ಹಿಟ್ಲರ್ ಚುನಾವಣೆ ಗೆಲ್ಲುತ್ತಿದ್ದ ಎನ್ನುವುದು ಬೇಜವಾಬ್ದಾರಿಯುತ ಹೇಳಿಕೆ: ಬಿಜೆಪಿ ಟೀಕೆ

Ravi Shankar Prasad
  • ಹಿಟ್ಲರ್ ಚುನಾವಣೆ ಗೆಲ್ಲುತ್ತಿದ್ದ ಎಂಬ ರಾಹುಲ್ ಗಾಂಧಿ ಹೇಳಿಕೆ
  • ನಾಚಿಕೆಗೇಡು ಮತ್ತು ಬೇಜವಾಬ್ದಾರಿಯುತ ಎಂದು ಜರೆದ ಬಿಜೆಪಿ

ದೇಶದ ಎಲ್ಲಾ ಸಂಸ್ಥೆಗಳನ್ನು ಆರ್‌ಎಸ್‌ಎಸ್‌ ನಿಯಂತ್ರಿಸುತ್ತಿದೆ ಎಂದು ರಾಹುಲ್ ಗಾಂಧಿ ಶುಕ್ರವಾರ ಮಾಡಿರುವ ಆರೋಪಕ್ಕೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

“ರಾಹುಲ್ ಗಾಂಧಿ ನಾಚಿಕೆಗೇಡಿನ ಮತ್ತು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ರಾಹುಲ್ ಅವರ ಅಜ್ಜಿ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಘೋಷಿಸಿ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಂಡಿದ್ದರು. ಭಾರತದ ಸಾಂವಿಧಾನಿಕ ಸಂಸ್ಥೆಗಳು ನಿಮ್ಮ ಭ್ರಷ್ಟಾಚಾರದ ರಕ್ಷಣೆ ಮಾಡಬೇಕು ಎಂದು ನಿರೀಕ್ಷಿಸುವುದನ್ನು ಬಿಡಿ. ಜನರೇ ನಿಮ್ಮ ಮಾತು ಕೇಳದೆ ಇದ್ದಾಗ ನಮ್ಮನ್ನೇಕೆ ದೂಷಿಸುತ್ತೀರಿ, ಜನರು ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸರ್ವಾಧಿಕಾರ ನೋಡಿದ್ದರು. ಬಿಜೆಪಿ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಗೌರವಿಸುತ್ತದೆ” ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು “ಹಿಟ್ಲರ್ ಕೂಡ ಚುನಾವಣೆ ಗೆಲ್ಲುತ್ತಿದ್ದ” ಎಂದು ಬಿಜೆಪಿಯನ್ನು ಕುಟುಕಿದ್ದರು. “ಹಿಟ್ಲರ್ ಕೂಡ ಚುನಾವಣೆ ಗೆಲ್ಲುತ್ತಿದ್ದ. ಅವರು ಹೇಗೆ ಗೆಲ್ಲುತ್ತಿದ್ದರು? ಅವರ ಬಳಿ ಜರ್ಮನಿಯ ಎಲ್ಲ ಸಂಸ್ಥೆಗಳ ನಿಯಂತ್ರಣವಿತ್ತು. ನನಗೂ ವ್ಯವಸ್ಥೆಯ ಮೇಲೆ ನಿಯಂತ್ರಣ ಕೊಡಿ, ನಾನೂ ನಿಮಗೆ ಚುನಾವಣೆ ಗೆದ್ದು ತೋರಿಸುತ್ತೇನೆ” ಎಂದು ಪತ್ರಿಕಾ ಗೋಷ್ಠಿಯಲ್ಲಿ ರಾಹುಲ್ ಗಾಂಧಿ ಹೇಳಿದ್ದರು.

