'ಒಕ್ಕಲಿಗರಿಗಲ್ಲದ ಒಕ್ಕಲಿಗ' ಸಿ ಟಿ ರವಿ; 'ಹಿಂದೂ ಮತ್ತು ಜಾತಿ ವೋಟ್‌ ಬ್ಯಾಂಕ್‌' ರಾಜಕೀಯ

ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ "ಹಿಂದೂ" ವೋಟ್‌ಬ್ಯಾಂಕ್‌ನ ಬೆಂಬಲ ಸಿಗುವ ಸಾದ್ಯತೆಗಳು ದಿನೇದಿನೆ ಕಡಿಮೆಯಾಗುತ್ತಿವೆ. ಇದಕ್ಕೆ ಕಾರಣ ಬಿಜೆಪಿ ಸರ್ಕಾರದ ಬ್ರಶ್ಟಾಚಾರ ಮತ್ತು "ಹಿಂದೂ" ಅನ್ನುವ ಐಡಿಯಾಲಜಿಯನ್ನು ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಸಾದ್ಯವಾಗದೆ ಇರುವುದು. ಇನ್ನು ಕುಲ್ಲಾಂಕುಲ್ಲಾ ಜಾತಿ ರಾಜಕಾರಣಕ್ಕೆ ಇಳಿದರೆ, "ಹಿಂದೂ" ವೋಟ್‌ ಬ್ಯಾಂಕ್‌ ಮೇಲೆ ದೊಡ್ಡ ಪೆಟ್ಟು ಬೀಳಲಿದೆ.
C T Ravi

(ಓದುವ ಮುನ್ನ: ಈ ಲೇಖನವನ್ನು ಮಹಾಪ್ರಾಣಗಳು ಮತ್ತು ಷ ಅಕ್ಷರ ಬಳಸದ 'ಎಲ್ಲರ ಕನ್ನಡ'ದಲ್ಲಿ ಬರೆಯಲಾಗಿದೆ)

ಕರ್ನಾಟಕದಲ್ಲಿ ಮುಕ್ಯಮಂತ್ರಿ ಬದಲಾವಣೆಯ ಚರ್ಚೆ ನಿರಂತರ ಎಂದಾಗಿಬಿಟ್ಟಿದೆ. ಈಗ ಹೊಸದಾಗಿ ಕೇಳಿ ಬಂದಿರುವ ಹೆಸರು ಸಿ ಟಿ ರವಿಯವರದ್ದು. ಆದರೆ ಇದು ಬಿಜೆಪಿಯ ಮಟ್ಟಿಗೆ ದೊಡ್ಡ ಹೊಡೆತ ಕೊಡುವುದರಲ್ಲಿ ಅನುಮಾನವಿಲ್ಲ. ಬಿಜೆಪಿಯ ವೋಟ್ ಬ್ಯಾಂಕ್ ಸೃಶ್ಟಿ ಉತ್ತರ ಬಾರತದಲ್ಲಿ ಮತ್ತು ಕರ್ನಾಟಕದಲ್ಲಿ ಹೇಗಾಗಿದೆ ಎಂದು ನೋಡಿದರೆ ಅದು ಅರ್ತವಾಗುತ್ತದೆ.

