ಪರ್ಯಾಯ ಚರಿತ್ರೆ ಕಟ್ಟುವ ಚಳವಳಿ: ಏಪ್ರಿಲ್‌ ತಿಂಗಳಿಡೀ ದಲಿತ ಇತಿಹಾಸ ಮಾಸ ಆಚರಣೆ

ಭಾರತದಲ್ಲಿ ಐತಿಹಾಸಿಕವಾಗಿ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಜ್ಞೆಯಿಂದ ಹೊರಗುಳಿದ ಸಮುದಾಯಗಳನ್ನು ಮೇಲೆತ್ತಲು ನಡೆದ ಅವಿರತ ಹೋರಾಟಗಳು, ಪ್ರತಿರೋಧ, ಕೆಚ್ಚೆದೆಯಿಂದ ಹೋರಾಡಿದ ವೀರರು ಮತ್ತು ವೀರ ವನಿತೆಯರ ಕತೆಗಳನ್ನು ಮುನ್ನೆಲೆಗೆ ತರುವುದು, ಅವುಗಳನ್ನು ಜನಮಾನಸದಲ್ಲಿ ಉಳಿಸುವುದು ಈ ಆಚರಣೆಯ ಸ್ವರೂಪ

ದಲಿತರ ಮೇಲಿನ ಶೋಷಣೆಗೆ ಶತಮಾನಗಳ ಇತಿಹಾಸವಿದೆ. ಮನುಷ್ಯ ಆರ್ಥಿಕವಾಗಿ, ವೈಜ್ಞಾನಿಕವಾಗಿ ಎಷ್ಟೇ ಪ್ರಗತಿ ಕಂಡಿದ್ದರೂ, ಸಾಮಾಜಿಕವಾಗಿ ಇಂದಿಗೂ ಸಂಪ್ರದಾಯ ಸೃಷ್ಟಿಸಿದ ತಾರತಮ್ಯಗಳ ಚೌಕಟ್ಟಿನಲ್ಲೇ ಇದ್ದಾನೆ.

Eedina App

ಬೆಂಗಳೂರಿನಲ್ಲಿ ದಲಿತ ಯುವತಿಯೊಬ್ಬರನ್ನು ಮೇಲ್ಜಾತಿಯ ಯುವಕ ಸುಟ್ಟು ಕೊಂದಿದ್ದು, ರಾಜಸ್ಥಾನದಲ್ಲಿ ಮೀಸೆ ಬಿಟ್ಟಿದ್ದಕ್ಕೆ ದಲಿತ ಯುವಕನನ್ನು ಕೊಂದ ಉದಾಹರಣೆಗಳು ತೀರಾ ಇತ್ತೀಚಿನವು. ದಲಿತರ ಮೇಲಿನ ನಡೆಯುತ್ತಿರುವ ಈ ದೌರ್ಜನ್ಯ, ದಲಿತರ ಸಾಮಾಜಿಕ ಸ್ಥಾನಮಾನವನ್ನು ನಿರಾಕರಿಸುತ್ತ ಬರಲಾಗಿರುವುದು ಇತಿಹಾಸದುದ್ದಕ್ಕೂ ನಡೆದಿದೆ. ಆದರೆ, ತಮ್ಮ ಅಸ್ಮಿತೆ ಮತ್ತು ಘನತೆಗಾಗಿ ನಡೆದ ಹೋರಾಟವನ್ನು ದಾಖಲಿಸುವ ಅಗತ್ಯವೂ ಇದೆ. ಇತಿಹಾಸ ದಾಖಲಿಸುವುದೂ ಒಂದು ಮೇಲ್ಜಾತಿಯ ರಾಜಕಾರಣ ಎಂಬುದು ದಲಿತ ಚಿಂತಕರ ಆರೋಪ. ಈ ಎಲ್ಲ ಹಿನ್ನೆಲೆಗಳಲ್ಲಿ, ಅಂಬೇಡ್ಕರ್‌ ಜನಿಸಿದ ಏಪ್ರಿಲ್‌ ತಿಂಗಳನ್ನು ದಲಿತ ಇತಿಹಾಸವನ್ನು ಕಟ್ಟುವ ತಿಂಗಳಾಗಿ ಆಚರಿಸಲಾಗುತ್ತಿದೆ.

