿ ಮನಸ್ಸು ನೆಮ್ಮದಿಯಾಗಿರಲು ಸಾಧ್ಯ, ವಾಸ್ತು ಎನ್ನುವ ಹೆಸರಿನಲ್ಲಿ ಇಂದು ಜಗತ್ತಿನ ಸಂಸ್ಕೃತಿಯ ನಾಶವಾಗುತ್ತಿದೆ.

ಆರ್ಥಿಕ ದಂಧೆ

ವಾಸ್ತು ಎನ್ನುವುದು ಆರ್ಥಿಕ ದಂಧೆಯಾಗಿದೆ. ಮುಂದಿನ ಪೀಳಿಗೆಗೆ ನಾವು ಸರಿಯಾದ ದಾರಿಯಲ್ಲಿ ಸಾಗದಿದ್ದಲ್ಲಿ ಜೀವಕುಲ ನಾಶವಾಗುವುದರಲ್ಲಿ ಅನುಮಾನವೇ ಇಲ್ಲ. ಜಗತ್ತಿಗೆ ವಾಸ್ತು ಹೇಳುವವರ ವಾಸ್ತು, ಜಾತಕ ಹೇಳುವವರ ಜಾತಕ, ಭವಿಷ್ಯ ಹೇಳುವವರ ಭವಿಷ್ಯ ಹೇಗಿದೆ ಅನ್ನುವುದನ್ನ ಅರ್ಥ ಮಾಡಿಕೊಂಡಾಗ ಎಲ್ಲವೂ ಶೂನ್ಯ ಅಲ್ಲವೇ? ಎಲ್ಲವೂ ಸಹಜವಾಗಿಯೇ ನಡೆಯುವಂತಾದರೆ ಬದುಕಿನಲ್ಲಿ ಭಯ ಮತ್ತೆಲ್ಲಿಯದು?

ನಿಮಗೆ ಏನು ಅನ್ನಿಸ್ತು?
7 ವೋಟ್