50 ವರ್ಷದಿಂದಲೂ ಕುಂಟುತ್ತ ಬರುತ್ತಿರುವ 'ವಿಶ್ವ ಪರಿಸರ ದಿನ' ಎಂಬ ಆಚರಣೆ ಮತ್ತು ನಾವು

natural disasters 3

ಇಂದು (ಜೂನ್ 5) ವಿಶ್ವ ಪರಿಸರ ದಿನ. ಬೇಕೋ ಬೇಡವೋ, ಅಂತೂ ಜಗತ್ತಿನಾದ್ಯಂತ ಇದನ್ನು ಆಚರಿಸಲಾಗುತ್ತದೆ. ಹೀಗೆ ವಿಶ್ವದಿನವೊಂದನ್ನು ಆಚರಿಸುವ ಮೂಲಕ ಜಗತ್ತಿಗೆ ಮತ್ತು ಜನರಿಗೆ ಕನಿಷ್ಠ ಮಾಹಿತಿಯನ್ನಾದರೂ ತಲುಪಿಸಬಹುದೆಂಬ ಆಶಯ ವಿಶ್ವಸಂಸ್ಥೆಯದು ಮತ್ತು ಅಂಥದ್ದೇ ಕಕ್ಕುಲಾತಿ ಕಾಳಜಿಯುಳ್ಳ ಜನರದ್ದು. ಆದರೆ, ಇದುವರೆಗೂ ಆಗಿದ್ದೇನು?

ವಿಶ್ವಸಂಸ್ಥೆ ಯಾವ ವಿಷಯ, ಪದ, ಹೆಸರು ಇತ್ಯಾದಿಗಳ ಹಿಂದೆ 'ವಿಶ್ವ'ವನ್ನೂ, ಮುಂದೆ 'ದಿನಾಚರಣೆ'ಯನ್ನೂ ಸೇರಿಸುತ್ತದೋ ಅದಕ್ಕೆ ಕ್ಯಾನ್ಸರ್ ತಗುಲಿದೆ ಮತ್ತು ಉಲ್ಭಣಾವಸ್ಥೆಯಲ್ಲಿದೆ ಎಂದೇ ಅರ್ಥ. ಹೀಗೆ, 'ಪರಿಸರ'ದ ಹಿಂದೆ-ಮುಂದೆ ಈ ಪದಗಳು ಸೇರಿ ಇಲ್ಲಿಗೆ 50 ವರ್ಷಗಳಾದವು. ಪರಿಸರದ ಅವಘಡ, ಆತಂಕ, ಹಾನಿಕಾರಕ ದಾಳಿಗಳು ಎರಡನೇ ವಿಶ್ವಯುದ್ಧದ ಹೊತ್ತಿಗಾಗಲೇ ಅಂಬೆಗಾಲಿಡುತ್ತಿದ್ದವು. ನಂತರದ ಜನಸಂಖ್ಯಾ ಸ್ಫೋಟ, ಕೈಗಾರಿಕಾ ಕ್ರಾಂತಿ, ಆನಂತರದ ಹಸಿರು ಕ್ರಾಂತಿ, ಹಸಿರುನಾಶ ಕ್ರಾಂತಿ, ಶಕ್ತಿ ಕ್ರಾಂತಿ ಮತ್ತಿತ್ಯಾದಿ ಕ್ರಾಂತಿಗಳು ಪರಿಸರದ ಮೇಲೆ ನಿತ್ಯ ಅತ್ಯಾಚಾರ ಎಸಗುತ್ತಿದ್ದರೂ 'ಸಿರಿವಂತರು' ಅವಕ್ಕೆಲ್ಲ ಕುರುಡಾಗಿದ್ದರು. ಏಕೆಂದರೆ, ಅವರೆಲ್ಲ ಶ್ರೀಮಂತರಾಗಿದ್ದೇ ಈ ಕ್ರಾಂತಿಗಳ ನೆಪದಲ್ಲಿ.

