ಮಂಡ್ಯ | ಅಕ್ರಮ ಕಲ್ಲು ಸಾಗಿಸುತ್ತಿದ್ದ ಲಾರಿ ತಡೆದ ಅಧಿಕಾರಿಗಳ ಮೇಲೆ ಮರ್ಡರ್ ಕೇಸ್‌ ಬುಕ್ ಮಾಡಿಸುತ್ತೇನೆಂದ ಮೇಲುಕೋಟೆ ಶಾಸಕ

  • ಶಾಸಕರ ಬೆದರಿಕೆಗೆ ಹೆದರಿ ಲಾರಿಗಳನ್ನು ಬಿಟ್ಟು ಕಳುಹಿಸಿದ ಅಧಿಕಾರಿಗಳು
  • ಅಧಿಕಾರಿಗಳ ಕ್ರಮ ಪ್ರಶ್ನಿಸಿ ಕಛೇರಿಗೆ ಮುತ್ತಿಗೆ ಹಾಕಿದ ರೈತ ಸಂಘ

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕಟ್ಟೇರಿ ಬಳಿ ಅಕ್ರಮ ಕಲ್ಲು ಸಾಗಿಸುತ್ತಿದ್ದ ಲಾರಿಗಳನ್ನು ತಡೆದ ಸರ್ಕಾರೀ ಅಧಿಕಾರಿಗಳಿಗೆ 'ಮರ್ಡರ್ ಕೇಸ್ ಫಿಟ್ ಮಾಡಿಸ್ತೇನೆ, ಹುಷಾರ್' ಎಂದು ಮೇಲುಕೋಟೆ ಶಾಸಕ ಪುಟ್ಟರಾಜು ಅವರು ಹೇಳಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಮೂರು ದಿನಗಳ ಹಿಂದೆ ಕೆಆರ್‍‌ಎಸ್ ಅಣೆಕಟ್ಟೆಗೆ ಸುತ್ತಮುತ್ತಲಿನ ಗಣಿಗಾರಿಕೆಯಿಂದ ತೊಂದರೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಲು ಟ್ರಯಲ್ ಬ್ಲಾಸ್ಟ್ ಮಾಡಲು ಯೋಜಿಸಲಾಗಿತ್ತು. ರೈತಸಂಘ ಮತ್ತು ಇತರರ ಹೋರಾಟದಿಂದ ಅದನ್ನು ಜಿಲ್ಲಾಡಳಿತ ನಿಲ್ಲಿಸಿತ್ತು. ಈ ಭಾಗದ ಅಕ್ರಮ ಗಣಿಗಾರಿಕೆಯ ಹಿಂದೆ ಶಾಸಕ ಪುಟ್ಟರಾಜು ಅವರೇ ಇದ್ದಾರೆಂಬ ಆರೋಪ ಬಹಳ ಕಾಲದಿಂದ ಕೇಳಿಬರುತ್ತಿದೆ.

ರಾಜ್ಯದ ಕೆಲವು ಪ್ರದೇಶಗಳಲ್ಲಿ ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಹಾಗೂ ಇದನ್ನು ನಿಯಂತ್ರಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿರುವಂತಹ ಸುದ್ದಿಗಳು ಕೇಳಿ ಬರುತ್ತಿರುತ್ತವೆ. ಆದರೆ, ಈ ರೀತಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿ ಅನಧಿಕೃತವಾಗಿ ಸಾಗಿಸುತ್ತಿದ್ದ ಟಿಪ್ಪರ್‌ಗಳನ್ನು ನಿಲ್ಲಿಸಿದ ಅಧಿಕಾರಿಗಳ ವಿರುದ್ಧ ಶಾಸಕರು ಕಿಡಿ ಕಾರಿದ್ದು, ಅವರ ಮೇಲೆಯೇ ಮರ್ಡರ್ ಕೇಸ್‌ ದಾಖಲಿಸುವುದಾಗಿ ಅವಾಜ್‌ ಹಾಕಿದ್ದಾರೆ. 

ಪಾಂಡವಪುರ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿ, ಅನಧಿಕೃತವಾಗಿ ಕಲ್ಲು ಸಾಗಾಣಿಕೆ ಮಾಡುತ್ತಿದ್ದ 10ಕ್ಕೂ ಹೆಚ್ಚು ಟಿಪ್ಪರ್‌ಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಡೆದು ನಿಲ್ಲಿಸಿರುತ್ತಾರೆ.

