ಬಿಲ್ಕಿಸ್ ಬಾನೋ ಒಂದು ವೇಳೆ ವಿಮಲಾದೇವಿ ಆಗಿದ್ದರೆ...!

Bilkis-Bano

ಮನೆಯಲ್ಲಿ ಬೆಂಕಿ ಹತ್ತಿದ್ದರೆ ಎಚ್ಚರವಿದ್ದ ಯಾವ ವ್ಯಕ್ತಿಯೂ ನಿದ್ರೆ ಮಾಡಲಾರ. ಪಕ್ಕದ ಕೋಣೆಯಲ್ಲಿ ಹೆಣ ಬಿದ್ದಿದ್ದರೆ, ನಿಜವಾದ ಉಪಾಸಕನಿಗೆ ಪ್ರಾರ್ಥನೆ ಸಲ್ಲಿಸಲು ಆಗುವುದಿಲ್ಲ. ಅದೇ ರೀತಿಯಲ್ಲಿ ಯಾವ ದೇಶದಲ್ಲಿ ಬಲಾತ್ಕಾರಿಗಳ, ಅಪರಾಧಿಗಳ ಗುಣಗಾನ ನಡೆಯುತ್ತಿದೆಯೋ, ಅಲ್ಲಿ ಒಬ್ಬ ನಿಜವಾದ ದೇಶಭಕ್ತನಿಗೆ ತಲೆಯೆತ್ತಿ ನಡೆಯಲಾಗುವುದಿಲ್ಲ

ಆಗಸ್ಟ್‌  15ರಿಂದ ನನ್ನ ತಲೆಯಲ್ಲಿ ಪದೇಪದೇ ಹಿಂದಿಯ ಮಹಾನ್ ಕವಿ ಸರ್ವೇಶ್ವರ್ ದಯಾಲ್ ಸಕ್ಸೇನ ಅವರ ಪ್ರಸಿದ್ಧ ಕವಿತೆ ‘ದೇಶ ಹಾಳೆಯ ಮೇಲೆ ಬರೆದಿರುವ ನಕ್ಷೆಯಂತೂ ಅಲ್ಲವಲ್ಲ’ ಗುಂಯ್‌ಗುಟ್ಟುತ್ತಿದೆ. ಇತ್ತ ದೇಶ ಸ್ವಾತಂತ್ರ್ಯದ 75 ನೆಯ ವರ್ಷದ ಸಂಭ್ರಮಾಚರಣೆ ಮಾಡುತ್ತಿತ್ತು, ಅತ್ತ ಗೋಧ್ರಾ ಜೈಲಿನಿಂದ 11 ಜನ ಬಲತ್ಕಾರಿ ಮತ್ತು ಕೊಲೆಗಾರರಿಗೆ ಸ್ವಾತಂತ್ರ್ಯ ನೀಡಲಾಗುತ್ತಿತ್ತು. ದೇಶದಲ್ಲಿ ತಿರಂಗಾ ಯಾತ್ರೆ ನಡೆಯುತ್ತಿತ್ತು ಹಾಗೂ ಅತ್ತ ಅಪರಾಧಿಗಳಿಗೆ ಹೂವಿನ ಮಾಲೆ ಹಾಕಲಾಗುತ್ತಿತ್ತು. ಕವಿ ನನಗೆ ಪ್ರಶ್ನೆ ಕೇಳುತ್ತಿದ್ದ, ಈ ಕವಿತೆಯನ್ನು 50 ವರ್ಷ ಹಿಂದೆಯಲ್ಲ, 2022 ರ ಸಲುವಾಗಿ ಬರೆದಂತಿತ್ತು:

‘ಒಂದು ವೇಳೆ ನಿಮ್ಮ ಮನೆಯ

ಒಂದು ಕೋಣೆಯಲ್ಲಿ ಬೆಂಕಿ ಬಿದ್ದಿದ್ದರೆ

ನೀವು, ಇನ್ನೊಂದು ಕೋಣೆಯಲ್ಲಿ ನಿದ್ರಿಸಬಹುದೇ?

ಒಂದು ವೇಳೆ ನಿಮ್ಮ ಮನೆಯ ಒಂದು ಕೋಣೆಯಲ್ಲಿ

ಹೆಣಗಳು ಕೊಳೆತು ನಾರುತ್ತಿದ್ದರೆ

ನೀವು ಇನ್ನೊಂದು ಕೋಣೆಯಲ್ಲಿ ಪ್ರಾರ್ಥನೆ ಸಲ್ಲಿಸಬಲ್ಲಿರಾ?

