ಉಚಿತ ಕೊಡುಗೆಗಳನ್ನು ಕೊಟ್ಟು ಚುನಾವಣೆ ಗೆಲ್ಲುವ ಅನಿವಾರ್ಯತೆ ಏಕೆ ಸೃಷ್ಟಿ ಆಗಿದೆ?

Free gifts

ಜನಪ್ರತಿನಿಧಿಗಳು, ಅಧಿಕಾರಿಗಳು, ಉದ್ದಿಮೆಗಳು ಮತ್ತು ಮಧ್ಯಮ ವರ್ಗಗಳು ಪಡೆಯುವ ಉಚಿತ ಸವಲತ್ತುಗಳಿಗೆ ಹೋಲಿಸಿದೆ ಬಡವರು ಪಡೆಯುವ ಉಚಿತ ಸವಲತ್ತುಗಳು ಏನೇನೂ ಅಲ್ಲ. ನಮ್ಮ ಪ್ರತಿನಿಧಿಗಳು ಸಂಬಳ, ಪಿಂಚಣಿಗಳ ಜೊತೆ ತಿಂಗಳಿಗೆ ರೂ.45000 ಕಚೇರಿ ಭತ್ಯೆ ರೂ.45000 ಕ್ಷೇತ್ರಭತ್ಯೆ  ಅಧಿವೇಶನ ನಡೆಯುವಾಗ ರೂ.2000 ದಿನಭತ್ಯೆ ಪಡೆಯುತ್ತಾರೆ!

ಜನ ಸಾಮಾನ್ಯರಿಗೆ ಅತೀ ಕಡಿಮೆ ಸವಲತ್ತು ನೀಡಿ ಚುನಾಣೆ ಗೆಲ್ಲ ಬಯಸುವ ಪಕ್ಷ (ಬಿಜೆಪಿ) ಮತ್ತು ಇಂತಹ ಸವಲತ್ತುಗಳ ಬಲದಲ್ಲೇ ಚುನಾವಣೆ ಗೆಲ್ಲುವ ಪಕ್ಷಗಳ (ಎಎಪಿ. ಡಿಎಮ್‍ಕೆ) ನಡುವೆ ಉಚಿತ ಕೊಡುಗೆ ಕುರಿತು ಪರ ವಿರೋಧ ವಾಗ್ವಾದ ನಡೆದಿದೆ. ಈ ಲೇಖನದಲ್ಲಿ ಉಚಿತ ಕೊಡುಗೆ ಎಂದರೇನು? ಕಲ್ಯಾಣಯೋಗ್ಯ ಮತ್ತು ಕಲ್ಯಾಣಯೋಗ್ಯವಲ್ಲದ ಉಚಿತ ಕೊಡುಗೆಗಳೆನ್ನುವ ವಿಂಗಡನೆ ಸಾಧ್ಯವೇ? ಉಚಿತ ಕೊಡುಗೆಗಳನ್ನು ನೀಡುವುದರಿಂದಲೇ ರಾಜ್ಯ ಸರಕಾರಗಳ ಹಣಕಾಸು ಸ್ಥಿತಿ ಬಿಗಡಾಯಿಸಿದೆಯೇ? ಬಡವರು ಮಾತ್ರ ಉಚಿತ ಕೊಡುಗೆಯನ್ನು ಅನುಭವಿಸುವುದೇ? ಶ್ರೀಮಂತರು ಉಚಿತ ಕೊಡುಗೆಗಳನ್ನು ಅನುಭವಿಸುವುದಿಲ್ಲವೇ? ಇತ್ಯಾದಿ ಪ್ರಶ್ನೆಗಳ ಸುತ್ತಾ ಈ ಲೇಖನದ ಚರ್ಚಿ ಇದೆ. ಚರ್ಚೆ ಆರಂಭಿಸುವ ಮುನ್ನ ಉಚಿತ ಕೊಡುಗೆಗಳನ್ನು ಕೊಟ್ಟು ಚುನಾವಣೆ ಗೆಲ್ಲುವ ಅನಿವಾರ್ಯತೆ ಏಕೆ ಸೃಷ್ಟಿ ಆಗಿದೆ? ಉಚಿತ ಕೊಡುಗೆ ಮತ್ತು ಅಭಿವೃದ್ಧಿಗೆ ಸಂಬಂಧವೇನು? ಎನ್ನುವ ಎರಡು ವಿಷಯಗಳ ಸ್ಪಷ್ಟವಾದರೆ ಈ ಚರ್ಚೆಯನ್ನು ಅರ್ಥಮಾಡಿಕೊಳ್ಳುವುದು ಸುಲಭ.

ಸಾಮರ್ಥ್ಯದ ಪ್ರಶ್ನೆ: ಇಂದಿನ ಸರಕಾರಗಳು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಮಾಡುವ ಕೋಟಿಗಟ್ಟಲೆ ವಿನಿಯೋಜನೆ ಬಗ್ಗೆ ಪ್ರಚಾರ ಮಾಡುತ್ತವೆ. ಆದರೆ ಇವರು ಕೋಟಿಗಟ್ಟಲೆ ಸುರಿದು ನಡೆಸುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಭವಿಸಲು ಅಥವಾ ಜೀರ್ಣಿಸಿಕೊಳ್ಳಲು ಜನರಿಗೆ ಶಕ್ತಿ ಇದೆಯೇ ಎನ್ನುವುದನ್ನು ಚರ್ಚಿಸುವುದಿಲ್ಲ. ಇಂದಿನ ಅಭಿವೃದ್ಧಿಯನ್ನು ಜೀರ್ಣಿಸಿಕೊಳ್ಳಲು ಭೂಮಿ ಅಥವಾ ಬಂಡವಾಳ ಅಥವಾ ಶಿಕ್ಷಣ ಆರೋಗ್ಯಗಳು ಬೇಕು. ಇವುಗಳಲ್ಲಿ ಯಾವುದಾದರೂ ಒಂದು ಶಕ್ತಿ ಇದ್ದರೆ ಜನರು ತಮ್ಮ ಊಟ, ವಸತಿ, ಕುಡಿಯುವ ನೀರು, ಶೌಚಾಲಯ ಇತ್ಯಾದಿ ಮೂಲಸೌಕರ್ಯಗಳನ್ನು ದುಡಿದು ಗಳಿಸುತ್ತಾರೆ. ಆದರೆ ಇಂದು ಕಾರುಬಾರು ಮಾಡುವ ರಾಜಕೀಯ ಪಕ್ಷಗಳಲ್ಲಿ ಭೂಮಿ ಅಥವಾ ಬಂಡವಾಳ ಕೊಡುವ ಅಥವಾ ಗುಣಮಟ್ಟದ ಶಿಕ್ಷಣ ಆರೋಗ್ಯ ಕೊಟ್ಟು ಜನರ ಸಾಮರ್ಥ್ಯ ವೃದ್ಧಿಸುವ ಕಾರ್ಯಕ್ರಮಗಳಿಲ್ಲ. ಅದರ ಬದಲು ಅಕ್ಕಿ ಕೊಡುವ, ಬಿಸಿಯೂಟ ಕೊಡುವ, ಟಿವಿ ಕೊಡುವ, ಗ್ಯಾಸ್ ಕೊಡುವ, ವಿದ್ಯುತ್ ಕೊಡುವ, ಲ್ಯಾಪ್ ಕೊಡುವ ಕಾರ್ಯಕ್ರಮಗಳಿವೆ.

