ಲಂಚ-ಮಂಚದ ಹೇಳಿಕೆ| ಶಾಸಕ ಪ್ರಿಯಾಂಕ್ ಖರ್ಗೆ ಬಂಧನಕ್ಕೆ ಬಿ ಎಸ್ ಯಡಿಯೂರಪ್ಪ ಆಗ್ರಹ

B S Yediyurappa
  • ಸಾವರ್ಕರ್‌ಗೆ ಅವಮಾನ ಮಾಡಿದ್ದು ಅಕ್ಷಮ್ಯ ಅಪರಾಧ ಎಂದ ಬಿಎಸ್‌ವೈ
  • ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ: ಪ್ರಿಯಾಂಕ್ ಸ್ಪಷ್ಟನೆ

ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಹೆಣ್ಣುಮಕ್ಕಳಿಗೆ ಅವಮಾನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿರುವ ಅವರು, “ಪ್ರಿಯಾಂಕ್ ಖರ್ಗೆ ಕ್ಷಮೆಯಿಲ್ಲದ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಕೂಡಲೇ ಪ್ರಿಯಾಂಕ್ ಖರ್ಗೆ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಸಾವರ್ಕರ್‌ಗೆ ಅವಮಾನ: ಅಕ್ಷಮ್ಯ ಅಪರಾಧ

ಶಿವಮೊಗ್ಗದ ಮಾಲ್‌ನಲ್ಲಿ ಸಾವರ್ಕರ್‌ ಪೋಟೋ ತೆರವುಗೊಳಿಸಿ ಅಪಮಾನ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಸಾವರ್ಕರ್ ಅವರಿಗೆ ಅಪಮಾನ ಮಾಡಿದವರನ್ನು ಈಗಾಗಲೇ ಬಂಧಿಸಲಾಗಿದೆ. ಈ ರೀತಿ ಹೇಳಿಕೆ ನೀಡುವವರಿಗೆ ಶಿಕ್ಷೆ ಆಗಬೇಕು. ಆಗ ಮಾತ್ರ ಇಂತಹ ಘಟನೆಗಳು ಮರುಕಳಿಸುವುದಿಲ್ಲ. ಇಡೀ ವಿಶ್ವವೇ ಸಾವರ್ಕರ್‌ ಅವರನ್ನು ಕೊಂಡಾಡುತ್ತಿದೆ” ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ?: ಸಾವರ್ಕರ್ ದ್ವಿರಾಷ್ಟ್ರ ಸಿದ್ಧಾಂತ ಕುರಿತ ಬಿಜೆಪಿ ವಿಡಿಯೊ| ಜೈರಾಮ್ ತಿರುಗೇಟು

ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

“ಕರ್ನಾಟಕದ ಯುವತಿಯರಿಗೆ ನೌಕರಿ ಬೇಕೆಂದರೆ ಮಂಚ ಹತ್ತಬೇಕು, ಯುವಕರಿಗೆ ನೌಕರಿ ಬೇಕು ಎಂದರೆ ಲಂಚ ನೀಡಬೇಕು. ಹಾಗಾಗಿ ಇದು ಲಂಚ-ಮಂಚದ ಸರ್ಕಾರವಾಗಿದೆ” ಎಂದು ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದರು.

ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, “ಈ ಸರ್ಕಾರ ಯುವಕರ ವಿರೋಧಿಯಾಗಿದೆ. ಎಂಟು ವರ್ಷಗಳ ಹಿಂದೆ ಚುನಾವಣೆ ಪ್ರಚಾರದಲ್ಲಿ ನರೇಂದ್ರ ಮೋದಿ ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ, ಇರುವ ಉದ್ಯೋಗಗಳು ನಷ್ಟವಾಗಿವೆ” ಎಂದು ಅವರು ಆರೋಪಿಸಿದ್ದರು.

ಪ್ರಿಯಾಂಕ್ ಖರ್ಗೆ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಮತ್ತು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ವಿವಾದದ ನಂತರ ಎಚ್ಚೆತ್ತುಕೊಂಡಿರುವ ಪ್ರಿಯಾಂಕ್ ಖರ್ಗೆ, “ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್