ಬಹುಜನರು ತಮ್ಮದೇ ಇತಿಹಾಸವನ್ನು ದಾಖಲಿಸಬೇಕೆಂಬ ಈ ಯೋಜನೆಗೆ ಅಮೆರಿಕದ ಕಪ್ಪು ಜನರ ಇತಿಹಾಸ ದಾಖಲಿಸುವ ಚಳವಳಿಯೇ ಪ್ರೇರಣೆ. ಈ ಚಳವಳಿ ರೂಪದ ಕಾರ್ಯಕ್ರಮಕ್ಕೆ ಕೆನಡಾದ ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯವೂ ಕೈಜೋಡಿಸಿದ್ದು, ಏಪ್ರಿಲ್‌ ತಿಂಗಳನ್ನು ದಲಿತ ಇತಿಹಾಸ ಮಾಸವಾಗಿ ಆಚರಿಸಲು ಮುಂದಾಗಿದೆ.

AV Eye Hospital ad

2011ರಲ್ಲಿ ತಮಿಳು ದಲಿತ ಕಾರ್ಯಕರ್ತ ಪ್ಯಾರಿ ಚೆಜಿಯಾನ್ ಅವರು, ಏಪ್ರಿಲ್ ತಿಂಗಳನ್ನು ಬಿ ಆರ್ ಅಂಬೇಡ್ಕರ್ ಹುಟ್ಟಿದ ತಿಂಗಳು ಮತ್ತು ದಲಿತ ಇತಿಹಾಸದ ತಿಂಗಳು ಎಂದು ಆಚರಿಸಲು ಕರೆ ನೀಡಿದ್ದರು. ಚೆಜಿಯಾನ್ ನೇತೃತ್ವದಲ್ಲಿ ವೀ ಕರುಣಾಕರನ್, ಕ್ರಿಸ್ಟಿನಾ ಥಾಮಸ್ ಧನರಾಜ್, ಆಶಾ ಕೌಟಲ್, ಸಂಘಪಾಲಿ ಅರುಣಾ, ಮನೀಶಾ ದೇವಿ ಮತ್ತು ತೆನ್ಮೋಳಿ ಸೌಂದರರಾಜನ್ ಅವರ ಆರು ಸದಸ್ಯರ ತಂಡವು ಏಪ್ರಿಲ್ ತಿಂಗಳನ್ನು ದಲಿತ ಇತಿಹಾಸದ ತಿಂಗಳಾಗಿ ಆಚರಿಸಲು ಆರಂಭಿಸಿತು. ನಂತರ, 2015ರ ವೇಳೆಗೆ ಆ ತಂಡಕ್ಕೆ ಹಲವರು ಸೇರಿಕೊಂಡರು. ಬಳಿಕ ಆಚರಣೆಯು ವಿಶಾಲವಾಗಿ ಹಬ್ಬಿತು.

Dalit

"ಒಂದು ಜನಾಂಗಕ್ಕೆ ಇತಿಹಾಸ ಇಲ್ಲದಿದ್ದರೆ, ಮೌಲ್ಯಯುತ ಸಂಪ್ರದಾಯವನ್ನು ಹೊಂದಿಲ್ಲದಿದ್ದರೆ, ಪ್ರಪಂಚದ ಚಿಂತನೆಯಲ್ಲಿ ನಗಣ್ಯ ಅಂಶವಾಗುತ್ತದೆ. ನಿರ್ನಾಮವಾಗುವ ಅಪಾಯದಲ್ಲಿರುತ್ತದೆ,” ಎಂಬ ಇತಿಹಾಸಕಾರ ಕಾರ್ಟರ್ ಜಿ ವುಡ್ಸನ್ (1926ರಲ್ಲಿ ನೀಗ್ರೋ ಇತಿಹಾಸ ವಾರದ ಆಚರಣೆಗೆ ಒತ್ತು ಕೊಟ್ಟವರು) ಅವರ ಮಾತುಗಳೂ ದಲಿತ ಇತಿಹಾಸ ಮಾಸದ ಆಚರಣೆಗೆ ಸ್ಫೂರ್ತಿ ನೀಡಿದೆ.

