ಪಠ್ಯಪರಿಷ್ಕರಣೆ: ಈಗಲೂ ಪುರಾಣ, ಪುಣ್ಯಕತೆಗಳನ್ನೇ ಪಠ್ಯವಾಗಿಸಿಕೊಂಡವರು ನಾವು !-ಡಾ ಮಾದುಪ್ರಸಾದ್

books edited

ಜಗತ್ತು ನಾಗಲೋಟದಲ್ಲಿ ಬೆಳೆಯುತ್ತಿದ್ದರೂ ಆ ಪರಿವೆಯೇ ಇಲ್ಲದ ನಾವು ಹಳೆಯ ಮಾದರಿಯನ್ನೇ ಪುನಃ ಪುನಃ ಮೆಲುಕು ಹಾಕುತ್ತಿರುವುದು ನೋಡಿದರೆ ಅದು ನಮಗೆ ರಕ್ತಗತವಾಗಿರಬೇಕು ಎನಿಸದೆ ಇರಲಾರದು. ಭಾರತಕ್ಕೆ ಇಂಗ್ಲಿಷ್ ಶಿಕ್ಷಣ ಮಿಷನರಿಗಳ ಮೂಲಕ ಕಾಲಿರಿಸಿದಾಗಲೂ ನಾವು ಪುರಾಣದ ಪುಣ್ಯಕಥೆಗಳನ್ನೇ ಪಠ್ಯವಾಗಿಸಿಕೊಂಡವರು.

ಒಂದು ದೇಶದ ಬೌದ್ಧಿಕ ತಾಕತ್ತು ನಿರ್ಧರಿಸಲ್ಪಡುವುದು ಆ ದೇಶದ ಜನರ ಶಿಕ್ಷಣ ಮತ್ತು ಆಲೋಚನಾ ಕ್ರಮದಿಂದ. ಒಂದು ದೇಶದ ಆಸ್ತಿಯೆಂದರೆ ಗುಣಮಟ್ಟದ ಶಿಕ್ಷಣವೇ ಆಗಿದೆ. ಸಾಕ್ರಟೀಸ್, ಪ್ಲೋಟೊ, ಅರಿಸ್ಟಾಟಲ್‍ರು ಗ್ರೀಕ್‍ದೇಶದ ಬೌದ್ಧಿಕತೆಯ ರಾಯಭಾರಿಗಳಾಗಿ ಇಂದಿಗೂ ಜಾಗತಿಕ ಮನ್ನಣೆ ಪಡೆದದ್ದು ಅವರ ಶಿಕ್ಷಣ ಮತ್ತು ಆಲೋಚನಾ ಕ್ರಮದಿಂದ. ಧರ್ಮಮಿಶ್ರಿತ ಯಾವುದೇ ಶಿಕ್ಷಣವು ಇಂತಹ ಉದಾತ್ತಚಿಂತಕರನ್ನು, ಸಾಮಾಜಿಕ ಹರಿಕಾರರನ್ನು, ಮಹಾನಾಯಕರನ್ನು ಹುಟ್ಟುಹಾಕಲು ಸಾಧ್ಯವಾಗಿಲ್ಲ. ಧರ್ಮದಿಂದ ಪ್ರತ್ಯೇಕಗೊಳ್ಳುವ ಶಿಕ್ಷಣಕ್ಕೆ ಮಾತ್ರ ಇಂತಹ ಶಕ್ತಿಯು ಲಭಿಸುತ್ತದೆ ಎನ್ನುವುದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಣಮುಂದಿವೆ.

ಧಾರ್ಮಿಕ ಶಿಕ್ಷಣ ಮತ್ತು ಶಿಕ್ಷಣ ಪ್ರತ್ಯೇಕ ಶಾಖೆಗಳು. ಅವುಗಳ ಗುರಿ ಮತ್ತು ಉದ್ದೇಶಗಳು ಹೇಗೆ ಭಿನ್ನವೋ ಅಂತೆಯೇ ತತ್ವ, ಸಿದ್ಧಾಂತಗಳು ಬೇರೆ ಬೇರೆಯೆ ಆಗಿವೆ. ರಾಷ್ಟ್ರೀಯತೆಯ ಪರಿಕಲ್ಪನೆ ಸಾಧ್ಯವಾಗುವುದು ಶಿಕ್ಷಣದಿಂದ ಮಾತ್ರ ಸಾಧ್ಯ. ಯಾವುದೇ ಧರ್ಮಲೇಪಿತ ಶಿಕ್ಷಣಕ್ಕೆ ರಾಷ್ಟ್ರೀಯತೆಯನ್ನು ತರುವಷ್ಟು ಬನಿ ಇರುವುದಿಲ್ಲ. ಆ ಪರಿಕಲ್ಪನೆಯೇ ಸೊಗಸಾದದ್ದು, ಸಾಮಾಜಿಕ ಹಿತವುಳ್ಳದ್ದು, ಜನಜೀವನ ಪರವಾದದ್ದು ಅದನ್ನು ಭಾರತದ ಸಂವಿಧಾನದ ಮಾರ್ಗದಿಂದಲೇ ಅರಿಯಬೇಕು. ರಾಷ್ಟ್ರೀಯತೆಯ ಒಳಗೆ ರಾಷ್ಟ್ರದ ಸರ್ವ ಜನತೆಯ ಹಿತವು ಅಡಗಿದೆ. ಹೀಗೆ ಎಲ್ಲಾ ಜನರ ಹಿತವನ್ನು ಬಯಸುವುದು, ಸಾಪೇಕ್ಷಿತವಾದುದು ಶಿಕ್ಷಣದ ಪರಮಗುರಿಯಾಗಿದೆ. ಇಂತಹ ಅನೇಕ ಗುರಿ, ಉದ್ದೇಶಗಳ ಕಿರು ಸಾರಲೇಖವೆ ಪಠ್ಯಪುಸ್ತಕವಾಗಬೇಕು.

ಭಾರತೀಯ ಮನಸ್ಸುಗಳು ಇನ್ನೂ ಶಿಕ್ಷಣದ ವಿಚಾರದಲ್ಲಿ ಸಂಪ್ರದಾಯವನ್ನೇ ಉಸಿರಾಡುತ್ತಿವೆ. ಜಗತ್ತು ನಾಗಲೋಟದಲ್ಲಿ ಬೆಳೆಯುತ್ತಿದ್ದರು ಅತ್ತಲ ಪರಿವೆಗೆ ಎಡೆಗೊಡದೆ ನಾವು ಹಳೆಯ ಮಾದರಿಯನ್ನೇ ಪುನಃ ಪುನಃ ಮೆಲುಕು ಹಾಕುತ್ತಿರುವುದು ನೋಡಿದರೆ ಅದು ನಮಗೆ ರಕ್ತಗತವಾಗಿರಬೇಕು ಎನಿಸದೆ ಇರಲಾರದು. ಭಾರತಕ್ಕೆ ಇಂಗ್ಲಿಷ್ ಶಿಕ್ಷಣ ಮಿಷನರಿಗಳ ಮೂಲಕ ಕಾಲಿರಿಸಿದಾಗಲು ನಾವು ಪುರಾಣದ ಪುಣ್ಯಕಥೆಗಳನ್ನೇ ಪಠ್ಯವಾಗಿಸಿಕೊಂಡು ಓದಿಕೊಂಡವರು. ನಮ್ಮ ದೃಷ್ಠಿಕೋನ, ಆಲೋಚನೆಗಳು ಅದರಿಂದಾಚೆಗೆ ಬರಲಾರದೆ ನಮ್ಮನ್ನು ಬಂಧಿಸುವಷ್ಟು ನಮ್ಮ ಪಠ್ಯವನ್ನು ದುರ್ಬಲವಾಗಿಸಿಕೊಂಡು ಬಂದಿದ್ದೇವೆ.