ಗಾಂದಿ ಸಮಾಜವಾದವನ್ನು ತನ್ನ ಸಂವಿದಾನವನ್ನಾಗಿ ಮಾಡಿಕೊಂಡಿದ್ದ ವಾಜಪೇಯಿ ಕಾಲದ ಬಿಜೆಪಿ, ಆ ದಾರಿಯನ್ನು ಬಿಟ್ಟು 1980ರ ದಶಕದದಲ್ಲಿ "ಹಿಂದೂ" ಅನ್ನುವ ವೋಟ್‌ ಬ್ಯಾಂಕ್‌ ಸೃಷ್ಟಿಸುವ ಕಡೆಗೆ ತನ್ನ ಗಮನ ಹರಿಸಿತು. ಅಡ್ವಾಣಿಯವರು ಸೆಕ್ಯುಲರ್ ಪರಿಕಲ್ಪನೆಯನ್ನು ಲೇವಡಿ ಮಾಡುತ್ತಲೇ ತಮ್ಮ ರತಯಾತ್ರೆಯ ಮೂಲಕ "ಹಿಂದೂ" ವೋಟ್‌ ಬ್ಯಾಂಕ್‌ ಅನ್ನು ಗಣನೀಯವಾಗಿ ಹೆಚ್ಚಿಸಿದರು. ಆದರೂ ವಾಜಪೇಯಿ ಮತ್ತು ಅಡ್ವಾಣಿಯವರಿಗೆ ಸ್ವತಂತ್ರವಾಗಿ ದೆಹಲಿ ಅದಿಕಾರ ಹಿಡಿಯಲು ಸಾದ್ಯವಾಗಲಿಲ್ಲ. ಆದರೆ "ಹಿಂದೂ" ವೋಟ್‌ ಬ್ಯಾಂಕ್‌ ಸೃಶ್ಟಿಯಿಂದ ಉತ್ತರ ಬಾರತದ ಕೆಲವು ರಾಜ್ಯಗಳಲ್ಲಿ ಅದಿಕಾರ ಹಿಡಿಯಲು ಸಾದ್ಯವಾಯಿತು.

ಯಾವಾಗ ಮೋದಿಯವರು ದೆಹಲಿ ಅದಿಕಾರ ಹಿಡಿಯಲು 2014ರಲ್ಲಿ ಬಂದರೊ, ಅವರು ಬಿಜೆಪಿಯ ದಶಕಗಳ ಕನಸಾದ, "ಹಿಂದೂ" ವೋಟ್‌ ಬ್ಯಾಂಕ್‌ ಅನ್ನು ಗಣನೀಯವಾಗಿ ಸೃಶ್ಟಿಸಲು ಹೊರಟರು. ಅಂತಹ "ಹಿಂದೂ" ಮತದಾರರೆ ಮೋದಿಯವರನ್ನು ಎರಡು ಬಾರಿ ಯಾವುದೇ ಪ್ರಜಾತಾಂತ್ರಿಕ ಸ್ಪರ್ದೆಯಿಲ್ಲದೆ ಒಕ್ಕೂಟ ವ್ಯವಸ್ತೆಯ ಪ್ರದಾನಿಯನ್ನಾಗಿ ಮಾಡಿದರೆಂದು ಬಾವಿಸಲಾಗಿದೆ. ಇದರ ಬಗ್ಗೆ ಸ್ವತಹ ಬಿಜೆಪಿಗೇ ಅನುಮಾನವಿದ್ದುದರಿಂದ ಮೊದಲ ಸಾರಿ, ಅಂದರೆ 2014ರಲ್ಲಿ ಅವರು ವಿಕಾಸ್ ಮತ್ತು ಬ್ರಶ್ಟಾಚಾರದ ಮೇಲೆ ಒತ್ತು ಕೊಟ್ಟಿದ್ದರು; ಹಿಂದುತ್ವಕ್ಕಲ್ಲ.

ಆದರೆ 2019ರ ಹೊತ್ತಿಗೆ "ಹಿಂದೂ" ವೋಟ್‌ಬ್ಯಾಂಕ್‌ ಅನ್ನು ಯಶಸ್ವಿಯಾಗಿ ಬಿಜೆಪಿ ಸೃಶ್ಟಿಸಿಕೊಂಡಿತು ಎಂದು  ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಬಾರತದ ಹಲವಾರು ರಾಜ್ಯಗಳಲ್ಲಿ ಬಿಜೆಪಿ ತನ್ನ ಚಾಣಾಕ್ಶತನದಿಂದ "ಹಿಂದೂ"ಅನ್ನುವ ನರೇಟಿವ್‌ ಒಳಗೇ ತನ್ನ ಜಾತಿ ರಾಜಕೀಯವನ್ನು ಮುಂದುವರೆಸುತ್ತ ಬಂದಿರುವುದನ್ನು ನಾವು ಗಮನಿಸಬೇಕು. ಈ ರೀತಿಯ ಪ್ರಯತ್ನದಿಂದಲೇ ಇವತ್ತು "ಹಿಂದೂ" ವೋಟ್‌ಬ್ಯಾಂಕ್‌ನೊಳಗೆ ಹಲವಾರು ಒಬಿಸಿ, ಎಸ್‌ಸಿ/ಎಸ್‌ಟಿ ಮತದಾರರು ಕರಗಿ, ಹಿಂದೂ ವೋಟ್‌ಬ್ಯಾಂಕ್‌ ಶಕ್ತಿಯನ್ನು ಹೆಚ್ಚಿಸುತ್ತಿದ್ದಾರೆ. ಅಂದರೆ ಈ ಹಿಂದೂ ವೋಟ್ ಬ್ಯಾಂಕ್ ಎನ್ನುವುದು ಒಂದು ಕೃತಕ ಸೃಶ್ಟಿ.