ಇಂದು ರಾಜಕೀಯ ಸ್ಥಿತಿ ಇನ್ನೂ ಬಿಗಡಾಯಿಸಿದೆ. ಇಂತಹ ಕಾರ್ಯಕ್ರಮಗಳನ್ನು ಕೊಟ್ಟು ಮತ ಕೇಳುವ ಪಕ್ಷಗಳು ಮತ್ತು ಕೊಡದೆ ಮತ ಕೇಳುವ ಪಕ್ಷಗಳ ನಡುವೆ ಪೈಪೋಟಿ ನಡೆದಿದೆ. ಹಿಂದುತ್ವದ ಬಲದಲ್ಲಿ ಚುನಾವಣೆ ಗೆಲ್ಲುವ ಬಿಜೆಪಿ ಪಕ್ಷದ ದೃಷ್ಟಿಯಿಂದ ಮೇಲಿನ ಸವಲತ್ತುಗಳನ್ನು ಕೊಡುವುದು ವೆಸ್ಟ್‌ಫುಲ್ ಖರ್ಚುಗಳು, ಇವುಗಳು ನಮ್ಮ ಜಿಡಿಪಿಯನ್ನು ವೃದ್ಧಿಸುವುದಿಲ್ಲ. ಅಷ್ಟು ಮಾತ್ರವಲ್ಲ ರಾಜ್ಯದ ಹಣಕಾಸು ಸ್ಥಿತಿಯನ್ನು ಬಿಗಡಾಯಿಸುತ್ತಿವೆ. ಈ ಸವಲತ್ತುಗಳನ್ನು ನೀಡುವ ಪಕ್ಷಗಳ ದೃಷ್ಟಿಯಿಂದ ಅಭಿವೃದ್ಧಿಯ ಅಂತಿಮ ಗುರಿ ಜನರ ಜೀವನಮಟ್ಟ ಸುಧಾರಿಸುವುದು. ಅದನ್ನು ಜಿಡಿಪಿ ಹೆಚ್ಚಿಸಿ ಮಾಡಬಹುದು ಅಥವಾ ಜನರಿಗೆ ಮೂಲಸೌಕರ್ಯಗಳನ್ನು ಕೊಡುವ ಮೂಲಕನೂ ಮಾಡಬಹುದು. ಈ ಹಿನ್ನೆಲೆಯಲ್ಲಿ ಉಚಿತ ಕೊಡುಗೆ ಎಂದರೇನು? ಎನ್ನುವುದನ್ನು ಮೊದಲು ನೋಡುವ.

ಸರಕಾರಗಳು ಜನರಿಗೆ ಅದರಲ್ಲೂ ಬಡವರಿಗೆ ಉಚಿತವಾಗಿ ನೀಡುವ ಸವಲತ್ತುಗಳನ್ನು ಉಚಿತ ಕೊಡುಗೆ ಎನ್ನುವ ಚರ್ಚೆ ಇದೆ. ಈ ಸಾಲಿನಲ್ಲಿ ಉಚಿತ ಶಿಕ್ಷಣ, ಆರೋಗ್ಯ, ಮಧ್ಯಾಹ್ನದ ಬಿಸಿಯೂಟ, ಬಿಸಿಯೂಟದೊಂದಿಗೆ ನೀಡುವ ಮೊಟ್ಟೆ ಹಾಲು, ವಸತಿ, ಕುಡಿಯುವ ನೀರು, ವಿದ್ಯುತ್, ಸಾಲ ಮನ್ನಾ, ಟಿವಿ, ಲ್ಯಾಪ್‍ಟಾಪ್,  ಬೈಸಿಕಲ್, ಶೌಚಾಲಯ ಇತ್ಯಾದಿಗಳನ್ನು ಉಚಿತ ಕೊಡುಗೆಗಳೆಂದು ವಿಂಗಡಿಸುತ್ತಾರೆ. 15ನೇ ಹಣಕಾಸು ಸಮಿತಿ ಅಧ್ಯಕ್ಷರಾದ ಎನ್.ಕೆ.ಸಿಂಗ್ ಪ್ರಕಾರ ಉಚಿತ ಕೊಡುಗೆಗಳಲ್ಲಿ ಕಲ್ಯಾಣಯೋಗ್ಯ ಮತ್ತು ಕಲ್ಯಾಣಯೋಗ್ಯವಲ್ಲದ ಉಚಿತ ಕೊಡುಗೆಗಳಿವೆ. ರೇಷನ್, ಉದ್ಯೋಗ ಖಾತರಿ ಯೋಜನೆ, ಶಿಕ್ಷಣ, ಆರೋಗ್ಯ ಇವೆಲ್ಲ ಕಲ್ಯಾಣಯೋಗ್ಯ ಕೊಡುಗೆಗಳು. ಉಳಿದವು (ವಸತಿ, ಕುಡಿಯುವ ನೀರು, ವಿದ್ಯುತ್, ಸಾಲ ಮನ್ನಾ,  ಟಿವಿ, ಲ್ಯಾಪ್‍ಟಾಪ್,  ಬೈಸಿಕಲ್, ಶೌಚಾಲಯ ಇತ್ಯಾದಿಗಳು) ಕಲ್ಯಾಣಯೋಗ್ಯವಲ್ಲದ ಕೊಡುಗೆಗಳು. ಕಲ್ಯಾಣಯೋಗ್ಯ ಎಂದರೆ ಆರ್ಥಿಕ ಕ್ಷೇತ್ರಕ್ಕೆ ಕೊಡುಗೆ ನೀಡುವ ಅಥವಾ ಪ್ರೊಡಕ್ಟಿವ್ ಕೊಡುಗೆಗಳು. ಕಲ್ಯಾಣಯೋಗ್ಯವಲ್ಲದ ಎಂದರೆ ಆರ್ಥಿಕ ಚಟುವಟಿಕೆಗೆ ಕೊಡುಗೆ ಇಲ್ಲದ ಅಥವಾ ಅನ್‍ಪ್ರೊಡಕ್ಟಿವ್ ಕೊಡುಗೆಗಳು. ಪ್ರಧಾನಿ ಮೋದಿಯವರ ಪ್ರಕಾರ ಚತುಷ್ಪತ ರಸ್ತೆ, ವಿಮಾನ ನಿಲ್ದಾಣ, ಡಿಫೆನ್ಸ್ ಕಾರಿಡಾರ್‌ಗಳನ್ನು ನಿರ್ಮಿಸುವುದು ಪ್ರೊಡಕ್ಟಿವ್ ಇನ್‍ವೆಸ್ಟೆಮೆಂಟ್. ಬಡ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡುವುದು, ಲ್ಯಾಪ್‍ಟ್ಯಾಪ್ ಕೊಡುವುದು, ಮೊಟ್ಟೆ ಕೊಡುವುದು ಇವೆಲ್ಲ ಅನುಪಯುಕ್ತ ಎಂದು ಅವರು ಹೇಳಿಲ್ಲ. ಹಾಗೆಂದು ಉಪಯುಕ್ತವೆಂದೂ ಹೇಳಿಲ್ಲ.

