ನಾವು ಭಾರತದ ಸಮಾಜವಾದಿ ಚಳವಳಿಯನ್ನು ಮರುಪರಿಶೀಲಿಸಬೇಕಾಗಿದೆ | ಯೋಗೇಂದ್ರ ಯಾದವ್‌

ಮುಲಾಯಂ ಸಿಂಗ್‌ ಯಾದವ್‌ ಕಾಂಗ್ರೆಸ್‌ನ ಕಡು ವಿರೋಧಿಯಾಗಿದ್ದರು

ಸಮಾಜವಾದವನ್ನು ಕಮ್ಯುನಿಸಂಗಿಂತ ಭಿನ್ನವೆಂದು ಗುರುತಿಸುವವರು ಕೂಡ ಭಾರತೀಯ ಸಮಾಜವಾದಿ ಚಳವಳಿಯ ವಿಶಿಷ್ಟ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಪ್ರಪಂಚದ ಪ್ರಜಾಸತ್ತಾತ್ಮಕ ಸಮಾಜವಾದಿಗಳಂತೆಯೇ ಭಾರತೀಯ ಸಮಾಜವಾದಿಗಳು ಕೂಡ ಬಂಡವಾಳಶಾಹಿ ಮತ್ತು ಕಮ್ಯುನಿಸ್ಟ್ ಸರ್ವಾಧಿಕಾರ ಎರಡನ್ನೂ ವಿರೋಧಿಸಿದರು

ಮುಲಾಯಂ ಸಿಂಗ್ ಯಾದವ್ ಅವರ ನಿಧನವು, ನಮ್ಮ ಕಾಲದಲ್ಲಿ ಭಾರತೀಯ ಸಮಾಜವಾದಿ ಸಂಪ್ರದಾಯದ ಪ್ರಸ್ತುತತೆ ಏನು? ಎಂಬ ಆಳವಾದ ಪ್ರಶ್ನೆಯೊಂದರ ಕಡೆ ನಮ್ಮ ಗಮನ ಸೆಳೆಯಬೇಕಿತ್ತು .

Eedina App

ಕಾಕತಾಳೀಯ ಎಂಬಂತೆ ಮುಲಾಯಂ ಅವರ ಶವ ಸಂಸ್ಕಾರವು ಅಕ್ಟೋಬರ್ 11 ರಂದು ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್‌ರ 120ನೇ ಜಯಂತಿ ಮತ್ತು ಮುಲಾಯಂ ಅವರ ರಾಜಕೀಯ ಗುರು ರಾಮಮನೋಹರ ಲೋಹಿಯಾರ 55ನೇ ಪುಣ್ಯತಿಥಿಯ ಒಂದು ದಿನ ಮೊದಲು ಆಯಿತು.

ನೇತಾಜಿಯವರ (ಮುಲಾಯಂರಿಗೆ ಅವರ ಬೆಂಬಲಿಗರು ಕೊಟ್ಟ ಹೆಸರು) ರಾಜಕೀಯ ಜೀವನದಲ್ಲಿ ಯಾವುದಾದರೂ ಒಂದು ವಿಷಯ ಸ್ಥಿರವಾಗಿದ್ದಲ್ಲಿ, ಅದು ಸಮಾಜವಾದಿ ಸಂಪ್ರದಾಯದೊಂದಿಗೆ ಅವರ ಸ್ವಯಂ ಗುರುತಿಸುವಿಕೆ ಎನ್ನಬಹುದು. ತನ್ನ ಪಕ್ಷದ 'ಸಮಾಜವಾದಿ' ಎಂಬ ಹೆಸರಿನಿಂದ ಹಿಡಿದು, ಸಮಾಜವಾದಿ ಚಳವಳಿಯ ಕೆಂಪು ಟೋಪಿಯನ್ನು ಬಳಸಬೇಕೆಂಬ ಅವರ ಒತ್ತಾಯದವರೆಗೆ, ಇಂಗ್ಲಿಷ್ ಪ್ರಾಬಲ್ಯದ ವಿರುದ್ಧ ಅವರ ನಿಲುವು ಮತ್ತು ರಾಮಮನೋಹರ ಲೋಹಿಯಾ ಅವರ ಆವಾಹನೆಯವರೆಗೆ, ಅವರು ತಮ್ಮ ಜೀವನಪೂರ್ತಿ ಸಮಾಜವಾದಿ ಆಗಿ ಉಳಿದರು. ನಿಜ, ಅವರ ಅನೇಕ ಹಳೆಯ ಸಹಚರರು ‘ಅವರ ಸಮಾಜವಾದಕ್ಕೆ ಕೇವಲ ರೂಪವಿತ್ತು, ಅದರಲ್ಲಿ ಸಾರ ಸ್ವಲ್ಪವೇ ಇತ್ತು’ ಎಂದು ಹೇಳಬಹುದು. ಆದರೆ ಈ ಕಾರಣಕ್ಕೇ ನಾವು ಭಾರತೀಯ ಸಮಾಜವಾದಿ ಚಳವಳಿಯ ಪರಂಪರೆಯನ್ನು ಚರ್ಚಿಸಬೇಕಿದೆ. 

