ಸ್ವಾತಂತ್ರ್ಯ 75| ಮಹಾಡ್‌ ಸತ್ಯಾಗ್ರಹದಿಂದ ಮೇಘವಾಲ್‌ ಸಾವಿನವರೆಗೆ ದಲಿತರ ದಾಹ ನೀಗಿಸದ ಸ್ವಾತಂತ್ರ್ಯ ಜೀವಜಲ!

ಸಂವಿಧಾನದ ಅಡಿಯಲ್ಲಿ ನಡೆಯುತ್ತಿರುವ ಪ್ರಜಾಸತ್ತಾತ್ಮಕ ಗಣರಾಜ್ಯ ಭಾರತದಲ್ಲೂ, ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ಅಡಿಯಲ್ಲಿ ನಡೆಯುತ್ತಿದ್ದ ಇಂಡಿಯಾದಲ್ಲೂ ಕನಿಷ್ಟ ದಾಹ ಇಂಗಿಸುವ ಜೀವಜಲ ಕೂಡ ದಲಿತರ ಪಾಲಿಗೆ ಜೀವಹರಣದ ದುಬಾರಿ ಸಂಗತಿಯೇ!
meghawal

ಸರಿಯಾಗಿ 95 ವರ್ಷಗಳ ಹಿಂದೆ ಬಾಬಾ ಸಾಹೇಬ್‌ ಅಂಬೇಡ್ಕರರು ಮಹಾರಾಷ್ಟ್ರದ ಮಹಾಡ್‌ ಜಿಲ್ಲೆಯ ಚೌಡಾರ್‌ ಕೆರೆಯ ನೀರನ್ನು ಬೊಗಸೆಯಲ್ಲಿ ಕುಡಿದು, ಸಾವಿರಾರು ವರ್ಷಗಳ ಭವ್ಯ ಇತಿಹಾಸದ, ಮಹಾ ಮಾನವೀಯತೆಯ ಸೋಗಿನಲ್ಲಿ ಸ್ವಪ್ರಶಂಸೆಯಲ್ಲಿ ಮುಳುಗಿದ್ದ ಸಮಾಜಕ್ಕೆ ಕನಿಷ್ಟ ಸಾಮಾಜಿಕ ನ್ಯಾಯದ ಪಾಠವನ್ನು ಮುಖಕ್ಕೆ ರಾಚುವಂತೆ ಹೇಳಿದ್ದರು. 

ಇದೀಗ, ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಮುಳುಗೇಳುತ್ತಿರುವ ನಮ್ಮ ಮುಖಕ್ಕೂ ಅಂಬೇಡ್ಕರ್‌ ಅನುಭವಿಸಿದ್ದ ಅದೇ ಅಸ್ಪೃಶ್ಯತೆ ಮತ್ತು ಅಮಾನವೀಯ ನಡವಳಿಕೆಯ ಘಟನೆಯೊಂದು ಮುಖಕ್ಕೆ ರಪ್ಪನೆ ರಾಚಿದೆ. ರಾಜಸ್ತಾನದ ಜಾಲೋರ್‌ ಜಿಲ್ಲೆಯ ಸುರಾನಾ ಎಂಬ ಹಳ್ಳಿಯಲ್ಲಿ ಕುಡಿಯುವ ನೀರಿನ ಮಡಿಕೆಯನ್ನು ಮುಟ್ಟಿದ ಎಂಬ ಕಾರಣಕ್ಕೆ ಶಾಲಾ ಶಿಕ್ಷಕನೊಬ್ಬ ದಲಿತ ಬಾಲಕನನ್ನು ಹೊಡೆದು ಸಾಯಿಸಿದ್ದಾನೆ. ಅಂಬೇಡ್ಕರ್‌ ಅವರೇ ರೂಪಿಸಿದ ಸಂವಿಧಾನ ಮತ್ತು ಅಂತಹ ಸಂವಿಧಾನದ ಮೇಲೆ ನಿಂತಿರುವಂತೆ ಕಾಣುತ್ತಿರುವ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವಂತಹ ಘಟನೆ ಇದು!

