ಪಂಜರದ ಗಿಳಿ | ಆಡಳಿತ ಸರ್ಕಾರದ ನಿರ್ದೇಶನದ ಮೇರೆಗೆ ಸಿಬಿಐ ತನ್ನ ಜಾಲಕ್ಕೆ ಬೀಳಿಸಿದ ಹೈ ಪ್ರೊಫೈಲ್ ಕೇಸ್‌ಗಳಿವು!

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಬಳಿಕ ವಿಪಕ್ಷ ನಾಯಕರ ಮೇಲೆ ತನಿಖಾ ಸಂಸ್ಥೆಗಳ ದಾಳಿ ಹೆಚ್ಚಾಗಿವೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಅಂಕಿ- ಅಂಶಗಳ ಪ್ರಕಾರ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಶೇ 60ರಷ್ಟಿದ್ದ ಸೇಡಿನ ದಾಳಿ ಎನ್‌ಡಿಎ ಅವಧಿಯಲ್ಲಿ ಶೇ. 95ಕ್ಕೇರಿದೆ. ಅಂತಹ ದಾಳಿಗಳಿಗೆ ಸಿಲುಕಿದ ಪ್ರತಿಷ್ಟಿತರು ಮತ್ತು ಆ ಪ್ರಕರಣಗಳ ವಿವರ ಇಲ್ಲಿದೆ.

ಕೇಂದ್ರದಲ್ಲಿ ಬಿಜೆಪಿ ಆಡಳಿತವಾಗಲಿ ಅಥವಾ ಕಾಂಗ್ರೆಸ್ ಆಡಳಿತವಿರಲಿ. ಸಿಬಿಐ ಸರ್ಕಾರದ ನಿರ್ದೇಶನದಂತೆಯೇ ಪ್ರಕರಣ ದಾಖಲಿಸುತ್ತದೆ, ದಾಳಿ ನಡೆಸುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಈ ಕೆಳಗೆ ನೀಡಿರುವ ಪಟ್ಟಿ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಶೇ. 60ರಷ್ಟಿದ್ದ ತನಿಖಾ ಸಂಸ್ಥೆಗಳ ಸೇಡಿನ ದಾಳಿಗಳ ಪ್ರಮಾಣ ಎನ್‌ಡಿಎ ಅವಧಿಯಲ್ಲಿ ಶೇ. 95ಕ್ಕೇರಿದೆ. ಅಂತಹ ದಾಳಿಗಳಿಗೆ ಸಿಲುಕಿದವರು ಮತ್ತು ಆ ಪ್ರಕರಣಗಳ ವಿವರ ಇಲ್ಲಿದೆ.

ಎನ್‌ಡಿಎ ಅವಧಿಯ ಎಂಟು ವರ್ಷಗಳ ಪ್ರಮುಖ ಸಿಬಿಐ ದಾಳಿಗಳು

(2014ರಿಂದ ಈವರೆಗೆ)

ಪಿ ಚಿದಂಬರಂ, ಕಾರ್ತಿ ಚಿದಂಬರಂ

ಐಎನ್ಎಕ್ಸ್ ಮೀಡಿಯಾ ಮತ್ತು ಏರ್‌ಸೆಲ್ ಮಾಕ್ಸಿಸ್ ಹಗರಣಕ್ಕೆ ಸಂಬಂಧಿಸಿ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. 2018ರಲ್ಲಿ ಐಎನ್ಎಕ್ಸ್ ಮೀಡಿಯಾ ಪ್ರಕರಣವನ್ನು ಸಿಬಿಐ ಮತ್ತು ಇಡಿ ಎರಡೂ ದಾಖಲಿಸಿಕೊಂಡಿದ್ದವು. ಒಂದು ವರ್ಷದ ಬಳಿಕ ಪಿ ಚಿದಂಬರಂ ಅವರನ್ನು ಇಡಿ ಬಂಧಿಸಿತು. ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಎರಡೂ ತನಿಖಾ ಸಂಸ್ಥೆಗಳು ದೋಷಾರೋಪಣೆ ಪಟ್ಟಿ ಸಲ್ಲಿಸಿವೆ.  

ಡಿ ಕೆ ಶಿವಕುಮಾರ್

2018ರಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಇಡಿ ಪ್ರಕರಣ ದಾಖಲಿಸಿತ್ತು. ಎರಡು ವರ್ಷಗಳ ನಂತರ ಅಂದರೆ 2020ರ ಅಕ್ಟೋಬರ್‌ನಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಸಿಬಿಐ ಪ್ರಕರಣ ದಾಖಲಿಸಿತು. ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಸಿಬಿಐ, ಡಿಕೆಶಿಗೆ ಸಂಬಂಧಿಸಿದ 14 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಅಲ್ಲದೆ, ಡಿ ಕೆ ಶಿವಕುಮಾರ್ ತಮ್ಮ ಆದಾಯ ಮೀರಿ ₹75 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು. ಪ್ರಕರಣ ಸಂಬಂಧ ಈವರೆಗೆ ಯಾವುದೇ ಆರೋಪ ಪಟ್ಟಿ ಸಲ್ಲಿಕೆಯಾಗಿಲ್ಲ. 