Image
prayer in school

ಭಾರತದ ಶಿಕ್ಷಣವು ದೇಸೀಯತೆಯ ಹೆಸರಿನಲ್ಲಿ ಬ್ರಿಟಿಷರ ಶಿಕ್ಷಣವನ್ನು ವಿರೋಧಿಸಿತು. ಅದೊಂದು ಧರ್ಮಪ್ರಚಾರದ ಸರಕು ಎಂದು ಸಾರಾಸಗಟಾಗಿ ನಿರಾಕರಿಸಿತು. ಪರ್ಯಾಯವಾಗಿ ತನ್ನದೇ ಶಿಕ್ಷಣದ ಮಾರ್ಗವನ್ನು ಕಂಡುಕೊಂಡಿತು. ಹೀಗೆ ತಾನು ಭಾವಿಸಿಕೊಂಡ ಶಿಕ್ಷಣವು ಕೂಡ ಧರ್ಮದ ಹೊರತಾಗಿರದೆ ಪರಕೀಯರ ಧರ್ಮದ ಬದಲು ದೇಸಿಯ ಧರ್ಮದ ಪಠ್ಯವನ್ನು ಮುನ್ನೆಲೆಯಾಗಿ ಶಿಕ್ಷಣವನ್ನು ನೀಡುವ ತಳಹದಿಯ ಮೇಲೆ ಪಠ್ಯಕ್ರಮ ರೂಪಿಸಿಕೊಂಡ ಬಗೆಯನ್ನು ನಾವು ಕಾಣುತ್ತೇವೆ. ಧರ್ಮ ನಮ್ಮದೋ ಇಲ್ಲ ಪರಕೀಯರದೋ ಒಟ್ಟಾರೆ ಶಿಕ್ಷಣವೆಂದರೆ ಧರ್ಮಬೋಧನೆ ಎನ್ನುವ ಮನಸ್ಥಿತಿ ನಿರ್ಮಾಣವಾಯಿತು, ಮುಂದುವರೆಯಿತು ಕೂಡ.

