ಕಳೆದ ಒಂದು ಶತಮಾನದಿಂದೀಚಿಗೆ ಮಹಾರಾಷ್ಟ್ರ ಮತ್ತು ತೆಲಂಗಾಣಗಳಿಂದ ಕರ್ನಾಟಕಕ್ಕೆ ವಲಸೆ ಬಂದ ಈ ಸಮುದಾಯದ ಮಂದಿ ಕಲಬುರಗಿ, ಬೀದರ್, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಎಮ್ಮೆ ಕೋಣಗಳ ವ್ಯಾಪಾರ, ಎಮ್ಮೆ ಮೈ ಕೂದಲು ಬೋಳಿಸುವುದು, ಎತ್ತುಗಳ ಕೋಡು ಚೂಪು ಮಾಡುವುದು, ಚಾಕು-ಚೂರಿ ಸಾಣೆ ಹಿಡಿಯುವುದು, ಕಕ್ಕಸು ಬಾಚುವುದು, ಚರಂಡಿ ಸ್ವಚ್ಛ ಮಾಡುವುದು, ಚಿಂದಿ ಆಯುವುದು, ಗಾರೆ-ಕೂಲಿ ಕೆಲಸ ಮಾಡುವುದು, ಸೇಂದಿ ಮಾರುವುದು... ಹೀಗೆ ಹೊಟ್ಟೆಪಾಡಿಗಾಗಿ ನಾನಾ ತರಹದ ಉಪಕಸುಬುಗಳನ್ನು ಅವಲಂಬಿಸಿದ್ದಾರೆ.
ಬಹುತೇಕರು ಒಂದಿಲ್ಲೊಂದು ಕಡೆ ಕೊಳೆಗೇರಿಗಳಲ್ಲಿ ನೆಲೆ ನಿಂತಿದ್ದರೂ, ಸಂಪೂರ್ಣ ಅಲೆಮಾರಿ ಸ್ಥಿತಿಯಲ್ಲಿ ಬದುಕುತ್ತಿರುವ ಕುಟುಂಬಗಳು ಸಾಕಷ್ಟಿವೆ. ಪ್ಲಾಸ್ಟಿಕ್ ಜೋಪಡಿಗಳೇ ಇವರಿಗೆ ಆಸರೆ. ಕನಿಷ್ಠ ಮೂಲಭೂತ ಸೌಕರ್ಯಗಳೂ ದೊರೆಯದೆ ನರಕಸದೃಶ ರೀತಿಯಲ್ಲಿ ಬದುಕುತ್ತಿರುವ ಇವರಿಗೆ ಬ್ರಿಟಿಷರಿಂದ ಸಿಕ್ಕ 'ಕ್ರಿಮಿನಲ್ ಹಣೆಪಟ್ಟಿ' ಇನ್ನೂ ಕಳಚಿಲ್ಲ! ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮಾಂಗ್ ಗಾರುಡಿ ಸಮುದಾಯ ಇತರೆ ಜಾತಿ-ವರ್ಗಗಳಿಗಿಂತ ಶತಮಾನದಷ್ಟು ಹಿಂದುಳಿದಿದೆ.