ಮುಂಗಾರು ಅಧಿವೇಶನ | ಸರ್ವಾಧಿಕಾರ ಸಹಿಸುವುದಿಲ್ಲ ಎಂದ ಕಾಂಗ್ರೆಸ್‌

  • ನಿರುದ್ಯೋಗದ ಕುರಿತು ಚರ್ಚಿಸುವಂತೆ ಒತ್ತಾಯ
  • ತನಿಖಾ ಸಂಸ್ಥೆಗಳ ವ್ಯಾಪ್ತಿ ಕುರಿತು ನೋಟಿಸ್‌

ಸಂಸತ್ ಅಧಿವೇಶನದಲ್ಲಿ ಗುರುವಾರದಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ದಿಕ್ಕಾರ ಹಾಕಿ, ಸರ್ವಾಧಿಕಾರವನ್ನು ಸಹಿಸುವುದಿಲ್ಲ ಎಂದು ಘೋಷಣೆ ಕೂಗಿದರು.

ಜಾರಿ ನಿರ್ದೇಶನಾಲಯದ ವಿಚಾರಣೆ ಕುರಿತಂತೆ ಸಂಸತ್ ಅಧಿವೇಶನದಲ್ಲಿ ಮಾತನಾಡಿದ ವಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, “ಅಧಿವೇಶನ ನಡೆಯುತ್ತಿರುವಾಗ, ಇಡಿ ನನ್ನನ್ನು ವಿಚಾರಣೆಗೆ ಕರೆಯುವುದು ಎಷ್ಟು ಸೂಕ್ತ? ಪ್ರತಿಪಕ್ಷಗಳ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನವಿದು” ಎಂದು ಆರೋಪಿಸಿದರು.

ಅಧಿವೇಶನದ ವೇಳೆ ಇಡಿ ಸಮನ್ಸ್ ನೀಡಿರುವ ಕುರಿತು ಮಾತನಾಡಿರುವ ಖರ್ಗೆ ಅವರು "ಪರಿಸ್ಥಿತಿ ಹೀಗೆ ಮುಂದುವರೆದರೆ ಪ್ರಜಾಪ್ರಭುತ್ವ ಉಳಿಯುತ್ತದೆಯೇ? ನಾವು ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಲು ಸಾಧ್ಯವೇ?" ಎಂದು ಪ್ರಶ್ನಿಸಿದರು.

ಖರ್ಗೆ ಅವರ ಆರೋಪಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರವು, ತನಿಖಾ ಸಂಸ್ಥೆಗಳ ವಿಚಾರಣೆಯಲ್ಲಿ ಮದ್ಯೆ ಪ್ರವೇಶಿಸಿಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದರು.

ಮಧ್ಯಾಹ್ನ 12 ಗಂಟೆಗೆ ಕಲಾಪ ಪುನಾರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಮೇಲ್ಮನೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದವು. ತನಿಖಾ ಸಂಸ್ಥೆಗಳ ದುರುಪಯೋಗದ ಕುರಿತು ಗದ್ದಲ ನಡೆಯುತ್ತಿದ್ದಂತೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಹಿಂಬದಿ ಪ್ರಯಾಣಿಕರಿಗೆ ಏರ್‌ಬ್ಯಾಗ್‌ ಬಗ್ಗೆ ಶೀಘ್ರ ನಿರ್ಧಾರ

ಲೋಕಸಭೆಯ ಪ್ರಶ್ನೋತ್ತರ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, "ಈಗಿರುವಂತೆ ಎರಡು ಏರ್‌ಬ್ಯಾಗ್‌ಗಳು ಕಡ್ಡಾಯ. ಹಿಂಬದಿ ಪ್ರಯಾಣಿಕರಿಗೆ ಏರ್‌ಬ್ಯಾಗ್‌ ಅಳವಡಿಕೆ ಕಡ್ಡಾಯ ಮಾಡಿಲ್ಲ. ಸಾರಿಗೆ ಇಲಾಖೆಯು ಹಿಂಬದಿಯ ಪ್ರಯಾಣಿಕರಿಗೂ ಏರ್‌ಬ್ಯಾಗ್ ಅಳವಡಿಸುವ ಕುರಿತು ಯೋಚಿಸುತ್ತಿದೆ. ಈ ಕುರಿತಾಗಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಪಶ್ಚಿಮ ಬಂಗಾಳ | ಸಚಿವ ಸಂಪುಟ ಪುನರ್‍‌ರಚನೆಗೆ ಮುಂದಾದ ಮಮತಾ ಬ್ಯಾನರ್ಜಿ ಸರ್ಕಾರ

ತನಿಖಾ ಸಂಸ್ಥೆಗಳ ದುರುಪಯೋಗದ ಆರೋಪ

ಶಿವಸೇನಾ ಸಂಸದರಾದ ಪ್ರಿಯಾಂಕ ಚತುರ್ವೇದಿ ಕೇಂದ್ರ ತನಿಖಾ ಸಂಸ್ಥೆಗಳ ವ್ಯಾಪ್ತಿಯ  ಚರ್ಚೆಗೆ ಒತ್ತಾಯಿಸಿದರು. ರಾಜ್ಯಸಭೆಯಲ್ಲಿ "ಇಡಿ, ಸಿಬಿಐ, ಐಟಿ ಮುಂತಾದ ಕೇಂದ್ರೀಯ ತನಿಖಾ ಸಂಸ್ಥೆಗಳ ವ್ಯಾಪ್ತಿ ವ್ಯಾಖ್ಯಾನಿಸದ ಕಾರಣ ರಾಜಕೀಯ ವಿರೋಧಿಗಳ ನಾಗರಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು, ಸಂಸ್ಥೆಗಳ ದುರುಪಯೋಗವಾಗುತ್ತಿದೆ" ಎಂದು ವಿಪಕ್ಷಗಳು ನೋಟಿಸ್‌ ನೀಡಿವೆ.

ಸಂಸತ್ತಿನಲ್ಲಿ ನಿರುದ್ಯೋಗ ಚರ್ಚೆಗೆ ಒತ್ತಾಯ

ಗುರುವಾರ ಸಂಸತ್ತಿನ ಕಲಾಪಕ್ಕೂ ಮುನ್ನ, ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ಲೋಕಸಭೆಯಲ್ಲಿ ದೇಶದ ನಿರುದ್ಯೋಗದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು.

ಈ ನಡುವೆ, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ 'ಯಂಗ್ ಇಂಡಿಯನ್' ಕಚೇರಿಯನ್ನು ಇಡಿ ವಶಕ್ಕೆ ಪಡೆದಿರುವ ಬಗ್ಗೆ ಚರ್ಚೆ ನಡೆಸುವಂತೆ ಕಾಂಗ್ರೆಸ್ ಸಂಸದ ಕೆ ಸುರೇಶ್ ಕೇಳಿಕೊಂಡರು.

ನಿಮಗೆ ಏನು ಅನ್ನಿಸ್ತು?
0 ವೋಟ್