ಮನುಷ್ಯತ್ವದ ಪಾಠ ಮಾಡಬೇಕಾದ ಗುರುವೇ ಮಗುವಿನ ಮೇಲೆ ಪೈಶಾಚಿಕ ಕೃತ್ಯ ಎಸಗಿ, ಆತನ ಕಣ್ಣು ಕಿತ್ತುಬರುವಂತೆ ಹೊಡೆದು, ಇಂದ್ರ ಮೇಘವಾಲ್‌ ಎಂಬ ಆ ಒಂಭತ್ತು ವರ್ಷದ ದಲಿತ ಬಾಲಕನ ಸಾವಿಗೆ ಕಾರಣವಾಗಿದ್ದಾನೆ. ಜುಲೈ 20ರಂದು ಶಿಕ್ಷಕ ಹಲ್ಲೆ ನಡೆಸಿದ್ದು, ಸುಮಾರು ಇಪ್ಪತ್ತು ದಿನಗಳ ಕಾಲ ಆಸ್ಪತ್ರೆಯಲ್ಲಿ ನರಳಾಡಿದ ಬಳಿಕ ಈಗ ಆಗಸ್ಟ್‌ 13ರಂದು ಮೇಘವಾಲ್‌ ಕೊನೆಯುಸಿರೆಳೆದಿದ್ದಾನೆ.

ಬ್ರಿಟಿಷ್‌ ಆಡಳಿತದ ಕಾಲದಲ್ಲಿ 1927ರ ಮಾರ್ಚ್‌ 20ರಂದು ಅಂಬೇಡ್ಕರ್ ಮಹಾಡ್‌ನ ಚೌಡಾರ್‌ ಕೆರೆಗೆ ಸಾವಿರಾರು ಜನರೊಂದಿಗೆ ಹೋಗಿ, ಸವರ್ಣೀಯರ ನಿರ್ಬಂಧವನ್ನು ಮುರಿದು ಕೆರೆಯ ನೀರನ್ನು ಬೊಗಸೆಯಲ್ಲಿ ಕುಡಿದು, ಆವರೆಗೆ ಹಿಂದೂ ಸನಾತನವಾದಿಗಳು ಹಾಕಿದ್ದ ಜಾತಿಬೇಧದ ಬೇಲಿಗೆ ಬೆಂಕಿ ಇಟ್ಟಿದ್ದರು. ಆಗ ಸನಾತನವಾದಿಗಳು ಅಂಬೇಡ್ಕರರ ಆ ಮಹಾ ಸತ್ಯಾಗ್ರಹವನ್ನು ವಿರೋಧಿಸಿ, ಅಸಹನೆಯಿಂದ ಕುದಿದು ಸತ್ಯಾಗ್ರಹದಲ್ಲಿ ಭಾಗಿಯಾದವರ ಮೇಲೆ ದಾಳಿ ನಡೆಸಿದ್ದರೂ, ಆಗಿನ ಆಡಳಿತ ಅಂಬೇಡ್ಕರರ ಪರವಿತ್ತು. ಸಾಮಾಜಿಕ ನ್ಯಾಯದ ಅವರ ದನಿಯನ್ನು ಉಡುಗಿಸಿರಲಿಲ್ಲ. 

ಹಾಗೆ ನೋಡಿದರೆ, ಮಹಾಡ್‌ ನಗರಸಭೆ ಅಂಬೇಡ್ಕರರು ಚೌಡಾರ್‌ ಕೆರೆಗೆ ಮುತ್ತಿಗೆ ಹಾಕುವ ಮೂರು ವರ್ಷಗಳ ಹಿಂದೆಯೇ ಆ ಕೆರೆ ಸಾರ್ವಜನಿಕ ಸ್ವತ್ತು. ದಲಿತರೂ ಸೇರಿದಂತೆ ಎಲ್ಲರಿಗೂ ಅಲ್ಲಿನ ನೀರಿನ ಬಳಕೆಯ ಸಮಾನ ಹಕ್ಕಿದೆ ಎಂದು ಆದೇಶ ಹೊರಡಿಸಿತ್ತು. ಆದರೆ, ಸನಾತನವಾದಿಗಳು ಆ ಆದೇಶ ಪಾಲನೆಗೆ ಮುಂದಾಗದೆ, ಕೆರೆ ತಮ್ಮ ಸ್ವಂತ ಆಸ್ತಿ, ಅಲ್ಲಿನ ನೀರನ್ನು ಮುಟ್ಟುವ ಹಕ್ಕು ದಲಿತರಿಗೆ ಇಲ್ಲ ಎಂದು ಪಟ್ಟು ಹಿಡಿದಿದ್ದರು. ಅಂಬೇಡ್ಕರರ ಮಹಾಡ್‌ ಸತ್ಯಾಗ್ರಹ ಆ ಪಟ್ಟನ್ನು ಪುಡಿಗಟ್ಟಿತು. ಅಷ್ಟೇ ಅಲ್ಲ; ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಾಮಾಜಿಕ ನ್ಯಾಯ ಎಂದರೆ ಏನು ಎಂಬ ಕಲ್ಪನೆಗೆ ದಾರಿ ಮಾಡಿಕೊಟ್ಟಿತು.

