ಮುಂಗಾರು ಅಧಿವೇಶನ | ಮೊಘಲರ ಜಜಿಯಾ ತೆರಿಗೆ ನೆನಪಿಸಿದ ಜಿಎಸ್‌ಟಿ; ಎಎಪಿ ಸಂಸದ ಟೀಕೆ

  • ಭಾರತದಲ್ಲಿ 21 ಕೋಟಿ ವಾಹನಗಳಿವೆ ಎಂದ ನಿತಿನ್ ಗಡ್ಕರಿ
  • ಎಂ ಬಿ ರಾಜೇಶ್ ಜತೆಗೆ ಕಾಣಿಸಿಕೊಂಡ ರಾಹುಲ್ ಗಾಂಧಿ

ಎಚ್ಚರಿಕೆಯ ಹೊರತಾಗಿಯು ವಿಪಕ್ಷ ನಾಯಕರು ಪ್ರತಿಭಟನಾ ಫಲಕಗಳನ್ನು ಪ್ರದರ್ಶಿಸಿದ ಬಳಿಕ ಲೋಕಸಭೆಯನ್ನು ದಿನದ ಮಟ್ಟಿಗೆ ಮುಂದೂಡಲಾಗಿದೆ.

ಮೊಘಲರ ಕಾಲ ನೆನಪಿಸಿದ ತೆರಿಗೆ ಎಂದ ಎಎಪಿ ಸಂಸದ

ಜಿಎಸ್‌ಟಿ ತೆರಿಗೆಗೆ ಸಂಬಂಧಿಸಿ ಆಕ್ರೋಶ ವ್ಯಕ್ತಪಡಿಸಿರುವ ಆಮ್‌ ಆದ್ಮಿ ಸಂಸದ ರಾಘವ್ ಚಡ್ಡಾ, ಕೇಂದ್ರದ ತೆರಿಗೆ ನೀತಿ ಮೊಘಲರ ಜಜಿಯಾ ತೆರಿಗೆಯನ್ನು ನೆನಪಿಸುತ್ತದೆ ಎಂದರು.

ಪಂಜಾಬ್‌ನ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಪ್ರಪಂಚದಾದ್ಯಂತದ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ. ಹಾಗಾಗಿ ದೇವಾಲಯದ ಬಳಿ ಇರುವ ಹೋಟೆಲ್‌ಗಳ ಮೇಲಿನ ಶೇ. 12 ಜಿಎಸ್‌ಟಿಯನ್ನು ಹಿಂತೆಗೆದುಕೊಳ್ಳುವಂತೆ ಅವರು ಕೋರಿದರು. 

ರಾಜ್ಯಸಭೆ ಕಲಾಪ ಶುಕ್ರವಾರಕ್ಕೆ ಮುಂದೂಡಿಕೆ

ರಾಜ್ಯಸಭೆಯಲ್ಲಿ ಕೌಟುಂಬಿಕ ನ್ಯಾಯಾಲಯಗಳ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಗಿದೆ. ತನಿಖಾ ಸಂಸ್ಥೆಗಳ ಬಗೆಗಿನ ಚರ್ಚೆ ಗದ್ದಲ ಸ್ವರೂಪ ತಳೆಯುತ್ತಿದ್ದಂತೆ ಮೇಲ್ಮನೆಯನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

ಹಿಮಾಚಲ ಪ್ರದೇಶ, ನಾಗಾಲ್ಯಾಂಡ್‌ನಲ್ಲಿ ಸ್ಥಾಪಿಸಲಾದ ಕೌಟುಂಬಿಕ ನ್ಯಾಯಾಲಯಗಳಿಗೆ ಶಾಸನಬದ್ಧ ರಕ್ಷಣೆ ನೀಡಲು ಪ್ರಯತ್ನಿಸುವ ಕೌಟುಂಬಿಕ ನ್ಯಾಯಾಲಯಗಳ (ತಿದ್ದುಪಡಿ) ಮಸೂದೆಯನ್ನು ಕೇಂದ್ರ ಸಚಿವ ಕಿರಣ್ ರಿಜುಜು ಅವರು ರಾಜ್ಯಸಭೆಯಲ್ಲಿ ಮಂಡಿಸಿದರು.

