
- ರಾಜ್ಯದಲ್ಲಿ ಮೊದಲ ಬಾರಿಗೆ ತುಮಕೂರು ನಗರದಲ್ಲಿ ಅಭಿಯಾನ ಆರಂಭ
- ಅಲ್ಪಸಂಖ್ಯಾತರು ನೆಲೆಸಿರುವ ಜಾಗಗಳಲ್ಲಿ ಶೀಘ್ರ ಕ್ಯಾಂಪ್: ಅತೀಕ್ ಅಹಮದ್
2023ರ ವಿಧಾನಸಭಾ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿರುವ ಹೊತ್ತಿನಲ್ಲಿ ಮತಪಟ್ಟಿಯಲ್ಲಿ ಸಾಕಷ್ಟು ಅವ್ಯವಹಾರಗಳು ಬೆಳಕಿಗೆ ಬರುತ್ತಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
'ಚಿಲುಮೆ' ಎಂಬ ಖಾಸಗಿ ಸಂಸ್ಥೆ ಮತದಾರರಲ್ಲಿ ಜಾಗೃತಿ ಮೂಡಿಸುವ ನೆಪದಲ್ಲಿ ಸಮುದಾಯ ಆಧಾರಿತವಾಗಿ ಮತಗಳನ್ನು ವಿಭಜನೆ ಮಾಡಿ, ಕೆಲವು ಕಡೆ ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರ ಮತಗಳನ್ನು ಡಿಲೀಟ್ ಮಾಡಿದೆ ಎನ್ನುವ ಮಾಹಿತಿ ಬಯಲಾಗುತ್ತಿದ್ದಂತೆ ಎಲ್ಲ ಪಕ್ಷಗಳು ಎಚ್ಚೆತ್ತುಕೊಂಡಿವೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕವು ʼಮತಪಟ್ಟಿ ಜಾಗೃತಿ ಅಭಿಯಾನʼವನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಆರಂಭಿಸಿದೆ. ಇದರ ಭಾಗವಾಗಿ ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಪಾದಯಾತ್ರೆ ಮೂಲಕ ಮತದಾರರ ಪಟ್ಟಿ ಪರಿಶೀಲನಾ ಜಾಗೃತಿ ಅಭಿಯಾನ ನಡೆಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಹಾಲಪ್ಪ, ತುಮಕೂರು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮತ್ತು ಟಿಕೆಟ್ ಆಕಾಂಕ್ಷಿ ಅತೀಕ್ ಅಹಮದ್ ಅವರು ಮತದಾರರ ಪಟ್ಟಿ ಪರಿಶೀಲನಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಹಾಲಪ್ಪ, “ತುಮಕೂರು ನಗರದಲ್ಲಿ 35 ಸಾವಿರವರೆಗೂ ದಲಿತರು, ಅಲ್ಪಸಂಖ್ಯಾತರು, ಕ್ರೈಸ್ತರು ಹಾಗೂ ಕೆಳವರ್ಗದ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ಈ ಮೂಲಕ ಅಂಬೇಡ್ಕರ್ ಕೊಟ್ಟ ಹಕ್ಕು ಕಸಿಯಲು ಬಿಜೆಪಿ ಪಕ್ಷ ಮುಂದಾಗಿದೆ” ಎಂದು ಆರೋಪಿಸಿದರು.
“ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲ ಮತದಾರರನ್ನು ಕೈ ಬಿಡುವ ಕೆಲಸಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ. ಕೂಡಲೇ ಮತದಾರರು ಜಾಗೃತರಾಗಿ ಇಂತಹ ತಪ್ಪುಗಳನ್ನು ಪ್ರಶ್ನೆ ಮಾಡುವಂತೆ ಆಗಬೇಕು. ಆ ಮೂಲಕ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು” ಎಂದರು.