ಹೌದು ಎಂತಾದಲ್ಲಿ,

ನಿಮಗೆ ಹೇಳಲು ನನ್ನ ಬಳಿ ಏನೂ ಇಲ್ಲ”

ಸ್ವಾಭಾವಿಕವಾಗಿಯೇ, ನನಗೆ ‘ಹೌದು’ ಎಂದು ಹೇಳಲು ಆಗುವುದಿಲ್ಲ. ಮನೆಯಲ್ಲಿ ಬೆಂಕಿ ಹತ್ತಿದ್ದರೆ ಎಚ್ಚರವಿದ್ದ ಯಾವ ವ್ಯಕ್ತಿಯೂ ನಿದ್ರೆ ಮಾಡಲಾರ. ಪಕ್ಕದ ಕೋಣೆಯಲ್ಲಿ ಹೆಣ ಬಿದ್ದಿದ್ದರೆ, ಒಬ್ಬ ನಿಜವಾದ ಉಪಾಸಕನಿಗೆ ಪ್ರಾರ್ಥನೆ ಸಲ್ಲಿಸಲು ಆಗುವುದಿಲ್ಲ. ಅದೇ ರೀತಿಯಲ್ಲಿ ಯಾವ ದೇಶದಲ್ಲಿ ಬಲಾತ್ಕಾರಿಗಳ ಮತ್ತು ಅಪರಾಧಿಗಳ ಗುಣಗಾನ ನಡೆಯುತ್ತಿದೆಯೋ, ಅಲ್ಲಿ ಒಬ್ಬ ನಿಜವಾದ ದೇಶಭಕ್ತನಿಗೆ ತಲೆಯೆತ್ತಿ ನಡೆಯಲಾಗುವುದಿಲ್ಲ.  ಕವಿತೆ ಎರಡನೆಯ ಪಂಕ್ತಿಯು ಅದಕ್ಕೆ ಕಾರಣ ನೀಡುತ್ತದೆ:

“ದೇಶ ಹಾಳೆಯ ಮೇಲೆ ಬರೆದಿರುವ ನಕ್ಷೆಯಂತೂ ಅಲ್ಲ

ಒಂದು ಭಾಗ ಹರಿದುಹೋದಲ್ಲಿ

ಇನ್ನೊಂದು ಭಾಗ ಹಾಗೇ ತುಂಡಾಗದೇ ಅದೇ ರೀತಿಯಲ್ಲಿ ನಿಲ್ಲಲು

ಹಾಗೂ ನದಿಗಳು, ಪರ್ವತ, ನಗರ, ಹಳ್ಳಿ

ಹಾಗೇ ತಮ್ಮ ತಮ್ಮ ಜಾಗದಲ್ಲಿ

ಕದಲದೇ ನಿಲ್ಲಲು”

ಈಗ ಯೋಚಿಸಿ, ವಿಮಲಾದೇವಿ ಎಂಬ ಹೆಸರಿನ 21 ವರ್ಷದ ಒಬ್ಬ ಮಹಿಳೆ ಇದಾಳೆ, ಅವಳು ಐದು ತಿಂಗಳ ಗರ್ಭಿಣಿ. ಇದ್ದಕ್ಕಿದ್ದಂತೆ ಗಲಭೆಗಳಾಗುತ್ತವೆ. ಕುಟುಂಬದ ಜನರು ಮನೆ ತೊರೆದು, ತಮ್ಮ ನೆಂಟರಿಷ್ಟರ ಮನೆ ಕಡೆ ಓಡುತ್ತಾರೆ. ಹೇಗೋ ಒಂದು ಟ್ರಕ್ ವ್ಯವಸ್ಥೆ ಮಾಡಿ, ಅದರಲ್ಲಿ ತುರುಕಿಕೊಳ್ಳುತ್ತಾರೆ. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಒಂದು ಗುಂಪು ಎದುರಾಗುತ್ತದೆ. ಟ್ರಕ್ ನಿಲ್ಲಿಸುತ್ತಾರೆ. ಗಂಡಸರನ್ನು ಕೊಲ್ಲುತ್ತಾರೆ. ವಿಮಲಾದೇವಿಯ ಕಣ್ಣುಗಳೆದುರಿಗೇ, ಅವಳ 3 ವರ್ಷದ ಮಗಳನ್ನು ರಸ್ತೆಯ ಮೇಲೆ ಪದೇಪದೇ ಅಪ್ಪಳಿಸಿ ಕೊಲ್ಲುತ್ತಾರೆ. ನಂತರ ಈ ಗರ್ಭವತಿ ಮಹಿಳೆಯ ಮೇಲೆ ಒಬ್ಬೊಬ್ಬರಾಗಿ ಅತ್ಯಾಚಾರ ಎಸಗುತ್ತಾರೆ. ನಂತರ ಅವಳು ಸತ್ತಿದ್ದಾಳೆ ಎಂದುಕೊಂಡು ಅವಳ ಬೆತ್ತಲೆ ಶರೀರವನ್ನು ರಸ್ತೆಯ ಮೇಲೆ ಬಿಟ್ಟು ಹೋಗುತ್ತಾರೆ.

