ವಿದ್ಯುತ್ ಚಾಲಿತ 75 ಬಿಎಂಟಿಸಿ ಬಸ್‌ಗಳಿಗೆ ಸಿಎಂ ಬೊಮ್ಮಾಯಿ ಹಸಿರು ನಿಶಾನೆ

  • ಬಿಎಂಟಿಸಿಯನ್ನು ಸರ್ಕಾರ ಹಂತ ಹಂತವಾಗಿ ಮೇಲೆತ್ತುವ ಕೆಲಸ ಮಾಡುತ್ತಿದೆ
  • ಬೆಂಗಳೂರು ನಗರದಲ್ಲಿ ಬಿಎಂಟಿಸಿಯ ಐದು ಸಾವಿರ ವಾಹನಗಳ ಸಂಚಾರ

ಬೆಂಗಳೂರಿನ ವಿಧಾನಸೌಧ ಮುಂಭಾಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ಯುತ್ ಚಾಲಿತ 75 ಬಸ್ ಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹಸಿರು ನಿಶಾನೆ ತೋರಿಸುವ ಮೂಲಕ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, “ಅಭಿವೃದ್ಧಿಯ ಅಂಗವಾಗಿರುವ ಸಾರಿಗೆ ಇಲ್ಲದೆ ಜೀವನವನ್ನು ನಾವು ಯೋಚನೆ ಮಾಡಲಾಗದು. ಗ್ರಾಮೀಣ ಚಿಂತನೆ ಸಾರಿಗೆ ಪ್ರತಿಯೊಂದು ಹಳ್ಳಿಗೂ ತಲುಪಬೇಕಾಗುತ್ತದೆ” ಎಂದರು.

“ಬಿಎಂಟಿಸಿಗೆ 25 ವರ್ಷ ತುಂಬಿದೆ. ಇತ್ತೀಚೆಗೆ ಬಸ್‌ಗಳ ನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮೊದಲಿಗೆ ಲಾಭದಾಯಕವಾಗಿದ್ದ ಬಿಎಂಟಿಸಿ ಕೋವಿಡ್‌ನಿಂದ ನಷ್ಟಕ್ಕೀಡಾಗಿದೆ. ಅದನ್ನು ಮತ್ತೆ ಹಂತಹಂತವಾಗಿ ಮೇಲೆತ್ತುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಬಿಎಂಟಿಸಿಯ ಐದು ಸಾವಿರ ವಾಹನಗಳು ಬೆಂಗಳೂರು ನಗರದಲ್ಲಿ ಸಂಚರಿಸುತ್ತಿವೆ. ಬೆಂಗಳೂರಿನ ಜನಸಂಖ್ಯೆ ಬೆಳೆಯುತ್ತಿದೆ. ಅದಕ್ಕೆ ಅನುಗುಣವಾಗಿ ಸಾರಿಗೆ ಯೋಜನೆ ರೂಪಿಸಬೇಕಿದೆ. ಎಲ್ಲ ದಿಕ್ಕುಗಳಲ್ಲೂ ಬೆಂಗಳೂರಿನ ಬೆಳವಣಿಗೆ ಆಗುವಂತೆ ಸರ್ಕಾರ ಮಾಡಲಿದೆ” ಎಂದು ತಿಳಿಸಿದರು.