AV Eye Hospital ad

ಈ ರಾಜಕೀಯ ಸಂಪ್ರದಾಯವು ಇಂದಿನ ಯುವ ಭಾರತೀಯರ ಜ್ಞಾನ -ಕಲ್ಪನೆಯ ಪರಿಧಿಯಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ. ಅವರು ಬಹುತೇಕ ‘ಹಿಂದುತ್ವ’ ವನ್ನು ಕಾಣುತ್ತಾರೆ /ಎದುರಿಸುತ್ತಾರೆ. ಅಥವಾ ಅವರು ಉದಾರವಾದಿಗಳು, ಎಡಪಂಥೀಯರು, ನಕ್ಸಲೀಯರು, ಸ್ತ್ರೀವಾದಿಗಳು, ಗಾಂಧಿವಾದಿಗಳು ಮತ್ತು ಪರಿಸರವಾದಿಗಳ ಬಗ್ಗೆ ಕೇಳುತ್ತಾರೆ. ಆದರೆ ಸಮಾಜವಾದಿಗಳ ಬಗ್ಗೆ ಅವರನ್ನು ಕೇಳಿ, ನಿಮಗೇನೂ ಉತ್ತರ ಸಿಗುವುದಿಲ್ಲ. ಅಥವಾ ಅವರು ಅದನ್ನು ಕಮ್ಯುನಿಸಂನ ಸಮಾನಾರ್ಥಕ ಎಂದು ಭಾವಿಸಬಹುದು. ಶಿಕ್ಷಿತ ಭಾರತೀಯರು ಸಮಾಜವಾದವನ್ನು, ರಾಮಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣ, ಆಚಾರ್ಯ ನರೇಂದ್ರ ದೇವ, ಯೂಸುಫ್ ಮೆಹೆರಲ್ಲಿ, ಮಧು ಲಿಮಾಯೆ, ಜಾರ್ಜ್ ಫರ್ನಾಂಡೀಸ್ ಮತ್ತು ಕಿಶನ್ ಪಟ್ನಾಯಕ್ ಮುಂತಾದ ಧೀಮಂತ ವ್ಯಕ್ತಿಗಳೊಂದಿಗೆ ಸಂಬಂಧಿಸಿದ ಸ್ವದೇಶಿ ರಾಜಕೀಯ ಸಂಪ್ರದಾಯದೊಂದಿಗಿಂತ, ಬರ್ನಿ ಸ್ಯಾಂಡರ್ಸ್‌ರೊಂದಿಗೆ ಸಂಯೋಜಿಸುವ ಸಾಧ್ಯತೆ ಹೆಚ್ಚು.

