ಭೂಮಿ ಕಸಿದುಕೊಳ್ಳುತ್ತಿದೆ ಸರ್ಕಾರ | ನೇಣು ಬಿಗಿದುಕೊಂಡು ಆದಿವಾಸಿ ಮಹಿಳೆಯರ ಪ್ರತಿಭಟನೆ

  • ಆದಿವಾಸಿಗಳ ಭೂಮಿ ಕಸಿದು ಗ್ರಾನೈಟ್‌ ಕಂಪನಿಗಳಿಗೆ ಹಂಚಲು ಮುಂದಾದ ಸರ್ಕಾರ
  • ಗೋಡಂಬಿ ತೋಟಗಳು ನಾಶವಾದರೆ, ಆದಿವಾಸಿಗಳು ಬದುಕೂ ನಾಶವಾಗುತ್ತದೆ

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಗಣಿಗಾರಿಕೆಗೆ ಅನುಕೂಲವಾಗುವಂತೆ ಗೋಡಂಬಿ ತೋಟಗಳನ್ನು ಸ್ಥಳೀಯ ಆಡಳಿತ ನೆಲಸಮ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಆಡಳಿತದ ವಿರುದ್ಧ ಉರ್ಲಾಲೋವಕೊಂಡ ಗ್ರಾಮದ ಆದಿವಾಸಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮೂಹಿಕವಾಗಿ ನೇಣು ಹಾಕಿಕೊಳ್ಳುವ ಅಣಕು ಪ್ರದರ್ಶನದ ಮೂಲಕ ಪ್ರತಿಭಟಿಸಿದ್ದಾರೆ.

"ನೀವು ಇಲ್ಲಿ ಗೋಡಂಬಿ ತೋಟಗಳನ್ನು ನಾಶ ಮಾಡಿದರೆ, ನಮ್ಮ ಬದುಕು ನಾಶವಾಗುತ್ತದೆ. ಜೀವನ ನಡೆಸಲು ಬೇರೆ ದಾರಿಯಿಲ್ಲದಂತಾಗುತ್ತದೆ. ಸಾವು ಒಂದೇ ನಮಗಿರುವ ಪರಿಹಾರ. ನಾವು ಗೋಡಂಬಿ ತೋಟಗಳನ್ನೇ ನೆಚ್ಚಿಕೊಂಡು ಬದುಕು ನಡೆಸುತ್ತಿದ್ದೇವೆ. ದಯವಿಟ್ಟು ಅವುಗಳನ್ನು ನಾಶಪಡಿಸಬೇಡಿ" ಎಂದು ಮಹಿಳೆಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

"ನಾವು ಸಾಗುವಳಿ ಮಾಡುತ್ತಿರುವ ಈ ಭೂಮಿಯನ್ನು ನಮ್ಮಿಂದ ಬಲವಂತವಾಗಿ ಕಿತ್ತು ಗ್ರಾನೈಟ್‌ ಕಂಪನಿಗಳಿಗೆ ಹಂಚಲಾಗುತ್ತಿದೆ. ನಾವು ಗ್ರಾನೈಟ್‌ ಕಂಪನಿಗಳಿಂದ ಹಣ ಪಡೆದಿದ್ದೇವೆ ಎಂದು ಕೆಲವರು ಹೇಳುತ್ತಾರೆ. ಆದರೆ, ನಾವು ಈವರೆಗೆ ಯಾವುದೇ ಕಂಪನಿಯಿಂದ ಹಣ ಪಡೆದಿಲ್ಲ" ಎಂದು ಮಹಿಳೆಯರು ಸ್ಪಷ್ಟಪಡಿಸಿದ್ದಾರೆ.

"ಇದನ್ನು ಓದಿದಿರಾ?: ಬಿಜೆಪಿ ಬೆಂಬಲಿಸಿದ್ದಕ್ಕೆ ಮುಸ್ಲಿಂ ಕುಟುಂಬದ ಮೇಲೆ ಹಲ್ಲೆ

ಈ ಭೂಮಿಯನ್ನು ಸಾಗುವಳಿ ಮಾಡಲು ಸರ್ಕಾರ ನಮಗೆ ಅನುಮತಿ ನೀಡಿತ್ತು. ಆದರೆ, ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ನಮ್ಮ ಬಳಿ ಇಲ್ಲ. ಹೀಗಾಗಿ, ಆಡಳಿತ ಪಕ್ಷದ ನಾಯಕರು ಗಣಿ ಕಂಪನಿಯೊಂದಿಗೆ ಶಾಮೀಲಾಗಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಗೋಡಂಬಿ ಮರಗಳನ್ನು ನಾಶ ಪಡಿಸದಂತೆ ತಡೆದವರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ" ಎಂದು ಆದಿವಾಸಿ ಮಹಿಳೆಯರು ಆರೋಪಿಸಿದ್ದಾರೆ.

2013ರ ಭೂಸ್ವಾಧೀನ ಕಾಯ್ದೆ ಪ್ರಕಾರ, ಗೋಡಂಬಿ ತೋಟಕ್ಕೆ ಪರಿಹಾರ ನೀಡಬೇಕು ಅಥವಾ ಗಣಿಗಾರಿಕೆ ಗುತ್ತಿಗೆ ರದ್ದುಗೊಳಿಸಬೇಕು ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.

 

ಒಂದು ವೇಳೆ ಸರ್ಕಾರವು ಗೋಡಂಬಿ ತೋಟಗಳ ನಾಶ ಪಡಿಸುವುದನ್ನು ನಿಲ್ಲಿಸದಿದ್ದರೆ, ಸೋಮವಾರ ವಿಶಾಖಪಟ್ಟಣಂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಸಿದ್ದಾರೆ.  

ನಿಮಗೆ ಏನು ಅನ್ನಿಸ್ತು?
0 ವೋಟ್