ಈ ದಿನ ಎಕ್ಸ್‌ಕ್ಲೂಸಿವ್ । ಅಲ್ಪಸಂಖ್ಯಾತರಿಗೆ ಮತ್ತೊಂದು ಶಾಕ್: ಇನ್ನು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗಿಲ್ಲ ಕೇಂದ್ರದ ಸ್ಕಾಲರ್‌ಶಿಪ್!

  • ಹೊಸ ಸುತ್ತೋಲೆ ಹೊರಡಿಸಿದ ಕೇಂದ್ರ ಅಲ್ಪಸಂಖ್ಯಾತರ ಇಲಾಖೆ
  • ಅತಂತ್ರ ಸ್ಥಿತಿಯಲ್ಲಿ ರಾಜ್ಯದ ಎಂಟು ಲಕ್ಷ ಪ್ರಾಥಮಿಕ ವಿದ್ಯಾರ್ಥಿಗಳು

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಜೈನ, ಕ್ರಿಶ್ಚಿಯನ್, ಬೌದ್ಧ, ಪಾರ್ಸಿ ಮತ್ತು ಸಿಖ್ ಸಮುದಾಯದ ಪ್ರೀ ಮೆಟ್ರಿಕ್ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ನಿಲ್ಲಿಸುವ ನಿರ್ಧಾರ ಕೇಂದ್ರ ಸರ್ಕಾರ ಪ್ರಕಟಿಸಿದೆ.

"1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕೊಡಮಾಡುತ್ತಿದ್ದ ಸ್ಕಾಲರ್‌ಶಿಪ್‌ ಅನ್ನು ತಡೆ ಹಿಡಿಯಲಾಗುವುದು" ಎಂದು ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ, ಬುಡಕಟ್ಟು ವ್ಯವಹಾರ ಮತ್ತು ಅಲ್ಪಸಂಖ್ಯಾತರ ಸಚಿವಾಲಯ ಹೊಸ ಸುತ್ತೋಲೆ ಹೊರಡಿಸಿದೆ. ಹೊಸ ಸುತ್ತೋಲೆಯನ್ನು ಕೇಂದ್ರ ಸರ್ಕಾರದ www.scholarships.gov.in ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

Eedina App
ಆದೇಶ ಪ್ರತಿ order
ವೆಬ್ ಸೈಟ್ ನಲ್ಲಿ ಪ್ರಕಟಿಸಲಾದ ಸುತ್ತೋಲೆ

ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ದೇಶಾದ್ಯಂತ ಲಕ್ಷಾಂತರ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಸೌಲಭ್ಯವಂಚಿತರಾಗಲಿದ್ದಾರೆ. ರಾಜ್ಯದಲ್ಲೇ ಸುಮಾರು ಎಂಟು ಲಕ್ಷ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗಲಿದ್ದಾರೆ.

ಈ ಸುತ್ತೋಲೆಯ ಕುರಿತ ಮಾಹಿತಿಗಾಗಿ ಈ ದಿನ.ಕಾಮ್ ಅಧಿಕಾರಿಯೋರ್ವರನ್ನು ಸಂಪರ್ಕಿಸಿದಾಗ, "ಹೌದು ಇದು ನಿಜ. ನಮಗೂ ಮಾಹಿತಿ ಬಂದಿದೆ. ಶಿಕ್ಷಣದ ಹಕ್ಕು (ಆರ್‌ಟಿಇ) ಕಾಯಿದೆ, 2009 ಪ್ರತಿ ಮಗುವಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು (1 ರಿಂದ 8ನೇ ತರಗತಿವರೆಗೆ) ಒದಗಿಸುವುದನ್ನು ಸರ್ಕಾರವು ಕಡ್ಡಾಯಗೊಳಿಸುತ್ತದೆ. ಅದರಂತೆ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದೆ. ಈಗಾಗಲೇ ರಾಜ್ಯದಲ್ಲಿ ಎಂಟು ಲಕ್ಷ ವಿದ್ಯಾರ್ಥಿಗಳು ನಮ್ಮಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿ ಪ್ರೀ ಮೆಟ್ರಿಕ್ ವಿದ್ಯಾರ್ಥಿ ವೇತನ ಯೋಜನೆಯಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಮಾತ್ರ ಅರ್ಹರು ಎಂದು ತಿಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ" ಎಂದು ತಿಳಿಸಿದ್ದಾರೆ.