ಭೂಪಿಂದರ್ ಹೂಡಾ

ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ವಿರುದ್ಧ ಸಿಬಿಐ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. 2015ರ ಸೆಪ್ಟೆಂಬರ್‌ನಲ್ಲಿ, ಭೂ ಕಬಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಹೂಡಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. 2017ರ ಏಪ್ರಿಲ್‌ನಲ್ಲಿ ʼದಿ ನ್ಯಾಷನಲ್ ಹೆರಾಲ್ಡ್ʼ ಪತ್ರಿಕೆಯ ಪ್ರಕಾಶಕ ಮತ್ತು ಗಾಂಧಿ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದ ಅಸೋಸಿಯೇಟ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್)ಗೆ ಪಂಚಕುಲದಲ್ಲಿ ಫ್ಲಾಟ್ ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಹೂಡಾ ಮತ್ತು ಇತರರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. 2019ರ ಜನವರಿಯಲ್ಲಿ ಹೂಡಾ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಸಿಬಿಐ ಅವರ ರೋಹ್ಟಕ್ ನಿವಾಸದ ಮೇಲೆ ದಾಳಿ ನಡೆಸಿತು. ಈ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ. 

ಭೂಪೇಶ್ ಬಾಘೇಲ್

2018ರ ಛತ್ತೀಸ್‌ಗಢದ ವಿಧಾನಸಭಾ ಚುನಾವಣೆಗೂ ಮುನ್ನ, ಆಗಿನ ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥ ಭೂಪೇಶ್ ಬಾಘೇಲ್ ಅವರನ್ನು ʻಸೆಕ್ಸ್ ಸಿಡಿʼ ಹಗರಣದಲ್ಲಿ ಸಿಬಿಐ ಆರೋಪಿಯನ್ನಾಗಿ ಹೆಸರಿಸಿತ್ತು. ಈಗ ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿರುವ ಬಾಘೇಲ್ ಅವರು ಸಿಡಿಯನ್ನು ಪ್ರಸಾರ ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು. ಬಾಘೇಲ್ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ. 

ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್, ಕಾರ್ತಿ ಚಿದಂಬರಂ

ʼರಾಜಸ್ಥಾನ ಆಂಬುಲೆನ್ಸ್ ಹಗರಣʼದಲ್ಲಿ ಗೆಹ್ಲೋಟ್, ಪೈಲಟ್ ಹಾಗೂ ಕಾರ್ತಿ ಚಿದಂಬರಂ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. 2010ರಲ್ಲಿ ರಾಜಸ್ಥಾನ ಸರ್ಕಾರ ಆರಂಭಿಸಿದ ಆಂಬುಲೆನ್ಸ್ ಯೋಜನೆಯ ಗುತ್ತಿಗೆಗಳ ಟೆಂಡರ್‌ಗಳನ್ನು ಝಿಕಿಟ್ಜಾ ಹೆಲ್ತ್‌ಕೇರ್‌ಗೆ ಅನುಕೂಲವಾಗುವಂತೆ ನೀಡಲಾಗಿತ್ತು ಎಂಬ ಮಾತುಗಳು ಕೇಳಿ ಬಂದಿದ್ದು, 2015ರಲ್ಲಿ ಈ ಮೂವರು ನಾಯಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಗುತ್ತಿಗೆ ನೀಡುವುದಕ್ಕೂ ಮುನ್ನ ಪೈಲಟ್ ಮತ್ತು ಕಾರ್ತಿ ಚಿದಂಬರಂ ಝಿಕಿಟ್ಜಾ ಹೆಲ್ತ್‌ಕೇರ್‌ನ ನಿರ್ದೇಶಕರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಟೆಂಡರ್ ನೀಡಿದ್ದಾರೆ ಎನ್ನಲಾಗಿತ್ತು. ಆದರೆ, ಪ್ರಕರಣ ಸಂಬಂಧ 2018ರಲ್ಲಿ ಸಿಬಿಐ ಚಾರ್ಜ್‌ಶೀಟ್‌ ತಯಾರಿಸಿದ್ದು, ಈ ಮೂವರನ್ನೂ ಆರೋಪಿಗಳೆಂದು ಹೆಸರಿಸಿರಲಿಲ್ಲ. ಆದರೆ,  ಕಾಂಗ್ರೆಸ್‌ನ ಮಾಜಿ ಸಚಿವ ವಯಲಾರ್ ರವಿ ಅವರ ಪುತ್ರ ರವಿಕೃಷ್ಣ ಅವರನ್ನು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿತ್ತು.