ಪ್ರಜಾತಾಂತ್ರಿಕ ಚುನಾವಣೆಯಲ್ಲಿ ಯಶಸ್ವಿಯಾಗಿರುವ ಬಿಜೆಪಿಯು ಜಾತಿ ವಿಚಾರವನ್ನು ಬದಿಗೊತ್ತಿ  ಈ ಕೃತಕ "ಹಿಂದೂ ವೋಟ್‌ಬ್ಯಾಂಕ್‌" ಮೂಲಕವೇ  ನಿರಂತರವಾಗಿ ಮುಂದಿನ ದಿನಗಳಲ್ಲಿ ಚುನಾವಣೆ ಗೆಲ್ಲುತ್ತಾ ಹೋಗಬಹುದೆ ಎನ್ನುವ ಪ್ರಶ್ನೆಯ ಸುತ್ತ ಆಳವಾಗಿ ಯೋಚಿಸಿ ನೋಡಿ. ಅದು ಖಂಡಿತವಾಗಿಯೂ ಸಾಧ್ಯವಿಲ್ಲ ಅನ್ನೋದರಲ್ಲಿ ಅನುಮಾನವೇ ಇಲ್ಲ. ಮೇಲೆ ಪ್ರಸ್ತಾಪಿಸಿದ ವಿಚಾರಗಳ ಹಿನ್ನೆಲೆಯಲ್ಲಿ ಕರ್ನಾಟಕದ ಬಿಜೆಪಿ ರಾಜಕೀಯವನ್ನೇ ಒಂದು ಉದಾಹರಣೆಯನ್ನಾಗಿ ಗಮನಿಸೋಣ.

ಉತ್ತರ ಬಾರತದ ರಾಜ್ಯಗಳಲ್ಲಿ ಕೃತಕ "ಹಿಂದೂ" ವೋಟ್‌ಬ್ಯಾಂಕ್‌ ಸೃಶ್ಟಿಯೊಂದಿಗಾದರೂ ಅದಿಕಾರ ಹಿಡಿಯಲು ಬಿಜೆಪಿಗೆ ಸಾದ್ಯವಾಗಿದೆ. ಆದರೆ ಕರ್ನಾಟಕದಲ್ಲಿ ಯಾರದೇ ಬೆಂಬಲವಿಲ್ಲದೆ ಅದಿಕಾರ ಹಿಡಿಯಲು ಬಿಜೆಪಿಗೆ ಇದುವರೆಗೂ ಸಾದ್ಯವಾಗಿಲ್ಲ. ಬಿಜೆಪಿ ಇಲ್ಲಿ ಯಾವ ರೀತಿಯಲ್ಲಿ ಅಧಿಕಾರ ಹಿಡಿಯುತ್ತಿದೆ ಅನ್ನುವುದನ್ನು ವಿವರಿಸುವ ಅಗತ್ಯವಿಲ್ಲ ಎಂದು ಬಾವಿಸುತ್ತೇನೆ.