ಇಡೀ ಜಗತ್ತಿನ ವಾಯುಮಂಡಲವನ್ನು ತಿಪ್ಪೆಗುಂಡಿಯಾಗಿಸಿದ ಮೇಲೆ ಕೈಗಾರಿಕಾ ಕ್ರಾಂತಿಯೂ, ತಾಯಿಯ ಮೊಲೆಹಾಲಿನಲ್ಲಿ ಡಿಡಿಟಿ ಎಂಬ ಜನ್ಮಾಪಿ ಜೀರ್ಣವಾಗದ ವಿಷವನ್ನು ಕಂಡಮೇಲೆ ಹಸಿರು ಕ್ರಾಂತಿಯೂ, ಆನೆ-ಹುಲಿಗಳ ಸಂತತಿ ಅಪಾಯಕ್ಕೀಡಾದ ಮೇಲೆ ಹಸಿರುನಾಶ ಕ್ರಾಂತಿಯೂ, ಚರ್ನೋಬೆಲ್ ಅಣುಸ್ಥಾವರ ಸಿಡಿದ ಮೇಲೆ ಶಕ್ತಿ ಕ್ರಾಂತಿಯೂ ಇವರ ಕಣ್ಣಿಗೆ ಬಿದ್ದವು. ಆ ಮುಂಚೆ ಇವು ಬೇಡವೆಂದ ಕೂಗುಗಳನ್ನು ನಿರ್ದಾಕ್ಷಿಣ್ಯವಾಗಿ ಹೊಸಕಿಹಾಕಲಾಗಿತ್ತು.

ನೆಲಕ್ಕೇ 'ನೀಲಿರೋಗ' ಹಿಡಿಸಿದ ನೀಲಗಿರಿ ವಿರುದ್ಧದ ಹೋರಾಟ, ಕಾರವಾರದಲ್ಲಿ ಕಾಲೂರಿದ ಕೈಗಾ ಅಣುಸ್ಥಾವರ, ಪಶ್ಚಿಮಘಟ್ಟಗಳನ್ನು ಉಳಿಸಿ ಎಂದ ಘಟ್ಟರಹಿತ ಕೂಗು, ಹೊಲಸಿನ ಹರಿವುಗಳಾಗುತ್ತಿದ್ದ ತುಂಗೆ-ಕಾವೇರಿಯರ ಮೇಲಿನ ಕೈಗಾರಿಕಾ ಅತ್ಯಾಚಾರ... ಇವು ನಮ್ಮ ನಾಡಿನ ಮಟ್ಟಿಗೆ ಪ್ರಭುತ್ವದ ಶ್ರೀಮಂತ ಪರ ಒಲವಿಗೆ ಕೆಲವು ಉದಾಹರಣೆಗಳು ಮಾತ್ರ.

Image
natural disasters 6
ಅರಣ್ಯ ನಾಶ

ಇವೆಲ್ಲ ಅರ್ಧ ಶತಮಾನವನ್ನೂ ಮೀರಿದ ಕೂಗುಗಳು. ವಿಶ್ವ ಪರಿಸರ ದಿನಕ್ಕೂ ಅರ್ಧ ಶತಮಾನ ತುಂಬಿದೆ. ಇವೆಲ್ಲಾ ನಿಂತು ಹೋಗಿವೆಯೇ? ಕನಿಷ್ಠ ಸುಧಾರಿಸಿವೆಯೇ? ಇಲ್ಲ. ಆದರೆ, ಇಂಥ ಪ್ರಶ್ನೆಗಳು ನಿಮ್ಮಲ್ಲಿ ಹುಟ್ಟುವುದೇ ಆದಲ್ಲಿ, ನೀವು ಮತಿಭ್ರಮಣೆಯ ಸ್ಥಿತಿಗೆ ಹತ್ತಿರದಲ್ಲೀರಿ ಎಂದೇ ಭಾವಿಸಲಾಗುತ್ತದೆ. ಹಿಂದಿಯ ಗದ್ಯ ಕವಿ ಸಂಪತ್ ಸರಳ್ ಹೇಳುತ್ತಾರೆ: "ಹೇಳುವವನು ಮತ್ತು ಕೇಳುವವನು ಇಬ್ಬರಿಗೂ ಹೇಳಿದ್ದು ಸುಳ್ಳು ಎಂದು ಮೊದಲೇ ಗೊತ್ತಿದ್ದಲ್ಲಿ ಅದು ಪಾಪವಲ್ಲ!" ಹಾಗಾಗಿ ಇಲ್ಲಿ ನಾವು ಪಾಪಿಗಳಲ್ಲ!