ಜಯಂತಿ ನಟರಾಜನ್ 

ಲಂಚ ಪಡೆದು ಕೈಗಾರಿಕೆಗಳನ್ನು ಸ್ಥಾಪಿಸಲು ʼಪರಿಸರ ಅನುಮತಿʼ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರಲ್ಲಿ ಕೇಂದ್ರದ ಮಾಜಿ ಸಚಿವೆ ಜಯಂತಿ ನಟರಾಜನ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಈ ಪ್ರಕರಣ ಸಂಬಂಧ ಜಯಂತಿ ನಟರಾಜನ್‌ಗೆ ಸಂಬಂಧಿಸಿದ ದೆಹಲಿ ಮತ್ತು ಚೆನ್ನೈನ ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿ ಶೋಧ ನಡೆಸಿತು. ಆದರೆ, ಈವರೆಗೆ ಸಿಬಿಐ ಆರೋಪ ಪಟ್ಟಿ ಸಲ್ಲಿಸಿಲ್ಲ 

ಉಮ್ಮನ್ ಚಾಂಡಿ

ಕೇರಳದಲ್ಲಿ ಸೋಲಾರ್ ಪ್ಯಾನೆಲ್ ಹಗರಣಕ್ಕೆ ಸಂಬಂಧಿಸಿದ್ದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 2021ರ ಆಗಸ್ಟ್‌ನಲ್ಲಿ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ಇತರ ಕೆಲ ಕಾಂಗ್ರೆಸ್ ನಾಯಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಕಾಂಗ್ರೆಸ್ ಶಾಸಕ ಎ ಪಿ ಅನಿಲ್ ಕುಮಾರ್, ಕಾಂಗ್ರೆಸ್ ಸಂಸದರಾದ ಹೈಬಿ ಈಡನ್ ಹಾಗೂ ಅಡೂರ್ ಪ್ರಕಾಶ್, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ ಪಿ ಅಬ್ದುಲ್ಲಕುಟ್ಟಿ ಇತರ ಆರೋಪಿಗಳು. ಈ ಪ್ರಕರಣವನ್ನು ಮೊದಲಿಗೆ ಕೇರಳದ ಅಪರಾಧ ವಿಭಾಗ ತನಿಖೆ ನಡೆಸುತ್ತಿತ್ತು. ಬಳಿಕ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಯಿತು. ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿಲ್ಲ.  

ವಿನಯ್ ಕುಲಕರ್ಣಿ, ಹನುಮಂತ ಕೊರವರ್

ಧಾರವಾಡ ಬಿಜೆಪಿ ಮುಖಂಡ ಯೋಗೇಶ್‌ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸಿಬಿಐ 2020ರಲ್ಲಿ ಬಂಧಿಸಿತು. ಬಳಿಕ, ಕಾಂಗ್ರೆಸ್ ನಾಯಕ ಹನುಮಂತ್ ಕೊರವರ್ ಮತ್ತು ವಿನಯ್ ಅವರ ಸಹೋದರ ವಿಜಯ್ ಕುಲಕರ್ಣಿಯವರನ್ನೂ ಸಿಬಿಐ ಪ್ರಶ್ನಿಸಿತು. 2016ರ ಜೂನ್‌ನಲ್ಲಿ  ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್‌ಗೌಡ ಹತ್ಯೆಯಾಗಿತ್ತು. 2021ರ ಜನವರಿಯಲ್ಲಿ ವಿನಯ್ ಕುಲಕರ್ಣಿ ವಿರುದ್ಧ ತನಿಖಾ ಸಂಸ್ಥೆ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ.

ಹಿಮಂತ ಬಿಸ್ವಾ ಶರ್ಮಾ

ಶಾರದಾ ಚಿಟ್ ಫಂಡ್ ಹಗರಣದ ಕುರಿತು ಈಗಿನ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು 2014-15ರಲ್ಲಿ ಸಿಬಿಐ ಮತ್ತು ಇಡಿ ತನಿಖೆ ನಡೆಸಿತ್ತು. 2014ರಲ್ಲಿ ಬಿಸ್ವಾ ಅವರ ಮನೆ ಮೇಲೆ ದಾಳಿ ನಡೆಸಿದ್ದ ತನಿಖಾ ಸಂಸ್ಥೆ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಶಾರದಾ ಚಿಟ್ ಫಂಡ್ ಹಗರಣದ ಪ್ರಮುಖ ಆರೋಪಿ ಸುದೀಪ್ತ ಸೇನ್ ಶರ್ಮಾ 2016ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹೆಚ್ಚಿನ ತನಿಖೆ ನಡೆಸಲಿಲ್ಲ. ಚಾರ್ಜ್‌ಶೀಟ್‌ ಕೂಡ ಸಲ್ಲಿಸಿಲ್ಲ.  