ಆರ್‌ಬಿಐ ಪ್ರಕಾರ ಕಲ್ಯಾಣಯೋಗ್ಯವಲ್ಲದ ಕೊಡುಗೆಗಳು ನಮ್ಮ ಅರ್ಥ ವ್ಯವಸ್ಥೆ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತವೆ. ರೈತರ ಸಾಲಮನ್ನಾ ಕ್ರೆಡಿಕ್ ಕಲ್ಚರನ್ನು ನಾಶ ಮಾಡುತ್ತದೆ. ಕ್ರೆಡಿಟ್ ಕಲ್ಚರ್ ಅಂದರೆ ತೆಗೆದುಕೊಂಡ ಸಾಲವನ್ನು ಬಡ್ಡಿ ಸಮೇತ ಕಟ್ಟುವ ಕಲ್ಚರ್. ಸಾಲ ಮನ್ನಾ ಮಾಡುವುದರಿಂದ ಸಾಲ ಕಟ್ಟುವ ಅಗತ್ಯ ಇಲ್ಲ ಎನ್ನುವ ಸಂದೇಶ ಹೋಗುತ್ತದೆ. ಉಚಿತ ಟಿವಿ, ಲ್ಯಾಪ್‍ಟಾಪ್ ಇತ್ಯಾದಿಗಳು ಈ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವವರನ್ನು ಹೊರಗಿಡುತ್ತವೆ. ಅಂದರೆ ಒಂದು ವೇಳೆ ಸರಕಾರ ಉಚಿತ ನೀಡದಿದ್ದರೆ ಜನರು ಮಾರುಕಟ್ಟೆಯಲ್ಲಿ ಇವನ್ನು ಖರೀದಿಸಬೇಕು. ಖರೀದಿಸುವವರು ಇರುವಾಗ ಪೂರೈಕೆ ಮಾಡಲು ಖಾಸಗಿ ಬಂಡವಾಳ ಮುಂದಕ್ಕೆ ಬರುತ್ತದೆ. ಉಚಿತ ನೀಡುವುದರಿಂದ ಮಾರುಕಟ್ಟೆಯಲ್ಲಿ ಖರೀದಿಸಿ ಅನುಭೋಗಿಸುವವರ ಸಂಖ್ಯೆ ಕಡಿಮೆ ಆಗುತ್ತದೆ ಅಥವಾ ಡಿಮ್ಯಾಂಡ್ ಕಡಿಮೆ ಆಗುತ್ತದೆ. ಡಿಮ್ಯಾಂಡ್ ಕಡಿಮೆ ಆದರೆ ಖಾಸಗಿ ಬಂಡವಾಳಿಗರು ಹೂಡಿಕೆ ಮಾಡುವುದು ಕಡಿಮೆ ಆಗುತ್ತದೆ ಎನ್ನುವ ವಾದ. ಇದರ ಜೊತೆಗೆ ಆರ್‌ಬಿಐ ಅನುಕೂಲಸ್ಥರು ಮಾಡುವ ಮತ್ತೊಂದು ವಾದವನ್ನು ಮುಂದಿಟ್ಟಿದೆ. ಅದೇನೆಂದರೆ ಬಡವರಿಗೆ ಎಲ್ಲವನ್ನು ಉಚಿತ ಕೊಟ್ಟರೆ ಅವರು ದುಡಿಯುವ ಉತ್ಸಾಹ ಕಳೆದುಕೊಳ್ಳುತ್ತಾರೆ. ಇದು ನಮ್ಮ ವೇಜ್ ರೇಟ್ (ಕೂಲಿ) ಮೇಲೆ ಪ್ರಭಾವ ಬೀರುತ್ತದೆ. ಅಂದರೆ ಉಚಿತ ಸವಲತ್ತುಗಳಿಂದ ದುಡಿಯುವವರ ಸಂಖ್ಯೆ ಕಡಿಮೆ ಆದರೆ ವೇಜ್ ರೇಟ್ ಜಾಸ್ತಿ ಆಗುತ್ತದೆ ಎನ್ನುವ ವಾದ.

Image
Freebie

ಬಿಸಿಯೂಟದಿಂದ ಹೆಚ್ಚು ಬಡ ಮಕ್ಕಳು ಶಿಕ್ಷಿತರಾಗಿದ್ದಾರೆ

ಮೇಲಿನ ವಾದವನ್ನು ತಮಿಳುನಾಡು ಸರಕಾರದ ಹಣಕಾಸು ಮಂತ್ರಿಗಳು ಒಪ್ಪುವುದಿಲ್ಲ. ಅವರ ಪ್ರಕಾರ ಯಾವುದು ವೆಲ್‍ಫೇರ್ ಯೋಗ್ಯ ಯಾವುದು ವೆಲ್‍ಫೇರ್ ಯೋಗ್ಯವಲ್ಲ ಎನ್ನುವುದನ್ನು ಕಾಲ ಸಂದರ್ಭಗಳು ನಿರ್ಣಯಿಸುತ್ತವೆ. ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು 1950ರಲ್ಲಿ ಮೊದಲು ಆರಂಭಿಸಿದ್ದು ಮತ್ತು ನಂತರ 1982ರಲ್ಲಿ ಅದನ್ನೂ ಇನ್ನೂ ವಿಸ್ತರಿಸಿದ್ದು ತಮಿಳುನಾಡು. ಆವಾಗ ಅದನ್ನು ವೋಟ್‌ಬ್ಯಾಂಕ್ ಪೊಲಿಟಿಕ್ಸ್ ಎಂದು ಇಡೀ ದೇಶ ಖಂಡಿಸಿದೆ. ಆದರೆ 1995ರ ವೇಳೆಗೆ ಎಲ್ಲ ರಾಜ್ಯಗಳು ಬಿಸಿಯೂಟ ಕಾರ್ಯಕ್ರಮ ಅಗತ್ಯ ಎಂದು ಮನಗಂಡಿದೆ. ಕೃಷಿಕರಿಗೆ ಕ್ಯಾಶ್ ವರ್ಗಾವಣೆ ಮಾಡುವ ಯೋಜನೆ ಮೊದಲು ತೆಲಂಗಾಣದಲ್ಲಿ ಬಂದದ್ದು. ಅದನ್ನು ಈಗ ಕೇಂದ್ರ ಸರಕಾರ ಇಡೀ ದೇಶಕ್ಕೆ ಅನ್ವಯಿಸಿದೆ. ಅಭಿವೃದ್ಧಿಯನ್ನು ಜಿಡಿಪಿಗೆ ಸಮೀಕರಿಸುವವರಿಗೆ ಬಡಜನರಿಗೆ ನೀಡುವ ಅಲ್ಪಸ್ವಲ್ಪ ಸವಲತ್ತುಗಳು ಉಚಿತ ಕೊಡುಗೆ ಅನ್ನಿಸಬಹುದು. ಆದರೆ ದೂರದೃಷ್ಟಿಯಿಂದ ನೋಡಿದರೆ ಇವೆಲ್ಲ ವೇಸ್ಟ್ ಅಲ್ಲ. ಬಿಸಿಯೂಟ ಕೊಡುವುದರಿಂದ ಬಡಮಕ್ಕಳು ಶಾಲೆಗೆ ಬರುವುದು ಹೆಚ್ಚಾಗಿದೆ, ಹಾಜರಾತಿ ಹೆಚ್ಚಾಗಿದೆ ಅಂದರೆ ಹೆಚ್ಚು ಹೆಚ್ಚು ಬಡಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗಿದೆ.

