'ಈ' ಮಾಹಿತಿ | 'ರೆಪೊ ದರ' ಮತ್ತು 'ರಿವರ್ಸ್ ರೆಪೊ ದರ' ಎಂದರೇನು?

RBI

ಆರ್ಥಿಕತೆ ಬಗ್ಗೆ ಮಾತನಾಡುವಾಗೆಲ್ಲ, 'ರೆಪೊ ದರ' ಎಂಬುದು ತಪ್ಪದೆ ಉಲ್ಲೇಖವಾಗುತ್ತದೆ. ತಜ್ಞರಿಂದ ಹಿಡಿದು ಮಾಧ್ಯಮ ಮಂದಿವರೆಗೆ ಈ ಪದ ಬಳಸದೆ ಮಾತು/ ವರದಿ ಮುಕ್ತಾಯ ಕಾಣುವುದಿಲ್ಲ. ತರಕಾರಿ ಬೆಲೆ ಹೆಚ್ಚಾದರೂ, ಪೆಟ್ರೋಲ್ ದರ ಏರಿಸಿದರೂ ಹಿನ್ನೆಲೆಯಲ್ಲಿ ಈ 'ರೆಪೊ' ಕಾಣಿಸಿಕೊಳ್ಳುತ್ತದೆ. ಇಷ್ಟೊಂದು ಬಳಕೆಯಲ್ಲಿರುವ ಪದದ ಅರ್ಥವೇನು? ಇಲ್ಲಿದೆ ಉತ್ತರ

'ರೆಪೊ ದರದಲ್ಲಿ ಶೇಕಡ 0.50 ಏರಿಕೆ' ಅಥವಾ 'ಇಳಿಕೆ' ಇತ್ಯಾದಿ ಹೇಳಿಕೆಗಳನ್ನು ಕೇಳುತ್ತಲೇ ಇರುತ್ತೇವೆ. ಹಣದುಬ್ಬರವನ್ನು ನಿಯಂತ್ರಿಸುವುದಕ್ಕಾಗಿ ರೆಪೊ ದರವನ್ನು ಹೆಚ್ಚಿಸಲಾಗಿದೆ ಅಂತಲೋ, ಆರ್ಥಿಕ ಬೆಳವಣಿಗೆ ಹೆಚ್ಚಿಸಲು ರೆಪೊ ದರವನ್ನು ಇಳಿಸಲಾಗಿದೆ ಅಂತಲೋ ವರದಿಗಳನ್ನು ನೋಡುತ್ತಿರುತ್ತೇವೆ. ಏನಿದು ರೆಪೊ ದರ? ಅದಕ್ಕೂ ಹಣದುಬ್ಬರಕ್ಕೂ, ಆರ್ಥಿಕ ಪ್ರಗತಿಗೂ ಏನು ಸಂಬಂಧ? ಇಂತಹ ಪ್ರಶ್ನೆಗಳು ಸ್ವಾಭಾವಿಕ.

ಸರಳವಾಗಿ ಹೇಳುವುದಾದರೆ, ರೆಪೊ (Repurchasing Agreement) ದರ ಅನ್ನುವುದು ವಾಣಿಜ್ಯ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕಿನಿಂದ (ಆರ್‌ಬಿಐ) ಪಡೆದ ಹಣಕ್ಕೆ ನೀಡುವ ಬಡ್ಡಿ. ಇದು ಭಾರತದ ಕೇಂದ್ರ ಬ್ಯಾಂಕ್. ನಾವು ಕಷ್ಟದ ಸಮಯದಲ್ಲಿ ಹಣ ಬೇಕಾದಾಗ ಸಾಲಕ್ಕೆ ಬ್ಯಾಂಕುಗಳಿಗೆ ಹೋಗುವಂತೆ ವಾಣಿಜ್ಯ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಕಷ್ಟದ ಸಮಯದಲ್ಲಿ ಹಣಕ್ಕೆ ಆರ್‌ಬಿಐ ಅನ್ನು ಆಶ್ರಯಿಸುತ್ತವೆ.

ಸಾಮಾನ್ಯವಾಗಿ ಕೇಂದ್ರ ಬ್ಯಾಂಕಿನ ಹಣಕಾಸಿನ ವ್ಯವಹಾರಗಳು ರೆಪೊ ಆಧಾರದಲ್ಲಿ ನಡೆಯುತ್ತವೆ. ಅಂದರೆ, ಆರ್‌ಬಿಐನಿಂದ ಹಣ ಪಡೆಯುವಾಗ ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿರುವ ಖಜಾನೆ ಹುಂಡಿ, ಬಾಂಡುಗಳನ್ನು ಕೇಂದ್ರ ಬ್ಯಾಂಕಿಗೆ ಮಾರಾಟ ಮಾಡಿರುತ್ತವೆ. ಕೆಲ ಸಮಯದ ನಂತರ ಹಣವನ್ನು ಮರುಪಾವತಿ ಮಾಡಿ, ತಾವು ಮಾರಿದ್ದ ಆಧಾರ ಪತ್ರಗಳನ್ನು ಮತ್ತೆ ಕೊಳ್ಳುವುದಾಗಿ ಒಪ್ಪಂದ ಮಾಡಿಕೊಂಡಿರುತ್ತವೆ. ಹೀಗೆ ಪಡೆದುಕೊಂಡ ಹಣಕ್ಕೆ ಬ್ಯಾಂಕುಗಳು ಬಡ್ಡಿಯನ್ನು ಕೊಡಬೇಕಾಗುತ್ತದೆ. ಆ ಬಡ್ಡಿಯ ದರವೇ ರೆಪೊ ದರ.