ನಬಮ್ ತುಕಿ

2011ರಿಂದ 2016ರವರೆಗೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ನಬಮ್ ತುಕಿ ಅವರು ಸರ್ಕಾರಿ ಯೋಜನೆಯೊಂದರಲ್ಲಿ ಅಕ್ರಮವೆಸಗಿರುವ ಆರೋಪ ಕೇಳಿ ಬಂದಿತ್ತು. ನಬಮ್ ತುಕಿ ಅವರ ಸಹೋದರ ನಬಮ್ ತಗಮ್ ಅವರಿಗೆ ಪಾರ್ಕಿಂಗ್ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ಗುತ್ತಿಗೆ ನೀಡಲಾಗಿತ್ತು. ಇದರಲ್ಲಿ 3.20 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎನ್ನಲಾಗಿತ್ತು. ತನಿಖೆ ಇನ್ನೂ ನಡೆಯುತ್ತಿದ್ದು, ಆರೋಪಪಟ್ಟಿ ಸಲ್ಲಿಕೆಯಾಗಿಲ್ಲ.

ಒಕ್ರಾಮ್ ಇಬೋಬಿ ಸಿಂಗ್

ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪುರದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಒಕ್ರಾಮ್ ಇಬೋಬಿ ಸಿಂಗ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿ ಶೋಧ ನಡೆಸಿತು. ಈ ಪ್ರಕರಣದಲ್ಲಿ ಒಕ್ರಾಮ್ ಇಬೋಬಿ ಸಿಂಗ್ ಮತ್ತು ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಣಿಪುರ ಡೆವಲಪ್‌ಮೆಂಟ್‌ ಸೊಸೈಟಿ(ಎಂಡಿಎಸ್)ಯ 332 ಕೋಟಿ ರೂಪಾಯಿಯನ್ನು ದುರುಪಯೋಗ ಪಡಿಸಿಕೊಂಡ ಆರೋಪ ಇಬೋಬಿ ಸಿಂಗ್ ಮೇಲಿದೆ. ಈ ಕುರಿತ ತನಿಖೆ ಮುಂದುವರಿದಿದ್ದು, ಆರೋಪ ಪಟ್ಟಿ ಸಲ್ಲಿಕೆಯಾಗಿಲ್ಲ.  

ವೀರಭದ್ರ ಸಿಂಗ್, ಪ್ರತಿಭಾ ಸಿಂಗ್

ಯುಪಿಎ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ವೀರಭದ್ರ ಸಿಂಗ್ ದಂಪತಿ ವಿರುದ್ಧ 10 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಆರೋಪ ಕೇಳಿ ಬಂದಿತ್ತು. ಈ ಸಂಬಂಧ 2015ರ ಸೆಪ್ಟೆಂಬರ್‌ನಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು. 2015ರಲ್ಲಿ ವೀರಭದ್ರ ಸಿಂಗ್ ಅವರ ಮಗಳ ಮದುವೆ ದಿನವೇ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿತ್ತು. ಈ ಪ್ರಕರಣದಲ್ಲಿ ಅವರ ಪತ್ನಿ ಪ್ರತಿಭಾ ಸಿಂಗ್ ಅವರನ್ನೂ ಆರೋಪಿಯನ್ನಾಗಿಸಿದೆ. ಸಿಂಗ್ ಜುಲೈ 2021ರಲ್ಲಿ ನಿಧನರಾಗಿದ್ದು, ತನಿಖೆ ಮುಂದುವರಿದಿದೆ. 

ಹರೀಶ್ ರಾವತ್

2019ರಲ್ಲಿ ಬಂಡಾಯ ಶಾಸಕರನ್ನು ಸೆಳೆಯಲು ಹಣ ನೀಡಿದ ಆರೋಪದಡಿ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಮತ್ತು ಮಾಜಿ ಸಚಿವ ಹರಕ್ ಸಿಂಗ್ ರಾವತ್ ಹಾಗೂ ಸಮಾಚಾರ ಪ್ಲಸ್ ಸುದ್ದಿ ವಾಹಿನಿಯ ಉಮೇಶ್ ಕುಮಾರ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿಲ್ಲ. 