ಕರ್ನಾಟಕದಲ್ಲಿ "ಹಿಂದೂ" ವೋಟ್‌ಬ್ಯಾಂಕ್‌ ಯೋಜನೆ ಸಂಪೂರ್ಣವಾಗಿ ಯಶಸ್ವಿಯಾಗದ ಕಾರಣ, ಕರ್ನಾಟಕದಲ್ಲಿ ಬಿಜೆಪಿ ಇಂದಿಗೂ ಚಾಣಾಕ್ಶತನದಿಂದ ತನ್ನ ಜಾತಿ ರಾಜಕಾರಣವನ್ನು ಮುಂದುವರೆಸಿದೆ. ಈಗಾಗಲೇ ಹೇಳಿದಂತೆ ಇತರ ರಾಜ್ಯಗಳಲ್ಲಿ ಕೂಡ ಅದಿಕಾರ ಹಿಡಿಯುವುದು "ಹಿಂದೂ" ವೋಟ್‌ಬ್ಯಾಂಕ್‌ ನಿಂದಷ್ಟೇ ಸಾದ್ಯವಾಗದ ಕಾರಣ ಇತರ ಒಬಿಸಿ, ಎಸ್‌ಸಿ/ಎಸ್‌ಟಿ ಮತ್ತು ಇತ್ತೀಚೆಗೆ ಮುಸ್ಲಿಮ್‌ ಮತದಾರರನ್ನು ಸಹಾ ಸೆಳೆಯಲು ಬಿಜೆಪಿ ಕಾರ್ಯಯೋಜನೆ ರೂಡಿಸಿಕೊಂಡು ಕೆಲಸ ಮಾಡುತ್ತಿದೆ. ಇತ್ತೀಚೆಗೆ ಮದ್ಯಪ್ರದೇಶ ಮತ್ತು ತಮಿಳುನಾಡಿನಲ್ಲಿ ಸ್ತಳೀಯ ಸಂಸ್ತೆಗಳ ಚುನಾವಣೆಗೆ ಮುಸ್ಲಿಂ ಅಬ್ಯರ್ತಿಗಳಿಗೆ ಬಿಜೆಪಿ ಟಿಕೆಟ್‌ ನೀಡುವ ಮೂಲಕ ತನ್ನ ಚುನಾವಣಾ ರಣನೀತಿಯನ್ನು ಅಮೂಲಾಗ್ರವಾಗಿ ಬದಲಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಾತಿ ಮತ್ತು ಮುಸ್ಲಿಂರನ್ನು ಹೊರಗಿಟ್ಟು ಕೃತಕವಾಗಿ ಸೃಶ್ಟಿಸಿದ "ಹಿಂದೂ" ವೋಟ್‌ಬ್ಯಾಂಕ್‌ ಗಟ್ಟಿಯಾಗಿ ಬೆಳೆಯುತ್ತಿದೆಯೇ ಅನ್ನುವ ಪ್ರಶ್ನೆ ಕೇಳಿಕೊಂಡರೆ ಉತ್ತರ ಇಲ್ಲ ಎಂದು ಹೇಳಬಹುದು.

ಕರ್ನಾಟಕದ ವಿಚಾರಕ್ಕೆ ಬರುವುದಾದರೆ ಇಲ್ಲಿ ಕೃತಕ ಹಿಂದೂ ವೋಟ್ ಬ್ಯಾಂಕ್ ಸಹಾ ಸಾದ್ಯವಿಲ್ಲ; ಒಬಿಸಿ ಎಸ್‌ಸಿ/ಎಸ್‌ಟಿಯನ್ನೂ ಪೂರಾ ಹಿಡಿಯಲು ಸಾದ್ಯವಿಲ್ಲ. ಹೀಗಾಗಿ ಅವರು ಪೂರ್ಣ ಬಹುಮತಕ್ಕೆ ಬೇಕಾದಷ್ಟು ಗಳಿಸಬೇಕೆಂದರೆ ಸಾಕಶ್ಟು ಕಸರತ್ತು ಮಾಡಬೇಕಾಗುತ್ತದೆ. ಒಂದು ಕಡೆ ಸಿದ್ದರಾಮಯ್ಯನವರು ಮತ್ತೊಮ್ಮೆ ಅಹಿಂದ ಮತದಾರರನ್ನು ಒಟ್ಟುಗೂಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ಕಡೆ ಡಿ ಕೆ ಶಿವಕುಮಾರ್‌ ಒಕ್ಕಲಿಗ ಮತದಾರರಿಗೆ, 'ನನಗೆ ಮುಕ್ಯಮಂತ್ರಿ ಆಗುವ ಅವಕಾಶ ಒದಗಿಸಿ' ಎಂದು ಮನವಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿಯ ರಾಜಕೀಯ ಪಟ್ಟುಗಳಿಗೆ ಜೆಡಿಎಸ್‌ನವರೂ ತಮ್ಮ ರಣತಂತ್ರವನ್ನು ರೂಪಿಸುತ್ತಿದ್ದಾರೆ.