ಕರ್ನಾಟಕದಲ್ಲಿ ಸಾಹಿತ್ಯ ಕ್ಷೇತ್ರವು ನವೋದಯದ ಚಿಗುರು ಕಂಡಾಗ, ಇಂಗ್ಲಿಷ್ ಶಿಕ್ಷಣದ ರುಚಿಯ ಸವಿದ ಹಲವರು ಹೊಸತನದ ಹಂಬಲದೊಂದಿಗೆ ಸಾಹಿತ್ಯಕ್ಷೇತ್ರಕ್ಕೆ ಪಾಶ್ಚತ್ಯ ಸಾಹಿತ್ಯದ ಮಳೆಗೆರೆದರು, ಬದಲಾವಣೆ ಬಯಸಿ ಬರೆದಾಗಲು, ಅದು ಶಿಕ್ಷಣಕ್ಕೆ ಅಪ್ಪಳಿಸದೆ ಹೋಯಿತು. ಶಿಕ್ಷಣ ವ್ಯವಸ್ಥೆ ಜಡ್ಡುಗಟ್ಟಿದ ಸಂಪ್ರದಾಯದ ಮನಸ್ಥಿತಿಯವರ ಅಭಿಪ್ರಾಯಕ್ಕೆ ತಕ್ಕಂತೆ ಕುಣಿಯುವುದನ್ನು ಅಂದಿನಿಂದಲೇ ಕಲಿತಿರಬಹುದು ಎನ್ನುವುದು ಸ್ಪಷ್ಟವಾಗಿ ಗೋಚರವಾಗುವಂತಹದು. ಪಾಶ್ಚಾತ್ಯರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಡೆದ ಶೋಧಗಳು ಹೊಸತನ್ನು, ಆವಿಷ್ಕಾರ ಮನೋಭಾವವನ್ನು, ಸ್ವತಂತ್ರವಾಗಿ ಆಲೋಚಿಸುವ ಕ್ರಮದ ಬೆಳಸನ್ನು ಕಂಡುಕೊಳ್ಳುವ ಮಾರ್ಗವೇ ಶಿಕ್ಷಣವೆನ್ನು ಪರಿಕಲ್ಪನೆಗಳು ಉಂಟಾದಾಗಲು ನಮ್ಮವರು, ಮುಕ್ತಿ, ಆತ್ಮಸಾಕ್ಷತ್ಕಾರ, ನೀತಿಬೋಧೆಯ ಅಂಶಗಳನ್ನು ಅಪೇಕ್ಷಿಸುವ ಸಾಧನವಾಗಿ ಶಿಕ್ಷಣವನ್ನು ಪರಿಭಾವಿಸಿಕೊಂಡಿದ್ದನ್ನು ನಾವು ಪ್ರತಿಹಂತದಲ್ಲೂ ಗಮನಿಸುತ್ತಾ ಬಂದಿದ್ದೇವೆ. ಧರ್ಮದ ಪೊರೆಕಳಚಿಕೊಂಡು ಶಿಕ್ಷಣವನ್ನು ಪ್ರತ್ಯೇಕಿಸಿ ನೋಡುವ ಪರಿಪಾಠ ಭಾರತೀಯರಿಗೆ ಗಗನಕುಸುಮವಾಗಿಯೆ ಉಳಿದಿದೆ. ಪಾಶ್ಚಾತ್ಯರು ಇಂತಹ ಸವಾಲುಗಳನ್ನು ಬಿಡಿಸಿಕೊಂಡು ಹೊಸತನದ ಹುಡುಕಾಟದಲ್ಲಿದ್ದಾರೆ, ಶಿಕ್ಷಣಕ್ಕೆ ಹೊಸಹೊಸ ವ್ಯಾಖ್ಯಾನಗಳನ್ನು ಕಂಡುಕೊಂಡು ಸಿದ್ಧಿಪಡೆದು ಮುನ್ನುಗ್ಗುವಾಗ ಭಾರತೀಯರಲ್ಲಿ ಇಂತಹ ಸವಾಲುಗಳು ಸವಾಲುಗಳಾಗಿಯೆ ಉಳಿದಿವೆ ಎನಿಸುತ್ತದೆ.

ಶಿಕ್ಷಣದ ಗುರಿ ಮತ್ತು ಉದ್ದೇಶ ನಮ್ಮಲ್ಲಿ ಇನ್ನೂ ಸ್ಪಷ್ಟವಾಗಿ ಕಂಡುಕೊಂಡಂತೆ ಅನಿಸುವುದಿಲ್ಲ. ಶಿಕ್ಷಣ ಎನ್ನುವುದು ಏತಕ್ಕಾಗಿ ಅಸ್ತಿತ್ವದಲ್ಲಿದೆ, ಅದರ ಕಾರ್ಯವೇನು, ಅದರಿಂದ ಉಂಟಾಗುವ ಫಲಿತಗಳೇನು ಎಂಬುವ ಆಲೋಚನೆಗಳಿಗು ನಮ್ಮವರು ನೀಡುವ ಉತ್ತರ ‘ಧರ್ಮೋ ರಕ್ಷಿತೇ ರಕ್ಷಿತಃ’ ಎಂಬುವ ಸಿದ್ಧೋತ್ತರ. ನಾವು ಎಂದಿಗೂ ಧರ್ಮಪೂರಿತ ಶಿಕ್ಷಣವನ್ನೆ ಅನುಭವಿಸಿದ್ದೇವೆ. ಅದರಾಚೆಗೆ ನೋಡುವಷ್ಟು ದೃಷ್ಠಿ ನಮಗೆ ಸಿಕ್ಕಿಲ್ಲವಾಗಿದೆ. ಧರ್ಮವೇ ಬೇರೆ, ಶಿಕ್ಷಣವೇ ಬೇರೆ, ಧರ್ಮದ ಪ್ರಯೋಜನವು ಶಿಕ್ಷಣದ ಪ್ರಯೋಜನವು ಭಿನ್ನವಾಗಿವೆ ಎಂಬುದನ್ನು ನಮ್ಮಲ್ಲಿ ಕಂಡುಕೊಳ್ಳಲು ಅಣಿಗೊಳಿಸುವಷ್ಟು ಸಶಕ್ತವಾದ ಪಠ್ಯದ ಅಗತ್ಯ ಎಂದಿಗೂ ಇದೆ ಎಂಬುದು ನನ್ನ ಅಭಿಪ್ರಾಯ.

