ರೈತ ನಾಯಕ ಪುಟ್ಟಣ್ಣಯ್ಯ ಹುಟ್ಟೂರಿನಲ್ಲಿ ಜನರ ಮಾಧ್ಯಮ‌ ಈ ದಿನ.ಕಾಮ್‌ ಅನಾವರಣ

ರೈತ ನಾಯಕ, ಮಾಜಿ ಶಾಸಕ ದಿ. ಕೆ.ಎಸ್‌ ಪುಟ್ಟಣ್ಣಯ್ಯ ಅವರ ಹುಟ್ಟೂರು ಕ್ಯಾತನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ದೇವನೂರ ಮಹಾದೇವ, ರೈತ ನಾಯಕ ಬಡಗಲಪುರ ನಾಗೇಂದ್ರ ಹಾಗೂ ದಲಿತ ನಾಯಕ ಗುರುಪ್ರಸಾದ್‌ ಕೆರಗೋಡು ಅವರು ಈ ದಿನ.ಕಾಮ್ ಸುದ್ದಿತಾಣಕ್ಕೆ ಚಾಲನೆ ನೀಡಿದರು. 

ಹೊಸ ಮುಖ್ಯವಾಹಿನಿಯ ಮಾಧ್ಯಮವಾಗಿ ರೂಪುಗೊಳ್ಳುತ್ತಿರುವ ಜನರ ಮಾಧ್ಯಮ ಈ ದಿನ.ಕಾಮ್‌ಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನ, ಸೋಮವಾರ ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಅಧಿಕೃತ ಚಾಲನೆ ನೀಡಲಾಯಿತು.

ರೈತ ನಾಯಕ, ಮಾಜಿ ಶಾಸಕ ದಿ. ಕೆ.ಎಸ್‌ ಪುಟ್ಟಣ್ಣಯ್ಯ ಅವರ ಹುಟ್ಟೂರು ಕ್ಯಾತನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ದೇವನೂರ ಮಹಾದೇವ, ರೈತ ನಾಯಕ ಬಡಗಲಪುರ ನಾಗೇಂದ್ರ ಹಾಗೂ ದಲಿತ ನಾಯಕ ಗುರುಪ್ರಸಾದ್‌ ಕೆರಗೋಡು ಅವರು ಸುದ್ದಿತಾಣಕ್ಕೆ ಚಾಲನೆ ನೀಡಿದರು. 

ಈ ದಿನ.ಕಾಮ್‌ನ ಪೋಸ್ಟರ್‌ ಉದ್ಘಾಟಿಸಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, "ಕರ್ನಾಟಕದ ಜನತೆಯಾದ ನಾವು ಪ್ರಜಾಪ್ರಭುತ್ವದ ವಿಸ್ತರಣೆಗಾಗಿ, ಮಾನವೀಯತೆಯ ಉಳಿವಿಗಾಗಿ, ಸಮಾನತೆಯ ಸ್ಥಾಪನೆಗಾಗಿ ಸತ್ಯ, ನ್ಯಾಯ ಹಾಗೂ ಪ್ರೀತಿ ಮೌಲ್ಯಗಳನ್ನು ಗಟ್ಟಿಗೊಳಿಸುವುದ್ಕಾಗಿ ಆಗಸ್ಟ್‌ 15, 2022ರ ಈದಿನ ನಾವೇ ರೂಪಿಸಿ, ನಾವೇ ಕಟ್ಟಿ ಬೆಳೆಸುವ ಸಂಕಲ್ಪ ತೊಟ್ಟು, ನಮಗೆ ನಾವೇ ಅರ್ಪಿಸಿಕೊಂಡ ಮಾಧ್ಯಮ ಈ ದಿನ.ಕಾಮ್‌" ಎಂದು ಮಾಧ್ಯಮದ ಘೋಷವಾಕ್ಯವನ್ನು ಸಾರ್ವಜನಿಕರಿಗೆ ಬೋಧಿಸಿದರು.