ದೌರ್ಭಾಗ್ಯವೆಂದರೆ; 95 ವರ್ಷಗಳ ಹಿಂದೆ, ಬ್ರಿಟಿಷ್‌ ಆಡಳಿತದಲ್ಲಿ ಅಂಬೇಡ್ಕರ್‌ ಅವರಿಗೆ ಇದ್ದ ಆ ಸ್ವಾತಂತ್ರ್ಯ ಮತ್ತು ಸಮಾನ ಅವಕಾಶಕ್ಕಾಗಿ ಹಕ್ಕು ಮಂಡಿಸುವ ಅವಕಾಶ ಈಗ, ಸ್ವತಂತ್ರ ಭಾರತದಲ್ಲಿ ಮೇಘವಾಲ್‌ ಎಂಬ ಪುಟ್ಟ ಪೋರನಿಗೆ ಇಲ್ಲ. ಯಾಕೆಂದರೆ; ಅಂದು ಅಂಬೇಡ್ಕರ್‌ ಮೇಲೆ ನಡೆಸಲಾಗದ ಕ್ರೌರ್ಯವನ್ನು ಈಗ ಈ ಮೇಘವಾಲ್‌ ಕುಟುಂಬದ ಮೇಲೆ ನಡೆಸಲಾಗಿದೆ. ಮಗುವಿನ ಸಾವಿಗೆ ನ್ಯಾಯಬೇಕು ಎಂದು ಆಗ್ರಹಿಸಿ ಶವ ಇಟ್ಟು ಪ್ರತಿಭಟನೆ ನಡೆಸಿದ ಆತನ ಕುಟುಂಬಸ್ಥರ ಮೇಲೆ, ಆತನ ಪರ ದನಿ ಎತ್ತಿದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಆತನ ಶವ ಸಂಸ್ಕಾರಕ್ಕೂ ಸರಿಯಾಗಿ ಅವಕಾಶ ನೀಡದೆ, ಪೊಲೀಸರೇ ಮುಂದೆ ನಿಂತು ಮನೆಮಂದಿಯನ್ನು ಹೆದರಿಸಿಬೆದರಿಸಿ ಮಗುವಿನ ಶವ ಸುಟ್ಟು ಹಾಕಿದ್ದಾರೆ.

ಎರಡು ವರ್ಷಗಳ ಹಿಂದೆ ಉತ್ತರಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಕೂಡ ಇದೇ ಆಗಿತ್ತು. ದಲಿತ ಯುವತಿಯ ಮೇಲೆ ಬಿಜೆಪಿಯ ನಾಯಕರ ಆಪ್ತರು ನಡೆಸಿದ್ದ ಹೇಯ ಕೃತ್ಯದ ಘಟನೆ ಮಾಧ್ಯಮಗಳ ಮೂಲಕ ಹೊರಜಗತ್ತಿಗೆ ತಿಳಿಯುತ್ತಿದ್ದಂತೆ ಅಲ್ಲಿನ ಆಡಳಿತ ಕೂಡ ಪೊಲೀಸ್‌ ಬಲ ಬಳಸಿ ಸಂತ್ರಸ್ತೆಯ ಶವವನ್ನು ರಾತ್ರೋರಾತ್ರಿ ಸುಟ್ಟು ಹಾಕಿತ್ತು. ಜೊತೆಗೆ ಆ ಕುಟುಂಬ ಭೇಟಿ ಮಾಡದಂತೆ ಮತ್ತು ಅವರ ಪರ ದನಿ ಎತ್ತದಂತೆ ಸಾಮಾಜಿಕ ಹೋರಾಟಗಾರರು, ರಾಜಕೀಯ ನಾಯಕರು ಹಾಗೂ ಪತ್ರಕರ್ತರಿಗೂ ನಿರ್ಬಂಧ ವಿಧಿಸಿ ಘಟನೆಯನ್ನು ಮುಚ್ಚಿಹಾಕುವ ಕ್ರೌರ್ಯ ಮೆರೆದಿತ್ತು.

ಉತ್ತರಪ್ರದೇಶದಲ್ಲಿ ಸನಾತನವಾದಿಗಳ ಐಕಾನ್‌ ನಾಯಕ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರವಿದ್ದರೆ, ಇದೀಗ ರಾಜಸ್ತಾನದಲ್ಲಿ ಜಾತ್ಯತೀತರ ನೆಚ್ಚಿನ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಸರ್ಕಾರ ಇದೆ. ಅಷ್ಟೇ ವ್ಯತ್ಯಾಸ. 