Image
british school

ಪಾಶ್ಚಾತ್ಯ ಶಿಕ್ಷಣ ತಜ್ಞರು ನೀಡುವ ಶಿಕ್ಷಣದ ವ್ಯಾಖ್ಯಾನಗಳು ವ್ಯಕ್ತಿಯಲ್ಲಿ ಹುದುಗಿರುವ ಸುಪ್ತಕೌಶಲಗಳನ್ನು ಹೊರಹಾಕಿ, ಸಾಮಾಜಿಕ ಕಾಣ್ಕೆ ನೀಡುವ ಜವಾಬ್ದಾರಿಯನ್ನು ಬಿತ್ತುತ್ತವೆ. ಜ್ಞಾನ, ಕೌಶಲ, ತಿಳಿವಳಿಕೆ, ಅನ್ವಯಗಳ ಜಾಗೃತಗೊಳಿಸುವ ಸಾಧನವಾಗಿ ಶಿಕ್ಷಣ ಕಾರ್ಯನಿರ್ವಹಿಸುತ್ತದೆ. ಮುಂದುವರೆದು ಮಗುವಿನ ಬೌದ್ಧಿಕ, ಮಾನಸಿಕ, ದೈಹಿಕ, ಸಾಮಾಜಿಕ ಬೆಳವಣಿಗೆಯನ್ನು ತರುವ ಮೂಲಕ ಸ್ವಾಸ್ಥ್ಯಜಗತ್ತನ್ನು ಪರಿಕಲ್ಪಿಸಿಕೊಂಡು ಜಾಗತಿಕ ಪ್ರಜೆಯಾಗಿ ವಿಶ್ವಭ್ರಾತೃತ್ವದಂತಹ ಹೆಗ್ಗುರಿಯನ್ನು ಬೆನ್ನತ್ತುವ ವಿಶಾಲವಾದ ಗುರಿಯನ್ನು ಅವರ ಶಿಕ್ಷಣಹೊಂದಿರುತ್ತದೆ. ಇಲ್ಲಿ ಯಾವುದೇ ಗೊಂದಲವಿಲ್ಲದೆ ಇದಕ್ಕೆ ಪೂರಕವಾದ ತತ್ವ, ಸಿದ್ಧಾಂತಗಳು ಬೆನ್ನೆಲುಬಾಗಿ ಪೋಷಿಸುತ್ತವೆ. ಇಂತಹ ಸದುದ್ದೇಶಗಳಿಗಾಗಿ ಶಿಕ್ಷಣವನ್ನು ಸಾಧನವನ್ನಾಗಿಸಿಕೊಳ್ಳಲಾಗುತ್ತದೆ. ಆಗಾಗ ಉಂಟಾಗುವ  ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವನ್ನು ಚೇತೋಹಾರಿಯಾಗಿ ಕಂಡುಕೊಳ್ಳುವುದು ಶಿಕ್ಷಣದ ಮೂಲಕವೇ ಎಂದು ಭಾರತೇತರ ಜಗತ್ತು ಭಾವಿಸಿಕೊಂಡಿದೆ.