Image

ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕರಾದ ಪುಟ್ಟರಾಜು “ಯಾರನ್ನು ಕೇಳಿ ಲಾರಿಗಳನ್ನು ತಡೆಹಿಡಿದಿದ್ದೀರಿ, ಈ ಗಾಡಿಗಳಿಗೆ ಏನಾದರೂ ಸಮಸ್ಯೆ ಮಾಡಿದರೆ, ನಿಮ್ಮ ಮೇಲೆ ಮರ್ಡರ್‌ ಕೇಸ್‌ ಬುಕ್‌ ಮಾಡಿಸುವುದಾಗಿ” ಬೆದರಿಕೆ ಹಾಕಿದ್ದಾರೆ. 

ಇದಕ್ಕೆ ಹೆದರಿದ ಅಧಿಕಾರಿಗಳು ಎಲ್ಲ ಲಾರಿಗಳನ್ನು ಬಿಟ್ಟು ಕಳುಹಿಸಿದ್ದಾರೆ. ಅಧಿಕಾರಿಗಳ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು 4 ಲಾರಿಗಳಿಗೆ ಮಾತ್ರ ಪರವಾನಿಗೆ ಇದ್ದು, ಉಳಿದ ಲಾರಿಗಳನ್ನು ಪರವಾನಿಗೆ ಇಲ್ಲವೆಂಬ ಮಾಹಿತಿ ಇದ್ದರೂ, ನೀವು ಏಕೆ ಲಾರಿಗಳನ್ನು ಬಿಟ್ಟು ಕಳುಹಿಸಿದ್ದೀರಿ”. ಎಂದು ಪ್ರಶ್ನಿಸಿ ಗಣಿ ಮತ್ತು ಭೂ ವಿಜ್ಞಾನ ಕಛೇರಿಗೆ ಮುತ್ತಿಗೆ ಹಾಕಿದ್ದಾರೆ. 

ಈ ಸುದ್ದಿ ಓದಿದ್ದೀರಾ? : ಮಂಡ್ಯ | ದೂರು ಹಿಂಪಡೆಯದಿದ್ದರೆ ಕೊಲೆಯಾಗುತ್ತೀರಿ ಎಂದು ಪತ್ರಕರ್ತನಿಗೆ ಜೀವ ಬೆದರಿಕೆ

ಇದಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು "ಶಾಸಕರು ನಮ್ಮ ಮೇಲೆ ಬೆದರಿಕೆ ಹಾಕುತ್ತಾರೆ, ನಾವು ಏನು ಮಾಡಲಾಗುತ್ತದೆ" ಎಂದು ಹಾರಿಕೆಯ ಉತ್ತರ ನೀಡಿದ್ದಾರೆಂದು ರೈತ ಸಂಘದ ಮುಖಂಡ ಲಿಂಗಪ್ಪಾಜಿ ಈ ದಿನ.ಕಾಮ್‌ ಗೆ ಮಾಹಿತಿ ನೀಡಿದರು.

ಅಧಿಕಾರಿಗಳ ಈ ನಿರ್ಧಾರ ಮತ್ತು ಶಾಸಕರ ದಬ್ಬಾಳಿಕೆ ವಿರುದ್ಧ ಪೋಲಿಸ್‌ ವರಿಷ್ಠಾಧಿಕಾರಿಗಳಿಗೆ ರೈತ ಸಂಘದವರು ದೂರು ಸಲ್ಲಿಸಿದ್ದಾರೆ. ಶಾಸಕ ಪುಟ್ಟರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಗಣಿ ಇಲಾಖೆಯ ಅಧಿಕಾರಿ ಪದ್ಮಜಾ ಅವರನ್ನು ಸಂಪರ್ಕಿಸಿ ಅವರ ಉತ್ತರ ಪಡೆಯಲು ಈದಿನ.ಕಾಮ್ ಪ್ರಯತ್ನಿಸುತ್ತಿದೆ. ಅವರು ಪ್ರತಿಕ್ರಿಯಿಸಿದ ನಂತರ ಇಲ್ಲಿ ಅಪ್‌ಡೇಟ್ ಮಾಡಲಾಗುವುದು.

ನಿಮಗೆ ಏನು ಅನ್ನಿಸ್ತು?
4 ವೋಟ್