ತುಮಕೂರು ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅತೀಕ್ ಅಹಮದ್ ಮಾತನಾಡಿ, “ಬಿಜೆಪಿಯ ಅಭಿವೃದ್ಧಿ ಶೂನ್ಯ ಅಡಳಿತವನ್ನು ಪ್ರಶ್ನಿಸುವ ಮತ್ತು ಬಿಜೆಪಿಯೇತರ ಪಕ್ಷಗಳಿಗೆ ಮತ ಹಾಕುವ ವ್ಯಕ್ತಿಗಳನ್ನು ಗುರುತಿಸಿ, ಅವರ ಹಕ್ಕುಗಳನ್ನು ಕಸಿಯುವ ಕೆಲಸವನ್ನು ಬಿಜೆಪಿ ಮಾಡಲು ಹೊರಟಿದೆ. ಇದಕ್ಕೆ ಎಂದಿಗೂ ನಾವು ಅವಕಾಶ ನೀಡುವುದಿಲ್ಲ. ಶೀಘ್ರದಲ್ಲಿಯೇ ಅಲ್ಪಸಂಖ್ಯಾತರು ಇರುವ ಜಾಗಗಳಲ್ಲಿ ನಮ್ಮ ಘಟಕದ ವತಿಯಿಂದ ಕ್ಯಾಂಪ್ ಮಾಡಿ, ಪ್ರತಿಯೊಬ್ಬ ಮತದಾರರನ್ನು ಪರೀಕ್ಷಿಸಿ, ಅವರ ಹಕ್ಕುಗಳನ್ನು ಖಾತರಿ ಪಡಿಸುವ ಕೆಲಸ ಮಾಡಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ವಿಶೇಷ | ʼಸಿದ್ದರಾಮೋತ್ಸವʼ ಆಯ್ತು, ಈಗ ʼದಲಿತೋತ್ಸವʼ| ಎಸ್ಸಿ, ಎಸ್ಟಿ ಐಕ್ಯತಾ ಸಮಾವೇಶಕ್ಕೆ ಕಾಂಗ್ರೆಸ್ ಸಜ್ಜು
“ತುಮಕೂರಿನ 35 ವಾರ್ಡ್ಗಳಲ್ಲಿ ಅಲ್ಪಸಂಖ್ಯಾತರ ಘಟಕದ ವತಿಯಿಂದ ಮತದಾರರನ್ನು ಜಾಗೃತಿಗೊಳಿಸುವುದು, ಮತದಾನದ ಅರಿವು, ಮಹತ್ವ ತಿಳಿಸುವುದನ್ನು ಈ ಅಭಿಯಾನದ ಮೂಲಕ ಮಾಡಲಾಗುವುದು. ನಾವು ಯಾರ ಮನೆ ಬಾಗಿಲಿಗೂ ಬರುವುದಿಲ್ಲ. ತಮ್ಮ ಹಕ್ಕು ಬೇಕೆಂದು ಪ್ರತಿಪಾದಿಸುವವರು ನಮ್ಮ ಬಳಿ ಬಂದು ತಮ್ಮ ಓಟರ್ ಐಡಿ ಪರಿಶೀಲಿಸಿ, ಖಾತರಿ ಪಡಿಸಿಕೊಳ್ಳಬಹುದು” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮರಳೂರು ವಾರ್ಡ್ನಲ್ಲಿ ವಿವಿಧ ಭಾಗಗಳಲ್ಲಿ ಸಂಚರಿಸಿ ಮತದಾರರನ್ನು ಜಾಗೃತಿಗೊಳಿಸಲಾಯಿತು. ಕಾಂಗ್ರೆಸ್ ಮುಖಂಡರಾದ ಶಿವಾಜಿ, ಅಬ್ದುಲ್ ವಾಹಿದ್ ಆನ್ಸರ್, ಥಾಮಸ್, ರಹೀಮ್ ಸೇರಿದಂತೆ ಹಲವು ನಾಯಕರು ಮತ್ತು ಕಾರ್ಯಕರ್ತರು ಹಾಜರಿದ್ದರು.