ಬೆಳಗಾವಿ | ಕಾಳಜಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ

  • ಮಳೆಯಿಂದ ಹಾನಿಯಾದ ಬಹುತೇಕ ಮನೆಗಳಿಗೆ ಪರಿಹಾರ 
  • ಮುಂದಿನ ಒಂದೆರಡು ದಿನಗಳಲ್ಲಿ ಎಲ್ಲರಿಗೂ ಪರಿಹಾರ ವಿತರಣೆ

ರಾಜ್ಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಯಿಂದ ಕೆಲವು ಭಾಗಗಳಲ್ಲಿ ಪ್ರವಾಹ, ಬೆಳೆಹಾನಿ ಮತ್ತು ಮಳೆಹಾನಿಯಂತಹ ದುರ್ಘಟನೆಗಳಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಇದಕ್ಕೆ ಬೆಳಗಾವಿ ಜಿಲ್ಲೆ ಹೊರತಾಗಿಲ್ಲ. ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಅತಿವೃಷ್ಟಿ ಉಂಟಾಗಿರುವುದರಿಂದ ಸಾಕಷ್ಟು ಮನೆಗಳು ಕುಸಿದು ಬಿದ್ದಿದ್ದು, ಕೆಲವು ಮನೆಗಳಿಗೆ ನೀರು ನುಗ್ಗಿರುವ ಪರಿಣಾಮ ಹಲವು ಕುಟುಂಬಗಳು ಬೀದಿಗೆ ಬಿದ್ದಿದ್ದವು.

ಇಂತಹ ಕುಟುಂಬಗಳಿಗಾಗಿ ಬೆಳಗಾವಿ ನಗರದ ಮಂಡೋಳಿ ರಸ್ತೆಯ ಕೈವಲ್ಯ ಯೋಗ ಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಈ ಕೇಂದ್ರಕ್ಕೆ ರಾತ್ರಿ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕಾಳಜಿ ಕೇಂದ್ರದ ವ್ಯವಸ್ಥೆಯನ್ನು ಪರಿಶೀಲಿಸಿದರು.

ಈ ಸುದ್ದಿ ಓದಿದ್ದೀರಾ? : ಚಿಕ್ಕಮಗಳೂರು | ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ಸಾಮಗ್ರಿಗಳ ವಿತರಣೆ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ಕಾಳಜಿ ಕೇಂದ್ರದಲ್ಲಿ 15 ಜನರಿಗೆ ಆಶ್ರಯ ಕಲ್ಪಿಸಿ, ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಾಗಿ ಇರುವುದರಿಂದ ವೈದ್ಯಕೀಯ ತಂಡವನ್ನು ಸ್ಥಳದಲ್ಲಿಯೇ ಇರಲು ನಿಯೋಜಿಸಲಾಗಿದೆ.” ಎಂದು ತಿಳಿಸಿದ್ದಾರೆ.

“ಮನೆಗೆ ನೀರು ನುಗ್ಗಿ ಹಾನಿಯಾಗಿರುವ ಕೆಲವು ಕುಟುಂಬಗಳಿಗೆ ಈಗಾಗಲೇ ಪರಿಹಾರವನ್ನು ನೀಡಿದ್ದು, ಇನ್ನು ಕೆಲವು ಕುಟುಂಬಗಳಿಗೆ ಸಂಬಂಧಿಸಿದಂತೆ ದಾಖಲೆಗಳು ದೊರಕದಿರುವುದರಿಂದ ಪರಿಹಾರವನ್ನು ನೀಡಲು ಸಾಧ್ಯವಾಗಿಲ್ಲ. ಒಂದೆರಡು ದಿನಗಳಲ್ಲಿ ಅವರಿಗೂ ಪರಿಹಾರ ವಿತರಿಸಲಾಗುತ್ತದೆ.” ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಆಯುಕ್ತ ಡಾ ರುದ್ರೇಶ್ ಘಾಳಿ, ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ ಮತ್ತಿತರರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್