ಶಂಕರ್ ಸಿನ್ಹಾ ವಘೇಲಾ

ಗುಜರಾತ್ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಶಂಕರ್ ಸಿನ್ಹಾ ವಘೇಲಾ ಅವರು ಕೇಂದ್ರದ ಜವಳಿ ಸಚಿವರಾಗಿದ್ದಾಗ ಅತಿ ಕಡಿಮೆ ಬೆಲೆಗೆ ರಾಷ್ಟ್ರೀಯ ಜವಳಿ ನಿಗಮದ ಭೂಮಿಯನ್ನು ಮಾರಿದ್ದರು. ಇದರಿಂದಾಗಿ ಸರ್ಕಾರಕ್ಕೆ 709 ಕೋಟಿ ರೂಪಾಯಿ ನಷ್ಟ ಉಂಟಾಗಿತ್ತು ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಿಬಿಐ ಮತ್ತು ಇ.ಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಪ್ರಕರಣ ಸಂಬಂಧ ಈವರೆಗೆ ಯಾವುದೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿಲ್ಲ. 

ಆರ್ ರೋಶನ್ ಬೇಗ್

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಸಚಿವ ಆರ್ ರೋಶನ್ ಬೇಗ್ ಅವರನ್ನು ಸಿಬಿಐ 2020ರ ನವೆಂಬರ್‌ನಲ್ಲಿ ಬಂಧಿಸಿತು. ಬೆಂಗಳೂರಿನ ಶಿವಾಜಿನಗರದಿಂದ ಏಳು ಬಾರಿ ಶಾಸಕರಾಗಿದ್ದ ಅವರು ಚುನಾವಣಾ ವೆಚ್ಚಕ್ಕಾಗಿ ಐಎಂಎ ನಿಧಿಯಿಂದ ಕೋಟ್ಯಂತರ ರೂಪಾಯಿ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು. 2021ರಲ್ಲಿ ಸಿಬಿಐ ರೋಶನ್ ಬೇಗ್ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದೆ. 

ರಘುರಾಜ್ ಸಿಂಗ್ ಕಂಸನಾ

ಮಧ್ಯಪ್ರದೇಶದ ರಘುರಾಜ್ ಸಿಂಗ್ ಕಂಸನಾ ಅವರ ಸೋದರಳಿಯ ಕುಶಾಲ್ ಸಿಂಗ್, ನಕಲಿ ದಾಖಲೆಗಳನ್ನು ಸೃಷ್ಟಿಸಿ ಯುಕೊ ಬ್ಯಾಂಕ್‌ನಿಂದ ಸಾಲ ಪಡೆದಿರುವ ಆರೋಪ ಕೇಳಿ ಬಂದಿತ್ತು. ಇದರಿಂದಾಗಿ ಬ್ಯಾಂಕಿಗೆ 8.08 ಕೋಟಿ ರೂಪಾಯಿ ನಷ್ಟ ಉಂಟಾಗಿತ್ತು. ಈ ಪ್ರಕರಣ ಸಂಬಂಧ ಸಿಬಿಐ, ಕಾಂಗ್ರೆಸ್ ಶಾಸಕ ರಘುರಾಜ್ ಸಿಂಗ್ ಕಂಸನಾ ನಿವಾಸದ ಮೇಲೆ ದಾಳಿ ನಡೆಸಿತ್ತು.

ಅಂಪಾರೀನ್ ಲಿಂಗ್ಡೋಹ್

ಮೇಘಾಲಯ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಲಿಂಗ್ಡೋಹ್ ವಿರುದ್ಧ ಶಿಕ್ಷಕರ ನೇಮಕಾತಿ ಅಂಕಪಟ್ಟಿ ದುರ್ಬಳಕೆ ಆರೋಪ ಕೇಳಿ ಬಂದಿತ್ತು. ಈ ಸಂಬಂಧ 2018ರ ಜನವರಿಯಲ್ಲಿ  ಮೇಘಾಲಯ ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐ ಪ್ರಕರಣ ದಾಖಲಿಸಿತ್ತು. 2020ರ ಜೂನ್‌ನಲ್ಲಿ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. 

ರಾಬರ್ಟ್ ವಾದ್ರಾ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಅಕ್ರಮ ಭೂವ್ಯವಹಾರಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು 18 ಎಫ್ಐಆರ್‌ಗಳನ್ನು ದಾಖಲಿಸಿದ್ದಾರೆ. ಇವುಗಳನ್ನೆಲ್ಲ ಸಿಬಿಐಗೆ ವರ್ಗಾಯಿಸಲಾಗಿದೆ. ಆದರೆ ಸಿಬಿಐ ವಾದ್ರಾ ಅವರನ್ನು ವಿಚಾರಣೆ ನಡೆಸಿಲ್ಲ. ಆರೋಪ ಪಟ್ಟಿಯನ್ನೂ ಸಿದ್ಧಪಡಿಸಿಲ್ಲ. ಇ.ಡಿ ಅಧಿಕಾರಿಗಳು ಮಾತ್ರ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. 