ಹೀಗಿರುವಾಗ "ಹಿಂದೂ" ವೋಟ್‌ಬ್ಯಾಂಕ್‌ ಮಾತ್ರದಿಂದಲೇ ಕರ್ನಾಟಕದಲ್ಲಿ ಅದಿಕಾರ ಹಿಡಿಯಲು ಸಾಧ್ಯವಿಲ್ಲ ಎನ್ನುವ ಸತ್ಯ ಅರಿತಿರುವ ಬಿಜೆಪಿ ಕೂಡ ಜಾತಿ ರಾಜಕಾರಣವನ್ನು ನೆಚ್ಚಲು ಪ್ರಾರಂಬಿಸಿದೆ. ಯಾವಾಗ ಸಿದ್ದರಾಮಯ್ಯನವರು "ಅಹಿಂದ" ಮತದಾರರ ಒಗ್ಗಟ್ಟಿಗೆ ನಿಂತರೊ, ಆ ಕ್ಶಣದಿಂದಲೇ ಕರ್ನಾಟಕ ಬಿಜೆಪಿ ಜಾತಿ ರಾಜಕೀಯ ಅಬಿಯಾನ ಶುರು ಮಾಡಿದೆ. ಡಿ ಕೆ ಶಿವಕುಮಾರ್‌ ಮತ್ತು ಕುಮಾರಸ್ವಾಮಿಯವರನ್ನು ನಾಟಕೀಯವಾಗಿ ಮಣಿಸಲು ಇವತ್ತಿನವರೆಗೂ ಕಟೋರ ಹಿಂದೂವಾಗಿದ್ದ ಸಿ ಟಿ ರವಿಯವರು ನಾನು ಕೂಡ ಒಕ್ಕಲಿಗ ಅನ್ನಲು ಶುರುಮಾಡಿದ್ದಾರೆ. ಆದರೆ ಈಗಲೂ ಒಕ್ಕಲಿಗ ಮತದಾರರು ಜೆಡಿಎಸ್‌ನೊಂದಿಗೇ ಗಟ್ಟಿಯಾಗಿ ನಿಂತಿದ್ದಾರೆ ಅನ್ನುವ ರಾಜಕೀಯ ವಾತಾವರಣ ಕರ್ನಾಟಕದಲ್ಲಿ ಕಾಣುತ್ತಿದೆ.