ಈ ಲೇಖನ ಓದಿದ್ದೀರಾ?: ಸುದ್ದಿ ಪ್ಲಸ್ | ಆರ್ಥಿಕ ಬೆಳವಣಿಗೆ ಬೇಕೋ, ಹಣದುಬ್ಬರದ ನಿಯಂತ್ರಣ ಬೇಕೋ?

ರೆಪೊ ದರ ಎಷ್ಟಿರಬೇಕು ಎಂಬುದನ್ನು ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯು ನಿರ್ಧರಿಸುತ್ತದೆ. ದೇಶದ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಈ ರೆಪೊ ದರವನ್ನು ನಿರ್ಧರಿಸಲಾಗುತ್ತದೆ. ಈ ತಿಂಗಳ ಸಮಿತಿಯ ಸಭೆಯಲ್ಲಿ ರೆಪೊ ದರವನ್ನು ಶೇಕಡ 0.50ರಷ್ಟು ಹೆಚ್ಚಿಸಲಾಗಿದೆ. ಈಗ ರೆಪೊ ದರ ಶೇಕಡ 4.90 ಆಗಿದೆ.

ಆರ್ಥಿಕತೆಯಲ್ಲಿ ಚಲಾವಣೆಯಲ್ಲಿರುವ ಹಣದ ಪ್ರಮಾಣಕ್ಕೂ ಮತ್ತು ಹಣದುಬ್ಬರಕ್ಕೂ ನೇರವಾದ ಸಂಬಂಧವಿದೆ ಅನ್ನುವುದು ಹಣಕಾಸು ನೀತಿಯ ಮುಖ್ಯ ನಂಬಿಕೆ. ಈ ಸಿದ್ಧಾಂತದ ಪ್ರಕಾರ, ಆರ್ಥಿಕತೆಯಲ್ಲಿ ಹಣದ ಪ್ರಮಾಣ ಅಥವಾ ದ್ರವ್ಯತೆ (Liquidity) ಹೆಚ್ಚಾದಾಗ ಹಣದುಬ್ಬರ ಹೆಚ್ಚುತ್ತದೆ. ಹಾಗಾಗಿ, ಹಣದುಬ್ಬರವನ್ನು ನಿಯಂತ್ರಿಸುವುದಕ್ಕೆ ದ್ರವ್ಯತೆಯ ಪ್ರಮಾಣವನ್ನು ಕಡಿಮೆ ಮಾಡಬೇಕು ಅಥವಾ ಕೊನೆಯ ಪಕ್ಷ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಅಂದರೆ ಉದ್ದಿಮೆದಾರರು ಹೆಚ್ಚೆಚ್ಚು ಬಂಡವಾಳ ಹೂಡುವುದು ತಪ್ಪಬೇಕು. ಹಾಗೆ ಆಗಬೇಕಾದರೆ, ಬಂಡವಾಳಿಗರಿಗೆ ಬಂಡವಾಳ ತುಟ್ಟಿಯಾಗಬೇಕು. ಅದಕ್ಕೆ ಒಂದು ಉಪಾಯವೆಂದರೆ, ಬಡ್ಡಿ ದರವನ್ನು ಹೆಚ್ಚಿಸುವುದು. ಆಗ ಉದ್ದಿಮೆದಾರರು ಬಂಡವಾಳ ಹೂಡುವುದಕ್ಕೆ ಹಿಂದೇಟು ಹಾಕುತ್ತಾರೆ. ಆ ಉದ್ದೇಶದಿಂದಲೇ ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿರುವುದು. ಆಗ ಬ್ಯಾಂಕಿನಿಂದ ಪಡೆಯುವ ಸಾಲದ ಮೇಲಿನ ಬಡ್ಡಿಯೂ ಹೆಚ್ಚುತ್ತದೆ. ಈ ಹೆಚ್ಚಳ ಸಾಕಾಗದಿದ್ದರೆ ರೆಪೊ ದರವನ್ನು ಮತ್ತಷ್ಟು ಹೆಚ್ಚಿಸಬೇಕಾಗುತ್ತದೆ. ಅಂತಿಮವಾಗಿ ಆರ್ಥಿಕತೆಯಲ್ಲಿ ಹಣದ ಪ್ರಮಾಣ ಏರುವುದು ನಿಲ್ಲುತ್ತದೆ. ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆ. ಒಮ್ಮೆ ಹಣದ ಪ್ರಮಾಣ ಹೆಚ್ಚುವುದು ನಿಂತರೆ ಹಣದುಬ್ಬರವೂ ನಿಯಂತ್ರಣಕ್ಕೆ ಬರುತ್ತದೆ. ಆದರೆ, ಇದರಿಂದ ಒಂದು ಸಮಸ್ಯೆ ಇದೆ. ಬಂಡವಾಳದ ಹೂಡಿಕೆ ಕಮ್ಮಿಯಾದರೆ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಹಾಗಾಗಿ, ಆರ್ಥಿಕ ಬೆಳವಣಿಗೆ ಕುಂಠಿತವಾಗದಂತೆ ಹಣದುಬ್ಬರವನ್ನು ನಿಯಂತ್ರಿಸುವುದು ನಿಜವಾಗಿ ಸವಾಲಿನ ಕೆಲಸ.