ಭಾರತದಲ್ಲಿ ಶಿಕ್ಷಣವೆಂದರೆ ಇನ್ನಷ್ಟು ಹರವಿನ ರೆಕ್ಕೆಯನ್ನು ಚಾಚಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ನನ್ನ ಭಾವನೆ. ನಮ್ಮ ಶಿಕ್ಷಣದ ಗುರಿಗಳು ಸಂಪ್ರದಾಯತೆ, ರೂಢಿಗತ ಜೀವನಶೈಲಿ, ಧರ್ಮದ ಪ್ರಸಾರ, ನೀತಿಬೋಧೆಗಳನ್ನು ಸಾಧಿಸಿಕೊಂಡು ಮಕ್ಕಳನ್ನು ಮುಂದಿನ ಪ್ರಜೆಗಳಾಗಿ ಬದುಕಲು ಅಗತ್ಯವಾದ ರೂಢಿಯನ್ನು ಹೇಳಿಕೊಡುವುದನ್ನೆ ಶಿಕ್ಷಣ ಎಂದು ನಂಬಿವೆ. ಕನ್ನಡದ ಮುಕ್ಕಾಲು ಭಾಗ ಪಠ್ಯವಿಧಾನವು ನೀತಿ, ಧರ್ಮಸಾರ, ದೇಸಿಯತೆ, ಸಾಮಾಜಿಕ ಮನೋಧೋರಣೆಗಳನ್ನು ಹೇಳುವುದನ್ನೆ ಪಠ್ಯಕ್ರಮವೆಂದು ನಂಬಿದೆ. ಇದನ್ನೆ ತಾರ್ಕಿಕವಾಗಿ, ವೈಜ್ಞಾನಿಕವಾಗಿ, ಸಾಮಾಜಿಕತೆಯ ವಿವಿಧ ಸ್ವರೂಪಗಳಲ್ಲಿ ವಿಶ್ಲೇಷಿಸಿಕೊಂಡು ತನ್ನನ್ನು ತಾನು ಪ್ರಶಂಸಿಕೊಳ್ಳಲು ಹಿಂದೆಬಿದ್ದಿಲ್ಲ ನಮ್ಮ ಪಠ್ಯವಿಧಾನ.

ಇದನ್ನು ಓದಿದ್ದೀರಾ?  ಏಕ್‌ ಭಾರತ್‌ ಶ್ರೇಷ್ಠ ಭಾರತ್|‌ ಹಿಂದಿ ಭಾಷೆ ಮಾತನಾಡುವ ಮಕ್ಕಳಿಗೆ ಮಾತ್ರ ಪ್ರವಾಸಯೋಗ!