ಈ ರೀತಿಯ ಬೆಳವಣಿಗೆಯನ್ನು ಗಮನಿಸಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಒಕ್ಕಲಿಗ ಅಬ್ಯರ್ತಿಯನ್ನು ತನ್ನ ಮುಕ್ಯಮಂತ್ರಿ ಅಬ್ಯರ್ತಿ ಎಂದು ಘೋಷಿಸುವ ಸಾದ್ಯತೆಗಳು ನಿಚ್ಚಳವಾಗಿ ಕಾಣುತ್ತಿವೆ. ಬಹಳ ಕಾಲದಿಂದ ಸೈಡ್ ವಿಂಗ್‌ ನಲ್ಲಿ ಕಾಯುತ್ತಿರುವುದು ಬ್ರಾಹ್ಮಣ ಜೋಶಿ. ಅವರನ್ನು ಸಿಎಂ ಸೀಟಿನಲ್ಲಿ ಕೂರಿಸುವ ಪ್ರಯತ್ನಕ್ಕೆ ದೊಡ್ಡವರ ಬಲ ಇದ್ದರೂ ಅದು ಆಗಿಲ್ಲ. ಜೋಶಿ ಅತವಾ ಇನ್ನೊಬ್ಬ ಬ್ರಾಹ್ಮಣ ಜಾತಿಯವರನ್ನು ಮುಕ್ಯಮಂತ್ರಿ ಅಬ್ಯರ್ತಿ ಎಂದು ಗೋಶಿಸಿದರೂ, ಕೃತಕವಾಗಿ ಸೃಶ್ಟಿಸಿರುವ "ಹಿಂದೂ" ವೋಟ್‌ ಬ್ಯಾಂಕ್‌, ಬ್ರಾಹ್ಮಣ ಜಾತಿಯ ಅಬ್ಯರ್ತಿಯ ಬೆಂಬಲಕ್ಕೆ ನಿಲ್ಲುವುದು ಸಂದೇಹವೆ. ಬಿಜೆಪಿಯಿಂದ ಬ್ರಾಹ್ಮಣ ಜಾತಿಯವರು ಮುಕ್ಯಮಂತ್ರಿ ಅಬ್ಯರ್ತಿಯಾದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಚುನಾವಣೆ ಗೆಲ್ಲಲು ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ಆದ್ದರಿಂದ ಬ್ರಾಹ್ಮಣ ಜಾತಿಯವರನ್ನು ಬಿಜೆಪಿ ಮುಕ್ಯಮಂತ್ರಿ ಎಂದು ಗೋಶಣೆ ಮಾಡುವುದು ರಾಜಕೀಯವಾಗಿ ಸೂಸೈಡ್‌ ಆಗುತ್ತದೆ.

ಹೀಗಾಗಿಯೇ ಸಿದ್ದರಾಮಯ್ಯ, ಶಿವಕುಮಾರ್‌ ಮತ್ತು ಕುಮಾರಸ್ವಾಮಿಯವರ ಎದುರಿಗೆ ನಿನ್ನೆಯಷ್ಟೆ ಒಕ್ಕಲಿಗರಾದ ಸಿ ಟಿ ರವಿಯವರನ್ನು ಮುಕ್ಯಮಂತ್ರಿ ಅಬ್ಯರ್ತಿಯಾಗಿ ಕಣಕ್ಕೆ ಇಳಿಸುವ ಸುದ್ದಿಗಳು ಬಿಜೆಪಿ ಪಡಸಾಲೆಯಲ್ಲಿ ಜೋರಾಗಿ ಕೇಳಿ ಬರುತ್ತಿವೆ.

"ಅಹಿಂದ" ಅಂದರೆ ಸಿದ್ದರಾಮಯ್ಯ, "ಒಕ್ಕಲಿಗ" ಸಮುದಾಯ ಅಂದರೆ ದೇವೇಗೌಡ ಮತ್ತು ಕುಮಾರಸ್ವಾಮಿ ಅನ್ನುವಂತಹ ವಾತಾವರಣದಲ್ಲಿ ಡಿ ಕೆ ಶಿವಕುಮಾರ್‌ ಅವರೇ ಇನ್ನು ಒಕ್ಕಲಿಗ ಐಕಾನ್‌ ಆಗಲು ಹಗಲು ರಾತ್ರಿ ಶ್ರಮ ಪಡುತ್ತಿದ್ದಾರೆ. ಜಾತಿ ರಾಜಕಾರಣದ ಪರಿಸ್ಥಿತಿ ಹೀಗಿರುವಾಗ ನಿನ್ನೆಯವರೆಗೆ 'ಕಟೋರ ಹಿಂದೂ'ವಾಗಿದ್ದ ಸಿ ಟಿ ರವಿಯವರು ಒಕ್ಕಲಿಗರ ಐಕಾನ್‌ ಆಗಲು ಸಾದ್ಯವೆ ಇಲ್ಲ!