ಆದರೆ, ಈಗ ಮೇಲಿನೆಲ್ಲ ಪಾಪಗಳು ಕೂಡಿ ಈಗ ಜಗತ್ತು ಇನ್ನೊಂದು ಮಹಾ ಪಾಪದ ಫಲಕ್ಕೆ ಮುಖಾಮುಖಿ ಆಗುತ್ತಿದೆ. ಪ್ರತಿದಾಳಿ ಈಗಾಗಲೇ ಆರಂಭವಾಗಿದೆ. ಕಳೆದ ಏಳೆಂಟು ದಶಕಗಳ ಕಾಲ ಮನುಕುಲ ಪ್ರಕೃತಿಯ ಮೇಲೆ ಮಾಡಿದ್ದ ದಾಳಿಗೆ ಇದು ಉತ್ತರ. ಅದಕ್ಕೆ ಹೆಸರು ಕ್ಲೈಮೇಟ್ ಚೇಂಜ್, ಹವಾಮಾನ ಬದಲಾವಣೆ, ಹವಾಮಾನ ವೈಪರೀತ್ಯ, ತಾಪಮಾನ ಹೆಚ್ಚಳ ಇತ್ಯಾದಿ.

ಈಗ ನಾವು ಮಾತನಾಡುತ್ತಿರುವುದು ಒಂದು ಊರು, ನಗರ, ನದಿ, ಸರೋವರ, ಭೂಪ್ರದೇಶ, ಬೆಟ್ಟ, ಬಯಲುಗಳ ಮಾತಲ್ಲ. ಇಡೀ ಜಗತ್ತನ್ನು ಕ್ಷಣಾರ್ಧದಲ್ಲಿ ತನಗನಿಸಿದಂತೆ ಕಾಡಬಲ್ಲ, ಕಾಪಾಡಬಲ್ಲ, ಪಂಚಭೂತಗಳಿಂದ ಹುಟ್ಟಿ, ಪಂಚಭೂತಗಳನ್ನು ಪ್ರಭಾವಿಸಬಲ್ಲ ಮತ್ತು ಊಹಾತೀತವಾದ ಸಾಮೂಹಿಕ ಹಾನಿ ಮಾಡಬಲ್ಲ ಹವಾಮಾನದ ಬಗ್ಗೆ.

Image
natural disasters 7
ಮರಳ ಮಾರುತ

ಈ ಸಂಗತಿಯ ಇತಿಹಾಸವನ್ನು ಒಂದಿಷ್ಟು ಕೆದಕುವುದಾದರೆ, ಪರಿಸರ ದಿನಕ್ಕಿಂತ 23 ವರ್ಷ ಮುಂಚಿತವಾಗಿ, ಅಂದರೆ, 1950ರ ಮಾರ್ಚ್ 23ರಂದು 'ವಿಶ್ವ ಹವಾಮಾನ ದಿನ' ಘೋಷಣೆಯಾಗಿತ್ತು. ಅಂದಿನಿಂದಲೂ ಇದನ್ನು ಆಚರಿಸಲಾಗುತ್ತಿದೆ. ಮತ್ತೆ 1972ರಲ್ಲಿ ಕ್ಲಬ್ ಆಫ್ ರೋಮ್ ಮಂಡಿಸಿದ ವರದಿಯನ್ನು ಆಧರಿಸಿದ ಜಾಗತಿಕ ಒತ್ತಾಯ, ಕಾಳಜಿಗಳನ್ನು ಪರಿಗಣಿಸಿ, ಜಾಗತಿಕ ಹವಾಮಾನ ಸಂಘಟನೆಯು ತನ್ನ ಮಾತೃಸಂಸ್ಥೆಯಾದ ವಿಶ್ವಸಂಸ್ಥೆಯ ಮೂಲಕ ಇಂಗಾಲಾಮ್ಲದ ನಿಯಂತ್ರಣಕ್ಕೆ ಕರೆ ನೀಡಿತು. “ಇದು ಇಂದಿನ ತುರ್ತು,” ಎಂದು ಹೇಳಿತು. ಹೌದು, ನಾವು ಆಭಿವೃದ್ಧಿಯ ಹೆಸರಿನಲ್ಲಿ ಮಾಡಿದ್ದ ಎಲ್ಲ ಕ್ರಾಂತಿಗಳೂ ಹವಾಮಾನವನ್ನು ಹದಗೆಡಿಸಿದ್ದವು. ಆದರೆ, ವಿಶ್ವ ದಿನಾಚರಣೆಗಳು 'ಹವಾಮಾನಕ್ಕೆ' ಖುಷಿ ಕೊಟ್ಟಂತಿಲ್ಲ. ಮುನಿದು, ಕಳೆದೆರಡು ದಶಕಗಳಿಂದ ಅದು ಮರುದಾಳಿ ಆರಂಭಿಸಿದೆ. ಪರಿಣಾಮಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಅಕಾಲಿಕ ಅತ್ಯಧಿಕ ಮಳೆ ಮತ್ತು ಕಡಿಮೆಯಾಗುತ್ತಿರುವ ಮಳೆ, ಹೆಚ್ಚುತ್ತಿರುವ ಬಿಸಿಗಾಳಿ, ಪ್ರವಾಹಗಳು, ಬಿರುಗಾಳಿಗಳು ಸಾಮಾನ್ಯವಾಗಿ ಜಗತ್ತನ್ನು, ಮುಖ್ಯವಾಗಿ ರೈತರನ್ನು, ಇನ್ನೂ ಮುಖ್ಯವಾಗಿ ಬಡಜನರನ್ನು ಈಗಾಗಲೇ ಕಂಗೆಡಿಸಿವೆ.