ಜಾರ್ಜ್ ಫರ್ನಾಂಡೀಸ್
ಜಾರ್ಜ್ ಫರ್ನಾಂಡೀಸ್

ಸಮಾಜವಾದವನ್ನು ಕಮ್ಯುನಿಸಂಗಿಂತ ಭಿನ್ನವೆಂದು ಗುರುತಿಸುವವರು ಕೂಡ ಭಾರತೀಯ ಸಮಾಜವಾದಿ ಚಳವಳಿಯ ವಿಶಿಷ್ಟ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಪ್ರಪಂಚದಾದ್ಯಂತದ ಪ್ರಜಾಸತ್ತಾತ್ಮಕ ಸಮಾಜವಾದಿಗಳಂತೆಯೇ (democratic socialists), ಭಾರತೀಯ ಸಮಾಜವಾದಿಗಳು ಕೂಡ ಬಂಡವಾಳಶಾಹಿ ಅಸಮಾನತೆ ಮತ್ತು ಕಮ್ಯುನಿಸ್ಟ್ ಸರ್ವಾಧಿಕಾರ ಎರಡನ್ನೂ ವಿರೋಧಿಸಿದರು. ಆದರೆ ಯುರೋಪ್ ಮತ್ತು ಜಗತ್ತಿನ ಉಳಿದ ಪ್ರಜಾಸತ್ತಾತ್ಮಕ ಸಮಾಜವಾದಿ ಪಕ್ಷಗಳಿಗಿಂತ ಭಿನ್ನವಾಗಿ, ಭಾರತೀಯ ಸಮಾಜವಾದವು ಕಮ್ಯುನಿಸ್ಟ್ /ಎಡಪಂಥದ್ದೇ ಕಡಿಮೆ ತೀವ್ರತೆಯ ಚಳವಳಿಯಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಿಕೆ ಮತ್ತು ಗಾಂಧಿಯೊಂದಿಗಿನ ಅವರ ಮುಖಾಮುಖಿ ಅವರ ಆಲೋಚನೆಗಳು ಮತ್ತು ರಾಜಕೀಯವನ್ನು ಬದಲಾಯಿಸಿತು.

ಹೀಗೆ ಭಾರತೀಯ ಸಮಾಜವಾದವು ಕೇವಲ ಪ್ರಜಾಸತ್ತಾತ್ಮಕ ಸಮಾಜವಾದದ ಭಾರತೀಯ ಆವೃತ್ತಿಯಲ್ಲ. ಇದು ಜಾತಿ ಮತ್ತು ಲಿಂಗ ಆಧಾರಿತ ನ್ಯಾಯದೊಂದಿಗೆ ಆರ್ಥಿಕ ಸಮಾನತೆ, ರಾಜಕೀಯ ಮತ್ತು ಆರ್ಥಿಕ ವಿಕೇಂದ್ರೀಕರಣ, ಸಾಂಸ್ಕೃತಿಕ ವಸಾಹತುಶಾಹಿ ಮತ್ತು ಅಹಿಂಸಾತ್ಮಕ ಪ್ರತಿರೋಧದ ಅನ್ವೇಷಣೆಯನ್ನು ಒಳಗೊಂಡ ಒಂದು ವಿಭಿನ್ನ ರಾಜಕೀಯ ಸಿದ್ಧಾಂತವಾಗಿದೆ. ಭಾರತೀಯ ಸಮಾಜವಾದವು ಸ್ಥಳೀಯ ಸಮಾಜವಾದವೂ ಆಗಿತ್ತು.

ಗತಕಾಲದ ಮರೆತುಹೋದ ಇತಿಹಾಸವನ್ನು ನಾವು ಏಕೆ ನೆನಪಿಸಿಕೊಳ್ಳಬೇಕು? ಏಕೆಂದರೆ ಮುಖ್ಯವಾಗಿ ಈ ರಾಜಕೀಯವಾಗಿ ದುರ್ಬಲವಾದ ಮತ್ತು ಛಿದ್ರಗೊಂಡ ಚಳವಳಿಯು ಇಂದಿನ ಪ್ರತಿರೋಧದ ರಾಜಕೀಯಕ್ಕೆ ಸಹಾಯ ಮಾಡಬಲ್ಲ ವಿಶಿಷ್ಟ ಸ್ಥಾನದಲ್ಲಿದೆ. ಭಾರತೀಯ ಸಮಾಜವಾದಿ ಸಂಪ್ರದಾಯವು ನಮ್ಮ ಗಣರಾಜ್ಯ ಎದುರಿಸುತ್ತಿರುವ ರಾಜಕೀಯ ಸವಾಲಿಗೆ ಪರಿಹಾರವಾಗಬಲ್ಲ, ನಿರ್ಣಾಯಕವಾದ ಮೂರು ಸಂಪನ್ಮೂಲಗಳನ್ನು ನೀಡುತ್ತದೆ. ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ನಡೆಯುತ್ತಿರುವ ಆಕ್ರಮಣವನ್ನು ವಿರೋಧಿಸಲು ಬಯಸುವವರು ಈ ಮೂರೂ ಪಾಠಗಳನ್ನ ಆಧರಿಸಿ ತಾವು ಅನುಸರಿಸಬೇಕಾದ ಮಾರ್ಗವನ್ನು ತಿದ್ದುಪಡಿ ಅಥವಾ ಮೌಲ್ಯಮಾಪನಕ್ಕೊಳಪಡಿಸಬಹುದು.

