ಗೋಮಾತೆ ಹೆಸರಲ್ಲೂ ಲೂಟಿಗೆ ನಿಂತ ಬಿಜೆಪಿ ಸರ್ಕಾರ: ಅಂಕಿ ಅಂಶದೊಂದಿಗೆ ಗಂಭೀರ ಆರೋಪ ಮಾಡಿದ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್‌ ಖರ್ಗೆ
  • ʼಮೇವು ಪೂರೈಕೆಗೆ ಹಣ ಬಿಡುಗಡೆಗಾಗಿ 8.5% ಕಮಿಷನ್ ನೀಡಬೇಕಿದೆʼ
  • ʼಸರ್ಕಾರ ಇದುವರೆಗೂ ಕೇವಲ ಮೂರು ಗೋಶಾಲೆ ಮಾತ್ರ ತೆರೆದಿದೆʼ

"ಬಿಜೆಪಿ ಸರ್ಕಾರ ಯಾರನ್ನೂ ಬಿಡುವುದಿಲ್ಲ. ಗೋಮಾತೆ ಹೆಸರಲ್ಲೂ ಲೂಟಿ ಮಾಡುತ್ತಿದೆ. ಗೋಶಾಲೆ ಮೇವು ಪೂರೈಕೆಗೆ ಹಣ ಬಿಡುಗಡೆಗಾಗಿ 8.5% ಕಮಿಷನ್ ನೀಡಬೇಕು ಎಂದು ಹರ್ಷ ಅಸೋಸಿಯೇಟ್ಸ್ 14-04-2022ರಲ್ಲಿ ಪ್ರಧಾನಿಗೆ ಪತ್ರ ಬರೆದಿದೆ" ಎಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು. 

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “₹5 ಸಾವಿರ ಕೋಟಿ ಭರಿಸಲು ಸರ್ಕಾರಕ್ಕೆ ಆಗುವುದಿಲ್ಲ ಎಂದು ಬಿಜೆಪಿಯವರಿಗೆ ಅರಿವಾದಾಗ ಗೋವುಗಳನ್ನು ದತ್ತು ನೀಡುವ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದರು. ಇದರ ಪ್ರಕಾರ ರಾಜ್ಯದ ಜನ ಗೋಶಾಲೆಗಳ ಹಸುಗಳನ್ನು ದತ್ತು ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಸರ್ಕಾರ ಇದುವರೆಗೂ ಅವರ ಪ್ರಕಾರ 6 ಗೋಶಾಲೆ ಆರಂಭ ಮಾಡಿದ್ದು ನನ್ನ ಪ್ರಕಾರ ಕೇವಲ ಮೂರು ಮಾತ್ರ. ಸಿಎಂ ಹಾಗೂ ಮಂತ್ರಿಗಳ ಕ್ಷೇತ್ರದಲ್ಲಿ ಒಂದೂ ಗೋಶಾಲೆ ಇಲ್ಲ” ಎಂದರು.

Eedina App

“ಮಂತ್ರಿಗಳ ಕ್ಷೇತ್ರದಲ್ಲಿ 9 ಗೋಶಾಲೆಯಲ್ಲಿ 306 ಗೋವುಗಳಿವೆ. ಇದರಲ್ಲಿ ದತ್ತು ತೆಗೆದುಕೊಂಡಿರುವುದು 10. ಚಿಕ್ಕಬಳ್ಳಾಪುರದಲ್ಲಿ 2 ಗೋಶಾಲೆಯಲ್ಲಿ 4 ಜಾನುವಾರುಗಳಿವೆ. ಧಾರವಾಡ 5 ಗೋಶಾಲೆಯಲ್ಲಿ 22 ಜಾನುವಾರುಗಳಲ್ಲಿ 3 ಮಾತ್ರ ದತ್ತು ಪಡೆಯಲಾಗಿದೆ. ಹಾವೇರಿಯಲ್ಲಿ 2 ಗೋಶಾಲೆ ಇದ್ದು, 108 ಹಸುಗಳ ಪೈಕಿ ಕೇವಲ 4 ದತ್ತು ಪಡೆಯಲಾಗಿದೆ. ಉತ್ತರ ಕನ್ನಡದಲ್ಲಿ 8 ಗೋಶಾಲೆಯಲ್ಲಿ 594 ಜಾನುವಾರು ಪೈಕಿ 6 ಮಾತ್ರ ದತ್ತು ಪಡೆಯಲಾಗಿದೆ” ಎಂದು ತಿಳಿಸಿದರು. 