ಭಾರತದಲ್ಲಿ ಐತಿಹಾಸಿಕವಾಗಿ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಜ್ಞೆಯಿಂದ ಹೊರಗುಳಿದ ಸಮುದಾಯವನ್ನು ಮೇಲೆತ್ತಲು ನಡೆದ ಹೋರಾಟಗಳು, ಪ್ರತಿರೋಧ, ಕೆಚ್ಚೆದೆಯಿಂದ ಹೋರಾಡಿದ ವೀರರು/ವೀರ ವನಿತೆಯರ ಕತೆಗಳನ್ನು ಮುನ್ನೆಲೆಗೆ ತರುವುದು, ಅವುಗಳನ್ನು ಜನಮಾನಸದಲ್ಲಿ ಉಳಿಸುವುದು ಈ ಆಚರಣೆಯ ಸ್ವರೂಪ.

ಹ್ಯೂಮನ್ ರೈಟ್ಸ್ ವಾಚ್‌ನ 2007ರ ವರದಿಯ ಪ್ರಕಾರ, ಭಾರತದಲ್ಲಿ ದಲಿತರ ಮೇಲಿನ ಧೋರಣೆಯು 'ಗುಪ್ತ ವರ್ಣಭೇದ ನೀತಿ'ಯಂತಿದೆ. ವಸತಿ, ಶಾಲೆಗಳು ಮತ್ತು ಸಾರ್ವಜನಿಕ ಸೇವೆಗಳನ್ನು ಪಡೆಯುವಾಗ ದಲಿತರು ಪ್ರತ್ಯೇಕತೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ರಾಷ್ಟ್ರೀಯ ಅಪರಾಧ ಬ್ಯೂರೋದ ದಾಖಲೆಗಳ ಪ್ರಕಾರ, 2020ರಲ್ಲಿ ಪ್ರತಿ 10 ನಿಮಿಷಗಳಿಗೊಮ್ಮೆ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಆ ವರ್ಷದಲ್ಲಿ ಒಟ್ಟು 50,291 ಪ್ರಕರಣಗಳು ದಾಖಲಾಗಿವೆ.

ಪ್ರಬಲ ಜಾತಿಯ ಹಿಂದೂಗಳು ದಲಿತರನ್ನು ಇತಿಹಾಸದುದ್ದಕ್ಕೂ ಕೀಳಾಗಿ ನಡೆಸಿಕೊಂಡಿದ್ದಾರೆ. ಅಂಚಿಗೆ ತಳ್ಳಲ್ಪಟ್ಟವರ ಮೇಲೆ ಹಿಂಸಾಚಾರ, ಅತ್ಯಾಚಾರ, ಕ್ರೂರ ದಬ್ಬಾಳಿಕೆಗಳು, ಶೋಷಣೆಗಳನ್ನು ಮಾಡಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇಂತಹ ಕ್ರೌರ್ಯಗಳು, ಹಿಂಸಾಚಾರ ಮತ್ತು ಅವಮಾನಗಳ ವಿರುದ್ದ ಸಿಡಿದೆದ್ದ ದಲಿತರ ವಿರೋಚಿತ ಕತೆಗಳೂ ಇವೆ. ಅವು ಇತಿಹಾಸದಲ್ಲಿ ಹೂತುಹೋಗಿವೆ. ಇತಿಹಾಸಕಾರರು ಈ ಕತೆಗಳನ್ನು ಪ್ರಾಮಾಣಿಕವಾಗಿ ಗಮನಿಸುವಲ್ಲಿ ವಿಫಲರಾಗಿದ್ದಾರೆ. ಅದೇ ರೀತಿಯಲ್ಲಿ, ವಿವಿಧ ಕ್ಷೇತ್ರಗಳಿಗೆ ದಲಿತರ ಕೊಡುಗೆಗಳನ್ನೂ ಅಳಿಸಿಹಾಕಲಾಗಿದೆ.

