ಸುದ್ದಿ ನೋಟ | ಹಿಜಾಬ್ ವಿರುದ್ಧ ಪ್ರತಿಭಟಿಸಿ ಪೊಲೀಸರ ದೌರ್ಜನ್ಯಕ್ಕೆ ತುತ್ತಾಗುತ್ತಿರುವ ಇರಾನಿ ಮಹಿಳೆಯರು

ಧಾರ್ಮಿಕ ಮೂಲಭೂತವಾದಿಗಳು, ಮಹಿಳೆಯರು ಬುರ್ಖಾ ಮತ್ತು ಹಿಜಾಬ್ ಧರಿಸುವಂತೆ ಬಲವಂತ ಮಾಡುತ್ತಾರೆ. ಹಿಜಾಬ್ ಈಗ ಧಾರ್ಮಿಕ ಉಡುಗೆಯಾಗಿ ಉಳಿದಿಲ್ಲ, ಅದು ರಾಜಕೀಯ ಹಿಜಾಬ್ ಆಗಿದೆ ಎನ್ನುವುದು ಲೇಖಕಿ ತಸ್ಲೀಮಾ ನಸ್ರೀನ್ ಅಭಿಪ್ರಾಯ

ಹಿಜಾಬ್‌ ವಿರುದ್ಧ ಇರಾನ್‌ನಲ್ಲಿ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. 22 ವರ್ಷದ ಮಹ್ಸಾ ಅಮಿನಿ ಹಿಜಾಬ್ ತೊಡದೆ ಬಹಿರಂಗವಾಗಿ ಕಾಣಿಸಿಕೊಂಡಾಗ ನೈತಿಕ ಪೊಲೀಸ್ ಪಡೆಗಳ ಬಂಧನಕ್ಕೆ ಒಳಗಾಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಳಿಕ ಇರಾನ್ ಮಹಿಳೆಯರು ಹುದುಗಿಟ್ಟಿದ್ದ ಆಕ್ರೋಶ- ದುಗುಡಗಳನ್ನು ಬಹಿರಂಗವಾಗಿ ಪ್ರಕಟಿಸುತ್ತಿದ್ದಾರೆ. ಹಿಜಾಬ್‌ನಿಂದ ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದೆ,  ಅದನ್ನು ತೊಡುವುದಿಲ್ಲ ಎಂದು ಪ್ರತಿಭಟಿಸುತ್ತಿದ್ದಾರೆ. ಹೋರಾಟದ ಭಾಗವಾಗಿ ಹೆಣ್ಣು ಮಕ್ಕಳು ತಮ್ಮ ಹಿಜಾಬ್ ಸುಟ್ಟುಹಾಕುತ್ತಿರುವ ಮತ್ತು ಕೂದಲು ಕತ್ತರಿಸಿಕೊಳ್ಳುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಹಿಜಾಬ್‌ ಅಂದೋಲನಕ್ಕೆ ಮಹಿಳೆ ಸಾವು

Eedina App

ಹಿಜಾಬ್ ಧರಿಸದ ಕಾರಣಕ್ಕೆ ಮಹ್ಸಾ ಅಮಿನಿ ಎಂಬ ಮಹಿಳೆಯನ್ನು ಇರಾನ್‌ನ ಟೆಹರಾನ್‌ನಲ್ಲಿ ನೈತಿಕ ಘಟಕದ ಪೊಲೀಸರು ಬಂಧಿಸಿದ್ದರು. ಪೊಲೀಸ್ ಠಾಣೆಯಲ್ಲಿದ್ದ ಮಹ್ಸಾ ಅಮಿನಿ ಕೋಮಾಗೆ ಜಾರಿದ ಮೇಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಬಳಿಕ ಮಹ್ಸಾ ನಿಧನರಾಗಿದ್ದರು. ಅವರಿಗೆ ಹೃದಯಾಘಾತವಾಗಿದೆ ಎಂದು ಪೊಲೀಸರು ಹೇಳಿದ್ದರು. ಆದರೆ ಪೊಲೀಸ್ ದೌರ್ಜನ್ಯದಿಂದ ಮಹಿಳೆ ಮೃತಪಟ್ಟಿದ್ದಾರೆ ಎಂದು  ಸಂಘಟನೆಗಳು ಆರೋಪಿಸಿವೆ. ಈ ಘಟನೆ ಇರಾನ್‌ನ ಅನೇಕ ಕಡೆ ಆಡಳಿತಗಾರರ ದಬ್ಬಾಳಿಕೆ ವಿರುದ್ಧ ಆಕ್ರೋಶದ ಕಿಡಿ ಹೊತ್ತಿಸಿದೆ.