“ತನ್ನ ನೇತೃತ್ವದಲ್ಲಿ ಕಾಂಗ್ರೆಸ್ ಪದೇ ಪದೆ ಸೋಲುತ್ತಿರುವುದು ಮತ್ತು ಇ.ಡಿ. ವಿಚಾರಣೆ ಎದುರಿಸುತ್ತಿರುವುದಕ್ಕೆ ರಾಹುಲ್ ಗಾಂಧಿ ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂಸ್ಥೆಗಳನ್ನು ದೂಷಿಸುವುದನ್ನು ನಿಲ್ಲಿಸಲಿ. ಕಾಂಗ್ರೆಸ್ ಪಕ್ಷದೊಳಗೆ ಎಲ್ಲವೂ ಗಾಂಧಿಮಯವಾಗಿದೆ; ಉತ್ತಮ ನಾಯಕರಿಲ್ಲ. ಅದಕ್ಕೇ ಅದು ಸೋಲುತ್ತಿದೆ” ಎಂದು ಬಿಜೆಪಿ ಪ್ರತಿಹೇಳಿಕೆ ನೀಡಿದೆ.

ರಾಹುಲ್ ಗಾಂಧಿ ಸರ್ಕಾರದ ಮೇಲೆ ಹೊರಿಸಿದ ಆರೋಪಗಳಿಗೆ ಒಂದೊಂದಾಗಿ ಉತ್ತರಿಸಿದ ರವಿಶಂಕರ್ ಪ್ರಸಾದ್, ನ್ಯಾಷನಲ್ ಹೆರಾಲ್ಡ್ ಕೇಸ್ ವಿರುದ್ಧ ಇ.ಡಿ. ವಿಚಾರಣೆಯಲ್ಲಿ ಕೇಂದ್ರೀಯ ಸಂಸ್ಥೆಗಳ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ಸಲಹೆ ನೀಡುತ್ತಾರೆ. ನಿಮ್ಮ ಪಕ್ಷದೊಳಗೆ ಪ್ರಜಾಪ್ರಭುತ್ವವಿದೆಯೆ” ಎಂದು ಬಿಜೆಪಿ ಪ್ರಶ್ನಿಸಿದೆ. ರಾಹುಲ್ ಗಾಂಧಿ ಅವರು, “ಭಾರತದಲ್ಲಿ ಪ್ರಜಾಪ್ರಭುತ್ವ ಅಸು ನೀಗಿದೆ” ಎಂದು ಹೇಳಿದ್ದರು.

ಈ ಸುದ್ದಿಯನ್ನು ಓದಿದ್ದೀರಾ?: ಭಾರತದಲ್ಲಿ ಪ್ರಜಾಪ್ರಭುತ್ವ ಅಸುನೀಗಿದೆ, ಸರ್ವಾಧಿಕಾರ ಚಾಲ್ತಿಯಲ್ಲಿದೆ: ರಾಹುಲ್ ಗಾಂಧಿ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಐದು ಲಕ್ಷ ರೂಪಾಯಿಗೆ ₹5000 ಕೋಟಿ ಮೌಲ್ಯದ ಆಸ್ತಿಯನ್ನು ಕಾಂಗ್ರೆಸ್ ವಶಪಡೆದುಕೊಂಡಿದೆ ಎಂದು ಅವರು ಆರೋಪಿಸಿದರು. “ರಾಹುಲ್ ಗಾಂಧಿ ಇಂದು ಶುದ್ಧ ಸುಳ್ಳು ಹೇಳಿದ್ದಾರೆ. ಎರಡು ದಿನಗಳ ಹಿಂದೆ ಸಂಸತ್ತಿನಲ್ಲಿ ಚರ್ಚೆಯಾದಾಗ, ಕಾಂಗ್ರೆಸ್ ಪಕ್ಷದ ಸಂಸದರು ಅದರಲ್ಲಿ ಭಾಗವಹಿಸಿದ್ದರೆ, ಇಲ್ಲವೆ? ಹಣದುಬ್ಬರ ಮತ್ತು ನಿರುದ್ಯೋಗದ ಚರ್ಚೆ ಎನ್ನುವ ನೆಪವನ್ನು ಇಟ್ಟುಕೊಂಡು ಕಾಂಗ್ರೆಸ್‌ ಪ್ರತಿಭಟಿಸುತ್ತಿದೆ. ಮುಖ್ಯವಾಗಿ ಇ.ಡಿ.ಯನ್ನು ಬೆದರಿಸಿ ಒಂದು ಕುಟುಂಬವನ್ನು ರಕ್ಷಿಸುವ ಯತ್ನವಾಗುತ್ತಿದೆ” ಎಂದು ಅವರು ದೂಷಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್