ತತ್ವ, ಸಿದ್ಧಾಂತಗಳಿಲ್ಲದೆ ರೂಪಗೊಳ್ಳುವ ಪಠ್ಯಪುಸ್ತಕವು ಬೆನ್ನುಮೂಳೆ ಇಲ್ಲದೆ ರೂಪಗೊಳ್ಳುವ ಮಾನವ ದೇಹವು ಒಂದೇ ಎಂದು ನಾನು ಭಾವಿಸುತ್ತೇನೆ. ಸಮಾಜವಾದ, ವಿಜ್ಞಾನ, ವೈಚಾರಿಕತೆಗಳು ಯಾವ ತಳಹದಿಯ ಮೇಲೆ ನಿಲ್ಲಲು ಬಯಸುತ್ತವೆಯೋ ಅಂತಹದೇ ಆದ ಒಂದು ತಳಹದಿಯ ಆಧಾರವು ಶಿಕ್ಷಣಕ್ಕು ಅಪೇಕ್ಷಣೀಯ. ಇಂತಹ ಕನಿಷ್ಠ ಪ್ರಜ್ಞೆಯಾದರು ಪಠ್ಯಪುಸ್ತಕದ ಗುರಿ, ಉದ್ದೇಶಗಳ ಆಲೋಚಕನಿಗೆ ಇರಬೇಕಾಗುತ್ತದೆ. ಇಂದಿನ ಅನೇಕ ರಾದ್ಧಾಂತಗಳಿಗೆ ಕಾರಣಗಳೇನೆಂದು ಒಮ್ಮೆಗೆ ನಾವು ಸವೆಸಿ ಬಂದ ಹಾದಿಯನ್ನು ನೋಡಿದರೆ ಸಾಕು ಕಣ್ಣ ಮುಂದೆ ಎದುರಾಗುವುದು ನಮಗೆ ದೊರೆತ ಶಿಕ್ಷಣವಲ್ಲದೆ ಬೇರೇನು ಅಲ್ಲ. ಅದೇ ಸಾಂಪ್ರದಾಯದ ಬೇರೂರಿದ ಪಠ್ಯಪುಸ್ತಕ, ಪರೀಕ್ಷಾ ವಿಧಾನ. ಅದರಿಂದ ಉಂಟಾದ ಫಲಿತವು ಇಂದು ಸಮಾಜವನ್ನು ವಿಪರೀತವಾಗಿ ಕಾಡುತ್ತಿದೆ. ನಾವು ನಮ್ಮದನ್ನು ಬಿಟ್ಟು ನೆರೆಯ ದೇಶದವರ ಓದನ್ನು ನಮ್ಮದಾಗಿಸಿಕೊಳ್ಳದೇ ಹೋದದ್ದು ಇಂದಿನ ಸ್ಥಿತಿಗೆ ಕಾರಣವೂ ಆಗಿರಬಹುದು. ಮನುಷ್ಯನಿಗೆ ವಿಶಾಲವಾದ ದೃಷ್ಠಿಕೋನವನ್ನು ತರಬೇಕಾದ ಪಠ್ಯಕ್ರಮವು ಯಾಕಿಷ್ಟು ಸಂಕುಚಿತತೆಯನ್ನು ನಮ್ಮೊಳಗೆ ಬಿತ್ತುತ್ತಿದೆ ಎನ್ನುವ ಸಣ್ಣ ಆಲೋಚನೆಯಾದರು ನಮ್ಮಲ್ಲಿ ಮೂಡುವಂತಾಗಲು ಒಂದು ವೈಜ್ಞಾನಿಕ ಓದನ್ನು ದನಿಸಬಲ್ಲ ವೈಚಾರಿಕತೆಯ ಪಠ್ಯಕ್ರಮದ ಅಗತ್ಯವಿದೆ.

ಪಠ್ಯಕ್ರಮವೆಂಬುದು ಸಮಕಾಲೀನ ಸಮಾಜದ ದೀವಿಗೆಯಾಗಬೇಕೆ ವಿನಃ ಬದುಕಿನ ಬುಡಸುಡುವ ಬೆಂಕಿಯಾಗಬಾರದು. ಅದು ಭ್ರಾತೃತ್ವವನ್ನು ಬೆಸೆದು, ಎಲ್ಲರನ್ನು ಒಳಗೊಳ್ಳುವುದನ್ನು ಕಲಿಸಿ, ಆ ಮೂಲಕ ರಾಷ್ಟ್ರೀಯತೆಯನ್ನು ಸಾಧಿಸಿಕೊಂಡು ಜಾಗತಿಕ ಕೊಂಡಿಯನ್ನು ದೇಶದೇಶಗಳ ನಡುವೆ ಶಾಂತಿಯಿಂದಲೆ ಬೆಸೆಯಬೇಕು. ದ್ವೇಶವನ್ನು ಉತ್ಪತಿಸುವ ಯಾವುದೆ ಅಂಶವನ್ನು ಶಮನಿಸುವ ಪರಿಹಾರೋಪಾಯಗಳು ಪಠ್ಯಪುಸ್ತಕದ ಆಶಯವಾಗಬೇಕು. ಇಂತಹ ಉದಾತ್ತ ಆಲೋಚನೆಗಳಿಲ್ಲದ ಪಠ್ಯವು ಕೇವಲ ಒಂದು ಪುಸ್ತಕವಾಗಿ ಉಳಿಯುತ್ತದೆ ವಿನಹಃ ಆದರ್ಶ ಪಠ್ಯವಾಗಲಾರದು.

ನಿಮಗೆ ಏನು ಅನ್ನಿಸ್ತು?
1 ವೋಟ್