AV Eye Hospital ad

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆಯಡಿ ಈ ಮೊದಲು 1ರಿಂದ 10ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರೋತ್ಸಾಹಕ್ಕಾಗಿ ಹಣಕಾಸು ನೆರವು ನೀಡಲಾಗುತ್ತಿತ್ತು.

minority students

"2022-23ರಿಂದ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಮೆಟ್ರಿಕ್ ಪೂರ್ವ ಸ್ಕಾಲರ್‌ಶಿಪ್ ಯೋಜನೆಯಡಿ ವ್ಯಾಪ್ತಿಯು ಸಹ 9 ಮತ್ತು 10ನೇ ತರಗತಿಗಳಿಗೆ ಮಾತ್ರ. ಹಾಗಾಗಿ ಇನ್ ಸ್ಟಿಟ್ಯೂಟ್ ನೋಡಲ್ ಅಧಿಕಾರಿ (INO), ಜಿಲ್ಲಾ ನೋಡಲ್ ಅಧಿಕಾರಿ (DNO), ರಾಜ್ಯ ನೋಡಲ್ ಅಧಿಕಾರಿ (SNO) ಅವರು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಮೆಟ್ರಿಕ್ ಪೂರ್ವ ಸ್ಕಾಲರ್‌ಶಿಪ್ ಯೋಜನೆಯಡಿಯಲ್ಲಿ 9 ಮತ್ತು 10ನೇ ತರಗತಿಗಳಿಗೆ ಮಾತ್ರ ಅರ್ಜಿ ಪರಿಶೀಲಿಸಬಹುದು" ಎಂದು ಸುತ್ತೋಲೆ ತಿಳಿಸಿದೆ.

ಕೇಂದ್ರದ ಈ ನಿರ್ಧಾರದ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್(SIO) ವಿದ್ಯಾರ್ಥಿ ಸಂಘಟನೆಯ ಶಿಕ್ಷಣ ವಿಭಾಗದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಪೀರ್ ಲಟಗೇರಿ, "ಕೇಂದ್ರ ಸರ್ಕಾರ ಮತ್ತೊಮ್ಮೆ ಅಲ್ಪಸಂಖ್ಯಾತ ವಿರೋಧಿ ನಡೆಯನ್ನು ಅನುಸರಿಸಿದೆ. ಇದು ನಿಜಕ್ಕೂ ಅಲ್ಪಸಂಖ್ಯಾತ ಸಮುದಾಯಕ್ಕೆ ಆಘಾತ ನೀಡಿದೆ. ಸೋಮವಾರ(ನ. 28) ಬೆಳಗ್ಗೆಯಷ್ಟೇ ನಮಗೆ ಮಾಹಿತಿ ಸಿಕ್ಕಿತು. ಈ ಸಂಬಂಧಪಟ್ಟ ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಒಂದು ವೇಳೆ ಈ ನಿರ್ಧಾರ ಹಿಂಪಡೆಯದಿದ್ದಲ್ಲಿ ಸಂಘಟನೆಯ ಮೂಲಕ ಪ್ರತಿಭಟನೆ ನಡೆಸಲಾಗುವುದು" ಎಂದು ಹೇಳಿದ್ದಾರೆ.

"ಆರ್ ಟಿ ಇ ಅಡಿಯಲ್ಲಿ ಬರುವ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕೊಡಮಾಡುತ್ತಿದ್ದ ಸ್ಕಾಲರ್‌ಶಿಪ್‌ ಅನ್ನು ತಡೆ ಹಿಡಿಯಲಾಗುವುದು ಎಂದು ಮತ್ತು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಹಾಗೂ ಬುಡಕಟ್ಟು ವ್ಯವಹಾರಗಳ ಮತ್ತು ಅಲ್ಪಸಂಖ್ಯಾತರ ಸಚಿವಾಲಯದ ವತಿಯಿಂದ ಕೇವಲ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳನ್ನು ಈ ಬಾರಿಯ ಸ್ಕಾಲರ್‌ಶಿಪ್‌ಗೆ ಪರಿಗಣಿಸಲಾಗುವುದು ಎಂಬ ಸೂಚನೆಯು ಆಘಾತಕಾರಿ" ಎಂದು ಹೇಳಿದ್ದಾರೆ.