ಅಷ್ಟು ಮಾತ್ರವಲ್ಲ ಪೌಷ್ಟಿಕಾಂಶದ ಕೊರತೆ ಮೆದುಳಿನ ಬೆಳವಣಿಗೆ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಬಡಮಕ್ಕಳ ಬುದ್ಧಿಮತ್ತೆ (ಇಂಟಲಿಜನ್ಸ್ ಕೊಶ್ಯಂಟ್) ಮೇಲೂ ಪರಿಣಾಮ ಬೀರುತ್ತದೆ. ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಪೌಷ್ಟಿಕಾಂಶ ದೊರಕಿದರೆ ಅವರ ಬುದ್ದಿಮತ್ತೆ ಬೆಳೆಯುತ್ತದೆ. ಅವರು ಇತರ ಅನುಕೂಲಸ್ಥ ಮಕ್ಕಳೊಂದಿಗೆ ಸ್ಪರ್ಧಿಸಿ ತಮ್ಮ ಜೀವನ ಕಟ್ಟಿಕೊಳ್ಳುತ್ತಾರೆ. ಇದರಿಂದ ನಮ್ಮ ದೇಶದ ಮಾನವ ಸಂಪನ್ಮೂಲದ ಗುಣಮಟ್ಟ ಹೆಚ್ಚುತ್ತದೆ. ಬಡವರಿಗೆ ಉಚಿತ ವಿದ್ಯುತ್ ಕೊಡುವುದರಿಂದ ಅವರು ದೀಪದ ಬೆಳಕಿನಲ್ಲಿ ಕೆಲಸ ಮಾಡುವುದು ಕಣ್ಣು ಕಳೆದುಕೊಳ್ಳುವುದು ತಪ್ಪುತ್ತದೆ. ಅದೇ ರೀತಿ ಉಚಿತ ಗ್ಯಾಸ್ ಕೊಡುವುದು ಬಡ ಮಹಿಳೆಯರು ದಿನಾ ಹೊಗೆ ಉಸಿರಾಡಿ ರೋಗಕ್ಕೆ ತುತ್ತಾಗುವುದನ್ನು ತಪ್ಪಿಸುತ್ತದೆ. ಜೊತೆಗೆ ಇವೆಲ್ಲ ಉಚಿತ ಅಲ್ಲ. ಏಕೆಂದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಗ್ರಹ ಮಾಡುವ ಪ್ರತಿ 100 ರುಪಾಯಿಯಲ್ಲಿ 62ರಿಂದ 65ರಷ್ಟು ಪರೋಕ್ಷ ತೆರಿಗೆಯಿಂದ ಬಂದರೆ ಕೇವಲ 35 ರೂಗಳು ನೇರ ತೆರಿಗೆಯಿಂದ ಬರುತ್ತದೆ. ನೇರ ತೆರಿಗೆಯನ್ನು ಆದಾಯ ಇದ್ದವರು ಮಾತ್ರ ಕಟ್ಟುವುದರಿಂದ ಅದನ್ನು ಅನುಕೂಲಸ್ಥರ ತೆರಿಗೆ ಎನ್ನಬಹುದು. ಪರೋಕ್ಷ ತೆರಿಗೆಯನ್ನು ಎಲ್ಲರೂ ಕಟ್ಟುವುದರಿಂದ ಮತ್ತು ನಮ್ಮಲ್ಲಿ ಶೇ 75ಕ್ಕಿಂತಲೂ ಹೆಚ್ಚು ಜನ ಅನನುಕೂಲಸ್ಥರು ಇರುವುದರಿಂದ ಪರೋಕ್ಷ ತೆರಿಗೆಯನ್ನು ಅನನುಕೂಲಸ್ಥರ ತೆರಿಗೆ ಎನ್ನಬಹುದು. ಆದುದರಿಂದ ಇವು ಉಚಿತ ಸವಲತ್ತುಗಳಲ್ಲ. ಬಡವರು ತೆರಿಗೆ ಕಟ್ಟುವುದೇ ಇಂತಹ ಅನುಕೂಲಗಳನ್ನು ಪಡೆಯಲು.

ಹಣಕಾಸು ಸ್ಥಿತಿ: ಮೂರನೇ ಪ್ರಶ್ನೆ ಉಚಿತ ಕೊಡುಗೆಗಳನ್ನು ಕೊಡುವುದರಿಂದಲೇ ರಾಜ್ಯಗಳ ಹಣಕಾಸು ಸ್ಥಿತಿ ಬಿಗಡಾಯಿಸಿದೆಯೇ? ಕೇಂದ್ರ ಸರಕಾರ ಮತ್ತು ಆರ್‌ಬಿಐ ಪ್ರಕಾರ ಉಚಿತ ಕೊಡುಗೆಗಳು ರಾಜ್ಯದ ಹಣಕಾಸು ಕೆಡಲು ಕಾರಣ. ಆರ್‌ಬಿಐ ಅಧ್ಯಯನ ಪ್ರಕಾರ ರಾಜ್ಯಗಳು ತಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುತ್ತವೆ. ಆದಾಯಕ್ಕಿಂತ ಖರ್ಚು ಮಾಡುವುದರಿಂದ ರಾಜ್ಯಗಳ ಸಾಲ ಹೆಚ್ಚಾಗುತ್ತಿದೆ. ಇದರಿಂದ ರಾಜ್ಯಗಳ ಹಣಕಾಸು ಸ್ಥಿತಿ ಬಿಗಾಡಯಿಸುತ್ತಿದೆ. ಇದನ್ನು ವಿರೋಧಿಸುವ ರಾಜ್ಯ ಸರಕಾರಗಳ ಪ್ರಕಾರ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವುದು ಅನಿವಾರ್ಯ. ಏಕೆಂದರೆ ಆದಾಯ ಕಡಿಮೆ ಆಗುತ್ತಿದೆ.  ಸಂವಿಧಾನದಲ್ಲೇ ಕೇಂದ್ರಕ್ಕೆ ಹೆಚ್ಚಿನ ಆದಾಯ ಸಂಗ್ರಹಿಸುವ ಅಧಿಕಾರ ನೀಡಲಾಗಿದೆ. ಆದರೆ ಜನರ ಬದುಕಿಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಕಲ್ಲಿಸುವ ಜವಾಬ್ದಾರಿ ರಾಜ್ಯಕ್ಕೆ ಹೆಚ್ಚಿದೆ. 2019ರಲ್ಲಿ ಕೇಂದ್ರ ಮತ್ತು ರಾಜ್ಯಗಳು ಸಂಗ್ರಹಿಸಿದ ಸಂಪನ್ಮೂಲದಲ್ಲಿ ಶೇ. 63ರಷ್ಟು ಕೇಂದ್ರ ಸರಕಾರ ಸಂಗ್ರಹಿಸಿದರೆ ರಾಜ್ಯಗಳು ಸಂಗ್ರಹಿಸಿದ ಸಂಪನ್ಮೂಲ ಕೇವಲ 33%. ಆದರೆ ಖರ್ಚಿನ ಪ್ರಶ್ನೆ ಬಂದರೆ ಅದೇ ವರ್ಷ ಕೇಂದ್ರ ಸರಕಾರ ಶೇ. 38ರಷ್ಟು ಖರ್ಚು ಮಾಡಿದರೆ ರಾಜ್ಯಗಳು ಶೇ. 62ರಷ್ಟು ಖರ್ಚು ಮಾಡಿವೆ.