ವಿಶ್ವಬ್ಯಾಂಕಿನ ಈಗಿನ ಅಂದಾಜಿನಂತೆ, ದಕ್ಷಿಣ ಏಷ್ಯಾದ ಎಲ್ಲ ದೇಶಗಳಲ್ಲಿ ಎಲ್ಲ ಬೆಳೆಗಳ ಇಳುವರಿ ಶೇಕಡ 30ರಷ್ಟು ಕುಸಿಯುತ್ತಿದೆ. ಉತ್ತರ ಭಾರತದ ರಾಜ್ಯಗಳು ಮತ್ತು ಬಾಂಗ್ಲಾದೇಶ ಈ ತಿಕ್ಕಲು ಮಳೆಯ ಪರಿಣಾಮಗಳಿಗೆ ಬೃಹತ್ ಪ್ರಮಾಣದಲ್ಲಿ ಬಲಿಯಾಗಲಿವೆ. ಉದಾಹರಣೆಗೆ, ಭಾರತದಲ್ಲಿ ಈಗಾಗಲೇ ಹೆಚ್ಚಿರುವ 1.5 ಡಿಗ್ರಿ ಸೆಲ್ಷಿಯಸ್ ತಾಪಮಾನ ಆ ಭೂಭಾಗಗಳಲ್ಲಿ ಮಳೆ ಸುರಿತದ ಪ್ರಮಾಣವನ್ನು ಎರಡು ಮಿಲಿಮೀಟರಿನಷ್ಟು ಕಡಿಮೆ ಮಾಡಿದೆ. ಇದರ ಪರಿಣಾಮ, ಭತ್ತದ ಇಳುವರಿ ಶೇಕಡ 3ರಿಂದ 15ರವರೆಗೆ ಕುಸಿಯುತ್ತದೆ. ಇಷ್ಟೇ ಅಲ್ಲದೆ, ಈ ಹವಾಮಾನ ಬದಲಾವಣೆ ಹಸಿರುಮನೆ ಅನಿಲಗಳ ವೃದ್ಧಿಯನ್ನು ಪ್ರಚೋದಿಸುತ್ತದೆ. ಇದು ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ವಿವಿಧ ರೀತಿಯಲ್ಲಿ ವರ್ತಿಸುತ್ತದೆ. ಒಟ್ಟಾರೆ, ಆ ಎಲ್ಲ ಪ್ರದೇಶಗಳಲ್ಲಿ ಬೆಳೆಗಳ ಇಳುವರಿಯನ್ನು ಅಗಾಧ ಪ್ರಮಾಣದಲ್ಲಿ ಕುಂಟಿತಗೊಳಿಸುತ್ತದೆ.