ಮೊದಲನೆಯದಾಗಿ, ಭಾರತೀಯ ಸಮಾಜವಾದಿಗಳು ದೃಢವಾದ ರಾಷ್ಟ್ರೀಯವಾದಿಗಳು. ವಾಸ್ತವವಾಗಿ ಇದೇ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದೊಂದಿಗೆ ಅವರಿಗಿರುವ ಮೂಲಭೂತ ವ್ಯತ್ಯಾಸವಾಗಿತ್ತು. ಕಮ್ಯುನಿಸ್ಟರು ಭಾರತೀಯ ಸ್ವಾತಂತ್ರ್ಯ ಹೋರಾಟದೊಂದಿಗೆ ನಿರಂತರ ಬೆಂಬಲದ ಸಂಬಂಧವನ್ನು ಹೊಂದಿರದಿದ್ದರೂ, ಸಮಾಜವಾದಿಗಳು ತಮ್ಮನ್ನು ತಾವು ಕಾಂಗ್ರೆಸ್ ನೇತೃತ್ವದ ರಾಷ್ಟ್ರೀಯ ಚಳವಳಿಯಲ್ಲಿ ದೃಢವಾಗಿ ತೊಡಗಿಸಿಕೊಂಡರು. ಅವರದು ಸಂಕುಚಿತ ಪ್ರಾಂತೀಯ ರಾಷ್ಟ್ರೀಯತೆಯಾಗಿರಲಿಲ್ಲ. ಸಮಾಜವಾದಿಗಳು  ಪ್ರಪಂಚದಾದ್ಯಂತದ ವಸಾಹತುಶಾಹಿ ವಿರೋಧಿ ಹೋರಾಟಗಳೊಂದಿಗೆ ಸಹಮತ ಹೊಂದಿದ ಧನಾತ್ಮಕ ಮತ್ತು ಮುನ್ನೋಟದ ರಾಷ್ಟ್ರೀಯತೆಯ ಪ್ರಮುಖ ಧ್ವನಿಯಾಗಿದ್ದರು.

ಸಮಾಜವಾದಿ ನಾಯಕ ಯೂಸುಫ್‌ ಮೆಹರೆಲ್ಲಿ
ಸಮಾಜವಾದಿ ನಾಯಕ ಯೂಸುಫ್‌ ಮೆಹೆರಲ್ಲಿ

ಸ್ವಾತಂತ್ರ್ಯದ ನಂತರ, ಅವರ ರಾಷ್ಟ್ರೀಯತೆಯು ಮುಖ್ಯವಾಗಿ ರಾಷ್ಟ್ರ ನಿರ್ಮಾಣ, ಕೋಮು ಸೌಹಾರ್ದ ಮತ್ತು ಸ್ವತಂತ್ರ ವಿದೇಶಾಂಗ ನೀತಿಯ ಮೇಲೆ ಗಮನ ಹರಿಸಿತು. ಆದರೆ ಅವರು 1962ರ ಸೋಲಿಗೆ ಕಾರಣವಾದ ನೆಹರೂ ಅವರ ಚೀನಾ ನೀತಿಯನ್ನು ಟೀಕಿಸುವುದರಿಂದ ದೂರ ಸರಿಯಲಿಲ್ಲ. ಇಂದು, ಬಿಜೆಪಿ-ಆರ್‌ಎಸ್‌ಎಸ್  ದೇಶದ ಒಳಗೆ ಮತ್ತು ಹೊರಗಿನ ಕಲ್ಪಿತ ಶತ್ರುಗಳ ವಿರುದ್ಧದ ಅತ್ಯುಗ್ರ ದೇಶಭಕ್ತಿ (chauvinist) ಮತ್ತು ಕೋಮುವಾದಿ ರಾಜಕಾರಣವನ್ನು ರಕ್ಷಿಸಲು ರಾಷ್ಟ್ರೀಯತೆಯನ್ನು ಪ್ರಚೋದಿಸುತ್ತಿರುವಾಗ, ಉದಾರವಾದಿಗಳು ಮತ್ತು ಎಡಪಂಥೀಯರು ಅನಿರೀಕ್ಷಿತ ಗೊಂದಲಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಬಿಜೆಪಿಯ ಆಕ್ರಮಣಕಾರಿ ರಾಷ್ಟ್ರೀಯತೆಯನ್ನು ನೀವು ಅಮೂರ್ತ(ಕಾಲ್ಪನಿಕ) ಅಂತರಾಷ್ಟ್ರೀಯತೆಯ ಸಹಾಯದಿಂದ ಎದುರಿಸಲು ಸಾಧ್ಯವಿಲ್ಲ; ಭಾರತೀಯ ಸಮಾಜವಾದಿಗಳ ಧನಾತ್ಮಕ ರಾಷ್ಟ್ರೀಯತೆಯು ಇಂದು ಹರಡುತ್ತಿರುವ ನಕಲಿ, ಮತಾಂಧ ರಾಷ್ಟ್ರೀಯತೆಗೆ ಪರಿಣಾಮಕಾರಿ ಔಷಧಿಯಾಗಿದೆ.