school-students

"1ರಿಂದ 8ನೇ ತರಗತಿಯ ಮಕ್ಕಳಿಗೆ ಸಂವಿಧಾನದ ಮೂಲಭೂತ ಹಕ್ಕಾದ ಶಿಕ್ಷಣದ ಹಕ್ಕಿನ (RTE) ಭಾಗವಾಗಿ ಅವರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಸರ್ಕಾರ ನೀಡುತ್ತಿದ್ದು, ಆದ್ದರಿಂದ ಈ ಮಕ್ಕಳಿಗೆ ನೀಡಲಾಗುತ್ತಿದ್ದ ಶಿಷ್ಯವೇತನವನ್ನು ಇನ್ನೂ ಮುಂದೆ ಮುಂದುವರೆಸುವುದಿಲ್ಲ ಎಂಬ ಕೇಂದ್ರದ ನಡೆಯು ಶಿಕ್ಷಣ ವಿರೋಧಿಯಾಗಿದೆ. 6ರಿಂದ 14 ವರ್ಷದ ಮಕ್ಕಳ ಶಾಲಾ ದಾಖಲಾತಿಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಶಿಷ್ಯವೇತನವು ಮಕ್ಕಳ ಶಾಲಾ ದಾಖಲಾತಿ ಮತ್ತು ಸಕ್ರಿಯ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ತೇಜನ ನೀಡುವುದಾಗಿದೆ. ಆದ್ದರಿಂದ ಕೇಂದ್ರದ ಈ ಸೂಚನೆಯನ್ನು ಎಸ್.ಐ.ಒ ಕರ್ನಾಟಕವು ಖಂಡಿಸುತ್ತದೆ ಮತ್ತು ಇದನ್ನು ಹಿಂಪಡೆಯಬೇಕೆಂದು ಆಗ್ರಹಿಸುತ್ತದೆ" ಮೊಹಮ್ಮದ್ ಪೀರ್ ಲಟಗೇರಿ ಹೇಳಿದ್ದಾರೆ.

ಈ ಬಾರಿಯ ಪ್ರಿ-ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಮೂಲಕ ಅರ್ಜಿಯ ಸಲ್ಲಿಸಲು ನವೆಂಬರ್ 15 ಕೊನೆಯ ದಿನಾಂಕವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಸುಮಾರು ಎಂಟು ಲಕ್ಷ ವಿದ್ಯಾರ್ಥಿಗಳು ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ್ದರು. 

"ನಮ್ಮ ಸೇವಾ ಸಂಸೆಯ ಮೂಲಕ ಕಳೆದ ಎರಡು ತಿಂಗಳಿನಿಂದ ಸತತ ಶ್ರಮ ವಹಿಸಿ ಸುಮಾರು 200ಕ್ಕೂ ಹೆಚ್ಚು ಮಕ್ಕಳಿಗೆ ನ್ಯಾಷನಲ್ ಸ್ಕಾಲರ್‌ಶಿಪ್‌ ಪೋರ್ಟಲ್ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಿದ್ದೇವೆ. ಇಂದು ಈ ವಿಚಾರ ಕೇಳಿ ನಿಜಕ್ಕೂ ಬಹಳ ದುಃಖವಾಯಿತು. ಇದು ಪ್ರಧಾನಿ ನರೇಂದ್ರ ಮೋದಿ ಮೋದಿಯವರ ಸಬ್ಕಾ ಸಾಥ್, ಸಬ್ಕಾ ವಿಕಾಸವೇ? ಕೇಂದ್ರ ಸರ್ಕಾರ ಈ ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು" ಎಂದು ಬೆಂಗಳೂರಿನ ಜಯನಗರದಲ್ಲಿರುವ ನಾಗರಿಕ ಸೇವಾ ಕೇಂದ್ರದ ಸಿಬ್ಬಂದಿ ಮೊಹಮ್ಮದ್ ಫೈರೋಝ್ ಈ ದಿನ.ಕಾಮ್ ಗೆ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
9 ವೋಟ್
eedina app