ಕೊನೆಗೂ ತೊಗರಿ ಬೆಳೆಗಾರರ ಸಂಕಷ್ಟ ಬಗೆಹರಿಸಲು ಮುಂದಾದ ಸರ್ಕಾರ: ಸಂಜೆ ಪರಿಹಾರದ ಮೊತ್ತ ಘೋಷಿಸಲಿರುವ ಸಿಎಂ

CM BOMMAI
  • ಗಾಣಗಾಪುರದ ದೇವಾಲಯದ ಕಾರಿಡಾರ್ ನಿರ್ಮಾಣಕ್ಕೆ ಚರ್ಚೆ 
  • ಪಿಎಸ್ಐ ಅಕ್ರಮ ಆರೋಪದ ಬಗೆಗಿನ ತನಿಖೆ ಪ್ರಗತಿಯಲ್ಲಿದೆ

ಉತ್ತರ ಕರ್ನಾಟಕ ಭಾಗದಲ್ಲಿ ಸಂಕಷ್ಟಕ್ಕೀಡಾಗಿರುವ ತೊಗರಿ ಬೆಳೆಗಾರರ ಸಂಕಷ್ಟ ಪರಿಹರಿಸಲು ಕೊನೆಗೂ ಸರ್ಕಾರ ಮುಂದಾಗಿದೆ. ಈ ಸಂಬಂಧ ಇಂದು ಸಂಜೆ (ಜ.24) ಸಭೆ ನಡೆಸಿ ಬೆಳೆಹಾನಿ ಪರಿಹಾರ ಮೊತ್ತ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, "ತೊಗರಿ ಬೆಳೆಗಾರರ ಸಮಸ್ಯೆ ಮತ್ತು ಸಂಕಷ್ಟ ಎರಡರ ಬಗೆಗೂ ನನಗೆ ಮಾಹಿತಿ ಸಿಕ್ಕಿದೆ. ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಉಂಟಾಗಿದೆ. ವಿಶೇಷವಾಗಿ ಕಲಬುರ್ಗಿ, ಬೀದರ್ ಜಿಲ್ಲೆಗಳಲ್ಲಿ ತೊಗರಿ ನಾಶವಾಗಿದ್ದು, ಅದಕ್ಕೆ ಪರಿಹಾರ ನೀಡಲು ರೈತರು ಕೂಡ ಒತ್ತಾಯ ಮಾಡಿದ್ದಾರೆ ಎಂದರು.

ನಾನು ವಿಚಾರ ಪರಿಶೀಲನೆ ಮಾಡಿದ್ದೇನೆ. ಸಂಜೆ ಕೃಷಿ ಇಲಾಖೆ ಪ್ರಮುಖರು, ಆರ್ಥಿಕ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರೊಂದಿಗೆ ಚರ್ಚಿಸಿ, ಬೆಳೆ ಪರಿಹಾರ ಘೋಷಿಸುತ್ತೇವೆ" ಎಂದು ತಿಳಿಸಿದರು.

ಇಂದು ತಾವು ಗಾಣಗಾಪುರದ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆಯಲಿರುವುದಾಗಿ ತಿಳಿಸಿದ ಬೊಮ್ಮಾಯಿ, ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ 5 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಜಿಲ್ಲಾಡಳಿತ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದು, ಸುಮಾರು 60 ಕೋಟಿಗಿಂತ ಹೆಚ್ಚು ಅನುದಾನದ ಅಗತ್ಯವಿದೆ. ಕಾಶಿ ವಿಶ್ವನಾಥ, ಉಜ್ಜಯನಿಯ ಕಾಳಹಸ್ತಿಯಲ್ಲಿ ನಿರ್ಮಿಸಿರುವಂತೆ ಕಾರಿಡಾರ್ ನಿರ್ಮಿಸಬೇಕು ಎಂದು 67 ಕೋಟಿ ರೂ.ಗಳ ಡಿಪಿಆರ್ ಸಿದ್ದ ಮಾಡಿದ್ದಾರೆ. ಬರುವ ಬಜೆಟ್ ನಲ್ಲಿ ಸರ್ಕಾರ ಕಾರಿಡಾರ್ ನಿರ್ಮಾಣಕ್ಕೆ  ಎಲ್ಲ ಕ್ರಮ ಕೈಗೊಳ್ಳಲಿದೆ ಎಂದರು.

