
ಸಂಪ್ರದಾಯವಾದಿಗಳು ಸಮಾಜದಲ್ಲಿ ಮೌಢ್ಯಗಳನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ‘ಪತಿಯ ಆಜ್ಞೆ ಪಾಲಿಸಬೇಕು’ ಎನ್ನುವಂಥ ಬರಹ ಇದಕ್ಕೊಂದು ಸಣ್ಣ ಉದಾಹರಣೆಯಷ್ಟೇ. ಆದರೆ, ಪ್ರತಿ ಸಮಾಜದಲ್ಲೂ ಇಂಥ ನಾನ್ಸೆನ್ಸ್ಗಳು ಎದ್ದು ಕುಣಿಯುವಾಗ ಒದ್ದು ಕಳಿಸುವವರೂ ಇದ್ದೇ ಇರುತ್ತಾರೆ ಎಂಬ ಕಾರಣಕ್ಕೇ ಮನುಷ್ಯ ಜೀವಿ ಇನ್ನೂ ಮನುಷತ್ವದಲ್ಲಿ ನಂಬಿಕೆ ಇರಿಸಿಕೊಳ್ಳಲು ಸಾಧ್ಯವಾಗಿದೆ.
ನಾಗರಿಕ ಎನಿಸಿಕೊಂಡ ಸಮಾಜ ಎಷ್ಟೇ ಮುಂದುವರೆದಿದೆ ಎಂದುಕೊಂಡರೂ ಆಗಾಗ ಮೌಢ್ಯಗಳು ಸಮಾಜದಲ್ಲಿ ಪುನರಾವರ್ತನೆಯಾಗುತ್ತಲೇ ಇರುತ್ತವೆ. ನಿಧಿ ಸಿಗುತ್ತದೆ ಎಂಬ ಕಾರಣಕ್ಕೆ ನರಬಲಿ ಕೊಡುವವರಿಂದ ಹಿಡಿದು ‘ಪತಿಯ ಆಜ್ಞೆ ಪಾಲಿಸಬೇಕು’ ಅನ್ನೋರವರೆಗೂ ಮೌಢ್ಯಗಳು ಸಮಾಜದಲ್ಲಿ ಜೀವಂತವಾಗಿವೆ. ಹಾಗೆ ನೋಡಿದರೆ ಮೌಢ್ಯಗಳು ಮೌಲ್ಯಗಳ ಹೆಸರಲ್ಲಿ ಹೆಚ್ಚೆಚ್ಚು ಪ್ರತಿಷ್ಠಾಪನೆಗೊಳ್ಳುತ್ತಿರುವ ಕಾಲ ಇದು. ಮೌಢ್ಯಗಳನ್ನು ಪ್ರಶ್ನೆ ಮಾಡೋರನ್ನೇ ಸಮಾಜ ಅನುಮಾನದ ಕಣ್ಣಲ್ಲಿ ನೋಡಲು ಶುರು ಮಾಡಿರೋ ಕಾಲ ಇದು. ಹಾಗೆಂದು ನಾವೇನೂ ಗೋಬೆಲ್ಸ್ ಮಹಾನುಭಾವನ ಕಾಲದಲ್ಲಿಲ್ಲ. ಆದರೂ, ಮೌಢ್ಯಗಳನ್ನು ಒಪ್ಪುವ, ಒಪ್ಪಿಸುವ, ಒಪ್ಪಿಕೊಂಡೇ ಮುಂದೆ ಹೋಗುವ ನಾಝಿ ಲಕ್ಷಣಗಳು ಈಗ ನಮ್ಮ ಸಮಾಜದಲ್ಲಿ ಹೆಚ್ಚಾಗುತ್ತಿವೆ.
‘ಸುಳ್ಳನ್ನು ಹಲವು ಬಾರಿ ಹೇಳಿದರೆ ಅದೇ ಸತ್ಯವಾಗುತ್ತದೆ’ ಎಂದಿದ್ದ ನಾಝಿ ಪಕ್ಷದ ಮುಖ್ಯಸ್ಥ ಪ್ರಾಪಗಾಂಡಿಸ್ಟ್ ಜೋಸೆಫ್ ಗೋಬೆಲ್ಸ್. ಈ ಪುಣ್ಯಾತ್ಮನ ಈ ಥಿಯರಿ ಒಂದು ಹಂತಕ್ಕೆ ಕೆಲಸ ಮಾಡೋದು ನಿಜ ಎಂದು ಮನೋವಿಜ್ಞಾನಿಗಳೂ ಒಪ್ಪಿದ್ದಾರೆ. ಈ ಥಿಯರಿಯ ಆಧಾರದ ಮೇಲೆಯೇ ಹಲವು ಥಿಯರಿಗಳೂ ಹುಟ್ಟಿಕೊಂಡಿವೆ. ಮನುಷ್ಯ ಜೀವಿಯ ಮನಸ್ಸಲ್ಲಿ ಭ್ರಮಾಲೋಕವನ್ನು ಸೃಷ್ಟಿ ಮಾಡೋದು ಹೇಗೆ, ಆ ಭ್ರಮೆ ಸುಳ್ಳನ್ನೂ ಸತ್ಯವೆಂದು ಹೇಗೆ ಮನುಷ್ಯ ಜೀವಿಯ ಮನಸ್ಸನ್ನು ಒಪ್ಪಿಸುತ್ತದೆ ಎಂಬುದರ ಸುತ್ತಲೂ ಹಲವು ಸಂಶೋಧನೆಗಳು ನಡೆದು, ಈ ಗೋಬೆಲ್ಸ್ ಮಹಾನುಭಾವನ ಪ್ರಾಪಗಾಂಡ ಕೆಲಸ ಮಾಡೋದು ನಿಜ ಎಂದು ಸಾಬೀತೂ ಆಗಿದೆ. ಇದೇ ಕೆಲಸವನ್ನು ಮೌಢ್ಯ ತುಂಬುವವರೂ ಈಗ ಮಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಹೆಣ್ಣು ಪುರುಷನ ಅಡಿಯಾಳಲ್ಲ; ಸ್ವಾತಂತ್ರ್ಯವೆಂಬುದು ನಮ್ಮ ಮೂಲಭೂತ ಹಕ್ಕು