ಹಿಜಾಬ್‌ ಆಯ್ಕೆಯಲ್ಲ ಎಂದಿರುವ ತಸ್ಲಿಮಾ ನಸ್ರೀನ್

AV Eye Hospital ad

ಹಿಜಾಬ್‌ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಮಹಿಳೆಯರನ್ನು ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಶ್ಲಾಘಿಸಿದ್ದು, "ಹಿಜಾಬ್ ವಾಸ್ತವವಾಗಿ ಒಂದು ಆಯ್ಕೆಯಲ್ಲ, ಇರಾನ್‌ನಲ್ಲಿ ಬುಗಿಲೆದ್ದಿರುವ ಪ್ರತಿಭಟನೆಯಿಂದಾಗಿ ಜಗತ್ತಿನಾದ್ಯಂತ ಮಹಿಳೆಯರಲ್ಲಿ ಧೈರ್ಯ ಮೂಡಲಿದೆ" ಎಂದು ಹೇಳಿದ್ದಾರೆ.

"ನನಗೆ ಬಹಳ ಸಂತೋಷವಾಗುತ್ತಿದೆ. ಅವರು ಪ್ರತಿಭಟನೆ ಸಲುವಾಗಿ ತಮ್ಮ ಹಿಜಾಬ್‌ಗಳನ್ನು ಸುಟ್ಟು ಹಾಕುತ್ತಿರುವುದು ಮತ್ತು ಕೂದಲುಗಳನ್ನು ಕತ್ತರಿಸಿಕೊಳ್ಳುತ್ತಿರುವುದು ಸುಂದರ ಸನ್ನಿವೇಶ. ಇದು ಜಗತ್ತಿಗೆ, ಎಲ್ಲ ಮುಸ್ಲಿಂ ಮಹಿಳೆಯರಿಗೆ ಮಹತ್ವದ ಸಂಗತಿ. ಏಕೆಂದರೆ ಹಿಜಾಬ್ ಎನ್ನುವುದು ಮಹಿಳೆಯರ ಮೇಲಿನ ದಬ್ಬಾಳಿಕೆ, ಶೋಷಣೆ, ಕಳಂಕ ಹಾಗೂ ಅವಮಾನ" ಎಂದು ತಸ್ಲಿಮಾ ನಸ್ರೀನ್ ಹೇಳಿದ್ದಾರೆ.

"ಜಗತ್ತಿನಾದ್ಯಂತ ಮಹಿಳೆಯರು ಕೂಡ ಹಿಜಾಬ್ ವ್ಯವಸ್ಥೆ ವಿರುದ್ಧದ ಪ್ರತಿಭಟನೆಯಾಗಿ ತಮ್ಮ ಹಿಜಾಬ್‌ಗಳನ್ನು ಸುಡಬೇಕು" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಜಾಬ್ ಧಾರ್ಮಿಕ ಉಡುಗೆಯಲ್ಲ

ಹಿಜಾಬ್ ಧರಿಸದೆ ಹೋದರೆ ತಮ್ಮನ್ನು ಹಿಂಸಿಸುತ್ತಾರೆ, ಹೊಡೆಯುತ್ತಾರೆ. ಮತ್ತು ಕಿರುಕುಳ ನೀಡುತ್ತಾರೆ ಶಾಲೆಗೆ ಸೇರಿಸಿಕೊಳ್ಳುವುದಿಲ್ಲ. ಕೆಲಸ ಸಿಗುವುದಿಲ್ಲ ಎಂಬ ಭಯದಿಂದಾಗಿ ಕೆಲವು ಮಹಿಳೆಯರು ಹಿಜಾಬ್ ತೊಡುತ್ತಾರೆ ಎಂದು ತಸ್ಲಿಮಾ ಹೇಳಿದ್ದಾರೆ. "ಧಾರ್ಮಿಕ ಮೂಲಭೂತವಾದಿಗಳು, ಮಹಿಳೆಯರು ಬುರ್ಖಾ ಮತ್ತು ಹಿಜಾಬ್ ಧರಿಸುವಂತೆ ಬಲವಂತ ಮಾಡುತ್ತಾರೆ. ಹಿಜಾಬ್ ಈಗ ಧಾರ್ಮಿಕ ಉಡುಗೆಯಾಗಿ ಉಳಿದಿಲ್ಲ, ಅದು ರಾಜಕೀಯ ಹಿಜಾಬ್" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಸಾವಿರಾರು ಮಹಿಳೆಯರು ಹಿಜಾಬ್ ಧರಿಸಲು ಇಷ್ಟಪಡುವುದಿಲ್ಲ. ಇರಾನ್ ಮಹಿಳೆಯರ ಪ್ರತಿಭಟನೆಯಿಂದ ಆ ಮಹಿಳೆಯರು ಪ್ರೋತ್ಸಾಹ  ಪಡೆಯುತ್ತಾರೆ. ಇರಾನ್‌ನ ಧೈರ್ಯಶಾಲಿ ಮಹಿಳೆಯರಿಗೆ ನನ್ನ ನಮನ" ಎಂದು ಲೇಖಕಿ ಹೇಳಿದ್ದಾರೆ.