ಗುರ್ಪಾಲ್ ಸಿಂಗ್

ಸಿಂಭೋಲಿ ಶುಗರ್ಸ್‌ ಕಂಪನಿಯಿಂದ 98 ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿರುವ ಆರೋಪದಡಿ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಅಳಿಯ ಗುರ್ಪಾಲ್ ಸಿಂಗ್ ಅವರನ್ನು ಸಿಬಿಐ ವಿಚಾರಣೆಗೊಳಪಡಿಸಿತ್ತು. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನಲ್ಲಿ ಸಾಲ ವಂಚನೆ ಮತ್ತು ಹಿಂದಿನ ಸಾಲ ಪಾವತಿಸದ ಹಿನ್ನೆಲೆ ಗುರ್ಪಾಲ್ ಮತ್ತು ಇತರ 12 ಮಂದಿಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ಅಗ್ರಸೇನ್ ಗೆಹ್ಲೋಟ್

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹೋದರ ಅಗ್ರಸೇನ್ ಗೆಹ್ಲೋಟ್ ಅವರನ್ನು 2020ರಲ್ಲಿ ಇ.ಡಿ ಬಂಧಿಸಿತ್ತು. ಎರಡು ವರ್ಷಗಳ ನಂತರ ಅಂದರೆ 2022ರ ಜೂನ್‌ನಲ್ಲಿ ಪ್ರಕರಣವನ್ನು ಸಿಬಿಐ ವಹಿಸಿಕೊಂಡಿದ್ದು,  ಅಶೋಕ್‌ ಗೆಹ್ಲೋಟ್‌ ನಿವಾಸದ ಮೇಲೆ ದಾಳಿ ನಡೆಸಿತ್ತು.  

ರತುಲ್ ಪುರಿ

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಸೋದರಳಿಯ ರತುಲ್ ಪುರಿ. ವಿವಿಐಪಿ ಹೆಲಿಕಾಪ್ಟರ್ ಪ್ರಕರಣ ಮತ್ತು ಎರಡು ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಮಾಡದ ಆರೋಪ ರತುಲ್‌ ಪುರಿ ವಿರುದ್ಧ ಕೇಳಿ ಬಂದಿತ್ತು. ಈ ಪ್ರಕರಣಗಳನ್ನು ದಾಖಲಿಸಿಕೊಂಡ ಸಿಬಿಐ ತನಿಖೆ ನಡೆಸುತ್ತಿದೆ. 36 ಸಾವಿರ ಕೋಟಿ ರೂಪಾಯಿಯ ಅಗಸ್ಟಾ ವೆಸ್ಟ್ ಲ್ಯಾಂಡ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಪುರಿ ಅವರ ಕಂಪನಿಯು ರಾಜೀವ್ ಸಕ್ಸೇನಾ ಅವರೊಂದಿಗೆ ವಹಿವಾಟು ನಡೆಸಿದೆ ಎಂಬ ದೂರುಗಳು ಕೇಳಿ ಬಂದಿದ್ದವು.   

ಯುಪಿಎ ಅವಧಿಯಲ್ಲಿ ನಡೆದ ತನಿಖಾ ಸಂಸ್ಥೆಯ ದಾಳಿಗಳು (2004-2014)

ಅಮಿತ್ ಶಾ  

2010ರಲ್ಲಿ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಗುಜರಾತ್ ಸಚಿವ ಅಮಿತ್ ಶಾ ಅವರನ್ನು ಸಿಬಿಐ ಬಂಧಿಸಿತ್ತು. ಈಗ ದೇಶದ ಗೃಹ ಸಚಿವರಾಗಿರುವ ಶಾ ಅವರು ಮೂರು ತಿಂಗಳು ಸೆರೆವಾಸ ಅನುಭವಿಸಿದರು. ಬಳಿಕ, ಜಾಮೀನಿನ ಮೇಲೆ ಹೊರಬಂದರು. ಅಮಿತ್ ಶಾ ಮತ್ತು ಬಿಜೆಪಿ ನಾಯಕ ಗುಲಾಬ್ ಚಂದ್ರ ಕಟಾರಿಯಾ ವಿರುದ್ಧ ಸಿಬಿಐ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ಅಮಿತ್ ಶಾ ಅವರನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಹೆಸರಿಸಿತ್ತು. 2014ರಲ್ಲಿ ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ, ಮುಂಬೈ ನ್ಯಾಯಾಲಯದಿಂದ ಶಾ ಅವರಿಗೆ ಮುಕ್ತಿ ಸಿಕ್ಕಿತು. ಈ ಆದೇಶದ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಲಿಲ್ಲ.  