ಗೋ ಮೂತ್ರದಲ್ಲಿ ಸ್ನಾನ ಮಾಡುವುದು ಚರ್ಮಕ್ಕೆ ಒಳ್ಳೆಯದು ಎನ್ನುತ್ತಿದ್ದ ಸಂಪ್ರದಾಯವಾದಿಗಳು, ಈಗ ರೋಗಗಳಿಗೆ ಔಷಧಿಯಾಗಿ ಗೋ ಮೂತ್ರ ಬಳಸಬೇಕು ಎಂದು ಹೊಸ ಮೌಢ್ಯ ಹಬ್ಬುತ್ತಿದ್ದಾರೆ. ಈ ಅಜ್ಞಾನವನ್ನು ಸಾಬೀತು ಮಾಡಲು ಬೇಕಾದ ವಿಜ್ಞಾನದ ಥಿಯರಿಗಳನ್ನೂ ಅವರೇ ರೂಪಿಸಿ, ಮಂಡಿಸುತ್ತಿದ್ದಾರೆ. ಹೀಗಿರುವಾಗ ಮೌಢ್ಯ ಅನ್ನೋದು ‘ಮೌಢ್ಯದ ವೇಷ’ದಲ್ಲೇ ಬಂದು ಸಮಾಜದಲ್ಲಿ ಕುಣಿದರೂ ಸಮಾಜದ ಜನ ಅದನ್ನು ಮೌಢ್ಯ ಎಂದು ಒಪ್ಪದೇ ಅದನ್ನೇ ಮೌಲ್ಯವಾಗಿ ಸ್ವೀಕರಿಸಿ, ಅದನ್ನು ಮೈ, ಮನಸ್ಸಿಗೆಲ್ಲಾ ಹಚ್ಚಿಕೊಂಡು ಸಂಭ್ರಮಿಸುತ್ತಾರೆ. ಸಮಾಜ ತನ್ನ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳೋದನ್ನು ಬಿಟ್ಟು ಮೌಢ್ಯವನ್ನೇ ಮೌಲ್ಯವಾಗಿ ಆರಾಧಿಸಲು ಮುಂದಾಗುವ ಸಾಮಾಜಿಕ ಹಿನ್ನಡೆಯ ಲಕ್ಷಣಗಳು ಇವು.
ಕಡುಸಂಪ್ರದಾಯದ ಹೆಸರಲ್ಲಿ ಮೌಢ್ಯಗಳನ್ನು ಜಾರಿಯಲ್ಲಿಡಲು ಹವಣಿಸುವ ಸಂಪ್ರದಾಯವಾದಿ ಪ್ರಕ್ರಿಯೆ ಎಲ್ಲಾ ಸಮಾಜದಲ್ಲೂ, ಎಲ್ಲಾ ಧರ್ಮಗಳಲ್ಲೂ ಇದ್ದಿದ್ದೇ. ಇದನ್ನು ಮೀರಿಕೊಳ್ಳಲು ಸಾವಿರಾರು ವರ್ಷಗಳಿಂದಲೂ ಮನುಷ್ಯ ಜೀವಿ ಪ್ರಯತ್ನಿಸುತ್ತಲೇ ಇದೆ. ಆದರೆ, ಇನ್ನೂ ಪೂರ್ತಿಯಾಗಿ ಅದರಿಂದ ಹೊರಬರಲು ಮನುಷ್ಯ ಜೀವಿಗೆ ಸಾಧ್ಯವಾಗಿಲ್ಲ; ಬಹುಶಃ ಆಗುವುದೂ ಇಲ್ಲ. ಯಾಕೆಂದರೆ ಯಾವಾಗೆಲ್ಲಾ ಸಾಧ್ಯವಾಗುತ್ತದೋ ಆಗೆಲ್ಲಾ ಈ ಸಂಪ್ರದಾಯವಾದಿಗಳು ಸಮಾಜದಲ್ಲಿ ಮೌಢ್ಯಗಳನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ‘ಪತಿಯ ಆಜ್ಞೆ ಪಾಲಿಸಬೇಕು’ ಎನ್ನುವಂಥ ಬರಹ ಇದಕ್ಕೊಂದು ಸಣ್ಣ ಉದಾಹರಣೆಯಷ್ಟೇ. ಆದರೆ, ಪ್ರತಿ ಸಮಾಜದಲ್ಲೂ ಇಂಥ ನಾನ್ಸೆನ್ಸ್ಗಳು ಎದ್ದು ಕುಣಿಯುವಾಗ ಒದ್ದು ಕಳಿಸುವವರೂ ಇದ್ದೇ ಇರುತ್ತಾರೆ ಎಂಬ ಕಾರಣಕ್ಕೇ ಮನುಷ್ಯ ಜೀವಿ ಇನ್ನೂ ಮನುಷತ್ವದಲ್ಲಿ ನಂಬಿಕೆ ಇರಿಸಿಕೊಳ್ಳಲು ಸಾಧ್ಯವಾಗಿದೆ.