ಸಂವಿಧಾನದ ಅಡಿಯಲ್ಲಿ ನಡೆಯುತ್ತಿರುವ ಪ್ರಜಾಸತ್ತಾತ್ಮಕ ಗಣರಾಜ್ಯ ಭಾರತದಲ್ಲೂ, ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ಅಡಿಯಲ್ಲಿ ನಡೆಯುತ್ತಿದ್ದ ಇಂಡಿಯಾದಲ್ಲೂ ಕನಿಷ್ಟ ದಾಹ ಇಂಗಿಸುವ ಜೀವಜಲ ಕೂಡ ದಲಿತ ಪಾಲಿಗೆ ಜೀವಹರಣದ ದುಬಾರಿ ಸಂಗತಿಯೇ. ಅಂಬೇಡ್ಕರ್‌ ಕಾಲದ ಬ್ರಿಟಿಷರ ಸರ್ಕಾರ ಕುಡಿಯುವ ನೀರಿಗೆ ದಲಿತರಿಗೂ ಹಕ್ಕಿದೆ. ಸಾರ್ವಜನಿಕ ಕೆರೆಕಟ್ಟೆಗಳ ನೀರು ಎಲ್ಲರಿಗೂ ಸೇರಿದ್ದು ಎಂದು ಕನಿಷ್ಟ ಕಾನೂನು ಮಾಡುವ ಮನಸ್ಸಾದರೂ ಮಾಡಿತ್ತು. ಆದರೆ ಈಗ ಮೇಘವಾಲ್‌ ಕಾಲದ ನಮ್ಮದೇ ಸರ್ಕಾರಗಳು ದೇಶದ ಸಂವಿಧಾನ, ಕಾನೂನು, ನ್ಯಾಯವನ್ನು ಮೀರಿ ಮನುವಾದಿ ಅಸ್ಪೃಶ್ಯತೆಯನ್ನು ಹೇರಿ ಬಾಲಕನ ಬಲಿ ಪಡೆದ ಶಿಕ್ಷಕನಿಗೆ ಪಾಠ ಕಲಿಸುವ ಬದಲು, ಬಲಿಪಶು ಬಾಲಕನ ಕುಟುಂಬದ ಮೇಲೆಯೇ ಎರಗಿವೆ.

ಈ ಸುದ್ದಿ ಓದಿದ್ದೀರಾ? ಎಲ್ಲ ರಾಜ್ಯಗಳಲ್ಲೂ ದಲಿತ ದೌರ್ಜನ್ಯ ಪ್ರಕರಣ ನಡೆಯುತ್ತಿವೆ; ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಲ್ಲಿ, ಸತ್ತ ದನದ ಚರ್ಮ ಸುಲಿದರು ಎಂಬ ಕಾರಣಕ್ಕೆ ದಲಿತರನ್ನು ಬೆತ್ತಲೆಗೊಳಿಸಿ ಥಳಿಸಿದ ಉನಾದ ಗುಜರಾತ್‌ ಮಾದರಿ ಇರಬಹುದು, ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಕೊಲೆ ಮತ್ತು ಸರ್ಕಾರವೇ ನಿಂತು ಸುಟ್ಟು ಹಾಕಿದ ಹತ್ರಾಸ್‌ನ ಉತ್ತರಪ್ರದೇಶ ಮಾದರಿ ಇರಬಹುದು ಅಥವಾ ಇದೀಗ ಕುಡಿಯುವ ನೀರಿನ ಮಡಕೆ ಮುಟ್ಟಿದ ಎಂಬ ಕಾರಣಕ್ಕೆ ದಲಿತ ಬಾಲಕನ ಹೊಡೆದು ಸಾಯಿಸಿದ ಜಾಲೋರ್‌ನ ರಾಜಸ್ತಾನ ಮಾದರಿ ಇರಬಹುದು,.. ಎಲ್ಲವೂ ಯಾರಿಗೆ ಸ್ವಾತಂತ್ರ್ಯ ಮತ್ತು ಯಾವುದಕ್ಕೆ ಸ್ವಾತಂತ್ರ್ಯ? ಎಂಬ ಪ್ರಶ್ನೆಗಳನ್ನು ಮತ್ತೆ ಮತ್ತೆ ಆರ್ತಸ್ವರದಲ್ಲಿ ಕೇಳುತ್ತಲೇ ಇವೆ... ! ಆದರೆ, ನಮ್ಮ ನಡುವಿನ ಬಹುಸಂಖ್ಯಾತ ʼದೇಶವಾಸಿʼಗಳ ಕಿವಿಗಳು ಮಾತ್ರ ಆ ಆರ್ತನಾದಕ್ಕೆ ಕಿವುಡಾಗಿಯೇ ಇವೆ... ಈಗಲೂ..!

ನಿಮಗೆ ಏನು ಅನ್ನಿಸ್ತು?
0 ವೋಟ್