ಶೂದ್ರನೆಂಬ ಕಾರಣಕ್ಕೆ ಶಂಭೂಕನ ಕತ್ತು ಕೊಯ್ದಿರುವ ಕತೆಯಿಂದ ಯಾವ ನೈತಿಕತೆಯನ್ನು ಕಲಿಯಬೇಕಿದೆ?

ಶೂದ್ರ ಶಂಭೂಕನ ಕೊಯ್ದ ಕತೆ

ಏನೂ ಅರಿಯದ ಮುಗ್ಧ ಮನಸ್ಸಿನಲ್ಲಿ ನೈತಿಕತೆಯ ನೆಪದಿಂದ ಹಿಂದುತ್ವವನ್ನ ಬಿತ್ತಹೊರಟ ಸರ್ಕಾರ ಮಕ್ಕಳ ಕತ್ತು ಹಿಸುಕಿ ಸಾಯಿಸುವ ಕಾರ್ಯಕ್ಕೆ ಕೈಹಾಕಿದೆ.  ಮಕ್ಕಳು ರಾಮಾಯಣ, ಮಹಾಭಾರತದಿಂದ ಏನು ಕಲಿಯಬೇಕು? ಶೂದ್ರನಾದ ಕಾರಣ ಕಲಿಯುವ ಹಕ್ಕಿಲ್ಲವೆಂದು ಶಂಭೂಕನ ಕತ್ತು ಕೊಯ್ದಿರುವ ಕತೆಯಿಂದ ಯಾವ ನೈತಿಕತೆಯನ್ನು ನಿರೀಕ್ಷಿಸಬೇಕು?

ನೇರವಾಗಿ ವಿಷಯಕ್ಕೆ ಬರಬೇಕಾದರೆ; ಭಾಜಪವು ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ವಿವಾದಗಳನ್ನು ಎಳೆದು ತರುತ್ತಲೇ ಇದೆ. ಜಾತಿ-ಧರ್ಮದ ಆಧಾರದ ಮೇಲೆ ಅಧಿಕಾರಕ್ಕೆ ಬಂದ ಬಿಜೆಪಿಯು ಬ್ರಾಹ್ಮಣ್ಯವನ್ನು ಉಳಿಸಿ ಬೆಳೆಸುವಲ್ಲಿ ಬಹಳಷ್ಟು ಕಸರತ್ತು ಮಾಡುತ್ತಿದೆ. ಬ್ರಾಹ್ಮಣ್ಯವ ಕಿತ್ತೊಗೆಯಲು ಬುದ್ಧನಿಂದ ಹಿಡಿದು ಅಂಬೇಡ್ಕರ್ ಅವರವರೆಗೆ ಪ್ರಜೆಗಳ ಹಿತರಕ್ಷಣೆಗಾಗಿ ಕನಸು ಕಂಡು ಯಶಸ್ಸನ್ನು ಸಾಧಿಸಿದ ಶರಣರು, ಸಂತರು, ಸೂಫಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು ಬಹಳಷ್ಟು ಮಹನೀಯರು ಬಂದು ಹೋಗಿದ್ದಾರೆ. ಬಹಳ ಹಿಂದಿನಿಂದಲೇ ಫ್ಲಾನ್ ಮಾಡಿಕೊಂಡು ಸಂಘಪರಿವಾರದ ಅಜೆಂಡಾಗಳನ್ನೇ ಗಟ್ಟಿಯಾಗಿ ಹಿಡಿದುಕೊಂಡು ಬಂದ ಬಿಜೆಪಿ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಲೇ ಬಂದಿದೆ.
 
ನಮ್ಮ ಭಾರತದ ಶ್ರೇಷ್ಠ ಸಂವಿಧಾನದ ಆಶಯಗಳನ್ನೇ ಮಣ್ಣುಮುಕ್ಕಿಸಿ ಮನುಸ್ಮೃತಿಯ ವಿಚಾರಗಳನ್ನು ಒತ್ತಾಯಪೂರ್ವಕವಾಗಿ ಮಕ್ಕಳ ಮನಸ್ಸಿನ ಮೇಲೆ ಹೇರಲು ಹೊರಟಿರುವ ಸರ್ಕಾರದ ನಡೆಯನ್ನು ಕಂಡರೆ ಭಯವೆನಿಸುತ್ತಿದೆ. ನೈತಿಕ ಶಿಕ್ಷಣದ ಹೆಸರಿನಲ್ಲಿ ಶಿಕ್ಷಣ ಸಚಿವರು ರಾಮಾಯಣ-ಮಹಾಭಾರತವನ್ನು ಶಾಲಾಪಠ್ಯದಲ್ಲಿ ಸೇರಿಸುವ ಹುನ್ನಾರ ಇಡೀಯ ಪಠ್ಯಪುಸ್ತಕವನ್ನೇ ಬ್ರಾಹ್ಮಣೀಕರಣಗೊಳಿಸುವುದು. ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣವನ್ನು ಬಳಿದೇ ತೀರುತ್ತೆವೆಂದು ರಾಜಾರೋಷವಾಗಿ ಹೇಳುವಾಗ ಅವರು ಕುತಂತ್ರ ಅರ್ಥವಾಗದೆ ಇರದು.
 