ರಾಜೇಂದ್ರ ರಾಥೋಡ್ 

2012ರಲ್ಲಿ ದರೋಡೆಕೋರ ದಾರಾಸಿಂಗ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಮಾಜಿ ಸಚಿವ ರಾಜೇಂದ್ರ ರಾಥೋಡ್ ಅವರನ್ನು ಸಿಬಿಐ ಬಂಧಿಸಿತ್ತು. ಸ್ಥಳೀಯ ನ್ಯಾಯಾಲಯವು ರಾಜೇಂದ್ರ ರಾಥೋಡ್‌ಗೆ ಜಾಮೀನು ನೀಡಿತು. ಬಳಿಕ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 2018ರಲ್ಲಿ ಎಲ್ಲ ಆರೋಪಿಗಳನ್ನು ನಿರ್ದೋಷಿಗಳು ಎಂದು ಸುಪ್ರೀಂ ಕೋರ್ಟ್ ಘೋಷಿಸಿತು.

ಗಾಲಿ ಜನಾರ್ದನ ರೆಡ್ಡಿ 

ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರನ್ನು ಸಿಬಿಐ 2011ರಲ್ಲಿ ಬಂಧಿಸಿತ್ತು. ಮೂರು ವರ್ಷಗಳ ಕಾಲ ಜೈಲಿನಲ್ಲಿದ್ದ ರೆಡ್ಡಿ, 2015ರಲ್ಲಿ ಜಾಮೀನಿನ ಮೇಲೆ ಹೊರ ಬಂದರು. 2021ರಲ್ಲಿ ಬಳ್ಳಾರಿಗೆ ಭೇಟಿ ನೀಡಲು ಅನುವು ಮಾಡಿಕೊಡುವಂತೆ ರೆಡ್ಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಸಿಬಿಐ ವಿರೋಧಿಸಿತು. ಆದರೆ, ಸುಪ್ರೀಂ ಕೋರ್ಟ್ ರೆಡ್ಡಿ ಬಳ್ಳಾರಿಗೆ ಹೋಗಲು ಅನುಮತಿ ನೀಡಿತು.. 

ಗಣಿಗಾರಿಕೆ ಸರಣಿ ಪ್ರಕಣದಲ್ಲಿ ರೆಡ್ಡಿ ಆಪ್ತ ಶ್ರೀರಾಮುಲು ನಿವಾಸದ ಮೇಲೂ ಸಿಬಿಐ ದಾಳಿ ನಡೆಸಿತು. ಈ ಪ್ರಕರಣದಲ್ಲಿ ಸಚಿವ ಆನಂದ್ ಸಿಂಗ್, ರಾಮುಲು ಸೋದರಳಿಯ ಸುರೇಶ್ ಬಾಬು, ಪಕ್ಷೇತರ ಶಾಸಕ ನಾಗೇಂದ್ರ ಮತ್ತು ಸತೀಶ್ ಸೈಲ್ ಅವರನ್ನು ಸಿಬಿಐ ಬಂಧಿಸಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು.  

ಈ ಸುದ್ದಿ ಓದಿದ್ದೀರಾ?: ಸುದ್ದಿ ನೋಟ | ತನಿಖಾ ಸಂಸ್ಥೆಗಳು ಅಂದು ಪಂಜರದ ಗಿಳಿ; ಇಂದು ಪ್ರತಿಪಕ್ಷಗಳ ಮೇಲಿನ ದಾಳಿಗೆ ಅಸ್ತ್ರ

ಬಿ ಎಸ್ ಯಡಿಯೂರಪ್ಪ

ಜೆಎಸ್‌ಡಬ್ಲ್ಯೂ  ಸ್ಟೀಲ್ ಕಂಪನಿಗೆ ಭೂ ಹಂಚಿಕೆ ಮತ್ತು ಅಕ್ರಮ ಗಣಿಗಾರಿಕೆಗೆ ಅನುಮತಿಸಿದ ಆರೋಪದ ಮೇಲೆ 2012ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಪ್ರಕರಣ ದಾಖಲಿಸಿತ್ತು. ಅದೇ ವರ್ಷ ಅವರ ಮಕ್ಕಳಾದ ಬಿ ವೈ ವಿಜಯೇಂದ್ರ ಮತ್ತು ಬಿ ವೈ ರಾಘವೇಂದ್ರ ಹಾಗೂ ಅವರ ಅಳಿಯ ಆರ್ ಎನ್ ಸೋಹನ್ ಕುಮಾರ್ ವಿರುದ್ಧವೂ ಸಿಬಿಐ ದೋಷಾರೋಪಣೆ ಪಟ್ಟಿ ಸಲ್ಲಿಸಿತ್ತು. ಜೆಎಸ್ಡಬ್ಲ್ಯೂ ಸ್ಟೀಲ್ ಕಂಪನಿಯು ಯಡಿಯೂರಪ್ಪ ಕುಟುಂಬದ ಟ್ರಸ್ಟ್ ಮತ್ತು ಕುಟುಂಬಸ್ಥರ ವೈಯಕ್ತಿಕ ಖಾತೆಗಳಿಗೆ 40 ಕೋಟಿ ರೂಪಾಯಿ ಪಾವತಿಸಿರುವ ಪುರಾವೆಗಳು ಸಿಕ್ಕಿವೆ ಎಂದು ಸಿಬಿಐ ಹೇಳಿಕೊಂಡಿತ್ತು. 2016ರಲ್ಲಿ ಯಡಿಯೂರಪ್ಪ ವಿರುದ್ಧದ ಆರೋಪವನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು.  