Image
JUNE 05

ಯುನೈಟೆಡ್ ಕಿಂಗ್‌ಡಮ್‌ನ ಹವಾಮಾನ ಇಲಾಖೆ ಅಂದಾಜಿಸಿರುವಂತೆ, ಪಾಕಿಸ್ತಾನದ ಒಟ್ಟಾರೆ ಸಾಮಾನ್ಯ ಕೃಷಿ ಇಳುವರಿ ಶೇಕಡ 50ರಷ್ಟು ಕುಸಿಯಲಿದೆ. ಅದೇ ಸಂದರ್ಭದಲ್ಲಿ ಯೂರೋಪಿನ ದೇಶಗಳಲ್ಲಿ ಮುಸುಕಿನ ಜೋಳದ ಉತ್ಪಾದನೆ ಶೇಕಡ 25ರಷ್ಟು ಹೆಚ್ಚಾಗುತ್ತದೆ. ಇದರ ಅರ್ಥ - ಅಲ್ಲಿ ಬೇರೆ ಬೆಳೆಗಳು ಇಳುವರಿಯಲ್ಲಿ ವಿಫಲ ಆಗುತ್ತವೆ ಎಂದಾಗುತ್ತದೆ. ಹವಾಮಾನದ ಈ ಎಲ್ಲ ಪರಿಣಾಮಗಳ 'ಇನ್ ಬಿಲ್ಟ್ ಪ್ಯಾಕೇಜ್'ನ ಇನ್ನೊಂದು ಮಹಾನ್ ಕೊಡುಗೆ ಎಂದರೆ, (ವೈರಸ್, ಬ್ಯಾಕ್ಟೀರಿಯಾ ಇತ್ಯಾದಿಗಳೂ ಸೇರಿ) ರೋಗಕಾರಕ ಕ್ರಿಮಿ-ಕೀಟಗಳ ವೃದ್ಧಿ. ಒಟ್ಟಾರೆ ಫಲಿತಾಂಶವೆಂದರೆ, ಕೃಷಿ ಮತ್ತು ಕೃಷಿಕನ ನಾಶ. ಅಂತಿಮವಾದ ಪರಿಣಾಮ ಎಂದರೆ, ಪ್ರತಿಯೊಂದು ಜೀವನಾವಶ್ಯಕ ಉತ್ಪನ್ನಗಳ ಕುಸಿತ ಮತ್ತು ಹಾಹಾಕಾರ.

ಇನ್ನು, ತರಕಾರಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬರುವುದಾದರೆ, ಅವುಗಳಿಗೂ ಉಳಿಗಾಲವಿಲ್ಲ. ಅತಿಯಾದ ಬಾಷ್ಪೀಕರಣದ ಸಮಸ್ಯೆಯಿಂದಾಗಿ ಅವು ಬಳಲಿಹೋಗುತ್ತವೆ. ಹುಳಿ ಜಾತಿಯ ಗಿಡಗಳಂತೂ ಲೆಕ್ಕಾಚಾರ ಮಾಡಿ ಕಾಯಿ ಬಿಡುತ್ತವೆ. ಒಂದು ಅಧ್ಯಯನ ಹೇಳುವಂತೆ ತಾಪಮಾನವು ಹುಳಿ ಜಾತಿಯ ಬೆಳೆಗಳ ಹೂವು ತಳೆಯುವ ಸಾಮರ್ಥ್ಯವನ್ನೇ ಕುಂದಿಸಿ ತೀವ್ರವಾಗಿ ಕಾಡುತ್ತದೆ. ಹೂವು ಕಾಯಿಯಾದರೂ, ಆ ಕಾಯಿಗಳು ಬಿಸಿಲಿನ ಝಳಕ್ಕೆ ಬಿರುಕು ಬಿಡುತ್ತವೆ. ಎಲ್ಲ ತರಕಾರಿ ಬೆಳೆಗಳೂ ನಿರೀಕ್ಷೆ ಮೀರಿ ಮುದುಡಿಕೊಳ್ಳುತ್ತವೆ. ಇಲ್ಲಿ ಮಳೆ ಮತ್ತು ಪ್ರವಾಹಗಳಿಗೆ ಮೊದಲ ಬಲಿ ಟೊಮ್ಯಾಟೊ.

ಬೆಳೆಗಳಿಗೆ ಹಾನಿಕಾರಕವಾದ ಇನ್ನೊಂದು ಸಂಗತಿ ಎಂದರೆ - ಇಥಿಲೀನ್. ಇದು ಬೆಳೆಗಳಲ್ಲಿ ಅಪಾರ ಪ್ರಮಾಣದಲ್ಲಿ ಸಂಗ್ರಹವಾಗಿ ಇಡೀ ಯೋಜನೆಯನ್ನು ಹದಗೆಡಿಸುತ್ತದೆ. ಇನ್ನು, ಓಝೋನ್ ಸಾಂದ್ರೀಕರಣ ದಿನಕ್ಕೆ 50 ಪಿಪಿಬಿ (ಹತ್ತು ಲಕ್ಷದಲ್ಲಿ ಒಂದು ಪಾಲು) ದಾಟಿತೆಂದರೆ, ತರಕಾರಿಗಳ ಇಳುವರಿ ಶೇಕಡ 5ರಿಂದ 15ರಷ್ಟು ಕುಸಿಯಿತೆಂದೇ ಅರ್ಥ (ವರದಿ: ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್ ರಿಸರ್ಚ್).