ಸಾಂಸ್ಕೃತಿಕ ಸ್ವಾಭಿಮಾನದ ರಾಜಕಾರಣದ ಪ್ರಾತಿನಿಧ್ಯವೂ ಇದಕ್ಕೆ ಸಂಬಂಧಿಸಿದೆ. ಭಾರತೀಯ ನಾಗರಿಕತೆ (ಹಿಂದೂ ಎಂದು ಓದಿಕೊಳ್ಳಿ) ಮತ್ತು ಸಂಸ್ಕೃತಿಯ ಬಗ್ಗೆ ಬಿಜೆಪಿ ತನ್ನ ಹೆಮ್ಮೆಯನ್ನು ಪ್ರದರ್ಶಿಸುತ್ತದೆ. ವಸಾಹತುಶಾಹಿ ಭೂತಕಾಲವನ್ನು ಅಳಿಸುವ ಸಾಂಕೇತಿಕ ಕಾರ್ಯಗಳ ಮೂಲಕ ಪ್ರತಿಯೊಬ್ಬ ಭಾರತೀಯನ ಆತ್ಮಗೌರವವನ್ನು ಮೆಚ್ಚಿಸುವ ಪ್ರಯತ್ನ ಮಾಡುತ್ತದೆ. ಈ ಪ್ರಯತ್ನಗಳಲ್ಲಿ ಮುಸ್ಲಿಂ ಆಡಳಿತಗಾರರನ್ನು ವಸಾಹತುಶಾಹಿ ಗತಕಾಲದಲ್ಲಿ ಸೇರಿಸಲು ಗಡಿಗಳು ರಹಸ್ಯವಾಗಿ ವಿಸ್ತರಿಸಲ್ಪಡುತ್ತವೆ. ಪ್ರಾಚೀನ ಭಾರತೀಯ ನಾಗರಿಕತೆಯ ವೈಭವವನ್ನು ಸ್ಮರಿಸಲು ನೈಜ ಮತ್ತು ಕಾಲ್ಪನಿಕ ಕಾರಣಗಳನ್ನು ಕೊಡಲಾಗುತ್ತದೆ.  

ಬಿಜೆಪಿಯ ಟೀಕಾಕಾರರು ಈ ಸಾಂಕೇತಿಕತೆಯು ಹೆಚ್ಚಾಗಿ, ನೈಜ್ಯತೆಯಿಲ್ಲದ್ದು ಮತ್ತು ಅವರು ಹೇಳುವ ಇತಿಹಾಸವು ನಕಲಿ/ಕಪೋಲ ಕಲ್ಪಿತ ಹಾಗೂ ಇದು ನುಡಿದಂತೆ ನಡೆಯದ ಖಾಲಿ ಪ್ರದರ್ಶನ ಎಂಬುದನ್ನು ಎತ್ತಿ ತೋರಿಸುತ್ತಾರೆ.