ಮಕ್ಕಳಿಗೆ ನೈತಿಕ ಶಿಕ್ಷಣದಲ್ಲಿ ಯಾವುದರಲ್ಲಿ ನೈತಿಕತೆಯ ವಿಚಾರಗಳು ಸಿಗುತ್ತವೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ನಮ್ಮ ಸರ್ಕಾರಕ್ಕೆ ಏನು ಹೇಳಬೇಕು ತಿಳಿಯುತ್ತಿಲ್ಲ. ರಾಮಾಯಣ ಮತ್ತು ಮಹಾಭಾರತ ಅದ್ಭುತ ಕಾವ್ಯಗಳೆಂಬುದು ಎಲ್ಲರಿಗೂ ತಿಳಿದ ವಿಷಯವೆ. ಆದರೆ ಅವುಗಳಿಂದ ನಿಜವಾಗಿಯು ಮಕ್ಕಳು ನೈತಿಕತೆಯ ಪಾಠವನ್ನು ಎಷ್ಟರಮಟ್ಟಿಗೆ ಕಲಿಯುತ್ತಾರೆ? ನಿಜ ರಾಮಾಯಣ ಮಹಾಭಾರತವ ತಿರುವಿ ಹಾಕಿದಾಗಲೇ ತಿಳಿಯುತ್ತಿಲ್ಲ. ಅಸಲಿಗೆ ನಾವು ರಾಮಾಯಣ ಮಹಾಭಾರತವೆಂಬ ಕಾವ್ಯಗಳನ್ನು ವಿರೋಧಿಸುತ್ತಿಲ್ಲ. ಅವುಗಳ ಮೂಲಕ ಬ್ರಾಹ್ಮಣ್ಯವ ಉಳಿಸುವ ಹುನ್ನಾರಕ್ಕೆ ನಮ್ಮ ಧಿಕ್ಕಾರವಿದೆ.
 
ಶೂದ್ರ ಶಂಭೂಕನ ಕತ್ತು ಕೊಯ್ದಿರುವ ಕತೆಯಲ್ಲಿ ಯಾವ ನೈತಿಕತೆ ಹುಡುಕುವುದು?
ಏನೂ ಅರಿಯದ ಮುಗ್ಧ ಮನಸ್ಸಿನಲ್ಲಿ ನೈತಿಕತೆಯ ನೆಪದಿಂದ ಹಿಂದುತ್ವವನ್ನ ಬಿತ್ತಹೊರಟ ಸರ್ಕಾರ ಮಕ್ಕಳ ಕತ್ತು ಹಿಸುಕಿ ಸಾಯಿಸುವ ಕಾರ್ಯಕ್ಕೆ ಕೈಹಾಕಿದೆ. ನಿಜವಾಗಿ ಮಕ್ಕಳು ರಾಮಾಯಣ, ಮಹಾಭಾರತದಿಂದ ಏನು ಕಲಿಯಬೇಕು? ನೀನು ಶೂದ್ರನಾದ ಕಾರಣ ಕಲಿಯುವ ಹಕ್ಕಿಲ್ಲವೆಂದು ಶಂಭೂಕನ ಕತ್ತು ಕೊಯ್ದಿರುವ ಕತೆಯಿಂದ ಯಾವ ನೈತಿಕತೆಯನ್ನು ನಿರೀಕ್ಷಿಸಬೇಕು? ಮತ್ತೊಬ್ಬರ ಮಾತು ಕೇಳಿ ಸಾದ್ವಿಯಾದ ಹೆಂಡತಿಯ ಶೀಲ ಶಂಕಿಸಿದ ನಡೆಯಲ್ಲಿ ಯಾವ ನೈತಿಕತೆ ಇದೆ? ಕೇಳುತ್ತ ಹೊರಟರೆ ಪ್ರಶ್ನೆಗಳ ಮಹಾಪೂರವೆ ಆಗಬಹುದು.
 
ಹೆಣ್ಣು, ಹೊನ್ನು, ಮಣ್ಣಿಗಾಗಿ ಅಣ್ಣತಮ್ಮಂದಿರು ಪರಸ್ಪರ ಶತ್ರುಗಳಂತೆ ಹೊಡೆದಾಡಿಕೊಂಡು ಸತ್ತುದರಿಂದೇನು ನೈತಿಕತೆ ಕಲಿಯಬೇಕು? ಪರರ ವಧುವನ್ನು ಅಪಹರಿಸಿಕೊಂಡು ಕುತಂತ್ರದಿಂದ ಮದುವೆ ಆಗುವುದರಿಂದೇನು ಕಲಿಯಬೇಕು? ಹೆಣ್ಣಿಗಾಗಿ, ಮಣ್ಣಿಗಾಗಿ ಕೋಟಿ ಕೋಟಿ ಜನ ಸತ್ತರೆಂದು ಶರಣರು ಜರೆದಿದ್ದಾರೆ. ಸತ್ತವರ ಕತೆಯನ್ನೇ ಹೇಳಿ ಮತ್ತೆ ಸಾಯಿಸುವುದರ ಉದ್ದೇಶವೇನು? ನಿಜದ ಹಾದಿಯೊಳು‌ ನಡೆದು ನೈತಿಕತೆಯ ಮೌಲ್ಯಗಳನ್ನೇ ಸಮಾಜಕ್ಕಾಗಿ ಬಿಟ್ಟು ಹೋದ ದಾಸರ, ಸಂತರ, ಶರಣರ, ಸೂಫಿಗಳ, ದಾರ್ಶನಿಕರ ವಿಚಾರಗಳಲ್ಲಿ ನೈತಿಕತೆ ಇರುವುದು ನಮ್ಮ ಸರ್ಕಾರದ ಗಮನಕ್ಕೆ ಬಂದಿಲ್ಲವೆ?