“ಮುಖ್ಯಮಂತ್ರಿಗಳಿಗೆ ಗಡುವು ನೀಡುವ ಸಂಘಟನೆಗಳು ಎಲ್ಲಿ ಹೋಗಿವೆ? ಜವಾಬ್ದಾರಿ ನಿಭಾಯಿಸುವಾಗ ಓಡಿ ಹೋಗುವುದು ಏಕೆ? ನಮ್ಮ ರಾಜ್ಯದಲ್ಲಿ 177 ಗೋಶಾಲೆಗಳಲ್ಲಿ 21,207 ಜಾನುವಾರು ಪೈಕಿ ದತ್ತು ಪಡೆಯಲಾದ ಜಾನುವಾರುಗಳು ಕೇವಲ 151 ಜಾನುವಾರು ಮಾತ್ರ. ಇದು ಬಿಜೆಪಿ ನಾಯಕರ ಯೋಗ್ಯತೆ. ಬಿಜೆಪಿ ಶಾಸಕರು, ಮಂತ್ರಿಗಳು ಎಲ್ಲಿ ಹೋದರು? ಆರ್‌ಎಸ್‌ಎಸ್‌ನವರು, ಗೋಮಾತೆ ಮೇಲೆ ಪ್ರೀತಿ ತೋರುವವರು ಎಲ್ಲಿ ಹೋದರು” ಎಂದು ಪ್ರಶ್ನಿಸಿದ್ದಾರೆ.

AV Eye Hospital ad

“ಪುಣ್ಯಕೋಟಿ ಯೋಜನೆ ಹಾಗೂ ಗೋಶಾಲೆ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿದೆ. ಸರ್ಕಾರ ಹೇಳಿದ 14 ಕಡೆ ಗೋಶಾಲೆ ಇಲ್ಲ ಎಂದು ಹೇಳಿದೆ. ಗೋಶಾಲೆ ಕಾಗದದ ಮೇಲೆ ಇದ್ದಂತೆ ಇದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಸಿಎಂ ಅವರು ತಮ್ಮ ಜನ್ಮದಿನದಂದು 11 ಹಸುಗಳನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳಿದರು. ಆ 11 ಹಸುಗಳು ಎಲ್ಲಿವೆಯೋ ಗೊತ್ತಿಲ್ಲ. ಮುಖ್ಯಮಂತ್ರಿಗಳು ತಮ್ಮ ಶಾಸಕರಿಗೆ ಗೋವು ದತ್ತು ಪಡೆಯಲು ಒತ್ತಾಯ ಮಾಡುತ್ತಿದ್ದಾರೆ. ಆದರೆ ಸಿಎಂ ಮಾತಿಗೆ ಬೆಲೆ ಇಲ್ಲದೇ ಯಾರೂ ದತ್ತು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಸರ್ಕಾರಿ ನೌಕರರ ಮೇಲೆ ಒತ್ತಡ ಹೇರಿ ಕಡ್ಡಾಯವಾಗಿ ದತ್ತು ತೆಗೆದುಕೊಳ್ಳಬೇಕು ಎಂದು ಆದೇಶ ನೀಡುತ್ತಿದ್ದಾರೆ” ಎಂದು ಟೀಕಿಸಿದರು.

“ಸರ್ಕಾರಿ ಸಿಬ್ಬಂದಿ ವೇತನದಲ್ಲಿ ಯಾಕೆ ಹಣ ಕಡಿತ ಮಾಡುತ್ತೀರಿ, ಬಿಜೆಪಿ ಶಾಸಕರ ವೇತನದಲ್ಲಿ ಕಡಿತ ಮಾಡಿ. ಬಿಜೆಪಿ ನಾಯಕರಿಗೆ 40% ಕಮಿಷನ್ ಆದಾಯ ಇರುವುದರಿಂದ ಇವರು ತಿಂಗಳ ವೇತನದಲ್ಲಿ 100% ರಷ್ಟು ಮೊತ್ತ ಗೋಶಾಲೆಗೆ ದಾನ ಮಾಡಲಿ” ಎಂದರು.

ಕಾಂಗ್ರೆಸ್

“ಮೊದಲ ವರ್ಷ ರಾಜ್ಯದಲ್ಲಿ 1,71,672 ಜಾನುವಾರು ನಿರ್ವಹಣೆಗೆ ₹464.17 ಕೋಟಿ, ಎರಡನೇ ವರ್ಷಕ್ಕೆ 3,05,337 ಜಾನುವಾರುಗಳ ನಿರ್ವಹಣೆಗೆ ₹170.13 ಕೋಟಿ, ಮೂರನೇ ವರ್ಷಕ್ಕೆ 4,04,269 ಜಾನುವಾರು ನಿರ್ವಹಣೆಗೆ ₹1032.90 ಕೋಟಿ, ನಾಲ್ಕನೇ ವರ್ಷಕ್ಕೆ 4,73,415 ಜಾನುವಾರು ನಿರ್ವಹಣೆಗೆ ₹1200.12 ಕೋಟಿ ಹಣ ಬೇಕಾಗುತ್ತದೆ. ಇದು ಕೇವಲ ಮೇವಿನ ಖರ್ಚು. ಇವರು ಪ್ರತಿ ಜಾನುವಾರಿನ ಮೇವಿಗೆ 70 ರೂ. ನಿಗದಿ ಮಾಡಿದ್ದಾರೆ. ಆದರೆ 150 ರೂ.ಗಿಂತ ಕಡಿಮೆ ಮೊತ್ತಕ್ಕೆ ಮೇವು ಸಿಗುತ್ತಿಲ್ಲ. ಒಟ್ಟು ಇವರು ಗೋಶಾಲೆಗಳಲ್ಲಿ ಜಾನುವಾರು ಸಾಕಲು ₹3512.32 ಕೋಟಿ ಬೇಕು. ಗೋಶಾಲೆ ಮೂಲಭೂತ ಸೌಕರ್ಯಕ್ಕಾಗಿ ₹1208.50 ಕೋಟಿ ಬೇಕು” ಎಂದು ವಿವರಿಸಿದರು.