ಕರ್ನಾಟಕದ ಬಿಜೆಪಿಯ ದುರಂತ ಏನೆಂದರೆ ಇಲ್ಲಿ 'ಹಿಂದೂ' ವೋಟ್ ಬ್ಯಾಂಕ್ ಸೃಶ್ಟಿಸಲು ಹೊರಟರೆ 'ಜಾತಿ ವೋಟ್ ಬ್ಯಾಂಕ್' ಮಾಡಿಕೊಳ್ಳಲು ಆಗಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ "ಹಿಂದೂ" ವೋಟ್‌ಬ್ಯಾಂಕ್‌ನ ಬೆಂಬಲ ಸಿಗುವ ಸಾದ್ಯತೆಗಳು ದಿನೇದಿನೆ ಕಡಿಮೆಯಾಗುತ್ತಿವೆ. ಇದಕ್ಕೆ ಕಾರಣ ಬಿಜೆಪಿ ಸರ್ಕಾರದ ಬ್ರಶ್ಟಾಚಾರ ಮತ್ತು "ಹಿಂದೂ" ಅನ್ನುವ ಐಡಿಯಾಲಜಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಸಾದ್ಯವಾಗದೆ ಇರುವುದು. "ಹಿಂದೂ" ವೋಟ್ ಬ್ಯಾಂಕ್ ಕಟ್ಟುವಾಗ ಮುಸ್ಲಿಂ ದ್ವೇಶ ಮತ್ತು ಬ್ರಶ್ಟಾಚಾರ ವಿರೋದವನ್ನೂ ಸೇರಿಸಿಯೇ ಕಟ್ಟಲಾಗಿತ್ತು. ಕರ್ನಾಟಕದಲ್ಲಿ ಮುಸ್ಲಿಂ ವಿರೋದದ ರಾಜಕಾರಣಕ್ಕೆ ಒಂದು ಮಿತಿ ಇದೆ. ಮೊನ್ನೆ ತಾನೇ ಹತ್ಯೆಯಾದ ಪ್ರವೀಣ್ ಸಾವಿಗೆ ಪರಿಹಾರ ಕೇಳಿ ಮೆಸೇಜ್ ಮಾಡಿದವರಿಗೆ, ಬಿಜೆಪಿ ಬೆಂಬಲಿಗರು 40% ಕಮಿಶನ್ ಹೊಡೆದ ಮಂತ್ರಿಗಳಿಂದ ದುಡ್ಡು ತಗೊಳ್ಳಿ ಅಂದಿರುವುದನ್ನು ಗಮನಿಸಬೇಕು. ಇನ್ನು ಕುಲ್ಲಾಂಕುಲ್ಲಾ ಜಾತಿ ರಾಜಕಾರಣಕ್ಕೆ ಇಳಿದರೆ, "ಹಿಂದೂ" ವೋಟ್‌ ಬ್ಯಾಂಕ್‌ ಮೇಲೆ ದೊಡ್ಡ ಪೆಟ್ಟು ಬೀಳಲಿದೆ. ಇದೇ ಪ್ರವೀಣ್ ಎಂಬ ಕಾರ್ಯಕರ್ತ ಸದಾನಂದ ಗೌಡರು ತಾನು ಒಕ್ಕಲಿಗ ಹುಡುಗ ಎಂದು ಹೇಳಿಕೊಂಡಿದ್ದ ಟ್ವೀಟ್‌ಗೆ ಕೊಟ್ಟಿರುವ ಉತ್ತರವೇ ಅದಕ್ಕೆ ಸಾಕ್ಶಿ.

