ಮಹಿಳೆಯರು ಸುರಕ್ಷಿತವಾಗಿದ್ದಾಗ ಮಾತ್ರ ಭಾರತದಲ್ಲಿ ಪ್ರಗತಿ ಸಾಧ್ಯ ಎಂದ ರಾಹುಲ್‌ ಗಾಂಧಿ

  • ಮೊರಾದಾಬಾದ್‌ ಮತ್ತು ಉತ್ತರಾಖಂಡದ ಘಟನೆಗಳ ಬಗ್ಗೆ ಮಾತನಾಡಿದ ರಾಹುಲ್‌ ಗಾಂಧಿ
  • ಬಿಜೆಪಿ ಮುಖಂಡ ವಿನೋದ್‌ ಆರ್ಯ ಪುತ್ರ ಪುಳಕಿತ್ ಆರ್ಯ ಬಂಧನ

ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಘಟನೆಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮೊರಾದಾಬಾದ್ ಮತ್ತು ಉತ್ತರಾಖಂಡದ ಪೌರಿಯಲ್ಲಿ ನಡೆದ ಘಟನೆಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಆಘಾತ ವ್ಯಕ್ತಪಡಿಸಿದ್ದು, ಮಹಿಳೆಯರು ಸುರಕ್ಷಿತವಾಗಿದ್ದಾಗ ಮಾತ್ರ ಭಾರತ ಪ್ರಗತಿ ಹೊಂದುತ್ತದೆ ಎಂದು ಪ್ರತಿಪಾದಿಸಿದ್ದಾರೆ.

"ಮೊರಾದಾಬಾದ್ ಮತ್ತು ಉತ್ತರಾಖಂಡದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆದ ದೌರ್ಜನ್ಯದ ಘಟನೆಗಳು ಎಲ್ಲರನ್ನೂ ಬೆಚ್ಚಿಬೀಳಿಸಿದೆ" ಎಂದು ರಾಹುಲ್‌ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ʻʻಭಾರತ್ ಜೋಡೋ ಯಾತ್ರೆಯಲ್ಲಿ, ನಾನು ಅನೇಕ ಪ್ರತಿಭಾವಂತ ಹೆಣ್ಣು ಮಕ್ಕಳು ಮತ್ತು ಯುವತಿಯರನ್ನು ಭೇಟಿಯಾಗುತ್ತಿದ್ದೇನೆ ಅವರ ಮಾತುಗಳನ್ನು ಕೇಳುತ್ತಿದ್ದೇನೆʼʼ ಎಂದಿರುವ ಅವರು, ʻʻದೇಶದ ಮಹಿಳೆಯರು ಸುರಕ್ಷಿತವಾಗಿದ್ದಾಗ ಮಾತ್ರ ನಮ್ಮ ಭಾರತ ಪ್ರಗತಿ ಹೊಂದುತ್ತದೆʼʼ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.

ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ವಿನೋದ್‌ ಆರ್ಯ ಪುತ್ರ ಪುಳಕಿತ್ ಆರ್ಯ ಅವರ ಮಾಲೀಕತ್ವದ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಅಂಕಿತಾ ಭಂಡಾರಿಯನ್ನು ಕೊಲೆ ಮಾಡಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಯುವತಿ ನಾಪತ್ತೆಯಾಗಿದ್ದರು. ಅವರ ಮೃತದೇಹ ಕಾಲುವೆಯೊಂದರಲ್ಲಿ ಪತ್ತೆಯಾಗಿತ್ತು. ಆರೋಪಿಗಳು ಯುವತಿಯನ್ನು ಹತ್ಯೆ ಮಾಡಿ ಮೃತದೇಹವನ್ನು ಕಾಲುವೆಗೆ ಎಸೆದಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಐಟಿಐ ಭೋಪಾಲ್‌ | ವಿದ್ಯಾರ್ಥಿನಿ ಬಟ್ಟೆ ಬದಲಿಸುವ ವಿಡಿಯೋ ಚಿತ್ರೀಕರಿಸಿ ಹಣಕ್ಕೆ ಬೇಡಿಕೆಯಿಟ್ಟ ವಿದ್ಯಾರ್ಥಿಗಳು

ಹಾಗೆಯೇ, ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ, 15ವರ್ಷದ ಅಪ್ರಾಪ್ತೆಯೊಬ್ಬಳು ರಸ್ತೆಯಲ್ಲಿ ವಿವಸ್ತ್ರವಾಗಿ ನಡೆದುಕೊಂಡು ಹೋಗುತ್ತಿರುವ 15 ಸೆಕೆಂಡ್‌ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆ, ಉತ್ತರ ಪ್ರದೇಶದ ಲಂಖಿಪುರ್‌ ಖೇರಿಯ ಇಬ್ಬರು ದಲಿತ ಬಾಲಕಿಯನ್ನು ಅಪಹರಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಆಡಳಿತಾರೂಢ ಬಿಜೆಪಿಯನ್ನು ಟೀಕಿಸಿದ್ದ ರಾಹುಲ್‌ ಗಾಂಧಿ, "ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿ ಗೌರವಿಸುವವರಿಂದ ಮಹಿಳೆಯರ ಸುರಕ್ಷತೆ ನಿರೀಕ್ಷಿಸಲು ಸಾಧ್ಯವಿಲ್ಲ" ಎಂದಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್