ಆದರೆ ಅವರು ಸಾಂಸ್ಕೃತಿಕ ಸ್ವಾಭಿಮಾನಕ್ಕೆ ಪರ್ಯಾಯ ಕಾರಣಗಳನ್ನು ನೀಡುವುದಿಲ್ಲ. ಅವರ ಇಂಗ್ಲಿಷ್‌ನ ಸಮರ್ಥನೆಯು, ವಸಾಹತುಶಾಹಿ ಸಮರ್ಥನೆಯಂತೆ ಅಲ್ಲದಿದ್ದರೂ ಪ್ರತಿಷ್ಠೆಯ ಪ್ರದರ್ಶನ (Elitist) ಎಂಬಂತೆ ಕೇಳಿಬರುತ್ತದೆ. ಭಾರತೀಯ ಸಮಾಜವಾದಿಗಳು ನಮ್ಮ ನಾಗರಿಕತೆಯ ಪರಂಪರೆಯನ್ನು ನಮ್ಮದೇ ಆದ ಪರಿಭಾಷೆಯಲ್ಲಿ ದೃಢಪಡಿಸುವ ವಿಶಿಷ್ಟವಾದ ಸ್ಥಳೀಯ ಪ್ರತಿಕ್ರಿಯೆಯನ್ನು ನೀಡುತ್ತಾರೆ. ಹಿಂದಿಯ ಪ್ರಾಬಲ್ಯವನ್ನು ಅನುಮೋದಿಸದೆ ಇಂಗ್ಲಿಷ್ ಪ್ರಾಬಲ್ಯದ ಅವರ ವಿಮರ್ಶೆಯು, ಪರ್ಯಾಯ ಸಾಂಸ್ಕೃತಿಕ ರಾಜಕೀಯವನ್ನು ನೀಡುತ್ತದೆ. ಅವರ ಧಾರ್ಮಿಕತೆಯ ಬಗೆಗಿನ ಸಹಾನುಭೂತಿಯು ನಾಸ್ತಿಕನಿಗಿಂತ ಹೆಚ್ಚಾಗಿ, ಒಬ್ಬ ಸಾಮಾನ್ಯ ನಂಬಿಕೆಯುಳ್ಳ ಭಾರತೀಯನೊಂದಿಗೆ ಸಂವಾದದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಮೂರನೆಯ ಅಂಶವೆಂದರೆ ಸಾಮಾಜಿಕ ನ್ಯಾಯದ ಸಮಾಜವಾದಿ ರಾಜಕಾರಣ, ವಿಶೇಷವಾಗಿ ಜಾತಿ ಆಧಾರಿತ ಅಸಮಾನತೆಗಳಿಗೆ ಅವರ ವಿರೋಧ. ಜೊತೆಗೆ ಅಂಬೇಡ್ಕರ್‌ರಂತೆಯೆ, ಭಾರತೀಯ ಸಮಾಜದಲ್ಲಿ ಅಸಮಾನತೆಯ ಪ್ರಮುಖ ವಾಹಕವಾಗಿ ಜಾತಿ ಪದ್ಧತಿಯನ್ನು ಗುರುತಿಸಿದವರಲ್ಲಿ ಭಾರತೀಯ ಸಮಾಜವಾದಿಗಳು ಮೊದಲಿಗರು.

ಅವರು ಹಿಂದುಳಿದ ವರ್ಗದವರಿಗಾಗಿ ಪರಿಣಾಮಕಾರಿ ಕ್ರಮಕ್ಕಾಗಿ (Affirmative Action)ಬೇಡಿಕೆಯನ್ನು ಎತ್ತಿದರು (ಇದು SC, ST, OBC, ಅಲ್ಪಸಂಖ್ಯಾತರು ಮತ್ತು ಮಹಿಳೆಯರನ್ನು ಒಳಗೊಂಡಿದೆ). ಸಮಾಜವಾದಿ ಪಕ್ಷಗಳು ಮಂಡಲ್ ಆಯೋಗದ ಶಿಫಾರಸುಗಳ ಅನುಷ್ಠಾನದ ಹಿಂದಿನ ಶಕ್ತಿಯಾಗಿದ್ದವು. ಇಂದು ಆ ಪರಂಪರೆಯು ಅತ್ಯಂತ ಮಹತ್ವದ್ದಾಗಿದೆ ಏಕೆಂದರೆ ದಲಿತ-ಬಹುಜನ ಏಕತೆಯು ಸದ್ಯದ ಉಗ್ರ ಆಕ್ರಮಣದ ವಿರುದ್ಧದ ಭದ್ರಕೋಟೆಯಾಗಬಹುದು. ಸಮಾಜವಾದಿ ಚಳವಳಿಯು, ಸಮಾಜದ ಎಲ್ಲಾ ಹಿಂದುಳಿದ ವಲಯಗಳನ್ನೊಳಗೊಂಡ ವ್ಯಾಪಕ ಏಕತೆಗೆ ಸೈದ್ಧಾಂತಿಕ ಮತ್ತು ರಾಜಕೀಯ ಆಧಾರವನ್ನು ಒದಗಿಸುತ್ತದೆ.