ಕವಿ ಕಿರುಚುತ್ತಾನೆ:

“ಈ ಜಗತ್ತಿನಲ್ಲಿ ಮನುಷ್ಯನ ಪ್ರಾಣಕ್ಕಿಂತ ದೊಡ್ಡದು

ಏನೂ ಇಲ್ಲ, ದೇವರೂ ಇಲ್ಲ, ಜ್ಞಾನವೂ ಇಲ್ಲ,

ಚುನಾವಣೆಯೂ ಇಲ್ಲ

ಕಾಗದದ ಮೇಲೆ ಬರೆಯಲಾದ ಯಾವುದೇ ಬರಹವನ್ನೂ

ಹರಿದುಹಾಕಬಹುದು

ಹಾಗೂ ನೆಲದ ಏಳು ಪದರುಗಳ ಒಳಗೆ

ಹೂತು ಹಾಕಬಹುದು”

ಆದರೆ ಯಾವುದೇ ಸಿನೆಮಾದ ಕಥೆಯಂತೆ ವಿಮಲಾದೇವಿ ಸಾಯಲಿಲ್ಲ. ಅವಳು ಪ್ರಜ್ಞೆ ಮರಳಿ ಪಡೆದು, ಹೇಗೋ ತನ್ನ ದೇಹ ಮುಚ್ಚಿಕೊಂಡು ಸುರಕ್ಷಿತ ಸ್ಥಳ ತಲುಪುತ್ತಾಳೆ. ಪೊಲೀಸರು ಅವಳ ದೂರನ್ನು ದಾಖಲಿಸಲೂ ನಿರಾಕರಿಸುತ್ತಾರೆ. ದಾಖಲಿಸಿದ ನಂತರ ಸರಿಯಾಗಿ ತನಿಖೆ ಆಗುವುದಿಲ್ಲ. ಹೇಗೋ ವಿಷಯ ಸರ್ವೋಚ್ಚ ನ್ಯಾಯಾಲಯಕ್ಕೆ ತಲುಪುತ್ತದೆ. ನ್ಯಾಯ ಆಗಲಿ ಎಂದು ಪ್ರಕರಣವನ್ನು ಬೇರೊಂದು ರಾಜ್ಯದಲ್ಲಿ ನಡೆಸಲಾಗುತ್ತದೆ. ಆಗ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ. ಕೊನೆಗೆ, 11 ಅಪರಾಧಿಗಳಿಗೆ ಬಲತ್ಕಾರ ಮತ್ತು ಕೊಲೆಯ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.

ಕಥೆ ಇಲ್ಲಿಯೇ ಮುಗಿಯುವುದಿಲ್ಲ. ಜೈಲಿನಲ್ಲಿದ್ದರೂ, ಈ ಎಲ್ಲ ಅಪರಾಧಿಗಳು ಪದೇಪದೇ ಪರೋಲ್ ಮೇಲೆ ಹೊರಬರುತ್ತಾರೆ, ಸಂಭ್ರಮಿಸುತ್ತಾರೆ.  ಪಕ್ಷದ ಸಮಾವೇಶಗಳಲ್ಲಿ ಶಾಮೀಲಾಗುತ್ತಾರೆ ಹಾಗೂ ವಿಮಲಾ ದೇವಿಯ ಪರಿವಾರಕ್ಕೆ ಬೆದರಿಕೆ ಹಾಕುತ್ತಾರೆ. ಪೊಲೀಸರು, ಆಡಳಿತ ಮತ್ತು ಸರಕಾರ ಮಂದಹಾಸ ಬಿರುತ್ತವೆ. ಹಾಗೂ ಶಿಕ್ಷೆ ಪೂರ್ಣವಾಗುವ ಮುನ್ನ ಸರಕಾರ ಒಂದು ಸಮಿತಿಯನ್ನು ರಚಿಸುತ್ತದೆ. ಅದು ಈ ಅತ್ಯಂತ ಕ್ರೂರ ಅಪರಾಧಿಗಳನ್ನು ಅವರ ಒಳ್ಳೆಯ ನಡತೆ ಮತ್ತು ಮಾನವೀಯತೆಯ ಆಧಾರದ ಮೇಲೆ ಬಿಡುಗಡೆ ಮಾಡುತ್ತದೆ. ಹೀಗೆ 15 ನೆಯ ಆಗಸ್ಟ್‌ರಂದು ಸ್ವಾತಂತ್ರದ ದಿನವನ್ನು ಆಚರಿಸಲಾಗುತ್ತದೆ. ಈಗ ಕವಿತೆ ತನ್ನ ಉತ್ತುಂಗವನ್ನು ತಲುಪುತ್ತದೆ:

“ನೆನಪಿಡಿ

ಒಂದು ಮಗುವಿನ ಕೊಲೆ
ಒಬ್ಬ ಮಹಿಳೆಯ ಸಾವು
ಗುಂಡುಗಳಿಂದ
ಛಿದ್ರಗೊಂಡ ಒಬ್ಬ ವ್ಯಕ್ತಿಯ ದೇಹ
ಯಾವುದೇ ಶಾಸನದ್ದಷ್ಟೇ ಅಲ್ಲ
ಇಡೀ ರಾಷ್ಟ್ರದ ಪತವಾಗಿದೆ”
ಹೀಗೆ ರಕ್ತ ಸುರಿದು
ಭೂಮಿಯಲ್ಲಿ ಚೈತನ್ಯವಿರುವುದಿಲ್ಲ
ಆಕಾಶದಲ್ಲಿ ಹಾರುವ ಬಾವುಟಗಳನ್ನು
ಕಪ್ಪಾಗಿಸುತ್ತದೆ”

ನಾನು ಆಗಸದಲ್ಲಿ ಹಾರುತ್ತಿರುವ ತ್ರಿವರ್ಣ ಧ್ವಜವನ್ನು ನೋಡುತ್ತೇನೆ. ಅವುಗಳ ಸಂಖ್ಯೆ ಹೆಚ್ಚಿದೆ, ಅವುಗಳ ಆಕಾರ ಮತ್ತು ಎತ್ತರವೂ ಹೆಚ್ಚಿದೆ. ಆದರೆ ಕವಿತೆಯ ಸಾಲುಗಳು ನನ್ನ ಬೆನ್ನು ಬಿಡುತ್ತಿಲ್ಲ. ವಿಮಲಾ ದೇವಿಯ ಬಲಾತ್ಕಾರಿಗಳನ್ನು ಬಿಡುಗಡೆ ಮಾಡಲು ಕಾನೂನಾತ್ಮಕ ದಾಳಗಳ ಆಸರೆ ಪಡೆಯಲಾಗುತ್ತದೆ. ಆದರೆ ಕವಿ ಮತ್ತೇ ನಮ್ಮನ್ನು ಎಚ್ಚರಿಸುತ್ತಾನೆ,

“ಹೆಣಗಳ ಆಸರೆ ಪಡೆದು
ನಿಂತಿರುವ ವಿವೇಕ
ಅದು ಕುರುಡು ವಿವೇಕ”

ವಿಮಲಾ ದೇವಿ ಹೇಳುತ್ತಾಳೆ: “ನಾನು ಮೌನವಾಗಿದ್ದೇನೆ, ಪ್ರಜ್ಞಾಹೀನಳಾಗಿದ್ದೇನೆ. ಇಷ್ಟು ಮಾತ್ರ ಹೇಳಬಲ್ಲೆ, ಒಬ್ಬ ಮಹಿಳೆಯೊಂದಿಗೆ ನ್ಯಾಯದ ಈ ರೀತಿಯ ಅಂತಿಮ ಗಮ್ಯವಾಗಲು ಹೇಗೆ ಸಾಧ್ಯ? ನಾನು ಎಲ್ಲಕ್ಕಿಂತ ದೊಡ್ಡ ನ್ಯಾಯಾಲಯದಲ್ಲಿ ನಂಬಿಕೆ ಇಟ್ಟಿದ್ದೆ. ನಾನು ಈ ವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟಿದ್ದೆ. ನಾನು ನನ್ನ ದುರಂತದೊಂದಿಗೆ ಬದುಕಲು ಕಲಿಯುತ್ತಿದ್ದೆ. ಆದರೆ ಈಗ ಶಾಂತಿ ಕದಡಿದೆ. ನ್ಯಾಯದಲ್ಲಿಯ ನನ್ನ ನಂಬಿಕೆ ಕದಡಿದೆ.