Image
natural disasters 4
ಭೂಕಂಪ

ಈಗ ಹೇಳಿ... ಎಲ್ಲ ಪರಿಣಾಮಗಳು ಜಗತ್ತಿನಲ್ಲಿ ಯಾರನ್ನು ಕಾಡುತ್ತವೆ? ಎಲಾನ್ ಮಸ್ಕ್, ಜೆಫ್ ಬಿಜೋ಼ಸ್, ಮುಖೇಶ್ ಅಂಬಾನಿ, ಗೌತಮ್ ಅದಾನಿ, ಶಿವ್ ನಾಡಾರ್, ಲಕ್ಷ್ಮಿ ಮಿತ್ತಲ್, ಕುಮಾರ್ ಬಿರ್ಲಾ, ಊಹುಂ, ಇವರ್ಯಾರೂ ಬಲಿಯಾಗುವುದಿಲ್ಲ! ಇವರು ಇನ್ನೂ ಹೆಚ್ಚು ಶ್ರೀಮಂತರಾಗುತ್ತಾರೆ. ಏಕೆಂದರೆ, ಬಹುಪಾಲು ವ್ಯಾಪಾರ ನಡೆಯುವುದೇ ಮನುಕುಲದ ದುರಂತಗಳ ಮೇಲೆ. ಇದಕ್ಕೆ ಉದಾಹರಣೆಯಾಗಿ ನೀವು ಕೋವಿಡ್ ಅವಧಿಯನ್ನು ನೆನಪಿಸಿಕೊಂಡರೆ ಸಾಕು.

ಒಂದು ಕಡೆ, ಕೋವಿಡ್ ಅಲೆಯಲ್ಲಿ ಭಾರತದ ಕೋಟ್ಯಂತರ ಬಡಜನರು ಹೊಟ್ಟೆಗೆ ಹಿಟ್ಟಿಲ್ಲದೆ ನೂರಾರು ಮೈಲಿ ನಡೆದು ಬಳಲಿ ಬೆಂಡಾಗಿಹೋದರು. ಕೂಲಿ ಕಳೆದುಕೊಂಡ ಇನ್ನೂ ಕೋಟ್ಯಂತರ ಮಂದಿ ಒಂದು ಹೊತ್ತಿನ ಅನ್ನಕ್ಕಾಗಿ ಪರಿತಪಿಸಿದರು. ಸಕಾಲಿಕ ಚಿಕಿತ್ಸೆ, ಆಮ್ಲಜನಕದ ಕೊರತೆಯಿಂದ ಲಕ್ಷಾಂತರ ಮಂದಿ ಕೊನೆಯುಸಿರೆಳೆದರು. ಆದರೆ ಇನ್ನೊಂದೆಡೆ, ಇದೇ ದೇಶದ ಕೋಟ್ಯಧೀಶರ ಸಂಪತ್ತು ಕೇವಲ ಮೊದಲ ನಾಲ್ಕು ತಿಂಗಳಲ್ಲಿ (2020ರ ಏಪ್ರಿಲ್-ಜುಲೈ ಅವಧಿ) 423 ಬಿಲಿಯನ್ ಡಾಲರ್; ಅಂದರೆ, 32,830,933,500 ರೂಪಾಯಿಯಷ್ಟು ವೃದ್ಧಿಯಾಯಿತು (ಮೂಲ: ಬಿಲಿಯನೇರ್ಸ್ ಇನ್ಸೈಟ್ಸ್ ರಿಪೋರ್ಟ್-20). ಇದು ಭಾರತದ ಮತ್ತು ಜಗತ್ತಿನ ವಾಸ್ತವ.

ಈಗ ಯೋಚಿಸಿ, ಈ ಕೂಡಲೇ ನಾವು ಇಡೀ ಭೂಮಂಡಲವನ್ನು ಇಂಗಾಲರಹಿತ ಮಾಡಿದರೂ, ಈಗಾಗಲೇ ವಾತಾವರಣವನ್ನು ಆವರಿಸಿಕೊಂಡಿರುವ ಹಸಿರುಮನೆ ಅನಿಲಗಳ ಉತ್ಸರ್ಜನೆಗಳ ಪರಿಣಾಮದಿಂದಾಗಿ 2040ರ ಹೊತ್ತಿಗೆ ತಪ್ಪಿಸಿಕೊಳ್ಳಲಾಗದ ಗುರುತರ ಪರಿಣಾಮಗಳಿಗೆ ಈಡಾಗುತ್ತೇವೆ.