ಅಷ್ಟು ಮಾತ್ರವಲ್ಲ 15ನೇ ಹಣಕಾಸು ಸಮಿತಿ ಶೇ 42ರಷ್ಟು ತೆರಿಗೆ ಸಂಗ್ರಹವನ್ನು ರಾಜ್ಯಗಳಿಗೆ ನೀಡಲು ಸಲಹೆ ನೀಡಿದೆ. ಆದರೆ ವಾಸ್ತವದಲ್ಲಿ ಕೇಂದ್ರ ಶೇ 30ರಷ್ಟು ತೆರಿಗೆ ಸಂಗ್ರಹವನ್ನು ರಾಜ್ಯಗಳಿಗೆ ನೀಡಿದೆ. ತೆರಿಗೆ ಸಂಗ್ರಹ ಬದಲು ಸೆಸ್ ಸರ್ಚಾಜ್ ಸಂಗ್ರಹಗಳನ್ನು ಕೇಂದ್ರ ಸರಕಾರ ಹೆಚ್ಚಿಸುವುದರಿಂದ ವಾಸ್ತವ ವರ್ಗಾವಣೆ ಕಡಿಮೆ ಆಯಿತು. ಕೇಂದ್ರ ಸಂಗ್ರಹ ಮಾಡುವ ತೆರಿಗೆಯಲ್ಲಿ ಎರಡು ಭಾಗ ಇದೆ. ಒಂದು ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಭಾಗ ಮತ್ತು ಹಂಚಿಕೊಳ್ಳದಿರುವ ಭಾಗ. ಸೆಸ್, ಸರ್ಚಾಜ್‍ಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಅಗತ್ಯ ಇಲ್ಲ. ಇದೇ ಅಧಿಕಾರವನ್ನು ಬಳಸಿಕೊಂಡು ಕೇಂದ್ರ ಸರಕಾರ ಸೆಸ್, ಸರ್ಚಾಜ್ ಸಂಗ್ರಹವನ್ನ ಹೆಚ್ಚಿಸಿಕೊಂಡಿದೆ. 2012ರಲ್ಲಿ ಕೇಂದ್ರ ಸರಕಾರ ಸಂಗ್ರಹಿಸಿದ  ತೆರಿಗೆಯಲ್ಲಿ ಸೆಸ್ ಶೇ 10ರಷ್ಟಿತ್ತು. 2020ರ ವೇಳೆಗೆ ಅದು ಶೇ 20ಕ್ಕೆ ಏರಿದೆ. ಅಂದರೆ ಪ್ರತಿ 100 ರುಪಾಯಿಗಳಲ್ಲಿ ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಭಾಗ ರೂ 80ಕ್ಕೆ ಇಳಿದಿದೆ. 100 ರುಪಾಯಿಯಲ್ಲಿ ಶೇ 42 ರಾಜ್ಯಗಳಿಗೆ ನೀಡಿದೆ ರೂ 42 ರಾಜ್ಯಗಳಿಗೆ ವರ್ಗಾವಣೆ ಆಗುತ್ತಿದೆ. 80 ರುಪಾಯಿಯಲ್ಲಿ ಶೇ 42 ನೀಡಿದರೆ ರೂ 33 ಮಾತ್ರ ವರ್ಗಾವಣೆ ಆಗುತ್ತದೆ.

ಸೆಸ್‍ನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಸಂಗ್ರಹಿಸಲಾಗುತ್ತಿದೆ. ಈಗ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಮೂಲಸೌಕರ್ಯಗಳ ಅಭಿವೃದ್ಧಿ ಇತ್ಯಾದಿಗಳಿಗಾಗಿ 7 ಸೆಸ್‍ಗಳನ್ನು ಕೇಂದ್ರ ಸರಕಾರ ಸಂಗ್ರಹಿಸುತ್ತಿದೆ. ಕೇಂದ್ರ ಲೆಕ್ಕಪತ್ರಾಧಿಕಾರಗಳ ಪ್ರಕಾರ 2019 ಮತ್ತು 2020ರಲ್ಲಿ ಕೇಂದ್ರ ಸಂಗ್ರಹಿಸಿದ ಸೆಸ್‍ಗಳಲ್ಲಿ ಶೇ 40ರಷ್ಟನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಿಲ್ಲ. ಇದರಿಂದಲೂ ರಾಜ್ಯಗಳಿಗೆ ವರ್ಗಾವಣೆ ಆಗುವ ಮೊತ್ತ ಕಡಿಮೆ ಆಗಿದೆ. 2019ರಲ್ಲಿ ಕೇಂದ್ರ ಸರಕಾರ ರಾಜ್ಯಗಳೊಂದಿಗೆ ಚರ್ಚಿಸದೆ ಕಾರ್ಪೋರೇಟ್ ತೆರಿಗೆ ದರವನ್ನು ಶೇ 30ರಿಂದ ಶೇ 22ಕ್ಕೆ ಇಳಿಸಿದೆ ಮತ್ತು ಹೊಸತಾಗಿ ಆರಂಭಿಸುವ ಉದ್ದಿಮೆಗಳ ಗಳಿಸಿದ ಲಾಭದ ಮೇಲಿನ ತೆರಿಗೆಯನ್ನು ಶೇ 25ರಿಂದ ಶೇ.15ಕ್ಕೆ ಇಳಿಸಿದೆ. ಇದರಿಂದ 1.5 ಲಕ್ಷ ಕೋಟಿ ತೆರಿಗೆ ಸಂಗ್ರಹ ಕಡಿಮೆ ಆಗಿದೆ. ಇದರಲ್ಲಿ ರಾಜ್ಯಗಳ ಪಾಲು ಇರುವುದರಿಂದ ಅವು ಕೂಡ ಹಲವು ಕೋಟಿ ತೆರಿಗೆ ನಷ್ಟ ಅನುಭವಿಸಬೇಕಾಯಿತು. ಹೀಗೆ ಕೇಂದ್ರ ಸರಕಾರ ಸಂಪನ್ಮೂಲವನ್ನು ತನ್ನಲ್ಲೇ ಕೇಂದ್ರೀಕರಿಸಿಕೊಂಡ ಕಾರಣ ಮತ್ತು ಕೆಲವು ರಾಜ್ಯಗಳು ತಮ್ಮ ಹಣಕಾಸನ್ನು ಶಿಸ್ತುಬದ್ಧವಾಗಿ ನಿರ್ವಹಿಸಿದೆ ಇದ್ದುದರಿಂದ ರಾಜ್ಯಗಳ ಹಣಕಾಸು ಸ್ಥಿತಿ ಬಿಗಡಾಯಿಸಿದೆ. ಬಡವರಿಗೆ ನೀಡುವ ಸವಲತ್ತುಗಳಿಗೆ ರಾಜ್ಯಗಳು ತಮ್ಮ ಒಟ್ಟು ಖರ್ಚಿನ ಶೇ 10ರಷ್ಟು ವಿನಿಯೋಜಿಸಿದ ಉದಾಹರಣೆಗಳೇ ಹೆಚ್ಚು. ವಾಸ್ತವ ಹೀಗಿರುವಾಗ ಬಡವರಿಗೆ ನೀಡುವ ಅಲ್ಪಸ್ವಲ್ಪ ಸವಲತ್ತುಗಳನ್ನು ರಾಜ್ಯಗಳ ಹಣಕಾಸು ಸ್ಥಿತಿ ಬಿಗಡಾಯಿಸಲು ಕಾರಣ ಮಾಡುವುದು ಸರಿಯಲ್ಲ.