ಪಿಎಸ್ಐ ಅಕ್ರಮದ ಆರೋಪಿ ಡಿ ಆರ್ ಗೌಡ ಹಾಗೂ ಪೊಲೀಸ್ ಅಧಿಕಾರಿ ಶಂಕರಗೌಡ ನಡುವೆ ನಡೆದಿದೆ ಎನ್ನಲಾದ 3 ಕೋಟಿ ಹಣದ ವ್ಯವಹಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, "ಆರೋಪಿ ಈ ಹಿಂದೆ ನೀಡಿರುವ ಹೇಳಿಕೆ ಹಾಗೂ ದಾಖಲಾತಿಗಳ ಮೇಲೆ ತನಿಖೆ ನಡೆಯುತ್ತಿದೆ. ಆತ ಕೋರ್ಟ್‌ಗೆ ನೀಡಿರುವ ದಾಖಲೆ ಆಧರಿಸಿಯೇ ತನಿಖೆ ನಡೆಯುತ್ತಿದೆ. ಅಗತ್ಯ ಬಿದ್ದರೆ ಈ ವಿಚಾರವಾಗಿ ಹೆಚ್ಚಿನ ತನಿಖೆ ನಡೆಸಲಾಗುವುದು" ಎಂದು ಅವರು ಹೇಳಿದರು.

ಉಳಿದಂತೆ ಇಂದು ಕೇಂದ್ರ ರಕ್ಷಣಾ ಇಲಾಖೆ ಸಚಿವ ರಾಜನಾಥ್ ಸಿಂಗ್ ನಡೆಸಿದ ಏರೋ ಇಂಡಿಯಾ ಪೂರ್ವ ತಯಾರಿ ವರ್ಚುವಲ್ ಸಭೆಯಲ್ಲಿ ತಾವು ಭಾಗವಹಿಸಿ ಅದರ ತಯಾರಿ ಬಗ್ಗೆ ಮಾಹಿತಿ ನೀಡಿರುವುದಾಗಿ ಬೊಮ್ಮಾಯಿ ಹೇಳಿದರು.

ಈ ಬಾರಿ ಅತಿದೊಡ್ಡ ಏರ್ ಶೋಗೆ ರಾಜ್ಯ ಸಾಕ್ಷಿಯಾಗಲಿದೆ, ಹೆಚ್ಚಿನ ವಿಮಾನ, ವಿಮಾನಯಾನ ಕಂಪನಿಗಳು ಮತ್ತು ಈ ಸಂಬಂಧ ಕಾರ್ಯನಿರ್ವಹಿಸುವ ವಲಯಗಳ ಜನರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವುದಾಗಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ? :ಕಲಬುರಗಿ | ತೊಗರಿ ಬೆಳೆಗಾರರ ಸಾವಿಗಿಲ್ಲ ಕೊನೆ; ನೆಟೆರೋಗ, ಸಾಲಬಾಧೆಗೆ ಮತ್ತೊಂದು ಜೀವ ಬಲಿ

ಪ್ರಧಾನಿ ನರೇಂದ್ರ ಮೋದಿ ಏರೋ ಉದ್ಘಾಟನೆ ಮಾಡಲಿದ್ದು ವಿದೇಶಿ ಗಣ್ಯರೂ ಕಾರ್ಯಕ್ರಮದ ಭಾಗವಾಗುವ ಸಾಧ್ಯತೆ ಇರುವುದಾಗಿ ಮುಖ್ಯಮಂತ್ರಿಗಳು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app