ಮನೇಕಾ ಗಾಂಧಿ

ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಚಿವೆಯಾಗಿದ್ದ ಮನೇಕಾ ಗಾಂಧಿ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಮನೇಕಾ ಅವರ ಟ್ರಸ್ಟ್ ಅಕ್ರಮವಾಗಿ 50 ಲಕ್ಷ ರೂಪಾಯಿ ಸ್ವೀಕರಿಸಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, ವರದಿ ತಯಾರಿಸಿ, ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಆದರೆ, ಸಿಬಿಐ ನ್ಯಾಯಾಲಯ ವರದಿಯನ್ನು ತಿರಸ್ಕರಿಸಿತ್ತು. ಇದೀಗ ಈ ಪ್ರಕರಣ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿಯಿದೆ.  

ರಾಜ್‌ ಕುಮಾರ್ ಜಟಿಯಾ, ರಾಮ್ ವಿಲಾಸ್ ಪಾಸ್ವಾನ್ (ಎಲ್‌ಜೆಪಿ)

ಬೊಕಾರೊ ಸ್ಟೀಲ್ ಪ್ಲಾಂಟ್‌ನಲ್ಲಿ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸಿಬಿಐ 2014ರಲ್ಲಿ ಬಿಜೆಪಿ ನಾಯಕ ಸತ್ಯನಾರಾಯಣ್ ಜಟಿಯಾ ಅವರ ಪುತ್ರ ರಾಜ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಪ್ರಕರಣದಲ್ಲಿ ಎಲ್‌ಜೆಪಿ ಮುಖ್ಯಸ್ಥ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಹೆಸರು ಕೂಡ ಕೇಳಿ ಬಂದಿದೆ. ಇದೀಗ ಅವರ ಆಪ್ತ ಕಾರ್ಯದರ್ಶಿಯನ್ನು ಸಿಬಿಐ ತನಿಖೆಗೆ ಒಳಪಡಿಸಿದೆ. ಆದರೆ, ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಸಿಬಿಐ ಪ್ರಕರಣ ಸಂಬಂಧ ಯಾವುದೇ ತನಿಖೆ ನಡೆಸಿಲ್ಲ.

ಅರುಣ್ ಶೌರಿ

ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಅರುಣ್ ಶೌರಿ ವಿರುದ್ಧ 2014ರ ಮಾರ್ಚ್‌ನಲ್ಲಿ ಹಿಂದೂಸ್ತಾನ್ ಜಿಂಕ್ ಲಿಮಿಟೆಡ್‌ನಲ್ಲಿನ ಸರ್ಕಾರಿ ಪಾಲನ್ನು ವೇದಾಂತ ಗ್ರೂಪ್‌ಗೆ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸಿಬಿಐ ಅರುಣ್ ಶೌರಿ ಅವರನ್ನು ಪ್ರಶ್ನಿಸಿತ್ತು. 2021ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ಮತ್ತೆ ದಾಖಲಿಸುವಂತೆ ಸಿಬಿಐಗೆ ಸೂಚಿಸಿತ್ತು. ಈ ಆದೇಶವನ್ನು ಹಿಂಪಡೆಯುವಂತೆ ಸರ್ಕಾರ ಈಗ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಪ್ರಕರಣದಲ್ಲಿ ಯಾವುದೇ ಆರೋಪ ಪಟ್ಟಿ ಸಲ್ಲಿಕೆಯಾಗಿಲ್ಲ.

ಯುಪಿಎ ನೇತೃತ್ವದ ಅವಧಿಯಲ್ಲಿ ಪ್ರಮೋದ್ ಮಹಾಜನ್, ಅನೂಪ್ ಅಗರ್ವಾಲ್, ಜಾರ್ಜ್ ಫರ್ನಾಂಡಿಸ್, ಜೆಡಿ(ಯು), ಟಿಎಂಸಿ, ಆರ್‌ಎಲ್‌ಡಿ, ಬಿಜೆಪಿ, ಬಿಜೆಪಿ, ಎಂಎನ್ಎಫ್, ಬಿಎಸ್‌ಪಿ ಹಾಗೂ ಕಾಂಗ್ರೆಸ್‌ಗೆ ಸೇರಿದ ಹಲವು ನಾಯಕರ ಮೇಲೂ ಸಿಬಿಐ ದಾಳಿ ನಡೆದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180