ಜೈ ಭೀಮ್, ಜನ ಗಣ ಮನ ಸಿನಿಮಾಗಳೆರಡೂ ನನ್ನ ಮನ ಕಲಕಿವೆ: ಎಚ್ ಡಿ ಕುಮಾರಸ್ವಾಮಿ

H D Kumaraswamy
  • 'ಜೈ ಭೀಮ್' ಚಿತ್ರ ಮನುಷ್ಯತ್ವಕ್ಕೇ ಸವಾಲೆಸೆಯುವ ಅನೇಕ ಪ್ರಶ್ನೆಗಳನ್ನು ಎತ್ತಿದೆ
  • 'ಜನ ಗಣ ಮನ' ರಾಜಕೀಯ ಕಪಟತೆ, ಲಂಪಟತನ ಮನೋಜ್ಞವಾಗಿ ತೆರೆದಿಟ್ಟಿದೆ

ನಟ ಸೂರ್ಯ ನಟನೆಯ ತಮಿಳು ಸಿನಿಮಾ ‘ಜೈ ಭೀಮ್’ ಮತ್ತು ಪ್ರಥ್ವಿರಾಜ್ ಅಭಿನಯದ ಮಲಯಾಳಂನ ‘ಜನ ಗಣ ಮನ’ ಸಿನಿಮಾಗಳೆರಡೂ ನನ್ನ ಮನ ಕಲಕಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಕೋವಿಡ್ ಸೋಂಕಿನಿಂದ ಒಂದು ವಾರ ಮನೆಯಲ್ಲೇ ಚಿಕಿತ್ಸೆ ಪಡೆದ ನಾನು, ಓದು ಮತ್ತು ಸಿನಿಮಾ ವೀಕ್ಷಣೆಯಲ್ಲಿಯೇ ಸಮಯ ಕಳೆದೆ. ಈ ಬಿಡುವಿನಲ್ಲಿ ಎರಡು ಸಿನಿಮಾಗಳನ್ನು ವೀಕ್ಷಿಸಿದೆ. ʼಜೈ ಭೀಮ್ʼ, ʼಜನ ಗಣ ಮನ’ ಸೂಕ್ಷ್ಮ ಕಥಾಹಂದರದ ಈ ಸಿನಿಮಾಗಳೆರಡೂ ನನ್ನ ಮನ ಕಲಕಿವೆ ಮತ್ತು ತೀವ್ರ ತಳಮಳಕ್ಕೆ ಕಾರಣವೂ ಆಗಿವೆ” ಎಂದು ಹೇಳಿದ್ದಾರೆ.

“ಸಂವಿಧಾನ ನಮಗೆ ಶ್ರೇಷ್ಠ ನ್ಯಾಯಾಂಗವನ್ನು ಕೊಟ್ಟಿದೆ. ಕಷ್ಟ ಎದುರಾದಾಗ 'ಬಿಲೆನಿಯರ್'ನಿಂದ ಕಟ್ಟಕಡೆಯ ಬಡ ಪ್ರಜೆವರೆಗೂ ಎಲ್ಲರೂ ನ್ಯಾಯಾಲಯದ ಕಡೆ ನೋಡುತ್ತಾರೆ. ಎಲ್ಲರೂ ಇಲ್ಲಿ ಸಮಾನರು. ಅದು ಹಕ್ಕು ಹೌದು. ತಮಿಳುನಾಡಿನ ಕಡಲೂರಿನಲ್ಲಿ ನಡೆದ ನೈಜ ಘಟನೆ ಆಧರಿಸಿದ 'ಜೈ ಭೀಮ್' ಚಿತ್ರ ಮನುಷ್ಯತ್ವಕ್ಕೇ ಸವಾಲೆಸೆಯುವ ಅನೇಕ ಪ್ರಶ್ನೆಗಳನ್ನು ಎತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಜನ ಗಣ ಮನ ಚಿತ್ರ ಇವತ್ತಿನ ರಾಜಕೀಯ ಕಪಟತೆ, ಕುಟಿಲತೆ, ಲಂಪಟತನವನ್ನು ಮನೋಜ್ಞವಾಗಿ ತೆರೆದಿಟ್ಟಿದೆ. ರಾಜಕೀಯದ ಕಪಿಮುಷ್ಠಿಗೆ ಸಿಲುಕಿ ನರಳುವ ವ್ಯವಸ್ಥೆಯ ಅಸಹಾಯಕ ಮುಖದ ದರ್ಶನ ಮಾಡಿಸಿದೆ. ವ್ಯವಸ್ಥೆಗೆ ಕನ್ನಡಿಯಂತಿರುವ ಸಿನಿಮಾಗಳು ಆವೇಶಕ್ಕೆ, ಆಲೋಚನೆಗೆ ದೂಡುತ್ತವೆ. ಎರಡೂ ಚಿತ್ರಗಳ ನಿರ್ದೇಶಕರು ಅಭಿನಂದನಾರ್ಹರು” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ದಕ್ಷಿಣ ಭಾರತದಲ್ಲಿ ಭಾರೀ ಸದ್ದು ಮಾಡಿರುವ ಚಿತ್ರಗಳು

ಕಳೆದ ವರ್ಷ ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ಜೈಭೀಮ್ ಸಿನಿಮಾ ಭಾರೀ ಸದ್ದು ಮಾಡಿತ್ತು. ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ತಮಿಳುನಾಡಿನ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಚಂದ್ರು ಅವರ ವೃತ್ತಿಜೀವನದ ಅನುಭಗಳ ನೈಜ ಕತೆಯನ್ನು ಆಧರಿಸಿ ಆ ಸಿನಿಮಾ ನಿರ್ಮಾಣವಾಗಿತ್ತು. 

ಮಲಯಾಳಂ ಭಾಷೆಯಲ್ಲಿ ನಿರ್ಮಾಣವಾಗಿ ದಕ್ಷಿಣದ ಇತರೆ ಭಾಷೆಗಳಿಗೂ ಡಬ್ ಆಗಿದ್ದ ‘ಜನ ಗಣ ಮನ’ ಸಿನಿಮಾ ಕೂಡಾ ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಬಿಂಬಿಸಿತ್ತು. ಈ ಚಿತ್ರ ಕೂಡಾ ಓಟಿಟಿಯಲ್ಲಿ ಮೆಚ್ಚುಗೆ ಪಡೆದಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
Image
av 930X180