“ಗೋ ಹತ್ಯೆ ನಿಷೇಧ ಕಾಯ್ದೆಯಿಂದ ರಾಜ್ಯದಲ್ಲಿ 27,250 ಮೆ. ಟನ್ ಗೋಮಾಂಸ ಉತ್ಪತ್ತಿ ಕಡಿಮೆ ಆಗಲಿದೆ. ಇದನ್ನು ಕುರಿ, ಮೇಕೆ ಮಾಂಸದಿಂದ ಸರಿದೂಗಿಸಲು 20+1ರಂತೆ ಘಟಕಗಳನ್ನು 50%ರಷ್ಟು ಸಹಾಯ ಧನ ನೀಡಿ 76,650 ಕುರಿ ಘಟಕಗಳನ್ನು ರೈತರಿಗೆ ನೀಡಬೇಕಿದೆ. ಇದಕ್ಕೆ ₹519.36 ಕೋಟಿ ವೆಚ್ಚ ತಗಲುತ್ತದೆ ಎಂದು ವಿವರಿಸಿದೆ. ಇಲ್ಲಿಯವರೆಗೂ ಒಂದಾದರೂ ಘಟಕ ತೆಗೆದಿದ್ದೀರಾ” ಎಂದು ಪ್ರಶ್ನಿಸಿದರು.

ಈ ಸುದ್ದಿ ಓದಿದ್ದೀರಾ? ʻಪುಣ್ಯಕೋಟಿʼಗಾಗಿ ಸರ್ಕಾರಿ ನೌಕರರ ವೇತನ ಕಡಿತಕ್ಕೆ ರಾಜ್ಯ ಸರ್ಕಾರ ಆದೇಶ : ನೌಕರರ ಸಂಘಗಳಿಂದ ಬಹಿರಂಗ ವಿರೋಧ

“ಬಜೆಪಿ ಸರ್ಕಾರ 275 ಪಶು ಸಂಜೀವಿನಿ ಆಂಬುಲೆನ್ಸ್ ಖರೀದಿ ಮಾಡಿದ್ದು, ನಮ್ಮ 40% ಸರ್ಕಾರ ಎಷ್ಟು ಯಶಸ್ವಿಯಾಗಿ ಕೆಲಸ ಮಾಡುತ್ತಿದೆ ಎಂದರೆ, ಆಂಬುಲೆನ್ಸ್ ಖರೀದಿ ಮಾಡಿ ಅದಕ್ಕೆ ಚಾಲಕರ ನೇಮಕ ಮಾಡಿಲ್ಲ. ಚಾಲಕರು ಇಲ್ಲದ ಮೇಲೆ ಆಂಬುಲೆನ್ಸ್ ಖರೀದಿ ಮಾಡಿದ್ದು ಯಾಕೆ? ಕಮಿಷನ್ ಪಡೆಯಲಾ?” ಎಂದು ಕುಟುಕಿದ್ದಾರೆ.

“ಕಳೆದ ಆರು ತಿಂಗಳಲ್ಲಿ 20 ಲಕ್ಷ ಜಾನುವಾರುಗಳಿಗೆ ಚರ್ಮಗಂಟು ಸೋಂಕು ತಗುಲಿದೆ. ಇದರಲ್ಲಿ 11 ಸಾವಿರ ಜಾನುವಾರು ಸತ್ತಿರುವ ವರದಿ ಆಗಿದೆ. ಇದಕ್ಕೆ ಲಸಿಕೆ ಎಲ್ಲಿದೆ? ಈ ರೋಗದಿಂದ ಹಾಲು ಉತ್ಪಾದನೆಯಲ್ಲಿ 10%-12% ಕುಸಿತ ಆಗಿದೆ. ರಾಜ್ಯದಲ್ಲಿ 94 ಲಕ್ಷ ಲೀಟರ್ ಹಾಲು ಉತ್ಪಾದನೆ ಈಗ 90 ಲಕ್ಷ ಲೀಟರ್‌ಗೆ ಕುಸಿದಿದೆ. ಪ್ರತಿ ನಿತ್ಯ 4 ಲಕ್ಷ ಲೀಟರ್ ಹಾಲು ಉತ್ಪಾದನೆ ಕಡಿಮೆ ಆಗಿದೆ. ಈ ಮಧ್ಯೆ ಹಾಲಿನ ದರ ಏರಿಕೆ ಮಾಡಲಾಗಿದ್ದು ಇದು ರೈತರಿಗೆ ಸಿಗುತ್ತಿದೆಯೇ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app