Image
natural disasters 5
ಕೋವಿಡ್ ಮಹಾ ವಲಸೆ (ಭಾರತ)

ಐಪಿಸಿಸಿ (ಇಂಟರ್ ಗೌರ್ನಮೆಂಟಲ್ ಪ್ಯಾನಲ್ ಆನ್ ಕ್ಲೈಮೆಟ್ ಚೇಂಜ್) ಅಂದಾಜಿಸಿರುವಂತೆ, ಕೇವಲ ಒಂದು ದಶಕದ ಒಳಗೆ 3.20 ಕೋಟಿಯಿಂದ 13.20 ಕೋಟಿವರೆಗಿನ ಜನರು ಅತಿರೇಕದ ಬಡತನಕ್ಕೆ ತಳ್ಳಲ್ಪಡುತ್ತಾರೆ. ಅಹಾರ ಕೊರತೆಯ ಅಪಾಯದೊಂದಿಗೆ ತಾಪ ಸಂಬಂಧಿತ ಸಾವುಗಳ ಸಂಖ್ಯೆ ಹೆಚ್ಚುತ್ತದೆ. ಹೃದಯ ಮತ್ತು ಮಾನಸಿಕ ರೋಗಗಳ ಸವಾಲುಗಳು ಉಲ್ಭಣಗೊಳ್ಳುತ್ತವೆ.

2030ರ ಹೊತ್ತಿಗೆ ಹೆಚ್ಚುವ ಪ್ರವಾಹಗಳ ಕಾರಣದಿಂದಾಗಿ 15 ವರ್ಷ ವಯೋಮಾನದೊಳಗಿನ 48,000 ಮಕ್ಕಳು ಅತಿಸಾರಕ್ಕೆ ತುತ್ತಾಗಿ ಜೀವ ಬಿಡಲಿದ್ದಾರೆ. ಜೀವಿ ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆ ನಾಟಕೀಯ ಬದಲಾವಣೆಗಳಿಗೆ ಈಡಾಗುವುದಲ್ಲದೆ, ಸಮುದ್ರಗಳ ಮಟ್ಟವನ್ನು ನಿಯಂತ್ರಿಸುವಲ್ಲಿ ಮ್ಯಾಂಗ್ರೋವ್ ಕಾಡುಗಳು ವಿಫಲವಾಗುತ್ತವೆ. ಫಲಿತಾಂಶ - ಸಮುದ್ರ ಹಿಮವನ್ನು ಆಧರಿಸಿರುವ ಜೀವಿಗಳು ಮತ್ತು ಅಪಾರ ಪ್ರಮಾಣದ ಮರಗಳು ವಿನಾಶವಾಗುತ್ತವೆ.