Image
App freebie

ಜನಪ್ರತಿನಿಧಿಗಳ ಸವಲತ್ತುಗಳು
ಕೊನೆಯ ಪ್ರಶ್ನೆ ಕೇವಲ ಬಡವರು ಮಾತ್ರ ಸರಕಾರದಿಂದ ಉಚಿತ ಕೊಡುಗೆ ಪಡೆಯುವುದೇ? ಅನಕೂಲಸ್ಥರು ಪಡೆಯುವುದಿಲ್ಲವೇ? ಬಡವರು ಮಾತ್ರ ಅಲ್ಲ ಉಚಿತ ಸವಲತ್ತು ಪಡೆಯುವ ಅನುಕೂಲಸ್ಥರ ದೊಡ್ಡ ಸಾಲೇ ಇದೆ. ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು, ಉದ್ದಿಮೆಗಳು ಮತ್ತು ಮಧ್ಯಮ ವರ್ಗಗಳು ಪಡೆಯುವ ಉಚಿತ ಸವಲತ್ತುಗಳಿಗೆ ಹೋಲಿಸಿದೆ ಬಡವರು ಪಡೆಯುವ ಉಚಿತ ಸವಲತ್ತುಗಳು ಏನೇನೂ ಅಲ್ಲ. ನಮ್ಮ ಪ್ರತಿನಿಧಿಗಳು (ಎಂಪಿ, ಎಂಎಲ್‍ಎಗಳು)  ಸಂಬಳ, ಪಿಂಚಣಿಗಳ ಜೊತೆ ತಿಂಗಳಿಗೆ ರೂ.45000 ಕಚೇರಿ ಭತ್ತೆ, ರೂ.45000 ಕ್ಷೇತ್ರ ಭತ್ತೆ,  ಪಾರ್ಲಿಮೆಂಟ್ ನಡೆಯವ ಪ್ರತಿ ದಿನ ರೂ.2000 ದಿನಭತ್ಯೆಗಳನ್ನು ಪಡೆಯುತ್ತಾರೆ. ಜನರಿಗೆ ನೀಡುವ ಉಚಿತ ವಿದ್ಯುತ್, ನೀರಿನ ಬಗ್ಗೆ ತಕರಾರು ಎತ್ತುವ ಜನಪ್ರತಿನಿಧಿಗಳು ಇವನ್ನು ಉಚಿತವಾಗಿಯೇ ಪಡೆಯುತ್ತಿದ್ದಾರೆ. ಇವುಗಳ ಜೊತೆಗೆ ಉಚಿತ ಸಾರಿಗೆ, ಉಚಿತ ಸಂಪರ್ಕ, ಉಚಿತ ವಸತಿ, ಕಡಿಮೆ ಬೆಲೆಗೆ ಆಹಾರ, ಮೆಡಿಕಲ್ ಸವಲತ್ತುಗಳನ್ನು ಸೇರಿಸಬಹುದು.

ಇದನ್ನು ಓದಿದ್ದೀರಾ? ಉಚಿತ ಕೊಡುಗೆ| 2013ರ ತೀರ್ಪಿನ ಮರುಪರಿಶೀಲನೆಗೆ ತ್ರಿಸದಸ್ಯ ಪೀಠ ರಚಿಸಲು ಸುಪ್ರೀಂ ಕೋರ್ಟ್‌ ತೀರ್ಮಾನ

ಉನ್ನತ ಮಟ್ಟದ ಐಎಸ್, ಕೆಎಎಸ್ ಅಧಿಕಾರಿಗಳು ಜನ ಪ್ರತಿನಿಧಿಗಳ ರೀತಿಯಲ್ಲೆ ಹಲವು ಉಚಿತ ಸವಲತ್ತುಗಳನ್ನು ಪಡೆಯುತ್ತಾರೆ. ವಸತಿ, ಪ್ರಯಾಣಕ್ಕೆ ವಾಹನ, ವಾಹನ ಓಡಿಸಲು ಚಾಲಕ, ದಿನ ಭತ್ಯೆ, ಮನೆ ಭತ್ಯೆ , ಅತಿಥಿ ಭತ್ಯೆ ಹೀಗೆ ಹಲವು ಭತ್ಯೆಗಳು. ನಗರಗಳಲ್ಲಿ ಶೇ.40ರಷ್ಟು ಮಂದಿ ಸ್ಲಮ್‍ಗಳಲ್ಲಿ ಉಸಿರಾಡುತ್ತಿದ್ದರೆ, ಕೆಲವು ಅಧಿಕಾರಿಗಳು ಎಕರೆಗಟ್ಟಲೆ ಪ್ರದೇಶದಲ್ಲಿ ವಾಸದ ಬಂಗ್ಲೆ, ತಾವು ಸುತ್ತಾಡಲು ಮತ್ತು ತಮ್ಮ ಸಾಕು ಪ್ರಾಣಿಯನ್ನು ಸುತ್ತಾಡಿಸಲು ವಿಸ್ತಾರವಾದ ಜಾಗಗಳನ್ನು ಹೊಂದಿದ್ದಾರೆ. ಇವರಿಗೆಲ್ಲ ಈ ಸವಲತ್ತುಗಳನ್ನು ಕೊಡುವುದು ಏಕೆ? ನಮ್ಮ ಅರ್ಥ, ಶಿಕ್ಷಣ, ಆರೋಗ್ಯ ಮತ್ತು ಇತರ ಮೂಲಸೌಕರ್ಯಗಳನ್ನು ನಿರ್ವಹಿಸಲು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಮ್ಮ ಅರ್ಥ, ಸಾಮಾಜಿಕ, ಆರ್ಥಿಕ ಮೂಲಸೌಕರ್ಯಗಳನ್ನು ಚೆನ್ನಾಗಿ ನಿರ್ವಹಿಸಿದರೆ ಜನರು ಉದ್ಯೋಗ ಪಡೆಯಲು ಸಾಧ್ಯ, ಗುಣಮಟ್ಟದ ಶಿಕ್ಷಣ, ಆರೋಗ್ಯ, ವಸತಿ ಇತ್ಯಾದಿ ಮೂಲಸೌಕರ್ಯಗಳನ್ನು ಪಡೆಯಲು ಸಾಧ್ಯ.
ಇವರಿಗೆ ಇಷ್ಟೆಲ್ಲ ಸವಲತ್ತುಗಳನ್ನು ಉಚಿತವಾಗಿ ನೀಡಿದರೂ ಇವರು ನಮ್ಮ ಅರ್ಥ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಇದಿಂದ ಜಿಡಿಪಿ ದಿನದಿಂದ ದಿನಕ್ಕೆ ಕುಸಿಯುತ್ತದೆ, ಗುಣಮಟ್ಟದ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಶಿಕ್ಷಣ, ಆರೋಗ್ಯ ಮತ್ತು ಇತರ ಮೂಲಸೌಕರ್ಯಗಳನ್ನು ಇವರು ನಿರ್ವಹಿಸಲು ಅಸಫಲರಾದ ಕಾರಣ ಜನರು ತಾವು ಕಷ್ಟಪಟ್ಟು ಗಳಿಸಿದ ಅಲ್ಪಸ್ವಲ್ಪ ಆದಾಯವನ್ನು ಮೂಲಸೌಕರ್ಯಗಳನ್ನು ದುಬಾರಿ ಬೆಲೆಗೆ ಮಾರುಕಟ್ಟೆಯಲ್ಲಿ ಖರೀದಿಸಿ ಬಳಸಬೇಕಾಗಿದೆ. ಹೀಗೆ ಜನ ಸಾಮಾನ್ಯರಿಗೆ ಎರಡು ನಷ್ಟಗಳು – ಒಂದು, ತಾವು ಕಟ್ಟಿದ ತೆರಿಗೆ ಆಯೋಗ್ಯ ಜನಪ್ರತಿನಿಧಿಗಳು ಮತ್ತು ಅಧಿಕಾರಗಳನ್ನು ಸಾಕಲು ಬಳಕೆ ಆಗುವುದು ಮತ್ತು ಎರಡು, ಕಷ್ಟಪಟ್ಟು ದುಡಿದ ಅಲ್ಪಸ್ವಲ್ಪ ಆದಾಯ ಸರಕಾರ ನೀಡಬೇಕಾದ ಸವಲತ್ತುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿ ಬಳಸುವ ಅನಿವಾರ್ಯತೆ ಇದೆ.