ಈ ಲೇಖನ ಓದಿದ್ದೀರಾ?: ಅರ್ಥ ಪಥ | ಪ್ರೀತಿ, ಸಹನೆ ನಮ್ಮ ಆರ್ಥಿಕತೆಯ ಬುನಾದಿ ಆಗದಿದ್ದರೆ ಮುಂದಿನ ಹಾದಿ ಕಠಿಣ

ಇದಕ್ಕೆ ವ್ಯತಿರಿಕ್ತವಾಗಿ, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಬೇಕಾದರೆ ಬಂಡವಾಳ ಹೂಡಿಕೆ ಹೆಚ್ಚಬೇಕು. ಅಂದರೆ, ಉದ್ದಿಮೆದಾರರಿಗೆ ಬಂಡವಾಳ ಅಗ್ಗವಾಗಿ ಸಿಗಬೇಕು. ಹಾಗಾಗಬೇಕು ಎಂದರೆ, ಬಡ್ಡಿದರವನ್ನು ಇಳಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ರೆಪೊ ದರವನ್ನು ಇಳಿಸಲಾಗುತ್ತದೆ. ಇತ್ತೀಚಿನವರೆಗೂ ಆರ್ಥಿಕ ಪ್ರಗತಿ ಆರ್‌ಬಿಐನ ಆದ್ಯತೆಯಾಗಿತ್ತು. ಹಾಗಾಗಿ, ರೆಪೊ ದರವನ್ನು ಇಳಿಸುತ್ತ ಬಂದಿತ್ತು. ಹಣದುಬ್ಬರದ ಲೆಕ್ಕಾಚಾರ ಹೆಚ್ಚೂಕಮ್ಮಿಯಾಗಿ ಅದು ವಿಪರೀತವಾಗಿದ್ದರಿಂದ ಆರ್‌ಬಿಐ ತನ್ನ ಆದ್ಯತೆಯನ್ನು ಹಣದುಬ್ಬರ ಎಂದು ಘೋಷಿಸಿಕೊಂಡು ರೆಪೊ ದರವನ್ನು ಏರಿಸುವುದಕ್ಕೆ ಪ್ರಾರಂಭಿಸಿದೆ.

ರಿವರ್ಸ್ ರೆಪೊ ದರ: ವಾಣಿಜ್ಯ ಬ್ಯಾಂಕುಗಳಲ್ಲಿ ಹೆಚ್ಚುವರಿ ಹಣ ಉಳಿದುಬಿಟ್ಟರೆ, ಬ್ಯಾಂಕುಗಳು ಅದನ್ನು ಕೇಂದ್ರ ಬ್ಯಾಂಕಿನಲ್ಲಿ ಠೇವಣಿ ಇಡುತ್ತವೆ. ಹಾಗೆ ಠೇವಣಿ ಇಟ್ಟ ಹಣಕ್ಕೆ ಕೇಂದ್ರ ಬ್ಯಾಂಕ್ ನೀಡುವ ಬಡ್ಡಿಯ ದರಕ್ಕೆ ರಿವರ್ಸ್ ರೆಪೊ ದರ ಅಂತ ಕರೆಯಲಾಗುತ್ತದೆ. ಸದ್ಯಕ್ಕೆ ಈ ಬಡ್ಡಿ ದರ 3.35 ಇದೆ. ಆರ್‌ಬಿಐ ಕೂಡ ಒಂದು ಬ್ಯಾಂಕ್. ಅದಕ್ಕೂ ಲಾಭ ಬೇಕು. ಅಂದರೆ, ತಾನು ಕೊಟ್ಟಿದ್ದಕ್ಕಿಂತ ತನಗೆ ಹೆಚ್ಚಿಗೆ ಸಿಗಬೇಕು. ಹಾಗಾಗಿ, ರೆಪೊ ದರ ಸಾಮಾನ್ಯವಾಗಿ ರಿವರ್ಸ್ ರೆಪೊ ದರಕ್ಕಿಂತ ಹೆಚ್ಚಿರುತ್ತದೆ.

ನಿಮಗೆ ಏನು ಅನ್ನಿಸ್ತು?
0 ವೋಟ್