Image
ಶಂಭೂಕ ಶೂದ್ರ

ಇಂದಿನ ಮಕ್ಕಳು ಕಲಿಯಬೇಕಾಗಿರುವುದು ಸಹೋದರರ ನಡುವೆ ಜಗಳ ಹಚ್ಚುವ ಬುದ್ಧಿಯನ್ನಲ್ಲ, ಮತ್ತೊಬ್ಬರ ಅಡಿಯಾಳಾಗಿ ಬದುಕುವ ಹಾದಿಯನ್ನಲ್ಲ. ಅವರಿಗೆ ಜಾತಿಭೇದವಿಲ್ಲದ, ದ್ವೇಷರಹಿತವಾದ, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಮೇಲು ಕೀಳನ್ನರಿಯದೆ ಸರ್ವರೂ ಒಂದಾಗಿ ಸುಂದರವಾದ ಬದುಕು ಕಟ್ಟಿಕೊಳ್ಳುವ ಹಾದಿಯನ್ನು. ರಾಮಾಯಣ ಮಹಾಭಾರತದ ಅರಿವು ಮಕ್ಕಳಿಗೆ ಬೇಡವೆಂತಲ್ಲ, ಆದರೆ ಭಾರತದ ಮೂಲನಿವಾಸಿಗಳಾದ ದ್ರಾವಿಡರ ಅಸ್ತಿತ್ವವನ್ನೇ ಇಲ್ಲವಾಗಿಸುವ ಹುನ್ನಾರಕ್ಕೆ ಮುಂದಾಗಿರುವುದು ನಿಜವಾಗಿ ಸಲ್ಲದ ನಡೆ.

    ಇದನ್ನು ಓದಿದ್ದೀರಾ?ಭಾರತ್ ಜೋಡೋ ಯಾತ್ರೆ | ನಾಯಕರ ಸುತ್ತ ʼಮುತ್ತುವʼ ಸೆಲ್ಫಿ ಬೇಟೆಗಾರರು

ಇಂದಿನ ಸಮಾಜಕ್ಕೆ ಬೇಕಿರುವುದು ’ಈಶ್ವರ ಅಲ್ಲಾಹ್ ತೇರೆ ನಾಮ್, ಸಬಕೋ ಸನ್ಮತಿ ದೇ ಭಗವಾನ್’ ಎಂಬ ಮಹಾತ್ಮ ಗಾಂಧೀಜಿಯವರ ಆಶಯವೇ ಹೊರತು ‌ʼಜೈಶ್ರೀರಾಮ್ʼ ಎಂದು ಬಡವರ ಹೊಟ್ಟೆಯ ಮೇಲೆ ಹೊಡೆದು, ʼನಾನೂ ತಿನ್ನಲ್ಲ ತಿನ್ನಲೂ ಬಿಡಲ್ಲʼ ಎಂಬ ಸ್ವಾರ್ಥ ನೀತಿಯಲ್ಲ. ’ಭಾರತವು ಹಿಂದೂ ರಾಷ್ಟ್ರವೂ ಅಲ್ಲ ಮುಸ್ಲಿಂ ರಾಷ್ಟ್ರವೂ ಅಲ್ಲ, ಇದು ಸಂವಿಧಾನದ ಪೂರ್ವಪೀಠಿಕೆಯಂತೆ ಜಾತ್ಯತೀತ, ಧರ್ಮ ನಿರಪೇಕ್ಷಿತ, ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದೆ’ ಹೀಗಾಗಿ ಇದನ್ನೇ ಕಲಿಯಬೇಕು, ಇದೇ ಹಾದಿಯಲ್ಲಿ ಹೋಗಬೇಕು, ಇಂತದ್ದೇ ಓದಬೇಕೆಂದು ಒತ್ತಾಯ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ, ಭಾರತ ಸಂವಿಧಾನದ ಆಶಯಕ್ಕೆ ವಿರುದ್ಧ. ಈ ದಿಕ್ಕಿನಲ್ಲಿ‌ ದೇಶ ಚಲಿಸಬೇಕೆನ್ನುವವರ ಹುನ್ನಾರವನ್ನು ದೇಶದ ಜನ ಅರಿಯುವುದೊಳಿತು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180