ಬಾಂಗ್ಲಾದೇಶ | ಇಂಧನ ಬೆಲೆ ಏರಿಕೆ; ಸರ್ಕಾರ ವಿರುದ್ಧ ಪ್ರತಿಭಟನೆ

  • ಹಸೀನಾ ಸರ್ಕಾರವು ಇಂಧನ ದರ ಹೆಚ್ಚಿಸಿದೆ
  • ವಾರ್ಷಿಕ ಹಣದುಬ್ಬರ ಶೇ. 7.48ಕ್ಕೆ ತಲುಪಿದೆ

ಬಾಂಗ್ಲಾದೇಶದಲ್ಲಿ ಇಂಧನ ಬೆಲೆಗಳು ತೀವ್ರ ಏರಿಕೆಯಾಗುತ್ತಿದ್ದು, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಂಗ್ಲಾದೇಶದ ಮಾಧ್ಯಮಗಳ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಶೇ. 50ಕ್ಕೆ ಮೀರಿ ಹೆಚ್ಚಿಸಿದ್ದು, ಇದು 'ಈವರೆಗಿನ ಅತ್ಯಧಿಕ ಹೆಚ್ಚಳ' ಎನ್ನಲಾಗಿದೆ. ಬೆಲೆಯೇರಿಕೆ ವಿರುದ್ಧ ಆಕ್ರೋಶಗೊಂಡ ಜನರು, ಬಾಂಗ್ಲಾದೇಶದಾದ್ಯಂತ ಇಂಧನ ಕೇಂದ್ರಗಳನ್ನು ಸುತ್ತುವರಿದು ಬೆಲೆಯೇರಿಕೆ ಹಿಂತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸರ್ಕಾರವು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 34 ಟಾಕಾ, ಆಕ್ಟೇನ್ ಪ್ರತಿ ಲೀಟರ್‌ಗೆ 46 ಟಾಕಾ ಮತ್ತು ಪೆಟ್ರೋಲ್ ದರ ಲೀಟರ್‌ಗೆ 44 ಟಾಕಾ ಹೆಚ್ಚಿಸಿದೆ. ಇಂಧನ ಬೆಲೆಯು ಶೇ. 51.7 ರಷ್ಟು ಏರಿಕೆಯಾಗಿದ್ದು, ದೇಶವು ಸ್ವಾತಂತ್ರ್ಯ ಪಡೆದ ನಂತರದ ಅತ್ಯಧಿಕ ಏರಿಕೆ ಇದಾಗಿದೆ ಎಂದು ಬಾಂಗ್ಲಾದೇಶದ ಮಾಧ್ಯಮಗಳು ಹೇಳಿವೆ.

ಈ ಸುದ್ದಿ ಓದಿದ್ದೀರಾ? 42,000ಕ್ಕೂ ಹೆಚ್ಚು ಸೈನಿಕರ ಸಾವು, 1,805 ಟ್ಯಾಂಕ್‌ಗಳು ನಷ್ಟ; ಯುದ್ಧದಿಂದ ರಷ್ಯಾಗೆ ಆದ ಹಾನಿ

ಸರ್ಕಾರವು ಇಂಧನ ಬೆಲೆ ಏರಿಕೆ ಘೋಷಿಸುತ್ತಿದ್ದಂತೆ, ಜನರು ತಮ್ಮ ವಾಹನಗಳ ಟ್ಯಾಂಕ್‌ಗಳನ್ನು ತುಂಬಲು ತಡರಾತ್ರಿಯಲ್ಲೇ ಇಂಧನ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಾಗಿರುವ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಇಂಧನ ಬೆಲೆ ಏರಿಕೆಯಾಗಿದೆ ಎಂದು ಬಾಂಗ್ಲಾದೇಶದ ಇಂಧನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಬಾಂಗ್ಲಾದೇಶದಲ್ಲಿ ಹಣದುಬ್ಬರವು ಸತತ ಒಂಬತ್ತು ತಿಂಗಳವರೆಗೆ ಶೇ.6 ರಷ್ಟು ದಾಖಲಾಗಿತ್ತು. ಜುಲೈನಲ್ಲಿ ವಾರ್ಷಿಕ ಹಣದುಬ್ಬರವು ಶೇ. 7.48ಕ್ಕೆ ತಲುಪಿದೆ. ಹೀಗಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ತಮ್ಮ ದೈನಂದಿನ ಖರ್ಚುಗಳನ್ನು ಸರಿದೂಗಿಸಲು ಪರದಾಡುವಂತಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್