carter g woodson
ಇತಿಹಾಸಕಾರ ಕಾರ್ಟರ್ ಜಿ ವುಡ್ಸನ್

ಇತಿಹಾಸಕಾರ ಚಿನ್ನಯ್ಯ ಜಂಗಮ್ ಅವರು ಇತ್ತೀಚೆಗೆ, 'ವೀಕ್ಲಿ' ಪತ್ರಿಕೆಗೆ ಬರೆದ ‘ಎಕನಾಮಿಕ್ ಅಂಡ್ ಪೊಲಿಟಿಕಲ್’ ಅಂಕಣದಲ್ಲಿ, ಮೂವರು ದಲಿತ ಕಮ್ಯುನಿಸ್ಟ್ ನಾಯಕರಾದ ನಂಬೂರಿ ಶ್ರೀನಿವಾಸ ರಾವ್, ಬೇತಾಳ ಯೇಸುದಾಸ್ ಮತ್ತು ತುಪಾಕುಲ ಸಿಂಹಾಚಲಂ ಅವರ ಕೊಡುಗೆಗಳನ್ನು ಎತ್ತಿ ತೋರಿಸಿದ್ದಾರೆ. ಆ ಮೂವರನ್ನು ಸ್ವತಃ ಕಮ್ಯುನಿಸ್ಟರು ಕೂಡ ಮರೆತಿದ್ದಾರೆ ಎಂದು ಜಂಗಮ್ ಹೇಳುತ್ತಾರೆ.

"ದಲಿತರು ಮತ್ತು ಇತರ ತುಳಿತಕ್ಕೊಳಗಾದವರನ್ನು ಇತಿಹಾಸದಿಂದ ಹೊರಗಿಡುವುದು ಮತ್ತು ಅಮಾನವೀಯಗೊಳಿಸುವುದು ಹಿಂದೂ ಬ್ರಾಹ್ಮಣ ಸಾಹಿತ್ಯ ಮತ್ತು ಚಿತ್ರಣದಲ್ಲಿ ಎಷ್ಟು ತುಂಬಿಹೋಗಿದೆ ಎಂದರೆ, ಅವುಗಳನ್ನು ಓದುವ ದಲಿತರು ಕೂಡ ಅದನ್ನು ಪರಾಮರ್ಶಿಸಲಾಗುವುದಿಲ್ಲ," ಎಂದು ಜಂಗಮ್ ಹೇಳುತ್ತಾರೆ.

ಈ ಪ್ರಹಸನವು ಆಶ್ಚರ್ಯಕರವೇನಲ್ಲ. ಏಕೆಂದರೆ, ಸಾಂಸ್ಥಿಕ ಸ್ಥಳಗಳ ಮೇಲಿನ ಸಂಪೂರ್ಣ ಹಿಡಿತವನ್ನು ಸವರ್ಣೀಯರು ಹೊಂದಿದ್ದಾರೆ. ಶಾಲಾ ಪಠ್ಯಪುಸ್ತಕಗಳನ್ನು ಬರೆಯುವುದು, ಪತ್ರಿಕೆಗಳನ್ನು ಸಂಪಾದಿಸುವುದು, ಸಂಪುಟಗಳನ್ನು ನಿರ್ಮಿಸುವುದು ಮತ್ತು ಸಾಕ್ಷ್ಯಚಿತ್ರಗಳನ್ನು ನಿರ್ಮಾಣ ಮಾಡುವುದು ಸವರ್ಣೀಯರು ಮಾತ್ರ.

Chinnaya Jangam
ಇತಿಹಾಸಕಾರ ಚಿನ್ನಯ್ಯ ಜಂಗಮ್ (ಎಡ ತುದಿ)

ಬಹುಜನ ವಿದ್ವಾಂಸರು ಮತ್ತು ಪತ್ರಕರ್ತರನ್ನು ಐತಿಹಾಸಿಕವಾಗಿ ಈ ಎಲ್ಲ ಹುದ್ದೆಗಳು ಅಥವಾ ಜವಾಬ್ದಾರಿಗಳಿಂದ ದೂರವಿಡಲಾಗಿದೆ. ಆದ್ದರಿಂದ, ಭಾರತದ ಇತಿಹಾಸವು ಬ್ರಾಹ್ಮಣ ಸವರ್ಣೀಯರ ಬರವಣಿಗೆ ಮತ್ತು ಆಲೋಚನೆಯ ಉತ್ಪನ್ನವಾಗಿದೆ.

