
- ದೇವಸ್ಥಾನದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಬೊಮ್ಮಾಯಿ
- ʼನಂಜನಗೂಡು ಕ್ಷೇತ್ರದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ನೀರು ತುಂಬಿಸುವ ಕೆಲಸವಾಗುತ್ತಿದೆʼ
"ಮುಂದಿನ ದಿನಗಳಲ್ಲಿ ನಂಜನಗೂಡು ಕ್ಷೇತ್ರ ಧಾರ್ಮಿಕ ಮತ್ತು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಗೊಳಿಸಲು ಯೋಜನೆ ರೂಪಿಸಲಾಗುವುದು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ, ನುಗು ಹಾಗೂ ಹೇಡಿಯಾಳ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿ, “ಕಬಿನಿ ಏತ ನೀರಾವರಿ ಪ್ರಾರಂಭಿಸಿ ಬಲದಂಡೆ ಕಾಲುವೆ ಕಾಮಗಾರಿ ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಾರಂಭಿಸಲಾಗಿದೆ” ಎಂದರು.
“ನಂಜನಗೂಡು ಪ್ರವಿತ್ರ ಭೂಮಿ. ನಾಡಿನ ಕಲ್ಯಾಣ ಇದರ ಮೂಲಕ ಆಗುವ ಪುಣ್ಯ ಭೂಮಿ. ಶಾಸಕ ಹರ್ಷವರ್ಧನ್ ಈ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ. ಈ ಭಾಗದ 7 ಕೆರೆಗಳನ್ನು ತುಂಬಿಸಲು ಸಾಧ್ಯವಾಗಿರಲಿಲ್ಲ. ನೀರಾವರಿಯಲ್ಲಿ ಸಾಧ್ಯವಾಗುವುದಿಲ್ಲವೆಂದು ಮನಗಂಡು ನೀರು ಎತ್ತಲು 30 ಕೋಟಿ ರೂ.ಗಳ ವೆಚ್ಚದಲ್ಲಿ ನೀರು ತುಂಬಿಸುವ ಕೆಲಸವಾಗುತ್ತಿದೆ” ಎಂದರು.
“ಹಡಿಯಾಲ ಏತ ನೀರಾವರಿ ಯೋಜನೆಗೂ ಶಂಕುಸ್ಥಾಪನೆ ಮಾಡಲಾಗಿದ್ದು, ಅದೂ ಕೂಡ ನಂಜನಗೂಡು ತಾಲ್ಲೂಕಿನ ಬಹುತೇಕ ಕೆರೆಗಳನ್ನು ತುಂಬಿಸುತ್ತದೆ. ಬದನಾಳ ಮತ್ತಿತರ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೆರೆಗೆ ನೀರು ತುಂಬುವ ಪ್ರಸ್ತಾವನೆ ಬಂದಿದ್ದು, ಅದಕ್ಕೂ ಕೂಡ ಸರ್ಕಾರ ಮಂಜೂರಾತಿ ನೀಡಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಶರಾವತಿ ಮುಳುಗಡೆ ಸಂತ್ರಸ್ತರ ಪಾಲಿಗೆ ಕಾಂಗ್ರೆಸ್ ಇದ್ದೂ ಸತ್ತಂತೆ: ಗೃಹ ಸಚಿವ ಆರಗ ಜ್ಞಾನೇಂದ್ರ ಟೀಕೆ
“ಆಸಿಡ್ ದಾಳಿಗೊಳಗಾದ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು 10 ಸಾವಿರ ಭತ್ಯೆ ಸರ್ಕಾರದಿಂದ ನೀಡಲಾಗುತ್ತಿದೆ. ಕಿವಿ ಕೇಳದ ಬಡವರಿಗೆ ಶ್ರವಣ ಯಂತ್ರವನ್ನು ಉಚಿತವಾಗಿ ನೀಡಲಾಗುತ್ತಿದೆ. ಕಣ್ಣಿನ ಚಿಕಿತ್ಸೆ ಮಾಡಿ ಕನ್ನಡಕವನ್ನು ನೀಡಲಾಗುತ್ತಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ, ಶಾಸಕ ಹರ್ಷವರ್ಧನ್, ಸಂಸದ ಶ್ರೀನಿವಾಸ ಪ್ರಸಾದ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.