ಕಾಂಗ್ರೆಸ್‌ನ ಜೈರಾಮ್ ರಮೇಶ್ ಅವರು ರಾಜ್ಯಸಭೆಯಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಲು ಪ್ರಯತ್ನಿಸಿದರು. ಆದರೆ ಉಪಸಭಾಪತಿಗಳು ಅದಕ್ಕೆ ಅವಕಾಶ ಕಲ್ಪಿಸಲಿಲ್ಲ. ಕೇಂದ್ರ ಸರ್ಕಾರವು ಸದನದ ಹೊರಗೆ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ತೃಣಮೂಲ ಕಾಂಗ್ರೆಸ್‌ ಸಂಸದ ಡೆರೆಕ್ ಒ ಬ್ರಿಯಾನ್ ಅವರು, "ಸಂವಿಧಾನದಡಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ" ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಭೂಪೇಂದ್ರ ಯಾದವ್, "ಸದಸ್ಯರಿಗೆ ವಾಕ್ ಸ್ವಾತಂತ್ರ್ಯವಿದೆ, ಆದರೆ ಅವ್ಯವಸ್ಥೆ ಸೃಷ್ಟಿಸುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡುವುದಿಲ್ಲ" ಎಂದು ಹೇಳಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದ ಇಡಿ ತನಿಖೆಯ ಕುರಿತು ಮೇಲ್ಮನೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿರುದ್ಧ ವಾಗ್ದಾಳಿ ನಡೆಸಿದರು.

ಭಾರತದಲ್ಲಿ 21 ಕೋಟಿ ದ್ವಿಚಕ್ರ ವಾಹನ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದು, ಕೇಂದ್ರೀಕೃತ ಡೇಟಾ ಬೇಸ್ ಪ್ರಕಾರ ಒಟ್ಟು ವಾಹನಗಳ ಪೈಕಿ 5,44,643 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, 54,252 ಎಲೆಕ್ಟ್ರಿಕ್ ನಾಲ್ಕು ಚಕ್ರಗಳಿವೆ.  ಆಗಸ್ಟ್ 3, 2022ರಂತೆ 2,95,245 ದ್ವಿಚಕ್ರ ವಾಹನಗಳು ಮತ್ತು 18,47,539 ನಾಲ್ಕು ಚಕ್ರ ವಾಹನಗಳು, ಎಥೆನಾಲ್, ಫ್ಯೂಯಲ್ ಸೆಲ್ ಹೈಡ್ರೋಜನ್ ಸೌರಶಕ್ತಿ ಸೇರಿದಂತೆ ಇತರೆ ಇಂಧನಗಳ ವಾಹನಗಳಿವೆ ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಅಮಿತ್ ಶಾ ಕಾರ್ಯಕ್ರಮದಲ್ಲಿ ಮತ್ತೆ ಕನ್ನಡ ಕಡೆಗಣನೆ| ಬೊಮ್ಮಾಯಿ ಮೌನಕ್ಕೆ ಕನ್ನಡಿಗರ ಆಕ್ರೋಶ

ಎಂ ಬಿ ರಾಜೇಶ್-  ರಾಹುಲ್ ಗಾಂಧಿ ಸಂವಾದ

ಗುರುವಾರ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಕೇರಳ ವಿಧಾನಸಭಾ ಸ್ಪೀಕರ್ ಎಂ ಬಿ ರಾಜೇಶ್ ನಡುವೆ ಸಂವಾದ ನಡೆಯಿತು. ಇಬ್ಬರೂ ಬಹಳ ಹೊತ್ತು ಧೀರ್ಘ ಮಾತುಕತೆಯಲ್ಲಿ ತೊಡಗಿದ್ದರು.

ಕೇಂದ್ರದ ಹಸ್ತಕ್ಷೇಪವಾಗಿಲ್ಲ ಎಂಬ ಸಮರ್ಥನೆ

ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷಗಳನ್ನು ನಿರುತ್ಸಾಹಗೊಳಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದ್ದಾರೆ.

ರಾಜ್ಯಸಭೆಯಲ್ಲಿ ಉತ್ತರಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ''ದೇಶದ ಕಾನೂನು ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಕೇಂದ್ರವು ಹಸ್ತಕ್ಷೇಪ ಮಾಡುವುದಿಲ್ಲ. ಬಹುಶಃ ಕಾಂಗ್ರೆಸ್ ಆಡಳಿತದಲ್ಲಿ ಅಂತಹ ಹಸ್ತಕ್ಷೇಪ ಆಗಿರಬಹುದು, ಆದರೆ ನಾವು ಮಾಡಿಲ್ಲ. ಪ್ರತಿಪಕ್ಷಗಳ ಆರೋಪ ನಿರಾಧಾರ” ಎಂದು ಹೇಳಿದರು.

ಕಾಂಗ್ರೆಸ್ ಸಂಸದರಿಂದ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ 

ಬೆಲೆಯೇರಿಕೆ ಮತ್ತು ಹಣದುಬ್ಬರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಕಾಂಗ್ರೆಸ್ ಸಂಸದರು ಶುಕ್ರವಾರ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್ ಗುರುವಾರ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್