ಅತ್ಯಂತ ಹೆಚ್ಚು ಉಚಿತ ಸವಲತ್ತು ಪಡೆಯುವ ಮತ್ತೊಂದು ಗುಂಪು ಉದ್ದಿಮೆಗಳು. ಇವರಿಗೆ ಕಡಿಮೆ ಬೆಲೆಗೆ ಭೂಮಿ, ಕಡಿಮೆ ಬಡ್ಡಿಗೆ ಸಾಲ, ಪಡೆದ ಸಾಲ ಕಟ್ಟದಿದ್ದರೆ ಸಾಲ ಮನ್ನಾ, ತೆರಿಗೆ ಮನ್ನಾ ಎಲ್ಲವೂ ಇದೆ. ಪ್ರತಿ ವರ್ಷ ಹಲವು ಕೋಟಿ ತೆರಿಗೆ ವಿನಾಯಿತಿ ಇದೆ ಇವರಿಗೆ. ಉದಾಹರಣೆಗೆ 2016-17ರಲ್ಲಿ ರೂ.83492 ಕೋಟಿ, 2018-19ರಲ್ಲಿ ರೂ.108113 ಕೋಟಿ ಮತ್ತು 2019-20ರಲ್ಲಿ ರೂ. 99842 ಕೋಟಿ ತೆರಿಗೆ ವಿನಾಯಿತಿ ಇವರಿಗೆ ನೀಡಲಾಗಿದೆ. ಸರಕಾರಿ ಸಾಲದ ಬಹುಭಾಗವನ್ನು (ಶೇ.70ನ್ನು) ಬೃಹತ್ ಉದ್ದಿಮೆ ಮತ್ತು ದೊಡ್ಡ ಕೃಷಿಕರೇ ಪಡೆಯುತ್ತಾರೆ. ಸಾಲ ಪಡೆದು ಇವರು ಕಾಲಕಾಲಕ್ಕೆ ಸಂದಾಯ ಮಾಡಿದರೆ ಮತ್ತು ಉದ್ಯೋಗ ಸೃಷ್ಟಿಸಿದರೆ ಅಥವಾ ಕಡಿಮೆ ಬೆಲೆಗೆ ಸರಕುಸೇವೆಗಳನ್ನು ಪೂರೈಸಿದರೆ ಇವರಿಗೆ ನೀಡುವ ಸಾಲದ ಬಗ್ಗೆ ತಕರಾರು ಎತ್ತುವ ಅಗತ್ಯವಿಲ್ಲ. ಆದರೆ ವಾಸ್ತವ ಆ ರೀತಿ ಇಲ್ಲ. ವರ್ಷದಿಂದ ವರ್ಷಕ್ಕೆ ಸರಕುಸೇವೆಗಳ ಉತ್ಪಾದನ ಪ್ರಮಾಣ ಕುಸಿಯುತ್ತಿದೆ. ಆರ್‌ಬಿಐ ಅಧ್ಯಯನ ಪ್ರಕಾರ 1980-90ರಲ್ಲಿ ಶೇ.1ರಷ್ಟು ಜಿಡಿಪಿ ಏರಿಕೆ ಆದಾಗ 2 ಲಕ್ಷ ಗುಣಮಟ್ಟದ ಉದ್ಯೋಗ ಸೃಷ್ಟಿ ಆಗುತ್ತಿತ್ತು. 1990-2000ದಲ್ಲಿ ಪ್ರತಿ ಶೇ.1 ಜಡಿಪಿ ಏರಿಕೆಗೆ ಸೃಷ್ಟಿಯಾಗುವ ಗುಣಮಟ್ಟದ ಉದ್ಯೋಗ 1 ಲಕ್ಷಕ್ಕೆ ಇಳಿದಿದೆ. 2000-2010ರಲ್ಲಿ ಗುಣಮಟ್ಟದ ಉದ್ಯೋಗ ಸೃಷ್ಟಿ 52000ಕ್ಕೆ ಇಳಿದಿದೆ.  ಅಂದರೆ ಹೆಚ್ಚು ಹೆಚ್ಚು ಮೆಶಿನರಿ ಬಳಸಿ ಉತ್ಪಾದನೆ ನಡೆಯುತ್ತಿದೆ.

ಇದನ್ನು ಓದಿದ್ದೀರಾ? ವಿದ್ಯಾರ್ಥಿನಿಲಯದ ಬಾಲಕಿಯರಿಗೆ ಮುರುಘಾ ಶ್ರೀಗಳಿಂದ ಲೈಂಗಿಕ ಕಿರುಕುಳ ಆರೋಪ: ಎಫ್‌ಐಆರ್‌ನಲ್ಲಿ ಏನಿದೆ?