ಕೂದಲು ಕತ್ತರಿಸಿಕೊಂಡ ಮಹಿಳೆಯರು

ಇರಾನಿನ ಪತ್ರಕರ್ತೆ ಮತ್ತು ಕಾರ್ಯಕರ್ತೆ ಮಸಿಹ್ ಅಲಿನೆಜಾದ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ಹಿಜಾಬ್ ಪೊಲೀಸರಿಂದ ಮಹ್ಸಾ ಅಮಿನಿಯ ಹತ್ಯೆಯನ್ನು ವಿರೋಧಿಸಲು ಇರಾನಿಯನ್ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ಮೂಲಕ ಮತ್ತು ಹಿಜಾಬ್ ಅನ್ನು ಸುಡುವ ಮೂಲಕ ಮನದಾಳದಲ್ಲಿ ಅಡಗಿರುವ ಕೋಪವನ್ನ ತೋರ್ಪಡಿಸಿದ್ದಾರೆ" ಎಂದು ಬರೆದಿದ್ದಾರೆ.

ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ

ಇರಾನ್‌ ಪತ್ರಕರ್ತರು ಹಂಚಿಕೊಂಡಿರುವ ಟ್ಟೀಟ್‌ನಲ್ಲಿ ಹಿಜಾಬ್‌ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಮಹಿಳೆಯರ ಮೇಲೆ ಸಘೇಜ್ ನಗರದಲ್ಲಿ ಪೊಲೀಸರು ಗುಂಡಿನ ದಾಳಿ ನಡೆಸಲಾಗಿದೆ. "ನಾವು ದಿಟ್ಟವಾಗಿ ಎಲ್ಲವನ್ನೂ ಎದುರಿಸುತ್ತೇವೆ. ಕಳೆದ ಎರಡು ದಿನಗಳಿಂದ ಬೀದಿಯಲ್ಲಿ ಹೋರಾಡುತ್ತಿದ್ದೇವೆ. ಭಯಪಡಬೇಡಿ, ಹಿಜಾಬ್‌ ವಿರುದ್ಧ ಹೋರಾಡಿ. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ" ಎಂದು ಇರಾನ್‌ನಾದ್ಯಂತ ಮಹಿಳೆಯರ ಘೋಷಣೆಗಳು ಮೊಳಗಿವೆ.

ಹಿಜಾಬ್‌ ತೊರೆಯಲು ಮಾನವ ಹಕ್ಕು ಸಂಘಟನೆಗಳ ಕರೆ

ಕೆಲ ತಿಂಗಳಿನಿಂದ ಇರಾನಿನ ಮಾನವ ಹಕ್ಕುಗಳ ಸಂಘಟನೆಗಳು ಮಹಿಳೆಯರು ತಮ್ಮ ಹಿಜಾಬ್​ಗಳನ್ನು ಸಾರ್ವಜನಿಕವಾಗಿ ತೆಗೆದುಹಾಕುವಂತೆ ಒತ್ತಾಯಿಸಿವೆ. ಹೀಗಾಗಿ ಇಸ್ಲಾಮಿಕ್ ಡ್ರೆಸ್ ಕೋಡ್ ಧಿಕ್ಕರಿಸಿದ್ದಕ್ಕಾಗಿ ಹಲವು ಮಹಿಳೆಯರು ಬಂಧನದ ಭೀತಿಯನ್ನು ಎದುರಿಸುತ್ತಿದ್ದಾರೆ. ಹಿಜಾಬ್ ವಿರೋಧಿ ಪ್ರತಿಭಟನೆ ಕರೆಗಳ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರು ಹಿಜಾಬ್​ ತೆಗೆದು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು.

ಹಿಜಾಬ್‌ ಕುರಿತಾಗಿ ಇರಾನ್‌ ಕಾನೂನು ಏನಿದೆ?

1979ರ ಕ್ರಾಂತಿಯ ನಂತರ ಹೇರಲಾದ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಮಹಿಳೆಯರು ತಮ್ಮ ತಲೆಕೂದಲನ್ನು ಮುಚ್ಚಲು ಮತ್ತು ಮರೆಮಾಚಲು ಉದ್ದವಾದ, ಸಡಿಲವಾದ ಬಟ್ಟೆಗಳನ್ನು ಧರಿಸಬೇಕು ಎನ್ನುವ ನಿಯಮ ಜಾರಿಯಲ್ಲಿದೆ. ಈ ನಿಯಮ ಉಲ್ಲಂಘಿಸುವವರು ಸಾರ್ವಜನಿಕ ಖಂಡನೆ, ದಂಡ ಅಥವಾ ಬಂಧನ ಎದುರಿಸಬೇಕಾಗುತ್ತದೆ ಎಂದು ಇರಾನ್​ ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app