ಸಮಾಜವಾದಿ ಚಳವಳಿಯ ಪರಂಪರೆಯು ನಿರ್ಣಾಯಕ ಪಾತ್ರವನ್ನು ವಹಿಸಬಹುದಾದರೂ, ಈ ಚಳವಳಿಯ ವಾರಸುದಾರರಾದ ಸಮಾಜವಾದಿಗಳು ಈ ಐತಿಹಾಸಿಕ ಪಾತ್ರವನ್ನು ವಹಿಸುತ್ತಾರೆಯೇ?

ಇದನ್ನು ಓದಿದ್ದೀರಾ? ಭಾರತ ಐಕ್ಯತಾ ಯಾತ್ರೆ ಕೇವಲ ರಾಜಕೀಯ ʼಪ್ರಹಸನʼವಲ್ಲ ಎನ್ನಲು ಕಾರಣವಿವಿದೆ : ಯೋಗೇಂದ್ರ ಯಾದವ್

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಮಾಜವಾದಿಗಳು ಎಲ್ಲಾ ಪ್ರಕಾರಗಳ ದಬ್ಬಾಳಿಕೆ ಮತ್ತು ಸರ್ವಾಧಿಕಾರವನ್ನು ವಿರೋಧಿಸಿದ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಸಮಾಜವಾದಿ ಚಳವಳಿಯ ವೈಭವದ ದಿನಗಳಲ್ಲಿ ಕಾಂಗ್ರೆಸ್ ಪ್ರತಿನಿಧಿಸಿದ ಅವ್ಯವಸ್ಥೆಯ ಆಳ್ವಿಕೆಯನ್ನು ಅವರು ವಿರೋಧಿಸಿದರು. ಆದ್ದರಿಂದ ಅವರ ಅವ್ಯವಸ್ಥೆಯೆಡೆಗಿನ ವಿರೋಧವು ಕಾಂಗ್ರೆಸ್ ವಿರೋಧಿ ರೂಪವನ್ನು ಪಡೆದುಕೊಂಡಿತು. ಅವರ ಪೀಳಿಗೆಯ ಹೆಚ್ಚಿನ ಸಮಾಜವಾದಿಗಳಂತೆ ಮುಲಾಯಂ ಸಿಂಗ್ ಯಾದವ್ ಅವರು ಕಾಂಗ್ರೆಸ್ಸಿನ ಕಟು ಟೀಕಾಕಾರರೆಂದೂ ಹೆಸರಾಗಿದ್ದರು. ಸಮಾಜವಾದಿ ಚಳವಳಿಯ ನೇತಾರರು ಈ ನಿಲುವನ್ನು ಪರಿಷ್ಕರಿಸಬೇಕಾಗಿದೆ, ಏಕೆಂದರೆ ಇಂದು ಬಿಜೆಪಿಯು ಸಾಂವಿಧಾನಿಕ ಪ್ರಜಾಪ್ರಭುತ್ವ ಮತ್ತು ಭಾರತದ ಏಕತೆಯ ಅಡಿಪಾಯವನ್ನು ಹತ್ತಿಕ್ಕಲು ಪ್ರಯತ್ನಿಸುವ ವ್ಯವಸ್ಥೆಯ ಮುಖವಾಗಿದೆ. ಭಾರತೀಯ ಸಮಾಜವಾದವು ಈ ಹೊಸ ಭಾರತದಲ್ಲಿ ತನ್ನ ಪಾತ್ರವನ್ನು ನಿರ್ವಹಿಸಲು ಹೊಸ ಜನ್ಮವನ್ನು ತಾಳಬೇಕಿದೆ.

ಅನುವಾದ | ರಂಜಿತಾ ಜಿ ಹೆಚ್‌
ನಿಮಗೆ ಏನು ಅನ್ನಿಸ್ತು?
1 ವೋಟ್
eedina app