“ಸರ್ಕಾರ ಸಂಪೂರ್ಣವಾಗಿ ಬಿಎಂಟಿಸಿ ಜತೆಗಿದೆ. 2022-23 ಸಾಲಿನಲ್ಲಿ ರೂ. 873 ಕೋಟಿಯನ್ನು ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ನೀಡಿದೆ. ಬಿಎಂಟಿಸಿ ಸಾಕಷ್ಟು ಅಭಿವೃದ್ಧಿ ಅವಶ್ಯಕತೆಯಿದೆ. ಕಳೆದ ಮೂರು ವರ್ಷದಲ್ಲಿ 3 ಸಾವಿರ ಕೋಟಿಯನ್ನು ಸರ್ಕಾರ ಸಾರಿಗೆಗೆ ನೀಡಿದೆ. ಹಂತಹಂತವಾಗಿ ಶ್ರೀನಿವಾಸ್‌ಮೂರ್ತಿ ಅವರ ವರದಿಯನ್ನು ಜಾರಿ ಮಾಡಲಾಗುವುದು. ಸಾರಿಗೆ ಇಲಾಖೆ ಮತ್ತು ಇಂಧನ ಇಲಾಖೆಯನ್ನು ಪುನರಚನೆ ಮಾಡುವ ಅವಶ್ಯಕತೆ ಇದೆ. ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯ ರೂಪಿಸುತ್ತಿದೆ. ಸಮಸ್ಯೆಗಳನ್ನು ಎದುರಿಸಿ ಪರಿಹಾರ ನೀಡುವುದು ನಮ್ಮ ಸರ್ಕಾರದ ಧ್ಯೇಯ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಅಮೃತ ಮಹೋತ್ಸವ ಜಾಹೀರಾತು| ನೆಹರೂ ಭಾವಚಿತ್ರವನ್ನೇ ಕೈಬಿಟ್ಟ ಬೊಮ್ಮಾಯಿ ಸರ್ಕಾರ; ಸಾರ್ವಜನಿಕ ಆಕ್ರೋಶ

ಸಂಚಾರ ಮಾರ್ಗ

ಬಿಎಂಟಿಸಿ ಯು ಹೊಸ ಮಾದರಿಯ 75 ಎಲಿಕ್ಟ್ರಿಕ್ ಬಸ್ಸುಗಳನ್ನು ರಸ್ತೆಗಿಳಿಸಿದೆ. ಸ್ವಿಚ್ ಮೊಬಿಲಿಟಿ ಲಿಮಿಟೆಡ್ ನಿಂದ 12 ಮೀಟರ್ ಉದ್ದದ ನಾನ್ ಎಸಿ ಇ- ಬಸ್ಸುಗಳು ಇವಾಗಿದ್ದು, 40+1 ಆಸನಗಳನ್ನು ಹೊಂದಿದೆ. ಮೆಜೆಸ್ಟಿಕ್-ವಿದ್ಯಾರಣ್ಯಪುರ, ಶಿವಾಜಿನಗರ- ಯಲಹಂಕ, ಯಲಹಂಕ- ಕೆಂಗೇರಿ, ಮೆಜೆಸ್ಟಿಕ್-ಯಲಹಂಕ ಉಪನಗರ, ಹೆಬ್ಬಾಳ– ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗಗಳಲ್ಲಿ ಈ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲಿವೆ.

ಉದ್ಘಾಟನೆಯ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಸ್‌ನಲ್ಲಿ ಸಂಚರಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಾರಿಗೆ ಸಚಿವ ಶ್ರೀರಾಮುಲು, ಬಿಎಂಟಿಸಿ ಅಧ್ಯಕ್ಷ ನಂದೀಶ ರೆಡ್ಡಿ, ಶಾಸಕ ನಾಗರಾಜ ಯಾದವ, ಬಿಎಂಟಿಸಿ ಕಾರ್ಯನಿರ್ವಾಹಕ ವ್ಯವಸ್ಥಾಪಕಿ ಸತ್ಯವತಿ, ಸಾರಿಗೆ ನಿಗಮಗಳ ಪುನಶ್ಚೇತನಕ್ಕಾಗಿ ರಚಿಸಲಾಗಿರುವ ಸಮಿತಿಯ ಮುಖಸ್ಥ ಎಂ ಆರ್ ಶ್ರೀನಿವಾಸಮೂರ್ತಿ, ಸಾರಿಗೆ ಇಲಾಖೆಯ ಕಾರ್ಯದರ್ಶಿ, ನಿರ್ದೇಶಕರು ಹಾಜರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್