
- ಒತ್ತುವರಿ ತೆರವು ವಿಚಾರದಲ್ಲಿ ಸರ್ಕಾರ ನಾಟಕವಾಡುತ್ತಿದೆ
- ಬೆಂಗಳೂರು ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ
ರಾಜಧಾನಿ ಬೆಂಗಳೂರು ಮಹಾನಗರದ ಮೂಲ ಸೌಕರ್ಯಗಳಿಗೆ ನಾನು ಮುಖ್ಯಮಂತ್ರಿಯಾಗಿದ್ದಾಗ ಅಡ್ಡಿಪಡಿಸಿದ್ದೇನೆ ಎಂದು ಯಾರಾದರೂ ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಇದ್ದಕ್ಕಿದ್ದ ಹಾಗೆ ರಾಜ್ಯ ಸರ್ಕಾರ ಒತ್ತುವರಿ ತೆರವಿನ ನಾಟಕವಾಡುತ್ತಿದೆ. ನಾನು ಈಗಾಗಲೇ ಕಲಾಪದಲ್ಲಿ ಹೇಳಿದ್ದೇನೆ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಿದಂತೆ ನಾಲ್ಕೈದು ಕಡೆ ತೆರವು ಮಾಡಿ ಸುಮ್ಮನಾಗುವುದಲ್ಲ. ಹಿಂದಿನ 25 ವರ್ಷಗಳಿಂದ ಆದ ಅನಾಹುತಗಳು ಸೇರಿ ಕಳೆದ ಐದು ವರ್ಷಗಳಿಂದ ನಗರದಲ್ಲಿ ಆಗಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು" ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ವಿಶೇಷ | ಹೈಟೆಕ್ ಬಸ್ ಮೂಲಕ ʼಕರ್ನಾಟಕ ಯಾತ್ರೆʼಗೆ ಸಜ್ಜಾಗುತ್ತಿದ್ದಾರೆ ಸಿದ್ದರಾಮಯ್ಯ!
"ಜೆಡಿಎಸ್ ಕಾಲದಲ್ಲಿ ಆಗಿರುವ ನಿರ್ಧಾರಗಳಿಂದ ಲೋಪ ಆಗಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ನಾನು ಅಧಿಕಾರದಲ್ಲಿ ಇದ್ದಾಗ ಏನಾದರೂ ಲೋಪ ಆಗಿದ್ದರೆ, ಆರೋಪ ಮಾಡಿರುವ ಕಾಂಗ್ರೆಸ್ ಮತ್ತು ಬಿಜೆಪಿ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡ್ತೀನಿ" ಎಂದರು.
"ನಾನು ಬೆಂಗಳೂರು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ" ಎಂದು ಮಾಜಿ ಮುಖ್ಯಮಂತ್ರಿಗಳು ತೀಕ್ಷ್ಣವಾಗಿ ಹೇಳಿದರು.