ರಾಜಕಾಲುವೆ ಮೇಲೆ ಕಟ್ಟಿದ ಅರಮನೆಗಳ ಮೇಲೆ ಬುಲ್ಡೋಜರ್‌ ಹೋಗಲ್ಲ; ಬಡವರ ಮನೆಗಳ ಮೇಲೆ ಹರಿಯುತ್ತದೆ: ಕುಮಾರಸ್ವಾಮಿ

H D Kumaraswamy
  • ಬಿಜೆಪಿ ಸರ್ಕಾರದ ಮೇಲೆ ಎಚ್ ಡಿ ಕುಮಾರಸ್ವಾಮಿ ಟೀಕಾಪ್ರಕಾರ
  • ದಾಸರಹಳ್ಳಿ, ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ 'ಜನತಾಮಿತ್ರ' ಕಾರ್ಯಕ್ರಮ

ರಾಜಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಮಾಲ್‌ಗಳು, ಭಂಗಲೆಗಳ ಮೇಲೆ ಬುಲ್ಡೋಜರ್‌ಗಳು ಹೋಗುವುದಿಲ್ಲ. ಆದರೆ, ಬಡವರ ಸಣ್ಣ ಮನೆ, ಗುಡಿಸಲು ಕಟ್ಟಿಕೊಂಡಿದ್ದರೆ ಅವರ ಮನೆಗಳ ಮೇಲೆ ಬುಲ್ಡೋಜರ್‌ಗಳು ನಿರ್ದಯವಾಗಿ ಹರಿಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ನಾಗೇನಹಳ್ಳಿಯಲ್ಲಿ ಭಾನುವಾರ (ಜು.4) ಸಂಜೆ ನಡೆದ ʼಜನತಾಮಿತ್ರʼ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದರು.

“ಬಡವರಿಗೆ, ಮಧ್ಯಮವರ್ಗದ ಜನರಿಗೆ ಕಡಿಮೆ ದರದಲ್ಲಿ ನಿವೇಶನ, ಮನೆ ಕೊಡಬೇಕಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಂಪೂರ್ಣ ನಿಷ್ಕ್ರಿಯವಾಗಿದೆ. ಅದೊಂದು ಭ್ರಷ್ಟಕೂಪ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

“ಬೆಂಗಳೂರು ನಗರ ಒಂದರಲ್ಲೇ ಸುಮಾರು 30 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಭೂಗಳ್ಳರು ಕಬಳಿಸಿದ್ದಾರೆ. ಅದನ್ನು ಮರು ವಶಪಡಿಸಿಕೊಂಡರೆ ಲಕ್ಷಾಂತರ ಬಡವರಿಗೆ ಮನೆ ಕಟ್ಟಿಕೊಡಬಹುದು. ಅಂಥ ಕೆಲಸವನ್ನು ಬಿಡಿಎ ಮಾಡುತ್ತಿಲ್ಲ. ನನಗೊಂದು ಅವಕಾಶ ಕೊಟ್ಟು ನೋಡಿ. ಬೆಂಗಳೂರು ನಗರವನ್ನು ಅಭಿವೃದ್ಧಿಯ ಹಳಿಯ ಮೇಲೆ ತಂದು ನಿಲ್ಲಿಸುತ್ತೇನೆ” ಎಂದು ಭರವಸೆ ನೀಡಿದರು.

“ಬೆಂಗಳೂರಿನ ಎಲ್ಲ ಪ್ರದೇಶಗಳು ಸಮಾನವಾಗಿ ಅಭಿವೃದ್ಧಿ ಆಗುತ್ತಿಲ್ಲ. ಶ್ರೀಮಂತರು ವಾಸ ಮಾಡುವ ಪ್ರದೇಶಗಳಿಗೆ ಎಲ್ಲ ಅನುಕೂಲಗಳಿದ್ದರೆ, ಬಡವರ ಬಡಾವಣೆಗಳಿಗೆ ಕೊನೆಪಕ್ಷ ರಸ್ತೆಗಳಿಗೆ ಡಾಂಬರು ಇಲ್ಲ, ವಿದ್ಯುತ್‌ ದೀಪಗಳಿಲ್ಲ. ಯಲಹಂಕ ವಿಧಾನಸಭೆ ಕ್ಷೇತ್ರದ ಬೆಟ್ಟಹಳ್ಳಿ ಗ್ರಾಮಕ್ಕೆ ಹೋದರೆ ರಾಜ್ಯ ಸರ್ಕಾರದ ನಿಜವಾದ ಅಭಿವೃದ್ಧಿ ಮಾದರಿ ಕಣ್ಣಿಗೆ ಕಾಣುತ್ತದೆ” ಎಂದು ಹರಿಹಾಯ್ದರು. 

