
- ಈ ವಿಷಯದಲ್ಲೂ ಸುಳ್ಳಾಡುವ ಜೆಡಿಎಸ್ ತನ್ನ ಸಮಯಸಾಧಕ ಬುದ್ಧಿ ಪ್ರದರ್ಶಿಸಿದೆ: ಬಿಜೆಪಿ
- ಕಾರ್ಯಕ್ರಮದ ಕರೆಯೋಲೆಯಲ್ಲಿ ದೇವೇಗೌಡರ ಹೆಸರಿಲ್ಲದಿರುವುದಕ್ಕೆ ನೆಟ್ಟಿಗರಿಂದ ತರಾಟೆ
ಕರ್ನಾಟಕದಿಂದ ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗ ಎಚ್ ಡಿ ದೇವೇಗೌಡ ಅವರನ್ನು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಆಹ್ವಾನಿಸಿಲ್ಲ ಎಂದು ಜೆಡಿಎಸ್ ಟೀಕಿಸಿದ ಬೆನ್ನಲ್ಲೇ, ಬಿಜೆಪಿ ಈ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿದೆ. ಅತ್ತ ಬಿಜೆಪಿ ಪ್ರತಿಕ್ರಿಯೆಗೆ ನೆಟ್ಟಿಗರು ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜೆಡಿಎಸ್ ಆರೋಪಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಬಿಜೆಪಿ, “ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗ ದೇವೇಗೌಡರಿಗೇ ಮೊದಲ ಆಹ್ವಾನ ಪತ್ರ ಹೋಗಿದ್ದು ಮಾತ್ರವಲ್ಲ, ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದಾರೆ. ಈ ವಿಷಯದಲ್ಲೂ ಸುಳ್ಳಾಡುವ ಜೆಡಿಎಸ್ ತನ್ನ ಸಮಯ ಸಾಧಕ ಬುದ್ಧಿ ಪ್ರದರ್ಶಿಸಿದೆ” ಎಂದು ಕುಟುಕಿದೆ.
ಮುಂದುವರಿದು, “ಇದಷ್ಟೇ ಅಲ್ಲ, ಕನ್ನಡದ ಅಸ್ಮಿತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಈ ಮಣ್ಣಿಗೆ ಸೇವೆ ಸಲ್ಲಿಸಿದ ಸಾಧಕರಾದಿಯಾಗಿ ನಮ್ಮ ರಾಜ್ಯದ ಕಟ್ಟ ಕಡೆಯಲ್ಲಿರುವವರನ್ನೂ ಮರೆಯದೇ, ಹಿಂಬಾಲಿಸಿ ಗುರುತಿಸಿದ್ದು ಬಿಜೆಪಿ. ಕುಟುಂಬವನ್ನೇ ಪಕ್ಷವನ್ನಾಗಿಸಿಕೊಂಡ ಜೆಡಿಎಸ್ಗೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬುದು ಯಾವತ್ತಿಗೂ ಬಿಡಿಸಲಾಗದ ಒಗಟು” ಎಂದು ಜರೆದಿದೆ.
ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗ ಶ್ರೀ ದೇವೇಗೌಡರಿಗೇ ಮೊದಲ ಆಹ್ವಾನ ಪತ್ರ ಹೋಗಿದ್ದು ಮಾತ್ರವಲ್ಲ, ಖುದ್ದು ಶ್ರೀ @BSBommai ಅವರೇ ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದಾರೆ. ಈ ವಿಷಯದಲ್ಲೂ ಸುಳ್ಳಾಡುವ ಜೆಡಿಎಸ್ ತನ್ನ ಸಮಯಸಾಧಕ ಬುದ್ಧಿ ಪ್ರದರ್ಶಿಸಿದೆ. (1/2) pic.twitter.com/VX3Jxe0fWL
— BJP Karnataka (@BJP4Karnataka) November 11, 2022
ಬಿಜಿಪಿಗೆ ನೆಟ್ಟಿಗರ ಟೀಕೆ
“11ನೇ ತಾರೀಕು ಕಾರ್ಯಕ್ರಮ 10ನೇ ತಾರೀಕು ನೀವು ಪತ್ರ ಕಳಿಸೋದು. ಇದು ನಿಮ್ಮ ದೊಡ್ಡಸ್ತಿಕೆಯಾ? ಹೀಗೆ ಮಾಡಿಯೂ ಮತ್ತೆ ಮರ್ಯಾದೆ ಬಿಟ್ಟು ಇಲ್ಲಿ ಸಮರ್ಥನೆ ಮಾಡ್ತೀರಲ್ಲ! 11ಕ್ಕೆ ಕಾರ್ಯಕ್ರಮ ಅಂತ ಯಾವಾಗಲೋ ಮಾಡ್ಕೊಂಡಿದಿರಾ. ಆದ್ರೆ, ಹೇಳೋಕೆ ನಿಮ್ಗೆ ನೆನಪಾಗಿದ್ದು ನಿನ್ನೆ! ಕಾರ್ಯಕ್ರಮ ಕರೆಯೋಲೆ ಅಂತ ಹರಿದಾಡುತ್ತಿರುವ ಪತ್ರಿಕೆಯಲ್ಲಿ ಹೆಸರಿಲ್ಲ” ಎಂದು ರಾಜ್ಯ ಬಿಜೆಪಿ ಸರ್ಕಾರವನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಶ್ವನಾಥ್ ಕಿಡಿ
"ಸರ್ಕಾರದ ಕಾರ್ಯಕ್ರಮ ಎಂದು ಹೆಸರಿಟ್ಟುಕೊಂಡು, ಮಾಜಿ ಪ್ರಧಾನಿ ಮತ್ತು ರಾಜ್ಯಸಭಾ ಸದಸ್ಯ ಎಚ್ ಡಿ ದೇವೇಗೌಡ ಅವರನ್ನು ಕರೆಯಬೇಕಿತ್ತು. ಹಾಗೆಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಆಹ್ವಾನ ನೀಡಿಲ್ಲ” ಎಂದು ಸ್ವ ಪಕ್ಷದ ವಿರುದ್ಧವೇ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಕಿಡಿಕಾರಿದ್ದನ್ನು ಇಲ್ಲಿ ಗಮನಿಸಬಹುದು.