ಒಟ್ಟಾರೆಯಾಗಿ ಕರ್ನಾಟಕದ ಬಿಜೆಪಿ "ಹಿಂದೂ" ವೋಟ್‌ಬ್ಯಾಂಕ್‌ ಮತ್ತು "ಜಾತಿ" ವೋಟ್‌ಬ್ಯಾಂಕ್‌ ಅಡ್ಡಕತ್ತರಿಯಲ್ಲಿ ಸಿಕ್ಕಿ ನರಳುತ್ತಿದೆ. ಸಿ ಟಿ ರವಿ ಒಕ್ಕಲಿಗರು ಅನ್ನುವ ಒಂದೇ ಕಾರಣದಿಂದ ಅವರ ನಾಯಕತ್ವದಲ್ಲಿ ಚುನಾವಣೆಗೆ ಹೋದರೆ "ಹಿಂದೂ" ವೋಟ್‌ಬ್ಯಾಂಕ್‌ ಅಲ್ಲೋಲಕಲ್ಲೋಲ ಆಗಲಿದೆ. ಈ ಕಡೆ ಒಕ್ಕಲಿಗರು ಸಿಟಿ ರವಿಯವರ ಬೆಂಬಲಕ್ಕೆ ನಿಲ್ಲುವ ಯಾವ ಲಕ್ಷಣಗಳೂ ಇಲ್ಲ. ಇವತ್ತಿನವರೆಗೂ ಸಿ ಟಿ ರವಿಯವರು ಒಕ್ಕಲಿಗರಿಗೆ ಇರಲಿ, "ಹಿಂದೂ" ವೋಟ್‌ಬ್ಯಾಂಕ್‌ನ ಮತದಾರರಿಗೂ ಯಾವುದೇ ರೀತಿಯ ಸಾಮಾಜಿಕ, ಆರ್ಥಿಕ ಯೋಜನೆಗಳ ಕುರಿತು ಚರ್ಚಿಸಿದ ಉದಾಹರಣೆಗಳಿಲ್ಲ. ಇವರೊಬ್ಬರು ದ್ವೇಶವನ್ನು ರಾಜಕೀಯ ಬಂಡವಾಳ ಮಾಡಿಕೊಂಡು ರಾಜಕೀಯ ಮಾಡುತ್ತಿರುವ ರಾಜಕಾರಣಿ. ಈ ಎಲ್ಲ ಕಾರಣದಿಂದ ಬಿಜೆಪಿಯಲ್ಲಿ ಮುಂದಿನ ಚುನಾವಣೆಯ ಮುಕ್ಯಮಂತ್ರಿ ಅಬ್ಯರ್ತಿ ಯಾರು ಎಂದು ನಿಕರವಾಗಿ ಹೇಳುವುದು ಕಶ್ಟವೇ ಆಗುತ್ತದೆ.

"ಹಿಂದೂ" ವೋಟ್‌ಬ್ಯಾಂಕ್‌ ಕಳೆದುಕೊಳ್ಳುವ ಬಯದಿಂದ ಜಾತಿ ರಾಜಕಾರಣದ ಮೂಲಕ ಮತ್ತೊಮ್ಮೆ ಅದಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿಯನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ರಾಜಕೀಯವಾಗಿ ಸೋಲಿಸುವ ದೊಡ್ಡ ಸುವರ್ಣ ಅವಕಾಶ ಒದಗಿದೆ. ಯಾವ ರೀತಿಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸೆಕ್ಯುಲರ್‌ ರಾಜಕಾರಣದಲ್ಲಿ ಸಿಲುಕಿದೆಯೋ ಅದೇ ರೀತಿಯಲ್ಲಿ ಬಿಜೆಪಿ ಕೂಡ "ಹಿಂದೂ" ವೋಟ್‌ಬ್ಯಾಂಕ್‌ ಮತ್ತು ಜಾತಿ ವೋಟ್‌ಬ್ಯಾಂಕ್‌ ಸುಳಿಯಲ್ಲಿ ಸಿಲುಕಿದೆ.

ಮುಂದಿನ ದಿನಗಳಲ್ಲಿ ಮೂರು ಪಕ್ಷಗಳು ಯಾವ ರೀತಿಯಲ್ಲಿ ತಮ್ಮ ರಾಜಕೀಯ ಸುಳಿಗಳಿಂದ ಹೊರಬಂದು ಅದಿಕಾರ ಹಿಡಿಯುತ್ತವೆ ಎಂದು ಕಾದು ನೋಡೋಣ.

ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರವು
ನಿಮಗೆ ಏನು ಅನ್ನಿಸ್ತು?
6 ವೋಟ್