ಈ ಲೇಖನ ಓದಿದ್ದೀರಾ?: ತಜ್ಞರಿಗೆ 5 ಪ್ರಶ್ನೆ | ಹಸಿವಿನ ಸೂಚ್ಯಂಕದಲ್ಲಿ ಮತ್ತೆ ಕುಸಿದ ಭಾರತ

ಇವೆಲ್ಲದರ ಪರಿಣಾಮಗಳು ಭಾರತವನ್ನು ಹೇಗೆ ಬಾಧಿಸಬಹುದು ಎಂಬುದಕ್ಕೆ ಒಂದು ಸೂತ್ರೀಕೃತ ಉದಾಹರಣೆ ಎಂದರೆ, ಭಾರತದ ಗೋಧಿ ಇಳುವರಿ ಈ ವರ್ಷ ಶೇಕಡ ಆರರಷ್ಟು ಕಡಿಮೆಯಾಗಿದೆ. ಆಹಾರ ಧಾನ್ಯಗಳ ಬೆಲೆ ಪ್ರಸ್ತುತ ಯಾವ ಮಟ್ಟದಲ್ಲಿದೆ ಎಂದು ಎಲ್ಲರಿಗೆ ತಿಳಿದಿದೆ. ಆಹಾರ ಪದಾರ್ಥಗಳ ಬೆಲೆ ಹೆಚ್ಚಿದಂತೆಲ್ಲ ಬಡಜನರ ಸಂಕಟಗಳೂ ಹೆಚ್ಚುತ್ತವೆ. ಅಂಥದ್ದೊಂದು ಸ್ಥಿತಿ 'ರಾಷ್ಟ್ರೀಯ'ವಾದಾಗ ಬಡಜನರು ಎಂಥ ಸಂಕಟಗಳಿಗೆ ಮುಖಾಮುಖಿ ಆಗುತ್ತಾರೆ ಎಂಬ ಮಾದರಿಯನ್ನು ಕೋವಿಡ್ ನಮಗೆ ತೋರಿಸಿದೆ. ಇನ್ನೂ ಒಂದಂಶವನ್ನು ನೀವು ಗಮನಿಸಿರಬಹುದು; ಆ ಅವಧಿಯಲ್ಲಿ ಯಾವುದೇ ಸಂಗತಿ ಜನಸಾಮಾನ್ಯರ ನಿಯಂತ್ರಣದಲ್ಲಿ ಇರಲಿಲ್ಲ! 125 ಕೋಟಿ ಜನ ಯಾರೋ 40-50 ಜನ ತೆಗೆದುಕೊಳ್ಳುವ ನಿರ್ಧಾರಕ್ಕೆ ರಾತ್ರಿ ಎಂಟು ಗಂಟೆ ಆಗುವುದನ್ನು ಕಾಯುತ್ತ ಕುಳಿತಿರುತಿದ್ದರು. ಇನ್ನು ಮುಂದೆಯೂ ಎಂಥದ್ದೇ ದುರಂತಕ್ಕೆ ದೇಶ ಮುಖಾಮುಖಿ ಆದರೂ ಇದೇ ಪರಿಸ್ಥಿತಿ ನಮ್ಮದಾಗಿರುತ್ತದೆ. ಏಕೆಂದರೆ, 'ಫೋರ್ಬ್ಸ್' ನಿಯತಕಾಲಿಕೆ ಹೇಳುವಂತೆ, ಭಾರತದ ಶೇಕಡ 42.5 ಭಾಗ ರಾಷ್ಟ್ರೀಯ ಸಂಪತ್ತು ಕೇವಲ ಶೇಕಡ 1ರಷ್ಟು ಜನರ ಕೈಯಲ್ಲಿದೆ. ಇನ್ನು, ತಳದಲ್ಲಿರುವ ಶೇಕಡ 50 ಭಾಗ ಜನಸಂಖ್ಯೆ ಕೇವಲ ಶೇಕಡ 2.8ರಷ್ಟು ರಾಷ್ಟ್ರೀಯ ಸಂಪತ್ತು ಹೊಂದಿದೆ. ಆಕ್ಸ್‌ಫಾಮ್ ವರದಿಯ ಪ್ರಕಾರ, ದೇಶದ ಶೇಕಡ 10ರಷ್ಟು ಜನಸಂಖ್ಯೆಯ ಕೈಯಲ್ಲಿ ಶೇಕಡ 74.3ರಷ್ಟು ರಾಷ್ಟ್ರೀಯ ಸಂಪತ್ತು ಬಿದ್ದಿದೆ. ಉಳಿದ 90 ಭಾಗ ಜನಸಂಖ್ಯೆಯ ಕೈಯಲ್ಲಿ ಉಳಿದಿರುವುದು ಕೇವಲ ಶೇಕಡ 25.7ರಷ್ಟು ಸಂಪತ್ತು ಮಾತ್ರ.

ಈಗ ಹೇಳಿ... ನಾವು ಈ ವಿಶ್ವ ಪರಿಸರ ದಿನ, ವಿಶ್ವ ಹವಾಮಾನ ದಿನ ಇತ್ಯಾದಿ 'ವಿಶ್ವ ದಿನ'ಗಳನ್ನು ಹೇಗೆ ಆಚರಿಸಬೇಕು? ಯಾವ ನಿಲುವುಗಳ ಮೂಲಕ ಆಚರಿಸಬೇಕು? ನಮ್ಮ ಆಹಾರ ಭದ್ರತೆಯನ್ನು ನಾವು ನಿಜಕ್ಕೂ ಕಾಪಾಡಿಕೊಳ್ಳುವ ಸಾಧ್ಯತೆ ಇದೆಯೇ? ಇದ್ದರೆ ಅದನ್ನು ಹೇಗೆ ಸಾಧಿಸಬಹುದು?

ನಿಮಗೆ ಏನು ಅನ್ನಿಸ್ತು?
3 ವೋಟ್