
- ʼಭಾರತದ ಅಖಂಡತೆ ಭದ್ರವಾಗಿರುವಾಗ ಜೋಡಿಸುವ ಚರ್ಚೆಯು ಕೇವಲ ರಾಜಕೀಯ ಸ್ಟಂಟ್'
- ಡೋಲು, ನಗಾರಿ ಬಾರಿಸುವುದರಿಂದ ಒಡೆದ ಮನಸುಗಳ ಜೋಡಣೆ ಸಾಧ್ಯವೇ : ಸುಧಾಕರ್ ಪ್ರಶ್ನೆ
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ 'ಭಾರತ್ ಜೋಡೋ ಯಾತ್ರೆ' ಕರ್ನಾಟಕದಲ್ಲಿ ಮುಕ್ತಾಯಗೊಂಡಿದೆ. ನಾವು ಈ ಯಾತ್ರೆಯ ಉದ್ದೇಶ ಶುದ್ಧಿಯನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ, ಯಾವ ಆಶಯದಿಂದ ಈ ಯಾತ್ರೆ ಕೈಗೊಳ್ಳಲಾಗಿತ್ತು ಆ ಆಶಯ ಈಡೇರಿದೆಯೇ? ಎಂಬ ಸಾರ್ವಜನಿಕರು ಪ್ರಶ್ನೆಗೆ ಕಾಂಗ್ರೆಸ್ ಉತ್ತರ ನೀಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಒತ್ತಾಯಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಭಾರತ್ ಜೋಡೋ ಎಂಬ ಕಾಂಗ್ರೆಸ್ ಘೋಷ ವಾಕ್ಯವೇ ಹಾಸ್ಯಾಸ್ಪದ ಮತ್ತು ಪ್ರಶ್ನಾರ್ಹವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ಅಖಂಡತೆ ಭದ್ರವಾಗಿರುವಾಗ ಜೋಡಿಸುವ ಚರ್ಚೆಯು ಕೇವಲ ರಾಜಕೀಯ 'ಸ್ಟಂಟ್' ಆಗಿದೆ. ಒಂದು ಮಿಥ್ಯಾ ವಾದವನ್ನು ಸತ್ಯ ಮಾಡುವ ವ್ಯರ್ಥ ಪ್ರಯತ್ನ ಇದು” ಎಂದು ಕುಟುಕಿದ್ದಾರೆ.
“ಅಷ್ಟಕ್ಕೂ ಕರ್ನಾಟಕ ರಾಜ್ಯದಲ್ಲಿ ಹಲವು ದಿನಗಳು ನಡೆದ ಪಾದಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರಾಗಲಿ, ಕಾಂಗ್ರೆಸ್ ಆಗಲಿ ಒಟ್ಟಾರೆಯಾಗಿ ರಾಜ್ಯಕ್ಕೆ ಕೊಟ್ಟ ಸಂದೇಶ ಏನು? ಎಂಬುದು ಸಂಶೋಧನೆಗೆ ಅರ್ಹವಾದ ವಿಚಾರ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಜಾತಿ ವಿಭಜನೆ, ಧರ್ಮ ವಿಭಜನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರೆ ಜೋಡಿಸುವ ಪ್ರಕ್ರಿಯೆ ಸರಿಯಾದ ಹಾದಿಯಲ್ಲಿದೆ ಎಂದು ವ್ಯಾಖ್ಯಾನಿಸಬಹುದಿತ್ತು. ಆದರೆ ಅಂತಹ ಯಾವ ಮಾತುಗಳೂ ನಿಮ್ಮಿಂದ ಬರಲೇ ಇಲ್ಲ” ಎಂದು ಜರಿದಿದ್ದಾರೆ.
ಒಂದು ರಾಜಕೀಯ ಪಾದಯಾತ್ರೆಯ ಆಶಯ ವಿಸ್ತಾರವಾಗಿರಬೇಕು, ಜನಮಾನಸವನ್ನು ಗೆಲ್ಲುವಂತಿರಬೇಕು.
— Dr Sudhakar K (@mla_sudhakar) October 24, 2022
ಇಲ್ಲದ ವಿಚಾರವನ್ನು ಸೃಷ್ಟಿಸಲು ಸಲ್ಲದ ಗದ್ದಲ ಹುಟ್ಟು ಹಾಕುದಂತಿದೆ ನಿಮ್ಮ ಯಾತ್ರೆ.
ನೀವು ಪಾದಯಾತ್ರೆ ಆರಂಭಿಸಿದಾಗಲೇ ರಾಜಸ್ತಾನದಲ್ಲಿ ಭುಗಿಲೆದ್ದ ಕಾಂಗ್ರೆಸ್ ಕಲಹ ಪಕ್ಷದ ಸದ್ಯೋಭವಿಷ್ಯದ ಸ್ಥಿತಿಗೆ ಹಿಡಿದ ಕೈಗನ್ನಡಿ.
6/6
“ಪಾದಯಾತ್ರೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಜೋಡಿಸುವ ವಿಚಾರವೇ ನಿಮಗೆ ದೊಡ್ಡ ಸವಾಲಾಗಿ ಪರಿಣಮಿಸಿರಬಹುದು. ಡೋಲು, ನಗಾರಿ ಬಾರಿಸುವುದರಿಂದ ಒಡೆದ ಮನಸುಗಳ ಜೋಡಣೆ ಸಾಧ್ಯವೇ?” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಒಬಿಸಿಗೆ ಅನ್ಯಾಯ ಮಾಡಿ ಮುಸ್ಲಿಮರಿಗೆ ಮೀಸಲಾತಿ ನೀಡಿದ್ದ ಕಾಂಗ್ರೆಸ್; ಶಾಸಕ ಅರವಿಂದ ಬೆಲ್ಲದ್ ಕಿಡಿ
“ಒಂದು ರಾಜಕೀಯ ಪಕ್ಷದ ಪಾದಯಾತ್ರೆಯ ಆಶಯವು ವಿಸ್ತಾರವಾಗಿರಬೇಕು. ಪಾಯದಾತ್ರೆ ಜನಮಾನಸವನ್ನು ಗೆಲ್ಲುವಂತಿರಬೇಕು. ಆದರೆ ಕಾಂಗ್ರೆಸ್ ಪಾದಯಾತ್ರೆ ಮಾತ್ರ ಇಲ್ಲದ ವಿಚಾರವನ್ನು ಸೃಷ್ಟಿಸಲು ಸಲ್ಲದ ಗದ್ದಲ ಹುಟ್ಟು ಹಾಕುದಂತಿದೆ. ನೀವು ಪಾದಯಾತ್ರೆ ಆರಂಭಿಸಿದಾಗಲೇ ರಾಜಸ್ತಾನದಲ್ಲಿ ಕಾಂಗ್ರೆಸ್ ಕಲಹ ಭುಗಿಲೆದ್ದಿತ್ತು. ಅದು ಪಕ್ಷದ ಸದ್ಯೋಭವಿಷ್ಯದ ಸ್ಥಿತಿಗೆ ಹಿಡಿದ ಕೈಗನ್ನಡಿ” ಎಂದು ಲೇವಡಿ ಮಾಡಿದ್ದಾರೆ.