ಬ್ರಾಹ್ಮಣ ಸವರ್ಣೀಯ ವಿದ್ವಾಂಸರು ತಮಗೆ ಸಂಬಂಧಿಸಿದ ವಿಷಯಗಳು, ಅವರಿಗೆ ಮುಖ್ಯವೆನಿಸುವ ವಿಷಯಗಳು ಹಾಗೂ ತಮ್ಮ ವೃತ್ತಿಯನ್ನು ಮುಂದುವರಿಸಬಹುದಾದ ವಿಷಯಗಳನ್ನು ಮಾತ್ರ ಇತಿಹಾಸ ಬರವಣಿಗೆಯಲ್ಲಿ ಆಯ್ಕೆ ಮಾಡುತ್ತಾರೆ. ಅವರ ಈ ಆಯ್ಕೆಗಳು ಬಹುಜನರ ಹೋರಾಟಗಳು ಮತ್ತು ಕೊಡುಗೆಗಳನ್ನು ಪರಿಗಣನೆಯಿಂದ ದೂರ ಇಡುತ್ತವೆ. ಹೀಗಾಗಿ, ಮೇಲ್ಜಾತಿ ಆಲೋಚನೆಗಳು ಅಥವಾ ಸಿದ್ಧಾಂತಗಳು ಸತ್ಯದ ರೀತಿಯಲ್ಲಿ ಹೊರಬರುತ್ತವೆ.

ತಮ್ಮದೇ ಇತಿಹಾಸ ಬರೆಯಬೇಕು

ಬಹುಜನರದ್ದು ಸಾವಿರಾರು ಜಾತಿಗಳಿಂದ ಮಾಡಲ್ಪಟ್ಟ ವಿಶಾಲವಾದ ಜನಸಮೂಹ. ದಲಿತ ಇತಿಹಾಸವು ಬ್ರಾಹ್ಮಣವಾದಕ್ಕೆ ಪರ್ಯಾಯ ಇತಿಹಾಸ. ಇದು ಜಾತಿ, ಲಿಂಗ ಸಮಾನತೆ, ವೈಚಾರಿಕತೆ ಹಾಗೂ ವಿಮರ್ಶಾತ್ಮಕ ವಿಚಾರಗಳನ್ನು ಹೊಂದಿದೆ. ಆದ್ದರಿಂದ, ದಲಿತ ಇತಿಹಾಸವೂ ಬಹಳ ವೈವಿಧ್ಯಮಯವಾಗಿರುತ್ತದೆ. ಅವರ ಮೌಖಿಕ ನಿರೂಪಣೆಗಳು, ಜನಪದ ಕತೆಗಳು, ಪುರಾಣಗಳು ಮತ್ತು ಹಾಡುಗಳ ಸಂಘರ್ಷ ಹಾಗೂ ಧೀಮಂತ ಇತಿಹಾಸವನ್ನು ಹೊಂದಿವೆ. ಗತಕಾಲದ ಈ ಎಲ್ಲ ಇತಿಹಾಸವನ್ನು ಅಗೆದು ಡಿಜಿಟಲ್ ಯುಗದಲ್ಲಿ ದಾಖಲಿಸುವುದು ಬಹುಜನರ ಮುಂದಿರುವ ಸವಾಲಾಗಿದೆ. ಇದನ್ನು ಮಾಡಿದ್ದೇ ಆದಲ್ಲಿ, ಅದು ಸವರ್ಣೀಯ ಇತಿಹಾಸವನ್ನು ಎದುರಿಸಲು ಮತ್ತು ಬಹುಜನರ ಪ್ರಜ್ಞೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿದಿರಾ?: ಮನುಷ್ಯರನ್ನು ಇನ್ನಷ್ಟು ಮನುಷ್ಯರನ್ನಾಗಿಸುವ ಸಿನಿಮಾ ನಿರ್ದೇಶಕ

ಈಗಾಗಲೇ, ವೆಲಿವಾಡ, ರೌಂಡ್ ಟೇಬಲ್ ಇಂಡಿಯಾ ಮತ್ತು ದಲಿತ ಕ್ಯಾಮೆರಾಗಳಂತಹ ಸಂಸ್ಥೆಗಳು ಹಾಗೂ ಡಿಜಿಟಲ್ ಮಾಧ್ಯಮಗಳು ಇಂತಹ ಕೆಲಸಗಳನ್ನು ಮಾಡುವಲ್ಲಿ ನಿರತವಾಗಿವೆ. ಇವು ಬಹುಜನರ ನಿರೂಪಣೆಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ ಎಂಬುದು ಸಮಾಧಾನದ ಸಂಗತಿ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app