ವಿಮಲಾಳ ಧ್ವನಿಯನ್ನು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ದೇಶ ಮೌನವಾಗಿದೆ. ಯಾವುದೇ ಕುರ್ಚಿ ಅಲುಗಾಡಿಲ್ಲ. ನಿರ್ಭಯಾಳ ಬಲಾತ್ಕಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಬೇಡಿಕೆ ಇಡುವವರು ಹಾಗೂ ಆರುಶಿ ಹತ್ಯೆಯ ಮೇಲೆ ಹಗಲೂ ರಾತ್ರಿ ಕಿರುಚಾಡಿದ ಟವಿ ಚಾನೆಲ್‍ಗಳು ಮೂಕರಾಗುತ್ತಾರೆ.

ಇದನ್ನು ಓದಿದ್ದೀರಾ? ಕ್ಷಮಾಪಣೆ ಬಯಸದ ಕ್ರಾಂತಿಕಾರಿಗಳು | ಗಣೇಶ್‌ ಘೋಷ್‌, ಸೂರ್ಯ ಸೇನ್‌, ಕಲ್ಪನಾ ದತ್

ಒಬ್ಬ ಕವಿ ಮಾತ್ರ ಗಂಟಲು ಹರಿದುಕೊಂಡು ವಿಮಲಾಳ ಪರವಾಗಿ ಮಾತನಾಡುತ್ತಿದ್ದಾನೆ:

“ಕೊನೆಯ ಮಾತು
ಅತ್ಯಂತ ಸ್ಪಷ್ಟ
ಯಾವುದೇ ಕೊಲೆಗಾರನಿಗೆ
ಎಂದಿಗೂ ಕ್ಷಮಿಸಬೇಡ
ಅವನು ನಿನ್ನ ಗೆಳೆಯನೇ ಆಗಿರಲಿ
ಧರ್ಮದ ಗುತ್ತಿಗೆದಾರನೇ ಆಗಿರಲಿ
ಪ್ರಜಾಪ್ರಭುತ್ವದ ಪ್ರಸಿದ್ಧ ಕಾವಲುಗಾರನೇ ಆಗಿರಲಿ”

ಆದರೆ, ಆ ಮಹಿಳೆಯ ಹೆಸರು ವಿಮಲಾ ದೇವಿ ಅಲ್ಲ, ಬಿಲ್ಕಿಸ್ ಬಾನೋ ಎಂದು ನೀವು ಹೇಳುವಿರಿ. ಹಾಗಿದ್ದರೆ? ಹಾಗಿದ್ದರೆ ಅದರಿಂದ ನ್ಯಾಯದ ತಕ್ಕಡಿ ಪಲ್ಟಿ ಹೊಡೆಯುತ್ತದೆಯೇ? ಬಲಾತ್ಕಾರದ ಚೀತ್ಕಾರಗಳು ಮಧುರವಾಗುತ್ತವೆಯೇ? ಕೊಲೆಯ ಭಿಭಿತ್ಸ ಸತ್ಯ ಮುಗ್ಧವಾಗುತ್ತದೆಯೇ? ಒಂದು ವೇಳೆ ಸರ್ವೇಶ್ವರ್ ದಯಾಲ್ ಸಕ್ಸೇನಾ 2022ರಲ್ಲಿ ಜೀವಿತವಿದ್ದಲ್ಲಿ, ಕವಿತೆಯಲ್ಲಿ ಎರಡು ಸಾಲು ಸೇರಿಸುತ್ತಿದ್ದರು:

“ಒಂದು ವೇಳೆ ನೀವು ವಿಮಲಾ ದೇವಿಯ ಬಲಾತ್ಕಾರದ ಬಗ್ಗೆ  ಪಟ್ಟಿಯಾಗಿ ಕಿರುಚುತ್ತೀರಾ ಎಂದಾದಲ್ಲಿ ಬಿಲ್ಕಿಸ್ ಬಾನೋನ ಹೆಸರು ಕೇಳು ಸುಮ್ಮನಿರಬಹುದೇ? ಹೌದು ಎಂತಾದಲ್ಲಿ ನಿಮಗೆ ಹೇಳಲು ನನ್ನ ಬಳಿ ಏನೂ ಇಲ್ಲ”

ನಿಮಗೆ ಏನು ಅನ್ನಿಸ್ತು?
0 ವೋಟ್