ಈ ಸುದ್ದಿ ಓದಿದ್ದೀರಾ?: ಅಭದ್ರತೆಯಲ್ಲಿ ಸ್ವಚ್ಛತಾ ಸೈನಿಕರು : ಭಾಗ-1| ಪೌರ ಕಾರ್ಮಿಕರನ್ನು ಕಾಯಂ ಮಾಡದಿರುವುದರ ಹಿಂದಿದೆ ಮಾಫಿಯಾ!

“ಕಟ್ಟಾ ಅವರು ಈಗ ಹೆಣ್ಣುಮಕ್ಕಳಿಗೆ ಅರಶಿಣ-ಕುಂಕುಮ ಕೊಡುತ್ತೇನೆ, ಲಲಿತಾ ಸಹಸ್ರನಾಮ ಕಾರ್ಯಕ್ರಮ ಏರ್ಪಡಿಸುತ್ತೇನೆ ಎಂದು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ಜನರ ಬದುಕು ಹಸನಾಗುತ್ತದೆಯೇ? ಅಲ್ಲೆಲ್ಲ ದೊಡ್ಡದಾಗಿ ಮಹಿಳೆಯರನ್ನು ಸೇರಿಸಿ ಪೂಜೆ ಪುನಸ್ಕಾರ ಅಂತ ಹೇಳಿ ಮಂಕೂಬೂದಿ ಎರಚಿ, ಗೆದ್ದುಹೋಗಿ ಮಂತ್ರಿ ಆಗುತ್ತಾರೆ. ಆಮೇಲೆ, ಸರ್ಕಾರಿ ಭೂಮಿಯನ್ನು ಲಪಟಾಯಿಸಿ ಬಳಿಕ ಜಾಮೀನಿಗಾಗಿ ಕೋರ್ಟು, ಕಚೇರಿ ಅಂತ ಅಲೆಯುತ್ತಾರೆ” ಎಂದು ಪ್ರಹಾರ ನಡೆಸಿದರು.

“ಬೆಂಗಳೂರಿನಲ್ಲಿ ಅನೇಕ ರಾಜಕಾರಣಿಗಳು, ಸಾರ್ವಜನಿಕ ಹಾಗೂ ಬಡಬಗ್ಗರ ಭೂಮಿಯನ್ನು ಕೊಳ್ಳೆ ಹೊಡೆದು ನೂರಾರು ಕೋಟಿ ರೂ. ಮಾಡಿದ್ದಾರೆ. ಅದೇ ಪಾಪದ ಹಣದಿಂದ ಫುಡ್ ಕಿಟ್‌, ಸಣ್ಣಪುಟ್ಟ ಪ್ರಮಾಣದ ಭಕ್ಷೀಸು ನೀಡಿ ಚುನಾವಣೆ ಗೆಲ್ಲುತ್ತಿದ್ದಾರೆ. ಇಂಥ ಆಮಿಷಗಳಿಗೆ ಜನರು ಮಾರುಹೋಗಬಾರದು. ಹಣ ಪಡೆದು ಸಭೆ ಸಮಾರಂಭಗಳಿಗೆ ಹೋಗಬಾರದು” ಎಂದು ಕುಮಾರಸ್ವಾಮಿ ಮನವಿ ಮಾಡಿದರು.

“ಬೆಂಗಳೂರಿನಲ್ಲಿ ಬಡವರ ಬಂಧು ಕಾರ್ಯಕ್ರದ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ನೆರವಾದೆ. 25 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದೆ. ಇದೆಲ್ಲವನ್ನೂ ಫಲಾನುಭವಿಗಳ ಹೆಸರಿನ ಸಮೇತ ದಾಖಲೆ ಕೊಡಬಲ್ಲೆ, ನರೇಂದ್ರ ಮೋದಿ ಅವರಂತೆ ನಾನು ಬರೀ ಭಾಷಣ ಮಾಡಲ್ಲ. ಮೋದಿ ಹಿಂದೆ ಸುತ್ತುವ ಆತ್ಮೀಯರೊಬ್ಬರು ಗಂಟೆಗೆ 53 ಕೋಟಿ ರೂ. ದುಡಿಯುತ್ತಿದ್ದಾರಂತೆ. ಅದು ಹೇಗೆ? ಯಾವ ರೀತಿ? ಇಂಥವರನ್ನು ತೋರಿಸಿ ಭಾರತ ಉದ್ಧಾರವಾಗಿದೆ ಎಂದು ಜಗತ್ತಿಗೆ ತೋರಿಸಲಾಗುತ್ತಿದೆ” ಎಂದು ಕಿಡಿಕಾರಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್