"ಇಂದು ಪತ್ರಿಕಾ ಮಾಧ್ಯಮವು ಉದ್ಯಮವಾಗಿ ಮಾರ್ಪಟ್ಟಿದೆ. ಬಂಡವಾಳ ಹಾಕಿ, ಲಾಭ ಪಡೆಯುವ ಕಾರ್ಖಾನೆ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ, ರೈತರು, ದಲಿತರು, ಕಾರ್ಮಿಕರು, ಯುವಜನರು, ಜನಸಾಮಾನ್ಯರು, ಪರಿಸರ ರಕ್ಷಣೆಯ ಬಗ್ಗೆ ಈ ಮಾಧ್ಯಮಗಳು ಮಾತನಾಡುತ್ತಿಲ್ಲ. ಬದಲಾಗಿ ಉಳ್ಳವರ, ಆಡಳಿತದಲ್ಲಿರುವವರ ತುತ್ತೂರಿಯಾಗಿವೆ. ಆದ್ದರಿಂದ, ಅಂಚಿಗೆ ತಳ್ಳಲ್ಪಟ್ಟವರ, ನಿರ್ಲಕ್ಷಿಸಲ್ಪಟ್ಟವರ ಪರವಾಗಿ ದನಿ ಎತ್ತುವ ಮಾಧ್ಯಮವನ್ನು ಕಟ್ಟುವ ಉದ್ದೇಶದಿಂದ ಈ ದಿನ.ಕಾಮ್‌ ರೂಪುಗೊಳ್ಳುತ್ತಿದೆ" ಎಂದು ಅವರು ವಿವರಿಸಿದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಈ ದಿನ.ಕಾಮ್‌ನ ಪ್ರಧಾನ ಸಂಪಾದಕ ಅಶೋಕ್‌ ರಾಮ್, "ಮಾಧ್ಯಮಗಳು ರೈತರ, ಜನಸಾಮಾನ್ಯರ ನಡುವಿನ ಸುದ್ದಿಗಳನ್ನು ಬರೆದು, ಪ್ರಸಾರ ಮಾಡುವುದನ್ನು ಮರೆತಿವೆ. ನಾವು ಯಾರೊಂದಿಗೆ ಮಾತನಾಡಬೇಕು, ಯಾರೊಂದಿಗೆ ಕೂರಬೇಕು, ಯಾರೊಂದಿಗೆ ಇರಬೇಕು, ಏನನ್ನ ತಿನ್ನಬೇಕೆಂದು ಯಾರೋ ಎಲ್ಲೋ ಕೂತು ನಿರ್ಧರಿಸುವಂತಹ ಪರಿಸ್ಥಿತಿ ಎದುರಾಗಿದೆ. ಇಂತಹ ವ್ಯವಸ್ಥೆಯ ವಿರುದ್ಧ ನಾವು ನಿಜವಾದ ಪತ್ರಕರ್ತರಾಗಿ ಕೆಲಸ ಮಾಡಬೇಕು. ದುರದೃಷ್ಟಕರವೆಂದರೆ, ಪತ್ರಕರ್ತರಿಗೂ ಸ್ವಾತಂತ್ರ್ಯವಿಲ್ಲ. ಇದೆಲ್ಲದಕ್ಕೂ ಸೆಡ್ಡುಹೊಡೆದು, ಹೊಸ ಮಾಧ್ಯಮವೊಂದು ರೂಪುಗೊಂಡಿದೆ. ಅದನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ" ಎಂದು ಹೇಳಿದರು. 

"ಇಡೀ ಭಾರತ ಅಪಾಯಕಾರಿ ಪರಿಸ್ಥಿತಿಯಲ್ಲಿದೆ. ಜನಸಾಮಾನ್ಯರಿಗೆ ಅದರ ಅರಿವಾಗುತ್ತಿಲ್ಲ. ಜನರನ್ನ ಯಾಮಾರಿಸಲಾಗುತ್ತಿದೆ. ಸಾರ್ವಜನಿಕ ಸಂಪತ್ತು, ಉದ್ದಿಮೆಗಳನ್ನು ಮಾರಾಟ ಮಾಡಲಾಗುತ್ತಿದೆ. ಇದೆಲ್ಲವನ್ನೂ ಮಾಧ್ಯಮಗಳು ಜನರಿಗೆ ಹೇಳುವುದಿಲ್ಲ. ಆಳುವವರ ಹುನ್ನಾರಗಳನ್ನು ಬಯಲಿಗೆಳೆಯಲು, ಜನರಿಗೆ ದೇಶದ ವಾಸ್ತವಾಂಶಗಳನ್ನು ತಿಳಿಸಲು ನೈಜ ಪತ್ರಿಕೋದ್ಯಮದ ಅಗತ್ಯವಿದೆ. ಅಂತಹ ಪತ್ರಿಕೋದ್ಯಮವಾಗಿ ಈ ದಿನ.ಕಾಮ್‌ ರೂಪಗೊಳ್ಳುತ್ತಿದೆ. ಸತ್ಯ, ನ್ಯಾಯ, ಪ್ರೀತಿಗಾಗಿ ಜನರೇ ರೂಪಿಸಿರುವ ಮಾಧ್ಯಮಕ್ಕೆ ಚಾಲನೆ ಸಿಕ್ಕಿರುವುದು ಸಂತೋಷದ ಸಂಗತಿ" ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಹೇಳಿದರು.

ಭಾರತ ಸಂವಿಧಾನದ ಪ್ರಸ್ತಾವನೆಗೆ ಹಾಡಿನ ರೂಪಕೊಡಲಾಗಿದ್ದು, ಆ ಗೀತೆಯನ್ನು ಪುಟ್ಟಣ್ಣಯ್ಯ ಅವರ ಪತ್ನಿ, ರೈತ ಹೋರಾಟಗಾರ್ತಿ ಸುನೀತಾ ಪುಟ್ಟಣ್ಣಯ್ಯ ಮತ್ತು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಸಾರ್ವಜನಿಕಗೊಳಿಸಿ, ಹಾಡಿನ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಸುದ್ದಿತಾಣದ ಕುರಿತು ಎಂ2ಎಂ ಮೀಡಿಯಾ ನೆಟ್‌ವರ್ಕ್‌ನ ಯೋಜನ ಮುಖ್ಯಸ್ಥ ಡಾ. ವಾಸು ಎಚ್‌.ವಿ ವಿವರಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪುಗೌಡ, ಅಕ್ಕಮಹಾದೇವಿ ಮಹಿಳಾ ವಿವಿ ನಿವೃತ್ತ ಉಪ ಕುಲಪತಿ ಸಬಿಹಾ ಭೂಮಿಗೌಡ, ರೈತ ಮುಖಂಡ ಮಧು ಚಂದನ್‌, ದರ್ಶನ್‌ ಪುಟ್ಟಣ್ಣಯ್ಯ ಮತ್ತಿತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ದಿನ.ಕಾಮ್‌ ಮಾಧ್ಯಮಕ್ಕೆ ಶುಭ ಹಾರೈಸಿದರು. 

ನಿಮಗೆ ಏನು ಅನ್ನಿಸ್ತು?
1 ವೋಟ್