ಕಡಿಮೆ ಬೆಲೆಗೆ ಸರಕುಸೇವೆಗಳ ಪೂರೈಕೆ ಇಲ್ಲ, ಗುಣಮಟ್ಟದ ಉದ್ಯೋಗ ಸೃಷ್ಟಿ ಇಲ್ಲ, ಅದಿರಲಿ ಬ್ಯಾಂಕ್ ಸಾಲವನ್ನಾದರೂ ಕಟ್ಟಿದ್ದಾರೋ ನೋಡಿದರೆ ಅಲ್ಲೂ ಇವರ ಸಾಧನೆ ಶೂನ್ಯ. ಇವತ್ತು ಸರಕಾರಿ ಬ್ಯಾಂಕ್‍ಗಳಲ್ಲಿ ನೀಡಿದ ಸಾಲದಲ್ಲಿ ಶೇ.10ರಷ್ಟು ಕೆಟ್ಟ ಸಾಲಗಳಿವೆ. ಕೆಟ್ಟ ಸಾಲದಿಂದ ಬ್ಯಾಂಕ್‍ಗಳನ್ನು ದಿವಾಳಿ ಆಗುವುದನ್ನು ತಪ್ಪಿಸಲು ನಾವು ನೀವು ಕಟ್ಟಿದ ತೆರಿಗೆ ಹಣವನ್ನು ಸರಕಾರ ಬ್ಯಾಂಕ್‍ಗಳಿಗೆ ತುಂಬುತ್ತಿದೆ. ಕಳೆದ 7 ವರ್ಷಗಳಲ್ಲಿ ರೂ 10.72 ಲಕ್ಷ ಕೋಟಿ ತೆರಿಗೆ ಮೊತ್ತವನ್ನು  ಉದ್ದಿಮೆಗಳ ಸಾಲದಿಂದ ಬಸವಳಿದ ಬ್ಯಾಂಕ್‍ಗಳನ್ನು ಸುಧಾರಿಸಲು ಸರಕಾರ ತುಂಬಿದೆ. ದಿನಾ ಟಿವಿಯಲ್ಲಿ, ಪತ್ರಿಕೆಗಳಲ್ಲಿ ಬಡವರಿಂದಲೇ ಈ ದೇಶದ ಅರ್ಥಿಕ ಸ್ಥಿತಿ ಬಿಗಾಡಯಿಸುತ್ತಿದೆ ಎಂದು ತುತ್ತೂರಿ ಊದುವ ಮಧ್ಯಮ ವರ್ಗಕ್ಕೆ ಸೇರಿದ ಒಂದು ಗುಂಪು ಇದೆ. ಇವರಿಗೂ ಸರಕಾರ ಹಲವು ರಿಯಾಯಿತಿಗಳನ್ನು ನೀಡುತ್ತಿದೆ. ಬ್ಯಾಂಕ್‍ಗಳು ಇವರನ್ನು ಹುಡುಕಿ ಹುಡುಕಿ ಮನೆ ಕಟ್ಟಲು, ವಾಹನ ಖರೀದಿಸಲು ಮತ್ತು ಇತರ ಗೃಹ ಬಳಕೆ ಸರಕುಗಳನ್ನು ಖರೀದಿಸಲು ರಿಯಾಯಿತು ದರದಲ್ಲಿ ಸಾಲ ನೀಡುತ್ತಿವೆ. ಹೀಗೆ ಪಡೆದ ಸಾಲವನ್ನು ಕಟ್ಟದಿರುವವರು ಮಧ್ಯವ ವರ್ಗದವರೂ ಇದ್ದಾರೆ. ಇವರ ಪ್ರಮಾಣ ಕಡಿಮೆ ಇದೆ ಎನ್ನುವುದು ಸಮಧಾನದ ಸಂಗತಿ. ಇವರಿಗೂ ಹಲವು ತೆರಿಗೆ ವಿನಾಯಿತಿಗಳಿವೆ. 2016-17ರಲ್ಲಿ ಇವರಿಗೆ 74384 ಕೋಟಿಯಷ್ಟು ತೆರಿಗೆ ವಿನಾಯಿತಿ ನೀಡಲಾಗಿದೆ.
* * *

ಮೇಲಿನ ಚರ್ಚೆಯ ಹಿನ್ನೆಲೆಯಲ್ಲಿ ಒಂದೆರಡು ತೀರ್ಮಾನಗಳನ್ನು ತಳೆಯಬಹುದು. ಒಂದು, ಸರಕಾರ ನೀಡುವ ಸವಲತ್ತು ಅದರ ಬಲದಲ್ಲೇ ಪ್ರೊಡಕ್ಟಿವ್ ಅಥವಾ ಅನ್‍ಪ್ರೊಡಕ್ವಿವ್ ಆಗುವುದಿಲ್ಲ. ನಿರ್ದಿಷ್ಟ ಸವಲತ್ತನ್ನು  ನೋಡುವ ಕಣ್ಣಲ್ಲಿ ಸವಲತ್ತು ಪ್ರೊಡಕ್ಟಿವ್ ಅಥವಾ ಅನ್‍ಪ್ರೊಡಕ್ವಿವ್ ಆಗಬಹುದು. ಉದ್ದಿಮೆಗಳಿಗೆ ನೀಡುವ ತೆರಿಗೆ ರಿಯಾಯಿತಿ ಅಥವಾ ಸಾಲಮನ್ನಾಗಳನ್ನು ಉದ್ದಿಮೆಗಳ ಕಣ್ಣಲ್ಲಿ ಅಭಿವೃದ್ಧಿಯನ್ನು ನೋಡಿದರೆ ಅದು ಪ್ರೊಡಕ್ವಿವ್ ಆಗಬಹುದು. ಬಡವರ ಜಾಗದಲ್ಲಿ ನಿಂತು ನೋಡಿದರೆ ಅನ್‍ಪ್ರೊಡಕ್ವಿವ್ ಆಗಬಹುದು. ಅದೇ ರೀತಿ ಬಡವರಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಅಥವಾ ಲ್ಯಾಪ್‍ಟಾಪ್‍ನ್ನು ಬಡವರ ಜಾಗದಲ್ಲಿ ನಿಂತು ನೋಡಿದರೆ ಪ್ರೊಡಕ್ವಿವ್ ಆಗುತ್ತದೆ. ಆದರೆ ಅನುಕೂಲಸ್ಥರ ಜಾಗದಲ್ಲಿ ನಿಂತು ನೋಡಿದರೆ ಅನ್‍ಪ್ರೊಡಕ್ವಿವ್ ಆಗಬಹುದು. ಎರಡು, ಅಭಿವೃದ್ಧಿಯನ್ನು ಜಿಡಿಪಿಗೆ ಸೀಮಿತಗೊಳಿಸಿದರೆ ಬಡವರಿಗೆ ನೀಡುವ ಸವಲತ್ತುಗಳು ಅನ್‍ಪ್ರೊಡಕ್ವಿವ್ ಆಗಬಹುದು. ಒಂದು ವೇಳೆ ಅಭಿವೃದ್ಧಿಯ ಅಂತಿಮ ಗುರಿ ಜನರೆಂದು ತಿಳಿದು ಅವರ ಸಾಮರ್ಥ್ಯ ವೃದ್ಧಿಸುವುದು ಕೂಡ ಒಂದು ವಿನಿಯೋಜನೆ ಎಂದು ತಿಳಿದರೆ ಬಡವರಿಗೆ ನೀಡುವ ಸವಲತ್ತುಗಳು ಪ್ರೊಡಕ್ವಿವ್ ಆಗುತ್ತದೆ. ಮೂರು, ಚುನಾವಣೆ ಗೆಲ್ಲಲು ಜಾತಿ, ಧರ್ಮಗಳನ್ನು ಅವಲಂಭಿಸುವ ಪಕ್ಷಗಳು ಬಡಜನರಿಗೆ ಸವಲತ್ತು ನೀಡುವುದು ಅನಿವಾರ್ಯವೆಂದು ತಿಳಿದಿಲ್ಲ.

ನಿಮಗೆ ಏನು ಅನ್ನಿಸ್ತು?
1 ವೋಟ್